ದಕ್ಷಿಣ ಕನ್ನಡದಲ್ಲಿ ಕಸಾಪ ಜೀವಂತವಿದೆಯೇ....?
ಹೀಗೊಂದು ಪತ್ರ
ಎಂಬತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕಲಬುರಗಿಯಲ್ಲಿ ನಿಗಧಿಯಾಗಿದ್ದು ಫೆಬ್ರವರಿ 5, 6 ಮತ್ತು 7ನೇ ತಾರೀಕಿಗೆ ನಡೆಯಲಿರುವುದು ನಮಗೆಲ್ಲಾ ತಿಳಿದ ವಿಚಾರ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರನ್ನು ನೋಂದಾಯಿಸಿ ಪ್ರತಿನಿಧಿ ಪಾಸ್ ಪಡೆದುಕೊಳ್ಳುವ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದು ಆ ಪ್ರಕಾರ ಎಲ್ಲಾ ಜಿಲ್ಲಾ ಕಸಾಪ ಘಟಕಗಳಿಗೆ ಈ ಬಗ್ಗೆ ರಾಜ್ಯ ಕಸಾಪ ಸುತ್ತೋಲೆ ಕಳುಹಿಸಿತ್ತು. ಅದರಂತೆಯೇ ಎಲ್ಲಾ ಜಿಲ್ಲಾ ಘಟಕಗಳು ತಂತಮ್ಮ ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆಯೊಂದನ್ನು ಇಟ್ಟಿತ್ತು. ಅದರಂತೆ ಧಾರವಾಡ ಜಿಲ್ಲೆಯಿಂದ ಸುಮಾರು ಹದಿಮೂರೂವರೆ ಸಾವಿರ ಮಂದಿ ಸಾಹಿತ್ಯಾಸಕ್ತರು ಪ್ರತಿನಿಧಿಗಳಾಗಿ ಭಾಗವಹಿಸುವುದಾಗಿ ನೋಂದಾವಣೆ ಮಾಡಿದ್ದರು. ಒಟ್ಟು ಇಪ್ಪತ್ತು ಸಾವಿರದಷ್ಟು ಪ್ರತಿನಿಧಿಗಳು ಹೆಸರು ನೋಂದಾಯಿಸಿದ್ದರಲ್ಲಿ ಸಿಂಹಪಾಲು ಧಾರವಾಡದವರದ್ದಾಗಿದೆ.
ಈ ಪ್ರತಿನಿಧಿ ನೋಂದಾವಣೆ ಪ್ರಕ್ರಿಯೆಯಲ್ಲಿ ಆನೆ-ಕುದುರೆ ಆಗುವಂತಹದ್ದೇನಿಲ್ಲ. ಕರ್ನಾಟಕದ ಎಲ್ಲಾ ಜಿಲ್ಲಾ ಕಸಾಪ ಘಟಕಗಳಿಗೂ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿನಿಧಿ ನೋಂದಾವಣೆಗೆ ಅರ್ಜಿ ನಮೂನೆಗಳನ್ನು ಕಳುಹಿಸಿತ್ತು. 250 ರೂ. ಶುಲ್ಕ ಭರಿಸಿ ಆಸಕ್ತರು ಪ್ರತಿನಿಧಿಗಳಾಗಿ ಹೆಸರು ನೋಂದಾಯಿಸಲು ಜನವರಿ ಹದಿನಾಲ್ಕನೇ ತಾರೀಕಿನವರೆಗೆ ಅವಕಾಶವಿತ್ತು. ಸುಮಾರು ಎರಡು ತಿಂಗಳ ಹಿಂದೆಯೇ ಅರ್ಜಿ ನಮೂನೆಗಳನ್ನು ಆಯಾ ಜಿಲ್ಲಾ ಕಸಾಪ ಘಟಕಗಳಿಗೆ ರಾಜ್ಯ ಕಸಾಪ ಕಳುಹಿಸಿತ್ತು. ಶುಲ್ಕದ ಉದ್ದೇಶವಿಷ್ಟೇ, 250 ರೂ. ಕೊಟ್ಟು ಪ್ರತಿನಿಧಿಯಾಗಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದರೆ ಮೂರು ದಿನಗಳ ಊಟ ಮತ್ತು ವಸತಿ ವ್ಯವಸ್ಥೆ ಅದರಲ್ಲೇ ಬರುತ್ತದೆ. ಅತ್ಯಂತ ಬೇಸರದ ಸಂಗತಿಯೇನೆಂದರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಿಂದ ಎಂಬತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಸರು ನೋಂದಾಯಿಸಿದ ಪ್ರತಿನಿಧಿ ಸಂಖ್ಯೆ ಶೂನ್ಯ. ಇದರರ್ಥವೇನು ದಕ್ಷಿಣ ಕನ್ನಡದಲ್ಲಿ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವವರು ಯಾರೂ ಇಲ್ಲವೆಂದೇ...? ಖಂಡಿತಾ ಹಾಗಲ್ಲ. ರತ್ನಾಕರವರ್ಣಿಯಿಂದ ಪಂಜೆ ಮಂಗೇಶರಾಯರವರೆಗೆ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳಿಂದ ಕನ್ನಡದ ಕೋಗಿಲೆ ಇದಿನಬ್ಬರವರೆಗೆ, ಅಮೃತ ಸೋಮೇಶ್ವರರಿಂದ ಬೊಳುವಾರು ಮುಹಮ್ಮದ್ ಕುಂಞಿಯವರೆಗೆ ಕನ್ನಡ ಸಾಹಿತ್ಯಕ್ಕೆ ವಿಫುಲ ಕೊಡುಗೆ ಕೊಟ್ಟವರು ದಕ್ಷಿಣ ಕನ್ನಡಿಗರು. ಬ್ಯಾರಿ, ತುಳು, ಕೊಂಕಣಿ ಮನೆಭಾಷಿಕರಾಗಿಯೂ ಹೊಸತಲೆಮಾರಿನಲ್ಲಿ ಕನ್ನಡ ನುಡಿ ಕಟ್ಟುತ್ತಿರುವವರಲ್ಲಿ ದಕ್ಷಿಣ ಕನ್ನಡಿಗರ ಸಂಖ್ಯೆ ಅಗಾಧವಾದುದು. ಒಟ್ಟಿನಲ್ಲಿ ದಕ್ಷಿಣ ಕನ್ನಡಿಗರ ಹೊರತಾದ ಕನ್ನಡ ಸಾಹಿತ್ಯದ ಚರಿತ್ರೆಯೇ ಅಪೂರ್ಣ. ಆದಾಗ್ಯೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಇಷ್ಟು ನೀರಸ ಪ್ರತಿಕ್ರಿಯೆ ಯಾಕೆ?
ವಾಸ್ತವದಲ್ಲಿ ನಮ್ಮ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ನಿರಾಸಕ್ತಿ ಖಂಡಿತಾ ಇಲ್ಲ. ಒಂದು ವೇಳೆ ಜಿಲ್ಲಾ ಕಸಾಪ ಈ ಬಗ್ಗೆ ಸೂಕ್ತ ಪ್ರಕಟನೆಯೇನಾದರೂ ನೀಡಿದ್ದರೆ ಕನಿಷ್ಠ ನೂರು ಪ್ರತಿನಿಧಿಗಳಾದರೂ ಹೆಸರು ನೋಂದಾಯಿಸುತ್ತಿದ್ದರು. ಆದರೆ ಅದರ ಮಹತ್ವದ ಅರಿವೇ ಜಿಲ್ಲಾ ಕಸಾಪಕ್ಕಿಲ್ಲದಿದ್ದರೆ ನಾವೇನು ಮಾಡೋಣ...?
ಜಿಲ್ಲೆಯಲ್ಲಿ ಕಸಾಪಕ್ಕೆ ಒಂದು ಪ್ರತ್ಯೇಕ ಕಚೇರಿಯೇ ಇಲ್ಲ. ಕಸಾಪದ ಜಿಲ್ಲಾಧ್ಯಕ್ಷರು ತಮ್ಮ ಸ್ವಂತ ಉದ್ಯಮದ ಕಚೇರಿಯಲ್ಲೇ ಒಂದು ಪುಟ್ಟ ನಾಮಫಲಕ ತಗಲಿಸಿ ಅದನ್ನೇ ಕಸಾಪ ಕಚೇರಿ ಎನ್ನುತ್ತಿದ್ದಾರೆ. ಜಿಲ್ಲಾಧ್ಯಕ್ಷರ ಖಾಸಗಿ ಕಚೇರಿಯಾದ್ದರಿಂದ ಅಲ್ಲಿಗೆ ಅವರ ಆಪ್ತರು ಮಾತ್ರ ಹೋಗುತ್ತಿರುತ್ತಾರೆ. ಕರ್ನಾಟಕ ತುಳು ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದಲ್ಲೇ ಕಚೇರಿಯಿದೆ, ಆದರೆ ಜಿಲ್ಲಾ ಕಸಾಪಕ್ಕೆ ಯಾಕೆ ಅಲ್ಲೇ ಒಂದು ಕಚೇರಿ ಪಡೆಯಲು ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಕಸಾಪ ಜಿಲ್ಲಾಧ್ಯಕ್ಷರಲ್ಲಿ ಉತ್ತರವಿಲ್ಲ. ತುಳು ಮತ್ತು ಕೊಂಕಣಿ ಅಕಾಡಮಿಯ ಕಚೇರಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡಿದ ಮಂಗಳೂರು ಮಹಾನಗರ ಪಾಲಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೊಂದು ಕಚೇರಿ ಕೊಡದೆ ಇರಲಾರದು. ಅಲ್ಲೇನಾದರೂ ಕಚೇರಿ ಮಾಡಿದರೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವ ಯಾರೇ ಆದರೂ ಅಲ್ಲಿಗೆ ಮುಕ್ತವಾಗಿ ಹೋಗಲು ಸಾಧ್ಯ. ಖಾಸಗಿ ವ್ಯಕ್ತಿಯೊಬ್ಬರ ಕಚೇರಿಯಾದರೆ ಅಲ್ಲಿಗೆ ಹೋಗಲೂ ಸ್ವಾಭಿಮಾನಿ ಕನ್ನಡ ಪ್ರೇಮಿಗಳನೇಕರಿಗೆ ಮುಜುಗರ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಸ್ವಂತ ಕಟ್ಟಡದಲ್ಲೇ ಕನ್ನಡ ಭವನ ನಿರ್ಮಾಣವಾಗಿದೆ. ಹಾಗೆ ಕನ್ನಡ ಭವನ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಕ್ತ ನಿಧಿಯನ್ನೂ ನೀಡುತ್ತದೆ. ಈಗಾಗಲೇ ಅನೇಕ ತಾಲೂಕುಗಳಲ್ಲೂ ಕನ್ನಡ ಭವನಕ್ಕೆ ಸ್ವಂತ ಕಟ್ಟಡವಿದೆ. ನಮ್ಮ ಪಕ್ಕದ ಉಡುಪಿ ಜಿಲ್ಲೆಯ ಕಾಂತಾವರ ಎಂಬ ಪುಟ್ಟ ಹಳ್ಳಿಯಲ್ಲೂ ಕನ್ನಡ ಭವನವಿದೆ. ಆದರೆ ಇತ್ತ ಕರ್ನಾಟಕ-ಕೇರಳದ ಗಡಿಭಾಗವಾಗಿರುವ ದಕ್ಷಿಣ ಕನ್ನಡದಲ್ಲಿ ಸಾಹಿತ್ಯ ಪರಿಷತ್ತಿಗೆ ಒಂದು ಸ್ವಂತ ಕಚೇರಿ ನಿರ್ಮಿಸುವ ನಿಟ್ಟಿನಲ್ಲಿ ಈ ವರೆಗೆ ಪ್ರಯತ್ನವೂ ಸಾಗಿಲ್ಲ.
ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದರೆ ಒಂದು ಪ್ರೈವೇಟ್ ಲಿಮಿಟೆಡ್ ಕಂಪೆನಿಯಂತಿದೆ. ಅದರ ಸದಸ್ಯತ್ವ ಪಡೆಯಲು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಕಚೇರಿಗೆ ಹೋಗಿ ಅರ್ಜಿ ನಮೂನೆ ಕೇಳಿದರೂ ಸಿಗುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಕಸಾಪದ ಸದಸ್ಯನಾಗಬೇಕೆಂದು ಅರ್ಜಿ ನಮೂನೆ ಪಡೆಯಲೂ ಕಸಾಪ ಜಿಲ್ಲಾಧ್ಯಕ್ಷರ ಶಿಫಾರಸು ಬೇಕೇನೋ..? ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷರ ತುಘಲಕ್ ದರ್ಬಾರಿನಿಂದಾಗಿ ಜಿಲ್ಲೆಯಲ್ಲಿ ಕಸಾಪ ನಲುಗಿ ಹೋಗಿದೆ. ಇವರ ತುಘಲಕ್ ದರ್ಬಾರ್ ಮತ್ತಿತರ ದುರಾಡಳಿತದ ಬಗ್ಗೆಯೆಲ್ಲಾ ನಾನು ಮತ್ತು ನನ್ನ ಸಮಾನಮನಸ್ಕ ಕನ್ನಡ ಪ್ರೇಮಿಗಳು ಪತ್ರಿಕೆಗಳಲ್ಲಿ ಲೇಖನ, ಪತ್ರ ಬರೆದು ರಾಜ್ಯ ಕಸಾಪ ಅಧ್ಯಕ್ಷರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವಿಚಾರದಲ್ಲಿ ಈಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೆಂದಲ್ಲ, ಕಳೆದ ಎಂಟು ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ನಿಭಾಯಿಸಿದ ಎಲ್ಲಾ ಸಚಿವರೂ ಸಮಾನ ಹೊಣೆಗಾರರು.
ಇದು ಹೀಗೆಯೇ ಮುಂದುವರಿದರೆ ಮುಂದೆ ಜಿಲ್ಲೆಯಲ್ಲಿ ಪರ್ಯಾಯ ಕಸಾಪ ಹುಟ್ಟಿಕೊಂಡರೂ ಆಶ್ಚರ್ಯವಿಲ್ಲ.