varthabharthi


ಭಿನ್ನರುಚಿ

ಕನ್ನಡದ ಪ್ರಾಚೀನ ವಿಶ್ವಕೋಶಗಳಲ್ಲಿ ಅಡುಗೆ

ವಾರ್ತಾ ಭಾರತಿ : 4 Feb, 2020
ರಾಜೇಂದ್ರ ಪ್ರಸಾದ್

ಈ ಹಿಂದೆ ವಿವರಿಸಿದ ಬಾಣಸಿಗರು, ಈಗ ಪ್ರಸ್ತಾಪಿಸಿದ ಬಹುತೇಕರು ರಾಜರು ಮತ್ತು ಆಡಳಿತಗಾರರು ಆಗಿದ್ದವರು. ಅವರಿಗೆ ಮಾಡಲು ಬೇಕಾದಷ್ಟು ಆಸ್ಥಾನದ ಕೆಲಸಗಳು, ರಾಜಕೀಯ -ಆರ್ಥಿಕ ಚಿಂತನೆಗಳಿದ್ದುವು. ಅಂತಹದರಲ್ಲಿ ಯಾಕೆ ಇವರೆಲ್ಲಾ ಬಂದು ಅಡುಗೆ ಮನೆ ಸೇರಿದರು ಎಂಬುದೇ ಸೋಜಿಗವಾಗುತ್ತದೆ.

ಕನ್ನಡನಾಡಿನ ಸೂಪಶಾಸ್ತ್ರ ಕೃತಿಗಳಲ್ಲಿ ಮುಖ್ಯವಾದ ಇನ್ನೊಂದಷ್ಟು ಕೃತಿಗಳಿವೆ. ಆದರೆ ಇವೆಲ್ಲಾ ಮಂಗರಸ ಸೂಪಶಾಸ್ತ್ರದಂತೆ ಅಡುಗೆಯದ್ದೇ ಕೃತಿಗಳಲ್ಲ. ಬದಲಿಗೆ ವಿಷಯ ವಿಶ್ವಕೋಶಗಳಲ್ಲಿ ಉಲ್ಲೇಖಿತವಾದ ಸೂಪ ಅಥವಾ ಅನ್ನಭೋಗದ ಅಧ್ಯಾಯಗಳು. ಅವುಗಳಲ್ಲಿ ಮುಖ್ಯವಾದವು ಕಲ್ಯಾಣ ಚಾಲುಕ್ಯ ಚಕ್ರವರ್ತಿ ಸರ್ವಜ್ಞ ಸೋಮೇಶ್ವರನ ‘ಮಾನಸೋಲ್ಲಾಸ’ ಮತ್ತು ಚಾವುಂಡರಾಯನ ‘ಲೋಕೋಪಕಾರಂ’ ಕೃತಿಗಳು. ಹಾಗೆಯೇ ಕೆಳದಿಯ ಬಸಪ್ಪನಾಯಕನ ಶಿವತತ್ವರತ್ನಾಕರ ಕೃತಿ ಕೂಡ. ಈ ಹಿಂದೆ ವಿವರಿಸಿದ ಬಾಣಸಿಗರು, ಈಗ ಪ್ರಸ್ತಾಪಿಸಿದ ಬಹುತೇಕರು ರಾಜರು ಮತ್ತು ಆಡಳಿತಗಾರರು ಆಗಿದ್ದವರು. ಅವರಿಗೆ ಮಾಡಲು ಬೇಕಾದಷ್ಟು ಆಸ್ಥಾನದ ಕೆಲಸಗಳು, ರಾಜಕೀಯ -ಆರ್ಥಿಕ ಚಿಂತನೆಗಳಿದ್ದವು. ಅಂತಹದರಲ್ಲಿ ಯಾಕೆ ಇವರೆಲ್ಲಾ ಬಂದು ಅಡುಗೆ ಮನೆ ಸೇರಿದರು ಎಂಬುದೇ ಸೋಜಿಗವಾಗುತ್ತದೆ. ಸಂಗೀತ, ನೃತ್ಯ, ಸಾಹಿತ್ಯದಂತಹ ಹಲವು ಕಲೆಗಳ ಹಿಂದೆ ಇವರ ಓರಗೆಯ ಅರಸರು, ಆಸ್ಥಾನಿಕರು ಬಿದ್ದಿರುವಾಗ ಇವರೇಕೆ ಸಟ್ಟುಗ ಹಿಡಿದು ನಿಂತರು, ಅದನ್ನು ಕಾವ್ಯವಾಗಿಸಿ ಚೆಂದವಾಗಿ ಕಟ್ಟಿದರು ಎಂಬುವುದು ಕೂತುಹಲಕರವಾಗಿಯೇ ಉಳಿಯುತ್ತದೆ. ಹಲವು ಸಲ ಈ ಅಡುಗೆಯ ವಿಧಾನಗಳು ರಾಜಮನೆತನಗಳ ಪ್ರತಿಷ್ಠೆಯಾಗಿಯೂ ಕಾಣುತ್ತವೆ. ಯಾಕಂದರೆ ಅಲ್ಲಿ ಬಳಸುವ ಪದಾರ್ಥ, ಮಾಡುವ ವೈಖರಿಗಳು ಜನಸಾಮಾನ್ಯರದ್ದು ಆಗಿರುವುದೇ ಇಲ್ಲ.

ಸರ್ವಜ್ಞ ಸೋಮೇಶ್ವರನ ‘ಮಾನಸೋಲ್ಲಾಸ’

ಕಲ್ಯಾಣ ಚಾಲುಕ್ಯರ ದೊರೆ ಮೂರನೇ ಸೋಮೇಶ್ವರನು ಕ್ರಿ.ಶ. ಕಾಲದವನು. ರಾಜನೀತಿ, ಕಲೆ, ಸಾಹಿತ್ಯ, ಪಾಕ, ತತ್ವಶಾಸ್ತ್ರ ಆದಿಯಾಗಿ ಎಲ್ಲವುಗಳಲ್ಲಿ ನಿಪುಣನಾಗಿದ್ದ ಇವನನ್ನು ‘ಸರ್ವಜ್ಞ ಸೋಮೇಶ್ವರ’ ಎಂದೇ ಕರೆಯುತ್ತಾರೆ.

ಮಾನಸೋಲ್ಲಾಸ ಕೃತಿಯನ್ನು ಅಭಿಲಾಷಿತಾರ್ಥ ಚಿಂತಾಮಣಿ ಎಂದೂ ಕರೆಯಲಾಗುತ್ತದೆ. ಇದು ಸಂಸ್ಕೃತ ಭಾಷೆಯಲ್ಲಿದೆ. ಒಟ್ಟು ಐದು ವಿಂಶತಿಗಳೆಂಬ ವಿಭಾಗಗಳಿದ್ದು ಒಂದೊಂದು ವಿಭಾಗದಲ್ಲೂ 20 ಅಧ್ಯಾಯಗಳಿವೆ. ರಾಜನೀತಿ, ಗೃಹಕರ್ಮ, ವಿನೋದ, ಸಾಹಿತ್ಯ, ಕ್ರೀಡೆ ಸೇರಿದಂತೆ ಒಟ್ಟಾರೆ 100 ಅಧ್ಯಾಯಗಳಿವೆ.

ತೃತೀಯ ವಿಂಶತಿಯಲ್ಲಿ 12ನೇ ಅಧ್ಯಾಯ ಅನ್ನಭೋಗ ಮತ್ತು 13ನೇ ಅಧ್ಯಾಯ ಪಾನೀಯ ಭೋಗ ಇವೆರಡು ಅಡುಗೆಗೆ ಸಂಬಂಧಿಸಿದವು. ಸೋಮೇಶ್ವರನು ಕ್ಷತ್ರಿಯ ರಾಜನಾಗಿದ್ದುದರಿಂದ ಸಸ್ಯಹಾರ, ಮಾಂಸಹಾರಗಳ ಯಾವುದೇ ತರತಮಗಳನ್ನು ಇಟ್ಟುಕೊಳ್ಳದೆ ನಾನಾ ಬಗೆ ಮಾಂಸದ ಖಾದ್ಯಗಳು, ಅನ್ನಗಳು ಮತ್ತು ತಿಂಡಿಗಳ ವಿವರಣೆ ನೀಡಿದ್ದಾನೆ.

ಮೊದಲಿಗೆ ಕೆಂಪುಬಣ್ಣದ ರಕ್ತಶಾಲಿ, ಘಮ್ಮೆನ್ನುವ ಗಂಧಸಾಲಿ, ಸೂಕ್ಷ್ಮಶಾಲಿ (ಸಣ್ಣಕ್ಕಿ), ಸ್ಥೂಲಶಾಲಿ (ದಪ್ಪಕ್ಕಿ) ಗಳನ್ನು ಗುರುತಿಸಿ ಅದರಲ್ಲಿ ನುಚ್ಚು ಬೇರ್ಪಡಿಸಿ ಅನ್ನ, ಪಲಾವುಗಳನ್ನು ಮಾಡುವ ವಿಧಾನಗಳಿವೆ. ಉದ್ದು, ಕಡಲೆ, ಅಲಸಂದೆ ಕಾಳುಗಳಿಂದ ಸಾರು ಮಾಡುವುದು ಮತ್ತು ತಾವರೆ ಗೆಡ್ಡೆಗಳನ್ನು ಎಣ್ಣೆಯಲ್ಲಿ ಕರಿದು ಟಗರಿನಮಾಂಸ ತುಂಡುಗಳನ್ನು ಸೇರಿಸಿ ಗಂಧಸಾಲಿ ಅಕ್ಕಿಯೊಡನೆ ‘ಪಲಾವು’ ಮಾಡುವುದನ್ನು ವಿವರಿಸಿದ್ದಾನೆ. ಜಿಂಕೆ, ಸಾರಂಗ, ಮೊಲದ ಮಾಂಸಗಳನ್ನು ಒಣಗಿಸಿ ಬಳಸುವುದು ಉತ್ತಮ ಎನ್ನುತ್ತಾನೆ.

ಕುರಿ, ಮೇಕೆ, ಹಂದಿಗಳ ದೇಹದ ಯಾವ ಯಾವ ಭಾಗದ ಮಾಂಸ ರುಚಿಕರ ಮತ್ತು ಶ್ರೇಷ್ಠ ಎನ್ನುವುದನ್ನೂ ಹೇಳಿದ್ದಾನೆ. 20ಕ್ಕೂ ಹೆಚ್ಚು ಪದ್ಯ ಸಾಲುಗಳಲ್ಲಿ ಹಂದಿಯನ್ನು ಕೊಲ್ಲುವುದು, ಹಸಿಗೆ ಮಾಡುವುದು ನಂತರ ಮೆಣಸು, ಸೈಂಧವ ಲವಣ, ಹುಳಿರಸ ಹಾಕಿ ನೆನೆಸಿ ಸಿಹಿಯಾದ ಮತ್ತು ಖಾರವಾದ ಮಾಂಸದ ಚಕ್ಕುಲಿಗಳನ್ನು ಮಾಡುವುದನ್ನು ವಿವರಿಸಿದ್ದಾನೆ. ದಪ್ಪಬದನೆಯಕಾಯಿ ಒಳಕ್ಕೆ ಮಾಂಸದ ಸಣ್ಣ ಸಣ್ಣ ತುಂಡುಗಳನ್ನು ಸೇರಿಸಿ ಎಣ್ಣೆಯಲ್ಲಿ ಕರಿಯುವ ವಿಧಾನವೂ ಇಲ್ಲಿದೆ. ಅದನ್ನು ‘ಪೂರಭಟ್ಟಾಕ’ ಎಂದು ಕರೆಯುತ್ತಾನೆ. ಆಡಿನ ಮಾಂಸಕ್ಕೆ ಬೆಳ್ಳುಳ್ಳಿ, ಜೀರಿಗೆ, ಹಸಿಶುಂಠಿ, ಮೆಣಸು, ಉಪ್ಪುಹಾಕಿ ಚೆನ್ನಾಗಿ ಬೇಯಿಸಿ ನಂತರ ಅದನ್ನ ಕಲಸಿ ಮುದ್ದೆ ಮಾಡಿ ಸಣ್ಣ ಸಣ್ಣ ವಡೆಗಳಾಗಿ ಎಣ್ಣೆಯಲ್ಲಿ ಕರಿದು ‘ಭೂಷಿಕ’ ಎಂದು ಹೆಸರಿಟ್ಟಿದ್ದಾನೆ. ಕರುಳು, ಯಕೃತ್ತು, ತಲೆ ತೊಡೆಯ ಮಾಂಸಗಳನ್ನು ಬಗೆಬಗೆಯ ಅಡುಗೆಗಳಲ್ಲಿ ಬಳಸುವ ವಿಧಾನ ಇಲ್ಲಿ ತುಂಬಾ ಇವೆ.

ಇನ್ನು ವಿವಿಧ ಜಲಮೂಲಗಳಿಂದ ಬರುವ ನೀರನ್ನು ಉಪಯೋಗಿಸಿ ಹಿಪ್ಪಲಿ, ಕೊನ್ನಾರೆ ಬೇರು, ಏಲಕ್ಕಿ, ಲಾಮಂಚದ ಬೇರು, ಚಂದನದ ಚಕ್ಕೆಗಳನ್ನು, ನೀಲೋತ್ಪಲ, ಕಮಲದ ಹೂಗಳನ್ನು ಬಳಸಿ ‘ಪಿಂಡವಾಸ’, ‘ಪುಷ್ಪವಾಸ’ ಮುಂತಾದ ಪಾನೀಯ ವಿವರಣೆಗಳಿವೆ.

ಮಾನಸೋಲ್ಲಾಸದ ಮಹತ್ತು ಸೋಮೇಶ್ವರನ ಮಾಂಸದುಡುಗೆಗಳ ಮಹತ್ತಿನದು. ಕನ್ನಡದಲ್ಲಿ ಇವನೊಬ್ಬನೇ ಸೂಪಶಾಸ್ತ್ರದಲ್ಲಿ ಮಾಂಸವನ್ನು ಬಳಸಿದವನು. ಉಳಿದವರೆಲ್ಲಾ ಬ್ರಾಹ್ಮಣ ಮತ್ತು ಜೈನ ಸಂಪ್ರದಾಯದವರಾದ ಕಾರಣ ಮಾಂಸಾಹಾರದ ಸೊಲ್ಲೆತ್ತುವುದೇ ಇಲ್ಲ.

ಚಾವುಂಡರಾಯನ ‘ಲೋಕೋಪಕಾರಂ’

ಇತಿಹಾಸ ಪ್ರಸಿದ್ಧ ಗೊಮ್ಮಟ ಮೂರ್ತಿ ಕೆತ್ತಿಸಿದ ಚಾವುಂಡರಾಯ ಇವನಲ್ಲ. ಈ ಚಾವುಂಡರಾಯನು ಕಲ್ಯಾಣ ಚಾಲುಕ್ಯರ ದೊರೆ ಇಮ್ಮಡಿ ಜಯಸಿಂಹನ ಆಸ್ಥಾನದಲ್ಲಿ ಕವಿಯಾಗಿದ್ದನು. ಈತನ ತಂದೆ ಭಟ್ಟಪಾರ್ಯ, ತಾಯಿ ಮಲ್ಲಕಬ್ಬೆ. ಈತನ ಕಾಲ ಸುಮಾರು ಕ್ರಿ.ಶ. 1025.

ಲೋಕೋಪಕಾರಂ ಲಭ್ಯವಿರುವ ಕೃತಿಗಳಲ್ಲಿ ಪುಟ್ಟದಾದ ವಿಶ್ವಕೋಶ. 12 ಅಧಿಕಾರಗಳೆಂಬ ಅಧ್ಯಾಯಗಳಲ್ಲಿ 938 ಪದ್ಯಗಳಲ್ಲಿ ಕನ್ನಡ ಭಾಷೆಯಲ್ಲಿ ರಚಿತವಾಗಿದೆ. ಹಿಂದೆ ಉದಾಹರಿಸಿದಂತೆ ಇದೂ ಕೂಡ ರಾಜನೀತಿ, ಸಮಾಜ, ವ್ಯಕ್ತಿಗತ ಬದುಕು ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ವಿವರಣೆಗಳನ್ನು ನೀಡಲಾಗಿದೆ. ಅದರಲ್ಲಿ ನಮಗೆ ಬೇಕಿರುವುದು ಸೂಪಶಾಸ್ತ್ರದ ವಿಚಾರ ಮಾತ್ರ...

ಕಂ ॥ ಭುವನದೊಳನ್ನಮಯಂ ಪಾಣವೆಂಬ

ಪೂರ್ವೋಕ್ತಮಾರ್ಗದಿಂ ಪ್ರಾಣಿಹಿತಾರ್ಥವಿದೆಂದು

ಸೂಪಶಾಸ್ತ್ರ ಪ್ರವೀಣರಿದನೆಸೆಯ ಪೇಳ್ವ ಕಾವ್ಯ ವಿಳಾಸದಿಂ

ಎನ್ನುತ್ತಾ ಎಂಟನೇ ಅಧಿಕಾರ ಅನ್ನಭೋಗವನ್ನು ಶುರು ಮಾಡಿದ್ದಾನೆ ಚಾವುಂಡರಾಯ. ಇವರೆಲ್ಲಾ ಸಂಸ್ಕೃತದ ನಳನ ‘ಪಾಕ ದರ್ಶನ’ ಮತ್ತು ಭೀಮಸೇನನ ‘ಸೂಪಶಾಸ್ತ್ರ’ವನ್ನು ಬಹಳಷ್ಟು ಅನುಕರಿಸಿದ್ದಾರೆ.

ಚಾವುಂಡರಾಯ ಈಗಾಗಲೇ ಬಳಕೆಯಲ್ಲಿರುವ ಹಲವು ಅಡುಗೆಯ ಕ್ರಮಗಳ ಬಗ್ಗೆ ಮಾತಾಡಲು ಹೋಗುವುದೇ ಇಲ್ಲ. ಯಾವುದು ಹೆಚ್ಚು ಬಳಕೆಯಲ್ಲಿ ಇಲ್ಲವೋ, ಜನರು ಬಳಸಲು ಕಷ್ಟವಾಗಿರುವ ತರಕಾರಿ, ಸೊಪ್ಪುಗಳ ಬಗ್ಗೆ ಅವುಗಳಿಗೆ ಪೂರ್ವೋಪಚಾರ ನಡೆಸಿ ಅವುಗಳಲ್ಲಿರುವ ಕಹಿಯನ್ನು ತೆಗೆಯುವ ಬಗ್ಗೆ (ಕಹಿಯನ್ನು ಕೃತಿಯಲ್ಲಿ ವಿಷ ಎಂದು ಕರೆಯಲಾಗಿದೆ) ಒಣಗಿಸಿ ಸಂಸ್ಕರಿಸಿ ಬಳಸುವ ಬಗ್ಗೆ ಯಥೇಚ್ಛವಾಗಿ ಮಾತಾಡಿದ್ದಾನೆ. ಬ್ರಾಹ್ಮಣನಾದ ಚಾವುಂಡರಾಯ ಮಾಂಸಾಹಾರದ ಯಾವುದೇ ಉಲ್ಲೇಖ ಕೊಡದಿದ್ದರೂ ಹುರಿದ ಕಡಲೆಹಿಟ್ಟನ್ನು ಕಲಸಿ ಮೀನಿನ ಆಕೃತಿ ಮಾಡಿ ಸಾಸುವೆ ಎಣ್ಣೆಯಲ್ಲಿ ಕರಿಯುವುದನ್ನು ‘ಮೀನಿನ ಪೆರಿಯಂಪೆಡಗುಂ’ ಎನ್ನುತ್ತಾನೆ. ಇನ್ನೂ ಆಸಕ್ತಿಕರ ವಿಚಾರವೆಂದರೆ ತರಕಾರಿಗಳನ್ನು ಈತ ‘ಬಾಡು’ ಎನ್ನುತ್ತಾನೆ. ‘ಎರವುರಿಯ ಬಾಡನುಂ ಮಸುಳಿಗಂ’ ಎಂದು ಬಹಳವಾಗಿ ಉಲ್ಲೇಖಿಸಿದ್ದಾನೆ. ಸಿಹಿಯ ಪದಾರ್ಥಗಳಂತೂ ನಾವು ಈಗಲೂ ಮಾಡುವ ಸಿಹಿಪೂರಿಗೆಗೆಗಳು, ಹಾಲ್ಮಂಡಿಗೆ, ಅಳ್ಳಿಟ್ಟು ಮೊದಲಾದವನ್ನು ಆ ಕಾಲದಲ್ಲೂ ಚಾವುಂಡರಾಯನು ಹೇಳಿದ್ದಾನೆ. ಪಾನೀಯಗಳ ವಿಚಾರವು ಬಹುತೇಕ ಎಲ್ಲರಲ್ಲೂ ಸಾಮ್ಯತೆ ಇದೆ.

ಇನ್ನು ಕೆಳದಿಯ ಬಸಪ್ಪನಾಯಕನ ‘ಶಿವತತ್ವ ರತ್ನಾಕರ’ವು ಇರುವ ಪ್ರಾಚೀನ ವಿಶ್ವಕೋಶಗಳಲ್ಲಿ ಬಹಳ ದೊಡ್ಡದು. ಸಂಸ್ಕೃತ ಭಾಷೆಯಲ್ಲಿ ರಚಿತವಾದ ಈ ಕೃತಿಯು 9 ಕಲ್ಲೋಲಗಳ 108 ತರಂಗಗಳ 13,000 ಶ್ಲೋಕಗಳ ಬೃಹತ್‌ಕೃತಿ. ಇದರಲ್ಲೂ ಸಸ್ಯಹಾರದ ಅಡುಗೆಗಳ, ಅವಕ್ಕೆ ಬೇಕಿರುವ ನಾನಾ ಪದಾರ್ಥಗಳು, ಅವುಗಳನ್ನು ಸಿದ್ದಗೊಳಿಸುವ ಬಗೆ, ನೆನೆಸಿ-ಹುರಿದು-ಬೇಯಿಸಿ ಅಡುಗೆ ಮಾಡುವ ಕ್ರಮ ಮತ್ತು ಮಾಡಿದ ಆಹಾರ ಪದಾರ್ಥಗಳನ್ನು ಸಂಸ್ಕರಿಸುವ, ಸಂರಕ್ಷಿಸುವ ವಿಧಾನಗಳ ಬಗ್ಗೆ ಬಹಳಷ್ಟು ವಿಚಾರಗಳು ಈ ಎಲ್ಲಾ ಕೃತಿಗಳಲ್ಲೂ ಉಲ್ಲೇಖ ಗೊಂಡಿವೆ. ಇವುಗಳ ಸ್ಫೂರ್ತಿ ಮೂಲ ಒಂದೇ ಆಗಿದ್ದರೂ ಪ್ರಸ್ತುತಿಯು ವಿಭಿನ್ನವಾಗಿದೆ. ಭಾಷೆ ಬೇರೆಬೇರೆ ಆಗಿವೆ. ಬಳಸುವ ಪದಾರ್ಥಗಳ ಪರಿಮಾಣ ಮತ್ತು ಪರಿಣಾಮಗಳು ಕೂಡ ವೈವಿಧ್ಯಮಯವಾಗಿವೆ.

ಅಡುಗೆಯ ಪ್ರಾಚೀನ ಕಾಲದ ಕೃತಿಗಳ ಉಲ್ಲೇಖ ಮತ್ತು ಅವುಗಳ ವಿಷಯ ಪರಿಚಯಿಸಿದ ಕಾರಣವು ಇಷ್ಟೇ.. ‘‘ಅಡುಗೆ ಎಂಬುದು ಗಂಡು-ಹೆಣ್ಣು ಅಥವಾ ಯಜಮಾನ-ಆಳು ಎಂಬ ಯಾವ ಭೇದವಿಲ್ಲದೇ ಎಲ್ಲರೂ ಮಾಡಬೇಕಾದ, ಕಲಿಯಬೇಕಾದ ಒಂದು ಜೀವನ ಕ್ರಮ ಎಂದು ನಿರೂಪಿಸಬೇಕಿತ್ತು. ಅಂತಹ ಜೀವನ ಕ್ರಮವು ಹಿಂದೆಯೂ ಇತ್ತು, ಈಗಲೂ ಇದೆ. ಮುಂದೆಯು ಇರಲೇಬೇಕು. ಇರದೇ ಇದ್ದರೆ ಅದು ನಮಗೆ ಮೂಲಭೂತವಾದ ತೊಂದರೆಗಳನ್ನು ಒಡ್ಡುತ್ತಾ ಹೋಗುತ್ತದೆ. ಅದು ಸರಣಿ ಸಮಸ್ಯೆಗಳನ್ನು ಹುಟ್ಟುಹಾಕಬಹುದು. ಇಂತಹ ಆತಂಕ ಆಧುನಿಕ ಕಾಲದ ನಮ್ಮ ಆಹಾರಕ್ರಮಗಳಲ್ಲೂ ಇವೆ.

ಹಾಗಂತ ಪ್ರಾಚೀನ ಕಾಲದ ರೆಸಿಪಿಗಳನ್ನು ನಾವು ಇವತ್ತು ಬಳಸಲಿಕ್ಕೆ ಸಾಧ್ಯವಾಗದು. ಆದರೆ ಅಲ್ಲಿನ ಸಾವಯವ ಪದಾರ್ಥಗಳ ಬಳಕೆ ಮತ್ತು ಪ್ರಯೋಜನವನ್ನು ಅರಿಯಬೇಕು. ಆ ನಿಟ್ಟಿನಲ್ಲಿ ಈ ಕೃತಿಗಳನ್ನು ನೋಡಬಯಸುತ್ತೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)