varthabharthi


ಭೀಮ ಚಿಂತನೆ

ಚಾತುರ್ವರ್ಣದಿಂದ ಹಿಂದೂಸ್ಥಾನದ ಅಧಃಪತನ

ವಾರ್ತಾ ಭಾರತಿ : 6 Feb, 2020
ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ

ದಿನಾಂಕ 12.2.1938 ಶನಿವಾರದಂದು ಬೆಳಗ್ಗೆ ಒಂಬತ್ತು ಗಂಟೆಗೆ ಮನೆಮಾಡದಿಂದ ಪರಿಷತ್ತಿಗಾಗಿ ಸಟಾಣೆಗೆ ಹೋಗುತ್ತಿರುವಾಗ ದಾರಿಯಲ್ಲಿ ಬರುವ ಚಾಂದವಾಡ ಮುಂತಾದ ಸ್ಥಳಗಳಲ್ಲಿ ಡಾ. ಬಾಬಾ ಸಾಹೇಬರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು. ಮಧ್ಯಾಹ್ನ 11 ಗಂಟೆಗೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸಟಾಣೆ ತಲುಪಿದರು. ಸಟಾಣೆಯ ಅಭಿಮಾನ ಪಾಟೀಲ, ಧರ್ಮಾ ತಾನಾಜಿ ಪಾಟೀಲ ಮತ್ತು ಪ್ರಮುಖರು ಎದುರುಗೊಂಡರು. ಡಾ. ಬಾಬಾ ಸಾಹೇಬರ ಮೆರವಣಿಗೆ ಸಟಾಣೆಯ ಪ್ರಮುಖ ಬೀದಿಗಳಲ್ಲಿ ನಡೆದಿತ್ತು. ಇಡೀ ಊರು ತುಂಬಾ ಬಾಬಾ ಸಾಹೇಬರ ಸ್ವಾಗತಕ್ಕಾಗಿ ಅಲಂಕರಿಸಲಾಗಿತ್ತು. ಊರಿನ ಮೇಲ್ಭಾಗದಲ್ಲಿರುವ ಯಶವಂತರಾವ್ ಮಹಾರಾಜ್ ಮಂದಿರದ ಹಿಂದಿನ ನದಿ ದಂಡೆಯಲ್ಲಿ ಭವ್ಯ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು. ಪರಿಷತ್ತು ಆ ಸಿದ್ಧತೆ ಮಾಡಿತ್ತು. ಪರಿಷತ್ತಿನ ಸ್ವಾಗತ ಅಧ್ಯಕ್ಷ ಮಹಾಂತ ನಾನಕದಾಸರು ಡಾ. ಬಾಬಾ ಸಾಹೇಬರನ್ನು ಮತ್ತು ನೆರೆದ ಅತಿಥಿಗಳನ್ನು ಸ್ವಾಗತಿಸಿದರು. ಪರಿಷತ್ತಿನ ಅಧ್ಯಕ್ಷತೆ ಅಲಂಕರಿಸಲು ಡಾ. ಬಾಬಾಸಾಹೇಬರಲ್ಲಿ ಭಿನ್ನವಿಸಿಕೊಳ್ಳಲಾಯಿತು. ಅಧ್ಯಕ್ಷತೆ ವಹಿಸಿದ ಡಾ. ಬಾಬಾ ಸಾಹೇಬರು ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಪ್ರಚಂಡ ಕರತಾಡನ ಮತ್ತು ಜಯಘೋಷಗಳು ಮುಗಿಲು ಮುಟ್ಟಿದವು. ಡಾ. ಬಾಬಾ ಸಾಹೇಬರು ಹೇಳಿದರು:

ಬಂಧು ಮತ್ತು ಭಗಿನಿಯರೇ,
ಮನಮಾಡನಲ್ಲಿ ಸೇರಲಿರುವ ಪರಿಷತ್ತಿನ ಕಾರ್ಯಕ್ರಮಕ್ಕೆಂದು ಈ ಪರಿಸರಕ್ಕೆ ಬಂದಿದ್ದೆ. ಈ ಸಂದರ್ಭ ಬಳಸಿಕೊಂಡು ನಿಮ್ಮಲ್ಲಿಗೆ ಬರಲು ನನಗೆ ಅತೀವ ಆನಂದವಾಗುತ್ತಿದೆ. ನನ್ನ ಪ್ರವಾಸದ ಮುಖ್ಯ ಉದ್ದೇಶ ನಮ್ಮ ರಾಜಕಾರಣ ಬಲಿಷ್ಠಗೊಳಿಸಲು ಹುಟ್ಟಿಕೊಂಡ ಸ್ವತಂತ್ರ ಮಂಜೂರ ಪಕ್ಷದ ಪ್ರಚಾರ ಮಾಡುವುದು. ಇಂದಿನ ಸಂದರ್ಭದಲ್ಲಿ ಸ್ವತಂತ್ರ ಮಂಜೂರ ಪಕ್ಷದ ಮಾಹಿತಿಗಿಂತ ಇನ್ನೊಂದು ಹೇಳುವುದು ಏನೂ ಇಲ್ಲ. ಹಾಗೆ ಏನಾದರೂ ಹೇಳುವುದರ ಪ್ರಯೋಜನವೂ ಇಲ್ಲ. ಇವತ್ತಿನ ಸಭೆಯಲ್ಲಿ ಸ್ಪೃಶ್ಯ ಸಮಾಜದ ಬಾಂಧವರು ಪಾಲ್ಗೊಂಡಿರುವುದು ನನಗೆ ಸಂತೋಷ ತಂದಿದೆ. ಈ ಹಿಂದೆಯೂ ನಾವು ಸಭೆಗಳನ್ನು ನಡೆಸಿದಾಗ ಮಾನವೀಯ ಅಂತಃಕರಣದ ಕೆಲವರು ಹಾಜರಾಗುತ್ತಿದ್ದರು, ಆದರೆ ಅವರು ಇಲ್ಲಿ ಏನು ನಡೀತಿದೆ ಎಂಬುದನ್ನು ತಿಳಿಯಲು ಬಂದವರಾಗಿದ್ದರು. ಇಂದಿನ ಸ್ಥಿತಿ ಅಂತಹುದಲ್ಲ. ಆದ್ದರಿಂದ ಈ ಸಭೆಯಲ್ಲಿ ಕೊಂಚ ಭಿನ್ನವಾಗಿ ಮಾತನಾಡುವವನಿದ್ದೇನೆ. ಹಿಂದೂಸ್ಥಾನದ ಇತಿಹಾಸವನ್ನು ಸಿಂಹಾವಲೋಕನ ನಡೆಸಿದರೆ ಇಲ್ಲಿ ಇದುವರೆಗೆ ಪ್ರಜಾಪ್ರಭುತ್ವ ರಾಜ್ಯ ಪದ್ಧತಿ ಜಾರಿಯಲ್ಲಿರಲಿಲ್ಲ. ಅನೇಕ ಗ್ರಂಥಗಳ ವಾಚನದಿಂದ ನಾನು ಕಂಡುಕೊಂಡ ಸತ್ಯಗಳ ಮೂಲಕ ಹೇಳುವುದೆಂದರೆ, ಹಿಂದೂಸ್ಥಾನದ ಕ್ಷೀಣತೆ ಮತ್ತು ಅಧಃಪತನವು ಹಿಂದೂಗಳು ಒಪ್ಪಿದ ಚಾತುರ್ವರ್ಣದಿಂದಲೇ ಆಗಿದೆ. ಈ ಪದ್ಧತಿಯು ಹಿಂದೂ ಸಂಸ್ಕೃತಿಯ ಆಳಕ್ಕೆ ಸೇರಿರುವುದರಿಂದ ಅದರ ದುಷ್ಪರಿಣಾಮವನ್ನು ಹಿಂದೂಸ್ಥಾನಿಗಳೇ ಅನುಭವಿಸುವಂತಾಗಿದೆ.

ಚಾತುರ್ವರ್ಣದ ಕಲಿಕೆಯೆಂದರೆ ಬ್ರಾಹ್ಮಣರು ವಿದ್ಯೆಯನ್ನು ಕಲಿಯುವುದು ಮತ್ತು ಕಲಿಸುವುದು. ಕ್ಷತ್ರಿಯರು ಯುದ್ಧ ಮಾಡುವುದು, ವೈಶ್ಯರು ವ್ಯಾಪಾರ, ಉದ್ಯಮ ನಡೆಸುವುದು. ಶೂದ್ರರು ಸೇವೆ ಮಾಡುವುದು. ಈ ಪದ್ಧತಿಯಿಂದ ನಮ್ಮ ರಾಷ್ಟ್ರಕ್ಕೆ ಹೇಗೆ ಮತ್ತು ಎಷ್ಟು ಹಾನಿಯಾಗಿದೆ ಎಂಬುದು ತುಂಬಾ ಬುದ್ಧಿವಂತರಿಗೂ ಸರಿಯಾಗಿ ತಿಳಿಯದ ವಿಚಾರವಾಗಿದೆ. ಈ ದೇಶದ ಬಹುಸಂಖ್ಯಾತ ಎಂಬ ವರ್ಗವನ್ನು ಒಟ್ಟಾಗಿ ಪಕ್ಕಕ್ಕೆ ದೂಡಿ ಬಿಡಲಾಗಿದೆ. ದೇಶದ ಸ್ವಾತಂತ್ರಕ್ಕೆ ಪೋಷಕವಾದ ಈ ಬಹುಸಂಖ್ಯಾತ ಎಂಬ ವರ್ಗವು ಕೆಲಸಕ್ಕೆ ಬಾರದು ಎಂದು ಠರಾಯಿಸಿದರೆ, ಈ ದೇಶವು ಯಾವತ್ತೂ ಪರತಂತ್ರದಲ್ಲೇ ಹೊರಳಾಡುತ್ತಿರಬೇಕಾಗುತ್ತದೆ. ಕೆಲವುದಿನ ಸ್ವಾತಂತ್ರ ಅನುಭವಿಸಿದ ಗ್ರೀಕ್‌ನ ಅಲೆಕ್ಸಾಂಡರ್ ಹಿಂದೂಸ್ಥಾನದ ಮೇಲೆ ದಂಡೆತ್ತಿ ಬಂದು ತನ್ನ ರಾಜ್ಯ ಸ್ಥಾಪಿಸಿದ. ತದನಂತರದ ಅಲ್ಪಕಾಲದಲ್ಲಿ ಸ್ವಲ್ಪ ಸ್ವಾತಂತ್ರ ಪಡೆದು ಮರಾಠಾಶಾಹಿ ಇತ್ತೋ ಇಲ್ಲವೋ ಹಾಗಿತ್ತು. ಪೇಶ್ವೆ ಎಲ್ಲ ಕಾರುಬಾರುಗಳನ್ನು ತಮ್ಮ ಕೈಗೆ ತಗೊಂಡರೋ ಇಲ್ಲವೋ; ಅದೇ ಕೊನೆಯಾಗಿ ಇಡೀ ದೇಶವನ್ನು ಇಂಗ್ಲಿಷರ ಗುಲಾಮಗಿರಿಗೆ ತಳ್ಳುತ್ತಾರೆ. ಇವತ್ತು ಸೇರಿದ ನಿಮ್ಮೆಲ್ಲರನ್ನು ನಾನು ಕೇಳ ಬಯಸುವುದೇನೆಂದರೆ ಈ ದೇಶಕ್ಕೆ ಒಳ್ಳೆಯ ದಿನಗಳು ಯಾಕೆ ಬಂದಿಲ್ಲ? ಬೇರೆ ದೇಶಗಳ ಇತಿಹಾಸವನ್ನು ಕಂಡಾಗ ಇಂತಹ ಸ್ಥಿತಿ ನಮಗೆಲ್ಲೂ ಕಾಣಸಿಗುವುದಿಲ್ಲ, ಇದಕ್ಕೆ ಕಾರಣವೇನು? ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಹಿಂದೂ ಧರ್ಮಗುರುಗಳು ಅರ್ಥಾತ್ ಬ್ರಾಹ್ಮಣರು ಹಿಂದೂಸ್ಥಾನದ ಮೇಲೆ ಹೇರಿದ ಚಾತುರ್ವರ್ಣ ಚೌಕಟ್ಟಿನಿಂದಲೇ ಈ ಅನರ್ಥಗಳು ನಡೆಯುತ್ತಿವೆ.

ನಿಮಗೊಂದು ವಿಚಾರ ಮನವರಿಕೆಯಾಗುವಂತಿದೆ. ಊಹಿಸಿ, ಒಂದು ಗ್ರಾಮದ ಮೇಲೆ ಪಠಾಣರು ಹಲ್ಲೆ ಮಾಡಲು ಬಂದರೆ ಎಲ್ಲ ಜಾತಿಯ ಜನರು ಕೈಗೆ ಶಸ್ತ್ರತಗೊಂಡು ಸಂಘಟಿತರಾಗಿ ಆ ಹಲ್ಲೆಯನ್ನು ತೊಡೆದು ಹಾಕಬಹುದು. ಯಾರ ಕೈಯಲ್ಲಿ ಶಸ್ತ್ರವಿದೆಯೋ ಅಂತಹವರು ತಮ್ಮ ಮೇಲಾಗುವ ಅನ್ಯಾಯವನ್ನು ತೊಡೆಯಬಹುದು. ಆದರೆ ಕೇವಲ ನಾಲ್ವರು ಖಡ್ಗ ಎತ್ತಿಕೊಂಡು ಉಳಿದವರಿಗೆ ಕುರುಪಿ ಹಿಡಿಯಲೂ ಸಹ ನಿಷೇಧ ಹೇರಿದರೆ ಹೇಗೆ? ಅದರಿಂದ ರಾಷ್ಟ್ರದ ಸಂರಕ್ಷಣೆಯನ್ನು ಮಾಡಲು ಹೇಗೆ ಸಾಧ್ಯ?

ಹಿಂದೂಸ್ಥಾನದ ಮೇಲೆ ದಂಡೆತ್ತಿ ಅಲೆಕ್ಸಾಂಡರ್ ಅಥವಾ ಇನ್ಯಾರೇ ಬಂದರೂ ಮುಷ್ಟಿಯಷ್ಟು ಕ್ಷತ್ರಿಯರನ್ನು ಬಿಟ್ಟರೆ ಯಾರೂ ಯುದ್ಧ ಮಾಡಲು ಅಥವಾ ರಾಷ್ಟ್ರ ಸಂರಕ್ಷಣೆಗೆ ಹೋಗಕೂಡದೆಂಬುದು ಚಾತುರ್ವರ್ಣದ ಕಲಿಕೆಯಾಗಿದೆ. ಹಿಡಿಯಷ್ಟು ಬ್ರಾಹ್ಮಣರು ಅವರಿಗೆ ಶಸ್ತ್ರ ನೀಡರು. ಈ ರೀತಿಯ ಕಲಿಕಾ ವಿಧಾನದಿಂದಲೇ ಹಿಂದೂಸ್ಥಾನದ ಅಧಃಪತನ ಮತ್ತು ಕ್ಷೀಣತೆ ಉಂಟಾಗಿದೆ. ಯಾರ ತೋಳಲ್ಲಿ ಹುರಿಯಿದೆಯೋ ಅವರ ಕೈಗೆ ಶಸ್ತ್ರಾಸ್ತ್ರ ಕೊಟ್ಟಿದ್ದರೆ, ಮುಕ್ತವಾಗಿ ಬಿಟ್ಟಿದ್ದರೆ ಇಂತಹ ವಿಪರೀತ ಪರಿಸ್ಥಿತಿ ಇರುತ್ತಿರಲಿಲ್ಲ. ಇವೆಲ್ಲ ಧರ್ಮಗುರು ಎಂದು ಮೆರೆವ ಬ್ರಾಹ್ಮಣರು ತಮ್ಮ ಸ್ವಂತ ಲಾಭಕ್ಕಾಗಿ ಮಾಡಿದ್ದರೂ ಪರಿಣಾಮ ಮಾತ್ರ ರಾಷ್ಟ್ರಘಾತಕವೆಂದೇ ಪರಿಗಣಿತವಾಗಿವೆ, ಇದರಲ್ಲಿ ಬೇರೆ ಮಾತಿಲ್ಲ. ಅಸ್ಪಶ್ಯರೆಂದು ತಿಳಿದ ಸಮಾಜಕ್ಕೆ ಇಂದಿನವರೆಗೆ ನಿರಂತರ ಅನ್ಯಾಯ ಮತ್ತು ಹಿಂಸೆಯನ್ನು ಅನುಭವಿಸುವುದಾಗಿದೆ. ಅದರ ಮರ್ಮ ಇದರಲ್ಲಿದೆ. ಒಂದೊಮ್ಮೆ ಅಸ್ಪಶ್ಯ ಸಮಾಜದ ಪೂರ್ವಜರ ಕೈಯಲ್ಲಿ ಶಸ್ತ್ರಗಳಿದ್ದಿದ್ದರೆ ಅವರ ಹಿರಿಯರು ಎರಡು ಸಾವಿರ ವರ್ಷ ಅಸ್ಪಶ್ಯತೆಯ ಮತ್ತಿತರ ಅನ್ಯಬಗೆಯ ಅತ್ಯಾಚಾರಗಳನ್ನು ನಯವಾಗಿ ಅನುಭವಿಸುತ್ತಿದ್ದರೇನು? ಚಾತುರ್ವರ್ಣದ ದುಷ್ಟವ್ಯವಸ್ಥೆಯು, ಮತ್ತದರ ನಡವಳಿಕೆಯು ಬಹುಜನ ಸಮಾಜದ ಕೈಗೆ ಶಸ್ತ್ರ ಮತ್ತು ವಿದ್ಯೆಯನ್ನು ನೀಡದೆ ಅದರಿಂದ ವಂಚಿತವಾಗುವ ಹಾಗೆ ಮಾಡಿದೆ. ಆ ಕಾರಣದಿಂದ ಈ ದೇಶದ ಸ್ಥಿತಿಯೇನಾಗಿದೆ ನೋಡಿರಿ? ಈ ಪ್ರಾಂತದಲ್ಲಿ ಒಂದು ಕಾಲದಲ್ಲಿ ಕ್ಷತ್ರಿಯರ ರಾಜ್ಯವಿತ್ತು. ಅವರು ಕ್ಷೀಣಿಸಿದನಂತರ ಪೇಶ್ವಾಯಿ ಉದಯವಾಯಿತು. ಪೇಶ್ವಾಯಿ ಅಸ್ತವಾದ ಬಳಿಕ ಇಂಗ್ಲಿಷ್ ಆಳ್ವಿಕೆ ಆರಂಭವಾಯಿತು. ಒಂದು ಕಾಲದಲ್ಲಿ ಆಳಿದ ಕ್ಷತ್ರಿಯರು ಈಗೆಲ್ಲಿ? ಕೆಂಪು ಪಗಡಿ, ಕೊರಳಲ್ಲಿ ಪಟ್ಟಿ ಹಾಕಿಕೊಂಡು, ಚಪರಾಶಿಗಳ ಕೆಲಸ ಮಾಡುತ್ತಿರುವುದನ್ನು ಸಾಕಷ್ಟು ಕಡೆ ಕಾಣಬಹುದು.

 ಬ್ರಾಹ್ಮಣರು ವೇದಾಧ್ಯಯನ ಮಾಡಿ ಕಲಿಸುವುದು ಮತ್ತು ಕಲಿಯುವುದು. ಕ್ಷತ್ರಿಯರು ಯುದ್ಧ ಮಾಡುವುದು, ವೈಶ್ಯರು ವ್ಯಾಪಾರ-ಉದ್ಯಮ ಮಾಡಬೇಕು, ಶೂದ್ರರು ಸೇವಾಧರ್ಮವನ್ನು ನಿಭಾಯಿಸುವುದು. ಇದು ಮನುವಾದ. ಹಿಂದೂಸ್ಥಾನದಲ್ಲಿ ಪ್ರಜಾಪ್ರಭುತ್ವ ರಾಜ್ಯ ಈಗ ಪ್ರಥಮವಾಗಿ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಹಿತ ಸಾಧಿಸಿ ಹಿಂದುಸ್ಥಾನಕ್ಕೆ ಸ್ವಾತಂತ್ರ ದೊರಕಿಸಿಕೊಡಲು ಕದನ ನಡೆಸುತ್ತಿರುವ ಕಾಂಗ್ರೆಸ್ ನಮ್ಮ ಬಹುಸಂಖ್ಯಾತ ಬಡವ, ರೈತರ ಮತ್ತು ಕೂಲಿಗಳ ಕಲ್ಯಾಣಕರ್ತರು ತಾವೆಂದು, ನಿಮ್ಮ ಬೆಂಗಾವಲುಗಳೇ ನಾವೆಂದು ಎಷ್ಟೇ ಕೂಗಾಡಿದರೂ, ಅದಕ್ಕೆ ಮರುಳಾಗುವಷ್ಟು ಈ ಪ್ರಜೆಗಳು ಅಮಾಯಕರಲ್ಲ. ಯಾವ ಪ್ರಜೆಗಳ ಹಿತಕ್ಕಾಗಿ ಕಾಂಗ್ರೆಸ್‌ಏಳು ಪ್ರಾಂತಗಳಲ್ಲಿ ಅಧಿಕಾರ ಗದ್ದುಗೆ ಅಲಂಕರಿಸಿದೆಯೋ ಅದನ್ನು ತುಸು ನಿರೀಕ್ಷಣೆ ಮಾಡಿ ನೋಡಿದಾಗ ಏನು ಕಾಣಸಿಗುತ್ತದೆ? ಮುಂಬೈ ಕಾನೂನು ಮಂಡಳಿಯ 11 ಸ್ಥಾನಗಳ ಪೈಕಿ 6 ಸ್ಥಾನಗಳನ್ನು ಬ್ರಾಹ್ಮಣರು ಕಿತ್ತುಕೊಂಡಿದ್ದಾರೆ. ಮದ್ರಾಸ್ ಮತ್ತು ಬಿಹಾರ ಭಾಗಗಳನ್ನು ಗಮನಿಸಿದಾಗ ಆ ಮಂತ್ರಮಂಡಲದಲ್ಲಿ ಅರ್ಧದಷ್ಟು ಬ್ರಾಹ್ಮಣರಿದ್ದಾರೆ. ಇದೇ ಸ್ಥಿತಿಯನ್ನು ಕಾಂಗ್ರೆಸ್ ಇತರ ಪ್ರಾಂತಗಳಲ್ಲೂ ಮಾಡಿದೆ. ಆದಕಾರಣ ಕೊಂಚದರಲ್ಲೇ ಹೇಳುವುದೆಂದರೆ ಪಕ್ಷದ ಹೆಸರನ್ನು ಬಳಸಿ ಕಾಂಗ್ರೆಸ್ ಬ್ರಾಹ್ಮಣ ಭೂತವನ್ನು ಬಹುಸಂಖ್ಯಾತರಾಗಿರುವ ಬಡವ, ರೈತ ಮತ್ತು ಕೂಲಿಗಳ ಹೆಗಲ ಮೇಲೆ ಹೇರಲು ಯತ್ನಿಸುತ್ತಿದೆ. ನಾವು ಎಚ್ಚರವಾಗಿರಬೇಕಾಗಿರುವುದು ಅಗತ್ಯವಿದೆ.

ಬ್ರಾಹ್ಮಣೇತರ ಸುಶಿಕ್ಷಿತರು ಕೆಲವು ಕಾಲ ಸತ್ಯಶೋಧಕ ಹೆಸರಿನ ಪಂಥವೊಂದನ್ನು ಹುಟ್ಟುಹಾಕಿದರು. ಆ ಪಂಥವು ಹೆಸರುಗಳಿಸುವ ಹೊತ್ತಿಗೆ ಅದರ ಕಾರ್ಯಕರ್ತರು ತಮ್ಮ ಗಂಟುಮೂಟೆ ಕಟ್ಟಿಕೊಂಡು ಕಾಂಗ್ರೆಸ್ ಹಿಂದೆ ಸುತ್ತತೊಡಗಿದರು. ಅವರು ಎಚ್ಚರತಪ್ಪಿದಂತಿದೆ. ಮಹಾತ್ಮಾಗಾಂಧೀಜಿಯವರ ರಾಜಕಾರಣದಿಂದ ಅವರ ಕಾಲಾವಧಿಯಲ್ಲಿ ಎಲ್ಲ ಅಧಿಕಾರ(ರಾಜಕೀಯ)ವು ಬ್ರಾಹ್ಮಣರ ಕೈಗೆ ಸೇರುವುದಾದರೆ ಆ ರಾಜಕಾರಣಕ್ಕೆ ಬೆಂಕಿಯಿಡಬೇಕು. ಮಹಾತ್ಮಾ ಗಾಂಧೀಜಿಯವರು ರಾಜಕಾರಣ ಸೂತ್ರಗಳನ್ನು ಒಂದುವೇಳೆ ಶೇಠಜಿ ಮತ್ತು ಭಟಜಿಗಳ ಕೈಗೆ ನೀಡುವುದೇ ಆದರೆ, ಆ ಬ್ರಾಹ್ಮಣ ಪಿಶಾಚಿಯನ್ನು ಮತ್ತೆ ಜೀವಂತ ಮಾಡುವುದಾದರೆ ಆ ಬ್ರಾಹ್ಮಣರ ವಿನಾಶವನ್ನು ನಾವೇ ಎಲ್ಲರೂ ಸೇರಿ ಮಾಡಬೇಕಾಗುತ್ತದೆ. ಈ ಕಾರ್ಯ ಕೇವಲ ನನ್ನದಲ್ಲ. ಬಹುಸಂಖ್ಯಾತರಾದ ಎಲ್ಲ ಬಡರೈತರ, ಕೂಲಿಗಳ ಮತ್ತು ಮರಾಠರದ್ದಾಗಿದೆ. ಇವೆಲ್ಲರನ್ನೂ ಸಂಘಟಿತಗೊಳಿಸಿದಲ್ಲಿ ಕಾನೂನುಮಂಡಳಿಯ ಎಲ್ಲ 11ಕ್ಕೆ 11 ಸ್ಥಾನಗಳನ್ನು ವಶಪಡಿಸಿಕೊಳ್ಳಬಹುದು. ಆದರೆ ಯಥೇಚ್ಛ ಭೋಜನಾನಂತರ ಉಳಿದ ಎಂಜಲಿನ ಪತ್ರಾವಳಿಯನ್ನು ತಿಪ್ಪೆಗೆಸೆದರೆ ಆ ಎಲೆ ನೆಕ್ಕುವಲ್ಲಿ ಸಂತೋಷ ಪಡುವ ನಾಯಿಗಳಂತೆ ಅವರ ಸ್ಥಿತಿಯಾಗಿದೆ. ಚೂರುಚೂರು ಪಾಲು ದೊರಕಿಸಿಕೊಳ್ಳುವಲ್ಲಿ ಸಮಾನತೆ ಹುಟ್ಟಬೇಕು. ಅದಷ್ಟೇ ಅಲ್ಲ, ಒಬ್ಬ ಯೋಗ್ಯವಾದ ಭಿಲ್ಲನೂ ಯೋಗ್ಯತಾನುಸಾರ ಮುಖ್ಯ ಪ್ರಧಾನನಾಗಬೇಕು. ಸಮಾಜದೊಳಗೆ ಉಚ್ಚ-ನೀಚ ಭೇದಗಳು ಕಡಿಮೆಯಾಗಬೇಕು. ಇದು ಕಾಂಗ್ರೆಸಿಗರಿಂದ ಆಗುವುದು ಸಾಧ್ಯವಿಲ್ಲ. ಆ ಕಾರಣದಿಂದ ನಾನು ಕಾಂಗ್ರೆಸ್‌ನಲ್ಲಿ ಶಾಮೀಲು ಆಗುವುದಿಲ್ಲ.

ಅನೇಕ ಸಲ ಹೀಗೆ ಹೇಳಲಾಗುತ್ತಿದೆ. ಮಹಾತ್ಮಾಗಾಂಧೀಜಿಯವರ ಎದುರು ಹೋದ ವಿರೋಧಕರು ತಮ್ಮ ವಿರೋಧ ಮರೆತು ಬಿಡುತ್ತಾರೆ. ಅವರ ಬಾಯಿಯಿಂದ ಮಾತೇ ಹೊರಡುವುದಿಲ್ಲವಂತೆ, ಆದರೆ ನನ್ನ ಅನುಭವ ಇದರ ತದ್ವಿರುದ್ಧವಿದೆ. ನಾನು ಹತ್ತುಬಾರಿ ಮಹಾತ್ಮಾ ಗಾಂಧೀಜಿಯವರನ್ನು ಭೇಟಿಯಾಗಿದ್ದೇನೆ. ಆದರೆ ಜನ ಆಡಿಕೊಳ್ಳುವಂತೆ ನನಗೇನೂ ದೆವ್ವ ಹಿಡಿದಿಲ್ಲ.

ಬಡವ, ರೈತ ಮತ್ತು ಕೂಲಿ ವರ್ಗದ ಹಿತರಕ್ಷಣೆಗಾಗಿ ನಾವು ‘‘ಸ್ವತಂತ್ರ ಮಜೂರಪಕ್ಷ’’ ಹೆಸರಿನ ಪಕ್ಷವನ್ನು ಕಟ್ಟಿದ್ದೇವೆ. ಈ ಪಕ್ಷದ ಬಗ್ಗೆ ಸುದೀರ್ಘವಾಗಿ ಹೇಳದೆ, ಪಕ್ಷದ ಅರಿವಿನ ಬೀಗದ ಕೈನ ವಿಚಾರದ ಪವಿತ್ರ ಮಾತನ್ನು ಸ್ವಲ್ಪದರಲ್ಲೇ ಹೇಳುತ್ತೇನೆ. ಅನೇಕರು ನನಗೊಂದು ಪ್ರಶ್ನೆ ಕೇಳುತ್ತಾರೆ. ಅದೇನೆಂದರೆ, ರಾಜಕೀಯ ಹೋರಾಟಕ್ಕಾಗಿ ಕಾಂಗ್ರೆಸ್‌ಇರುವಾಗ ಎರಡನೆಯ ಪಕ್ಷದ ಅಗತ್ಯವೇನು? ಅವರಿಗೆ ನಾನು ಹೇಳುವುದಿಷ್ಟೆ, ಕಾಂಗ್ರೆಸ್ ಇಂದು ಬಂಡವಾಳ ಶಾಹಿಗಳ ತೊತ್ತಾಗಿದೆ. ಕಾರಣ ಕಾಂಗ್ರೆಸ್‌ನ ಇಂದಿನ ಎಲ್ಲ ಹುಡುಗಾಟಿಕೆಗಳಿಗೆ ಕಾಂಗ್ರೆಸ್‌ನೊಳಗಿನ ಬಂಡವಾಳಶಾಹಿಗಳೇ ಹಣ ಪೂರೈಸಿ ಅಮಲಿನಿಂದ ಮೆರೆಯುತ್ತಿದ್ದಾರೆ.

ಇವರರ್ಥ ಇಷ್ಟೇ. ಬಂಡವಾಳಿಗರ ಮೂಲದ ಒಂದೇ ಹೇತು; ಅದು ಈ ಕಾಂಗ್ರೆಸ್‌ನಿಂದ ತಮ್ಮ ಹಿತವನ್ನು ಅದೆಷ್ಟು ಕಾಪಾಡಿಕೊಳ್ಳಬೇಕೋ ಅಷ್ಟು ಸಾಧಿಸಿಕೊಂಡು ಬಿಡುವುದು. ಇದು ಸತ್ಯವಾಗಿದ್ದರೂ ಅವರು ಹೊರನೋಟಕ್ಕೆ ನಾವು ಬಡವರು, ರೈತರು ಮತ್ತು ಕೂಲಿ ಕಾರ್ಮಿಕರಿಗಾಗಿ ಸ್ವರಾಜ್ಯದ ಹೋರಾಟವನ್ನು ನಡೆಸಿದ್ದೇವೆ ಎಂದು ಹೇಳುತ್ತಾರೆ. ಈ ಹೇಳಿಕೆ ದೊಡ್ಡಸ್ತಿಕೆ ಮಾತೆನಿಸುತ್ತದೆ. ಕಾರಣ ಶ್ರೀಮಂತ ಬಂಡವಾಳದಾರರು ಹಾಗೂ ಬಡವರು, ರೈತರು ಮತ್ತು ಕೂಲಿಗಳ ಹಿತಸಂಬಂಧವು ಪರಸ್ಪರ ವಿರೋಧವಾಗಿದೆ. ಕಡುಬಡವರಿಗಾಗಿ ಸಿರಿವಂತರು ಕೈಯಿಂದ ಹಣ ವೆಚ್ಚಮಾಡಿ ಸ್ವಂತಕ್ಕೆ ಹಾನಿ ಮಾಡಿಕೊಳ್ಳುತ್ತಾರೆಯೇ?, ಈ ಮಾತು ಸಾಧ್ಯವೆನಿಸುವುದಿಲ್ಲ. ಹೇಗೆ ಮುಂಗುಸಿ ಹಾವನ್ನು ನೆಕ್ಕುತ್ತಿರುವಂತೆ, ಆಡು ತೋಳನ ತೊಡೆಯ ಮೇಲೆ ನಿರ್ವಿಘ್ನವಾಗಿ ಮಲಗಿದ್ದನ್ನು ಕಾಣಲು ಸಾಧ್ಯವಿಲ್ಲವೋ ಹಾಗೆಯೇ ಸಿರಿವಂತ ಬಂಡವಾಳಿಗರ ಪ್ರೀತಿಯ ಮೇಲೆ ಬಡವ, ರೈತ ಮತ್ತು ಕೂಲಿಗಳ ಹಿತವು ಸಾಧ್ಯ ಎನ್ನುವ ಮಾತನ್ನು ಯಾರೂ ನಂಬಿ ಮೋಸ ಹೋಗಬಾರದು. ಆದ್ದರಿಂದ ರೈತರು ಮತ್ತು ಕೂಲಿಗಳು ಬಂಡವಾಳದಾರ ಕಾಂಗ್ರೆಸ್ ಸಂಸ್ಥೆಯಿಂದ ತುಸು ಎಚ್ಚರವಾಗಿರಿ. ಇಷ್ಟೆ ನನಗೆ ಹೇಳುವುದಿದೆ. ಕಾರಣ ಯಾವ ಮಾರವಾಡಿ ಬಡ ರೈತರನ್ನು ಮತ್ತು ಕೂಲಿಕಾರ್ಮಿಕರನ್ನು ಲೂಟಿ ಮಾಡಿ ಅದರ ಮೇಲೆಯೇ ಶ್ರೀಮಂತನಾಗುತ್ತಾನೆಯೋ ಆತ ನಾಲ್ಕಾಣೆ ಕೊಟ್ಟು ಕಾಂಗ್ರೆಸ್‌ನ ಸದಸ್ಯನಾಗಿ ತನ್ನ ಸ್ವಭಾವವನ್ನು ಒಮ್ಮೆಲೆ ಬದಲಿಸಿ ಬದುಕಲು ಸಾಧ್ಯವೆಂಬ ಮಾತೇ ಹಾಸ್ಯಾಸ್ಪದವಾಗಿದೆ.

ಇಂದು ಹರಿಪುರದಲ್ಲಿ ಕಾಂಗ್ರೆಸ್‌ನ 51ನೇ ಅಧಿವೇಶನ ನಡೆಯಲಿದೆ. ಅದಕ್ಕಾಗಿ ಎಷ್ಟೋ ಲಕ್ಷ ಖರ್ಚಾಗುವುದಿದೆ ಎನ್ನುತ್ತಾರೆ. ಇಷ್ಟೊಂದು ವೆಚ್ಚವಾಗುವ ಹಣ ಎಲ್ಲಿಂದ ಬರುತ್ತದೆ? ಈ ಹಣವನ್ನು ಸಿರಿವಂತ ಶೇಠರು ನೀಡಿದ್ದಾರೆ. ಕಾಂಗ್ರೆಸ್‌ನ ಅಧಿವೇಶನಕ್ಕಾಗಿ ತಗಲುವ ವೆಚ್ಚದ ಲಕ್ಷಗಟ್ಟಲೆ ಹಣವನ್ನು ಶ್ರೀಮಂತ ಸಾಲಕ್ಕಾಗಿ ಈ ಹಿಂದೂಸ್ಥಾನವು ಇನ್ನೆಷ್ಟು ದಿನಗಳನ್ನು ಗುಲಾಮಗಿರಿಯಲ್ಲಿ ಕಳೆಯಬಹುದು? ಆದಕಾರಣ ಈ ಸಂಘರ್ಷವನ್ನು ಬಡವ, ರೈತ ಮತ್ತು ಕೂಲಿವರ್ಗಗಳು ಸಂಘಟನೆಗೊಂಡೇ ಹೋರಾಡಬೇಕು. ಸ್ವತಂತ್ರ ಮಜೂರ ಪಕ್ಷದ ಅಧ್ಯಕ್ಷನಾಗಿದ್ದರೂ ನನಗದರ ಮೋಹವಿಲ್ಲ. ಬೇರೆ ಯಾರಾದರೂ ಆ ಸ್ಥಾನವನ್ನು ಅಲಂಕರಿಸುವವರಿದ್ದರೆ ನನಗೆ ಅದು ಸಂತೋಷ ತರುವ ಸಂಗತಿಯೇ ಸರಿ. ಈ ರಾಜಕಾರಣದಿಂದ ನನಗೆ ಅಂಥ ಲಾಭವೇನು? ನಾನಿದರಿಂದ ಒಂದು ವೇಳೆ ದೂರವಿದ್ದಿದ್ದರೆ, ಕೆಲವು ಲಕ್ಷಗಳ ಧನಿಯಾಗಿರುತ್ತಿದ್ದೆ. ಇಂಗಿಗೆ ಹೇಗೆ ಪರಿಮಳವಿದೆಯೋ ಹಾಗೆ ನಮಗೆ ಅಸ್ಪಶ್ಯತೆಯಿಂದ ಹತ್ತಿಕೊಂಡಿದೆ. ಆದ್ದರಿಂದ ಅಸ್ಪಶ್ಯೇತರರು ಒಂದು ವೇಳೆ ಇದರಿಂದ ಬೆದರಿ ಸ್ವತಂತ್ರ ಮಜೂರ ಪಕ್ಷದಿಂದ ದೂರವಿರಲು ಇಚ್ಛಿಸಿದ್ದಲ್ಲಿ ಅದು ಅವರ ಆಲೋಚನೆಯಷ್ಟೇ. ಆದರೆ ನಮ್ಮಿಳಗಿನ ಪ್ರತಿಯೊಂದು ವಯಸ್ಸಿಗೆ ಬಂದ ಸ್ತ್ರೀ- ಪುರುಷರು ವರ್ಷದ ಕೊನೆಗೆ ಸ್ವತಂತ್ರ ಮಜೂರ ಪಕ್ಷದ ಸದಸ್ಯರಾಗಲು ನಾಲ್ಕಾಣೆ ತುಂಬಿರಿ, ಸದಸ್ಯರಾಗಿರಿ. ಪಕ್ಷದ ಬಲವನ್ನು ವೃದ್ಧಿಸಿರಿ. ಇಷ್ಟು ಹೇಳಿ ನಿಮ್ಮಿಂದ ಬೀಳ್ಕೊಡುತ್ತೇನೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)