ಟೆಲಿಗ್ರಾಫ್‌ನಿಂದ ಬಯಲಾದ ಮೋದಿಯ ಸುಳ್ಳು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ನೀಡಿದ ಉತ್ತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಸಿಎಎ-ಎನ್‌ಆರ್‌ಸಿಯನ್ನು ಸಮರ್ಥಿಸುತ್ತಾ ಈ ನಿರ್ಧಾರಕ್ಕೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಹಮತ ಕೂಡಾ ಇತ್ತು ಎಂದು ಮೂರು ಸಂಗತಿಗಳನ್ನು ಉಲ್ಲೇಖಿಸಿದ್ದರು. ಆ ಮೂರೂ ಸಂಗತಿಗಳು ಸುಳ್ಳುಗಳಾಗಿವೆ.
ಸುಳ್ಳು-1
ಅಂತಹ ಮಹಾನ್ ಜಾತ್ಯತೀತ ನೆಹರೂ, ಅಂತಹ ಮಹಾನ್ ಬುದ್ಧಿಜೀವಿ, ಅಂತಹ ಮಹಾನ್ ಚಿಂತಕ, ಅಂತಹ ಮಹಾನ್ ದೃಷ್ಟಾರ ಹೀಗೆ ನಿಮಗೆ ಎಲ್ಲವೂ ಆಗಿರುವ ನೆಹರೂ 1950ರಲ್ಲಿ ಪಾಕಿಸ್ತಾನದ ಪ್ರಧಾನಿ ಲಿಯಾಖತ್ ಅಲಿ ಖಾನ್ ಅವರ ಜೊತೆಗಿನ ಒಪ್ಪಂದದಲ್ಲಿ ‘ಎಲ್ಲ ಪ್ರಜೆಗಳು’ ಎನ್ನುವ ಬದಲಿಗೆ ‘ಅಲ್ಪಸಂಖ್ಯಾತರು’ ಎಂದು ಯಾಕೆ ಹೇಳಿದ್ದರು? ಅದಕ್ಕೆ ಏನಾದರೂ ಕಾರಣ ಇರಬೇಕಲ್ಲಾ? ಎಂದು ಮೋದಿ ಕಾಂಗ್ರೆಸ್ ಪಕ್ಷದವರನ್ನು ಅಣಕಿಸಿದ್ದರು.
ಸತ್ಯ-1
ನೆಹರೂ-ಲಿಯಾಖತ್ ಅಲಿ ಖಾನ್ ಒಪ್ಪಂದದ ಮೊದಲ ಸಾಲುಗಳು ಹೀಗಿವೆ ‘‘? ಭಾರತ ಮತ್ತು ಪಾಕಿಸ್ತಾನ ಸರಕಾರಗಳು ತಮ್ಮ ದೇಶದ ಗಡಿಯೊಳಗಿನ ಎಲ್ಲ ಅಲ್ಪಸಂಖ್ಯಾತರಿಗೆ, ಧರ್ಮಾತೀತವಾಗಿ ಸಂಪೂರ್ಣ ಸಮಾನತೆಯ ಪೌರತ್ವ ನೀಡಬೇಕು, ಅವರಿಗೆ ಪ್ರಾಣ, ಸಂಸ್ಕೃತಿ, ಆಸ್ತಿ, ಉದ್ಯೋಗ, ಅಭಿವ್ಯಕ್ತಿ, ಆರಾಧನೆ, ವೈಯಕ್ತಿಕ ಗೌರವ ಮತ್ತು ದೇಶದೊಳಗೆ ಸಂಚಾರ ಮಾಡುವ ಸ್ವಾತಂತ್ರ, ನೆಲದ ಕಾನೂನು ಮತ್ತು ನೈತಿಕತೆಗೆ ಒಳಪಟ್ಟು ಇರುವಂತೆ ನೋಡಿಕೊಳ್ಳಬೇಕು?’’
ಆದರೆ ಮೋದಿ ಅವರು ಉದ್ದೇಶಪೂರ್ವಕವಾಗಿ ‘‘ಧರ್ಮಾತೀತವಾಗಿ ಅಲ್ಪಸಂಖ್ಯಾತರಿಗೆ’’ ಎನ್ನುವುದನ್ನು ತಿರುಚಿ ‘‘ಅಲ್ಪಸಂಖ್ಯಾತರು’’ ಎಂದಷ್ಟೇ ಲೋಕಸಭೆಯ ಭಾಷಣದಲ್ಲಿ ಹೇಳಿದ್ದರು.
*************
ಸುಳ್ಳು-2
‘‘ನೀವು ಹಿಂದೂ ಮತ್ತು ಮುಸ್ಲಿಮ್ ನಿರಾಶ್ರಿತರನ್ನು ಭಿನ್ನವಾಗಿ ನೋಡಬೇಕು. ನೀವು ನಿರಾಶ್ರಿತರ ಪುನರ್ವಸತಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು’’ ಎಂದು ನೆಹರೂ-ಲಿಯಾಖತ್ ಒಪ್ಪಂದಕ್ಕೆ ಮೊದಲು ನೆಹರೂ ಅವರು ಆಗಿನ ಅಸ್ಸಾಂ ಮುಖ್ಯಮಂತ್ರಿ ಗೋಪಿನಾಥ್ ಬಾರ್ದೊಲಿ ಅವರಿಗೆ ಬರೆದಿದ್ದ ಪತ್ರವನ್ನು ಭಾಷಣದಲ್ಲಿ ಮೋದಿಯವರು ಉಲ್ಲೇಖಿಸಿದ್ದರು.
ಸತ್ಯ-2
ಅದು ಅಸ್ಸಾಮಿನ ನಾಯಕರೊಬ್ಬರು ಪೂರ್ವ ಪಾಕಿಸ್ತಾನದಿಂದ ಬರುತ್ತಿರುವ ನಿರಾಶ್ರಿತರ ಬಗ್ಗೆ ಕಳವಳ ವ್ಯಕ್ತಪಡಿಸಿ ಬರೆದ ಪತ್ರಕ್ಕೆ ನೆಹರೂ ನೀಡಿದ್ದ ಉತ್ತರವಾಗಿತ್ತು.
*************
ಸುಳ್ಳು-3
‘‘ಬೇರೆ ದೇಶಗಳಿಂದ ಬಾಧಿತ ವ್ಯಕ್ತಿಗಳು ಭಾರತದಲ್ಲಿ ನೆಲೆಸಲು ಬಂದರೆ ಅವರು ಖಂಡಿತ ಪೌರತ್ವಕ್ಕೆ ಅರ್ಹರಾಗಿರುತ್ತಾರೆ. ಇದಕ್ಕೆ ಸರಿಯಾದ ಕಾನೂನು ಇಲ್ಲದೆ ಇದ್ದಲ್ಲಿ ಅದನ್ನು ಬದಲಾಯಿಸಬೇಕಾಗುತ್ತದೆ’’ ಎಂದು ನೆಹರೂ ಲೋಕಸಭೆಯಲ್ಲಿ ಹೇಳಿದ್ದನ್ನು ಉಲ್ಲೇಖಿಸಿದ ಮೋದಿ ‘‘ಹಾಗಿದ್ದರೆ ನೆಹರೂ ಅವರು ಕೋಮುವಾದಿಯೇ? ಭಾರತವನ್ನು ಹಿಂದೂ ರಾಷ್ಟ್ರ ಆಗುವುದು ಅವರ ಬಯಕೆಯಾಗಿತ್ತೇ’’ ಎಂದು ಕಾಂಗ್ರೆಸಿಗರನ್ನು ಚುಚ್ಚಿದರು.
ಸತ್ಯ-3
ಸಿಎಎಯನ್ನು ವಿರೋಧಿಸುತ್ತಿರುವವರು ಕೂಡಾ ಬೇರೆ ದೇಶಗಳಿಂದ ಬರುವ(ಅಸ್ಸಾಂ ರಾಜ್ಯದ ಹೊರತಾಗಿ) ಬಾಧಿತ ವ್ಯಕ್ತಿಗಳಿಗೆ ಪೌರತ್ವ ನೀಡುವುದನ್ನು ವಿರೋಧಿಸುತ್ತಿಲ್ಲ. ಈ ರೀತಿ ಪೌರತ್ವವನ್ನು ನೀಡುವಾಗ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಬೇಡಿ ಎಂದಷ್ಟೇ ಅವರ ಬೇಡಿಕೆಯಾಗಿದೆ.
(ಆಧಾರ: ಟೆಲಿಗ್ರಾಫ್)