ಮಾಧ್ವ ಪರಂಪರೆಯಲ್ಲಿ ಹೊಸ ಪರಿಭಾಷೆ
ಇಷ್ಟರವರೆಗೆ ತತ್ವಜ್ಞಾನಿಗಳು ಪ್ರಪಂಚವನ್ನು ವ್ಯಾಖ್ಯಾನಿಸಿದ್ದಾರೆ; ಆದರೆ ನಮ್ಮ ಕೆಲಸ ಅದನ್ನು ಬದಲಾಯಿಸುವುದು ಎಂಬ ಮಾರ್ಕ್ಸ್‌ನ ಮಾರ್ಮಿಕ ಮಾತು ಯಥಾಸ್ಥಿತಿವಾದಕ್ಕೆ ಮಣೆಹಾಕುವ ಒಂದು ಪರಂಪರೆಯಲ್ಲಿ ಮಾರ್ದನಿಗೊಂಡಿದೆ. ಇದು ಭವಿಷ್ಯದಲ್ಲಿ ನಮ್ಮ ಧಾರ್ಮಿಕ ವಲಯಕ್ಕೆ ಬದಲಾವಣೆಯ ಗಾಳಿ ಬೀಸುವ ನಿಟ್ಟಿನಲ್ಲಿ ಅತ್ಯಂತ ಭರವಸೆಯ ಸಂಗತಿ ಅನ್ನಿಸುತ್ತದೆ.
ಭಗವದ್ಗೀತೆ, ಮನುಸ್ಮತಿ ಯಂತಹ ಪ್ರಾಚೀನ ಪಠ್ಯಗಳನ್ನು, ಶಾಸ್ತ್ರಗ್ರಂಥಗಳನ್ನು, ಲೋಕಾಯುತ ಸಿದ್ಧಾಂತಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಸ್ಥೂಲವಾಗಿ ಎರಡು ಪ್ರಧಾನ ವಿಚಾರಧಾರೆಗಳು ಕಾಣಿಸುತ್ತವೆ:
1) ನಮ್ಮ ಎದುರು ಇರುವ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಈಗ ಇರುವ ಹಾಗೆ ಇರಲಿ; ಇದು ಬದಲಾಗುವುದು ಬೇಡ, ನಾವು ಯಾವುದೇ ಬದಲಾವಣೆ ತರುವ ಕೆಲಸಕ್ಕೆ ಕೈಹಾಕುವುದು ಬೇಡ, ಈಗ ಏನು ಪರಿಸ್ಥಿತಿ ಇದೆಯೋ ಅದನ್ನು ಹಾಗೆಯೇ ಉಳಿಸಿಕೊಂಡು ನಮ್ಮ ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಹೋಗೋಣ ಎಂಬ ಯಥಾಸ್ಥಿತಿವಾದ. ಭಗವದ್ಗೀತೆ ಹೇಳುವ ‘‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ’’ ಎಂಬ ಮಾತನ್ನು ಇದಕ್ಕೆ ಒಂದು ಉದಾಹರಣೆಯಾಗಿ ನೀಡಬಹುದು. ನಾಲ್ಕು ವರ್ಣಗಳು ಗುಣ ಮತ್ತು ಕರ್ಮಗಳ ಆಧಾರದಲ್ಲಿ ಸ್ವತಃ ದೇವರಿಂದಲೇ ಸೃಷ್ಟಿಸಲ್ಪಟ್ಟವುಗಳಾಗಿವೆ; ಆಯಾ ವರ್ಣಕ್ಕೆ ಅವುಗಳ ಸತ್ವ, ರಜಸ್ ಮತ್ತು ತಮಸ್ ಎಂಬ ಮೂರು ಗುಣಗಳ ಸ್ವಭಾವಕ್ಕೆ ತಕ್ಕಂತೆ ನಿಗದಿಯಾಗಿರುವ ಕೆಲಸವನ್ನೇ ಅವು ಫಲಾಪೇಕ್ಷೆ ಇಲ್ಲದೆ ಮಾಡುತ್ತಲೇ ಇರಬೇಕು. ತಮ್ಮ ಸ್ಥಿತಿಯ ಬದಲಾವಣೆಗೆ ಹಾತೊರೆಯಬಾರದು ಎಂಬ ಧ್ವನಿ ಗೀತೆಯ ಈ ಸಾಲಿನಲ್ಲಿ ಸೂಚ್ಯವಾಗಿಯೇ ಪ್ರಬಲವಾಗಿ ವ್ಯಕ್ತವಾಗಿದೆ. ಈ ಮಾತಿಗೆ ಸಂಪೂರ್ಣ ಬದ್ಧವಾಗಿ ಉಳಿದಿದ್ದರೆ ಧಾರ್ಮಿಕ ನೇತಾರ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಅರ್ಧ ಶತಮಾನದ ಹಿಂದೆ ದಲಿತರ ಕೇರಿಗೆ ಭೇಟಿ ನೀಡಿ ಅಂದಿನ ಸಂಪ್ರದಾಯಶರಣ ವೈದಿಕ ಸಮಾಜದಲ್ಲಿ ಸಂಚಲನ ಮೂಡಿಸಿ ಸಾಮಾಜಿಕ ಬದಲಾವಣೆಯ ಸರಪಳಿ ಕ್ರಿಯೆಗೆ ಯತಿ ಪರಂಪರೆಯ ಕಿರು ಕಾಣಿಕೆ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ.
2) ಈಗ ಇರುವುದೆಲ್ಲವೂ ಸರಿ ಇಲ್ಲ; ಇದರಲ್ಲಿ ಬದಲಾವಣೆಯಾಗಬೇಕು ಎಂಬುದು ಪುರೋಗಾಮಿವಾದ, ಪ್ರಗತಿಗಾಮಿ ಸಿದ್ಧಾಂತ. ವಿಶ್ವದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ಗಮನಿಸಿದರೆ ಸಮಾಜದ ವಿಕಾಸದ ಉದ್ದಕ್ಕೂ ಈ ಎರಡು ನಿಲುವುಗಳ ಅಥವಾ ವಾದಗಳ ನಡುವೆ ವಿವಿಧ ಕಾಲಘಟ್ಟದಲ್ಲಿ ಆಗಾಗ ವಾಗ್ವಾದ, ಸ್ವಲ್ಪಮಟ್ಟಿನ ಪ್ರತಿರೋಧ, ಸಂಘರ್ಷ ನಡೆದದ್ದು ಕಾಣಿಸುತ್ತದೆ. ಇದು ತೀವ್ರಗೊಂಡು ತಾರಕಕ್ಕೇರಿದಾಗ ಅಸ್ತಿತ್ವದಲ್ಲಿದ್ದ ಪ್ರಭುತ್ವವನ್ನು, ಯಜಮಾನಿಕೆಯನ್ನು ಅಧಿಕಾರದಿಂದ ಕೆಳಗಿಳಿಸಿದ ಫ್ರಾನ್ಸ್‌ನ ಮಹಾಕ್ರಾಂತಿಯಂತಹ ಅಥವಾ ಪ್ರೊಟೆಸ್ಟೆಂಟಿಸಂನಂತಹ ಬದಲಾವಣೆಗಳು ಕಾಣಿಸಿಕೊಂಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ಭಾರತದ ಧಾರ್ಮಿಕ, ತತ್ವಶಾಸ್ತ್ರೀಯ ಪರಂಪರೆಯಲ್ಲೂ ಇಂತಹ ಬದಲಾವಣೆಗಳನ್ನು ನಾವು ಗಮನಿಸಬಹುದು. ಕರ್ನಾಟಕದಲ್ಲಿ ಬಂದ ದಾಸ ಪರಂಪರೆ, ವಚನ ಚಳವಳಿ ಕೂಡ ಸಮಾಜದ ಅಂಕುಡೊಂಕನ್ನು, ಅಸಮಾನತೆಯನ್ನು ಎತ್ತಿ ತೋರಿಸುವ ಮತ್ತು ಆ ಮೂಲಕ ಸಾಮಾಜಿಕ ಬದಲಾವಣೆಗೆ ಜನರನ್ನು ಸಜ್ಜುಗೊಳಿಸುವ ಪ್ರಯತ್ನಗಳೇ ಆಗಿದ್ದವು.
ಈ ಎಲ್ಲ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದ ಧಾರ್ಮಿಕ ಇತಿಹಾಸದಲ್ಲಿ ಕಾಣಿಸಿಕೊಂಡ ದ್ವೈತ, ಅದ್ವೈತ ಹಾಗೂ ವಿಶಿಷ್ಟಾದ್ವೈತ ಪಂಥಗಳಲ್ಲಿ ದ್ವೈತ ಶಾಸ್ತ್ರದ ಪ್ರತಿಪಾದಕ ಶ್ರೀ ಮಧ್ವಾಚಾರ್ಯರ ಎಂಟು ನೂರು ವರ್ಷಗಳ ಪರಂಪರೆಯಲ್ಲಿ ಸಾಮಾಜಿಕ ಆರ್ಥಿಕ ಬದಲಾವಣೆಯ ನಿಟ್ಟಿನಲ್ಲಿ ವ್ಯಕ್ತವಾದ ಒಂದು ಹೊಸ ಚಿಂತನೆ, ಹೊಸ ಯೋಚನಾ ವಿಧಾನ ಗಮನಾರ್ಹ ಅನ್ನಿಸುತ್ತದೆ.
ಈ ಶೈಕ್ಷಣಿಕ ವರ್ಷದ ಆದಿಯಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ತ್ನಾತಕೋತ್ತರ ಕೇಂದ್ರ ಹಾಗೂ ಮಂಗಳೂರು ವಿವಿ ಅರ್ಥಶಾಸ್ತ್ರ ಸಂಘದ ವತಿಯಿಂದ ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಕತ್ವ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಜ್ಞಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ. ಎನ್.ಕೆ. ತಿಂಗಳಾಯ ಸ್ಮಾರಕ ‘ಗ್ರಾಮೀಣ ಬಡವರಿಗಾಗಿ ಬ್ಯಾಂಕಿಂಗ್’ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅದಮಾರು ಮಠ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಹಾಗೂ ಹೊಸ ತಲೆಮಾರಿನ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ನುಡಿದ ಮನನೀಯ ಮಾತುಗಳು ಹೀಗಿವೆ:
ಆರ್ಥಿಕತೆಯ ಅಸಮರ್ಪಕ ವಿಭಜನೆಯಿಂದ ಇಂದು ಸಂಪತ್ತು ಕೇವಲ ವ್ಯಕ್ತಿಗಳ ಪಾಲಾಗುತ್ತದೆ. ಇದರಿಂದ ಸಮಾಜದಲ್ಲಿ ಅಸಮತೋಲನ, ಆರ್ಥಿಕ ಏರುಪೇರು ಉಂಟಾಗುತ್ತಿದೆ. ಸ್ವಾರ್ಥ ಮನೋಭಾವನೆಯಿಂದ ಇಂದು ಸಂಪತ್ತನ್ನು ಒಂದೇ ಕಡೆ ಸಂಗ್ರಹಿಸುವ ಪರಿಪಾಠ ನಡೆಯುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಗಳಿಕೆಯನ್ನು ಸಮ ಪ್ರಮಾಣದಲ್ಲಿ ವಿಂಗಡಿಸುವ ಅವಶ್ಯಕತೆ ಇದೆ. ಪ್ರತಿಯೊಬ್ಬರೂ ತನ್ನ ಆದಾಯವನ್ನು ಶೇ. 20ರಷ್ಟು ದಾನ, ಧರ್ಮ, ಶೇ. 20ರಷ್ಟು ಗಳಿಕೆಯ ವೃದ್ಧಿ, ಶೇ. 20ರಷ್ಟು ಯಶಸ್ಸಿಗೆ, ಶೇ. 20ರಷ್ಟು ತನ್ನ ಇಚ್ಛೆಗೆ, ಶೇ.20 ತನ್ನ ಏಳಿಗೆಗೆ ಸಹಾಯ ಮಾಡಿದವರಿಗೆ ಹಂಚಬೇಕು.
ಇದು ಕಳೆದ ಎಂಟನೂರು ವರ್ಷಗಳ ಮಾಧ್ವ ಪರಂಪರೆಯಲ್ಲಿ ಪ್ರಾಯಶಃ ಮೊದಲ ಬಾರಿಗೆ ಕೇಳಿಬಂದ ಹೊಸ ಪರಿಭಾಷೆ, ಸಾಮಾಜಿಕ-ಆರ್ಥಿಕ ಬದಲಾವಣೆಯ ನಿಟ್ಟಿನಲ್ಲಿ ಅಷ್ಟಮಠಗಳು ವಹಿಸಬಹುದಾದ ಹೊಸ ಪಾತ್ರದ ಮೊದಲ ಅಭಿವ್ಯಕ್ತಿ. ಇಷ್ಟು ಶತಮಾನಗಳ ಕಾಲ ಶಾಸ್ತ್ರಗಳ ವೈದಿಕ ಸಂಸ್ಕೃತಿಯ ಉಳಿವು ಮತ್ತು ವರ್ಣವಿಭಜನೆಯ ಬಗ್ಗೆ ಮಾತಾಡುತ್ತ ಬಂದಿರುವ ಒಂದು ಯತಿ ಪರಂಪರೆಯಲ್ಲಿ ‘‘ಆರ್ಥಿಕ ಅಸಮರ್ಪಕ ವಿಭಜನೆ’’ ಮತ್ತು ‘‘ಸಂಪತ್ತಿನ ಸಮಾನ ಹಂಚಿಕೆ’’ಯ ಬಗ್ಗೆ ಆಧುನಿಕ ಪ್ರಜ್ಞೆಯ ಓರ್ವ ಯುವ ಯತಿ ಮಾತಾಡಿರುವುದು ಆರ್ಥಿಕ ಅಸಮಾನತೆಯಿಂದ ಜರ್ಜರಿತವಾಗಿರುವ ಸಮಾಜದ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಮಹತ್ಕಾರ್ಯಕ್ಕೆ ಸಮಾನವಾಗಿದೆ. ಸಾಮಾಜಿಕ ಅಸಮಾನತೆಯ ಕುರಿತು ಈ ದೇಶದಲ್ಲಿ ಹಲವಾರು ಸಮಾಜ ಸುಧಾರಕರು, ಸುಧಾರಣಾವಾದಿಗಳು ಮಾತಾಡಿದ್ದಾರಾದರೂ ಆರ್ಥಿಕ ಅಸಮಾನತೆಯ ಬಗ್ಗೆ ಧ್ವನಿ ಎತ್ತಿದವರು ಬಹಳ ವಿರಳ. ವಿಶ್ವಾದ್ಯಂತ ಹಲವು ದೇಶಗಳಲ್ಲಿ ಸಾಮಾಜಿಕ, ಆರ್ಥಿಕ ಬದಲಾವಣೆಗೆ ಕಾರಣನಾದ ಸಮತಾವಾದದ ಪ್ರತಿಪಾದಕ ಕಾರ್ಲ್ ಮಾರ್ಕ್ಸ್‌ನ ಪರಿಭಾಷೆ ಇದು. ಇಷ್ಟರವರೆಗೆ ತತ್ವಜ್ಞಾನಿಗಳು ಪ್ರಪಂಚವನ್ನು ವ್ಯಾಖ್ಯಾನಿಸಿದ್ದಾರೆ; ಆದರೆ ನಮ್ಮ ಕೆಲಸ ಅದನ್ನು ಬದಲಾಯಿಸುವುದು ಎಂಬ ಮಾರ್ಕ್ಸ್‌ನ ಮಾರ್ಮಿಕ ಮಾತು ಯಥಾಸ್ಥಿತಿವಾದಕ್ಕೆ ಮಣೆಹಾಕುವ ಒಂದು ಪರಂಪರೆಯಲ್ಲಿ ಮಾರ್ದನಿಗೊಂಡಿದೆ. ಇದು ಭವಿಷ್ಯದಲ್ಲಿ ನಮ್ಮ ಧಾರ್ಮಿಕ ವಲಯಕ್ಕೆ ಬದಲಾವಣೆಯ ಗಾಳಿ ಬೀಸುವ ನಿಟ್ಟಿನಲ್ಲಿ ಅತ್ಯಂತ ಭರವಸೆಯ ಸಂಗತಿ ಅನ್ನಿಸುತ್ತದೆ.
ಅಲ್ಲದೆ ‘‘ಸ್ವಾರ್ಥಮನೋಭಾವನೆಯಿಂದ ಇಂದು ಸಂಪತ್ತು ಒಂದೇ ಕಡೆ ಸಂಗ್ರಹಿಸುವ ಪರಿಪಾಠ ನಡೆಯುತ್ತಿದೆ’’ ಎಂಬ ಮಾತಿಗೆ ದೇಶದ ಸಮಕಾಲೀನ ರಾಜಕಾರಣದಲ್ಲಿ ಬಹಳಷ್ಟು ಅರ್ಥ ಸಾಧ್ಯತೆಗಳಿವೆ. ದೇಶದ ಬಹುಪಾಲು ಸಂಪತ್ತು ಬೆರಳೆಣಿಕೆಯಷ್ಟು ಕುಟುಂಬಗಳ ಕೈಗಳಲ್ಲಿ ಕೇಂದ್ರಿತವಾಗಿ ನಮ್ಮ ಕೋಟಿಗಟ್ಟಲೆ ಯುವಕ, ಯುವತಿಯರು ನಿರುದ್ಯೋಗಿಗಳಾಗಿ ಇರುವಾಗ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರ ಆರ್ಥಿಕ-ಔದ್ಯೋಗಿಕ ಕಳಕಳಿ, ಭಾವೋನ್ಮಾದಕ ಮಾತುಗಳನ್ನು ಆಡುವ ಎಲ್ಲಾ ಧಾರ್ಮಿಕ ನಾಯಕರ ಕಳಕಳಿಯಾದಲ್ಲಿ ಈ ದೇಶದ ಸಾಮಾಜಿಕ ಆರ್ಥಿಕ ಚಿತ್ರಣವೇ ಬದಲಾಗಬಲ್ಲದು.
(bhaskarrao599@gmail.com)