ಇದ್ಯಾಕೆ ಹೀಗಾಗುತ್ತಿದೆ?
ಪರಿಚಯದ ಕೆಲವು ವಿದ್ಯಾರ್ಥಿಗಳು ನಿನ್ನೆ ಸಂಜೆ ಮನೆಗೆ ಬಂದಿದ್ದರು. ಅವರೆಲ್ಲ ಒಕ್ಕೊರಲಿನಿಂದ ‘‘ಅಂಕಲ್, ಇದ್ಯಾಕೆ ಹೀಗಾಗುತ್ತಿದೆ?’’ ಎಂದು ಅಲವತ್ತುಕೊಂಡರು. ‘‘ಯಾಕೆ, ಏನಾಯ್ತು, ಏನು ವಿಷಯ?’’ ನಾನು ಕೇಳಿದೆ. ‘‘ಅಂಕಲ್ ಇವತ್ತಿನ ಸುದ್ದಿ ಓದಿದಿರಾ? ಸಕಲೇಶಪುರ ತಾಲೂಕಿನಲ್ಲಿ ಸವರ್ಣೀಯರು ಒಬ್ಬ ದಲಿತನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದರಂತೆ. ಅಲ್ಲ, ‘ನಾವು ಹಿಂದೂ ನಾವೆಲ್ಲ ಒಂದು’ ಅಂತ ಲೋಕಕ್ಕೆಲ್ಲಾ ಸಾರುವವರು ಅವರ ಪ್ರಕಾರ ಹಿಂದೂಗಳೇ ಆದ ದಲಿತರನ್ನು ಯಾಕೆ ಇಷ್ಟೊಂದು ಕೀಳಾಗಿ ಕಾಣುತ್ತಾರೆ? ಯಾಕೆ ಅವರ ಮೇಲೆ ಬೀಭತ್ಸಕರ ದೌರ್ಜನ್ಯಗಳನ್ನು ಮತ್ತೆಮತ್ತೆ ನಡೆಸುತ್ತಲೇ ಇದ್ದಾರೆ? ಯಾಕೆ ಪದೇಪದೇ ಡಾ. ಅಂಬೇಡ್ಕರರ ಪ್ರತಿಕೃತಿಗಳನ್ನು ಅವಮಾನಿಸುತ್ತಿರುತ್ತಾರೆ? ‘ವಸುದೈವ ಕುಟುಂಬಕಂ’ ಎಂಬ ಮಂತ್ರವನ್ನು ಪಠಿಸುವವರು ಅದ್ಯಾಕೆ ಇದೇ ದೇಶದ ಪ್ರಜೆಗಳಾದ ಅಲ್ಪಸಂಖ್ಯಾತರ ಮೇಲೆ ದ್ವೇಷ ಕಾರುತ್ತಾ ಹೊಡಿ, ಬಡಿ, ಕಡಿಯುವ ಕೆಲಸ ಮಾಡುತ್ತಿದ್ದಾರೆ? ಎಲ್ಲವೂ ಸ್ವದೇಶಿ ಆಗಬೇಕು, ಎಲ್ಲರೂ ಹಿಂದಿಯಲ್ಲೇ ವ್ಯವಹರಿಸಬೇಕೆಂದು ಹುಯಿಲೆಬ್ಬಿಸುವ ಇವರು ಅದು ಹೇಗೆ ವಿದೇಶಿ ವಸ್ತುಗಳನ್ನು ಇಷ್ಟಪಡುತ್ತಾರೆ? ಯಾಕೆ ತಮ್ಮ ಮಕ್ಕಳನ್ನು ‘ಕಿರಿಸ್ತಾನರ’ ಇಟಾಲಿಯನ್, ಇಂಗ್ಲಿಷ್ ಮತ್ತಿತರ ವಿದೇಶಿ ಭಾಷೆಗಳ ಶಬ್ದಗಳಿಂದ ತುಂಬಿತುಳುಕುವ ಡಾಕ್ಟರಿಕೆ, ಇಂಜಿನಿಯರಿಂಗ್, ಕಂಪ್ಯೂಟರ್ ಸಯನ್ಸ್ ಇತ್ಯಾದಿಗಳನ್ನು ಕಲಿಯಲು ಕಳುಹಿಸುತ್ತಾರೆ? ಸಂವಿಧಾನದ ಮೇಲೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸುವ ರಾಜಕಾರಣಿಗಳೇ ಅದನ್ನು ಎಗ್ಗಿಲ್ಲದೆ ಉಲ್ಲಂಘಿಸುತ್ತಿರುವುದೇಕೆ? ಗಾಂಧಿ, ನೆಹರೂ ಮೊದಲಾದವರು ದೇಶದ ಸ್ವಾತಂತ್ರ್ಯಕ್ಕಾಗಿ ಯಾವುದೇ ಹೋರಾಟ ಮಾಡಲಿಲ್ಲವೆಂದು ಅದ್ಯಾಕೆ ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆೆ? ಸರಕಾರದ ವಿರುದ್ಧ ಪ್ರತಿಭಟನೆ ಮಾಡುವವರನ್ನು ಯಾಕೆ ದೇಶದ್ರೋಹಿಗಳೆಂದು ಕರೆಯುತ್ತಿದ್ದಾರೆೆ? ಆಮೇಲೆ ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂದು ಯಾಕೆ ಹೇಳಿಸುತ್ತಾರೆ? ಗುಂಪು ಹತ್ಯೆ, ಅಲಿಗಡ ವಿಶ್ವವಿದ್ಯಾನಿಲಯ, ಶಾಹೀನ್‌ಬಾಗ್ ಮುಂತಾದ ಘಟನೆಗಳಲ್ಲಿ ಕಾನೂನುಪಾಲಕ ಪೊಲೀಸರೇ ಕಾನೂನುಭಂಜಕರಾಗುತ್ತಿದ್ದಾರೆ ಯಾಕೆ? ಬೀದರ್ ಶಾಲೆಯಲ್ಲಿ ದೇಶವಿರೋಧಿ ನಾಟಕ ಮಾಡಿದರೆಂದು ನಿಮಿಷಾರ್ಧದಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಿ ಚಿಕ್ಕ ಚಿಕ್ಕ ಮಕ್ಕಳನ್ನು ದಿನಗಟ್ಟಲೆ ವಿಚಾರಣೆ ಮಾಡುವ ಪೊಲೀಸರು ಬಾಬರಿ ಮಸೀದಿ ಉರುಳಿಸಿದ ಕಾನೂನುಬಾಹಿರ ಕೃತ್ಯದ ದೃಶ್ಯನಾಟಕವನ್ನು ವಿಐಪಿ ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಮಕ್ಕಳಿಂದ ಆಡಿಸಿದವರ ಮೇಲೆ ಯಾಕೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ? ಇಂತಹ ಪೊಲೀಸರನ್ನು ಕಾನೂನುಪಾಲಕರೆಂದು ಕರೆಯುವುದಾದರೂ ಹೇಗೆ? ಬೇಲಿ ಇರುವುದು ಹೊಲವನ್ನು ಕಾಯುವುದಕ್ಕಾ ಅಥವಾ ಮೇಯುವುದಕ್ಕಾ?’’ ಅಂತ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸುರಿಸಿದರು.
ಮಕ್ಕಳ ಈ ಕಳಕಳಿಯ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸಲಿ; ದಲಿತರು, ಅಲ್ಪಸಂಖ್ಯಾತರ ಮೇಲಿನ ದ್ವೇಷಕ್ಕೆ ಜಾತಿ, ಧರ್ಮ, ಜನಾಂಗ ಶ್ರೇಷ್ಠತೆಯ ವ್ಯಸನಗಳೇ ಕಾರಣವೆಂದು ಹೇಗೆ ವಿವರಿಸಲಿ; 19ನೇ ಶತಮಾನದಲ್ಲಿ ಇಟಲಿ, ಜರ್ಮನಿಗಳಲ್ಲಿ ಫ್ಯಾಶಿಸ್ಟರು ಮತ್ತು ನಾಝಿಗಳ ಸರ್ವಾಧಿಕಾರಿ ಆಳ್ವಿಕೆಯಲ್ಲಿ ನಡೆದಂತಹ ಘಟನೆಗಳೇ ಭಾರತದಲ್ಲಿ ಇಂದು ಪುನರಾವರ್ತನೆಯಾಗುತ್ತಿವೆಯೆಂದು ಮಕ್ಕಳಿಗೆ ಹೇಗೆ ಅರ್ಥ ಮಾಡಿಕೊಡಲಿ ಎಂದು ಯೋಚಿಸುತ್ತಾ ಕೊನೆಗೆ ಹೇಳಿದೆ ‘‘ಮಕ್ಕಳೆ, ನಿಮ್ಮ ಪ್ರಶ್ನಿಸುವ ಮನೋಭಾವ ಕಂಡು ತುಂಬ ಸಂತೋಷವಾಯಿತು. ಅದನ್ನು ಮುಂದುವರಿಸಿ. ಇನ್ನು ನಿಮ್ಮ ಇವತ್ತಿನ ಪ್ರಶ್ನೆಗಳ ಬಗ್ಗೆ. ನೋಡಿ ಮಕ್ಕಳೆ, ತಮಗೆ ಬೇಲಿ ಕಾಯುವ ಜವಾಬ್ದಾರಿಯನ್ನು ವಹಿಸಿರುವ ಪ್ರಜೆಗಳೇ ತೆರಿಗೆ ರೂಪದಲ್ಲಿ ತಮಗೆ ಸಂಬಳ ಕೊಡುವವರು ಎಂಬ ವಾಸ್ತವವನ್ನು ಇವರೆಲ್ಲರೂ ಮರೆತುಬಿಟ್ಟಿದ್ದಾರೆ. ಜಗತ್ತಿನ ಹಿರಿಯ ಚಿಂತಕರು ಇಂತಹದಕ್ಕೆಲ್ಲಾ ಆಸ್ಪದ ಕೊಡುವ ಸರಕಾರಗಳನ್ನು ನಿರಂಕುಶ ಅಥವಾ ಸರ್ವಾಧಿಕಾರಿ ಸರಕಾರಗಳೆಂದು ಕರೆದಿದ್ದಾರೆ. ಇವೆಲ್ಲ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಿದ್ದರೆ ಪಠ್ಯಪುಸ್ತಕಗಳಿಂದ ಆಚೆಗೆ ನೋಡಬೇಕಾಗುತ್ತದೆ. ನೀವೀಗ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ. ನಿಷ್ಪಕ್ಷಪಾತೀಯ ಮಾಧ್ಯಮಗಳನ್ನು ಓದಿ. ಹೆಸರಾಂತ, ನಿಷ್ಪಕ್ಷಪಾತೀಯ ಇತಿಹಾಸಜ್ಞರು ಬರೆದಿರುವ ನೈಜ ಇತಿಹಾಸವನ್ನು ಓದಿ. ಸವರ್ಣೀಯರು ಅನುಸರಿಸುವ ಮನುಸ್ಮತಿ ಎಂಬ ಪುರಾತನ ಗ್ರಂಥದಲ್ಲಿ ಏನು ಹೇಳಲಾಗಿದೆಯೆಂದು ತಿಳಿಯಿರಿ. ಆದರೆ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಂತಹವುಗಳಲ್ಲಿ ಬರುವ ನಕಲಿ ಮಾಹಿತಿಗಳಿಂದ ದೂರವಿರಿ. ಜಾತಿ, ಧರ್ಮ, ಜನಾಂಗ, ಲಿಂಗ, ಜನ್ಮಸ್ಥಳಗಳ ಆಧಾರದಲ್ಲಿ ತಾರತಮ್ಯ ಮಾಡದೆ ಭಾರತೀಯರೆಲ್ಲರಿಗೂ ಸಮಾನ ನ್ಯಾಯವನ್ನು ಖಾತರಿಪಡಿಸುವ ನಮ್ಮ ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳುವ ಬಹುಮುಖ್ಯ ಕೆಲಸವನ್ನು ಸಹ ನಾಳೆಯಿಂದಲೇ ಶುರುಮಾಡಿ. ನೀವು ಕಂಡುಕೊಂಡ ಸತ್ಯಾಂಶಗಳನ್ನು ನಿಮ್ಮ ಸಹಪಾಠಿಗಳೊಂದಿಗೆ, ಸ್ನೇಹಿತರೊಂದಿಗೆ ಹಂಚಿಕೊಳ್ಳಿ’’ ಎಂದಷ್ಟೇ ಹೇಳಿ ಅವರನ್ನು ಬೀಳ್ಕೊಟ್ಟೆ.