ಕಿರಂ ಮತ್ತು ಲಂಕೇಶ್: ಹೇಳಬೇಕಾದ ಎರಡು ಸಂಗತಿಗಳು
ಒಂದು ಆಪ್ತಕೂಟವನ್ನು ಆಯೋಜಿಸಿದ ನಾಗರಾಜ ವಸ್ತಾರೆಯವರ ಸಾಹಿತ್ಯ ಪ್ರೀತಿಗೆ ಶರಣು ಎನ್ನಲೇಬೇಕು. ಹಿರಿಯರ, ಓರಗೆಯವರ ಅಥವಾ ಕಿರಿಯರ ಪುಸ್ತಕವೊಂದು ಪ್ರಕಟವಾಗಿದೆ ಎಂದಾಕ್ಷಣ, ಅದರ ಲೋಕಾರ್ಪಣೆ ಕಾರ್ಯಕ್ರಮವನ್ನು ಹೀಗೆ ವ್ಯವಸ್ಥೆ ಮಾಡಬೇಕು, ಅದಕ್ಕೆ ತಮ್ಮ ಮನೆಯಂಗಳವೇ ಆಗಬೇಕು, ಬರುವ ಅತಿಥಿಗಳನ್ನು ಆದರದಿಂದ ಕಂಡು ಮನ ತಣಿಸಬೇಕು ಎಂದುಕೊಂಡ ವಸ್ತಾರೆಯವರ ಪರಿಶುದ್ಧ ಸಾಹಿತ್ಯ ಪರಿಚಾರಿಕೆಗೆ ಮೆಚ್ಚುಗೆ ಸೂಚಿಸಲೇಬೇಕು. ಏಕೆಂದರೆ, ಇವತ್ತು ಸಾಮುದಾಯಿಕ ಪ್ರಜ್ಞೆ ಪಕ್ಕಕ್ಕೆ ಸರಿದು, ಸ್ವಾರ್ಥ ಮೆರೆಯುತ್ತಿದೆ; ನಾಜೂಕಿನ ನಡೆ, ಲೆಕ್ಕಾಚಾರದ ಬದುಕು ಮುನ್ನೆಲೆಗೆ ಬಂದಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ, ಉಮಾ ರಾವ್ ಅವರ ಹೊಸ ಪುಸ್ತಕದ ಲೋಕಾರ್ಪಣೆಯ ನೆಪದಲ್ಲಿ ಕೃತಿ ಕುರಿತು ಆರೋಗ್ಯಕರ ಚರ್ಚೆಗೆ ಆಸ್ಪದವೀಯುವ ಆಪ್ತಕೂಟ-ಮತ್ತಷ್ಟು ಜನಕ್ಕೆ ಮಾದರಿಯಾಗಲಿ.
ಕಾವ್ಯಜಂಗಮ ಕಿ.ರಂ.ನಾಗರಾಜ ಅವರು ಹಿಂದೊಮ್ಮೆ, ಒಂದಷ್ಟು ಸಮಾನ ಮನಸ್ಕರನ್ನು ಕಲೆಹಾಕಿ, ಅವರಲ್ಲೇ ಯಾರದಾದರೂ ಮನೆಯಲ್ಲಿ ಕೂತು ರಂಗಭೂಮಿಗೆ ಸಂಬಂಧಿಸಿದಂತೆ ಮಾತುಕತೆ ಏರ್ಪಡಿಸುತ್ತಿದ್ದರು. ಕಾಲದ ಕರೆಗೆ ಓಗೊಡುವ ನಾಟಕಗಳ ರಚನೆ, ಓದುವಿಕೆ, ತಿದ್ದುವಿಕೆ, ಪ್ರದರ್ಶನಗಳ ಸುತ್ತ ಮಾತುಕತೆ ನಡೆಸುತ್ತಿದ್ದರು. ಅದಕ್ಕೆ ಕಿರಂ ‘ಆಪ್ತ ರಂಗಭೂಮಿ’ ಎಂದು ಹೆಸರಿಸಿ, ‘ಪ್ರತಿ ತಿಂಗಳು ನಡೀಬೇಕ್ ಕಣ್ರಿ’ ಎಂದು ತಾಕೀತು ಮಾಡಿದ್ದರು. ಆದರೆ ಅವರ ಆಸೆ, ಆಶಯಗಳು ಅವರೊಂದಿಗೇ ಅಸ್ತಂಗತವಾದವು.
ಈ ಆಪ್ತ ರಂಗಭೂಮಿ ಮತ್ತೆ ನೆನಪಾಗಿದ್ದು, ಇತ್ತೀಚೆಗೆ ಉಮಾ ರಾವ್ ಅವರ ಸಮಗ್ರ ಕಥೆಗಳು ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ. ಲೇಖಕ ನಾಗರಾಜ ವಸ್ತಾರೆಯವರು, ಅವರ ಮನೆಯಲ್ಲಿಯೇ ಒಂದಷ್ಟು ಜನರೊಂದಿಗೆ ಕೂತು ಉಮಾ ರಾವ್ ಮತ್ತವರ ಕಥೆಗಳನ್ನು ಕುರಿತು ಮಾತನಾಡುವುದು, ಮಾತನಾಡುತ್ತಲೇ ಪುಸ್ತಕ ಬಿಡುಗಡೆ ಮಾಡುವುದು ಎಂದೆಲ್ಲ ಯೋಚಿಸಲಾಗಿತ್ತು.
ಅವತ್ತಿನ ಕೇಂದ್ರ ಬಿಂದು ಕತೆಗಾರ್ತಿ ಉಮಾ ರಾವ್. ಅವರ ಕಥೆಗಳನ್ನು ಕುರಿತು ಮಾತನಾಡಲು ಬಿ.ಎನ್.ಸುಮಿತ್ರಾಬಾಯಿ, ಜಯಂತ ಕಾಯ್ಕಿಣಿ, ದೀಪಾ ಗಣೇಶ್, ವಿಕ್ರಂ ಹತ್ವಾರ್, ನಾಗರಾಜ ವಸ್ತಾರೆ ಸಿದ್ಧರಾಗಿದ್ದರು. ಪುಸ್ತಕದ ಪ್ರಿಪ್ರೆಸ್ ಜವಾಬ್ದಾರಿ ಹೊತ್ತಿದ್ದ ನಾನು, ಪ್ರಕಾಶಕರಾದ ಮೈಸೂರು ಮಹೇಶ್ ಅಲ್ಲಿದ್ದೆವು. ಜೊತೆಗೆ ಉಮಾ ಪತಿ ಪ್ರಭಾಕರ್ ರಾವ್, ಜಯಂತರ ಪತ್ನಿ ಸ್ಮಿತಾ ಹಾಗೂ ಮಹೇಶರ ಗೆಳೆಯರಾದ ಎಚ್.ಆರ್.ಸ್ವಾಮಿ, ಪ್ರಭು ಬಿಸ್ಲೇಹಳ್ಳಿ, ರೇಣುಕಾರಾಧ್ಯ, ಚಿಕ್ಕಮಗಳೂರು ಗಣೇಶ್ ಮೈಸೂರಿನಿಂದ ಬಂದಿದ್ದರು. ಇಷ್ಟೇ ಇಷ್ಟು ಜನ ಸೇರಿದ್ದ ಪುಟ್ಟದಾದ, ಆಪ್ತವಾದ ಪುಸ್ತಕ ಬಿಡುಗಡೆ ಸಮಾರಂಭವದು.
‘ಉಮಾ ರಾವ್ ಕಥೆಗಳು’ ಪುಸ್ತಕ ಬಿಡುಗಡೆ ಸಮಾರಂಭ ಹೀಗೆಯೇ ಇರಬೇಕೆಂದು ಯೋಚಿಸಿದವರು, ಯೋಜಿಸಿದವರು ನಾಗರಾಜ ವಸ್ತಾರೆ. ಅದಕ್ಕೆ ಅವರ ಮನೆಯ ಅಂಗಳವನ್ನೇ ವೇದಿಕೆಯನ್ನಾಗಿಸಿಕೊಂಡಿದ್ದರು. ಅಂಗಳದ ಒಂದು ಕಡೆಗೆ ಜಗದೇಕ ಸುಂದರಿ ಉಮಾ ಅವರ ಚಿತ್ರ- ಪುಸ್ತಕದ ಮುಖಪುಟ ವಿನ್ಯಾಸವನ್ನೇ ದೊಡ್ಡದು ಮಾಡಿ ನಿಲ್ಲಿಸಿದ್ದರು. ಅದರ ಮುಂದೆ ದೇವಿಯ ಪುಟ್ಟ ವಿಗ್ರಹ, ವಿಗ್ರಹದ ಮುಂದೆ ಪುರಾತನ ಕಾಲದ ಬತ್ತಿ ದೀಪ. ಪಕ್ಕಕ್ಕೆ ಬಿಡುಗಡೆಯಾಗಬೇಕಾದ ನಾಲ್ಕು ಹೊಸ ಪುಸ್ತಕಗಳು, ಚೆಂದದ ಒಂದು ಹೂ ಕುಂಡ, ಆ?ಯಂಟಿಕ್ ಪೀಸ್ ನಂತಿದ್ದ ಹೊಯ್ಸಳ ವಿಗ್ರಹ, ಅದರ ಅಕ್ಕಪಕ್ಕ ಗಾಜಿನ ಗ್ಲಾಸ್ ನೊಳಗೆ ಮಿನುಗುವ ಮತ್ತೆರಡು ಇಲೆಕ್ಟ್ರಿಕ್ ದೀಪಗಳು. ಹಿನ್ನೆಲೆಯಲ್ಲಿ ಊದುಬತ್ತಿಯ ಪರಿಮಳ, ಕೂರಲು ಜಾಗ, ಒರಗಲು ಪುಟ್ಟ ದಿಂಬುಗಳು, ನಡುವೆ ಚಕ್ರವರ್ತಿ ಕೂರುವಂತಹ ಕೊಂಚ ದೊಡ್ದದಾದ ಕುರ್ಚಿಯಲ್ಲಿ ವಸ್ತಾರೆ, ಕಾಲಕಾಲಕ್ಕೆ ಕಾಫಿ, ಟೀ, ಜ್ಯೂಸ್. ಎರಡು ಮೂರು ಥರದ ಸಿಹಿ ತಿಂಡಿ. ಹೊಸಬಗೆಯ ಊಟ ಒಟ್ಟಾರೆ ಅಲ್ಲಿದ್ದ ಎಲ್ಲರಿಗೂ ಅದೊಂದು ಹೊಸ ಅನುಭವ. ವಸ್ತಾರೆಯವರಿಗೂ. ಇದೆಲ್ಲವನ್ನು ವಸ್ತಾರೆಯವರು ಮಾಡಿದ್ದು- ಉಮಾ ರಾವ್ ಅವರ ಮೇಲಿನ ಪುಟ್ಟ ಪ್ರೀತಿಗೆ, ಕನ್ನಡದ ಹೊಸ ಪುಸ್ತಕ ಹೊರಬಂದ ಕಾರಣಕ್ಕೆ, ಆ ಕೃತಿಗೆ ಸಲ್ಲಬೇಕಾದ ಮನ್ನಣೆಗೆ, ಸಾಹಿತ್ಯಕ ವಾತಾವರಣಕ್ಕೆ.
ಆಧುನಿಕ ಸಂವೇದನೆಗಳ, ಕನ್ನಡಕ್ಕೇ ಹೊಸತೆನಿಸುವ ಉಮಾ ರಾವ್ ಕಥೆೆಗಳ ಕುರಿತು ಎಲ್ಲರೂ, ಅವರವರದೇ ಧಾಟಿಯಲ್ಲಿ, ದಿರಿಸಿನಲ್ಲಿ ಕಂಡಿರಿಸಿದರು. ಪ್ರಕಾಶಕರ ಪರವಾಗಿ ಚಿಕ್ಕಮಗಳೂರು ಗಣೇಶ್ ಸ್ಪಾಂಟೇನಿಯಸ್ಸಾಗಿ ಮಾತನಾಡಿ ಬೆರಗು ಹುಟ್ಟಿಸಿದರು. ನಂತರ ‘ನೀವು’ ಎಂದರು. ಮಾತನಾಡುವುದು ಕಷ್ಟ ಎಂದು ತಪ್ಪಿಸಿಕೊಂಡೆ.
ಅವತ್ತಿನ ಆ ಆಪ್ತಕೂಟದ ಬಗ್ಗೆ ನನಗೆ ನಿಜಕ್ಕೂ ಹೇಳಲೇಬೇಕಾದ ಎರಡು ಸಂಗತಿಗಳಿದ್ದವು. ಅದನ್ನು ಅಲ್ಲಿಯೇ ಹೇಳಬಹುದಿತ್ತು. ಮಾತು ನನ್ನ ಫಾರ್ಮ್ ಅಲ್ಲದ್ದರಿಂದ, ಇಲ್ಲಿ ಹೇಳುತ್ತಿದ್ದೇನೆ. ಮೊದಲಿಗೆ ಅಂತಹ ಒಂದು ಆಪ್ತಕೂಟವನ್ನು ಆಯೋಜಿಸಿದ ನಾಗರಾಜ ವಸ್ತಾರೆಯವರ ಸಾಹಿತ್ಯ ಪ್ರೀತಿಗೆ ಶರಣು ಎನ್ನಲೇಬೇಕು. ಹಿರಿಯರ, ಓರಗೆಯವರ ಅಥವಾ ಕಿರಿಯರ ಪುಸ್ತಕವೊಂದು ಪ್ರಕಟವಾಗಿದೆ ಎಂದಾಕ್ಷಣ, ಅದರ ಲೋಕಾರ್ಪಣೆ ಕಾರ್ಯಕ್ರಮವನ್ನು ಹೀಗೆ ವ್ಯವಸ್ಥೆ ಮಾಡಬೇಕು, ಅದಕ್ಕೆ ತಮ್ಮ ಮನೆಯಂಗಳವೇ ಆಗಬೇಕು, ಬರುವ ಅತಿಥಿಗಳನ್ನು ಆದರದಿಂದ ಕಂಡು ಮನ ತಣಿಸಬೇಕು ಎಂದುಕೊಂಡ ವಸ್ತಾರೆಯವರ ಪರಿಶುದ್ಧ ಸಾಹಿತ್ಯ ಪರಿಚಾರಿಕೆಗೆ ಮೆಚ್ಚುಗೆ ಸೂಚಿಸಲೇಬೇಕು. ಏಕೆಂದರೆ, ಇವತ್ತು ಸಾಮುದಾಯಿಕ ಪ್ರಜ್ಞೆ ಪಕ್ಕಕ್ಕೆ ಸರಿದು, ಸ್ವಾರ್ಥ ಮೆರೆಯುತ್ತಿದೆ; ನಾಜೂಕಿನ ನಡೆ, ಲೆಕ್ಕಾಚಾರದ ಬದುಕು ಮುನ್ನ್ನೆಲೆಗೆ ಬಂದಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ, ಉಮಾ ರಾವ್ ಅವರ ಹೊಸ ಪುಸ್ತಕದ ಲೋಕಾರ್ಪಣೆಯ ನೆಪದಲ್ಲಿ ಕೃತಿ ಕುರಿತು ಆರೋಗ್ಯಕರ ಚರ್ಚೆಗೆ ಆಸ್ಪದವೀಯುವ ಆಪ್ತಕೂಟ-ಮತ್ತಷ್ಟು ಜನಕ್ಕೆ ಮಾದರಿಯಾಗಲಿ. ವಸ್ತಾರೆಯವರ ಸಾಹಿತ್ಯಕ ಸಹೃದಯತೆ ಮುಂದುವರಿಯಲಿ.
ಮತ್ತೊಂದು ಸಂಗತಿ, ಪ್ರಕಾಶಕ ಮಹೇಶ್ ಕುರಿತಾದದ್ದು. ಮೈಸೂರಿನ ಮಹೇಶ್ ಆಗಾಗ ಲಂಕೇಶ್ ಪತ್ರಿಕೆ ಆಫೀಸಿಗೆ ಬಂದುಹೋಗುತ್ತಿದ್ದ ಪರಿಚಿತ ಗೆಳೆಯರು. 90ರ ದಶಕದಲ್ಲಿ ಉಮಾ ರಾವ್ ಮುಂಬೈನಿಂದ ಪತ್ರಿಕೆಗೆ ಬರೆಯುತ್ತಿದ್ದರು, ನಾನದನ್ನು ಓದಿ, ಟೈಪಿಸಿ, ಪುಟ ವಿನ್ಯಾಸ ಮಾಡುವ ಹುಡುಗನಾಗಿದ್ದೆ. ಪ್ರಿಂಟಾದ ಪತ್ರಿಕೆಗಳನ್ನು ಮಾರಾಟ ಮಾಡುವ ಮಹೇಶ್ ಏಜೆಂಟ್ ಆಗಿದ್ದರು. ಒಬ್ಬರು ಬರೆಯುವ, ಮತ್ತೊಬ್ಬರು ಸಿದ್ಧಪಡಿಸುವ, ಮಗದೊಬ್ಬರು ಮಾರಾಟ ಮಾಡುವ- ಈ ಮೂವರನ್ನು ‘ಪತ್ರಿಕೆ’ ಎಂಬ ತಂತು ಬೆಸೆದಿತ್ತು. 20 ವರ್ಷಗಳ ನಂತರ ವಸ್ತಾರೆಯವರ ಮನೆಯಲ್ಲಿ ಒಟ್ಟಿಗೆ ಕೂರಿಸಿತ್ತು.
‘ಪತ್ರಿಕೆ’ಯ ಮೂಲಕ ಪರಿಚಯವಾದ ಉಮಾ ರಾವ್, ಸಮಗ್ರ ಕಥೆಗಳು ಪುಸ್ತಕ ತರಬೇಕೆಂದಾಗ ಲಿಪಿ ಜೋಡಣೆ, ಕರಡು ತಿದ್ದುವಿಕೆ, ಪುಟವಿನ್ಯಾಸಗಳ ಕೆಲಸದಲ್ಲಿ ಅವರಿಗೆ ನೆರವಾಗಿದ್ದೆ. ಸುಮಾರು 360 ಪುಟಗಳ ಪುಸ್ತಕ. ಪ್ರಕಾಶಕರು ಎಂಬ ಪ್ರಶ್ನೆ ಎದುರಾದಾಗ, ಉಮಾ ರಾವ್ ಅವರಿಗೆ ಪರಿಚಯವಿರುವ ಪ್ರತಿಷ್ಠಿತ ಪ್ರಕಾಶಕರೆನಿಸಿಕೊಂಡ ಮೂವರೊಂದಿಗೆ ಮಾತನಾಡಿದ್ದರು. ಅವರಿಂದ ‘ದಿನದೂಡುವ ತಂತ್ರ’ಕ್ಕೆ ಒಳಗಾಗಿ, ವರ್ಷವೇ ಕಳೆದು ಬೇಸತ್ತಿದ್ದರು. ಕೊನೆಗೆ ತಾನೇ ಹಣ ಹಾಕಿ ಪ್ರಿಂಟ್ ಹಾಕಿಸುತ್ತೇನೆ ಎಂಬ ನಿರ್ಧಾರಕ್ಕೂ ಬಂದಿದ್ದರು. ಮಾರಾಟದ ಕಷ್ಟ ಕಾರ್ಪಣ್ಯಗಳನ್ನು ವಿವರಿಸಿ, ನನ್ನ ಪರಿಚಿತ ಪ್ರಕಾಶಕರನ್ನು ಕೇಳುತ್ತೇನೆ ಇರಿ ಎಂದಿದ್ದೆ. ಲಂಕೇಶ್ ಪತ್ರಿಕೆಯ ಗೆಳೆಯ ಮಹೇಶರಿಗೆ ಫೋನ್ ಮಾಡಿ, ‘‘ಉಮಾ ರಾವ್ ಅವರ ಸಮಗ್ರ ಕಥೆಗಳು ಪುಸ್ತಕವನ್ನು ನಿಮ್ಮ ರೂಪ ಪ್ರಕಾಶನದಿಂದ ತರಬಹುದೆ’’ ಎಂದು ಕೇಳಿದ್ದೆ. ಒಂದೇ ಮಾತಿಗೆ ಮಹೇಶ್ ‘‘ಆಗಲಿ’’ ಎಂದರು. ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿ ಹೊರತಂದರು. ಲೇಖಕಿಗೆ ಕೊಡಬೇಕಾದ ಸಂಭಾವನೆಯನ್ನು, ಉಚಿತ ಪ್ರತಿಗಳನ್ನೂ ಕೊಟ್ಟರು.
ಹಾಗೆ ನೋಡಿದರೆ, ಉಮಾ ರಾವ್, ಹಾಟ್ ಕೇಕ್‌ನಂತೆ ಖರ್ಚಾಗುವ ಜನಪ್ರಿಯ ಲೇಖಕಿಯ ಪಟ್ಟಿಗೆ ಸೇರಿದವರಲ್ಲ. ಪ್ರಕಾಶಕರಿಗೆ ಅನುಕೂಲಕ್ಕೆ ಆಗುವ ಪ್ರಭಾವಿಗಳಲ್ಲ. ಹೆಚ್ಚಿನ ಬೆಲೆಯ ಸಮಗ್ರ ಕೃತಿಗಳು ಮಾರಾಟವಾಗುವುದಿಲ್ಲ. ಜೊತೆಗೆ 360 ಪುಟಗಳ 1 ಸಾವಿರ ಪ್ರತಿಗಳ ಪ್ರಿಂಟಿಗೆ ಸುಮಾರು ಒಂದು ಲಕ್ಷ ರೂ. ಖರ್ಚಾಗುವುದರಿಂದ ವರ್ಕ್‌ಔಟ್ ಆಗಲ್ಲ. ಈ ಎಲ್ಲ ‘ಇಲ್ಲ’ಗಳ ಮುಂದಿಟ್ಟ ‘ಪ್ರತಿಷ್ಠಿತ’ ಪ್ರಕಾಶಕ ಪ್ರಭುಗಳು ಉಮಾ ರಾವ್ ಅವರ ಫೋನಿಗೆ ಉತ್ತರಿಸದೆ, ವ್ಯಾಪ್ತಿ ಪ್ರದೇಶದಿಂದ ಹೊರಗುಳಿದಿದ್ದರು. ಆದರೆ ಉಮಾ ರಾವ್ ಅವರೊಂದಿಗೆ ನಿಕಟ ಸಂಪರ್ಕವೂ ಇಲ್ಲದ ಮಹೇಶ್, ಕೃತಿ ಹೊರತಂದಿದ್ದರು. ಅದಕ್ಕೆ ಕಾರಣ ಲಂಕೇಶ್ ಮತ್ತು ಪತ್ರಿಕೆ.
1990ರಿಂದಲೂ ಲಂಕೇಶ್ ಪತ್ರಿಕೆಯ ಏಜೆಂಟರಾಗಿದ್ದ ಮಹೇಶ್, ವಯಸ್ಸಿನಲ್ಲಿ ಕಿರಿಯರಾದರೂ, ಲಂಕೇಶರೊಂದಿಗೆ ಕೂತು ಮಾತನಾಡುವ ಸಲುಗೆ ಬೆಳೆಸಿಕೊಂಡಿದ್ದರು. ಅಂಥದ್ದೇ ಒಂದು ಮಾತುಕತೆಯಲ್ಲಿ ಲಂಕೇಶರು, ‘‘ಇನ್ನೂ ಎಷ್ಟು ದಿನಾಂತ ಹೀಗೆ ಏಜೆಂಟಾಗಿ ಇರ್ತಿಯಯ್ಯಿ, ಬೇರೆ ಏನಾದರೂ ಮಾಡು’’ ಎಂದರು. ಏನೂ ಮಾಡಲು ತೋಚದ ಮಹೇಶ್ ಸುಮ್ಮನೆ ಮುಖ ನೋಡಿದರು. ಲಂಕೇಶರೇ ಮುಂದಾಗಿ, ‘‘ನನ್ನ ಸಂಕ್ರಾಂತಿ ಪುಸ್ತಕ ಕೊಡ್ತೀನಿ, ಪ್ರಕಾಶನ ಶುರು ಮಾಡು’’ ಎಂದರು. ಆ ಸಂದರ್ಭದಲ್ಲಿ ಪತ್ರಿಕೆ ಪ್ರಕಾಶನವಿತ್ತು. ಅತ್ಯಂತ ಕಡಿಮೆ ಬೆಲೆಗೆ ಪುಸ್ತಕಗಳನ್ನು ಮುದ್ರಿಸಿ, ಓದುಗ ವಲಯವನ್ನು ವೃದ್ಧಿಸುವಲ್ಲಿ ಯಶಸ್ವಿಯೂ ಆಗಿತ್ತು. ಅಂತಹ ಸಂದರ್ಭದಲ್ಲಿ, ತಮ್ಮದೇ ಒಂದು ಕೃತಿಯನ್ನು ಮತ್ತೊಬ್ಬರಿಗೆ ಉಚಿತವಾಗಿ ಕೊಡುವುದು ಕಷ್ಟ. ಆದರೆ ಲಂಕೇಶರು ಹಿಂದುಮುಂದು ಯೋಚಿಸದೆ ಕೊಟ್ಟರು. ಮಹೇಶ್ ಸಂಕ್ರಾಂತಿ ಪುಸ್ತಕ ಅಚ್ಚು ಹಾಕಿಸಿ ಮಾರಾಟಕ್ಕೆ ಅಣಿಯಾಗುತ್ತಿರುವಾಗಲೇ ಅದು ಬೆಂಗಳೂರು ವಿಶ್ವವಿದ್ಯಾನಿಲಯದ ಬಿಎ ಪದವಿಗೆ ಪಠ್ಯವಾಯಿತು. ಬೆಂಗಳೂರು ವಿವಿ ವ್ಯಾಪ್ತಿ ವಿಸ್ತಾರವಾದ್ದರಿಂದ ಸುಮಾರು ಆರೇಳು ಸಾವಿರ ಪ್ರತಿಗಳ ಬೇಡಿಕೆ ಬಂತು. ಮಾರಾಟವೂ ಆಯಿತು, ಹಣವೂ ಬಂತು. ಮಹೇಶ್, ಅಷ್ಟೇ ಪ್ರಾಮಾಣಿಕತೆಯಿಂದ ಲಂಕೇಶರಲ್ಲಿಗೆ ಬಂದು, ‘‘ಸರ್, ಪುಸ್ತಕ ಪಠ್ಯವಾಗಿದೆ... ಸಂಭಾವನೆ’’ ಎಂದು ಅಳುಕುತ್ತಲೇ ಕೇಳಿದರು. ಆಗ ಲಂಕೇಶರು, ‘‘ನನಗ್ಯಾಕಯ್ಯ ದುಡ್ಡು, ಪತ್ರಿಕೆಯ ಓದುಗರೇ ನನಗೆಲ್ಲವನ್ನು ಕೊಟ್ಟಿರುವಾಗ,..’’ ಎಂದು ‘’ಒಂದು ಕೆಲಸ ಮಾಡು, ಈ ಪುಸ್ತಕ ಮಾರಾಟದಿಂದ ಬರುವ ಹಣವನ್ನೇ ಪ್ರಕಾಶನಕ್ಕೆ ಬೇಕಾದ ಮೂಲ ಬಂಡವಾಳವೆಂದು ಪರಿಗಣಿಸಿ, ಬೆಳೆಸು’’ ಎಂದರು. ಲಂಕೇಶರ ಮಾತಿನಂತೆಯೇ ಮಹೇಶ್ ರೂಪ ಪ್ರಕಾಶನವನ್ನು ಕಟ್ಟಿ ಬೆಳೆಸಿದರು. ಇಲ್ಲಿಗೆ 20 ವರ್ಷಗಳಾಯಿತು. ನೂರಾರು ಪುಸ್ತಕಗಳನ್ನು ಪ್ರಕಟಿಸಿದ್ದೂ ಆಯಿತು.
ಹಾಗೆ ನೋಡಿದರೆ, ತಾವೂ ಬೆಳೆದು, ತಮ್ಮ ಸುತ್ತಲಿನವರನ್ನೂ ಬೌದ್ಧಿಕವಾಗಿ ಬೆಳೆಸುವ, ಸಾಮುದಾಯಿಕ ಪ್ರಜ್ಞೆ ಪಸರಿಸುವ ಕಿರಂ ಮತ್ತು ಲಂಕೇಶರ ಈ ಗುಣ ಕನ್ನಡದ ಸಂದರ್ಭದಲ್ಲಿ ಹೊಸದಲ್ಲ. ತಲೆಮೇಲೆ ಕನ್ನಡ ಪುಸ್ತಕಗಳನ್ನು ಹೊತ್ತು ಮಾರಾಟ ಮಾಡಿ ಕನ್ನಡ ಕಟ್ಟಿದ ಗಳಗನಾಥರಿಂದ ಹಿಡಿದು, ನಷ್ಟವಾದರೂ ಸರಿ ನಿಯತ್ತಿನ ಹಾದಿ ಬಿಡದ ‘ನುಡಿ ಪ್ರಕಾಶನ’ದ ರಂಗನಾಥ್, ‘ಲೋಹಿಯಾ ಪ್ರಕಾಶನ’ದ ಚನ್ನಬಸವಣ್ಣರವರೆಗೆ, ಬರಹಗಾರರು ಮತ್ತು ಪ್ರಕಾಶಕರು ಸಮಾಜದ ಒಳಿತಿಗಾಗಿ ಶ್ರಮಿಸಿದ್ದಾರೆ. ಹಾಗೆಯೇ ಅಂದು ಕಿರಂ ಹುಟ್ಟುಹಾಕಿದ ಆಪ್ತ ರಂಗಭೂಮಿ ಇಂದು ನಾಗರಾಜ ವಸ್ತಾರೆಯವರ ಪುಸ್ತಕ ಪ್ರೀತಿಯಲ್ಲಿ; ಲಂಕೇಶರ ಉದಾರತನ ಮಹೇಶ್‌ರಂತಹ ಪ್ರಕಾಶಕರಲ್ಲಿ ಇಂದಿಗೂ ಮುಂದುವರಿಯುತ್ತಿದೆ. ಆದರೆ ಎಲ್ಲೋ ಕೆಲವರು ಸ್ಥಾನ, ಸನ್ಮಾನ, ಬಹುಮಾನಗಳ ಬೆನ್ನು ಬಿದ್ದು ಓಡುತ್ತಿರುತ್ತಾರೆ. ಜನಪ್ರಿಯತೆಯ ಜಾಡಿಗೆ ಬಿದ್ದ ಕೆಲ ಪ್ರಕಾಶಕರು ಪ್ರತಿ ನಡೆ-ನುಡಿಯನ್ನು ನಗದನ್ನಾಗಿಸುವತ್ತ ಜಪ ಮಾಡುತ್ತಿರುತ್ತಾರೆ. ನಿಂದಕರಿರಬೇಕು ಎನ್ನುವ ಹಾಗೆ ಇಂತಹವರೂ ಇರಲಿ, ಮನಸ್ಸುಗಳನ್ನು ಕಟ್ಟುವ ಕೆಲಸ ಮುಂದುವರಿಯಲಿ.