ಟೀಕೆಗಳಿಗೆ ಎದೆಗುಂದುವುದಿಲ್ಲ, ಸಹಕರಿಸಿದ ಸರ್ವರನ್ನೂ ಸ್ಮರಿಸುವೆ: ಆ್ಯಂಬುಲೆನ್ಸ್ ಚಾಲಕ ಮುಹಮ್ಮದ್ ಹನೀಫ್
ಮಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 40 ದಿನದ ಹಸುಳೆಯನ್ನು ಫೆ.6ರಂದು ಝೀರೊ ಟ್ರಾಫಿಕ್ ನಡಿ ಮಂಗಳೂರಿ ನಿಂದ ಬೆಂಗಳೂರಿಗೆ ಆ್ಯಂಬುಲೆನ್ಸ್‌ನಲ್ಲಿ ಕೇವಲ 4:15ಗಂಟೆಯೊಳಗೆ ಸಾಗಿಸುವ ಮೂಲಕ ಸಾಹಸ ಮೆರೆದ ಬೆಳ್ತಂಗಡಿ ತಾಲೂಕಿನ ಬಳಂಜದ ಮುಹಮ್ಮದ್ ಹನೀಫ್ (27) ಇದೀಗ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ.
ಪ್ರಶಂಸೆಗಳು, ಅಭಿನಂದನೆಗಳು ವ್ಯಕ್ತವಾಗುತ್ತಿದೆ. ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾಹಸದ ಬಗ್ಗೆ ಪರ-ವಿರೋಧ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಆ ಹಿನ್ನಲೆಯಲ್ಲಿ ‘ವಾರ್ತಾ ಭಾರತಿ’ಯು ಹನೀಫ್ ಜೊತೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.
► 40 ದಿನದ ಹಸುಳೆಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಕೇವಲ 4:15 ಗಂಟೆಯೊಳಗೆ ಝೀರೊ ಟ್ರಾಫಿಕ್‌ನಡಿ ಆ್ಯಂಬುಲೆನ್ಸ್ ಮೂಲಕ ಸಾಗಿಸುವ ಮೂಲಕ ಗಮನ ಸೆಳೆದಿರುವುದರ ಬಗ್ಗೆ ಏನು ಹೇಳುವಿರಿ ?
ಮುಹಮ್ಮದ್ ಹನೀಫ್: ತುಂಬಾ ಖುಷಿಯಾಗುತ್ತಿದೆ. ಒಂದು ಮಗುವಿನ ರಕ್ಷಣೆಗೆ ಕಿಂಚಿತ್ ಸೇವೆ ಮಾಡಿದ ತೃಪ್ತಿ ನನಗೆ ಇದೆ. ಮಂಗಳೂರಿನಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ 40 ದಿನದ ಹಸುಳೆಯನ್ನು ಕರೆದೊಯ್ಯಲಿಕ್ಕಿದೆ ಎಂಬ ಕರೆ ಬಂದ ತಕ್ಷಣ ಬೆಂಗಳೂರಿನಲ್ಲಿದ್ದ ನಾನು ಆ ರಾತ್ರಿಯೇ ಮಂಗಳೂರಿಗೆ ಹೊರಟು ಬಂದೆ. ವೈದ್ಯರು 5 ಗಂಟೆಯೊಳಗೆ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಬೇಕು ಎಂದು ಸೂಚಿಸಿದ್ದರು. ಅದರಂತೆ ನಾನು ಮಧ್ಯಾಹ್ನ 12:05ಕ್ಕೆ ಮಂಗಳೂರಿನಿಂದ ಹೊರಟು ಸಂಜೆ 4:20ಕ್ಕೆ ಬೆಂಗಳೂರು ತಲುಪಿದೆ. ಆಕ್ಸಿಜನ್ ಬದಲಾಯಿಸಲು 10 ನಿಮಿಷ ಆ್ಯಂಬುಲೆನ್ಸ್ ನಿಲ್ಲಿಸಬೇಕಾಗಿ ಬಂತು. ಯಶವಂತಪುರದವರೆಗೆ ಝೀರೊ ಟ್ರಾಫಿಕ್‌ನಲ್ಲೇ ಬಂದೆ. ಬಳಿಕ ಟ್ರಾಫಿಕ್ ಸಮಸ್ಯೆಯಿಂದ ಸ್ವಲ್ಪ ವಿಳಂಬವಾಯಿತು. ಇಲ್ಲದಿದ್ದರೆ 4 ತಾಸುಗೂ ಮುನ್ನ ಬೆಂಗಳೂರು ತಲುಪಲು ಸಾಧ್ಯವಾಗುತ್ತಿತ್ತು.
► ಈ ಸಂದರ್ಭ ನಿಮಗೆ ಆದ ಅನುಭವ ಏನು?
ಮುಹಮ್ಮದ್ ಹನೀಫ್: ಝೀರೊ ಟ್ರಾಫಿಕ್‌ನಲ್ಲಿ ಹಸುಳೆಯನ್ನು ಸಾಗಿಸಬೇಕಿದೆ, ಎಲ್ಲರೂ ಸಹಕರಿಸಿ ಎಂದು ನಾನು ಸಾಮಾಜಿಕ ಜಾಲತಾಣಗಳ ಮೂಲಕ ಫೆ. 5ರಂದು ರಾತ್ರಿ ಸಂದೇಶ ಕಳುಹಿಸಿದೆ. ಅದನ್ನು ಗಮನಿಸಿದ ನನ್ನ ಸ್ನೇಹಿತರು, ಸಾರ್ವಜನಿಕರು, ಜಾತಿ ಮತ ಭೇದ ಮರೆತು ಸಹಕರಿಸಿದ್ದಾರೆ. ಮುಖ್ಯವಾಗಿ ಆ್ಯಂಬುಲೆನ್ಸ್‌ಗೆ ಬೆಂಗಾವಲಾಗಿ ಬಂದ ಪೊಲೀಸ್ ಜೀಪಿನ ಚಾಲಕ ಸಹಿತ ಸಿಬ್ಬಂದಿಯ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಮಗುವನ್ನು ವೈದ್ಯರು ನೀಡಿದ ಗಡುವಿಗಿಂತ ಮುಂಚೆಯೇ ಆಸ್ಪತ್ರೆಗೆ ಸಾಗಿಸುವುದು ನನ್ನ ಗುರಿಯಾಗಿತ್ತು. ಆ ಗುರಿ ತಲುಪಿದ ಬಳಿಕ ನೆಮ್ಮದಿಯ ನಿಟ್ಟುಸಿರು ಬಿಟ್ಟೆ.
► ನಿಮ್ಮ ಈ ಸಾಹಸದ ಬಗ್ಗೆ ಟೀಕೆ ಟಿಪ್ಪಣಿ ವ್ಯಕ್ತವಾಗುತ್ತಿದೆಯಲ್ಲಾ?
ಮುಹಮ್ಮದ್ ಹನೀಫ್: ನನಗೆ ಇದು ಸಾಹಸ ಅಂತ ಅನಿಸುತ್ತಿಲ್ಲ. ಬದಲಾಗಿ ಇದೊಂದು ಸೇವೆ ಎಂದು ಭಾವಿಸಿದ್ದೇನೆ. ತನ್ನ ಪ್ರಾಣವನ್ನು ಒತ್ತೆಯಿಟ್ಟು ಇನ್ನೊಂದು ಪ್ರಾಣವನ್ನು ರಕ್ಷಿಸಲು ನಡೆಸುವ ಪ್ರಯತ್ನವಿದೆಯಲ್ಲಾ... ಅದನ್ನು ಮಾತಿನ ಮೂಲಕ ವಿವರಿಸಲು ಸಾಧ್ಯವಿಲ್ಲ. ಮಗುವನ್ನು ರಕ್ಷಿಸಲು ಕಿಂಚಿತ್ತು ಸೇವೆ ಸಲ್ಲಿಸಿದ ತೃಪ್ತಿ ಇದ್ದರೂ ಕೂಡ ಕೆಲವರು ಟೀಕಿಸುವುದನ್ನು ಗಮನಿಸುವಾಗ ಸ್ವಲ್ಪ ಬೇಸರವಾಗುತ್ತದೆ. ಒಳ್ಳೆಯ ಕೆಲಸ ಮಾಡುವಾಗಲೆಲ್ಲಾ ಕೊಂಕು ನುಡಿಯುವವರು ಇರುತ್ತಾರೆ ಎಂದು ಭಾವಿಸಿ ಯಾವೊಂದು ಟೀಕೆಗೂ ಪ್ರತಿಕ್ರಿಯಿಸಲು ಹೋಗಲಿಲ್ಲ. ಮುಸ್ಲಿಮ್ ಸಮುದಾಯವನ್ನು ಬಲವಾಗಿ ದ್ವೇಷಿಸುವ ಕೆಲವರು ನನ್ನನ್ನು ಇದೀಗ ಅಣಕಿಸುತ್ತಿದ್ದಾರೆ. ನಾನು ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡಿದೆ ಎನ್ನುತ್ತಿದ್ದಾರೆ. ನಾನು ಯಾವತ್ತೂ ಕೂಡ ಪ್ರಚಾರಕ್ಕೆ ಆಸೆಪಟ್ಟವನಲ್ಲ. ಅದರ ಹಿಂದೆ ಬಿದ್ದವನಲ್ಲ. ಅದೆಲ್ಲಾ ತನ್ನಿಂತಾನಾಗಿಯೇ ಬಂತು. ಹಾಗಾಗಿ ನಾನು ಯಾವ ಟೀಕೆ-ಟಿಪ್ಪಣಿಗೂ ಎದೆಗುಂದುವುದಿಲ್ಲ. ಈ ಸಂದರ್ಭ ನನಗೆ ಯಾರೆಲ್ಲಾ ಸಹಕರಿಸಿ ದ್ದಾರೋ ಅವರನ್ನು ಸದಾ ಸ್ಮರಿಸುತ್ತಿರುವೆ.
ಸಾಮಾಜಿಕ ಜಾಲತಾಣದಿಂದಾಗಿಯೇ ‘ಹೀಗೆಲ್ಲಾ’ ಆಯಿತು ಎನ್ನುವಿರಾ?
ಮುಹಮ್ಮದ್ ಹನೀಫ್: ಹೌದು... ಸಾಮಾಜಿಕ ಜಾಲತಾಣದಿಂದ ‘ಒಳಿತು ಮತ್ತು ಕೆಡುಕು’ ಕೂಡ ಇದೆ. ಝೀರೊ ಟ್ರಾಫಿಕ್‌ಗೆ ಸಹಕರಿಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದೆ. ಅದನ್ನು ಕಂಡು ಸಾವಿರಾರು ಮಂದಿ ಕ್ಷಣಕ್ಷಣಕ್ಕೂ ಸಹಕರಿಸಿದ್ದಾರೆ. ಆ ಬಳಿಕ ಅದೇ ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಒಳಿತು ಮತ್ತು ಕೆಡುಕಿಗೆ ‘ಅದನ್ನು’ ಬಳಸುವವರು ಇರುವಾಗ ನಾನು ‘ಅದರ’ ವಿರುದ್ಧ ಗೂಬೆ ಕೂರಿಸಲಾರೆ.
ಇದು ನಿಮ್ಮ ಮೊದಲ ಸಾಹಸವಾ?
ಮುಹಮ್ಮದ್ ಹನೀಫ್: ಅಲ್ಲ, ವರ್ಷದ ಹಿಂದೆ ನಾನು ಬೆಂಗಳೂರಿನಿಂದ 380 ಕಿ.ಮೀ.ದೂರದ ಕಲ್ಲಿಕೋಟೆಗೆ ಕೇವಲ 4:10ತಾಸಿನೊಳಗೆ ಶಿರೀನ್ ಎಂಬ 10ರ ಹರೆಯದ ಬಾಲಕಿಯನ್ನು ಝೀರೊ ಟ್ರಾಫಿಕ್ ನಲ್ಲಿ ಸಾಗಿಸಿದ್ದೆ. ಆವಾಗ ಇಲ್ಲದ ಟೀಕೆಯು ಈಗ ವ್ಯಕ್ತವಾಗುವಾಗ ಮನಸ್ಸಿಗೆ ಸ್ವಲ್ಪ ಬೇಸರವಾಗುತ್ತದೆ. ಈ ಆ್ಯಂಬುಲೆನ್ಸ್ ಚಾಲಕರ ವಿಷಯದಲ್ಲಿ ಯಾರೂ ಕೂಡ ಮತಾಂಧರಾಗಬೇಡಿ. ಆ ಮಗು ಹಿಂದೂ ಆಗಿದ್ದರೆ ನಾನು ಕೊಲ್ಲುತ್ತಿದ್ದೆ ಎಂಬ ಪ್ರತಿಕ್ರಿಯೆ ಕೇಳಿ ಬರುವಾಗ ತುಂಬಾ ನೋವಾಗುತ್ತದೆ. ಯಾವೊಬ್ಬ ಸೇವಕ ಯಾವತ್ತೂ ಕೂಡ ಜಾತಿ, ಧರ್ಮ ನೋಡಲಾರ. ಆವಾಗ ಆತನಿಗೆ ರೋಗಿಯ ಧರ್ಮ, ಜಾತಿ ಮುಖ್ಯವಾಗುವುದಿಲ್ಲ. ತನ್ನ ಕೈಯಿಂದ ಆದಷ್ಟು ಸಹಾಯ ಮಾಡುವ ತುಡಿತ ಮಾತ್ರವಿರುತ್ತದೆ. ಮೊನ್ನೆ 40 ದಿನದ ಮಗುವನ್ನು ನಾನು ಜಾತಿ, ಧರ್ಮ ನೋಡಿ ಸಾಗಿಸಲಿಲ್ಲ. ಇಂತಹ ವಿಷಯಕ್ಕೆ ಜಾತಿ, ಧರ್ಮದ ಲೇಬಲ್ ಹಚ್ಚುವ ಮನಸ್ಥಿತಿ ಅಪಾಯಕಾರಿಯಾಗಿದೆ. ಮನುಷ್ಯತ್ವ ಉಳ್ಳವರಿಗೆ ಯಾವತ್ತೂ ಕೂಡ ಅಂತಹ ಮನೋಭಾವವಿರದು.
ಆ್ಯಂಬುಲೆನ್ಸ್ ಚಾಲಕನಾದುದರಿಂದ ಹೀಗೊಂದು ಸೇವೆ ಮಾಡಲು ಸಾಧ್ಯವಾಯಿತು ಅಂತ ನಿಮಗೆ ಅನಿಸುತ್ತಿದೆಯಾ?
ಮುಹಮ್ಮದ್ ಹನೀಫ್: ಹೌದು... ಇಲ್ಲದಿದ್ದರೆ ಇಂತಹ ಸೇವೆ ಅಸಾಧ್ಯ. ಬಾಲ್ಯದಲ್ಲೇ ಆ್ಯಂಬುಲೆನ್ಸ್ ಬಗ್ಗೆ ನನಗೆ ಒಂದು ರೀತಿಯ ಕುತೂಹಲ. ದೊಡ್ಡವನಾದ ಮೇಲೆ ಆ್ಯಂಬುಲೆನ್ಸ್ ಚಾಲಕನಾಗಬೇಕು ಎಂಬ ಆಸೆಯೂ ಇತ್ತು. ಪಿಯುಸಿ ಮುಗಿಸಿದೊಡನೆ ಚಾಲನಾ ತರಬೇತಿ ಪಡೆದು ಇಪ್ಪತ್ತರ ಹರೆಯದಲ್ಲೇ ಆ್ಯಂಬುಲೆನ್ಸ್ ಚಾಲಕನಾದೆ. ಕಳೆದ 7 ವರ್ಷದಿಂದ ಕೆಎಂಸಿಸಿ (ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್)ಯ ಚಾಲಕನಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲೂ ಕೂಡ ನಾನು ನಿಗದಿತ ಸಂಬಳದ ನಿರೀಕ್ಷೆಯನ್ನಿಟ್ಟುಕೊಂಡಿಲ್ಲ. ಸಂಸ್ಥೆಯವರು ನೀಡುವ ಗೌರವಯುತ ವೇತನದಲ್ಲೇ ಜೀವನ ಸಾಗಿಸುತ್ತಿದ್ದೇನೆ. ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುವುದೇ ಕೆಎಂಸಿಸಿ ಸಂಸ್ಥೆಯ ಉದ್ದೇಶವಾಗಿದೆ. ಮೊನ್ನೆ ಹಸುಳೆಯನ್ನು ಉಚಿತವಾಗಿಯೇ ಸಾಗಾಟ ಮಾಡಲಾಗಿದೆ. ಸಂಸ್ಥೆಯ ಒಳ್ಳೆಯ ಉದ್ದೇಶಕ್ಕೆ ಸ್ಪಂದಿಸುವುದು ಕೂಡ ನನ್ನ ಕರ್ತವ್ಯವಾಗಿದೆ.
ಸಾಹಸದ ಬಳಿಕ ನಿಮಗೆ ಅಲ್ಲಲ್ಲಿ ನಡೆಯುವ ಸನ್ಮಾನದ ಬಗ್ಗೆ....
ನೋಡಿ ನಾನು ಮೊದಲೇ ಹೇಳಿರುವೆ, ಯಾವುದೇ ರೀತಿಯ ಪ್ರಚಾರಕ್ಕೆ ಮತ್ತು ಸನ್ಮಾನದ ಆಸೆಯನ್ನಿಟ್ಟು ಇಂತಹ ಸೇವೆ ಮಾಡಿಲ್ಲ. ಬಾಲ್ಯದಲ್ಲೇ ಇದ್ದ ಆಸೆಯನ್ನು ಈಡೇರಿಸಿದ, ಕನಸನ್ನು ನನಸುಗೊಳಿಸಿದ ತೃಪ್ತಿ ಇದೆ. ಅದರ ಫಲವಾಗಿ ಈವರೆಗೆ ನನಗೆ ಮಸೀದಿ, ಮಂದಿರ, ಚರ್ಚ್ ಹಾಗೂ ಬಜರಂಗದಳ, ಕರ್ನಾಟಕ ರಕ್ಷಣಾ ವೇದಿಕೆ ಸಹಿತ ವಿವಿಧ ಸಂಘ ಸಂಸ್ಥೆಗಳ ವತಿಯಿಂದ 52 ಕಡೆ ಸನ್ಮಾನ ಮಾಡಲಾಗಿದೆ. ನಾನು ಇದನ್ನು ಬಯಸಿದವನೇ ಅಲ್ಲ. ಆದರೂ ಸನ್ಮಾನ ಮಾಡಿದ್ದಾರೆ. ವಿನಮ್ರತೆಯಿಂದ ಸ್ವೀಕರಿಸಿದ್ದೇನೆ.