ಓ ಮೆಣಸೇ...
ಸಿಎಎ ವಿರೋಧಿ ಪ್ರತಿಭಟನೆ ಆಕಸ್ಮಿಕ ಅಲ್ಲ, ವ್ಯವಸ್ಥಿತ - ನರೇಂದ್ರ ಮೋದಿ, ಪ್ರಧಾನಿ.
ಹೌದು. ಅದಕ್ಕಾಗಿ ತಾವು ತುಂಬಾ ಶ್ರಮ ಪಟ್ಟಿದ್ದೀರಿ.
---------------------
ರಾಷ್ಟ್ರ ಭಕ್ತಿ ಜಾಗೃತಗೊಳಿಸುವ ಶಕ್ತಿ ಯೋಗಕ್ಕಿದೆ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ.
ಶವಾಸನಗಳ ಮೂಲಕವೇ ದೇಶಭಕ್ತಿಯನ್ನು ಹರಡಿ ಪ್ರಧಾನಿಯಾದವರು ನಮ್ಮಲ್ಲಿದ್ದಾರೆ.
---------------------
ದಿಲ್ಲಿ ಮುಖ್ಯಮಂತ್ರಿ, ಅರವಿಂದ ಕೇಜ್ರಿವಾಲ್ ಓರ್ವ ಭಯೋತ್ಪಾದಕ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ - ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ.
ಬಹುಶಃ ಮೋದಿಯ ಎದೆಯೊಳಗೆ ಭಯ ಹುಟ್ಟಿಸಿದ ಕಾರಣಕ್ಕಿರಬೇಕು.
---------------------
ಮೂರು ದಿನದೊಳಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಗುಣಮುಖರಾಗದಿದ್ದರೆ ಕುದ್ರೋಳಿ ದೇಗುಲ ಪ್ರವೇಶಿಸುವುದಿಲ್ಲ - ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ.
ಒಟ್ಟಿನಲ್ಲಿ ನೀವಿನ್ನೂ ಗುಣಮುಖರಾಗಿಲ್ಲ ಎನ್ನುವುದನ್ನು ಇದು ತಿಳಿಸುತ್ತದೆ.
---------------------
ಕೊರೋನ ರೋಗಕ್ಕೆ ಆಯುರ್ವೇದದಲ್ಲಿ ಔಷಧವಿದೆ - ಶ್ರೀರಾಮುಲು, ಸಚಿವ.
ನೀವು ಚೀನಾಕ್ಕೆ ಹೋಗಿ ಯಾಕೆ ಒಂದು ಆಸ್ಪತ್ರೆ ತೆರೆಯಬಾರದು?
---------------------
ವಸಂತ ಕಾಲ ಬಂದಾಗಲೇ ಕಾಗೆಯೋ ಕೋಗಿಲೆಯೋ ಎಂದು ಗೊತ್ತಾಗೋದು - ಸಿ.ಟಿ.ರವಿ, ಸಚಿವ
ಆದರೆ ರಣಹದ್ದುಗಳಿಗೆ ವಸಂತಕಾಲವೇ ಬರಬೇಕು ಎಂದಿಲ್ಲ
---------------------
ಸದ್ಯದಲ್ಲೇ ಬಿಜೆಪಿಗೆ ಮಾರಿಹಬ್ಬ ಕಾದಿದೆ - ಕುಮಾರಸ್ವಾಮಿ, ಮಾಜಿಮುಖ್ಯಮಂತ್ರಿ.
ಬಲಿಕೊಡುವುದಕ್ಕೆ ಕುರಿಯೊಂದು ಬೇಕಾಗಿದೆಯಂತೆ. ಹೋಗುತ್ತೀರಾ?
---------------------
ನಮ್ಮ ಸಿನೆಮಾ ನಟ-ನಟಿಯರು ಮನಸ್ಸು ಮಾಡಿದರೆ ಕನ್ನಡ ಶಾಲೆಗಳಿಗೆ ಮರುಜೀವ ನೀಡಬಹುದು - ಎಚ್.ಎಸ್ ವೆಂಕಟೇಶ ಮೂರ್ತಿ, ಸಾಹಿತಿ.
ಸಂಸ್ಕೃತದಲ್ಲಿ ಸಿನೆಮಾ ಮಾಡುವ ಮೂಲಕವಾಗಿರಬಹುದೇ?
---------------------
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿಚಾರದಲ್ಲಿ ಯಾರಿಗಾದರೂ ಅನ್ಯಾಯವಾದರೆ ನಾನು ಬಾಧಿತರ ಪರ ನಿಲ್ಲುವೆ - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ.
ಅಂದರೆ ಅನ್ಯಾಯವಾಗುವವರಿಗೆ ಕಾಯಿರಿ ಎಂದು ಹೇಳುತ್ತಿದ್ದೀರಿ.
---------------------
ಗೋವು ಹತ್ಯೆ ಗೈಯುವ ಮನುಷ್ಯರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅದೇ ರೀತಿ ಗೋವನ್ನು ಕೊಲ್ಲುವ ಹುಲಿಗೂ ಶಿಕ್ಷೆ ಕೊಡಿ - ಚರ್ಚಿಲ್ ಅಲೆಮಾವೊ, ಗೋವಾ ಶಾಸಕ.
ಒಬ್ಬೊಬ್ಬರಾಗಿ ಗೋರಕ್ಷಕರನ್ನು ಹುಲಿಗಳಿರುವ ಕಾಡಿಗೆ ಕಳುಹಿಸಿಕೊಟ್ಟರೆ ಹೇಗೆ?
---------------------
ಆರ್ಥಿಕ ಅಸಮಾನತೆಯೇ ಇಲ್ಲದ ರಾಮ ರಾಜ್ಯದತ್ತ ಪಯಣ ಆರಂಭಿಸುವ ಸಮಯ ಈಗ ಶುರುವಾಗಿದೆ - ಉಮಾಭಾರತಿ, ಬಿಜೆಪಿ ನಾಯಕಿ.
ಪುಷ್ಪಕ ವಿಮಾನದ ಟಿಕೆಟ್ ದರ ಎಷ್ಟು?
---------------------
ಸಿಎಎ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಿ ಮುಸ್ಲಿಮರಲ್ಲಿ ಭಯ ಹುಟ್ಟಿಸಲಾಗಿದೆ - ರಜನಿಕಾಂತ್, ನಟ.
ಐಟಿ ದಾಳಿಯ ಕುರಿತಂತೆ ನಿಮ್ಮಳಗೆ ಸೃಷ್ಟಿಸಿರುವ ಭಯದ ಬಗ್ಗೆ ಮೊದಲು ಮಾತನಾಡಿ.
---------------------
ಜಮ್ಮು- ಕಾಶ್ಮೀರದ 370 ವಿಧಿ ರದ್ದತಿಯಿಂದ ಪ್ರಧಾನಿ ಮೋದಿ ಮಾರಕ ತಪ್ಪು ಎಸಗಿದ್ದಾರೆ - ಇಮ್ರಾನ್ ಖಾನ್, ಪಾಕ್ ಪ್ರಧಾನಿ.
ಅವರನ್ನು ಪ್ರಧಾನಿ ಮಾಡಿದ ತಪ್ಪಿಗೆ ತೆತ್ತ ಬೆಲೆ.
---------------------
ಸೋತವರಿಗೆಲ್ಲ ಮಂತ್ರಿ ಸ್ಥಾನ ನೀಡುತ್ತಾ ಹೋದರೆ ಬಿಜೆಪಿಗೆ ಮುಜುಗರವಾಗುತ್ತದೆ - ರೇಣುಕಾಚಾರ್ಯ, ಶಾಸಕ.
ಮುತ್ತಿಟ್ಟವರಿಗೆಲ್ಲ ಸಚಿವ ಸ್ಥಾನಕೊಟ್ಟರೆ ಮುಜುಗರವಾಗುವುದಿಲ್ಲವೇ?
---------------------
ಕನ್ನಡಾಂಬೆಯನ್ನು ತಾಯಿ ಭಾರತೀಯ ವಿರುದ್ಧ ಎತ್ತಿ ಕಟ್ಟುವ ಷಡ್ಯಂತ್ರವನ್ನು ಸಹಿಸಲು ಸಾಧ್ಯವಿಲ್ಲ - ಸಿ.ಟಿ.ರವಿ, ಸಚಿವ.
ಕನ್ನಡಾಂಬೆಯ ವಿರುದ್ಧ ಪೆಟ್ರೋಲ್ ಬಾಂಬ್ ಹಾಕಿದವರನ್ನು ಸಹಿಸಬಹುದೇ?
---------------------
ಜನರು ಸಹಕರಿಸದಿದ್ದರೆ ಕನ್ನಡ ಶಾಲೆಗಳ ಉಳಿವು ಕಷ್ಟ - ಯಡಿಯೂರಪ್ಪ, ಮುಖ್ಯಮಂತ್ರಿ.
ಮೊದಲು ಸರಕಾರ ಉಳಿಸಲು ಸಚಿವರು ಸಹಕರಿಸುತ್ತಾರೆಯೇ ಎನ್ನುವುದರ ಬಗ್ಗೆ ಯೋಚನೆ ಮಾಡಿ.
---------------------
ಲವೊಮ್ಮೆ ನಾವು ರಾಜಕೀಯ ಸನ್ಯಾಸವನ್ನು ಸ್ವೀಕರಿಸಬೇಕಾಗುತ್ತದೆ - ರೇಣುಕಾಚಾರ್ಯ, ಶಾಸಕ.
ಕಳ್ಳಬೆಕ್ಕು ಸ್ವೀಕರಿಸಿದ ಹಾಗೆ.
---------------------
ಮುಂದೆ ನಾನು ಕರ್ನಾಟಕದ ಮುಖ್ಯಮಂತ್ರಿಯಾಗುತ್ತೇನೆ - ಉಮೇಶ್ ಕತ್ತಿ, ಶಾಸಕ.
ಯಾರ ಕುತ್ತಿಗೆಗೆ ಕತ್ತಿ ಇಡಲು ಹೊರಟಿದ್ದೀರಿ?
--------------------
ಇಂಟರ್‌ನೆಟ್ ಜನರ ಮೂಲಭೂತ ಹಕ್ಕಲ್ಲ - ರವಿಶಂಕರ ಪ್ರಸಾದ್, ಕೇಂದ್ರ ಸಚಿವ.
ಕನಿಷ್ಠ ಬದುಕುವ ಹಕ್ಕನ್ನಾದರೂ ಉಳಿಸಿ.
---------------------
ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್-ಆಪ್‌ನ ಪಾಲುದಾರಿಕೆ ಇದೆ - ಅಮಿತ್ ಶಾ, ಕೇಂದ್ರ ಸಚಿವ.
ಸಿಎಎ ಕಾಯ್ದೆ ತರುವ ಮೂಲಕ ನಿಮ್ಮ ಪಾಲುದಾರಿಕೆಯೂ ಇದೆಯಲ್ಲವೆ?
---------------------
ಅಧಿಕಾರಿಗಳು ಹಳ್ಳಿಗಳಿಗೆ ಹೋಗದಿದ್ದರೆ ಮನೆಗೆ ಹೋಗಲಿ - ಆರ್.ಅಶೋಕ್, ಸಚಿವ.
ಹಳ್ಳಿಗಳಲ್ಲಿ ಜನರೇ ಇಲ್ಲ ಎನ್ನುವಾಗ ಅವರು ಹೋಗಿ ಏನು ಮಾಡುವುದು?
---------------------
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಭಾರದಿಂದಲೇ ಕುಸಿಯುವುದು ಖಂಡಿತ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.
ಆರೆಸ್ಸೆಸ್‌ನ ಭಾರವೇ ಸಾಕು.
---------------------
ಶೃಂಗೇರಿ ಸಾಹಿತ್ಯ ಸಮ್ಮೇಳನದ ಅಹಿತಕರ ಘಟನೆಗಳ ಬಗ್ಗೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ - ಮನು ಬಳಿಗಾರ್, ಕಸಾಪ ಅಧ್ಯಕ್ಷ.
ಅಂದರೆ ಪೆಟ್ರೋಲ್ ಬಾಂಬ್ ಬೆದರಿಕೆ ಬಂದಿದ್ದು ನಿಮಗೆ ಅಂತೀರಾ?
---------------------
ಪಕ್ಷಾಂತರ ಮಾಡಿದ ಶಾಸಕರೆಲ್ಲರೂ ಜೊತೆಗಿದ್ದೇವೆ ಎಂದು ತೋರಿಸಲು ಯಾವಾಗಲೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಇರಲಿಕ್ಕೆ ಆಗುತ್ತದೆಯೇ? - ಎಚ್.ವಿಶ್ವನಾಥ್, ಮಾಜಿ ಶಾಸಕ.
ರೆಸಾರ್ಟ್‌ನಲ್ಲಿ ಮಾತ್ರ ತಬ್ಬಿಕೊಳ್ಳುವುದು ಎಂದು ಒಪ್ಪಂದ ಆಗಿರಬೇಕು.
---------------------
ಡಿಸಿಎಂ ಹುದ್ದೆ ಬಗ್ಗೆ ನಾನು ಇನ್ನು ಮಾತನಾಡೋಲ್ಲ - ಶ್ರೀರಾಮುಲು, ಸಚಿವ
ನೇರವಾಗಿ ಸಿಎಂ ಹುದ್ದೆ ಬಗ್ಗೆ ಮಾತನಾಡಿ