varthabharthi


ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ದೇಶದ ಒಳದನಿಯ ಆಲಿಸುವ ಪ್ರಯತ್ನ

ವಾರ್ತಾ ಭಾರತಿ : 10 Feb, 2020
-ಕಾರುಣ್ಯಾ

ಕಾಲಕ್ಕೆ ಒಂದು ಅಭೂತಪೂರ್ವ ಶಕ್ತಿಯಿದೆ. ದಮನಗಳು ಆರಂಭವಾದಂತೆಯೇ ಅದರೊಳಗಿಂದಲೇ ಪ್ರತಿರೋಧದ ಶಕ್ತಿಗಳು ಹುಟ್ಟುತ್ತವೆ. ಇಂತಹವರು ಅದರ ನಾಯಕರಾಗಿದ್ದರೆ ಚೆನ್ನಾಗಿತ್ತು ಎಂದು ನಾವು ಅವರೆಡೆಗೆ ಕತ್ತು ಮಾಡಿ ನೋಡುತ್ತಿದ್ದಂತೆಯೇ, ದಮನಗಳೇ ಹೊಸ ನಾಯಕರನ್ನು ಸೃಷ್ಟಿಸುತ್ತದೆ. ಹತಾಶೆಯಿಂದ ಎಲ್ಲ ಮುಗಿಯಿತೇನೋ ಎಂದು ಕುಳಿತವರನ್ನು ಅಚ್ಚರಿಗೆಗೆೆಡಹುವಂತೆ ನಾಲ್ದಿಕ್ಕಿನಿಂದ ಪ್ರತಿರೋಧಗಳ ಧ್ವನಿ ಮೊಳಗುತ್ತವೆ ಮತ್ತು ಸರ್ವಾಧಿಕಾರಿಯೇ ಆ ಬೆಳವಣಿಗೆಯಿಂದ ಬೆಚ್ಚಿ ಬೆರಗಾಗಬೇಕಾಗುತ್ತದೆ. ಯುಪಿಎ ಆಡಳಿತ ಕಾಲದಲ್ಲಿ ಹುಟ್ಟಿದ ಅಂತಹದೊಂದು ಅನಿರೀಕ್ಷಿತ ನಾಯಕ ಕೇಜ್ರಿವಾಲ್. ಇನ್ನೇನು ಅವರು ಈ ದೇಶದ ವಿರೋಧ ಪಕ್ಷದ ನಾಯಕತ್ವದ ಮುಂದಾಳು ಆಗಿ ಬಿಡುತ್ತಾರೆಯೋ ಎನ್ನುವಾಗ, ದಿಲ್ಲಿಯ ಮುಖ್ಯಮಂತ್ರಿಗಳಾಗಿ ಅದರ ಜಂಜಾಟದೊಳಗೇ ಕಳೆದುಹೋಗುವ ಸನ್ನಿವೇಶ ನಿರ್ಮಾಣವಾಯಿತು. ಆದರೂ ಕಾಂಗ್ರೆಸ್‌ಗಿಂತ ಪ್ರಬಲವಾಗಿ ಪ್ರಧಾನಿ ಮೋದಿಯನ್ನು ಎದುರಿಸಿದ್ದು ಕೇಜ್ರಿವಾಲ್ ಎನ್ನುವುದನ್ನು ಮರೆಯಲಾಗುವುದಿಲ್ಲ. ಆದರೆ ಮುಖ್ಯಮಂತ್ರಿ ಸ್ಥಾನ ಅವರಿಗೆ ಕೆಲವು ಮಿತಿಗಳನ್ನು ಕಟ್ಟಿ ಹಾಕಿತು.

 ಮೋದಿ ಆಡಳಿತ ಪರೋಕ್ಷ ತುರ್ತು ಪರಿಸ್ಥಿತಿಯನ್ನು ಹೇರಿ ದೇಶವನ್ನು ನಿಯಂತ್ರಿಸ ತೊಡಗಿದಂತೆಯೇ, ಹಿರಿಯ ರಾಜಕಾರಣಿಗಳೆಲ್ಲ ಬಾಯಿ ಕಟ್ಟಿ ಕುಳಿತುಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಯಿತು. ಇದೇ ಸಂದರ್ಭದಲ್ಲಿ ‘ರೋಹಿತ್ ವೇಮುಲಾ’ ಆತ್ಮಹತ್ಯೆ ಪ್ರಕರಣವೊಂದು ಇಡೀ ದೇಶವನ್ನು ತಲ್ಲಣಗೊಳಿಸಿತು. ಆತನ ಪರವಾಗಿ ಜೆಎನ್‌ಯುವಿನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿಸಿದ್ದೇ ತಡ, ಆ ಜೈಲಿನಿಂದ ಒಬ್ಬ ನಾಯಕ ಹುಟ್ಟಿದ. ಆತನೇ ಕನ್ಹಯ್ಯ. ವಿಶೇಷವೆಂದರೆ ಈ ತರುಣನ ಮೂಲಕ ದೇಶಾದ್ಯಂತ ಮೂಲೆ ಮೂಲೆಗಳಲ್ಲಿ ಯುವನಾಯಕರು ಹುಟ್ಟ ತೊಡಗಿದರು. ಉನಾ ದಲಿತರ ದೌರ್ಜನ್ಯ ಜಿಗ್ನೇಶ್ ಮೇವಾನಿಯಂತಹ ನಾಯಕನನ್ನು ಹುಟ್ಟಿಸಿತು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಇಡೀ ದೇಶ ಬಂಡೆದ್ದಿರುವುದು ಇಂತಹ ಯುವಕರ ನೇತೃತ್ವದಲ್ಲಿ ಎನ್ನುವುದೇ ಭಾರತದ ರಾಜಕೀಯಕ್ಕೆ ಸಿಕ್ಕಿದ ಅಚ್ಚರಿಯ ತಿರುವು. ಹಿರಿಯ ಲೇಖಕರಾಗಿರುವ ಎನ್. ಎಸ್. ಶಂಕರ್ ಅವರು ಆ ಇಬ್ಬರು ತರುಣರನ್ನು ಸಂದರ್ಶನ ಮಾಡುವ ಮೂಲಕ, ಇಂದಿನ ರಾಜಕೀಯ ಸಂದಿಗ್ಧತೆಯನ್ನು ಬಿಚ್ಚಿಡುವ ಪ್ರಯತ್ನವನ್ನು ಮಾಡಿದ್ದಾರೆ. ಆ ಸಂದರ್ಶನವನ್ನು ಕಿರುಕೃತಿಯಾಗಿ ಬಹುರೂಪಿ ಪ್ರಕಾಶನ ಹೊರತಂದಿದೆ.

  ಕೃತಿಯಲ್ಲಿ ಕನ್ಹಯ್ಯ ಮತ್ತು ಜಿಗ್ನೇಶ್ ಅವರ ಹೋರಾಟ ದಾರಿಯ ಕಿರು ಪರಿಚಯ ಇದೆ. ಬಳಿಕ ಅವರ ಮುಂದೆ ವರ್ತಮಾನದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂದರ್ಶನ ಮಾಡಲಾಗಿದೆ. ಇಬ್ಬರು ಯುವ ನಾಯಕರ ಒಳದನಿಗಳು ಮಾತ್ರವಲ್ಲ, ಈ ದೇಶದ ಒಳದನಿಯನ್ನು ಆಲಿಸುವುದಕ್ಕಾಗಿಯೂ ನಾವು ಈ ಕಿರುಕೃತಿಯನ್ನು ಓದಬೇಕಾಗಿದೆ. ಪುಟ್ಟ ಕೃತಿಯಾದರೂ, ಇದು ಕೊಡುವ ರಾಜಕೀಯ ಒಳನೋಟ ಬಹುದೊಡ್ಡದು.

ಕೃತಿಯ ಒಟ್ಟು ಪುಟಗಳು 52. ಮುಖಬೆಲೆ 50 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)