ವಿಮಾ ನಿಗಮದ ಜೀವವಿಮೆಯ ಕನಸು
ಭಾಗ-1
1956ರಲ್ಲಿ ರಾಷ್ಟ್ರೀಕೃತ ಸಂಸ್ಥೆಯಾಗಿ ಸ್ಥಾಪನೆಗೊಂಡ ನಂತರ ಎಲ್‌ಐಸಿ ಎದುರು ಇದ್ದ ಆದ್ಯತೆ ಎಂದರೆ ಭಾರತದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿರುವ ಜನತೆಯನ್ನು ತಲುಪುವುದು. ಬ್ಯಾಂಕಿಂಗ್ ಕ್ಷೇತ್ರ ಇನ್ನೂ ಖಾಸಗಿ ಒಡೆತನದಲ್ಲೇ ಇದ್ದ ಸಂದರ್ಭದಲ್ಲಿ ಎಲ್‌ಐಸಿ ಹಳ್ಳಿ ಹಳ್ಳಿಯನ್ನು ತಲುಪಲು ಅನುಸರಿಸಿದ್ದು ಜಂಗಮ ಸ್ವರೂಪದ ವಹಿವಾಟನ್ನು. ಎಲ್ಲ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ತನ್ನ ಕಚೇರಿ ಸ್ಥಾಪಿಸದಿದ್ದರೂ ಏಜೆಂಟರ ಮೂಲಕ ಮನೆಮನೆಗೂ ತಲುಪಿದ ಎಲ್‌ಐಸಿ ಒಂದೆಡೆ ಅಲ್ಪಆದಾಯದಿಂದ ಜೀವನ ಸವೆಸುವ ಕೆಳ ಮಧ್ಯಮ ವರ್ಗಗಳಿಗೆ ಜೀವ ವಿಮೆಯ ಸುರಕ್ಷೆ ನೀಡಿದ್ದೇ ಅಲ್ಲದೆ ಲಕ್ಷಾಂತರ ಏಜೆಂಟರ ಜೀವನ ನಿರ್ವಹಣೆಗೆ ಕಾರಣವಾಗಿತ್ತು.
ನವ ಉದಾರವಾದದ ಉನ್ನತ ಹಂತದಲ್ಲಿ ನಾಲ್ಕನೆಯ ಔದ್ಯಮಿಕ ಕ್ರಾಂತಿಯ ಹೊಸ್ತಿಲಲ್ಲಿರುವ ಭಾರತ ತನ್ನ ಸ್ವಾವಲಂಬಿ ಸಮಾಜವಾದಿ ಆರ್ಥಿಕತೆಯ ಸಮಾಧಿಯನ್ನು ನಿರ್ಮಿಸಲು ಆರಂಭಿಸಿ ಮೂರು ದಶಕಗಳೇ ಕಳೆದಿವೆ. 1991ರಲ್ಲಿ ನರಸಿಂಹರಾವ್-ಮನಮೋಹನ್ ಸಿಂಗ್ ಜೋಡಿ ಶಿಲಾನ್ಯಾಸ ನೆರವೇರಿಸಿ ಚಾಲನೆ ನೀಡಿದ ಈ ಪ್ರಕ್ರಿಯೆಗೆ ಮೋದಿ-ನಿರ್ಮಲಾ ಸೀತಾರಾಮನ್ ಜೋಡಿ ಅಂತಿಮ ಸ್ಪರ್ಶ ನೀಡುತ್ತಿದೆ. ಭಾರತದ ಸಾರ್ವಜನಿಕ ಸಂಸ್ಥೆಗಳಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಜೀವ ವಿಮಾ ನಿಗಮಕ್ಕೆ ಚರಮಗೀತೆ ಹಾಡಲು ಆರಂಭವಾಗುತ್ತಿರುವಂತೆಯೇ ವಿಮಾ ಕ್ಷೇತ್ರದ ಕಾರ್ಮಿಕ ಸಂಘಟನೆಗಳು ನಿದ್ರೆಯಿಂದ ಎಚ್ಚೆತ್ತಂತೆ ಕಾಣುತ್ತಿದೆ. ಹಣಕಾಸು ಕ್ಷೇತ್ರವನ್ನು ಖಾಸಗೀಕರಣಕ್ಕೊಳಪಡಿಸುವ ಮೂಲಕ ಜಾಗತಿಕ ಹಣಕಾಸು ಬಂಡವಾಳದ ಆಧಿಪತ್ಯಕ್ಕೆ ಪೂರ್ಣ ಪ್ರಮಾಣದ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ನೀಡಲು ಮುಂದಾಗಿರುವ ನರೇಂದ್ರ ಮೋದಿ ಸರಕಾರ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ನಿರ್ಧರಿಸಿರುವುದು ಅಚ್ಚರಿಯೇನಲ್ಲ. ಭಾರತದ ಸಮಾಜವಾದಿ ಸ್ವಾವಲಂಬಿ ಆರ್ಥಿಕತೆಯ ಶವಪೆಟ್ಟಿಗೆಗೆ ಹೊಡೆದಿರುವ ಮೊಳೆಗಳಲ್ಲಿ ಇದು ಪ್ರಮುಖವಾದದ್ದು. ಕೊನೆಯ ಮೊಳೆ ಹೊಡೆಯಲು ಇದು ನೆರವಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದ ಅವಸಾನದೊಂದಿಗೆ ಶವಪೆಟ್ಟಿಗೆ ಹೂಳಲು ಸಿದ್ಧವಾಗುತ್ತದೆ.
ಎಲ್‌ಐಸಿ ಭಾರತದ ಜನಮಾನಸದಲ್ಲಿ ಒಂದು ಅವ್ಯಕ್ತ ಅಭಿವ್ಯಕ್ತಿಯಾಗಿ ರೂಪುಗೊಂಡಿದೆ. 1991ರ ಜಾಗತೀಕರಣದ ನಂತರ ಭಾರತದಲ್ಲಿ ಅಸಂಖ್ಯಾತ ವಿದೇಶಿ ವಿಮಾ ಕಂಪೆನಿಗಳು, ದೇಶೀ ಖಾಸಗಿ ವಿಮಾ ಕಂಪೆನಿಗಳು ಆರಂಭವಾಗಿವೆ. ಕೆಲವು ಸದ್ದಿಲ್ಲದೆ ಮರೆಯಾಗಿರುವುದೂ ಉಂಟು. ರಾಷ್ಟ್ರೀಕೃತ ಬ್ಯಾಂಕುಗಳು ಹೊಂದಾಣಿಕೆ ಮಾಡಿಕೊಂಡಿದ್ದ ಹಲವು ವಿಮಾ ಕಂಪೆನಿಗಳು ಕಸದ ಬುಟ್ಟಿ ಸೇರಿವೆ. ಇದು ಒತ್ತಟ್ಟಿಗಿರಲಿ. ಯಾವುದೇ ವಿದೇಶಿ ಅಥವಾ ಖಾಸಗಿ ವಿಮಾ ಕಂಪೆನಿಯಲ್ಲಿ ವಿಮೆ ಮಾಡಿಸಿದರೂ ಭಾರತದ ಜನಸಾಮಾನ್ಯರು ಹೇಳುವುದು ‘‘ಎಲ್‌ಐಸಿ’’ ಮಾಡಿಸಿದ್ದೇವೆ ಎಂದು. ಐಸಿಐಸಿಐ ಬ್ಯಾಂಕಿನಲ್ಲಿ ಎಲ್‌ಐಸಿ ಮಾಡಿಸಿದ್ದೇನೆ, ಎಚ್‌ಡಿಎಫ್‌ಸಿಯಲ್ಲಿ ಎಲ್‌ಐಸಿ ಮಾಡಿಸಿದ್ದೇನೆ ಎಂದು ಹೇಳುವವರ ಸಂಖ್ಯೆ ಹೇರಳವಾಗಿದೆ. ಕಳೆದ 63 ವರ್ಷಗಳ ಇತಿಹಾಸದಲ್ಲಿ ಎಲ್‌ಐಸಿ ಜನಮಾನಸದಲ್ಲಿ ಮನೆ ಮಾಡಿರುವುದು ಹೀಗೆ. ಇದಕ್ಕೆ ಕಾರಣ ಈ ಸಂಸ್ಥೆಯ ವ್ಯಾಪ್ತಿ, ವಿಸ್ತಾರ, ಹರವು ಮತ್ತು ಸೇವೆ. ದೇಶದ ಮೂಲೆ ಮೂಲೆಗಳನ್ನೂ ತಲುಪಿರುವ ಎಲ್‌ಐಸಿ ಅಸಂಖ್ಯಾತ ಕಾರ್ಮಿಕರಿಗೆ, ಸಣ್ಣ ವ್ಯಾಪಾರಿಗಳಿಗೆ, ಕೃಷಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಕಾಮಧೇನುವಿನಂತೆ ಕಾರ್ಯ ನಿರ್ವಹಿಸಿದೆ. ಹಾಗಾಗಿಯೇ ಭಾರತದಲ್ಲಿ ಎಲ್‌ಐಸಿ ಎನ್ನುವುದು ವಿಮೆ ಎನ್ನುವ ಪದಕ್ಕೆ ಸಮಾನಾರ್ಥಕವಾಗಿಯೇ ಕೇಳಿಬರುತ್ತದೆ. ಈ ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸಿದ್ದು ಕೇವಲ ರಾಜಕೀಯ ಕಾರಣಗಳಿಗಾಗಿ ಅಲ್ಲ. ಇದರ ಹಿಂದೆ ವಂಚಕ ವಿಮಾ ಕಂಪೆನಿಗಳ ಕರಾಳ ಇತಿಹಾಸವೂ ಇದೆ.
1818ರಲ್ಲಿ ಓರಿಯೆಂಟಲ್ ಜೀವ ವಿಮಾ ಕಂಪೆನಿಯ ಉಗಮದೊಂದಿಗೆ ಆರಂಭವಾದ ಭಾರತದ ವಿಮಾ ಕ್ಷೇತ್ರದ ಚರಿತ್ರೆಯಲ್ಲಿ ಹಲವಾರು ಕರಾಳ ಪುಟಗಳಿವೆ. ಭಾರತದಲ್ಲಿ ನೆಲೆಸಿದ್ದ ಯೂರೋಪ್ ಪ್ರಜೆಗಳಿಗೆ ನೆರವಾಗಲು ಸ್ಥಾಪನೆಯಾದ ಈ ಕಂಪೆನಿಯ ವಿಮೆಯ ಕಂತು ಸಾಮಾನ್ಯ ಜನತೆಗೆ ಗಗನಕುಸುಮವಾಗಿತ್ತು. 1870ರಲ್ಲಿ ಭಾರತದ ಪ್ರಪ್ರಥಮ ಸ್ವದೇಶಿ ವಿಮಾ ಕಂಪೆನಿ ಬಾಂಬೆ ಮ್ಯೂಚುಯಲ್ ಜೀವ ವಿಮಾ ಸೊಸೈಟಿ ಸ್ಥಾಪನೆಯಾಗಿತ್ತು. ತದನಂತರದಲ್ಲಿ 1884ರ ಅಂಚೆ ಜೀವ ವಿಮೆ, 1896ರ ಭಾರತ್ ವಿಮಾ ಕಂಪೆನಿ, 1906ರ ಯುನೈಟೆಡ್ ಇಂಡಿಯಾ ಮತ್ತು ನ್ಯಾಷನಲ್ ಇಂಡಿಯನ್, ನ್ಯಾಷನಲ್ ವಿಮೆ, ಕೋ ಆಪರೇಟಿವ್ ಅಶ್ಶೂರನ್ಸ್, 1907ರ ಹಿಂದೂಸ್ಥಾನ್ ಕೋಆಪರೇಟಿವ್ಸ್, ಇಂಡಿಯನ್ ಮರ್ಕಂಟೈಲ್, ಜನರಲ್ ಇನ್ಶೂರನ್ಸ್, ಸಹ್ಯಾದ್ರಿ ವಿಮಾ ಕಂಪೆನಿ ಮುಂತಾದವು ಆರಂಭವಾದವು. 20ನೆಯ ಶತಮಾನದ ಆರಂಭದಲ್ಲಿ ತೀವ್ರಗೊಂಡ ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಇದೇ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ತಲೆದೋರಿದ ತೀವ್ರ ಕ್ಷಾಮ ಭಾರತದ ಹಲವಾರು ವಿಮಾ ಕಂಪೆನಿಗಳ ಅವಸಾನಕ್ಕೆ ಕಾರಣವಾಗಿತ್ತು. ಜನಸಾಮಾನ್ಯರು ವಿಮಾ ಕಂಪೆನಿಗಳಲ್ಲಿ ವಿಶ್ವಾಸ ಕಳೆದುಕೊಳ್ಳಲಾರಂಭಿಸಿದ್ದರು.
ಇದೇ ಸಂದರ್ಭದಲ್ಲಿ ಹಲವಾರು ವಿಮಾ ಕಂಪೆನಿಗಳಲ್ಲಿ ವಂಚನೆಯ ಪ್ರಕರಣಗಳೂ ಹೆಚ್ಚಾಗಿದ್ದವು. ಟೈಮ್ಸ್ ಆಫ್ ಇಂಡಿಯಾದ ರಾಮಕೃಷ್ಣ ದಾಲ್ಮಿಯಾ ಅವರ ವಿಮಾ ಕಂಪೆನಿ ಜನರು ಪಾವತಿಸಿದ್ದ ಕಂತಿನ ಹಣವನ್ನು ದುರ್ಬಳಕೆ ಮಾಡುತ್ತಿರುವ ಪ್ರಕರಣವನ್ನು 1955ರಲ್ಲಿ ಸಂಸದ ಫಿರೋಝ್ ಗಾಂಧಿ ಬಹಿರಂಗಪಡಿಸಿದ್ದರು. ಸಂಸತ್ತಿನ ಚರ್ಚೆಯೊಂದರಲ್ಲಿ ಈ ವಿಷಯವನ್ನು ಫಿರೋಝ್ ಗಾಂಧಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ದಾಲ್ಮಿಯಾ ಅವರನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲೇ ನೆಹರೂ ಸರಕಾರ ವಿಮಾ ಕಂಪೆನಿಗಳನ್ನು ರಾಷ್ಟ್ರೀಕರಣ ಮಾಡಲು ನಿರ್ಧರಿಸಿತ್ತು. 1956ರಲ್ಲಿ ಜಾರಿಯಾದ ಜೀವ ವಿಮಾ ಕಾಯ್ದೆಯ ಅನುಸಾರ ಭಾರತೀಯ ಜೀವ ವಿಮಾ ನಿಗಮ ಸ್ಥಾಪನೆಯಾಗಿತ್ತು. 245 ಖಾಸಗಿ ವಿಮಾ ಸಂಸ್ಥೆಗಳನ್ನು ಒಟ್ಟುಗೂಡಿಸಿ ಎಲ್‌ಐಸಿ ಸ್ಥಾಪಿಸಲಾಗಿತ್ತು. ಇವುಗಳ ಪೈಕಿ 154 ಜೀವ ವಿಮಾ ಕಂಪೆನಿಗಳು, 16 ವಿದೇಶಿ ಕಂಪೆನಿಗಳು ಮತ್ತು 75 ಪ್ರಾವಿಡೆಂಟ್ ಕಂಪೆನಿಗಳು ಇದ್ದವು. ಜೀವ ವಿಮೆ ಕ್ಷೇತ್ರವನ್ನೂ ಒಳಗೊಂಡಂತೆ ಅರ್ಥವ್ಯವಸ್ಥೆಯ 17 ಕ್ಷೇತ್ರಗಳಲ್ಲಿ ಸರಕಾರದ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ನೆಹರೂ ಸರಕಾರ ಜಾರಿಗೊಳಿಸಿದ್ದ 1956ರ ಔದ್ಯಮಿಕ ನೀತಿ ನಿರ್ಣಯದ ಅನುಸಾರ ಎಲ್‌ಐಸಿ ರಾಷ್ಟ್ರೀಕೃತ ಸಂಸ್ಥೆಯಾಗಿ ರೂಪುಗೊಂಡಿತ್ತು.
ಎಲ್‌ಐಸಿ ಸಾಧನೆಯ ಹಾದಿ
ಭಾರತೀಯ ಜೀವ ವಿಮಾ ನಿಗಮ ಕೇವಲ ಜನಸಾಮಾನ್ಯರ ಬದುಕಿಗೆ ಆಶಾಕಿರಣವಾಗಿ ಬೆಳೆದಿಲ್ಲ. ಭಾರತದ ಹಲವು ಸಾರ್ವಜನಿಕ ಉದ್ದಿಮೆಗಳಿಗೂ ಜೀವ ದಾನ ನೀಡಿದೆ. 1956ರಲ್ಲಿ ರಾಷ್ಟ್ರೀಕೃತ ಸಂಸ್ಥೆಯಾಗಿ ಸ್ಥಾಪನೆಗೊಂಡ ನಂತರ ಎಲ್‌ಐಸಿ ಎದುರು ಇದ್ದ ಆದ್ಯತೆ ಎಂದರೆ ಭಾರತದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿರುವ ಜನತೆಯನ್ನು ತಲುಪುವುದು. ಬ್ಯಾಂಕಿಂಗ್ ಕ್ಷೇತ್ರ ಇನ್ನೂ ಖಾಸಗಿ ಒಡೆತನದಲ್ಲೇ ಇದ್ದ ಸಂದರ್ಭದಲ್ಲಿ ಎಲ್‌ಐಸಿ ಹಳ್ಳಿ ಹಳ್ಳಿಯನ್ನು ತಲುಪಲು ಅನುಸರಿಸಿದ್ದು ಜಂಗಮ ಸ್ವರೂಪದ ವಹಿವಾಟನ್ನು. ಎಲ್ಲ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ತನ್ನ ಕಚೇರಿ ಸ್ಥಾಪಿಸದಿದ್ದರೂ ಏಜೆಂಟರ ಮೂಲಕ ಮನೆಮನೆಗೂ ತಲುಪಿದ ಎಲ್‌ಐಸಿ ಒಂದೆಡೆ ಅಲ್ಪಆದಾಯದಿಂದ ಜೀವನ ಸವೆಸುವ ಕೆಳ ಮಧ್ಯಮ ವರ್ಗಗಳಿಗೆ ಜೀವ ವಿಮೆಯ ಸುರಕ್ಷೆ ನೀಡಿದ್ದೇ ಅಲ್ಲದೆ ಲಕ್ಷಾಂತರ ಏಜೆಂಟರ ಜೀವನ ನಿರ್ವಹಣೆಗೆ ಕಾರಣವಾಗಿತ್ತು. ಬಡ ಮಧ್ಯಮ ವರ್ಗಗಳು, ಕೂಲಿ ನಾಲಿ ಮಾಡುವ ಕಾರ್ಮಿಕರು, ಸಾರ್ವಜನಿಕ ಉದ್ದಿಮೆಯ ನೌಕರರು, ಖಾಸಗಿ ಉದ್ದಿಮೆಯ ನೌಕರರು, ಹಿರಿಯ ಅಧಿಕಾರಿಗಳು, ಉನ್ನತ ಸರಕಾರಿ ಅಧಿಕಾರಿಗಳು ಹೀಗೆ ಎಲ್ಲ ಹಂತದ ಕಾರ್ಮಿಕರನ್ನು ಒಳಗೊಂಡ ಎಲ್‌ಐಸಿ 1990ರ ದಶಕದವರೆಗೂ ಮಾಸಿಕ ಕನಿಷ್ಠ 10ರಿಂದ 15ರೂ. ಪ್ರೀಮಿಯಂ ಇರುವ ಜೀವವಿಮಾ ಪಾಲಿಸಿಯನ್ನು ನೀಡಿರುವುದು ಸಂಸ್ಥೆಯ ವೈಶಿಷ್ಟ್ಯ. ಏಜೆಂಟರ ಮುಖಾಂತರ ಜೀವ ವಿಮೆ ಮಾಡಿಸುವ ಮೂಲಕ ಚಲಿಸುವ ಸಂಸ್ಥೆಯನ್ನೇ ಸೃಷ್ಟಿಸಿದ್ದ ಎಲ್‌ಐಸಿ ಈ ಏಜೆಂಟರ ಜೀವನಕ್ಕೆ ಸುಭದ್ರ ಬುನಾದಿಯನ್ನು ನಿರ್ಮಿಸಿದ್ದೂ ಹೌದು.
ಕಳೆದ ಹತ್ತು ವರ್ಷಗಳಿಂದ ಎಲ್‌ಐಸಿ ಏಜೆಂಟರ ಸಂಖ್ಯೆ ಕಡಿಮೆಯಾಗುತ್ತಿದ್ದರೂ 2018ರ ಮಾರ್ಚ್ 31ರ ವೇಳೆಗೆ 10,71,945 ಸಕ್ರಿಯ ಏಜೆಂಟರು ಸಂಸ್ಥೆಯ ಸಾರಥಿಗಳಾಗಿದ್ದರು. 2010ರಿಂದ 2016ರ ಅವಧಿಯಲ್ಲಿ 2,75,000 ಏಜೆಂಟರು ಸಂಸ್ಥೆಯನ್ನು ತೊರೆದಿದ್ದರು. 2010ರಲ್ಲಿ 13 ಲಕ್ಷ 30 ಸಾವಿರ ಇದ್ದ ಏಜೆಂಟರ ಸಂಖ್ಯೆ 2015-16ರ ವೇಳೆಗೆ 10 ಲಕ್ಷ 6 ಸಾವಿರಕ್ಕೆ ಕುಸಿದಿತ್ತು. ಇದಕ್ಕೆ ಮೂಲ ಕಾರಣ ಖಾಸಗಿ ಮತ್ತು ವಿದೇಶಿ ವಿಮಾ ಕಂಪೆನಿಗಳ ಪ್ರವೇಶ ಮತ್ತು ಸಾರ್ವಜನಿಕ ಬ್ಯಾಂಕುಗಳೂ ಸಹ ಖಾಸಗಿ ಒಡಂಬಡಿಕೆಯೊಂದಿಗೆ ವಿಮಾ ಕ್ಷೇತ್ರವನ್ನು ಪ್ರವೇಶಿಸಿದ್ದು. ತಮ್ಮ ಅಂತ್ಯ ಕಾಲಕ್ಕೆ ಕೊಂಚ ಹಣ ಒದಗಿ ಬಂದರೆ ಕುಟುಂಬದವರಿಗೆ ನೆರವಾಗುತ್ತದೆ ಎನ್ನುವ ಆಶಯ ಹೊತ್ತು ನಿತ್ಯ ಕಾಯಕದಲ್ಲಿ ತೊಡಗುವ ಲಕ್ಷಾಂತರ ಜನತೆಗೆ ಆಶಾಕಿರಣವಾಗಿ ರೂಪುಗೊಂಡಿರುವ ಎಲ್‌ಐಸಿ 2005ರ ವೇಳೆಗೇ ಒಂದು ಕೋಟಿಗೂ ಹೆಚ್ಚು ಪಾಲಿಸಿಗಳನ್ನು ವಿತರಿಸಿತ್ತು. (ಅಕ್ಟೋಬರ್ 2005ರ ವೇಳೆಗೆ 1,01,32,955 ಪಾಲಿಸಿಗಳು). ವಿಮಾ ಪಾಲಿಸಿ ಮಾಡಿಸಿದವರಿಗೆ ನೆರವಾದಷ್ಟೇ ಈ ಪಾಲಿಸಿಗಳನ್ನು ಗಳಿಸಲು ಜನಸಾಮಾನ್ಯರ ಬೆನ್ನಟ್ಟಿ, ಅವರ ಮನ ಒಲಿಸಿ, ಆರಂಭಿಕ ಪ್ರೀಮಿಯಂಗಳನ್ನು ತಾವೇ ಭರಿಸಿ ತಮ್ಮ ಜೀವನ ನಿರ್ವಹಿಸಿದ ಲಕ್ಷಾಂತರ ಏಜೆಂಟರೂ ಸಹ ಎಲ್‌ಐಸಿಯಿಂದ ಬದುಕು ಸವೆಸಿದ್ದಾರೆ. ಇದನ್ನು ಒಂದು ಸಾರ್ವಜನಿಕ ರಾಷ್ಟ್ರೀಕೃತ ಸಂಸ್ಥೆ ಮಾತ್ರವೇ ಸಾಧಿಸಲು ಸಾಧ್ಯ ಎನ್ನುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಿದೆ.