ಹಿಂದೂಗಳಿಗೂ ವಿರುದ್ಧ ಪೌರತ್ವ ತಿದ್ದುಪಡಿ ಕಾಯ್ದೆ
ಅಸ್ಸಾಂ ಒಂದರಲ್ಲೇ 19 ಲಕ್ಷ ಜನ ಸೂಕ್ತ ದಾಖಲೆಗಳಿಲ್ಲದೆ ಅತಂತ್ರರಾಗಿದ್ದಾರೆ. ಇವರಲ್ಲಿ 14 ಲಕ್ಷ ಮಂದಿ ಹಿಂದೂಗಳು ಎಂಬುದನ್ನು ಗಮನಿಸಬೇಕು. ತಾಯಿ ತಂದೆಯರ ಜನ್ಮದಿನಾಂಕ, ಜನ್ಮ ಸ್ಥಳಗಳನ್ನು ಕೇಳುವುದರಿಂದ ಅಸಂಖ್ಯಾತ ಜನರು ಅತಂತ್ರರಾಗುತ್ತಾರೆ. ಅಸ್ಸಾಮಿನಲ್ಲಿ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಸಂಬಂಧಿಕರು ಮತ್ತು ಮಾಜಿ ಮುಖ್ಯಮಂತ್ರಿ ಸೈಯದ್ ತೈಮೂರ್ ಬಂಧುಗಳಿಗೆ ಪೌರತ್ವ ಸಿಗದೆ ಇರುವ ಸನ್ನಿವೇಶ ಸೃಷ್ಟಿಯಾಗಿದೆ. ಇವರನ್ನೂ ಒಳಗೊಂಡಂತೆ ಸೂಕ್ತ ದಾಖಲೆಗಳಿಲ್ಲ ಎಂಬ ಒಂದೇ ಕಾರಣಕ್ಕೆ ಮೂವತ್ತು ವರ್ಷ ದೇಶಕ್ಕಾಗಿ ಹೋರಾಡಿದ ಸೈನಿಕ ಸನಾವುಲ್ಲಾ ಅವರಿಗೆ ಪೌರತ್ವ ನೀಡದೆ ಡಿಟೆನ್ಷನ್ ಕೇಂದ್ರದಲ್ಲಿ ಇಡಲಾಗಿತ್ತು. ಇದೇ ಸ್ಥಿತಿಯು ಅಸಂಖ್ಯಾತ ಹಿಂದೂಗಳಿಗೆ ಬರಲಿದೆ. ಯಾಕೆಂದರೆ ಈ ತಿದ್ದುಪಡಿ ಕಾಯ್ದೆಯಲ್ಲಿ ಕೈಬಿಟ್ಟಿರುವ ದೇಶಗಳಿಂದ ಭಾರತಕ್ಕೆ ಬಂದಿರುವ ವಲಸಿಗರಲ್ಲಿ ಹಿಂದೂಗಳೇ ಬಹುಸಂಖ್ಯಾತರು.
ಕೇಂದ್ರ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರೂಪಿಸಿ ಜಾರಿಗೆ ಮುಂದಾದ ಇಂದಿನ ಸಂದರ್ಭದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದಷ್ಟು ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾ ಕ್ರಿಯೆಗಳಿಗೆ ಆಡಳಿತ ಪಕ್ಷ ಹಾಗೂ ಸರಕಾರದಿಂದ ಪ್ರತಿ ರ್ಯಾಲಿಗಳೂ ನಡೆಯುತ್ತಿವೆ. ಹಿಂದೆಂದೂ ಕಂಡರಿಯದ ವಿದ್ಯಮಾನಗಳಿಗೆ ಸಾಕ್ಷಿ ಎಂಬಂತೆ ಕೆಲವು ರಾಜ್ಯಗಳ ವಿಧಾನಸಭೆಯಲ್ಲಿ ಈ ಕಾಯ್ದೆ ವಿರೋಧಿ ನಿರ್ಣಯಗಳನ್ನು ಸ್ವೀಕರಿಸಿ ಸಂವಿಧಾನಾತ್ಮಕ ಅವಕಾಶಗಳ ಹೊಸ ಚರ್ಚೆಗೆ ನಾಂದಿ ಹಾಡಲಾಗಿದೆ. ಒಟ್ಟಾರೆ ತೀವ್ರತರ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಆರ್ಥಿಕ ಹಾಗೂ ಅಭಿವೃದ್ಧಿ ಬಿಕ್ಕಟ್ಟುಗಳನ್ನು ಕಂತೆ ಕಟ್ಟಿ ಜಂತಿ ಮೇಲೆ ಇಡಲಾಗಿದೆ. ಆಳುವ ಸರಕಾರದ ಅಪೇಕ್ಷೆಯೂ ಇದೇ ಆಗಿದ್ದಿರಬೇಕು. ಆದರೆ ಅತ್ಯಂತ ಆತಂಕಕಾರಿ ಸಂಗತಿಯೆಂದರೆ ಪೌರತ್ವ ತಿದ್ದುಪಡಿ ಕಾಯ್ದೆಯು ಹಿಂದೂ- ಮುಸ್ಲಿಮ್ ಮುಖಾಮುಖಿಯ ಮುಖವನ್ನು ಪಡೆಯುತ್ತಿರುವುದು ಮತ್ತು ಇದು ಮುಸ್ಲಿಮರ ಸಮಸ್ಯೆ ಮಾತ್ರ ಎಂಬಂತೆ ಬಿಂಬಿತವಾಗುತ್ತಿರುವುದು. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಿಂದ ಭಾರತಕ್ಕೆ ಬಂದ ವಲಸಿಗರಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಧರ್ಮೀಯರಿಗೆ ಪೌರತ್ವ ಕೊಡುವ ಅವಕಾಶ ಕಲ್ಪಿಸಿರುವುದರಿಂದ ಧರ್ಮದಿಂದ ತಾರತಮ್ಯ ಇರುವುದು ಸ್ಪಷ್ಟ. ಈಗಾಗಲೇ ಭಾರತದ ಖಾಯಂ ನಿವಾಸಿಗಳಾಗಿರುವ ಮುಸ್ಲಿಮರ ವಿರೋಧವನ್ನು ಈ ಕಾಯ್ದೆ ಒಳಗೊಂಡಿಲ್ಲ ಎನ್ನುವುದೂ ಸ್ಪಷ್ಟ. ಆದರೆ ರಾಷ್ಟ್ರೀಯ ಪೌರರ ರಿಜಿಸ್ಟರ್ (ಎನ್‌ಆರ್‌ಸಿ) ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ (ಎನ್‌ಪಿಆರ್)ಗಳ ಜಾರಿಯನ್ನು ಪೌರತ್ವ ಕಾಯ್ದೆಯ ಜೊತೆಯಲ್ಲೇ ನೋಡಿದಾಗ ಮುಸ್ಲಿಮ್ ವಿರೋಧವನ್ನು ಒಳಗೊಂಡಂತೆ ಈ ದೇಶದ ಬಹುಸಂಖ್ಯಾತ ಹಿಂದೂಗಳಿಗೂ ಕಂಟಕವಾದ ವಿರೋಧಿ ಅಂಶಗಳು ಸ್ಪಷ್ಟವಾಗುತ್ತವೆ. ಈ ಅಂಶಗಳನ್ನು ಗೌಣಗೊಳಿಸಿ ಹಿಂದೂ-ಮುಸ್ಲಿಮ್ ಸಂಘರ್ಷದ ವಾತಾವರಣವನ್ನು ಸೃಷ್ಟಿಸುತ್ತಿರುವುದು ಹಾಗೂ ಪರ ಮತ್ತು ವಿರೋಧ ಎರಡೂ ನಿಲುವುಗಳು ಏಕಮುಖಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಈಗ ಪೌರತ್ವ ಕುರಿತು ಸಂವಿಧಾನದಲ್ಲಿರುವ 5ರಿಂದ 11ನೇ ಅನುಚ್ಛೇದಗಳನ್ನು ಗಮನಿಸಿ; ಅಂತೆಯೇ 1955ರಲ್ಲಿ ಬಂದ ಪೌರತ್ವ ಕಾಯ್ದೆಯನ್ನು ನೋಡಿ; ಅಲ್ಲಿ ಎಲ್ಲಿಯೂ ಧರ್ಮಾಧರಿತ ಮಾನದಂಡಗಳಿಲ್ಲ. ಆದರೆ ಈಗಿನ ಬಿಜೆಪಿ ಕೇಂದ್ರ ಸರಕಾರದ ಕಾಯ್ದೆಯಲ್ಲಿ ಧರ್ಮವೇ ಆದಿ ಮತ್ತು ಅಂತಿಮ ಆಧಾರ. ಜೊತೆಗೆ ಭಾರತಕ್ಕೆ ಹೊಂದಿಕೊಂಡ ಮುಸ್ಲಿಮ್ ಪ್ರಧಾನ ದೇಶಗಳನ್ನು ಮಾತ್ರ ಪರಿಗಣಿಸಿ ಉಳಿದ ದೇಶಗಳನ್ನು ಬಿಟ್ಟಿರುವ ತಾರತಮ್ಯ ಸ್ಪಷ್ಟ. ಈ ತಾರತಮ್ಯದಿಂದ ಬಹುಸಂಖ್ಯಾತ ಮುಸ್ಲಿಮೇತರ ಜನರ ಪೌರತ್ವಕ್ಕೆ ಧಕ್ಕೆಯಾಗಲಿದೆ; ಬಿಜೆಪಿಯನ್ನು ಒಳಗೊಂಡಂತೆ ಸಂಘ ಪರಿವಾರದವರೆಲ್ಲ ಮುಸ್ಲಿಮ್ ಹೊರತುಪಡಿಸಿದ ಎಲ್ಲಾ ಜಾತಿ ಧರ್ಮದವರನ್ನೂ ‘ಹಿಂದೂ ಧರ್ಮ’ದವರೆಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದ್ದರಿಂದ ಇವರ ದೃಷ್ಟಿಕೋನದಲ್ಲೇ ಈ ಕಾಯ್ದೆಯು ಹೇಗೆ ಹಿಂದೂಗಳಿಗೆ ವಿರೋಧಿಯಾಗುತ್ತದೆ ಎಂಬುದನ್ನು ನೋಡಬೇಕು. ಜೊತೆಗೆ ಕೇಂದ್ರ ಸರಕಾರವು ಏನೇ ಹೇಳಿದರೂ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ಗಳನ್ನು ಒಟ್ಟಿಗೆ ಗ್ರಹಿಸಬೇಕು. ಯಾಕೆಂದರೆ ಈ ಮೂರಕ್ಕೂ ಸಂಬಂಧ ಇರುವುದನ್ನು ಗೃಹ ಸಚಿವಾಲಯದ ದಾಖಲೆಗಳೇ ಖಾತರಿಪಡಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಎಷ್ಟು ಜನ ಹಿಂದೂ ವಲಸಿಗರಿಗೆ ಅನುಕೂಲವಾಗಬಹುದು? ಸಂಸತ್ ಜಂಟಿ ಸಮಿತಿ ಪ್ರಕಾರ 31,313 ಜನ ಹಿಂದೂಗಳು ಆ ಮೂರು ದೇಶಗಳಿಂದ ಬಂದಿದ್ದಾರೆ. ಆದರೆ ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕೇಳುವ ದಾಖಲೆಗಳಿಲ್ಲದೆ ಅತಂತ್ರರಾಗುವವರು ಕೋಟ್ಯಂತರ ಜನರೆಂಬುದನ್ನು ಗಮನಿಸಬೇಕು. ಅಸ್ಸಾಂ ಒಂದರಲ್ಲೇ 19 ಲಕ್ಷ ಜನ ಸೂಕ್ತ ದಾಖಲೆಗಳಿಲ್ಲದೆ ಅತಂತ್ರರಾಗಿದ್ದಾರೆ. ಇವರಲ್ಲಿ 14 ಲಕ್ಷ ಮಂದಿ ಹಿಂದೂಗಳು ಎಂಬುದನ್ನು ಗಮನಿಸಬೇಕು. ತಾಯಿ ತಂದೆಯರ ಜನ್ಮದಿನಾಂಕ, ಜನ್ಮ ಸ್ಥಳಗಳನ್ನು ಕೇಳುವುದರಿಂದ ಅಸಂಖ್ಯಾತ ಜನರು ಅತಂತ್ರರಾಗುತ್ತಾರೆ. ಅಸ್ಸಾಮಿನಲ್ಲಿ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಸಂಬಂಧಿಕರು ಮತ್ತು ಮಾಜಿ ಮುಖ್ಯಮಂತ್ರಿ ಸೈಯದ್ ತೈಮೂರ್ ಬಂಧುಗಳಿಗೆ ಪೌರತ್ವ ಸಿಗದೆ ಇರುವ ಸನ್ನಿವೇಶ ಸೃಷ್ಟಿಯಾಗಿದೆ. ಇವರನ್ನೂ ಒಳಗೊಂಡಂತೆ ಸೂಕ್ತ ದಾಖಲೆಗಳಿಲ್ಲ ಎಂಬ ಒಂದೇ ಕಾರಣಕ್ಕೆ ಮೂವತ್ತು ವರ್ಷ ದೇಶಕ್ಕಾಗಿ ಹೋರಾಡಿದ ಸೈನಿಕ ಸನಾವುಲ್ಲಾ ಅವರಿಗೆ ಪೌರತ್ವ ನೀಡದೆ ಡಿಟೆನ್ಷನ್ ಕೇಂದ್ರದಲ್ಲಿ ಇಡಲಾಗಿತ್ತು. ಇದೇ ಸ್ಥಿತಿಯು ಅಸಂಖ್ಯಾತ ಹಿಂದೂಗಳಿಗೆ ಬರಲಿದೆ. ಯಾಕೆಂದರೆ ಈ ತಿದ್ದುಪಡಿ ಕಾಯ್ದೆಯಲ್ಲಿ ಕೈಬಿಟ್ಟಿರುವ ದೇಶಗಳಿಂದ ಭಾರತಕ್ಕೆ ಬಂದಿರುವ ವಲಸಿಗರಲ್ಲಿ ಹಿಂದೂಗಳೇ ಬಹುಸಂಖ್ಯಾತರು. ಶ್ರೀಲಂಕಾದಿಂದ ಬಂದು ವಲಸಿಗರ ಕೇಂದ್ರದಲ್ಲಿರುವವರ ಸಂಖ್ಯೆ ಸುಮಾರು 72 ಸಾವಿರದಷ್ಟು ಮತ್ತು ಬೇರೆ ಕಡೆ ವಾಸಿಸುತ್ತಿರುವವರು 30 ಸಾವಿರಕ್ಕೂ ಹೆಚ್ಚು. ಈ ತಮಿಳರೆಲ್ಲ ಸಂಘ ಪರಿವಾರದವರ ಪ್ರಕಾರ ಹಿಂದೂಗಳೇ ತಾನೇ? ಇನ್ನು ಟಿಬೆಟ್‌ನಿಂದ ಬಂದು ನೆಲೆಸಿರುವವರ ಸಂಖ್ಯೆ ಒಂದೂವರೆ ಲಕ್ಷವನ್ನೂ ಮೀರುತ್ತದೆ. ಇವರು ಬೌದ್ಧರಾದರೂ ಸಂಘ ಪರಿವಾರದವರು ಬೌದ್ಧರನ್ನು ಮೂಲತಃ ಹಿಂದೂಗಳೆಂದೂ ಬುದ್ಧ ವಿಷ್ಣುವಿನ ಒಂದು ಅವತಾರವೆಂದು ಹೇಳುತ್ತಾ ಬಂದಿಲ್ಲವೇ? ಭೂತಾನ್, ನೇಪಾಳ, ಮ್ಯಾನ್ಮಾರ್ ಚೀನಾಗಳಿಂದ ಬಂದಿರುವ ವಲಸಿಗರ ಗತಿಯೇನು? ಈ ವಲಸಿಗರಲ್ಲಿ ಬರೀ ಮುಸ್ಲಿಮರೇ ಇದ್ದಾರೆಯೇ? ಇಲ್ಲ. ಮುಸ್ಲಿಮರನ್ನೂ ಒಳಗೊಂಡಂತೆ ವಿವಿಧ ಧರ್ಮದವರು ಇದ್ದಾರೆ. ಹಿಂದೂಗಳೂ ಇದ್ದಾರೆ. ಇದೇ ಸಂದರ್ಭದಲ್ಲಿ ‘ನುಸುಳುಕೋರರು’ ಬೇರೆ, ‘ನಿರಾಶ್ರಿತರು’ ಬೇರೆ ಎಂದು ಅರಿಯಬೇಕಾಗಿದೆ.
ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ಗಳಿಂದ ಪೌರತ್ವದ ವಿಷಯದಲ್ಲಿ ಅತಂತ್ರರಾಗುವವರು ಈ ದೇಶದ ಬಹುಪಾಲು ಬುಡಕಟ್ಟು ಅಲೆಮಾರಿ ಮತ್ತು ದಲಿತ ಬಂಧುಗಳು. ನಮ್ಮ ದೇಶದಲ್ಲಿ ಸುಮಾರು 20 ಕೋಟಿಯಷ್ಟು (ಎಸ್ಸಿ ಮತ್ತು ಎಸ್ಟಿ) ದಲಿತರು ಇದ್ದಾರೆ. 2014ರಲ್ಲಿ ನೇಮಕಗೊಂಡ ಬೀಕೂರಾಮ್ ಇದಾಸೆಯವರ ನೇತೃತ್ವದ ಆಯೋಗ ಹೇಳಿದಂತೆ ಹನ್ನೊಂದು ಕೋಟಿ ಅಲೆಮಾರಿಗಳಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್ ಅವರು ಇತ್ತೀಚೆಗೆ ಒಂದು ಭಾಷಣದಲ್ಲಿ ಹೇಳಿದಂತೆ ದಲಿತರು, ಹಿಂದುಳಿದವರ ಸಂಖ್ಯೆ ಶೇ. 68. ಅವರು ಮತ್ತೊಂದು ಹೊಸ ಸಂಶೋಧನೆಯ ಮಾತನ್ನು ಹೇಳಿದ್ದಾರೆ. ಅವರ ಪ್ರಕಾರ ಈ ದಲಿತ, ವಾಲ್ಮೀಕಿ, ಭೋವಿ ಮುಂತಾದ ಜನಾಂಗದವರೆಲ್ಲ ಹೊರಗಿನಿಂದ ಬಂದಿದ್ದಾರೆ! ನೋಂದಣಿ ಕಾಯ್ದೆಯಿಂದ ಇವರಿಗೆಲ್ಲ ಪೌರತ್ವ ಸಿಗುತ್ತದೆ! ಎಂತಹ ಮಾತು! ದಲಿತರಾದಿಯಾಗಿ ಶ್ರಮಜೀವಿ ಜನಾಂಗದವರು ಈ ದೇಶದ ಮೂಲ ನಿವಾಸಿಗಳು. ಅವರನ್ನೇ ಹೊರಗಿನಿಂದ ಬಂದವರೆಂದೂ, ಈ ಶೇ. 68 ಜನರಿಗೆ ಪೌರತ್ವ ಕೊಡಲಾಗುತ್ತದೆಯೆಂದೂ, ಆದ್ದರಿಂದ ಸದರಿ ಕಾಯ್ದೆಗಳು ದಲಿತ ವಿರೋಧಿ ಅಲ್ಲವೆಂದು ಇವರು ಭಾಷಣ ಮಾಡಿದ ವೀಡಿಯೊ ಸಾಕ್ಷಿ ಇದೆ. ಹಾಗಾದರೆ ಶೇ.68 ಜನರು ಇಲ್ಲಿಯವರೆಗೆ ನಮ್ಮ ದೇಶದವರಲ್ಲವೇ? ಹೊಸದಾಗಿ ಪೌರತ್ವ ಪಡೆಯಲು ಇವರು ತಮ್ಮ ತಾಯಿ, ತಂದೆ, ಧರ್ಮ ಇತ್ಯಾದಿಗಳಿಗೆ ಮೂಲ ದಾಖಲೆಗಳನ್ನು ಎಲ್ಲಿ ಒದಗಿಸುತ್ತಾರೆ? ಇವರೆಲ್ಲರೂ ಹಿಂದೂಗಳೆಂದು ಪ್ರತಿಪಾದಿಸುವವರೇ ಸದರಿ ‘ಹಿಂದೂಗಳ’ ಪೌರತ್ವಕ್ಕೆ ಧಕ್ಕೆ ತಂದು ಅತಂತ್ರರನ್ನಾಗಿ ಮಾಡುವುದಿಲ್ಲವೇ? ಪೌರತ್ವ ಕಾಯ್ದೆಯು ‘ದಲಿತ ವಿರೋಧಿ’ ಎಂದು ಪ್ರತಿರೋಧ ಆರಂಭವಾದದ್ದಕ್ಕೆ ಅದು ದಲಿತಪರ ಎಂದು ಹೇಳಲು ಅವರನ್ನೆಲ್ಲ ಹೊರಗಿನವರೆಂದು ಹೇಳಬೇಕೇ? ಜನವರಿ 18ರಂದು ಹುಬ್ಬಳ್ಳಿಯಲ್ಲಿ ಅಮಿತ್ ಶಾ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರನ್ನು ‘ದಲಿತ ವಿರೋಧಿಗಳು’ ಎಂದದ್ದು ಕೂಡಾ ಇದೇ ಹಿನ್ನೆಲೆಯಲ್ಲಿ ಎಂಬುದನ್ನು ಗಮನಿಸಬೇಕು.
ಸೂಕ್ತ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲದ ಕೋಟ್ಯಂತರ ಜನರು ಈ ಕಾಯ್ದೆಗಳಲ್ಲಿರುವ ‘ಸಂದೇಹಾಸ್ಪದರು’ ಕಾಲಂನಲ್ಲಿ ನಮೂದುಗೊಂಡು ಅತಂತ್ರರಾಗುತ್ತಾರೆ. ಹೀಗಾಗಿ ಈ ಮೂರೂ ಕಾಯ್ದೆಗಳು ಮುಸ್ಲಿಮ್ ವಿರೋಧಿಯಷ್ಟೇ ಅಲ್ಲ, ಬಹುಸಂಖ್ಯಾತ ‘ಹಿಂದೂ ಸಮುದಾಯ’ಗಳಿಗೂ ವಿರೋಧಿಯಾಗುತ್ತವೆ. ಆದ್ದರಿಂದ ನಿಜವಾದ ಭಾರತೀಯರು 1893 ಸೆಪ್ಟಂಬರ್ 11ರಂದು ವಿವೇಕಾನಂದರು ಚಿಕಾಗೊದಲ್ಲಿ ‘‘ಎಲ್ಲ ಧರ್ಮ ಹಾಗೂ ದೇಶಗಳಲ್ಲಿ ಕಿರುಕುಳ ಅನುಭವಿಸಿ ಬಂದ ವಲಸಿಗರಿಗೆಲ್ಲ ಆಶ್ರಯ ನೀಡಿದ ಸಹಿಷ್ಣುತೆಯ ದೇಶಕ್ಕೆ ಸೇರಿದವನು ನಾನು ಎಂದು ಹೆಮ್ಮೆಯಾಗುತ್ತದೆ.’’ ಎಂದು ಹೇಳಿದ್ದನ್ನು ಮನನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ವಿವೇಕಾನಂದರ ಗುತ್ತಿಗೆಯನ್ನು ಬಿಡಬೇಕು.