varthabharthi


ಸುಗ್ಗಿ

ಒಂದು ನಾಟಕ ಒಂದು ಕವಿತೆ - ನಡುವೆ ಒಂದು ದೇಶ

ವಾರ್ತಾ ಭಾರತಿ : 15 Feb, 2020
ನಾ ದಿವಾಕರ

ನಾ ದಿವಾಕರ

ಶಾಲಾ ಮಕ್ಕಳಿಂದ ಇತಿಹಾಸಕಾರರವರೆಗೂ ವ್ಯಾಪಿಸಿರುವ ದೇಶದ್ರೋಹದ ಆರೋಪದ ಹಿಂದೆ ಇರುವುದು ಅಧಿಕಾರ ರಾಜಕಾರಣದ ಲಾಲಸೆಯೇ ಹೊರತು ಬಹುಸಂಸ್ಕೃತಿಯ ಭಾರತದ ರಕ್ಷಣೆ ಅಲ್ಲ ಎನ್ನುವುದನ್ನು ಗಮನಿಸಬೇಕಿದೆ. ವಸಾಹತು ಕಾಲದ ಕಾನೂನುಗಳನ್ನು ಬಳಸಿ ಪ್ರತಿರೋಧ ಮತ್ತು ಭಿನ್ನ ನಿಲುವಿನ ಅಭಿಪ್ರಾಯಗಳನ್ನು ಹತ್ತಿಕ್ಕುವ ಬಿಜೆಪಿ ಆರೆಸ್ಸೆಸ್ ತಂತ್ರದ ಹಿಂದೆ ಭಾರತದ ಬಹುಸಂಸ್ಕೃತಿಯನ್ನು ಅಳಿಸಿಹಾಕುವ ಹುನ್ನಾರ ಅಡಗಿದೆ. ಹಾಗೆಯೇ ಈ ದೇಶದ ಬೆನ್ನೆಲುಬಾಗಿರುವ ಶೋಷಿತ ವರ್ಗಗಳನ್ನು ‘‘ದೇಶ-ಸಂಸ್ಕೃತಿ-ಮತಧರ್ಮ’’ಗಳ ಚೌಕಟ್ಟಿನಲ್ಲಿ ಬಂಧಿಸಿ ಮತ್ತೊಮ್ಮೆ ದಾಸ್ಯಕ್ಕೆ ದೂಡುವ ಪ್ರಯತ್ನವೂ ಅಡಗಿದೆ. ಶಾಹೀನ್ ಶಾಲೆಯ ಪ್ರಕರಣ ಇದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ.

ಭಾರತಕ್ಕೆ ಸ್ವಾತಂತ್ರ ಬಂದು 72 ವರ್ಷಗಳು ಕಳೆದಿವೆ. ಇಷ್ಟೂ ವರ್ಷಗಳಲ್ಲಿ ಭಾರತದ ಜನಸಾಮಾನ್ಯರ ನಡುವೆ ಸ್ವಾತಂತ್ರ ಎಂದರೇನು ಎನ್ನುವ ಪ್ರಶ್ನೆ ಕಾಡುತ್ತಲೇ ಇತ್ತು. ಇಂದಿಗೂ ಕಾಡುತ್ತಲೇ ಇದೆ. ಏಕೆಂದರೆ ಜನಸಾಮಾನ್ಯರಿಗೆ ಸ್ವಾತಂತ್ರದ ಪರಿಪೂರ್ಣತೆಯನ್ನು ಅರ್ಥಮಾಡಿಸುವಲ್ಲಿ ಭಾರತದ ಆಳುವ ವರ್ಗಗಳು ಸೋತಿವೆ. ಸ್ವಾತಂತ್ರ ಎಂದರೆ ಉಳ್ಳವರಿಗೆ ಸ್ವಾಭಾವಿಕ ಹಕ್ಕು ಇಲ್ಲದವರಿಗೆ ಕೇಳಿ ಪಡೆಯಬೇಕಾದ ಹಕ್ಕು ಎನ್ನುವ ರೀತಿಯಲ್ಲಿ ಈ ದೇಶದ ಆಳುವ ವರ್ಗಗಳು ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುತ್ತಿವೆ. ಆದರೂ ನಾವು ಸಂಪೂರ್ಣ ಸ್ವತಂತ್ರ ಪ್ರಜೆಗಳು ಎನ್ನುವ ಭ್ರಮೆಯಲ್ಲಿ ಅಸಂಖ್ಯಾತ ಜನತೆ ಬದುಕುತ್ತಿದ್ದಾರೆ. ಸಾಂವಿಧಾನಿಕ ಹಕ್ಕುಗಳನ್ನು ಸತತವಾಗಿ ಕಳೆದುಕೊಳ್ಳುತ್ತಲೇ ಇರುವ ದುರ್ಬಲ, ಅವಕಾಶವಂಚಿತ, ಶೋಷಿತ ಜನಸಮುದಾಯಗಳೂ ಸಹ ತಮ್ಮನ್ನು ಸ್ವತಂತ್ರ ಪ್ರಜೆಗಳು ಎಂದೇ ಭಾವಿಸುತ್ತಾರೆ. ಏಕೆಂದರೆ ಈ ಜನರ ಮನದಾಳದಲ್ಲಿ ಇದು ನಮ್ಮ ದೇಶ ಎನ್ನುವ ಭಾವನೆ ಆಳವಾಗಿ ಬೇರೂರಿದೆ. ಜನಸಾಮಾನ್ಯರ ಈ ಭಾವನೆಯೇ ಅಧಿಕಾರ ರಾಜಕಾರಣದ ಮತ್ತು ಶೋಷಕ ವರ್ಗಗಳ ಬಂಡವಾಳವೂ ಆಗಿದೆ. ದೇಶಕ್ಕಾಗಿ ತ್ಯಾಗ ಮಾಡಲು ಈ ಶೋಷಿತ ವರ್ಗಗಳು ಸದಾ ಕಾಲ ಸಿದ್ಧರಾಗಿರುವಂತೆ ಪ್ರಚೋದಿಸಲಾಗುತ್ತಿರುತ್ತದೆ. ಈ ಶೋಷಿತರ ತ್ಯಾಗ ಬಲಿದಾನವೇ ಶೋಷಕ ವರ್ಗಗಳ ಸಾಮ್ರಾಜ್ಯಕ್ಕೆ ತಳಹದಿಯಾಗಿರುತ್ತದೆ. ಇದು ಬಂಡವಾಳ ವ್ಯವಸ್ಥೆಯ ಮೂಲ ತತ್ವ ಮತ್ತು ಅಂತಃಸತ್ವ. ಭಾರತದ ಸಾಂಸ್ಕೃತಿಕ ಜಗತ್ತನ್ನು ಆಕ್ರಮಿಸಿರುವ ವೈದಿಕ ಸಂಸ್ಕೃತಿಯೂ ಇದೇ ಸಿದ್ಧಾಂತಕ್ಕೆ ಬದ್ಧವಾಗಿರುವುದರಿಂದ ಭಾರತೀಯ ಸಮಾಜ ಈ ನೆಲೆಯಲ್ಲಿ ನಿಂತಿದೆ.

ಸ್ವಾತಂತ್ರ ಎಂದರೇನು ಎನ್ನುವ ಪ್ರಶ್ನೆಗೆ ಸಮರ್ಥವಾಗಿ ಉತ್ತರ ಕೊಡಲು ಈ ಭಾರತೀಯ ಸಮಾಜಕ್ಕೆ ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಇಲ್ಲಿ ಪ್ರಜಾತಂತ್ರದ ಮೌಲ್ಯಗಳು ಬೇರೂರಿಲ್ಲ. ಪ್ರಜಾತಂತ್ರದ ಅರಿವು ಇಲ್ಲದೆ ಸ್ವಾತಂತ್ರದ ಅರಿವು ಮೂಡುವುದಿಲ್ಲ. ದುರಂತ ಎಂದರೆ ಕೊಂಚ ಮಟ್ಟಿಗೆಪ್ರಜಾತಂತ್ರದ ಮೌಲ್ಯಗಳು ಜನಸಾಮಾನ್ಯರ ನಡುವೆ ನೆಲೆ ಕಾಣುತ್ತಿರುವ ಸಂದರ್ಭದಲ್ಲೇ ಸರ್ವಾಧಿಕಾರದ ಛಾಯೆ ದೇಶವನ್ನು ಆವರಿಸುತ್ತಿದೆ. ದೇಶದ ಶೋಷಿತ, ಅವಕಾಶ ವಂಚಿತ ಜನಸಮುದಾಯಗಳು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪ್ರತಿಪಾದಿಸಲು ಸಜ್ಜಾಗುತ್ತಿರುವ ಹೊತ್ತಿನಲ್ಲೇ ಆಳುವ ವರ್ಗಗಳು ಸಂವಿಧಾನದ ಚೌಕಟ್ಟಿನಲ್ಲೇ ಸಾಂವಿಧಾನಿಕ ಮೌಲ್ಯಗಳನ್ನು ಮತ್ತು ಪ್ರಜಾತಂತ್ರ ವ್ಯವಸ್ಥೆಯ ಸಾಂಸ್ಥಿಕ ಸ್ವರೂಪವನ್ನು ವಿರೂಪಗೊಳಿಸಲು ಮುಂದಾಗುತ್ತಿರುವುದು ಬಹುಜನರ ಮುಂದಿನ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸ್ವಾತಂತ್ರದ ಸವಿಯನ್ನೇ ಅರಿಯದೆ ಬದುಕುತ್ತಿರುವ ಅಸಂಖ್ಯಾತ ಶೋಷಿತ ಸಮುದಾಯಗಳು ಪ್ರಜಾತಂತ್ರದ ನೆಲೆಯನ್ನೂ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ‘ದೇಶ’, ‘ದೇಶಭಕ್ತಿ’, ‘ದೇಶದ್ರೋಹ’ ಸಾರ್ವಜನಿಕ ಸಂಕಥನದ ಕೇಂದ್ರ ಸ್ಥಾನವನ್ನು ಆಕ್ರಮಿಸಿವೆ. ಸ್ವಾತಂತ್ರ ಮತ್ತು ಪ್ರಜಾತಂತ್ರದ ಮೌಲ್ಯಗಳಿಗೆ ಬೆಲೆಯೇ ಇಲ್ಲದ ನೆಲದಲ್ಲಿ ದೇಶವನ್ನು ಹೇಗೆ ವ್ಯಾಖ್ಯಾನಿಸುವುದು? ಈ ಪ್ರಶ್ನೆಯೇ ಇಂದಿನ ಸಂದರ್ಭದಲ್ಲಿ ದೇಶದ್ರೋಹದ ಆಪಾದನೆಗೆ ಗುರಿಯಾಗಬಹುದು.

ಆದರೆ ಈ ಪ್ರಶ್ನೆಯೇ ಇಂದು ಈ ದೇಶದ ಬಹುಸಂಖ್ಯಾತರನ್ನು ಕಾಡುತ್ತಿದೆ. ಎಗ್ಗಿಲ್ಲದೆ ಬಳಸಲಾಗುತ್ತಿರುವ ದೇಶದ್ರೋಹದ ಆಪಾದನೆ ದೇಶದ ಪರಿಕಲ್ಪನೆಗೇ ಸವಾಲೆಸೆದಿದೆ. ಯಾವುದನ್ನು ದೇಶ ಎನ್ನುತ್ತೇವೆ, ಯಾವುದು ದೇಶವನ್ನು ಪ್ರತಿನಿಧಿಸುತ್ತದೆ ಎನ್ನುವ ಜಟಿಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳದಿದ್ದರೆ ಭಾರತ ಮತ್ತೊಮ್ಮೆ ವೈದಿಕ ಯುಗಕ್ಕೆ ಜಾರುವ ಸಾಧ್ಯತೆಗಳೇ ಹೆಚ್ಚು. ಭೌಗೋಳಿಕವಾಗಿ ಭಾರತವನ್ನು ವಿಸ್ತರಿಸಲು ಸಜ್ಜಾಗುತ್ತಿರುವ ಫ್ಯಾಶಿಸ್ಟ್ ರಾಜಕಾರಣ ಬೌದ್ಧಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಭಾರತವನ್ನು ಸಂಕುಚಿತಗೊಳಿಸುತ್ತಿದೆ. ಶತಮಾನಗಳ ಕಾಲ ತನ್ನ ವೈವಿಧ್ಯತೆಯಿಂದಲೇ ಅಸ್ತಿತ್ವ ಉಳಿಸಿಕೊಂಡಿರುವ ದೇಶ ಇಂದು ಏಕ ಸಂಸ್ಕೃತಿಗೆ ಬಲಿಯಾಗುತ್ತಿದೆ. ಈ ಚೌಕಟ್ಟಿನಲ್ಲೇ ‘ದೇಶ’ ಮತಧಾರ್ಮಿಕ ಚೌಕಟ್ಟಿಗೆ ಸಿಲುಕಿ, ಸಾಂಸ್ಕೃತಿಕ ನೆಲೆಯಲ್ಲಿ ತನ್ನ ಸೀಮೆಯನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿದೆ. ಬಿಜೆಪಿ ಆರೆಸ್ಸೆಸ್ ಪ್ರತಿಪಾದಿಸುವ ಈ ದೇಶದ ಪರಿಕಲ್ಪನೆಯೇ ಭಾರತದ ಜನಸಂಸ್ಕೃತಿಗೆ ವಿರುದ್ಧವಾಗಿರುವುದು ಈ ದೇಶದ ಶೋಷಿತ ಜನತೆಗೆ ಕ್ರಮೇಣ ಅರಿವಾಗುತ್ತಿದೆ. ಬಹುಶಃ ಪೌರತ್ವ ತಿದ್ದುಪಡಿ ಕಾಯ್ದೆ ಇಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ದಿಲ್ಲಿಯ ಶಾಹೀನ್ ಬಾಗ್ ನಿಂದ ಕರ್ನಾಟಕದ ಬೀದರ್ ಜಿಲ್ಲೆಯ ಶಾಹೀನ್ ಶಾಲೆಯವರೆಗೆ ಹಬ್ಬಿರುವ ಪ್ರತಿರೋಧದ ಅಲೆ ಜಾಗೃತಿಯ ಗಂಟೆಯಂತೆ ಈ ದೇಶದ ತಳಸಮುದಾಯಗಳನ್ನು, ಶೋಷಿತ ಅಲ್ಪಸಂಖ್ಯಾತರನ್ನು ಮತ್ತು ಅವಕಾಶವಂಚಿತರನ್ನು ಬಡಿದೆಬ್ಬಿಸಿದೆ.

ಈ ಜಾಗೃತಿಯೇ ಆಳುವ ವರ್ಗಗಳನ್ನು ಕಂಗೆಡಿಸಿರುವುದು ಸ್ಪಷ್ಟ. ಹಾಗಾಗಿಯೇ ದೇಶ ಎಂಬ ಅಮೂರ್ತ ಕಲ್ಪನೆಯನ್ನು ವಿರೂಪಗೊಳಿಸಿದ ಫ್ಯಾಸಿಸ್ಟ್ ಶಕ್ತಿಗಳು ದೇಶದ್ರೋಹದ ಪರಿಕಲ್ಪನೆಯನ್ನು ಎಲ್ಲೆಡೆ ವಿಸ್ತರಿಸುತ್ತಿವೆ. ನಾಲ್ಕು ಸಾಲಿನ ಒಂದು ಕವಿತೆ, ನಾಟಕದ ಒಂದು ಸಾಲು ಸಂಭಾಷಣೆ, ಮೂರಕ್ಷರದ ಆಝಾದಿ ಘೋಷಣೆ, ನಾಲ್ಕಕ್ಷರದ ಜಿಂದಾಬಾದ್ ಕೂಗು ಪ್ರಬಲ ಆಳುವ ವರ್ಗಗಳ ನಿದ್ದೆಗೆಡಿಸುತ್ತಿದೆ. ಪೌರತ್ವ ಸಾಬೀತುಪಡಿಸಲು ದಾಖಲೆ ಕೇಳುವ ನೀತಿಯ ಔಚಿತ್ಯವನ್ನು ಪ್ರಶ್ನಿಸುವ ಸಿರಾಜ್ ಬಿಸರಹಳ್ಳಿಯವರ ಒಂದು ಕವನದ ಸಾಲುಗಳು ದೇಶದ್ರೋಹದ ಚೌಕಟ್ಟಿನಲ್ಲಿ ವ್ಯಾಖ್ಯಾನಕ್ಕೊಳಗಾಗುವುದೇ ಈ ದೇಶದ ಪ್ರಜಾಸತ್ತಾತ್ಮಕ ದನಿಯ ಗಟ್ಟಿತನವನ್ನು ಪ್ರದರ್ಶಿಸುತ್ತದೆ. ಬ್ರಿಟಿಷ್ ವಸಾಹತು ಆಳ್ವಿಕೆಯಲ್ಲಿ ವಂದೇ ಮಾತರಂ, ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಗಳು ಬ್ರಿಟನ್‌ನ ರಾಜಪ್ರಭುತ್ವವನ್ನು ಹೀಗೆಯೇ ಕಾಡುತ್ತಿತ್ತು. ಆದರೆ ನಾವು 21ನೆಯ ಶತಮಾನದ ಪ್ರಜಾತಂತ್ರ ವ್ಯವಸ್ಥೆಯಲ್ಲಿದ್ದೇವೆ. ವಸಾಹತು ಕಾಲದ ನಿಲುಮೆಗಳು ಇಂದಿಗೂ ಅನ್ವಯಿಸುವುದಾದರೆ ನಮ್ಮ ದೇಶದ ಆಡಳಿತ ವ್ಯವಸ್ಥೆ ಶತಮಾನಗಳಷ್ಟು ಹಿಂದಕ್ಕೆ ಜಾರಿದೆ ಎಂದೇ ಹೇಳಬಹುದು.

ಸಾರ್ವಭೌಮ ಪ್ರಜೆಗಳ ಗಟ್ಟಿದನಿಯನ್ನು ಅಡಗಿಸುವ ಪ್ರಯತ್ನದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಕಾನೂನಿನ ಚೌಕಟ್ಟಿನಲ್ಲಿ ಯಶಸ್ಸು ಕಂಡಿರಬಹುದು. ಒಬ್ಬ ಕವಿ, ಒಂದು ಕವನ ಅಥವಾ ಒಂದು ನಾಟಕವನ್ನು ನಿಷೇಧಿಸುವ ಮೂಲಕ ಕೋಟ್ಯಂತರ ದನಿಗಳನ್ನು ಅಡಗಿಸಲಾಗುವುದಿಲ್ಲ ಎಂದು ಇತಿಹಾಸ ನಿರೂಪಿಸಿದೆ. ಬೀದರ್ ಜಿಲ್ಲೆಯ ಶಾಹೀನ್ ಶಾಲೆಯಲ್ಲಿ ಮಕ್ಕಳು ಪ್ರದರ್ಶಿಸಿದ ಒಂದು ನಾಟಕ ರಾಜ್ಯ ಸರಕಾರದ ದೃಷ್ಟಿಯಲ್ಲಿ ರಾಜದ್ರೋಹ ಆಗಿರುವುದು ಪ್ರಜೆಗಳ ಗೆಲುವು, ಆಳುವ ವರ್ಗಗಳ ಸೋಲು ಎಂದೇ ಭಾವಿಸಬೇಕಿದೆ. 9-10 ವರ್ಷದ ಹಸುಳೆಗಳನ್ನು ಪೊಲೀಸ್ ವಿಚಾರಣೆಗೊಳಪಡಿಸುವ ಕ್ರೌರ್ಯವನ್ನು ಹೇಗೆ ವ್ಯಾಖ್ಯಾನಿಸಲು ಸಾಧ್ಯ? ವಿಕಸನ ಹಂತದಲ್ಲಿರುವ ಮಕ್ಕಳನ್ನು ಕ್ರೂರ ಕಾನೂನಿನ ವ್ಯಾಪ್ತಿಯಲ್ಲಿ ಹಿಂಸೆ ಮಾಡುವ ಮೂಲಕ ನಮ್ಮ ಆಡಳಿತ ವ್ಯವಸ್ಥೆ ಇತಿಹಾಸದ ಒಂದು ಆಯಾಮವನ್ನು ಮಕ್ಕಳಿಗೆ ಪರಿಚಯಿಸಿದೆ ಎಂದೇ ಭಾವಿಸೋಣ. ಪೊಲೀಸ್ ದೌರ್ಜನ್ಯಕ್ಕೊಳಗಾಗಿರುವ ಎಳೆ ಮಕ್ಕಳಿಗೆ ತಾವು ಬದುಕುತ್ತಿರುವ ದೇಶ ಎತ್ತ ಸಾಗುತ್ತಿದೆ ಎಂಬ ಅರಿವು ಮೂಡುವುದು ಪ್ರಜಾತಂತ್ರ ವ್ಯವಸ್ಥೆಯ ಮುನ್ನಡೆಗೆ ಸಹಾಯಕವಾಗುತ್ತದೆ. ಪ್ರತಿರೋಧದ ದನಿಗಳನ್ನು ಅಡಗಿಸಿದಷ್ಟೂ ತಳಮಟ್ಟದಿಂದಲೇ ಈ ದನಿಗಳು ಮತ್ತೆಲ್ಲೋ ಕುಡಿಯೊಡೆಯುತ್ತವೆ, ಮೊಳೆಯುತ್ತವೆ, ಬೃಹತ್ ವೃಕ್ಷಗಳಾಗಿ ಬೆಳೆಯುತ್ತವೆ. ಜಗತ್ತಿನ ಅತ್ಯಂತ ಪ್ರಬಲ ಸಾಮ್ರಾಜ್ಯಗಳಿಗೂ ಈ ಅನುಭವ ಆಗಿದೆ. ಭಾರತ ಇದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.

ಆದರೆ ಭಾರತ ಏಕೆ ಹೀಗಾಗಿದೆ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಬಲಪಂಥೀಯ ರಾಜಕಾರಣ, ಸಾಂಸ್ಕೃತಿಕ ಆಧಿಪತ್ಯದ ಹಪಹಪಿ, ಜಾತಿ ವ್ಯವಸ್ಥೆಯ ಶ್ರೇಷ್ಠತೆಯ ಪ್ರಭಾವ ಮತ್ತು ಮತಧಾರ್ಮಿಕ ನೆಲೆಯ ದ್ವೇಷ ರಾಜಕಾರಣ ಈ ದೇಶದ ಸಾಮಾಜಿಕ ಸಂರಚನೆಯನ್ನು ಕಲುಷಿತಗೊಳಿಸುತ್ತಿರುವ ಸಂದರ್ಭದಲ್ಲಿ ಈ ದೇಶದ ಜನಸಂಸ್ಕೃತಿಯನ್ನು, ಸಮಾಜೋ ಸಾಂಸ್ಕೃತಿಕ ನೆಲೆಗಳನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ. ಶಾಲಾ ಮಕ್ಕಳಿಂದ ಇತಿಹಾಸಕಾರರವರೆಗೂ ವ್ಯಾಪಿಸಿರುವ ದೇಶದ್ರೋಹದ ಆರೋಪದ ಹಿಂದೆ ಇರುವುದು ಅಧಿಕಾರ ರಾಜಕಾರಣದ ಲಾಲಸೆಯೇ ಹೊರತು ಬಹುಸಂಸ್ಕೃತಿಯ ಭಾರತದ ರಕ್ಷಣೆ ಅಲ್ಲ ಎನ್ನುವುದನ್ನು ಗಮನಿಸಬೇಕಿದೆ. ವಸಾಹತು ಕಾಲದ ಕಾನೂನುಗಳನ್ನು ಬಳಸಿ ಪ್ರತಿರೋಧ ಮತ್ತು ಭಿನ್ನ ನಿಲುವಿನ ಅಭಿಪ್ರಾಯಗಳನ್ನು ಹತ್ತಿಕ್ಕುವ ಬಿಜೆಪಿ ಆರೆಸ್ಸೆಸ್ ತಂತ್ರದ ಹಿಂದೆ ಭಾರತದ ಬಹುಸಂಸ್ಕೃತಿಯನ್ನು ಅಳಿಸಿಹಾಕುವ ಹುನ್ನಾರ ಅಡಗಿದೆ. ಹಾಗೆಯೇ ಈ ದೇಶದ ಬೆನ್ನೆಲುಬಾಗಿರುವ ಶೋಷಿತ ವರ್ಗಗಳನ್ನು ‘‘ದೇಶ-ಸಂಸ್ಕೃತಿ-ಮತಧರ್ಮ’’ದ ಚೌಕಟ್ಟಿನಲ್ಲಿ ಬಂಧಿಸಿ ಮತ್ತೊಮ್ಮೆ ದಾಸ್ಯಕ್ಕೆ ದೂಡುವ ಪ್ರಯತ್ನವೂ ಅಡಗಿದೆ. ಶಾಹೀನ್ ಶಾಲೆಯ ಪ್ರಕರಣ ಇದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ.

ಸರಕಾರದ ಆಡಳಿತ ನೀತಿಯನ್ನು ವಿರೋಧಿಸುವುದೇ ದೇಶದ್ರೋಹ ಎನ್ನುವುದಾದರೆ ನಾವು ಕೇಳಲೇಬೇಕಾಗಿರುವ ಪ್ರಶ್ನೆ ‘‘ದೇಶ ಎಂದರೇನು?’’.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)