varthabharthi


ಸುಗ್ಗಿ

ಒಂದು ವಿಡಂಬನೆ

ಬೊರ್ತುಕುಲ ನಿದ್ದೆಯಿಂದ ಎದ್ದರೆ....

ವಾರ್ತಾ ಭಾರತಿ : 15 Feb, 2020
ಇಂಗ್ಲಿಷ್ ಮೂಲ: ಅರ್ಕ ಬನಿ ಮೈನಿ, ಕನ್ನಡಕ್ಕೆ: ಸುಮಂಗಲಾ

ಸುಮಂಗಲಾ

ಇಲ್ಲಿ ಅಸ್ಸಾಮಿ ಆಡುಭಾಷೆಯ ಹಲವಾರು ಪದಗಳು ಮತ್ತು ಪ್ರಾದೇಶಿಕ ಸಂದರ್ಭವನ್ನು ಬಳಸಿಕೊಳ್ಳಲಾಗಿದೆ. ಕೆಲವು ಪಾರಿಭಾಷಿಕ ಪದಗಳಿಗೆ ಕಂಸದಲ್ಲಿ ಮತ್ತು ಕೆಲವು ಪದಗಳಿಗೆ ಕೊನೆಯಲ್ಲಿ ಅರ್ಥವನ್ನು ಕೊಟ್ಟಿರುವೆ...

ಹುಡುಗರೆಲ್ಲ ಸೇರಿ ಆಟ ಆಡ್ತಿದ್ದಾಗ ಚೆಂಡು ಆ ದೊಡ್ಡ ಮೊಸಳೆಕೆರೆ ಒಳಗೆ ಬಿದ್ದುಬಿಡ್ತು. ಗೆಳೆಯರೆಲ್ಲ ಆ ಚಿಕ್ಕ ಹುಡುಗನಿಗೆ ನೀನು ತೆಗೆಯೋ ಅಂದ್ರು. ಧೈರ್ಯಶಾಲಿ ಹುಡುಗ ನೀರಿಗಿಳಿದ. ಮೇಲೆ ಬಂದಾಗ ಕೈಯಲ್ಲಿದ್ದಿದ್ದು ಚೆಂಡಲ್ಲ, ಮೊಸಳೆಮರಿ! ‘ಸುಮ್ನೆ ತಮಾಷೆಗೆ’ ಎಂದ ಹುಡುಗ. ಗೆಳೆಯರೆಲ್ಲ ಹೆದರಿ ಹುಡುಗನನ್ನೂ, ಮೊಸಳೆಮರಿಯನ್ನೂ ಬಿಟ್ಟೆದ್ದು, ಓಡಿಹೋದರು. ‘ಛೇ, ಏನಪಾ... ಈ ವಿಶ್ವದಲ್ಲಿ ತಮಾಷೆ ಅನ್ನೋದೆ ಇಲ್ಲವಲ್ಲ’ ಎಂದು ಹುಡುಗ ಮೋಟಾಭಾಯಿ ಯೋಚಿಸಿದ. ಈಗ ಅದೇ ಮೋಟಾಭಾಯಿ ಅತಿದೊಡ್ಡ ಪ್ರಾಕ್ಟಿಕಲ್ ತಮಾಷೆಯನ್ನು ತನ್ನ ‘‘ಮಿತ್ರೋಂ’’ ಮೇಲೆ ಮಾಡಲು ನಿರ್ಧರಿಸಿದ್ದಾನೆ. ಅಂದಹಾಗೆ ಆ ಮೊಸಳೆಮರಿ ಇನ್ನೂ ಕಾಣೆಯಾಗಿದೆ, ಶ್ರೇಷ್ಠ ಭಾರತದಲ್ಲಿ ಕಾಣೆಯಾದ 2 ಲಕ್ಷ ಮಹಿಳೆಯರು ಮತ್ತು ಮಕ್ಕಳ ಹಾಗೆ. ಅರೆ... ನಾನು ಯಾರು? ಇದ್ದಕ್ಕಿದ್ದಂತೆ ಕೋಣೆಯೊಳಕ್ಕೆ ಬಿರುಗಾಳಿಯಂತೆ ನುಗ್ಗಿದ ಅಮ್ಮ ‘‘ಅವ್ರ ಮಸೂದೆ ಪಾಸ್ ಮಾಡಿದ್ರು. ಇನ್ನು ಈ ಬಾಂಗ್ಲಾದೇಶಿಯರು ನಮ್ಮನ್ನು ನಾಶ ಮಾಡ್ತಾರೆ ಅಷ್ಟೆ’’ ಎಂದಾಗ ಬಿಲ್ಲಿ ಪಿ ಬೊರ್ಗೊಹೈನ್ ಈ ಪ್ರಶ್ನೆ ಕೇಳಿಕೊಂಡ. ಹೀಗೆ ತನ್ನ ಅಸ್ತಿತ್ವದ ಅತಿ ಜಟಿಲ ಪ್ರಶ್ನೆ ಕೇಳಿಕೊಳ್ಳುವ ತುಸುವೇ ಮುಂಚೆ ವರ್ಚುಅಲ್ ಪ್ರೈವೇಟ್ ನೆಟ್‌ವರ್ಕ್ ಸರ್ವರ್ ಬಳಸಿಕೊಂಡು (ಏಕೆಂದರೆ ಭಾರತ ಸರಕಾರ ಎಲ್ಲ ಪೋರ್ನ್ ಜಾಲತಾಣಗಳನ್ನು ನಿರ್ಬಂಧಿಸಿತ್ತಲ್ಲ!) ನೋಡುತ್ತಿದ್ದ ಪೋರ್ನ್‌ಹಬ್‌ನಲ್ಲಿ ವ್ಯಸ್ತನಾಗಿದ್ದ ಬಿಲ್ಲಿಯ ದೇಶಭಕ್ತಿ ಉಕ್ಕಿ ಹರಿಯತೊಡಗಿತು. ಆ ಕ್ಷಣಕ್ಕಾದರೂ ಅವನಿಗೆ ಆ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಅವನು ಸ್ಥಳೀಯ ಅಸ್ಸಾಮಿ. ಅಲ್ಲಲ್ಲ... ತಾಳಿ.. ಅವನು ಅಹೋಮಿಯ. ಪಕ್ಕದಲ್ಲಿಟ್ಟಿದ್ದ ಗಮುಸಟವೆಲ್ಲನ್ನು ತಲೆಗೆ ಸುತ್ತಿಕೊಂಡವನೇ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾಗುತ್ತಿದ್ದ ಯುವಜನತೆಯೊಂದಿಗೆ ಸೇರಿಕೊಂಡ. ಜೊಯ್ ಆಯ್ ಅಹೋಮ್! (ಅಸ್ಸಾಂ ತಾಯ್ನಾಡಿಗೆ ಜಯವಾಗಲಿ) ಅಮೆರಿಕನ್ ಕಾದಂಬರಿಕಾರ ಕರ್ಟ್ ವೊನ್ನೆಗಟ್ ಮಾತುಗಳಲ್ಲಿ ಹೇಳಬೇಕೆಂದರೆ: ಹೆಚ್ಚು ಕಡಿಮೆ ಈ ಎಲ್ಲವೂ ಜರುಗಿತು. ನಿಜವೆಂದರೆ ಹೆಚ್ಚಾಗಿ. ತುಂಬ ಹೆಚ್ಚಾಗಿ. ನಾನು ಪೌರತ್ವ (ತಿದ್ದುಪಡಿ) ಮಸೂದೆ (ಸಿಎಬಿ) ಮತ್ತು ಪೌರತ್ವ (ತಿದ್ದುಪಡಿ)ಕಾಯ್ದೆ (ಸಿಎಎ) 2019 ಅಥವಾ ರಾಷ್ಟ್ರೀಯ ಪೌರತ್ವ ನೋಂದಣಿ ಅಂದರೆ ಏನು ಅಥವಾ ಭಾರತದಲ್ಲಿ, ವಿಶೇಷವಾಗಿ ಅಸ್ಸಾಮಿನಲ್ಲಿ ಎಷ್ಟು ತೀವ್ರವಾಗಿ ಪ್ರತಿಭಟನೆಗಳಾಗುತ್ತಿವೆ ಎಂಬೆಲ್ಲ ವಿವರಗಳಿಗೆ ಹೋಗುವುದಿಲ್ಲ. ಹಾಂ... ಕಳೆದ ಸಲ ನನಗೆ ಯಾರೋ ಹೇಳಿದಂತೆ ಖಾರಿಜಂಗ ರಾಷ್ಟ್ರೀಯ ಉದ್ಯಾನದ ಘೇಂಡಾಮೃಗವೊಂದು ಉದ್ಯಾನದೊಳಗಿದ್ದ ಅಕ್ರಮ ವಲಸಿಗ ವಸತಿಯನ್ನು ಬುಡಸಮೇತ ಕಿತ್ತುಹಾಕಿ ಮಸೂದೆಗೆ ತನ್ನ ವಿರೋಧ ಸೂಚಿಸಿತ್ತಂತೆ. ಘೇಂಡಾಮೃಗ ಇನ್ನಷ್ಟು ಪುಂಡಾಟ ಮಾಡುವುದನ್ನು ತಡೆಯಲು ಭಾರತ ಸರಕಾರವು ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಕಾಯ್ದೆ 2008ರ ಅಡಿಯಲ್ಲಿ ಅದರ ಕೊಂಬುಗಳನ್ನು ಕತ್ತರಿಸಿ ಹಾಕಿತಂತೆ. ಬಂಗಾಳಿ ಹುಲಿಗಳು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಮಾಡಿದವು. ಜಿಂಕೆಗಳು ಮತ್ತು ಮೊಲಗಳೇನೋ ಮಸೂದೆಯನ್ನು ಸ್ವಾಗತಿಸಿದವಂತೆ.

ಅಮೋಘ ವಾಗ್ವಿಲಾಸಕ್ಕೆ ಹೆಸರಾದ ಮೋಟಾಭಾಯಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ರು: ‘‘ಅಸ್ಸಾಮಿನ ನನ್ನ ಸೋದರರು ಮತ್ತು ಸೋದರಿಯರಿಗೆ ನಾನು ಭರವಸೆ ಕೊಡುತ್ತೇನೆ, ಪೌರತ್ವ (ತಿದ್ದುಪಡಿ) ಮಸೂದೆ ಜಾರಿಯ ಬಗ್ಗೆ ಅವರು ಚಿಂತಿತರಾಗುವ ಅಗತ್ಯವೇ ಇಲ್ಲ.’’ ಓಹ್! ಆತ ಇದನ್ನು ಹೇಳಿದಾಗ ಅಸ್ಸಾಮಿನ ಜನರಿಗೆ, ಪ್ರಾಣಿಗಳಿಗೆ ಅಂತರ್ಜಾಲದ ಸಂಪರ್ಕ ಇದ್ದರೆ ತಾನೆ!

ಈಗ ರಾಷ್ಟ್ರೀಯ ಪೌರತ್ವ ನೋಂದಣಿಗಾಗಿ ಭಾರತದಲ್ಲಿರೋ ಪ್ರತಿಯೊಂದೂ ಜೀವಿಯೂ ತಮ್ಮ ಕುಟುಂಬದ ಹಳೆಯ ತಲೆಗಳು 1971, ಮಾರ್ಚ್ 25ರ ಒಳಗೆ ದೇಶದೊಳಗೆ ಬಂದಿದ್ದಾರೆ ಅಂತ ಕಾನೂನುಬದ್ಧವಾಗಿ ರುಜುವಾತುಪಡಿಸಬೇಕು ಅನ್ನೋದು ಮೋಟಾಭಾಯಿಯ ಮಹದಾಶಯ. ಹಿನ್ನುಡಿ: ಎಲ್ಲ ಹಸುಗಳು, ಹುಟ್ಟಿನಿಂದ ಮತ್ತು ತಳಿಯಿಂದ, ಎನ್‌ಆರ್‌ಸಿಯಲ್ಲಿ ಸೇರುತ್ತವೆ; ಇಸ್ರೇಲಿನಲ್ಲಿ ಯಹೂದಿಗಳಿರುವ ಹಾಗೆ. ಇಡೀ ಜಗತ್ತಿನ ಎಲ್ಲ ಹಸುಗಳಿಗೂ ಒಂದು ರೂಪೇ ಕ್ರೆಡಿಟ್ ಕಾರ್ಡ್ ಮತ್ತು 2 ಲಕ್ಷದವರೆಗೆ ಸಾಲ ಸೌಲಭ್ಯದೊಂದಿಗೆ ಪೂರ್ವ-ಮಂಜೂರಾತಿಯ ಪೌರತ್ವವನ್ನು ನೀಡಿ ಈ ಪುಣ್ಯಭೂಮಿಗೆ ಆಹ್ವಾನಿಸಲಾಗುತ್ತದೆ. ‘ಅಯ್ಯೋ... ಎಲ್ಲಾ ಕಡೆಯೂ ಹಸುಗಳ ವಧೆ ನಡೀತಿದೆ! ಪಾಪ... ಹಂಗಾರೆ ಅವು ಎಲ್ಲಿ ಹೋಗಬೇಕು ಹೇಳಿ..!’’ ಮೋಟಾಭಾಯಿ ಅಲವತ್ತುಕೊಳ್ಳುತ್ತಾರೆ. *****

ಇತ್ತ ರಝಿಯಾ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು, ತಲೆ ಮೇಲೊಂದು ಇಟ್ಟಿಗೆ ಬುಟ್ಟಿ ಹೊತ್ತು ಅಸ್ಸಾಮಿನ ಗೋಲ್‌ಪಾರ ಜಿಲ್ಲೆಯಲ್ಲಿ ಕಟ್ಟುತ್ತಿರುವ ಭವ್ಯ ಕಾವಲುಗೋಪುರದ ಬಳಿ ನಡೆಯುತ್ತಿದ್ದಾಳೆ. ಎನ್‌ಆರ್‌ಸಿಯಲ್ಲಿ ಹೆಸರು ಬಿಟ್ಟುಹೋದ ಜನರಿಗಾಗಿ ಎರಡೂವರೆ ಹೆಕ್ಟೇರ್ ಜಾಗದಲ್ಲಿರುವ ಹೊಸ ಕ್ಯಾಂಪ್ ಪಕ್ಕವೇ ಈ ಕಾವಲುಗೋಪುರ ಇರೋದು. ಭವ್ಯಭಾರತದ ಪ್ರಪ್ರಥಮ ಮತ್ತು ಅತಿದೊಡ್ಡ ಬಂಧನ ಕೇಂದ್ರ ಅಂದರೆ ಡಿಟೆನ್ಷನ್ ಕ್ಯಾಂಪ್ ಕಟ್ಟಲಿಕ್ಕಾಗಿ ಕತ್ತರಿಸಿ ಹಾಕಿದ ಹುಲ್ಲನ್ನು ಮೇಯ್ತಾ ಆಲದ ಮರದ ಕೆಳಗೆ ನಿಂತ ಹೋರಿಯೊಂದು ಅವಳತ್ತ ತೆವಲಿನಿಂದ ನೋಡುತ್ತಿದೆ. ಏನಂತಹ ಹೇಳಿಕೊಳ್ಳುವ ಕಾರಣವೇ ಇಲ್ಲದಿದ್ದರೂ ಹೋರಿಯು ಕಪ್ಪುಕನ್ನಡಕವನ್ನು ಹಾಕಿಕೊಂಡಿದೆ. ಬಂಧನ ಕೇಂದ್ರವನ್ನು ‘‘ಮಿನಿಮಲಿಸ್ಟ್ ಆರ್ಟ್ ಮೂವ್‌ಮೆಂಟ್’’ನಿಂದ ತುಸು ಹೆಚ್ಚೇ ಪ್ರಭಾವಿತರಾದ ಆಧುನಿಕೋತ್ತರ ವಾಸ್ತುಶಿಲ್ಪಿಯೊಬ್ಬರು ವಿನ್ಯಾಸ ಮಾಡಿದ್ದಾರೆ. ಕ್ಯಾಂಪಿನ ಒಳಗೆ ಅತ್ಯಾಧುನಿಕ ಸೌಲಭ್ಯಗಳಾದ ಹಾಸಿಗೆ, ಕಕ್ಕಸ್ಸು, ಮಾತ್ರವಲ್ಲ ಬಾಗಿಲುಗಳು ಹಾಗೂ ಕಿಟಿಕಿಗಳೂ ಇವೆಯಂತೆ! ಸದ್ಯದಲ್ಲಿಯೇ ಈ ಕಾಂಕ್ರಿಟ್ ರಾಮರಾಜ್ಯವು ಸುಮಾರು 3,000 ಹತಾಶ ವಲಸಿಗರನ್ನು ಸ್ವಾಗತಿಸಲಿದೆ. ರಝಿಯಾ ಕೂಡ ಅವರಲ್ಲೊಬ್ಬಳು. ಕ್ಯಾಂಪೊಳಗೆ ಒಂದು ಸಭಾಂಗಣ, ಆಸ್ಪತ್ರೆಯಂತಹ ಐಷಾರಾಮಿ ಸೌಕರ್ಯಗಳು ಇವೆ ಎನ್ನಲಾಗುತ್ತಿತ್ತು, ಕ್ಯಾಂಪಿನ ಹೊರಗೆ ಒಂದು ಪ್ರಾಥಮಿಕ ಶಾಲೆ ಕೂಡ ಇದೆಯಂತೆ. ಮಾತ್ರವಲ್ಲ, ಕ್ಯಾಂಪಿಗಾಗಿಯೇ 1941ರ ಜರ್ಮನ್-ಮೇಡ್ ಹಳೆಯ ‘ಗಾಳಿ-ಶುದ್ಧೀಕರಿಸುವ ವ್ಯವಸ್ಥೆ’ ಯಂತ್ರಗಳನ್ನು ತರಿಸಿಕೊಂಡಿದ್ದು, ಅದನ್ನು ಅಲ್ಲಿ ಒಳಗಡೆ ಜೋಡಿಸುವುದು ಮಾತ್ರ ಬಾಕಿ ಉಳಿದಿದೆಯಂತೆ. ಕ್ಯಾಂಪಿನ ನಿವಾಸಿಗಳಿಗೆ ಚಿರಂತನ ಶಾಂತಿಯ, ಆಯುರಾರೋಗ್ಯದ ಸೂಚಕವಾದ ಪವಿತ್ರ ಸ್ವಸ್ತಿಕದ ಚಿಹ್ನೆಯು ಈ ಎಲ್ಲ ಶುದ್ಧೀಕರಣ ಯಂತ್ರಗಳ ಮೇಲೆ ಇರುವುದಂತೆ. ಹಿಂಗಾಗಿ ಗೃಹ ಪ್ರವೇಶದ ಹೋಮಹವನದ ಅಗತ್ಯವಿಲ್ಲವಂತೆ. ರಝಿಯಾ ಖಾಲಿಹೊಡೆಯುವ ಕಾರಿಡಾರುಗಳನ್ನು, ಸುಣ್ಣಹಚ್ಚಿದಬೆಳ್ಳನೆಯ ಗೋಡೆಗಳನ್ನು, ಹಾಲಿನಲ್ಲಿ ಜೋಡಿಸಿದ ಬಂಕ್ ಬೆಡ್ಡುಗಳನ್ನು ದಿಟ್ಟಿಸುತ್ತಾಳೆ, ಅವಳು ಮುಗುಳ್ನಕ್ಕು, ನಿಡಿದಾಗಿ ಉಸಿರೆಳೆದುಕೊಳ್ಳುತ್ತಾಳೆ. ಅದೊಂದು ಬಗೆಯ ಹೊಸ ಭರವಸೆಯ ವಾಸನೆಯಂತೆ ಅನ್ನಿಸುತ್ತದೆ. ಸದ್ಯದಲ್ಲಿಯೇ ಅವಳ ಕನಸಿನ ಮನೆ ಸಿದ್ಧವಾಗುತ್ತೆ. ಅದೂ ಭಾರತದ ಸರಕಾರದ ಪೂರ್ಣ ಪ್ರಾಯೋಜಕತ್ವದಲ್ಲಿ. ಇದರೊಂದಿಗೆ, ನಮ್ಮ ಭವ್ಯ ಭಾರತದ ಕೆಲವು ನವನಿರ್ಮಾಣಗಳ ಕುರಿತು ಇತ್ತೀಚಿನ ಅಪ್‌ಡೇಟ್‌ಗಳು ಇಲ್ಲಿವೆ: ಅ) ಮೋಟಾಭಾಯಿ ಮತ್ತು ಕಂಪೆನಿಯು ದೇಶಾದ್ಯಂತ ಎಲ್ಲರ ಕೂದಲು ಉದುರುವುದು ಹೆಚ್ಚಾಗುತ್ತಿರುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು, ಅದ್ಯಾವುದೋ ಬಕ್ಕತಲೆಯ ವ್ಯಕ್ತಿಯ ಒಂದು ಅಗದಿ ಭಯಂಕರ ಎತ್ತರದ ಪ್ರತಿಮೆಯನ್ನು ಕಟೆದು ನಿಲ್ಲಿಸಿದ್ದಾರೆ. ಸುಮಾರು 3,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಆ ಪ್ರತಿಮೆ ಎಷ್ಟು ಎತ್ತರ ಇದೆ ಎಂದರೆ ಅದರ ಬೊಕ್ಕ ತಲೆಯು ಅಂಬಾನಿಯಿಂದ ಅಂದರೆ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದಲೂ ಢಾಳಾಗಿ ಎದ್ದು ಕಾಣುವುದಂತೆ. ಅಂಬಾನಿಯಲ್ಲಿರುವ ಗಗನಯಾತ್ರಿಗಳಿಗೆ ಪ್ರತಿದಿನ ತಲೆ ತೊಳೆದುಕೊಳ್ಳಲು ಅದು ನೆನಪಿಸುವುದಂತೆ. ಜೊತೆಗೆ ಪ್ರತಿಮೆಯನ್ನು ನೋಡಲು ಹೋದವರಿಗೆ ಪತಂಜಲಿ ಕೂದಲುದುರುವಿಕೆ ಚಿಕಿತ್ಸೆಯ ಒಂದು ಪ್ಯಾಕೆಟ್ ಉಚಿತವಂತೆ. ಆ ಪ್ಯಾಕೆಟ್‌ನಲ್ಲಿ ಒಂದು ಶಾಂಪೂ, ಒಂದು ಕಂಡೀಶನರ್, ಮುಖ್ಯವಾಗಿ ಒಣಹುಲ್ಲಿನಂತಹ ಕೂದಲಿಗಾಗಿ ಒಂದು ಗೋ-ಮೂತ್ರದ ಸ್ಯಾಚೆ ಇರುವುದಂತೆ. ‘ನಾವು ಬೊಕ್ಕತಲೆ ವಿರುದ್ಧ ಮಹಾಯುದ್ಧವನ್ನೇ ಸಾರಿದ್ದೇವೆ’ ಎನ್ನುತ್ತಾರೆ ನಮ್ಮ ಮೋಟಾಭಾಯಿ. ಆ) ಸುಪ್ರೀಂ ಕೋರ್ಟ್ ಕೊನೆಗೂ ನಮ್ಮ ಖ್ಯಾತಿವಂತ, ಗೌರವಾನ್ವಿತ, ಕ್ರಾಂತಿಕಾರಿ, ಆದರ್ಶ ನಾಯಕ, ಸಾಹಸಿ, ಕಪಿಸಂರಕ್ಷಕ, ಪತ್ನೀರಕ್ಷಕ, ಸಂಸ್ಕಾರರಹಿತ ನಾರೀ ನಾಸಿಕ ನಿವಾರಕ, ‘ಮಿಸ್ಟರ್ ರಾಮ್ ಡಿ ಲಲ್ಲಾ’ನಿಗೆ ಬಂಗಲೆಯೊಂದನ್ನು ಕಟ್ಟಿಕೊಳ್ಳಲು 2.77 ಎಕರೆ ಜಾಗವನ್ನು ಕೊನೆಗೂ ಮಂಜೂರು ಮಾಡಿದೆ. ಭಾರತ ಸರಕಾರವೇ ಈ ಅಪಾರ್ಟ್‌ಮೆಂಟ್ ಸಂಕೀರ್ಣವನ್ನು ನಿರ್ಮಿಸುವ ಗುತ್ತಿಗೆ ಪಡೆದಿದ್ದು, ಇದರಲ್ಲಿ ನಾಲ್ಕು ಬೆಡ್‌ರೂಂಗಳು, ಒಂದು ದೊಡ್ಡ ಹೂದೋಟ, ಒಂದು ಖಾಸಗಿ ಬಿಲ್ವಿದ್ಯೆ ಅಭ್ಯಾಸದಂಗಳ, ನೂರಾರು ಬಾಳೆಹಣ್ಣು ಮರಗಳು ಮತ್ತು ದೊಡ್ಡದೊಂದು ವಾನರಸೈನ್ಯ, ಮುಖ್ಯವಾಗಿ ಒಂದು ಅಡುಗೆಮನೆ ಇದರಲ್ಲಿರುವುದಂತೆ. ಅದ್ಯಾರೋ ವಿರಾಜಮಾನ ಹೆಸರಿನ ವ್ಯಕ್ತಿ, ಸೀತಾ ಹೆಸರಿನ ಹೆಂಗಸು ಮತ್ತು ಹನುಮಾನ್ ಎಂಬ ಹೆಸರಿನ ಬಾಲಸಹಿತ ವಿಚಿತ್ರ ವ್ಯಕ್ತಿ ಅದರಲ್ಲಿ ವಾಸಿಸಲಿದ್ದಾರೆ. ಈಗ ಮೂರು ಮುಖ್ಯಾಂಶಗಳನ್ನು ಸಾರಾಂಶೀಕರಿಸಿ ಹೇಳುವುದಾದರೆ- 1. ಭಾರತ ಸರಕಾರವು 2,88,000 ಚದರಡಿಯ ಕ್ಯಾಂಪನ್ನು ಸುಮಾರು 3,000 ವಲಸಿಗರಿಗಾಗಿ 46 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದೆ. ಅಂದರೆ ಪ್ರತೀ ವಲಸಿಗರಿಗೆ 100 ಚದರಡಿ ಜಾಗ ಸಿಗುವುದು. 2. ಜಿಯೋ ಅಂಬಾನಿಯ ಪುಟ್ಟ, ಸುಖೀ ಕುಟುಂಬ 27 ಮಹಡಿಯ 4,00,000 ಚದರಡಿಯಲ್ಲಿ ವಾಸಿಸುತ್ತಿದೆ. 3. ಭಾರತದಲ್ಲಿ ತಲೆ ಮೇಲೊಂದು ಅಂಗೈಯಗಲ ಸೂರಿಲ್ಲದ ಜನರ ಸಂಖ್ಯೆ ಸುಮಾರು 2 ದಶಲಕ್ಷ. ಇದು ನಮ್ಮ ನವನವೀನ ಸಾಹಸೀ ಜಗತ್ತು....

ನಾನಿಲ್ಲಿ ವಿನೈಲ್ ರೆಕಾರ್ಡುಗಳನ್ನು ಹುಡುಕಾಡಿ, ಅಮೆಝಾನ್‌ನಲ್ಲಿ ಆನ್‌ಲೈನ್ ಆರ್ಡರು ಮಾಡಿ, ಅದೇ ದಿನ ನನಗೆ ತಲುಪುವಂತೆ ಮಾಡಬಲ್ಲೆ, ಬಹಳ ಬೇಗ ಮುಖ್ಯವಾಹಿನಿ ಫ್ಯಾಷನ್‌ಗಳನ್ನು ನನ್ನದಾಗಿಸಿಕೊಳ್ಳುವ ಹಿಪ್‌ಸ್ಟರ್ ನಾನೆಂದು ಬೀಗುವೆ. ಮತ್ತು ನೀನು ಅಲ್ಲಿ ಮುದ್ದಾದ ಬೆಕ್ಕಿನ ವೀಡಿಯೊಗಳನ್ನು ಇನ್‌ಸ್ಟಾಗ್ರಾಮಿನಲ್ಲಿ ನೋಡುತ್ತ, ಇಲ್ಲಿರುವುದೇ ಎಂತಹ ಸೌಭಾಗ್ಯವೆಂಬ ಭಾವನೆಯಲ್ಲಿ ಬೆಚ್ಚಗುಳಿಯುವೆ ಮತ್ತು ಅಲ್ಲಿ ಮೋಟಾಭಾಯಿ ಝಗಮಗಿಸುವ ವೇದಿಕೆಯಲ್ಲಿ ತನ್ನ ಹೆಸರನ್ನೇ ಸಾವಿರ ಬಾರಿ ಬಂಗಾರದ ಜರಿಯಲ್ಲಿ ನೇಯ್ದಿರುವ ಸೂಟನ್ನು ಹಾಕಿಕೊಂಡು, ಎನ್‌ಆರ್‌ಸಿಯನ್ನು ದೇಶದ ಎಲ್ಲ ಮೂವತ್ತು ರಾಜ್ಯಗಳಲ್ಲಿಯೂ ಜಾರಿ ಮಾಡುತ್ತೇನೆಂದು ಘೋಷಿಸುತ್ತಾನೆ. ಸರಿ, 3,000 ವಲಸಿಗರಿಗೆ ಒಂದು ಕ್ಯಾಂಪ್ ನಿರ್ಮಾಣಕ್ಕೆ 46 ಕೋಟಿ ರೂ. ಖರ್ಚಾಗಿದೆ. ಹಾಗಾದರೆ ಅಸ್ಸಾಮಿನಲ್ಲಿರುವ 1.8 ದಶ ಲಕ್ಷ ವಲಸಿಗರಿಗೆ ಮತ್ತು ಇನ್ನುಳಿದ 29 ರಾಜ್ಯಗಳಿಗೆ ಎಷ್ಟಾಗುತ್ತದೆ. 46 ಕೋಟಿಯನ್ನು 1.8 ದಶಲಕ್ಷದಿಂದ ಗುಣಿಸಿ, 3,000ದಿಂದ ಭಾಗಿಸಿ... ನಾನು ಲೆಕ್ಕ ಹಾಕಲು ಯತ್ನಿಸುತ್ತೇನೆ... ನನ್ನ ಕ್ಯಾಲ್ಕುಲೇಟರ್ ನನ್ನನ್ನು ಪರಮ ರಾಷ್ಟ್ರದ್ರೋಹಿ ಎಂದು ಕರೆದು, ಈ ಲೆಕ್ಕಾಚಾರ ಮಾಡಲು ಸುತಾರಾಂ ಒಲ್ಲೆ ಎನ್ನುತ್ತದೆ! ಈಗ ಕೇಳಿರಿ: ಮೋಟಾಭಾಯಿ ಮುಂದಿನ ವರ್ಷ ತಮ್ಮ ಆತ್ಮಚರಿತ್ರೆ ಪ್ರಕಟಿಸಲು ಯೋಚನೆ ಮಾಡಿದ್ದಾರೆ. ಅದರ ಶೀರ್ಷಿಕೆ ‘ನನ್ನ ಸಂಘರ್ಷ’ ಮತ್ತು ಅದನ್ನು 40 ಬೇರೆ ಬೇರೆ ಭಾಷೆಗಳಲ್ಲಿ ಅನುವಾದಿಸಲಿದ್ದಾರೆ. ಅದರ ಜರ್ಮನ್ ಅನುವಾದಕರು ಈಗಲೇ ತಲೆ ಚಚ್ಚಿಕೊಳ್ಳುತ್ತಿದ್ದಾರಂತೆ. *****

ಬೆಕ್ಕುಗಳು ತಾವು ಈಗಾಗಲೇ ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧವಿದ್ದೇವೆ ಮತ್ತು ತಮ್ಮನ್ನು ಈ ಮಾಧ್ಯಮಗಳು ಸಿಎಎ + ಎನ್‌ಆರ್‌ಸಿ ಬೆಂಬಲಿಗರು ಎಂದು ತಪ್ಪಾಗಿ ತೋರಿಸಿವೆ ಹೇಳಿಕೆಯೊಡನೆ ಹೊರಬಂದಿವೆ. ಅದೇ ವೇಳೆ ಸಂಸತ್ತಿನಲ್ಲಿ ಅವುಗಳ ಏಕೈಕ ಪ್ರತಿನಿಧಿಯು ಮಸೂದೆಯ ಪರವಾಗಿ ಮತ ಚಲಾಯಿಸಿದ್ದು, ಅವು ಬೇರೆ ಯಾರಿಗೂ ಸೇವೆ ಸಲ್ಲಿಸುವುದಿಲ್ಲ, ತಮ್ಮ ಹೊರತಾಗಿ ಎಂಬುದನ್ನು ಸಾಬೀತುಪಡಿಸುತ್ತದೆ. ಆದರೇನು ಮಾಡುವುದು... ಎಷ್ಟೆಂದರೂ ಅವು ಬೆಕ್ಕುಗಳು! ಇದೇ ವೇಳೆ ದೇಶಾದ್ಯಂತ ನಾಯಿಗಳು ಈ ಬಗ್ಗೆ ಹುಚ್ಚಾಗಿ ಓಡಾಡುತ್ತಿವೆ: ಬಾಗಿಲುಗಳು ಮತ್ತು ಕಾಲುಗಳ ಮೇಲೆಲ್ಲ ಉಚ್ಚೆ ಹೊಯ್ಯುವುದು, ಟೈರುಗಳು ಮತ್ತು ಬೈಕ್‌ಸವಾರರ ಚಪ್ಪಲಿಗಳನ್ನು ಕಚ್ಚಿ ತಿನ್ನುವುದು ಮತ್ತು ಆಗೀಗ ನಟ್ಟ ನಡುರಾತ್ರಿ ಊಳಿಡುವುದು ಮಾಡುತ್ತಿವೆ. ಇತ್ತೀಚಿನ ಮಾಹಿತಿಗಳ ಪ್ರಕಾರ 925 ನಾಯಿಗಳನ್ನು ಬಂಧಿಸಲಾಗಿದ್ದು, ಅವನ್ನು ಪ್ರಶ್ನಿಸಲಾಗುತ್ತಿದೆ. ಇನ್ನು ನಾಯಿಗಳು ಪಾರ್ಲೆ-ಜಿ ಆಕರ್ಷಣೆಯಿಂದ ವಾಹನಗಳನ್ನು ಬೆನ್ನಟ್ಟುವುದು ಸಂವಿಧಾನದ ಅದ್ಯಾವುದೋ ನಂಬರಿನ ಅನುಚ್ಛೇದದ ಪ್ರಕಾರ ಶಿಕ್ಷಾರ್ಹ ಅಪರಾಧವಂತೆ. *****

ನಾನು ಆರಾಮಾಗಿ ಕೂತು ನಾಚೋಸ್ ಚಿಪ್ಸ್‌ಅನ್ನು ಗೋವರ್ಧನಭಾಯಿ ಗೋವಿಂದಜಿ ಚೂಡಾವಾಲನ ಹಸಿರು ಚಟ್ನಿಯಲ್ಲಿ ಅದ್ದಿ ತಿನ್ನುತ್ತಿದ್ದಾಗಲೇ ಸಿಎಬಿ ಈಗ ಸಿಎಎ ಆಯಿತು ಎಂಬ ಸುದ್ದಿ ಸಿಕ್ಕಿತು. ‘ವಾಟ್ ದಿ ಫಕ್’ ಎಂದುಕೊಂಡೆ. ಗೌಹಾಟಿಯಲ್ಲಿರುವ ಗೆಳೆಯರಿಗೆ ಫೋನ್ ಮಾಡಿದೆ. ನಾವೆಲ್ಲ ಬಿಲ್ಲಿ ಬೋರ್ಗ್‌ಹೈನ್ ಜೊತೆಗೆ ಬೀದಿಗಿಳಿದು ತಾಯ್ನಿಡಿಗಾಗಿ ಹೋರಾಡ್ತ್ತಿದ್ದೀವಿ ಎಂದರವರು. ನನ್ನೊಳಗಿನ ಅಹೋಮಿಯ ಕೂಡ ಎಚ್ಚರಾಗತೊಡಗಿದ: ನಾನು ಬೇಗಬೇಗನೆ ನಾಚೋಸ್ ತಿಂದು ಮುಗಿಸಿ, ಉಳಿದಿದ್ದ ಚಟ್ನಿಯನ್ನು ಪ್ರತಿಭಟನಾರ್ಥವಾಗಿ ಕಸದ ಬುಟ್ಟಿಗೆ ಎಸೆದು, ಟಿವಿಯಲ್ಲಿ ಸುದ್ದಿ ಚಾನೆಲ್ ನೋಡತೊಡಗಿದೆ. ಅದು ಹುಚ್ಚರ ಸಂತೆಯಂತಿತ್ತು: ಮೋಟಾಭಾಯಿ ಕರ್ಫ್ಯೂ ಹೇರಿದ್ದ ಮತ್ತು ಅಹೋಮಿಯಾಗಳು ಇಂಗ್ಲಿಷ್‌ನ ‘ಕಾರ್ನಿವಲ್’ (ಉತ್ಸವ)ಗೆ ಗುಜರಾತಿಯಲ್ಲಿ ‘ಕರ್ಫ್ಯೂ’ ಎನ್ನುತ್ತಾರೆ ಎಂದು ತಪ್ಪಾಗಿ ತಿಳಿದುಕೊಂಡುಬಿಟ್ಟರು. ಎಲ್ಲರೂ ರಸ್ತೆಗಿಳಿದಿದ್ದರು - ಟೈರು ಸುಡುವುದು, ಕಲ್ಲು ತೂರಾಟ, ಕೋಲೆಸೆತ ಮತ್ತು ಅಹೋಮಿಯರೆಲ್ಲ ಚೀರಾಟ, ಕೂಗಾಟ, ಹಾರಾಟ, ಓಟ, ಹಾಡು ಮತ್ತು ಕುಣಿತದಲ್ಲಿ ತೊಡಗಿದ್ದರು. ಅಷ್ಟೇ ಅಲ್ಲ, ರಸ್ತೆಗಳ ಮೇಲೆ ಉಚ್ಚೆ ಕೂಡ ಹೊಯ್ಯತೊಡಗಿದ್ದರು. ಈ ಎಲ್ಲವೂ ನಡೆದ ನಂತರ, ಹೊರಗೆಲ್ಲ ಧೂಳೇ ಧೂಳು ತುಂಬಿದ್ದಾಗ, ಅಹೋಮಿಯಗಳು ಸಂಜೆ ಮನೆಗೆ ಮರಳಿದರು, ಮಾರ-ಬಾತ್ (ಅನ್ನದೂಟ) ಮಾಡಿ, ನಿದ್ರೆಗೆ ಶರಣಾದರು. ಎಷ್ಟೋ ದಿನಗಳ ನಂತರ ಅವರು ಹೀಗೆ ಭಾರೀ ದಣಿವಾಗುವಂತೆ ಕೆಲಸ ಮಾಡಿದ್ದರು. ಮರುದಿನ ಚೋಲೆ-ಭತೂರೆ ಇಷ್ಟಪಡುವ ಬಿಲ್ಲಿ ಬೋರ್ಗಹೈನ್ ತಿಂಡಿಗೆ ಸಿರ-ದೋಯಿಯನ್ನೇ (ಅವಲಕ್ಕಿ-ಮೊಸರು) ತಿನ್ನುತ್ತೇನೆಂದು ಘೋಷಿಸಿದ. ತಿಂಡಿ ತಿನ್ನುತ್ತ ಟಿವಿ ಆನ್ ಮಾಡಿದರೆ ಎಲ್ಲೆಡೆ ಕಸ ತುಂಬಿದ್ದ ರಸ್ತೆ ತಿಪ್ಪೆಯ ಹಾಗೆ ಕಾಣುತ್ತಿತ್ತು. ರಸ್ತೆಯಲ್ಲಿ ಬಿದ್ದಿದ್ದ ಕಸವನ್ನೆಲ್ಲ ಎತ್ತಿಕೊಂಡು ಹೋಗಲು ಯಾರೂ ಬಂದಿರಲೇ ಇಲ್ಲ. ಅಯ್ಯೋ... ಇದೇನಿದು! ಬೀದಿ ಕಸಗುಡಿಸುವ ಆ ಬಾಂಗ್ಲಾದೇಶೀಯರೆಲ್ಲ ಎಲ್ಲಿ ಸತ್ತರಪ್ಪ????

ಹಾಳಾಗಿ ಹೋಗಲಿ ಅತ್ಲಾಗೆ. ಸರಿ, ಈಗ ಕ್ರಿಕೆಟ್ ಆಡೋಣ್ವಾ. ಬಿಲ್ಲಿ ಮತ್ತು ಸಹೋದರರು ಹೇಳುತ್ತಾರೆ - ಇಲ್ಲಿ ಹಿಂದೂಗಳು ಬೇಡ, ಮುಸ್ಲಿಮರು ಬೇಡ, ಬಾಂಗ್ಲಾದೇಶೀಯರು ಬೇಡ ಮತ್ತೆ ಬಂಗಾಳಿಗಳಂತೂ ಬೇಡವೇ ಬೇಡ. ಕೇವಲ ಮೂಲ ಕೊಕಾಯ್‌ಗಳು ಮಾತ್ರ. *****

 ಇದೀಗ ಭಾರತ ಸರಕಾರ ಹೇಳುತ್ತಿದೆ 31,313 ಜನರು ಪೌರತ್ವ (ತಿದ್ದುಪಡಿ)ಕಾಯ್ದೆ (ಸಿಎಎ)ಯ ತತ್‌ಕ್ಷಣದ ಫಲಾನುಭವಿಗಳು ಎಂದು. ಇವರೆಲ್ಲ ಯಾರಪ್ಪಾ ಅಂದರೆ - 449 ಮಹಾನ್ ಹಿಂದೂಗಳು, 5,727 ಹಿಂದೂಗಳೆಂದು ವೇಷಮರೆಸಿಕೊಂಡ ನಾಸ್ತಿಕರು, 4,272 ಹಿಪ್‌ಸ್ಟರ್ ಹಿಂದೂಗಳು, 14,998 ಯಾರಿಗೂ ಕ್ಯಾರೇ ಎನ್ನದ ಹಿಂದೂಗಳು, 5,807 ಸಿಖ್ಖರು, 55 ಕ್ರಿಶ್ಚಿಯನ್ನರು, ಇಬ್ಬರು ಬೌದ್ಧರು ಮತ್ತು ಒಂದು ಪಾರ್ಸಿ ದಂಪತಿ. ಈಗ ಒಂದು ಮುನ್ನೋಟ

20 ಜನವರಿ 2024: ಹಲವಾರು ವರ್ಷಗಳಿಂದ ಗೋಜಾತೀಯರ ಅಭೂತಪೂರ್ವ ವಲಸೆಯ ನಂತರ, ಹೆಣ್ಣುಮಕ್ಕಳನ್ನು ಚುಡಾಯಿಸುವುದಕ್ಕಿಂತ ಗೋ-ಚುಡಾಯಿಸುವಿಕೆಯು ಮೇರೆ ಮೀರಿದ್ದು, ತುರ್ತು ಗಮನ ನೀಡಬೇಕಾದ ಸಾಮಾಜಿಕ ಪಿಡುಗು ಆಗಿದೆ. ಬೆಕ್ಕುಗಳು ಗೋವುಗಳತ್ತ ಕಣ್ಣು ಮಿಟುಕಿಸಿ ಸೀಟಿ ಹಾಕುತ್ತಾವಂತೆ, ಕೆಲವು ರೌಡಿ ನಾಯಿಗಳಂತೂ ಗೋವುಗಳತ್ತ ತಿರುಗಿ ತಮ್ಮ ಗುಪ್ತಾಂಗಗಳನ್ನು ತೋರಿಸುತ್ತಾವಂತೆ, ಅಷ್ಟೇ ಅಲ್ಲ ಮಾರಾಯರೇ... ಟ್ರಾಫಿಕ್ ದಟ್ಟಣೆಯನ್ನು ದುರುಪಯೋಗಪಡಿಸಿಕೊಳ್ಳುವ ಕೆಲವು ಗಂಡಸರು ಗೋವುಗಳನ್ನು ಹೇಗ್ಹೇಗೋ ಎಲ್ಲೆಲ್ಲೋ ಮುಟ್ಟುತ್ತಾರಂತೆ ಕೂಡ! ಗೋ ಸುರಕ್ಷಾ ಸಮಿತಿಯ(ಗೋಸುಸ) ಅಧ್ಯಕ್ಷರು ಸುರಕ್ಷತೆಯನ್ನು ಹೆಚ್ಚಿಸಲು ತಾವು ಪ್ರಯತ್ನಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ: ಆರೆಫ್‌ಐಡಿ ಟ್ಯಾಗ್‌ಗಳನ್ನು ಈಗಾಗಲೇ ಗೋಕೊರಳಿಗೆ ತೂಗುಬಿಡಲಾಗಿದೆ. ಜೊತೆಗೆ ಅವು ಸದಾ ಸುರಕ್ಷಿತವಾಗಿ, ಸಂಪರ್ಕದಲ್ಲಿರುವಂತೆ ಮಾಡಲು ಸದ್ಯದಲ್ಲಿಯೇ ಅನ್‌ಲಿಮಿಟೆಡ್ ಜಿಯೋ ಡೇಟಾ ಇರುವ ಐಫೋನುಗಳನ್ನೂ ನೀಡಲಾಗುವುದು. ಇಷ್ಟಾಗಿಯೂ ಗೋಸುಸ ಅಧ್ಯಕ್ಷರು ಗೋಕರುಗಳಿಗೆ ಸ್ವಲ್ಪ ‘ಸರಿಯಾಗಿ’ ಡ್ರೆಸ್ ಮಾಡಿಕೊಳ್ಳುವಂತೆಯೂ, ಏನಾದರೂ ಅಹಿತಕರ ಘಟನೆಗಳು ನಡೆದರೆ ರಸ್ತೆಯಲ್ಲಿರುವ ಗೋ-ಮಾತಾ ದಳದ ಸ್ವಯಂಸೇವಕರಿಗೆ ವರದಿ ಮಾಡುವಂತೆಯೂ ಒತ್ತಾಯಿಸಿದ್ದಾರೆ. ‘ಛೀ ಛೀ... ನಿಮ್ಮ ಮಾತೆಯನ್ನು ಯಾಕೆ ಹಾಗೆಲ್ಲ ಮುಟ್ಟುತ್ತೀರಿ’’ ಅಂತ ಗೋ ಮಾತಾ ದಳದ ಸ್ವಯಂಸೇವಕರು ಪ್ರಶ್ನೆ ಮಾಡುತ್ತಾರೆ. ‘‘ಮುಖ್ಯವಾಗಿ ಸಮಸ್ಯೆ ಯಾಕಪ್ಪಾ ಅಂದ್ರೆ ಗೋವುಗಳು ಬಟ್ಟೆ ಹಾಕಿಕೊಳ್ಳೋದಿಲ್ಲ. ಜೊತೆಗೆ ಇದೆಲ್ಲದಕ್ಕೆ ಕಳಶವಿಟ್ಟಂತೆ ಅವು ಭಯಂಕರ ಸಂಯಮಿಗಳು ಬೇರೆ. ನೀವೇ ಹೇಳಿ ಏನು ಮಾಡೋದು’ ಎನ್ನುತ್ತಾರೆ ಗೋಸುಸ ಅಧ್ಯಕ್ಷರು. *****

ಸರಿ, ಬಿಲ್ಲಿ ಬೊರಗೊಹೈನ್ ನಂತರ, ಈಗ ನನಗೆ ನನ್ನದೇ ಅಸ್ತಿತ್ವದ ಕುರಿತ ಭಯಂಕರ ಅನುಮಾನಗಳು ಶುರುವಾದವು: ಅಹೋಮಿಯಾ ಎಂದರೆ ಯಾರು? ಎಷ್ಟೋ ವರ್ಷಗಳಿಂದ ನಾನು ಮೇಜಿ-ಘೊರ್ (ಸಂಕ್ರಾಂತಿ ಸಮಯದಲ್ಲಿ ಹಬ್ಬವನ್ನು ಆನಂದಿಸಲು ಕಟ್ಟುವ ಹುಲ್ಲಿನ ತಾತ್ಕಾಲಿಕ ಗುಡಿಸಲು) ಅನ್ನೇ ನೋಡಿರದಿದ್ದರೂ, ನಾನು ಅಹೋಮಿಯಾನೆ? ಕೊಸು (ಕೆಸ) ಮತ್ತು ಖಾರ್ ಅನ್ನು ತುಸು ಹೆಚ್ಚೇ ಉತ್ಪ್ರೇಕ್ಷೆ ಮಾಡಲಾಗಿದೆ ಎಂದು ನಾನು ಪ್ರಾಮಾಣಿಕವಾಗಿ ಯೋಚಿಸಿದರೂ, ನಾನು ಅಹೋಮಿಯಾನೆ? ಭೂಪೇನ್ ಹಜಾರಿಕಾರನ್ನು ಮೊದಲ ಬಾರಿ ನೋಡಿದಾಗ ಅವರು ನೇಪಾಳಿ ಎಂದು ನಾನು ಯೋಚಿಸಿದ್ದರೂ ನಾನು ಅಹೋಮಿಯಾನೆ? ಬೆಂಗಳೂರಿನ ರವೆ ಇಡ್ಲಿ ನಮ್ಮೂರಿನ ಗಿಲ್ ಪಿತಾಗಳಿಗಿಂತ ಹೆಚ್ಚು ರುಚಿಯಾಗಿರುತ್ತದೆ, ಕೆಲಸದಿಂದ ದಣಿವಾದಾಗ ರಾತ್ರಿ ತಿಲ್ ಪಿತಾಗಿಂತ ಕೋಲ್ಕತಾ ಕಟ್ಟಿ ರೋಲ್ ನಿಂದ ಚೆನ್ನಾಗಿ ಹೊಟ್ಟೆ ತುಂಬುತ್ತೆ ಅಂತ ಯೋಚಿಸಿದರೆ, ನಾನು ಅಹೋಮಿಯಾ ಆಗಿ ಉಳಿಯುವುದಿಲ್ಲವೇ? ನನಗೆ ತಾಲವ್ಯ ‘ಹೊ’, ಮೂರ್ಧನ್ಯ ‘ಹೊ’ ಮತ್ತು ದಂತ್ಯ ‘ಹೊ’, ಈ ಮೂರು ಅಕ್ಷರಗಳ ನಡುವಣ ವ್ಯತ್ಯಾಸವೇ ಗೊತ್ತಿಲ್ಲ, ಅವುಗಳನ್ನು ಬೇರೆ ಬೇರೆ ಥರ ಹೇಗೆ ಉಚ್ಚರಿಸಬೇಕು ಎಂಬುದಂತೂ ದೂರ ಉಳಿಯಿತು, ಹಾಗಾದರೆ ನಾನು ಅಹೋಮಿಯಾ ಅಲ್ಲವೇ? ಅಸ್ಸಾಮಿ ನಟ ಜೊತಿನನಿಗಿಂತ ಶಾರುಖ್ ಖಾನನ ಹುರಿಗಟ್ಟಿದ ಸ್ನಾಯುಗಳು ಚೆನ್ನಾಗಿವೆ, ಹೆಚ್ಚುಕಡಿಮೆ ಎಲ್ಲಾ ಅಸ್ಸಾಮಿ ಸಿನೆಮಾಗಳು ಭಾರೀ ಬೋರು ಎನ್ನಿಸಿದರೂ, ನಾನು ಅಹೋಮಿಯಾನೇ?

ನಾನು ಟಿವಿ ಆಫ್ ಮಾಡಿ, ಸೋಫಾದ ಮೇಲೆ ಕಾಲು ಚಾಚಿ ಕೂತು, ವಿಸ್ಕಿ ಹೀರುತ್ತ ಸೂರ್ಯಾಸ್ತವನ್ನು ನೋಡತೊಡಗಿದೆ. ಒಂದು ಪಾರಿವಾಳ ಒಳಗೆ ಬಂದು ಬಾಲ್ಕನಿಯಲ್ಲಿ ಕುಳಿತುಕೊಂಡಿತು. ಕಿತ್ತಳೆ ಬಣ್ಣದ ಆಕಾಶದಿಂದಾಗಿ ಅದರ ದೇಹ ಛಾಯಾಬಿಂಬದಂತೆ ಕಾಣುತ್ತಿತ್ತು. ತುಂಬ ಸುಂದರ ಸಂಜೆ. ತಣ್ಣನೆಯ ಗಾಳಿಯು ವಿಂಡ್ ಚೈನ್‌ನ ಗಂಟೆಗಳನ್ನು ಮೆಲುವಾಗಿ ತಟ್ಟುತ್ತಿತ್ತು. ನಾನು ಇನ್ನೊಂದು ಗುಟುಕು ಕುಡಿದೆ. ಅದೇ ಕ್ಷಣ ಪಾರಿವಾಳ ಕಿಟಕಿ ಕಟ್ಟೆಯ ಮೇಲೆ ಅರೆಕ್ಷಣ ಕೂತು, ಹಾರಿಹೋಯಿತು. ತಟ್ಟನೆ, ನನಗೇ ಅರಿವಿಲ್ಲದೇ ಎರಡಕ್ಷರದ ಆ ಪದ ಬಾಯಿಂದ ಹೊರಬಿತ್ತು: ಕೇಲಾ. ಅರೇ ಹೌದು... ನಾನು ಕೊಕಯ್. ನನಗೆ ಉತ್ತರ ಸಿಕ್ಕಿತ್ತು. ಹೌದು, ನಾನು ಎಷ್ಟೋ ವರ್ಷಗಳಿಂದ ಮೆಜೊ-ಘೊರ್ ನೋಡಿಯೇ ಇರದಿದ್ದರೂ ನಾನು ಅಹೋಮಿಯಾನೆ. ಯಾಕೆಂದರೆ ವರ್ಷದ ಮೊದಲ ದಿನ ಹಿಂದಿನ ರಾತ್ರಿಯ ಗುಂಡು ಪಾರ್ಟಿಯ ಪ್ರಭಾವದಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡು, ತೀವ್ರವಾದ ತಲೆನೋವಿನಿಂದ ಎದ್ದಾಗ, ಬಿಹು ಹಬ್ಬಕ್ಕೆ ಮನೆಗೆ ಹೋಗುವ ಬಯಕೆ ಇನ್ನಿಲ್ಲದಂತೆ ಆವರಿಸುತ್ತದೆ. ಯಾಕೆಂದರೆ ಮಸಾಲಾ ಟೀಗೆ ಎಷ್ಟೇ ಶುಂಠಿ, ಏಲಕ್ಕಿ, ದಾಲ್ಚಿನ್ನಿ ಹಾಕಿದರೂ, ಬೆಳಗಿನ ಹ್ಯಾಂಗೋವರ್ ಸರಿಹೋಗಲಿಕ್ಕೆ ನಿನಗಿರುವ ಒಂದೇ ಉಪಾಯ ಎಂದರೆ ಒಂದು ಸ್ಟ್ರಾಂಗ್ ಸೆನಿ-ನಿದಿಯ ಅಂದರೆ ಸಕ್ಕರೆಯಿಲ್ಲದ ಟೀ. ಯಾಕೆಂದರೆ ನಿನಗೆ ಟೀ ಎಂದರೆ ಕೆಂಪು ಟೀ, ರೊಂಗಾ, ಯಾವತ್ತೂ ಕಪ್ಪು ಟೀ ಅಲ್ಲ. ಯಾಕೆಂದರೆ ಅಹೋಮಿಯಾರಲ್ಲದ ನಿನ್ನ ಗೆಳೆಯರ ನಡುವೆ ಒದ್ದಾಡದೇ ಕೊಸುವನ್ನು ಜೀರ್ಣಿಸಿಕೊಳ್ಳಬಲ್ಲವ ಅಥವಾ ಕಲ್ಲಿನಷ್ಟು ಗಟ್ಟಿಯಾದ ಗಿಲ್ ಪಿತಾವನ್ನು ತಿಂದುಮುಗಿಸುವವ ನೀನೊಬ್ಬನೇ. ಯಾಕೆಂದರೆ ನಿನಗೆ ಅದು ಗಟ್ಟಿ ಎಂದಾಗಲೀ ಅಥವಾ ಸಪ್ಪಗೆ ಎಂದಾಗಲೀ ಅಥವಾ ಹಳಸಿದಂತೆ ಎಂದಾಗಲೀ ಅನ್ನಿಸುವುದಿಲ್ಲ. ನಿನಗೆ ಅದು ಮನೆಯ ಘಮದಂತೆ ಅನ್ನಿಸುತ್ತೆ. ಯಾಕೆಂದರೆ ಬಿಸಿಬಿಸಿ ನೀರಿನ ಸ್ನಾನದ ನಂತರ, ನಿನ್ನ ಹೊಸ ಈಜಿಪ್ಷಿಯನ್-ಕಾಟನ್ ಟವೆಲ್ ಎಷ್ಟೇ ಮೃದುವಾಗಿ, ನಯವಾಗಿದ್ದರೂ, ಹಸಿಯಾದ ಅಂಡನ್ನು ಹಳೆಯ ಗಮುಸದಿಂದ ಒರೆಸಿಕೊಳ್ಳುವ ಸುಖಕ್ಕೆ ಸಮನಾದುದು ಯಾವುದೂ ಇಲ್ಲ. ಯಾಕೆಂದರೆ ನೀನು ‘ ?/?/?’ (ಹೊ) ಈ ಮೂರರಲ್ಲಿ ಯಾವುದಾದರೂ ಒಂದನ್ನಂತೂ ಖಂಡಿತವಾಗಿಯೂ ಉಚ್ಚರಿಸಬಲ್ಲೆ ಮತ್ತು ಮೋಟಾಭಾಯಿ ಖಂಡಿತವಾಗಿಯೂ ಉಚ್ಚರಿಸಲಾರ! ಯಾಕೆಂದರೆ ಈ ಅಕ್ಷರ ? ಇದೆಯಲ್ಲ, ಇದು ನೋಡಲೇನೋ ಆಚೆಈಚೆ ಎರಡು ಪುಟಾಣಿ ಚೆಂಡು ತೂಗಿಬಿದ್ದು ತಪ್ಪುಜಾಗದಲ್ಲಿಟ್ಟ ಶಿಶ್ನದ ಹಾಗೆ ಕಾಣಬಹುದು, ಆದರೆ ನೀನು, ನೀನು ಕೊಕಯ್, ಈ ಅಕ್ಷರದ ಹೊರರೇಖೆಗಳಲ್ಲಿ ಅಡಗಿದ, ಬೇರಾರಿಗೂ ಕಾಣದ ಆಧುನಿಕೋತ್ತರ ಸೌಂದರ್ಯವನ್ನು ಕಾಣಬಲ್ಲೆ. ಯಾಕೆಂದರೆ ನಿನಗೆ 99 ಸಮಸ್ಯೆಗಳಿರಬಹುದು, ಆದರೆ ಮೀನಿನ-ಮೂಳೆ ಅದರಲ್ಲೊಂದು ಅಲ್ಲವೇ ಅಲ್ಲ. ಯಾಕೆಂದರೆ ನೀನು ನಿನ್ನ ಸಂಶೋಧಕ ಗೆಳೆಯನೊಂದಿಗೆ ಭಾರೀ ರಾಜಕೀಯ ಚರ್ಚೆಯಲ್ಲಿ ಮುಳುಗಿದ್ದಾಗ ಸದ್ಯದ ಆರ್ಥಿಕತೆ ಕುರಿತಾಗಿ ‘ಫಕ್ಡ್ ಅಪ್’ ಎನ್ನಬಹುದು, ಆದರೆ ಮಧ್ಯರಾತ್ರಿ ಬೆವರಿಳಿಯುವ ಸೆಕೆಯಲ್ಲಿ, ಕರೆಂಟು ಕೈಕೊಟ್ಟಾಗ, ನಿನಗೇ ಅರಿವಿಲ್ಲದಂತೆ ನೀನು ಉಸುರುವ ಮೊದಲ ಪದ ಬಾಲ ಅಥವಾ ಕೇಲಾ ಅಥವಾ ಎರಡೂ ಒಟ್ಟಿಗೆಯೇ. ಯಾಕೆಂದರೆ ಉಳಿದವರು ಧುಲ್ ಯಾಕೆ ಯಾವಾಗಲೂ ಅರ್ಧ ತಾಳ ತಡವಾಗಿ ಶುರುವಾಗುತ್ತೆ ಅಂತ ತಡಬಡಿಸುವಾಗ, ನೀನೊಬ್ಬನೇ ಬಿಹು ಹಾಡಿಗೆ ದನಿ ಜೋಡಿಸಬಲ್ಲೆ. ಯಾಕೆಂದರೆ ನಿನಗೆ ಕೀರ್ತೊನ್ (ಕೀರ್ತನೆ)ಗಳ ಪದ್ಯಸಾಲುಗಳು ಪೂರ್ಣ ಅರ್ಥವಾಗದಿದ್ದರೂ, ಅದು ಯಾವಾಗಲೂ ಹೇಳಲಾಗದಷ್ಟು ಮಧುರವಾಗಿಯೂ, ಮೃದುವಾಗಿಯೂ ಕೇಳಿಸುತ್ತದೆ ಮತ್ತು ಜಗತ್ತಿನ ಯಾವುದೇ ಪವಿತ್ರ ಗ್ರಂಥಗಳಿಗಿಂತಲೂ ಹೆಚ್ಚು ಆಳವಾಗಿ ಮನಕಲಕುವಂಥದ್ದೂ ಆಗಿರುತ್ತದೆ. ಯಾಕೆಂದರೆ ನೀನು ಕೊಕಯ್, ಖಾತಿ ಅಹೋಮಿಯ. ಮೂಲ ಅಹೋಮಿಯಾ. ಖಾತಿ ಅಹೋಮಿಯಾಗಳು ಧರ್ಮದ ಬಗ್ಗೆ ಸುಖಾಸುಮ್ಮನೆ ಬೊಗಳುವುದಿಲ್ಲ. ನಾವು ನಮ್ಮ ಸಂಸ್ಕೃತಿಯ ಕುರಿತು ಕಾಳಜಿ ವಹಿಸುತ್ತೇವೆ ಮತ್ತು ನಾವು ಇದೀಗ ಈ ಎರಡನ್ನೂ ಬೇರ್ಪಡಿಸಬೇಕಾದ ಸಮಯ ಬಂದಿದೆ. ನಮಗೆ ನಮ್ಮ ಸಂಸ್ಕೃತಿಯ ಆಚರಣೆಗೆ ಒಂದು ನಿರ್ದಿಷ್ಟ ಜಾಗದ ತುಣಕು ಬೇಕಿಲ್ಲ ಅಥವಾ ಒಂದು ನಿರ್ದಿಷ್ಟ ಬಗೆಯ ಮೂರ್ತಿಗಾಗಿ ಕಾಯುವುದಿಲ್ಲ ಅಥವಾ ಒಂದು ನಿರ್ದಿಷ್ಟ ಬಗೆಯ ಉಡುಗೆ ಅಥವಾ ನಕ್ಷತ್ರಗಳು ನಿರ್ದಿಷ್ಟ ಪಥದಲ್ಲಿ ಸೇರುವುದು, ಈ ಯಾವುದೂ ಬೇಕಿಲ್ಲ. ನಾವು ನಮ್ಮ ನಿಧಾನಗತಿಯ, ಆಲಸ್ಯದ, ತೂಕಡಿಕೆಯ ಬಾಳಿನಲ್ಲಿ ದಿನದಿನವೂ ಅಹೋಮಿತನವನ್ನು ಮೈಗೂಡಿಸಿಕೊಂಡಿದ್ದೇವೆ. ಸ್ನೇಹಿ ಕೊಕಾಯಿಗಳು ನಿಮ್ಮಂಥ ಪಾಪಿಗಳನ್ನು ಹಗುರಾಗಿ ಪರಿಗಣಿಸುತ್ತಾರೆ ಮತ್ತು ಅವರೊಲ್ಲಬ್ಬನಾಗಿರುವುದಕ್ಕೆ ನಾನು ಅಭಿಮಾನ ಪಡುವೆ. ಆದರೆ ಇದನ್ನೂ ನೆನಪಿಡಿ: ಒಂದು ತುಂಬ ದೊಡ್ಡ, ತೀರಾ ಭಾವನಾತ್ಮಕ ಬೊರ್ತುಕುಲ (ದೊಡ್ಡ ಕೊಕ್ಕರೆ) ನಮ್ಮೆಲ್ಲರೊಳಗೆ ಸದ್ದಿಲ್ಲದೆ ನಿದ್ರಿಸುತ್ತಿದೆ. ನೀವು ಸಿಎಎ, ಸಿಎಬಿ ಇತ್ಯಾದಿ ಅರಚಾಟಗಳಿಂದ ತೊಂದರೆ ಮಾಡಲು ಪ್ರಯತ್ನಿಸಿದಿರೋ, ಆಗ 1.3 ಕೋಟಿ ಬೊರ್ತುಕುಲಾಗಳು ಬೂದಿಯಿಂದ ಫೀನಿಕ್ಸ್‌ನಂತೆ ಹ್ಯಾಗೆ ಕೋಪೋದ್ರಿಕ್ತರಾಗಿ ಮೇಲೇಳುತ್ತಾರೆ ಎಂದರೆ ರಾಮ್ ಡಿ ಲಲ್ಲಾ ಕೂಡ ‘ಅಯ್ಯೋ... ನಾನಿವತ್ತು ಎಂಥ ಫಜೀತಿಗೆ ಸಿಕ್ಕಿಕೊಂಡೆ’’ ಎಂದು ತನ್ನ 4 ಬಿಎಚ್‌ಕೆಯ ಅರಮನೆಯ ಹಿಂದೆ ಅಡಗಲು ಓಡುತ್ತಾನೆ!! ಸರಿ, ನಾನೀಗ ಮಲಗಕ್ಕೆ ಹೋಗ್ತೀನಿ.

ಕನಸಿನಲ್ಲಿ ಸಂಗೀತಗಾರ ಜಾನಿ ಡೆಪ್ ಗಮ್ ಖರು ಬಳೆ ಹಾಕಿಕೊಂಡು, ಮುಗರ್ ಮೆಖೆಲ ಚದೊರ್ ತೊಟ್ಟುಕೊಂಡು ಬರುತ್ತಾನೆ ಮತ್ತು ಮೆತ್ತಗೆ ಉಸುರುತ್ತಾನೆ: ನೆವರ್ ಗೋ ಫುಲ್ ರಿಟಾರ್ಡ್. ಯಾವತ್ತೂ ಪೂರ್ಣ ಹಿಂದುಳಿಯದಿರು. ಒಪ್ಪುವೆ. ನಾನಿದನ್ನೆಲ್ಲ ಬರೆಯುವ ಹೊತ್ತಿನಲ್ಲಿ ವಾಸ್ತವ ಸ್ಥಿತಿಗತಿ ಹೀಗಿದೆ: ಭಾರತ ಈಗ ಒಂದು ಅತಿದೊಡ್ಡ ಗೊಂದಲದ, ಭಿನ್ನಮತದ ಮಧ್ಯದಲ್ಲಿದೆ. ಸರಕಾರ ರಾಜಧಾನಿ ದಿಲ್ಲಿಯೂ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕಗಳನ್ನು ತೆಗೆದುಹಾಕಿದೆ. ಪೊಲೀಸರು ವಿಶ್ವವಿದ್ಯಾನಿಲಯಗಳ ಒಳಗೆ ನುಗ್ಗಿದರು, ಆಮೇಲೆ ಹಾಸ್ಟೆಲುಗಳು, ಆಮೇಲೆ ಲೈಬ್ರರಿಗಳು, ಬಾತ್‌ರೂಂಗಳ ಒಳಗೂ ನುಗ್ಗಿ ವಿದ್ಯಾಥಿಗಳನ್ನು ಮನಸೋ ಇಚ್ಛೆ ಥಳಿಸಿದರು. ಪೊಲೀಸರು ಜನರಿಗೆ ಗುಂಡು ಹಾಕಿ ಹೊಡೆದುರುಳಿಸಿದ್ದಾರೆ. ಹೊರಗಿನ ಬೆದರಿಕೆಗಳಿಂದ ತನ್ನ ಜನರನ್ನು ರಕ್ಷಿಸಬೇಕಿರುವ ಸೇನೆಯನ್ನು ತನ್ನದೇ ನಾಗರಿಕರ ವಿರುದ್ಧ ಬಳಸಲಾಗಿದೆ. ಜನರು ಸತ್ತಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರನ್ನು ಬಂಧಿಸಲಾಗಿದೆ. ಆದರೂ ಲಕ್ಷಗಟ್ಟಲೆ ಜನರು ಎಳ್ಳಷ್ಟೂ ಭಯವಿಲ್ಲದೆ ಬೀದಿಗಿಳಿದಿದ್ದಾರೆ ಮತ್ತು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಒಟ್ಟಾಗಿದ್ದಾರೆ ಮತ್ತೆ ಇದು ಈ ಲೇಖನದ ಉಳಿದ ಭಾಗದಂತೆ ತಮಾಷೆಯಲ್ಲ, ಗಂಭೀರವಾದ ವಿಚಾರ.

ನೀವು ನಿಜಕ್ಕೂ ಇಲ್ಲಿಯವರೆಗೂ ಓದುತ್ತ ಬಂದಿದ್ದರೆ, ಒಂದೆರಡು ಕೆಲಸ ಮಾಡಬೇಕೆಂದು ಕೋರುತ್ತೇನೆ. ಎಷ್ಟು ಸಾಧ್ಯವಿದೆಯೋ ಅಷ್ಟು ಸರಿಯಾದ ಮಾಹಿತಿಯನ್ನು ಅರಿತುಕೊಳ್ಳಿ. ನಾಗರಿಕರು, ವಿದ್ಯಾರ್ಥಿಗಳು ಏನು ಹೇಳುತ್ತಿದ್ದಾರೆ ಎಂಬುದನ್ನು ಓದಿರಿ. ಸರಕಾರ ಏನು ಹೇಳುತ್ತಿದೆ ಎಂಬುದನ್ನು ಓದಿರಿ. ಯಾವುದೂ ಕಪ್ಪು-ಬಿಳಿಯಾಗಿ ಇರುವುದಿಲ್ಲ. ಏನು ನಡೆಯುತ್ತಿದೆ ಎಂದು ಜನರಿಗೆ ಹೇಳಿ. ಚರ್ಚೆ ಮಾಡಿ, ಸಂವಾದಿಸಿ. ಶಾಂತರಾಗಿರಿ. ನಂತರ ನಿಮ್ಮ ನಿರ್ಧಾರ ಮಾಡಿ. ನೀವು ಒಪ್ಪುವುದಿಲ್ಲ ಎಂದಾದರೆ, ಶಾಂತಿಯುತವಾಗಿ ಪ್ರತಿಭಟಿಸಿ. ಆ ನಿಟ್ಟಿನಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನವೇ ಈ ಅಸಂಬದ್ಧ ಪ್ರಲಾಪ *****

ಪಾರಿಭಾಷಿಕ ಪದಗಳು:

 ಅಹೋಮಿಯಾ: ಅಸ್ಸಾಮಿನ ಜನತೆಯನ್ನು ಸೂಚಿಸಲು ಬಳಸುವ ಅಸ್ಸಾಮೀ ಪದ. ಅಸಾಮೀ ಭಾಷೆ ಕೂಡ. ಬಾಲ್: ಹಿಂದಿಯಲ್ಲಿ ಕೂದಲು, ಅಸ್ಸಾಮೀ ಭಾಷೆಯಲ್ಲಿ ಕಂಕುಳಿನ ಕೂದಲು ಎನ್ನುವುದಕ್ಕೆ ಬಳಸುವ ಅಶಿಷ್ಟ ಆಡುನುಡಿ ಬಿಹು - ಅಸ್ಸಾಮಿನ ಸುಗ್ಗಿ ಹಬ್ಬ, ನಮ್ಮಲ್ಲಿ ಸಂಕ್ರಾಂತಿ ಇದ್ದಂತೆ (ಹೆಚ್ಚಾಗಿ ಜನವರಿ 14ರಂದು ಆಚರಿಸುತ್ತಾರೆ)

 ಬೊರ್ತುಕುಲ: ದೊಡ್ಡ ಗಾತ್ರದ ಕೊಕ್ಕರೆ. ಅಸ್ಸಾಮಿನಲ್ಲಿ ಅವುಗಳ ಅತಿದೊಡ್ಡ ವಾಸಸ್ಥಾನವಿದೆ. ಧುಲ್: ಅಸ್ಸಾಮಿನ ಒಂದು ಸಾಂಪ್ರದಾಯಿಕ ವಾದ್ಯ, ಡೊಳ್ಳಿನ ರೀತಿಯದು. ಗಮುಸ: ಬಹಳ ಹಿಂದಿನಿಂದಲೂ ಸ್ನಾನದ ನಂತರ ಮೈಒರೆಸಿಕೊಳ್ಳಲು ಬಳಸುವ ಕೈಮಗ್ಗದಲ್ಲಿ ನೇಯ್ದ ಟವೆಲ್. (ಗ-ದೇಹ, ಮುಸ - ಒರೆಸುವುದು)

 ಗಿಲ್ ಪಿತಾ - ಒಂದು ಬಗೆಯ ಅಸ್ಸಾಮೀ ತಿನಿಸು

 ಜೊಯ್ ಆಯ್ ಅಹೋಮ್: ಅಸ್ಸಾಂ ತಾಯ್ನಾಡಿಗೆ ಜಯವಾಗಲಿ ಕೊಕಯ್: ಹಿರಿಯಣ್ಣ

 ಕೊಕ: ಅಜ್ಜ

 ಕೇಲಾ: ಹಿಂದಿನಲ್ಲಿ ಬಾಳೆಹಣ್ಣು. ಅಸ್ಸಾಮೀ ಅಶಿಷ್ಟ ಆಡುನುಡಿಯಲ್ಲಿ ಶಿಶ್ನ ಎಂದರ್ಥ. ಖಾತಿ: ಮೂಲ ಅಥವಾ ಸ್ಥಳೀಯ/ದೇಶೀಯ

 ಕೊಸು: ಕೆಸುವಿನ ಗಿಡ

 ಖಾರ್: ಕೆಲವು ವಿಧದ ಬಾಳೆಹಣ್ಣಿನ ಸಿಪ್ಪೆಗಳನ್ನು ಬಿಸಿಲಿನಲ್ಲಿ ಒಣಗಿಸಿ, ಅವನ್ನು ಸುಟ್ಟು, ಆ ಬೂದಿಗೆ ನೀರು ಹಾಕಿ, ನಂತರ ಸೋಸಿ, ತೆಗೆಯುವ ದ್ರಾವಣ, ಇದನ್ನು ಸಾಂಪ್ರದಾಯಿಕ ಅಸ್ಸಾಮಿ ಅಡುಗೆಗೆ ಬಳಸುತ್ತಾರೆ. ಗಮ್ ಖರು: ಸಾಂಪ್ರದಾಯಿಕ ಅಸ್ಸಾಮೀ ಬಳೆ, ಮುಗರ್ ಮೆಖೆಲ ಚದೊರ್: ಸಾಂಪ್ರದಾಯಿಕ ಅಸ್ಸಾಮೀ ಉಡುಪು

ರೊಂಗಾ - ಕೆಂಪು

ತಿಲ್ ತಿಲಾ – ಒಂದು ಬಗೆಯ ಅಸ್ಸಾಮೀ ತಿನಿಸು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)