varthabharthi


ಸುಗ್ಗಿ

ಅಧ್ಯಯನ ಮತ್ತು ಅರಿವು

ಮಕ್ಕಳು ಮತ್ತು ಆತ್ಮಹತ್ಯೆ

ವಾರ್ತಾ ಭಾರತಿ : 16 Feb, 2020
ಬೆಳೆಯುವ ಪೈರು: ಯೋಗೇಶ್ ಮಾಸ್ಟರ್

ಮಗುತನ ಜತನ 3

ಭಾರತದಲ್ಲಿ ಮಕ್ಕಳ ವಿಷಯದಲ್ಲಿ ರೋಗನಿರೋಧಕ್ಕೆ ಮತ್ತು ಪೌಷ್ಟಿಕತೆಗೆ ಗಮನ ಹರಿಸುವಂತೆ ಮಕ್ಕಳ ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯಕ್ಕೂ ಸ್ಪಷ್ಟ ಮತ್ತು ನೇರ ಗಮನ ಹರಿಸಬೇಕಾಗಿರುವ ತುರ್ತಿನ ಅಗತ್ಯ ಇದೆ. ಏಕೆಂದರೆ ಸರ್ವೇಗೆ ಸಿಕ್ಕಂತೆ ಮಾತ್ರವೇ 50 ಮಿಲಿಯನ್ ಮಕ್ಕಳು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಕ್ಕಳ ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ಸಂಸ್ಥೆ (Indian Association of Child and Adolescent Mental Health)  ದೇಶದ ವಿವಿಧ ರಾಜ್ಯಗಳಲ್ಲಿ ಮಕ್ಕಳ ಮಾನಸಿಕ ಆರೋಗ್ಯದ ಕುರಿತು ಮಾಡಿರುವ ಸರ್ವೇಯು ಒಂದಿಷ್ಟು ಗುರುತರವಾಗಿದೆ. ಅವರ ಬೆಂಗಳೂರಿನ ಸರ್ವೇಯನ್ನು ಗಮನಿಸೋಣ. ಮಕ್ಕಳ ಸಾಮಾನ್ಯ ಮಾನಸಿಕ ಸ್ಥಿತಿಯೇ ಶೇ.12.5ರಷ್ಟು ಹದಗೆಟ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ.12.4, ಕೊಳೆಗೇರಿ ಪ್ರದೇಶಗಳಲ್ಲಿ 10.8, ನಗರ ಪ್ರದೇಶಗಳಲ್ಲಿ 13.9ರಷ್ಟು ನೇರ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಅದೂ ಅವರ ಸರ್ವೇಗೆ ಅಧ್ಯಯನಕ್ಕೆ ಸಿಕ್ಕಷ್ಟು. ನನ್ನ ಮನೆಯ ಮತ್ತು ನನ್ನ ಸುತ್ತಮುತ್ತಲಿನ ಮನೆಯವರಾಗಲಿ, ಮಕ್ಕಳಾಗಲಿ ಅವರ ಸರ್ವೇಯ ವ್ಯಾಪ್ತಿಗೆ ಬಂದಿಲ್ಲ. ಹಾಗೆಯೇ ಇದನ್ನು ಓದುತ್ತಿರುವ ನಿಮ್ಮ ಮನೆ ಮತ್ತು ನೆರೆಹೊರೆಯ ಸರ್ವೇ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ನಾನಿಲ್ಲಿ ಏನು ಹೇಳಲು ಪ್ರಯತ್ನಿಸುತ್ತಿದ್ದೇನೆಂದರೆ, ಮಾನಸಿಕ ಆರೋಗ್ಯ ಸಂಸ್ಥೆಯ ಸರ್ವೇಯು ಬಹಳ ಸಣ್ಣದಾದದ್ದು. ಆದರೆ ಸಮಸ್ಯೆಯ ವ್ಯಾಪ್ತಿಯು ಬಹಳ ವಿಶಾಲವಾದದ್ದು ಎಂದು. ನಾವಿರುವಲ್ಲಿ ಸರ್ವೇ ಮಾಡಿದ್ದರೆ ಅವರ ಸಂಖ್ಯೆಯಲ್ಲಿ ನಮ್ಮ ಮಕ್ಕಳೂ ಸೇರಿಕೊಳ್ಳುತ್ತಿದ್ದರೋ ಏನೋ ಎಂದು. ಈ ಬಗೆಯ ಮನೋಕೇಂದ್ರಿತ ಸಮಸ್ಯೆಗಳು ಬೇರೆ ಯಾರಿಗಾದರೂ ಬಂದಿರಬಹುದು. ನಮಗೆ, ನಮ್ಮ ಮನೆ ಮಕ್ಕಳಿಗೆ ಬರುವುದಿಲ್ಲ ಎಂದೋ ಅಥವಾ ನಮ್ಮ ಪಕ್ಕದ ಮನೆಯವರೆಗೂ ಬರಬಹುದು, ನಮ್ಮನೆಗೆ ಬರಲು ಸಾಧ್ಯವೇ ಇಲ್ಲ ಎಂದೋ ಭಂಡತನದಲ್ಲಿ ಉದಾಸೀನರಾಗುವುದು ಬೇಡ ಎಂದು ಎಚ್ಚರಿಸಲು ಯತ್ನಿಸುತ್ತಿದ್ದೇನೆ.

ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಲ್ಲೂ ಮಾನಸಿಕ ಸಮಸ್ಯೆಯು ಸಮವಾಗಿದ್ದರೆ, ಗ್ರಾಮೀಣ ಪ್ರದೇಶದ ಮಕ್ಕಳಿಗಿಂತ ನಗರವಾಸಿ ಮಕ್ಕಳಲ್ಲಿ ಸಮಸ್ಯೆಯುದುಪ್ಪಟ್ಟು ಹೆಚ್ಚಿದೆ. ಮಾನಸಿಕ ಸಮಸ್ಯೆ ಎಂದುಬಿಟ್ಟರೆ ಏನು ಅಂತಾನೂ ತಿಳಿದುಕೊಳ್ಳಬೇಕಾಗಿದೆ. ಹುಚ್ಚನ್ನು ಅಥವಾ ತಲೆಕೆಟ್ಟು ಬಟ್ಟೆ ಹರಿದುಕೊಂಡು ಸಿಕ್ಕಸಿಕ್ಕವರಿಗೆ ಕಲ್ಲು ಬೀಸುವಂತಹ, ಅಥವಾ ಕಾರಣವಿಲ್ಲದೇ ಅಳುತ್ತಾ / ನಗುತ್ತಾ ಅಥವಾ ತಮ್ಮಷ್ಟಕ್ಕೆ ತಾವೇ ಮಾತಾಡಿಕೊಂಡು ಇರುವಂತಹ ಮನೋರೋಗಕ್ಕೆ ಒಳ್ಳೆ ಭಾಷೆಯಲ್ಲಿ ಮಾನಸಿಕ ಸಮಸ್ಯೆ ಎಂದು ಕರೆಯುತ್ತಾರೆ ಎಂಬ ಪರಿಕಲ್ಪನೆಯೇ ಸಾಮಾನ್ಯರಲ್ಲಿ ಸಾಮಾನ್ಯವಾಗಿರುವುದು.

ಪುಟ್ಟ ಪಟ್ಟಿ

ಯಾವುದಕ್ಕೂ ಈ ಒಂದು ಸ್ಥೂಲ ಪಟ್ಟಿಯು ಸದ್ಯಕ್ಕೆ ನಿಮ್ಮ ಗಮನದಲ್ಲಿರಲಿ. ಅಗರೋಪ್ರೋಯಾ (ಶೇ. 2.3); ನೇರ ಭಾಷಾನುವಾದ ಮಾಡಿದರೆ ಸ್ಥಳಭೀತಿ ಎನ್ನಬಹುದು. ಯಾವುದಾದರೂ ಸ್ಥಳಕ್ಕೆ ಹೋಗುವುದಕ್ಕೆ ಅಥವಾ ಸನ್ನಿವೇಶವನ್ನು ಎದುರಾಗುವುದಕ್ಕೆ ಭೀತಿಗೊಳ್ಳುವುದು, ಅಸಹಾಯಕತೆಯನ್ನು ಅನುಭವಿಸುವುದು ಅಥವಾ ಮುಜುಗರಗೊಳ್ಳುವುದು. ಇದು ಬಾಲ್ಯದಲ್ಲೇ ಪ್ರಾರಂಭವಾಗಿ, ಹದಿಹರೆಯದಲ್ಲಿ ಬಲಿತು, ವಯಸ್ಕರಲ್ಲಿ ಪೂರ್ಣಪ್ರಮಾಣದ ಫಲಗಳನ್ನು ನೀಡುತ್ತದೆ. ಭಾರತದಲ್ಲಿ ಪ್ರತಿವರ್ಷವೂ ಹೆಚ್ಚೂ ಕಡಿಮೆ ಒಂದು ಮಿಲಿಯನ್ ಕೇಸ್‌ಗಳನ್ನು ಗುರುತಿಸುತ್ತಾರೆ. ಅದೂ ತಪಾಸಣೆಯ ವ್ಯಾಪ್ತಿಗೆ ಬರುವಂತಹದರಲ್ಲಿ! ಇದು ಬುದ್ಧಿಮತ್ತೆ ಮತ್ತು ಕಾರ್ಯಕ್ಷಮತೆ ಕುಂಠಿತವಾಗುವುದಕ್ಕೆ ಕಾರಣವಾಗುತ್ತದೆ. ನನಗೆ ನಾಲ್ಕು ಜನರ ಮುಂದೆ ನಿಂತರೆ ನರ್ವಸ್ ಆಗಿಬಿಡುತ್ತೆ. ಹೇಳಬೇಕಾದ್ದು ಮರೆತು ಹೋಗುತ್ತೆ. ಒಬ್ಬಳೇ ಹೋಗಕ್ಕೆ ಭಯ ಆಗತ್ತೆ. ಎಲ್ರೂ ನನ್ನೇ ನೋಡ್ತಿದ್ರೆ ಏನು ಮಾತಾಡ್ಬೇಕೂಂತಾನೇ ಗೊತ್ತಾಗಲ್ಲ; ಇಂಥಾ ಮಾತುಗಳನ್ನು ನೀವೂ ಆಡಬಹುದು, ನಿಮ್ಮ ಜೊತೆಗಾರರೂ ಆಡುತ್ತಿರಬಹುದು. ಆದರೆ ಇದು ಮಾನಸಿಕ ಸಮಸ್ಯೆಗಳ ಪಟ್ಟಿಗೆ ನೀವು ಸೇರಿಸಲು ಇಷ್ಟಪಡಲಿ ಅಥವಾ ಪಡದಿರಲಿ. ಅದು ಆ ಪಟ್ಟಿಯಲ್ಲೇ ಇರುವುದು. ಇಂತಹ ಎಷ್ಟೆಷ್ಟೋ ಸಮಸ್ಯೆಗಳನ್ನು ಕಾಮನ್ ಎಂದು ನಿರ್ಲಕ್ಷಿಸಲೇ ಇಷ್ಟಪಡುವುದು. ಇನ್ನುಳಿದಂತೆ, ಖಿನ್ನತೆ (ಶೇ. 2.6), ಆಟಿಸಂ ಸ್ಪೆಕ್ಟ್ರಮ್ ಸಮಸ್ಯೆ (ಶೇ. 1.6) (ಮೆದುಳಿನ ಅಸಮರ್ಪಕ ಬೆಳವಣಿಗೆಯಿಂದಾಗಿ ಮಗುವು ವಿಷಯಗಳನ್ನು ಸರಿಯಾಗಿ ಗ್ರಹಿಸದೇ ಇರುವುದು ಮತ್ತು ಸಾಮಾಜಿಕವಾಗಿ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸದೇ ಇರುವುದು. ಸೀಮಿತವಾದ ಮತ್ತು ಪುನರಾವರ್ತನೆಂಾಗುವ ವರ್ತನೆಗಳನ್ನು ತೋರುತ್ತಾ ಸಹಜವೆಂದು ಎನಿಸದೇ ಇರುವುದು), ಸೈಕೋಟಿಕ್ ಸಮಸ್ಯೆ (ಶೇ.1.3) (ವಾಸ್ತವಕ್ಕೆ ಹೊರತಾದ ಭ್ರಮಾಧೀನ ಆಲೋಚನೆಗಳಲ್ಲಿರುವುದು), ಆತಂಕದ ಸಮಸ್ಯೆ ಅಥವಾ ಆಂಕ್ಸೈಟಿ ಡಿಸಾರ್ಡರ್ (ಶೇ.1.3); ಹೀಗೆ ಇನ್ನೂ ಹಲವು ಬಗೆಗಳನ್ನು ನಾವು ಮಕ್ಕಳಲ್ಲೇ ಕಾಣಬಹುದು. ಮಕ್ಕಳಲ್ಲಿ ಇವುಗಳನ್ನು ಗುರುತಿಸುವ ಪ್ರಯತ್ನ ಮಾಡಿದಾಗ ನಮಗೆ ಆತ್ಮದರ್ಶನವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಧ್ಯಯನ ಹೇಳುವಂತೆ ಭಾರತದಲ್ಲಿ 2,58,075 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಹತ್ತೊಂಬತ್ತರ ವಯೋಮಾನದ ಒಳಗಿನವರು. ಈ ವಿಷಯದಲ್ಲಿ ಮಾನಸಿಕ ಸಮಸ್ಯೆಯ ಪ್ರಭಾವವನ್ನು ಸಮಾಜವು ಬರಿಗಣ್ಣಲಿ ಊಹಿಸಲಾಗದು. ಅದಕ್ಕೇ ಮಾನಸಿಕ ಸಮಸ್ಯೆಗಳನ್ನು ತಮ್ಮತಮ್ಮಲ್ಲೇ ಗುರುತಿಸಿಕೊಳ್ಳುವುದಕ್ಕೆ, ಅದರಲ್ಲೂ ಮಕ್ಕಳಲ್ಲೇ ಗುರುತಿಸಿ ಅವರು ಆರೋಗ್ಯವಂತ ಪ್ರಜೆಗಳನ್ನಾಗಿ ರೂಪಿಸಲು ಈ ಬಗೆಯ ಗಂಭೀರ ಲೇಖನಗಳಿಂದ ಪ್ರಯತ್ನಿಸುತ್ತಿರುವುದು.

ಸದ್ಯಕ್ಕೇನು ಮಾಡುವುದು?

ಸರಿ, ಈಗ ತುರ್ತಾಗಿ ಆಗಬೇಕಾಗಿರುವ ಕೆಲಸಗಳೇನು?

1) ಮಕ್ಕಳಲ್ಲಿ, ಹದಿಹರೆಯದವರಲ್ಲಿ ಮತ್ತು ಅವರ ಕುಟುಂಬಗಳಲ್ಲಿ ಮನಸ್ಸಿನ, ವರ್ತನೆಗಳಲ್ಲಿನ ಸಮಸ್ಯೆಗಳನ್ನು, ಭಾವಾನಾತ್ಮಕ ಒತ್ತಡಗಳನ್ನು ಗುರುತಿಸುವುದು, ಉಪಚರಿಸುವುದು, ಬರದಂತೆ ತಡೆಯುವುದು, ಬಂದಿರುವುದಕ್ಕೆ ಚಿಕಿತ್ಸೆ ನೀಡುವುದು ಇತ್ಯಾದಿಗಳಾಗಬೇಕು.

2) ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಕಾಣುವ ಮತ್ತು ಕಾಡುವ ಮಾನಸಿಕ ಸಮಸ್ಯೆಗಳ ಕುರಿತಾಗಿ ಪ್ರಾದೇಶಿಕ, ರಾಜ್ಯ, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಸಂಪರ್ಕಗಳನ್ನು ಸಾಧಿಸಿಕೊಂಡು, ತಜ್ಞರ ನೆರವನ್ನು ಪಡೆದುಕೊಂಡು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು.

3) ಇದರ ಸಂಬಂಧವಾಗಿ ಅಧ್ಯಯನ, ಸಂಶೋಧನೆ, ಸಮೀಕ್ಷೆ (ಸರ್ವೇ)ಗಳನ್ನು ನಡೆಸಲು, ಚಿಕಿತ್ಸಾ ಕ್ರಮಗಳನ್ನು ಮತ್ತು ಸಮಾಲೋಚನಾ ಕ್ರಮಗಳನ್ನು ಯೋಜಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇವುಗಳು ಅತ್ಯಂತ ವೈಜ್ಞಾನಿಕವಾಗಿರಬೇಕು ಮತ್ತು ಸಾಮಾಜಿಕ ಕಳಕಳಿಯಿಂದ ಕೂಡಿದ್ದಾಗಿರಬೇಕು. ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಸಮರ್ಥ ಮತ್ತು ಆರೋಗ್ಯಕರ ಪ್ರಜೆಗಳನ್ನು ರೂಪಿಸುವಂತಹ ಈ ದಿಕ್ಕಿನಲ್ಲಿ ಸರಕಾರ ಏನು ಮಾಡುತ್ತಿದೆ? ನಾವೇನು ಮಾಡಬೇಕಿದೆ? ಮುಂದೆ ತಿಳಿಯೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು