varthabharthi


ಸುಗ್ಗಿ

ಶೆಕ್ಷಣಿಕ ಕ್ಷೇತ್ರದ ಹೃದಯ ಮಿಡಿತವಾದ ಪುಸ್ತಕ - ಪ್ರಜ್ಞಾ

ವಾರ್ತಾ ಭಾರತಿ : 16 Feb, 2020
ಕಪಿಲ್ ಹುಮನಾಬಾದೆ

ನಿರಂತರವಾಗಿ ಶಿಕ್ಷಣ ಕೇತ್ರದಲ್ಲಿ ಮತ್ತು ಎನ್‌ಜಿಒಗಳಲ್ಲಿ ಶಿಕ್ಷಣ ಸೇರಿದಂತೆ ಹಲವು ಸಾಮಾಜಿಕ ವಿಷಯಗಳಲ್ಲಿ ಕೆಲಸ ಮಾಡಿರುವ ಮರತೂರವರ ಒಟ್ಟಾರೆ ಅನುಭವದ ಬುತ್ತಿಯೆ ಪ್ರಜಾ ಆಗಿದೆ. ಅವರೆ ಹೇಳುವಂತೆ ಈ ಪುಸ್ತಕ ಅವರ ‘‘ಹೃದಯ ಮಿಡಿತವೆಂದು ಹೇಳುತ್ತಾರೆ.’’ ಈ ಹೃದಯದಿಂದ ಹೊರ ಹೊಮ್ಮಿದ ಪ್ರತಿ ಶಬ್ದಗಳು, ಅವರ ಚಿಂತನ ಕ್ರಮಗಳು ಅವರ ವಿಭಿನ್ನ ಯೋಚನಾ ಲಹರಿ ನಮ್ಮೆದುರು ತೆರೆದಿಟ್ಟು ಸದಾ ನಮ್ಮನ್ನು ಸಮಾಜ ಮತ್ತು ಶಿಕ್ಷಣದ ಕುರಿತು ಬೇರೆ ದಿಕ್ಕಿನಲ್ಲಿ ನೋಡುವಂತೆ ಮಾಡುತ್ತವೆ. ಈ ಪುಸ್ತಕದಲ್ಲಿ ವಿಭಿನ್ನ ವಿಚಾರಗಳಿಗೆ ಸಂಬಂಧಿಸಿದಂತೆ ಒಟ್ಟು 55 ಲೇಖನಗಳಿವೆ. ಅದರಲ್ಲಿ ಬಹುತೇಕ ಶಿಕ್ಷಣದ ಕುರಿತು ಅವರ ಚಿಂತನೆಗಳಿವೆ.

 ಚಪಾತಿ ಚಪ್ ಚಪ್, ಜಲೇಬಿ ಜುಮ್ ಜುಮ್‌ನಿಂದ ಶುರುವಾಗುವ ಮರೆಯಾದ ಮಕ್ಕಳ ಹಾಡುಗಳ ಲೇಖನ. ಈ ಸಂದರ್ಭದಲ್ಲಿ ಸಾಹಿತಿಗಳು ಮಕ್ಕಳ ಗೀತೆ ರಚನೆಯ ಬಗ್ಗೆ ತೋರಿಸಬೇಕಾದ ಒಲವು ಮತ್ತು ಇಂಗ್ಲಿಷ್ ಮೀಡಿಯಮ್‌ಗಳ ಹಾವಳಿಯಿಂದ ಮರೆಯಾಗಿರುವ ತಾಯಿಯ ಬಾಲ್ಯದ ಜನಪದ ಗೀತೆಗಳ ಮಹತ್ವದ ಕುರಿತು ಈ ಲೇಖನದಲ್ಲಿ ಬೆಳಕು ಚೆಲ್ಲುತ್ತಾರೆ. ನಾವೆಲ್ಲರೂ ಎಷ್ಟೇ ಮುಂದುವರೆದರು ತಾಯಿ ಮತ್ತು ಮಕ್ಕಳ ಪ್ರೀತಿ ಮಾತ್ರ ಬದಲಾಗಬಾರದು. ಸಂಬಂಧಗಳು ಗಟ್ಟಿಯಾಗಿರಬೇಕು. ಅವ್ವನ ಹಾಡಿನಲ್ಲಿ ಮಗು ಸಂತೋಷಗೊಂಡು ಹಾಯಾಗಿ ಮಲಗಬೇಕು ಎಂದು ಹೇಳುವ ಲೇಖಕರು ಮೂಲ ಬೇರಿನ ಸಂಬಂಧಗಳ ಮಹತ್ವ ಸಾರುತ್ತಾರೆ.

ಇಲ್ಲಿನ ಎಲ್ಲಾ ಲೇಖನಗಳು ಗಮನಿಸಿದರೆ, ಲೇಖಕರು ಶಿಕ್ಷಣದ ವಾಸ್ತವ ಕಾಲಘಟ್ಟದ ಸವಾಲು ಮತ್ತು ಸಮಸ್ಯೆಗಳು ಚರ್ಚಿಸಿದ್ದಾರೆ. ಇಲ್ಲಿ ಕೇವಲ ಲೇಖನಗಳು ಅಜ್ಜಿ ಕಥೆಯ ಮರೆಯಾದ ದಿನಗಳ ಹಳಹಳಿಕೆ ಕುರಿತು ಮಾತ್ರವಲ್ಲ, ಡಿಎಡ್. ಮಾಡಿದವರ ಭವಿಷ್ಯತನ ಬದುಕಿನ ಸವಾಲುಗಳ ಕುರಿತು ಸಹ ಕಥನಗಳಿವೆ. ಇಲ್ಲಿನ ಲೇಖನಗಳು ಓದುತ್ತಿದ್ದರೆ ನಮ್ಮದೆ ಸುತ್ತಲಿನ ಹಲವು ತಲ್ಲಣಗಳಿಗೆ ನಾವೇ ಕಿವಿಯಾದಂತೆ ಮತ್ತು ಭಾಗಿಯಾದಂತೆ ಕಾಣುತ್ತದೆ.

ದೊಡ್ಡದೊಡ್ಡ ವಿಚಾರಗಳು ಮಂಡಿಸುವುದರ ಮೂಲಕ ಒಬ್ಬ ಲೇಖಕ ಉತ್ತಮ ಅಥವಾ ಪ್ರಬುದ್ಧ ಲೇಖಕನಾಗುವುದಿಲ್ಲ. ‘‘ನಿಮ್ಮ ಮಕ್ಕಳ ಶಾಲಾ ಬ್ಯಾಗ್ ಬಗ್ಗೆ ಎಚ್ಚರವಿರಲಿ’’ ಅನ್ನುವಂತಹ ಲೇಖನದ ‘‘1993ರಲ್ಲಿ ಯಶ್ಪಾಲ್ ಸಮಿತಿಯ ಶಿಫಾರಸುಗಳ ಮೂಲಕ ಎಷ್ಟನೇ ತರಗತಿಯ ಮಕ್ಕಳು ಎಷ್ಟು ಕೆ.ಜಿ. ತೂಕದ ಬ್ಯಾಗ್ ಹೊರಬೇಕೆಂಬ ಪಟ್ಟಿಯನ್ನೇ ನೀಡಿದ್ದಾರೆ.’’ ಈ ಎಲ್ಲಾ ಅಂಶಗಳು ಗಮನಿಸಿದರೆ ಮರತೂರ ಸರ್ ಅವರ ಆಳವಾದ ಅಧ್ಯಯನದ ಸ್ಪಷ್ಟ ದೃಷ್ಟಿಕೋನವು ಕಾಣುತ್ತದೆ.

‘‘ಈಗಿನ ಪೀಳಿಗೆಯಲ್ಲಿ ಪೇಪರ್, ಕಾದಂಬರಿಗಳನ್ನು ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಟಿವಿ, ಕಂಪ್ಯೂಟರ್, ವೀಡಿಯೊ ಗೇಮ್, ಇಂಟರ್‌ನೆಟ್ ಹೀಗೆ ಮನೋರಂಜನೆ ಮತ್ತು ಮಾಹಿತಿಗೆ ನಾನಾ ಸಾಧನಗಳು ಇರುವಾಗ ದೊಡ್ಡ ಪುಸ್ತಕಗಳನ್ನು ಗಂಟೆ ಗಟ್ಟಲೆ ಓದುವುದು ಯಾರು ಎನ್ನುವ ಉದಾಸೀನ ಹೆಚ್ಚಿನವರಲ್ಲಿ ಬಂದು ಬಿಟ್ಟಿದೆ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ. ಓದುವ ಅಭ್ಯಾಸವನ್ನು ಬಿಟ್ಟರೆ ಅನೇಕ ಪ್ರಯೋಜನಗಳಿಂದ ವಂಚಿತರಾಗುತ್ತೇವೆ. ಓದುವುದರಿಂದ ಸಿಗುವ ಪ್ರಯೋಜನಗಳು ತುಂಬಾ ಇವೆ. ಇದರಿಂದ ಮಾನಸಿಕ ನೆಮ್ಮದಿಯ ಜೊತೆಗೆ ಅನೇಕ ಲಾಭಗಳನ್ನು ಇಂದಿನ ಯುವ ಸಮುದಾಯ ಕಳೆದುಕೊಳ್ಳುತ್ತಿದೆ. ಓದಬೇಕು ಓದಿ ಜಯಿಸಬೇಕು ಎಂಬ ಮಾತು ಸತ್ಯವಾಗಿದೆ. ಓದಿನಿಂದಲೇ ಅದೆಷ್ಟು ಬದುಕುಗಳನ್ನು ಕಟ್ಟಿಕೊಟ್ಟದ್ದು ಈ ಎಂಬ ಸ್ಪಷ್ಟತೆಯಿರಲಿ.’’ - ಓದಿ ಜಯಿಸಬೇಕು ಎನ್ನುವ ಲೇಖನದಲ್ಲಿ ಮರತೂರ ಸರ್ ಅವರು ಪುಸ್ತಕಗಳನ್ನು ಓದುವ ಸುಖವನ್ನು ಪರಿಚಯಿಸಿದ್ದಾರೆ. ಮೊಬೈಲ್‌ಗಳ ಸುಳಿಯಲ್ಲಿ ಸಿಲುಕಿರುವ ಯುವಜನಾಂಗಕ್ಕೆ ಪುಸ್ತಕಗಳ ಮಹತ್ವದರಿವು ಈ ಲೇಖನದಲ್ಲಿ ಕಾಣಬಹುದಾಗಿದೆ. ಪ್ರಜ್ಞಾದಲ್ಲಿ ಪುಸ್ತಕಗಳ ಓದಿನ ಸುಖದ ಕುರಿತು ಪ್ರಜ್ಞೆಯನ್ನು ಮೂಡಿಸುವ ಜವಾಬ್ದಾರಿ ಮಾಡಿದ್ದಾರೆ.

‘‘ಈ ಶಿಕ್ಷಣದಲ್ಲಿ ನಮ್ಮ ಮಕ್ಕಳು ಅಂಕ ಗಳಿಸುವುದೇ ಮುಖ್ಯವೇ ಎಂಬುವುದು ಯೋಚಿಸಬೇಕಿದೆ. 99 ಅಂಕ ಪಡೆದರೆ ಮಾತ್ರ ಮಕ್ಕಳನ್ನು ಜಾಣರೆಂದು ಪರಿಗಣನೆಗೆ ತೆಗೆದುಕೊಳ್ಳುವುದೆ. ಹೀಗೆ ಹತ್ತು ಹಲವು ಪ್ರಶ್ನೆಗಳು ಹೊರಬರುತ್ತವೆ. ಇವತ್ತು ಹತ್ತನೆಯ ತರಗತಿಯಲ್ಲಿ ರ್ಯಾಂಕ್ ಪಡೆದ ಮಗುವಿಗೆ ಹೊಸಬರ ಎದುರಿಗೆ ನಿಂತು ಮಾತನಾಡುವ ಧೈರ್ಯವಿರುವುದಿಲ್ಲ. ಪ್ರಪಂಚದ ಜ್ಞಾನಕ್ಕೆ ಅವರ ನಿಲುಕು ಇರದಂತಾಗಿದೆ. ತಾಂತ್ರಿಕವಾಗಿ ಟ್ಯಾಬಲೆಟ್ ಕಂಪ್ಯೂಟರ್ ಹ್ಯಾಂಡಲ್ ಮಾಡುವ ಇಂದಿನ ಮಕ್ಕಳು ಅವರ ಬದುಕಿನ ಅದೆಷ್ಟೊ ವಿಚಾರಗಳನ್ನು ಹ್ಯಾಂಡಲ್ ಮಾಡುವಲ್ಲಿ ಹಿಂದೆಯಿದ್ದಾರೆ.’’ ಅಂಕಗಳ ಹಿಂದೆ ಬಿದ್ದು ಬದುಕಿನ ವಾಸ್ತವ ಅನುಭವಗಳಿಂದ ವಿಮುಖವಾಗುತ್ತಿರುವ ಮಕ್ಕಳ ಅಧೈರ್ಯದ ಕುರಿತು ಇಲ್ಲಿ ಗಮನ ಸೆಳೆದಿದ್ದಾರೆ. ಮೊಬೈಲ್ ಗೇಮ್‌ಗಳಲ್ಲಿ ಮುಳುಗಿರುವ ಮಕ್ಕಳು ಬದುಕಿನ ಸವಾಲುಗಳು ಹೇಗೆ ಎದುರಿಸಬಹುದು ಎಂಬ ಕಳವಳವನ್ನು ಇಲ್ಲಿ ಲೇಖಕರು ಗುರುತ್ತಿಸಿದ್ದಾರೆ.

 ಸಮಾಜದ ಓರೆ ಕೋರೆಗಳನ್ನು ತಿದ್ದಲು, ಅಸಮಾನತೆ ಬಿರುಗಾಳಿಯನ್ನು ತಡೆಯಲು ಅನ್ಯಾಯದ ಅಹಂನ್ನು ಮೆಟ್ಟಿಹಾಕಲು, ಲಗ್ಗೆಯಿಲ್ಲದೆ ಓಡುತ್ತಿರುವ ಆಡಂಬರ ಹಾಗೂ ಸಾಮಾಜಿಕ ಪಿಡುಗನ್ನು ತಡೆಯಲು, ಸಮಾಜದಲ್ಲಿ ಸಮಾನತೆ ತರಲು ಸಾಹಿತ್ಯ ಮಹತ್ವದ ಪಾತ್ರವಹಿಸುತ್ತದೆ. ಒಡಲೊಳಗಿನ ಕಿಚ್ಚು, ಸತ್ಯ, ಸಂತಸ, ಮಾಹಿತಿ, ಪ್ರೀತಿ, ಕಾಳಜಿ, ಸಾಮಾಜಿಕ ಬದ್ಧತೆ ಎಲ್ಲವೂ ಎಲ್ಲರಿಗೂ ದೊರೆಯಲಿ ಎಂಬ ಕಾರಣಕ್ಕೆ ಸಾಹಿತ್ಯ ಕೆಲಸ ಮಾಡುತ್ತದೆ. - ಪ್ರಜ್ಞಾ ಲೇಖನಗಳಲ್ಲಿ ವಿಶ್ವನಾಥ ಮರತೂರವರ ಸಾಹಿತ್ಯ ಕಾಳಜಿ ತುಂಬಿ ತುಳುಕುವುದು ಕಾಣುತ್ತೇವೆ. ಮೂಲದಲ್ಲಿ ಅವರು ಸಾಹಿತಿಗಳಾಗಿವುದರಿಂದ ಅದರ ಮಹತ್ವದ ಸ್ಪಷ್ಟ ಅರಿವು ಅವರಿಗಿದೆ. ಆಕಾರಣಕ್ಕೆ ಮಕ್ಕಳ ಕೈಯಿಂದ ಸಾಹಿತ್ಯ ಓದಿಸುವ ಮತ್ತು ಬರೆಸುವ ಕಾಳಜಿಯ ಮಹತ್ವದ ಕುರಿತು ಅವರು ಮಾತನಾಡುತ್ತಾರೆ. ಸಾಹಿತ್ಯ ಮಕ್ಕಳಿಗೆ ಉಲ್ಲಾಸ ಮತ್ತು ತಾಳ್ಮೆ ತಂದುಕೊಡುತ್ತದೆ ಎಂಬುವುದು ಈ ಲೇಖನದಲ್ಲಿ ನಾವು ಕಾಣಬಹುದಾಗಿದೆ.

ಮನುಷ್ಯನ ಬದುಕನ್ನು ಉಜ್ವಲಗೊಳಿಸುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣದಲ್ಲಿ ಗ್ರಂಥಾಲಯವು ತನ್ನದೆ ಆದ ಮಹತ್ವ ಹೊಂದಿದೆ. ಪುಸ್ತಕಗಳು ಹಾಗೂ ಗ್ರಂಥಾಲಯ ಜೀವಂತ ದೇವಾಲಯಗಳು. ಗ್ರಂಥಾಲಯ ಒಂದು ಅಮರಕೋಶವೆಂತಲೂ ಕರೆಯುತ್ತಾರೆ. ಶಿಕ್ಷಣದ ಉದ್ದೇಶ ಇಡೇರುವಲ್ಲಿ ಗ್ರಂಥಾಲಯ ಅವಶ್ಯಕತೆಯಿದೆ. ಪ್ರಾಚೀನ ಕಾಲದಿಂದ ಹಲವರ ಬಾಳಿನಲ್ಲಿ ಶಿಕ್ಷಣ ಮಹತ್ವ ಪಡೆದಿದೆ. ಮನುಷ್ಯ ಜೀವನ ಶಿಕ್ಷಣದಿಂದಲೆ ಹಳಿಮೇಲಿನ ರೈಲಿನಂತೆ ಸುಗಮವಾಗಿ ಸಾಗುವುದು. ಗ್ರಂಥಾಲಯಗಳು ನಿಜವಾದ ದೇವಾಲಯಗಳೆಂದು ಹೇಳಿರುವ ಅಂಬೇಡ್ಕರವರ ಮಾತು ಮರತೂರ ಅವರು ಕಾಳಜಿಪೂರ್ವಕವಾಗಿ ಇಲ್ಲಿ ಗ್ರಂಥಾಲಯಗಳ ಮಹತ್ವ ಬಿಚ್ಚಿಟ್ಟಿದ್ದಾರೆ.

 ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದಾಗ ಹೈ-ಕ ಪ್ರದೇಶದ ಜಿಲ್ಲೆಗಳ ಬಹಳಷ್ಟು ಹೆಣ್ಣು ಮಕ್ಕಳು ಹೀನ ಸ್ಥಿತಿಯಲ್ಲಿದ್ದಾರೆ. 12ರಿಂದ 13 ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣು ಮಕ್ಕಳ ಮದುವೆಯಾಗುತ್ತಿದೆ. ಶಾರೀರಿಕವಾಗಿ ಬೆಳವಣಿಗೆ ಹೊಂದಿಲ್ಲದ ಹೆಣ್ಣು ಮಕ್ಕಳು ಬೇಗ ಮಕ್ಕಳನ್ನು ಹಡೆಯುವುದರಿಂದ, ಈ ಭಾಗದಲ್ಲಿ ತಾಯಿ-ಶಿಶುವಿನ ಮರಣ ಪ್ರಮಾಣ ಹೆಚ್ಚಾಗಿದೆ. ಬಾಲ್ಯ ವಿವಾಹ ಪದ್ಧತಿ, ಪೌಷ್ಟಿಕ ಕೊರತೆ, ಉತ್ತಮ ಸಾಮಾಜಿಕ ಜ್ಞಾನದ ಕೊರತೆ ನಮ್ಮ ಸಮಾಜದಲ್ಲಿ ಇರುವುದರಿಂದಲೇ ಇವೆಲ್ಲ ಸಾಮಾಜಿಕ ಪಿಡುಗುಗಳು ಸಂಭವಿಸುತ್ತವೆ ಎನ್ನುವುದು ಅವರ ಪ್ರತಿಪಾದನೆ ಆಗಿದೆ. ಬಾಲ್ಯವಿವಾಹವಾದ ಹೆಣ್ಣು ಮಕ್ಕಳ ನೋವುಗಳು ಸಹ ಇಲ್ಲಿ ಅವರು ಅಂಕಿ ಅಂಶಗಳ ಮೂಲಕ ಬಿಚ್ಚಿಟ್ಟಿರುವುದು ಕಾಣುತ್ತದೆ. ಒಂದು ರೀತಿಯಲ್ಲಿ ಇದು ನಾಚಿಕೆ ಪಡುವ ವಿಷಯವಾಗಿದೆ.

‘‘ಮಕ್ಕಳಲ್ಲಿ ಇರುವ ವಿಭಿನ್ನತೆಗಳನ್ನು ಅರ್ಥಮಾಡಿಕೊಳ್ಳುತ್ತಾ ಮಾನಸಿಕವಾಗಿ ಅಥವಾ ದೈಹಿಕವಾಗಿ ಹುಟ್ಟಿನಿಂದ ಅಥವಾ ಆನಂತರದ ಕಾರಣದಿಂದ ವೈಕಲ್ಯ ಹೊಂದಿದ ಮಕ್ಕಳು, ಅಂದರೆ ಸಾಧಾರಣ ಮಕ್ಕಳಿಗಿಂತ ಮನಸ್ಸು ಮತ್ತು ಅಂಗಗಳಲ್ಲಿ ಭಿನ್ನವಾಗಿರುವವರು ಮಾನಸಿಕ ವೈಕಲ್ಯವಿರುವ ಮಕ್ಕಳಿಗೆ ರೂಢಿಯಲ್ಲಿ ಈ ಅಸಾಧಾರಣ ಮಕ್ಕಳು ಎಂಬ ಹೆಸರಿದೆ’’ - ಈ ರೀತಿಯ ಒಳನೋಟವಿರುವ ಮಾತುಗಳು ನಾವು ಪ್ರಜ್ಞಾದಲ್ಲಿ ಕಾಣಬಹುದಾಗಿದೆ. ಮಕ್ಕಳಲ್ಲಿರುವ ಭಿನ್ನ ರೀತಿಯ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಲೇ ಅವರ ಅಂಗಗಳ ವೈಫಲ್ಯದ ಕುರಿತು ಇತರ ಮಕ್ಕಳು ಸಹಾನಭೂತಿಯಿಂದ ನೋಡುವುದು ಕಲಿಸಬೇಕಾಗಿದೆ ಮತ್ತು ಆ ಮಕ್ಕಳಿಗೆ ಅವರದೇ ಆದ ಉತ್ತಮ ಕೌಶಲ್ಯಯುತ ಶಿಕ್ಷಣ ಕೊಡಬೇಕಾಗಿದೆ. ಎಂಬುವುದು ಈ ಸಾಲುಗಳ ಒಳಚಿಂತನೆಯಾಗಿದೆ.

‘‘ನಾವು ಎಷ್ಟು ಓದಬೇಕೆಂದರೆ, ಎದುರಿನವರು ನೋಡಿ ಆಶ್ಚರ್ಯಚಕಿತರಾಗಬೇಕು ಎಂಬ ಮಾತನ್ನು ಸ್ವತಃ ಡಾ. ಅಂಬೇಡ್ಕರ್ ಉಲ್ಲೇಖ ಮಾಡುತ್ತಾರೆ. ತಾವು ಈ ಸಮಾಜವನ್ನು ಅರಿತು ಅದರ ಸಮಸ್ಯೆಗಳಿಗೆ ಸ್ಪಂದಿಸಬೇಕಾದರೆ ಓದು ಅತೀ ಅವಶ್ಯಕ ಎಂಬ ಸತ್ಯ ಅರಿತ ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಜ್ಞಾನಾರ್ಜನೆಗೆ ಮೀಸಲಿಟ್ಟರು. ತಮ್ಮ ಕೊನೆಯ ಉಸಿರಿನ ತನಕ ಓದುವುದನ್ನು ಮರೆಯಲಿಲ್ಲ. ಒಂದು ಹೊತ್ತು ಊಟ ಕಡಿಮೆ ಮಾಡಿದರೆ ಹೊರತು ಓದುವುದನ್ನು ಬಿಡಲೇಯಿಲ್ಲ. ಅದರ ಓದಿನ ಹಸಿವು ಇವತ್ತಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಿದೆ.’’ - ಡಾ ಅಂಬೇಡ್ಕರ್ ಅವರ ಓದಿನ ಹಸಿವು ಇವತ್ತಿನ ಮಕ್ಕಳಿಗೆ ಬೇಕು ಎನ್ನುವ ಲೇಖನದಲ್ಲಿ ಈ ಸಾಲುಗಳು ಓದಿ ಬೆರಗಾದೆ. ಹೌದು ಪ್ರತಿಯೊಬ್ಬರು ಅನಂತ ಕಡಲಿನಂತೆ ಓದಬೇಕಿದೆ. ಒಟ್ಟಾರೆ ಲೇಖಕರ ಆಶಯವು ಸಹ ಅಂಬೇಡ್ಕರರ ಕಣ್ಣೋಟದಿಂದ ಇದನ್ನು ನೋಡುವುದೆ ಆಗಿದೆ. ಓದಿನ ದಾಹ ಮಕ್ಕಳಲ್ಲಿ ಬೆಳೆಯಬೇಕು ತಮ್ಮ ಪಠ್ಯಗಳಾಚೆಯೂ ಅವರು ನೋಡುವಂತಾಗಬೇಕು. ಅಂಬೇಡ್ಕರವರ ಅನಂತ ಓದು ನಮಗೆ ಮಾದರಿಯಾಗಬೇಕೆಂಬುವುದು ಲೇಖಕರ ಆಶಯವಾಗಿದೆ.

ಪ್ರಜ್ಞಾ ಕೃತಿಯಲ್ಲಿನ 55 ಅಂಕಣ ಬರಹಗಳು ಸಹ ವಿಭಿನ್ನವಾಗಿವೆ. ಆಳವಾದ ಅಧ್ಯಯನ ಮತ್ತು ಅವರ ಶಿಕ್ಷಕರೊಂದಿಗಿನ ಒಡನಾಟದಿಂದ ಬಂದಿರುವ ಈ ಅನುಭವಗಳು ಕೆಲವೇ ಪದಗಳಲ್ಲಿ ಹಿಡಿದು ಇಡುವುದು ಕಷ್ಟ. ಪ್ರತಿಯೊಂದು ಲೇಖನವು ಸಹ ಇಲ್ಲಿ ವಿಭಿನ್ನ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ಮರೆಯಾದ ಶಿಕ್ಷಣದ ಮೌಲ್ಯಗಳ ಕುರಿತು ಅಪರವಾದ ಹಳಹಳಿಕೆ ಲೇಖಕರಲ್ಲಿ ಎದ್ದು ಕಾಣುತ್ತಿದೆ. ಇಲ್ಲಿನ ಲೇಖನಗಳಲ್ಲಿ ಶಿಕ್ಷಕರ ಸಂಕಟಗಳು ಮತ್ತು ಅವರು ಹೊಸ ಪೀಳಿಗೆಗೆ ಓದಿಸಬೇಕಾದ ರೀತಿಗಳ ಕುರಿತು ಸಹ ಲೇಖಕರು ಬರೆದಿದ್ದಾರೆ. ಹೈದರಾಬಾದ್ ಕರ್ನಾಟಕದ ಈ ಲೇಖಕರು ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳನ್ನು ಮರೆಯುವುದಿಲ್ಲ ಇದರಿಂದಲೇ ತಿಳಿಯುತ್ತದೆ ಇವರ ಚಿಂತನೆಗಳು ಅಂಕಿ ಅಂಶಗಳಿಂದ ಕೂಡಿರುವ ನಿಖರವಾದ ಕಾಳಜಿಯ ಅಧ್ಯಯನವಾಗಿದೆ. ಅನೇಕ ಮಾದರಿ ಶಿಕ್ಷಣ ವ್ಯವಸ್ಥೆಗಳ ಕುರಿತು ಇವರು ಇಲ್ಲಿ ಬರೆದಿದ್ದಾರೆ. ಒಂದು ಅನುವಾದ ಲೇಖನ ಸಹ ನಾವು ನೋಡಬಹುದು ಹೀಗೆ ಪ್ರಜ್ಞಾ ಕೃತಿಯು ವೈವಿಧ್ಯಮಯವಾಗಿದೆ. ಈ ಅಗಾಧವಾದ ಕೃತಿಯನ್ನು ಕೆಲವೇ ಪದಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ. ತಮ್ಮ ಲೇಖನಕ್ಕೆ ನೇರವಾಗಿ ಶಿಕ್ಷಣ ಸಚಿವರಾದ ಸುರೇಶ ಕುಮಾರ್ ಅವರಿಂದ ಮೆಚ್ಚುಗೆ ಪಡೆದಿರುವ ಲೇಖಕರ ಕುರಿತು ಹೆಮ್ಮೆ ಇದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)