ಮಂಗಳೂರು ಗೋಲಿಬಾರ್ ಹಿಂದಿನ ಕರಾಳ ಸತ್ಯ
ಈ ಹೊತ್ತಿನ ಹೊತ್ತಿಗೆ
ಡಿಸೆಂಬರ್ 19ರ ರಕ್ತದ ಕಳಂಕವನ್ನು ಒರೆಸಿ ಹಾಕಲು ಪೊಲೀಸ್ ಅಧಿಕಾರಿಗಳು ಶತ ಪ್ರಯತ್ನ ಮಾಡುತ್ತಿದ್ದಾರಾದರೂ, ಒರೆಸಿದರೂ ಅದರ ವಾಸನೆ ಅವರ ಮೂಗಿಗೆ ಎದ್ದೆದ್ದು ಬಂದು ಬಡಿಯುತ್ತಿದೆ. ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 400ರಷ್ಟು ಪ್ರತಿಭಟನಾಕಾರರ ಮೇಲೆ ಪೊಲೀಸರು ಎಸಗಿದ ದೌರ್ಜನ್ಯ ಇಡೀ ಕರ್ನಾಟಕದ ಪೊಲೀಸ್ ಇಲಾಖೆಯ ಪಾಲಿಗೇ ಬಹುದೊಡ್ಡ ಕಳಂಕವಾಗಿತ್ತು. ತಮ್ಮ ಕೃತ್ಯಗಳಿಗೆ ಸಮರ್ಥನೆಗಳ ಮೇಲೆ ಸಮರ್ಥನೆಗಳನ್ನು ನೀಡುತ್ತಾ ಬಂದರೂ, ಅವರ ದುರುದ್ದೇಶ ಢಾಳಾಗಿ ಎದ್ದು ಕಾಣುತ್ತಿದೆ. ಅಂದು ಪೊಲೀಸರ ಕೈಯಲ್ಲಿ ಇಬ್ಬರು ಯುವಕರು ಅಕ್ಷರಶಃ ಕಗ್ಗೊಲೆಗೀಡಾಗಿದ್ದರು ಎಂದು ಜನರು ಆರೋಪಿಸಿದ್ದಾರೆ. ಸಿಕ್ಕಿದ ಸಾಕ್ಷಗಳು ಅದನ್ನೇ ಹೇಳುತ್ತಿವೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ನುಗ್ಗಿ ಪೊಲೀಸರು ನಡೆಸಿದ ದಾಳಿ, ದಿಲ್ಲಿ ಜಾಮಿಯಾ ವಿವಿಯ ಲೈಬ್ರರಿಗೆ ನುಗ್ಗಿ ನಡೆಸಿದ ದಾಳಿಗಿಂತ ಭೀಕರ ಮತ್ತು ಅಮಾನವೀಯವಾಗಿದೆ. ಅಂದಿನ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ವಿವಿಧ ಪತ್ರಿಕೆಗಳು ವಿಶೇಷವರದಿಗಳನ್ನು ಪ್ರಕಟಿಸಿವೆ. ಆದರೆ ಯುವ ಪತ್ರಕರ್ತ ರಾ. ಚಿಂತನ್, ಇಡೀ ಮಂಗಳೂರಲ್ಲಿ ಓಡಾಡಿ ವಿವಿಧ ಸಂತ್ರಸ್ತರ ಜೊತೆಗೆ ಮುಖಾಮುಖಿಯಾಗಿ ವಿಶೇಷ ತನಿಖಾ ವರದಿಯೊಂದನ್ನು ಹೊರತಂದಿದ್ದಾರೆ. ಅದರ ಹೆಸರು ‘ಮಂಗಳೂರು ಗೋಲಿಬಾರ್-ಕರಾಳ ಸತ್ಯ’
ಪುಸ್ತಕ ಮಂಗಳೂರು ಪೊಲೀಸರ ಹಿಂಸಾಚಾರವನ್ನೇ ಕೇಂದ್ರವಾಗಿಟ್ಟುಕೊಂಡಿದ್ದರೂ, ಈ ಘಟನೆಗೆ ಕಾರಣವಾಗಿರುವ ಸಿದ್ಧಾಂತ, ಅದು ಹೇಗೆ ನಮ್ಮ ನಾಡಿನ ವಿವಿಧ ಕ್ಷೇತ್ರಗಳ ಮೇಲೆ ತನ್ನ ಪರಿಣಾಮಗಳನ್ನು ಬೀರುತ್ತಾ, ಕರ್ನಾಟಕ ಮುಖ್ಯವಾಗಿ ಕರಾವಳಿಯನ್ನು ಈ ಸ್ಥಿತಿಗೆ ತಂದಿಟ್ಟಿದೆ ಎನ್ನುವುದನ್ನು ಕೂಲಂಕಷವಾಗಿ ವಿಶ್ಲೇಷಿಸುತ್ತದೆ. ಡಾ. ಸಿ. ಎಸ್. ದ್ವಾರಕಾನಾಥ್ ಕೃತಿಯ ಬಗ್ಗೆ ಬರೆಯುತ್ತಾ ‘‘ರಾ ಚಿಂತನ್ ಬರೆದಿರುವ ಈ ತನಿಖಾ ವರದಿಯು ತನ್ನೆಲ್ಲಾ ದಾಖಲಾತಿಗಳೊಂದಿಗೆ ನ್ಯಾಯಾಂಗ ತನಿಖೆಗೂ ಆಧಾರವಾಗಬಹುದು ಅನ್ನಿಸುತ್ತದೆ. ಈ ಪುಸ್ತಕವು ಘಟನೆಯ ಪರ ಮತ್ತು ವಿರೋಧದ ನಡುವಿನ ಪೂರ್ವಗ್ರಹ ಮನಸ್ಥಿತಿಯ ಗೊಂದಲವನ್ನು ನಿವಾರಿಸುತ್ತದೆ ಅನ್ನಿಸುತ್ತದೆ. ಇಂತಹ ತನಿಖಾ ವರದಿಗಳು ಪ್ರಸ್ತುತ ಸಮಾಜಕ್ಕೆ ನಗ್ನಸತ್ಯ ತಿಳಿಸಲು ಅತ್ಯಗತ್ಯವಾಗಿದೆ’’ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಇಡೀ ಪ್ರಕರಣದ ‘ಅಸಲಿ ವಿಲನ್’ನನ್ನು ಗುರುತಿಸುವ ಪ್ರಯತ್ನದಲ್ಲಿ ಚಿಂತನ್ ಬಹುತೇಕ ಯಶಸ್ವಿಯಾಗಿದ್ದಾರೆ.
ಗೋಲಿಬಾರ್ ಮಂಗಳೂರಿನ ಆತ್ಮಕ್ಕಾದ ಗಾಯ. ಇಂತಹದೊಂದು ತಪ್ಪು ಮತ್ತೊಮ್ಮೆ ನಡೆಯದೇ ಇರಬೇಕಾದರೆ ಈ ಘಟನೆ ನಮ್ಮ ಸ್ಮತಿಯಲ್ಲಿ ಶಾಶ್ವತವಾಗಿ ಇರಬೇಕು. ಈ ಕಾರಣದಿಂದ ಈ ಕೃತಿ ಪ್ರಕರಣದ ಒಂದು ಶಾಶ್ವತ ದಾಖಲೆಯಾಗಿದೆ. ಎಮ್‌ಕೆಎಸ್ ಪಬ್ಲಿಕೇಶನ್ಸ್ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 88. ಮುಖಬೆಲೆ 100 ರೂಪಾಯಿ. ಆಸಕ್ತರು 98445 74724 ದೂರವಾಣಿಯನ್ನು ಸಂಪರ್ಕಿಸಬಹುದು.