varthabharthi


ಸುಗ್ಗಿ

ಸಂಚಾರಿ

ವಾರ್ತಾ ಭಾರತಿ : 23 Feb, 2020
ದಿಲೀಪ್ ಕುಮಾರ್ ಸಂಪಡ್ಕ ಬಲ್ಯ

ಟ್ರಿಣ್....... ಟ್ರಿಣ್......

ಟ್ರಿಣ್........ ಟ್ರಿಣ್.....

‘‘ಹಲೋ..... ಯಾರು?’’

‘‘ರಾಮಕೃಷ್ಣರ ಅಂಗಡಿಯಲ್ಲವಾ.....’’ ಆ ಕಡೆಯಿಂದ ಮೃದು ಧ್ವನಿಯಿಂದ ಯಾರೋ ಕೇಳಿದರು.

‘‘ಹೌದು’’

‘‘ನೀವು ಯಾರು ?’’

‘‘ನಾನು ಶಂಕರ......... ನಾನು ಹೇಳಿದ ದಿನಸಿ ಸಾಮಾನು ಕಳುಹಿಸಿದ್ರಾ ?’’

‘‘ಹೋ ..... ನೀವಾ..... ನಾನು ಆಗಲೇ ಪ್ರವೀಣರ ಜೀಪಿನಲ್ಲಿ ಹಾಕಿ ಕಳುಹಿಸಿದ್ದೇನೆ.’’

‘‘ಸರಿ.. ಸರಿ..’’ ಫೋನ್ ಕಟ್ಟಾಯಿತು.

ನನಗೆ ಈ ಸಂಭಾಷಣೆ ಪದೇ-ಪದೇ ಕಿವಿಯಲ್ಲಿ ಕೇಳಿದ ಹಾಗೇ ಭಾಸವಾಗುತ್ತಿರುತ್ತದೆ. ಆಗ ನನಗೆ ಇನ್ನೂ ಐದು ವರ್ಷ ಇರಬಹುದೋ ಎನೋ.... ಆದೇ ಹಳೆಯ ಚಡ್ಡಿ, ಆ ಡಬ್ಬಾ ಸೈಕಲ್ ಹಿಡುಕೊಂಡು ರಾಮಕೃಷ್ಣರ ಅಂಗಡಿಗೆ ಓಡಾಡುತ್ತಿದ್ದೆ. ಅಂದರೆ ಸುಮಾರು ಮೂವತ್ತು ವರ್ಷದ ಹಿಂದಿನ ಮಾತು. ನಮ್ಮ ಊರಿನಲ್ಲಿ ರಾಮಕೃಷ್ಣರ ದಿನಸಿ ಅಂಗಡಿ ಬಿಟ್ಟರೆ ಬೇರೆ ಯಾರ ಅಂಗಡಿ ಇರಲಿಲ್ಲ. ಬೇರೆ ಊರಿಂದ ಬರುವ ಜನರು ಕೂಡ ಇವರ ಅಂಗಡಿಗೆ ಬಂದೇ ಹೋಗುವುದು. ಅಲ್ಲದೆ, ನಮ್ಮ ಊರಿನ ಜನರಿಗೆ ಬೇರೆ ಕಡೆಯಿಂದ ಬರುವ ಸಂದೇಶಗಳು ರಾಮಕೃಷ್ಣರ ದೂರವಾಣಿಯಿಂದ ಬರಬೇಕು. ನಾವು ಕೂಡ ಹಾಗೆ ಇವರ ಫೋನ್‌ನಿಂದ ಬೇರೆ ಕಡೆಗೆ ಫೋನಾಯಿಸುತ್ತಿದ್ದೆವು.

‘‘ಹಾ..... ! ನಮ್ಮ ರಾಮಕೃಷ್ಣರ ಬಗ್ಗೆ ಹೇಳುವುದನ್ನೇ ಮರೆತು ಬಿಟ್ಟೆ ನೋಡಿ... !’’

ರಾಮಕೃಷ್ಣರು ತುಂಬಾ ಒಳ್ಳ್ಳೆಯ ವ್ಯಕ್ತಿ. ಒಂದು ತರ ಫೈಲ್ವಾನ್ ರೀತಿಯ ಗಟ್ಟಿಮುಟ್ಟಾದ ದೇಹ. ಮುಖದ ಮೇಲೆ ಒಂದು ಸ್ವಲ್ಪ ಗಡ್ಡ ಮತ್ತು ದಪ್ಪಗಿನ ಮೀಸೆ. ಅದರೆ ಪಕ್ಕಾ ವ್ಯಾಪಾರಿ. ಎಲ್ಲಾ ವ್ಯವಹರವನ್ನು ವ್ಯಾಪಾರಿ ದೃಷ್ಟಿಯಿಂದ ನೋಡುತ್ತಿದ್ದರು. ಅದರಲ್ಲೂ ನಾವು ಅವರ ಫೋನ್‌ನಿಂದ ಫೋನಾಯಿಸಿದರೆ ಅದರ ಬಾಬ್ತು ಪಕ್ಕಾ ಚುಕ್ತಾ ಅಗಬೇಕು. ಇಲ್ಲಾಂದ್ರೆ ಮುಂದಿನ ಬಾರಿ ನಮಗೆ ಫೋನ್ ಸಿಗುವುದು ಕಷ್ಟ. ಜನರಿಗೆ ಕೂಡ ಅದರ ಅವಶ್ಯಕತೆ ಇತ್ತು. ಏಕೆಂದರೆ ನಮ್ಮಲ್ಲಿ ಯಾರಲ್ಲೂ ದೂರವಾಣಿ ಇರಲಿಲ್ಲ. ಹಾಗಂತ ಕಂಜೂಸ್ ವ್ಯಕ್ತಿಯಲ್ಲ. ವ್ಯಾಪಾರದಲ್ಲಿ ಪಕ್ಕಾ ಅಷ್ಟೆ. ವಿಶಾಲ ಮನಸ್ಸು ಹೊಂದಿದ ವ್ಯಕ್ತಿ. ಒಂದು ದಿನ ರಾಮಕೃಷ್ಣರು ನನ್ನನು ಅವರ ಮನೆಗೆ ಕರೆದುಕೊಂಡು ಹೋಗಿದ್ರು. ಅಲ್ಲೇ ಅವರ ಅಂಗಡಿಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಅವರ ಮನೆ ಇರುವುದು. ಅವರ ಚೇತಕ್ ಸ್ಕೂಟರ್‌ನಲ್ಲಿ ನಮ್ಮ ಸವಾರಿ ಮನೆ ಕಡೆಗೆ ಶುರುವಾಯಿತು. ನಾವು ಇಬ್ಬರೂ ಅವರ ಮನೆಗೆ ಕೆಲವೇ ಕ್ಷಣದಲ್ಲಿ ಬಂದು ಇಳಿದೆವು. ಅದು ಸಾಧಾರಣವಾದ ಮಣ್ಣಿನ ಗೋಡೆಯ ಸುಂದರವಾದ ಮನೆ. ಅವರ ಧರ್ಮಪತ್ನಿ ಕೂಡ ಅಷ್ಟೆ ಒಳ್ಳೆಯ ಹೆಂಗಸು. ಅವರ ಹೆಸರು ಕಾವೇರಿ. ಮನೆಗೆ ಯಾರೇ ಬರಲಿ ಅವರಿಗೆ ಚಾ-ತಿಂಡಿ, ಊಟ ಕೊಟ್ಟು ಮತ್ತೆ ಮಾತು ಅರಂಭಿಸುವ ಗುಣ ಅವರದ್ದು. ರಾಮಕೃಷ್ಣರನ್ನು ಕಂಡರೆ ಇವರಿಗೆ ತುಂಬಾ ಭಯ ಭಕ್ತಿ. ರಾಮಕೃಷ್ಣರು ಕಣ್ಣಲ್ಲಿ ಹೇಳಿದ ಕೆಲಸವನ್ನು ಇವರು ಎಷ್ಟೇ ಕಷ್ಟ ಅದರೂ ಮಾಡಿ ಮುಗಿಸುತ್ತಿದ್ದರು. ಯಜಮಾನರ ಮುಖ ಭಾವ ನೋಡಿಯೇ ಎಲ್ಲ ವಿಷಯವನ್ನು ಅರ್ಥ ಮಾಡಿಕೊಳ್ಳುವ ಗುಣ ಇವರದ್ದು. ರಾಮಕೃಷ್ಣರು ಸ್ವಲ್ಪ ಮುಂಗೋಪಿ. ಯಾರೇ ತಪ್ಪು ಮಾಡಲಿ ಅದನ್ನು ಅಲ್ಲೇ ಹೇಳುವ ಸ್ವಭಾವ. ಅದಕ್ಕೆ ಇವರ ಬಾಯಿಗೆ ಯಾರು ಕೂಡ ಸಿಕ್ಕಿ ಹಾಕಿಕೊಳ್ಳುತ್ತಿರಲಿಲ್ಲ. ಎಂದಿನಂತೆ ಕಾವೇರಿಯಕ್ಕ ಅಡುಗೆ ಕೋಣೆಯಿಂದ ಒಂದು ತಟ್ಟೆಯಲ್ಲಿ ಎರಡು ಲೋಟ ಚಾ ಇಟ್ಟುಕೊಂಡು ಬಂದು ನಮ್ಮ ಮುಂದು ತಟ್ಟೆಯನ್ನು ಚಾಚಿ,

‘‘ತೆಗೋಳಿ ಚಾ...’’

‘‘ನೀವು... ರಾಜಣ್ಣ ಅಲ್ವಾ. . .’’

‘‘ತುಂಬಾ ಸಮಯ ಅಯಿತು ನಿಮ್ಮನ್ನು ನೋಡಿ. ನೀವು ಇಬ್ಬರು ಸೇರಿದ್ರೆ ಮುಗಿಯಿತು ಕಥೆ.... ! ನಿಮ್ಮ ಬಗ್ಗೆ ಆಗಾಗ ಇವರು ಹೇಳ್ತಾರೆ.’’ ಎಂದರು.

ನಾನು ಚಾ ಕುಡಿದು ಲೋಟವನ್ನು ಸೋಫಾದ ಬದಿಯಲ್ಲಿ ಇಟ್ಟೆ.

‘‘ಬನ್ನಿ ನನ್ನ ಮನೆಯ ಪರಿಚಯ ಮಾಡಿಸ್ತೀನಿ. ಬನ್ನಿ.... ಬನ್ನಿ.....’’ ಎಂದರು ರಾಮಕೃಷ್ಣ.

ಅದೇ, ಮಣ್ಣೆನ ಮನೆ, ಹಂಚಿನ ಹೊದಿಕೆ ಹಾಕಿದ ಮನೆ. ಮನೆಯ ಎಡಕ್ಕೆ ಮೂಲೆಯಲ್ಲಿ ನಾಯಿಯ ಗೂಡು. ಎರಡು ನಾಯಿಗಳು ಒಳಗೆ ರೆಸ್ಟ್ ತೆಗೆದುಕೊಳ್ಳುತ್ತಿತ್ತು. ನಾಯಿ ಗೂಡಿನ ಬದಿಯಲ್ಲೇ ದನದ ಕೊಟ್ಟಿಗೆ, ಅಲ್ಲಿ ಎರಡು ದನ ಮತ್ತು ಒಂದು ಚಿಕ್ಕ ಕರು ಇತ್ತು. ತೋಟ ತುಂಬ ಅಡಿಕೆ ಗಿಡ, ಹಣ್ಣು-ಹಂಪಲು ಗಿಡಗಳಿಂದ ತುಂಬಿಕೊಂಡಿದ್ದವು. ರಾಮಕೃಷ್ಣರು ಎರಡು ಪಪ್ಪಾಯಿ ಹಣ್ಣು ಕಿತ್ತು ಕೊಟ್ಟರು. ಮತ್ತೆ ಹಾಗೇ ಮಾತಾಡುತ್ತಾ ಮನೆ ಕಡೆಗೆ ಬಂದೆವು. ರಾಮಕೃಷ್ಣರ ಇನ್ನೊಂದು ಗುಣವೆಂದರೆ ಯಾವುದೇ ವಿಷಯದ ಬಗ್ಗೆ ಗಂಟೆ-ಗಟ್ಟಲೆ ಕುಳಿತು ಮಾತಾಡುವ ತಾಕತ್ತು ಇವರಿಗಿತ್ತು. ನಾನು ಬೋರಾದಗೆಲ್ಲಾ ಇವರ ಅಂಗಡಿಯ ಜಗಲಿಯಲ್ಲಿ ಕುಳಿತುಕೊಳ್ಳುವುದು ವಾಡಿಕೆ.

ಅವತ್ತು ಸೋಮವಾರ, ಸುಮಾರು ಹನ್ನೊಂದು ಗಂಟೆ ಇರಬೇಕು... ಅಂಗಡಿಯಲ್ಲಿ ಅಷ್ಟು ಜನ ಇರಲಿಲ್ಲ. ಎಂದಿನಂತೆ ನಮ್ಮ ಮಾತು ಬೆಳೆಯಿತು.

‘‘ನೋಡಿ.....ಇವತ್ತು ಸೋಮವಾರ ಜನ ಕಡಿಮೆ. ಈ ದಿನವನ್ನೇ ನಾನು ಕಾಯುತ್ತಿರುತ್ತೇನೆ. ಏಕೆಂದರೆ, ನನ್ನ ಗೆಳೆಯರಲ್ಲಿ ಮಾತನಾಡಲು ಸಮಯ ಸಿಗುವುದೇ ಸೋಮವಾರ’’ ಎಂದರು

‘‘ಹೋ.... ಹೌದಾ .....’’ ಎಂದೆ ನಾನು.

‘‘ಹೇ... ರಾಜಣ್ಣ ...... ಎಲೆ ಅಡಿಕೆ ಹಾಕೊತಿರಾ.....’’? ನಾವು ಹೀಗೆ ಯಾವ ಸ್ಥಳದಲ್ಲಿ ಸಿಕ್ಕರೂ ಎಲೆ ಅಡಿಕೆ ತಿನ್ನುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಇಬ್ಬರೂ ಎಲೆ ಅಡಿಕೆ ಜಗಿಯುತ್ತಾ ಮಾತು ಮುಂದುವರಿಸಿದೆವು.

      

ಇಬ್ಬರು ಚಾ ಕುಡಿತಿದ್ವಿ. ಆಗ ನಾನು ಕೇಳಿದೆ,‘‘ಏನ್ ಯಾಜಮಾನ್ರೆ...... ನಿಮ್ಮ ಅಂಗಡಿಯಲ್ಲಿ ಕಾಯಿನ್ ಬಾಕ್ಸ್ ಇತ್ತಲ್ಲಾ... ಎಲ್ಲಿ ಹೋಯ್ತು’’.

‘‘ಹೋ...... ಆದಾ? ನೋಡಿ ಸ್ವಾಮಿ .ಈಗ ಎಲ್ಲರ ಕೈಯಲ್ಲೂ ಮೊಬೈಲ್. ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎಂಬಂತಾಗಿದೆ. ಶಾಲೆ, ಕಾಲೇಜಿಗೆ ಹೋಗುವ ಮಕ್ಕಳಲ್ಲಿ ಕೂಡ ಅದು ಸರ್ವೇ ಸಾಮಾನ್ಯ. ಅದೇನೋ ಇಂಟರ್‌ನೆಟ್ ಅಂತೆ, ಅದೇನೋ ಗೇಮ್ಸ್ ಅಂತೆ ಇಡೀ ಲೋಕವೇ ಅದರಲ್ಲಿ ಮುಳುಗಿದೆ. ಅಲ್ಲದೆ, ಅದರಲ್ಲಿ ಕಾಲ್ ರೇಟ್ ಕೂಡ ಕಡಿಮೆ ಅಂತ ಹೇಳಿ ಎಲ್ಲರೂ ಕಾಯಿನ್ ಬಾಕ್ಸ್ ಉಪಯೋಗಿಸುವುದನ್ನು ಬಿಟ್ಟುಬಿಟ್ಟರು. ಈಗ ಅದು ಗುಜಿರಿ ಅಂಗಡಿಯಲ್ಲಿದೆ. ಹಾ.... ಹ್ಹಾ....’’ ಅಂತ ನಕ್ಕರು. ‘‘ಅಲ್ಲಾ.... ನೀವೇ..... ನೋಡಿದ್ರಲ್ಲ ನನ್ನ ಅಂಗಡಿಯ ಹಿಂದೆ ಮೂರು ಕಂಪೆನಿಯ ಟವರ್ ಇದೆ. ನನಗೇನೋ ಪ್ರತಿ ತಿಂಗಳು ಬಾಡಿಗೆ ಸರಿಯಾಗಿ ಬರುತ್ತೆ. ಅದ್ರೆ ಹಿಂದೆ ಇದ್ದ ಆ ಲ್ಯಾಂಡ್‌ಲೈನ್‌ನ ಈ ಟ್ರಿಣ್...ಟ್ರಿಣ್ ಶಬ್ದ ಈ ಮೊಬೈಲಲ್ಲಿ ಎಲ್ಲಿ ಬರಬೇಕು. ದರಿದ್ರ ಈ ಮೊಬೈಲ್ ಬರುವ ಮೊದಲು ನನ್ನ ಅಂಗಡಿಯಲ್ಲಿ ಗುಬ್ಬಚ್ಚಿಗಳು ಚಿಲಿ-ಪಿಲಿ ಅಂತ ರಾಗ ಹಾಕುತ್ತ ಇಲ್ಲೇ ವಾಸವಾಗಿದ್ದವು. ಜನರು ಸ್ವಲ್ಪ ಹೊತ್ತು ಇಲ್ಲಿ ಕುಳಿತು ತಮ್ಮ ಕಷ್ಟ ಸುಖ ಮಾತಾಡುತ್ತ ಖುಷಿಯಾಗಿದ್ರು. ಆದ್ರೆ ಈಗ ಎಲ್ಲ ಫೋನಿನಲ್ಲೇ! ಮನುಷ್ಯ ಸಂಬಂಧಗಳಿಗೆ ಬೆಲೆ ಇಲ್ಲದ ಹಾಗೆ ಆಗಿದೆ. ಇತ್ತೀಚೆಗೆ ನನ್ನ ಮಗ ಬೆಂಗಳೂರಿನಿಂದ ಬಂದಿದ್ದ, ಅತ ಈ ಟವರ್ ನೋಡಿ, ‘‘ಏನಪ್ಪಾ ಈ ಟವರ್ ಹಾಕಲಿಕ್ಕೆ ನೀನು ಯಾಕೆ ಅನುಮತಿ ಕೊಟ್ಟೆ? ಇದರಿಂದ ಇಲ್ಲಿಯ ಜನರಿಗೆ ಎಷ್ಟು ಸಮಸ್ಯೆ ಆಗುತ್ತೆ ಗೋತ್ತಾ?’’ ಅಂದ. ನಾನು ಮೂಕ ವಿಸ್ಮಿತನಾಗಿದ್ದೆ.

‘‘ಅವತ್ತೆ ನಂಗೆ ಗೊತ್ತಾಗಿದ್ದು ಈ ಹೊಸ-ಹೊಸ ಸಾಧನಗಳಿಂದ ಇಷ್ಟೆಲ್ಲಾ ಸಮಸ್ಯೆ ಇದೆ’’ ಅಂತ.

‘‘ಏನು ಮಾಡುವುದು ಯಜಮಾನ್ರೆ ಕಾಲಕ್ಕೆ ತಕ್ಕಂತೆ ಜನ ಬದಲಾಗಿದ್ದಾರೆ ಏನು ಮಾಡುವುದು ವಾಸ್ತವತೆ ಅರ್ಥ ಮಾಡಿಕೊಳ್ಳುವುದು ಮತ್ತು ಹಳೆಯ ಪದ್ಧತಿಗಳನ್ನು ಈಗ ಪಾಲಿಸುವುದು ತುಂಬ ಕಷ್ಟವಾಗಿದೆ ಅಲ್ಲವೇ?’’ ಅಂದೆ ನಾನು.

‘‘ಅದಿರಲಿ, ಅದೇನೋ ನಿಮ್ಮ ಮನೆಯ ಕೆಲಸದವನು, ಅದೇ... ಕಿರಣ್ ಬೆಂಗಳೂರಿಗೆ ಹೋದ ಅಂತೆ..... ಅವನಿಗೇನಾಯಿತು ದೊಡ್ಡ ರೋಗ. ಅಲ್ಲಾ.... ನೀವು ನಿಮ್ಮ ಸ್ವಂತ ಮಗನಂತೆ ನೋಡಿಕೊಂಡಿದ್ದಿರಿ ಅವನನ್ನು. ಅವನಿಗೆ ಬೇಕಾದಾಗ ಬಟ್ಟೆ-ಬರೆ, ಹಣ ಕೊಟ್ಟು ಸಾಕಿದ್ದಿರಿ. ಅವನೇಕೆ ಬೆಂಗಳೂರಿಗೆ ಹೋದ’’

‘‘ಆಯ್ಯೋ ಅದೆಲ್ಲಾ ಬಿಡಿ ಮಾರ್ರೆ. ಅದೇನೋ ಕೇಡು ಕಾಲಕ್ಕೆ ನಾಯಿ ಮೊಟ್ಟೆ ಇಟ್ಟಿತಂತೆ! ಅಂತಾರಲ್ಲಾ ಹಾಗೆ ಕಿರಣ್ ಮಾತ್ರ ಅಲ್ಲ, ಇಲ್ಲಿಯ ಇಲ್ಲ ಹುಡುಗ್ರು ಹಾಗೇ ಸ್ವಲ್ಪ ಮೀಸೆ ಬಂದ್ರೆ ಸಾಕು ಎನೋ ಹಣ ಮಾಡಬೇಕು ಅಂತ ಬೆಂಗಳೂರು, ಮುಂಬೈ, ಚೆನ್ನೈ ಅಂತ ಗುಳೇ ಹೋಗುತ್ತವೆ. ಮತ್ತೆ ಅಪ್ಪ- ಅಮ್ಮನಿಗೆ ಫೋನ್ ಮಾಡಿ ತಮ್ಮ ಭಾವನೆಗಳನ್ನು ಹೇಳುತ್ತವೆ’’

‘‘ಅಮ್ಮ ನಾನು ಇಲ್ಲಿ ಕೆಲಸ ಹುಡುಕುತ್ತಿದ್ದೇನೆ. ಇಲ್ಲಿ ರೂಮ್ ಸಿಕ್ಕಿಲ್ಲ, ನನ್ನ ಫ್ರೆಂಡ್ ರೂಮಿನಲ್ಲಿದ್ದೇನೆ. ನೋಡು ಒಳ್ಳೆಯ ಕಂಪೆನಿಯಲ್ಲಿ ಕೆಲಸ ಸಿಗಲಿ ನಿನ್ನನ್ನು ರಾಣಿ ತರ ಮರೆೆಸ್ತೀನಿ. ತಪ್ಪು ತಿಳ್ಕೋಬೇಡ, ನನಗೆ ಸತೀಶನತ್ರ ಐದು ಸಾವಿರ ಕೊಟ್ಟು ಕಳುಹಿಸು’’ ಅಂತ ಹೇಳುತ್ತಾರೆ.

‘‘ಇದು ಇಲ್ಲಿಯ ಎಲ್ಲಾ ಹುಡುಗರ ಕಾಮನ್ ಡೈಲಾಗ್. ಮತ್ತೆ ಎರಡು-ಮೂರು ವರ್ಷ ಹೇಗೋ ಕೆಲಸ ಮಾಡಿ ಊರಿಗೆ ಮರಳಿ ಬರುವುದು, ಹಿಂದೆ ಕಲಿತ ಅಲ್ಪ-ಸ್ವಲ್ಪ ಕಲಿತು ಕೆಲಸ ಮಾಡುತ್ತಾ ಜೀವನ ಸಾಗಿಸುವುದು ಅಷ್ಟೇ ಅಲ್ಲ ಎರಡು ಮೂರು ವರ್ಷ ಸಿಟಿಯಲ್ಲಿ ಇದ್ದು ಮತ್ತೆ ಹಳ್ಳಿ ಕೆಲಸ ಮಾಡಲಿಕ್ಕೆ ಇವಕ್ಕೆ ಸಾಧ್ಯವೇ?’’

ಅಷ್ಟೊತ್ತಿಗೆ,

ಟ್ರಿಣ್...... ಟ್ರಿಣ್...... ಟ್ರಿಣ್...... ಟ್ರಿಣ್...... ಫೋನ್ ರಿಂಗಾಯಿತು.

‘‘ಓ...... ಬಂದೆ...... ಬಂದೆ...... ಅದು ನನ್ನ ಎರಡನೇಯ ಮಗ ರಾಜೇಂದ್ರ ಇರಬೇಕು. ಅತ ಇಟಲಿಯಲ್ಲಿ ಇರುವುದು. ಅಲ್ಲಿಗೆ ಹೋಗಿ ಹತ್ತು ವರ್ಷ ಆಯಿತ್ತು. ಅವನೇ ಫೋನ್ ಮಾಡಿರಬೇಕು’’ ಎಂದರು.

‘‘ಸರಿ ಯಾಜಮಾನ್ರೆ.... ನಾನು ನಾಳೆ ಸಿಗ್ತೀನಿ... ಸರಿನಾ... .’’ ಅಂದೆ.

ರಾಮಕೃಷ್ಣರು ಫೋನ್ ಕಡೆ ದೌಡಾಯಿಸಿದ್ದರು. ನಾನು ಮನೆ ಕಡೆ ಮುಖ ಮಾಡಿದೆ. ನಾನು ಹೇಳಿದ್ನಲ್ವಾ ಈ ರಾಮಕೃಷ್ಣರ ಹತ್ರ ಮಾತಾಡಿದ್ರೆ ಸಮಯ ಕಳೆದು ಹೋಗುವುದೇ ಗೊತ್ತಾಗುವುದಿಲ್ಲ. ಜೀವನವನ್ನು ಬಹಳ ಗಂಭೀರವಾಗಿ ನೋಡುವ ವ್ಯಕ್ತಿ ಈತ. ನಾನು ಮನೆಗೆ ಹೋಗಿ ಊಟ ಮಾಡಿ, ಸೋಫಾದ ಮೇಲೆ ಹಾಗೇ ನಿದ್ದೆಗೆ ಜಾರಿದೆ. ನಿದ್ದೆ ನನ್ನನ್ನು ಆವರಿಸಿತ್ತು. ಅದ್ರೆ... ಆ ಫೋನ್‌ನ ಶಬ್ದ.... ಟ್ರಿಣ್..... ಟ್ರಿಣ್ .....

ಟ್ರಿಣ್..... ಟ್ರಿಣ್..... ಅಂತ ನನ್ನ ಕಿವಿಯಲ್ಲಿ ರಿಂಗ್ ಆದ ಹಾಗೇ ಕೇಳುತ್ತಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು