varthabharthi


ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ಮಕ್ಕಳ ಹಕ್ಕಿಗಾಗಿ ಹೋರಾಡಿದ ಜೆಬ್

ವಾರ್ತಾ ಭಾರತಿ : 24 Feb, 2020
-ಕಾರುಣ್ಯಾ

  ...ಮಕ್ಕಳ ಸ್ಕೂಲ್ ಮನೇಲಲ್ವೇ... ಎಂದು ಹೇಳಿಬಿಡುವುದು ತುಂಬಾ ಸುಲಭ. ಆದರೆ ಇವತ್ತು ಮನೆ, ಮನೆಯೊಳಗಿನ ವ್ಯಕ್ತಿಗಳೇ ಜೀವನದುದ್ದಕ್ಕೂ ಮಾಸಲಾಗದ ಗಾಯಗಳಿಗೆ ಕಾರಣರು ಎನ್ನುವುದನ್ನು ಹಲವು ವರದಿಗಳು ಬೊಟ್ಟು ಮಾಡಿ ತೋರಿಸಿವೆ. ಗುಡ್‌ಟಚ್, ಬ್ಯಾಡ್ ಟಚ್ ಹೇಳಿಕೊಡಬೇಕಾದ ಕಾಲದಲ್ಲಿರುವುದಕ್ಕೆ ಮಕ್ಕಳ ಮನಸ್ಸಿನ ಮೇಲೆ, ಮುಗ್ಧತೆಯ ಮೇಲೆ ಹಲ್ಲೆ ಮಾಡಿದ ಮನೆ ಮಂದಿ, ನೆರೆ ಹೊರೆಯೂ ಕಾರಣ. ಇಂತಹ ವಿಷಯಗಳು ಇಂದು ಸಮಾಜದಲ್ಲಿ ತೀವ್ರ ಚರ್ಚೆಗೆ ಬರುತ್ತಿವೆ. ಆದರೆ ಈ ಚರ್ಚೆ ಏಕಾಏಕಿ ಹುಟ್ಟಿಕೊಂಡಿರುವುದಲ್ಲ. ತಮ್ಮ ಮನೆಯೊಳಗೆ ತಮ್ಮದೇ ಮಕ್ಕಳ ಮೇಲೆ ತಮ್ಮವರೇ ನಡೆಸಿದ ಲೈಂಗಿಕ ಮತ್ತು ಇನ್ನಿತರ ದೌರ್ಜನ್ಯಗಳನ್ನು ಸಮಾಜದ ಮುಂದೆ ತೆರೆದಿಡಲು ಧೈರ್ಯ ಹುಟ್ಟಿದ್ದು ಇತ್ತೀಚೆಗೆ. ಅದರ ಹಿಂದೆ ಹಲವು ಸಾಮಾಜಿಕ ಕಾರ್ಯಕರ್ತರ ಹೋರಾಟಗಳಿವೆ. ಅಂತಹದೊಂದು ಹೋರಾಟದ ಕಥನವೇ ‘ಆಕೆ ಮಕ್ಕಳನ್ನು ರಕ್ಷಿಸಿದಳು-ಎಗ್ಲಾಂಟೈನ್ ಜೆಬ್ ಕಥನ’ ಕೃತಿ. ಇದು ಒಬ್ಬಾಕೆಯ ಕಥನವಲ್ಲ, ನಮ್ಮೆಲ್ಲರ ಮನೆಯೊಳಗಿನ ಮಕ್ಕಳ ಭವಿಷ್ಯದ ಕಥನವೂ ಹೌದು.

 52 ವರ್ಷಗಳ ತನ್ನ ಅಲ್ಪಕಾಲದ ಬಾಳಿನಲ್ಲಿ ಇಡೀ ಜಗತ್ತಿಗೆ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿದ ಮತ್ತು ಆ ನಿಟ್ಟಿನಲ್ಲಿ ಜಗತ್ತು ಸಾಂಸ್ಥಿಕ ಕಾರ್ಯಕ್ರಮಗಳನ್ನು ರೂಪಿಸುವಂತೆ ಪ್ರೇರೇಪಿಸಿದ ಮಹಾನ್ ವ್ಯಕ್ತಿ ಎಗ್ಲಾಂಟೈನ್ ಜೆಬ್. ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕನ್ನಡದಲ್ಲಿ ಈಕೆಯ ಬಗ್ಗೆ ಮಾಹಿತಿಗಳು ತೀರಾ ಎಂದರೆ ತೀರಾ ಕಡಿಮೆ. ಮಕ್ಕಳ ಹಕ್ಕಿಗಾಗಿ ಹೋರಾಡುತ್ತಿರುವ ಎನ್. ವಿ. ವಾಸುದೇವ ಶರ್ಮಾ ಅವರು ಈ ಕೃತಿಯ ಮೂಲಕ ಆಕೆಯನ್ನು ಮಾತ್ರವಲ್ಲ, ಮಕ್ಕಳ ಹಕ್ಕಿನ ಹೋರಾಟದ ವಿವಿಧ ನೆಲೆಗಳನ್ನೂ ಈ ಕೃತಿಯ ಮೂಲಕ ಪರಿಚಯಿಸಿದ್ದಾರೆ. ತಲೆಬರಹಕ್ಕೆ ಪೂರಕವಾಗಿ ಎಗ್ಲಾಂಟೈನ್ ಜೆಬ್ ಅವರ ಬದುಕು, ಹೋರಾಟಗಳನ್ನು ಲೇಖಕರು ಕಥನ ರೂಪದಲ್ಲೇ ನಿರೂಪಿಸಿದ್ದಾರೆ. ಪ್ರತಿ ಅಧ್ಯಾಯ ಕೂಡ, ಮಕ್ಕಳು, ವಿದ್ಯಾರ್ಥಿಗಳು, ಹಿರಿಯರು ಎಲ್ಲರನ್ನೂ ಓದಿಸಿಕೊಂಡು ಹೋಗುವಷ್ಟು ಸರಳವಾದ ಕಥನ ಗುಣವನ್ನು ಹೊಂದಿದೆ. ಇಲ್ಲಿ ನೇರವಾಗಿ ಜೆಬ್ ಅವರನ್ನು ಪರಿಚಯಿಸದೇ, ಆಕೆಯ ಹೋರಾಟದ ಆರಂಭದ ಘಟನೆಯನ್ನು ಇಟ್ಟುಕೊಂಡು ಆ ಪಾತ್ರವನ್ನು ಹಂತ ಹಂತವಾಗಿ ಬೆಳೆಸುತ್ತಾ ಹೋಗುತ್ತಾರೆ. ಮಕ್ಕಳ ಬದುಕು ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿ ಆಕೆ ವಿಸ್ತಾರಗೊಳ್ಳುತ್ತಾ ಅಂತಿಮವಾಗಿ ಎಗ್ಲಾಂಟೈನ್ ಜೆಬ್‌ಳ ಪರಂಪರೆ ಹೇಗೆ ವಿಶ್ವಾದ್ಯಂತ ರೂಪುಗೊಳ್ಳುತ್ತಾ ಹೋಗುತ್ತದೆ ಎನ್ನುವುದೇ ಒಂದು ರೋಚಕ ಕತೆ. ಮಕ್ಕಳ ಹಕ್ಕಿನ ಈ ಯುಗದಲ್ಲಿ ಜೆಬ್‌ಳನ್ನು ಮರೆತರೆ, ನಮ್ಮ ಹೋರಾಟ ಬುನಾದಿಯಿಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ಈ ಕೃತಿ ವರ್ತಮಾನದ ಮಹತ್ವದ ಕೃತಿಯಾಗಿ ಗುರುತಿಸಲ್ಪಡುತ್ತದೆ. ‘ಎಗ್ಲಾಂಟೈನ್ ಜೆಬ್ ಮೊದಲ ಬಾರಿಗೆ, ಮಕ್ಕಳ ಬಗ್ಗೆ ಜಗತ್ತಿನ ಸಂವೇದನೆಯನ್ನು ಜಾಗೃತಗೊಳಿಸಿ, ನಾವು ಮೃಗಗಳಾಗಿಯೇ ಕೊನೆಗೊಳ್ಳುವುದನ್ನು ತಪ್ಪಿಸಿದ ಹೆಣ್ಣು, ಕಣ್ಣು. ಮನುಷ್ಯ ಆಗಲು ಬಯಸುವ ಪ್ರತೀ ಜೀವಿಯೂ ಓದಲೇ ಬೇಕಾದ ಮಾನವ ಗಾಥೆ’ ಎನ್ನುವ ಬೆನ್ನುಡಿಯ ಸಾಲು ಅರ್ಥಪೂರ್ಣವಾಗಿದೆ.

ಬಹುರೂಪಿ ಪ್ರಕಾಶ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 160. ಮುಖಬೆಲೆ 200 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)