ಮಾದರಿ ಜಿಲ್ಲೆಯಾಗಿ ಶಿವಮೊಗ್ಗ ಅಭಿವೃದ್ಧಿ: ಮುಖ್ಯಮಂತ್ರಿ ಯಡಿಯೂರಪ್ಪ
ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
ಶಿವಮೊಗ್ಗ, ಫೆ.24: ಶಿವಮೊಗ್ಗದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಪೂರಕ ವಾತಾವರಣ ನಿರ್ಮಿಸುವ ಮೂಲಕ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅವರು ಸೋಮವಾರ ಶಿವಮೊಗ್ಗ ಎನ್‌ಇಎಸ್ ಕಾಲೇಜು ಆವರಣದಲ್ಲಿ ಎರಡು ದಿನಗಳ ಬೃಹತ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಮೂರುವರೆ ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗಳಿಗೆ 220 ಕೋಟಿ ರೂ. ಮಂಜೂರು ಮಾಡಲಾಗಿದೆ. ಮುಂದಿನ 15 ದಿನಗಳ ಒಳಗಾಗಿ ನಿರ್ಮಾಣ ಕಾಮಗಾರಿ ಆರಂಭವಾಗಲಿದ್ದು, 8ರಿಂದ 10 ತಿಂಗಳ ಒಳಗಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ವಿಮಾನ ನಿಲ್ದಾಣದಿಂದಾಗಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಆರಂಭವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.
ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಉತ್ತೇಜನ ನೀಡಲಾಗುತ್ತಿದೆ. ಬೇರೆ ಕೇಂದ್ರಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಜಮೀನು, ಹಣಕಾಸು ನೆರವು ಸೇರಿದಂತೆ ಎಲ್ಲಾ ಉತ್ತೇಜನಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸುವ ಕುರಿತಾಗಿ ಈಗಾಗಲೇ 42 ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದೇನೆ. ಕೃಷಿ ಮತ್ತು ಕೈಗಾರಿಕೆ ಸರಿ ಸಮಾನವಾಗಿ ಬೆಳೆಯದೆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ಎರಡೂ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸರ್ಕಾರ ಬ್ಯಾಂಕ್‌ಗಳಿಂದ ಹಣಕಾಸು ನೆರವು, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಸರಳೀಕೃತ ಪರವಾನಿಗೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಿದೆ. ಇತರರಿಗೂ ಉದ್ಯೋಗ ಕಲ್ಪಿಸಲು ಸಾಧ್ಯವಾಗುವಂತೆ ಯುವ ಜನತೆ ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕು ಎಂದು ಹೇಳಿದರು.
ನಿರಂತರ ಉದ್ಯೋಗ ಮೇಳ ಆಯೋಜನೆ: 2009ರಲ್ಲಿ ರಾಜ್ಯದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಯುವ ಜನರಿಗೆ ಉದ್ಯೋಗ ಕಲ್ಪಿಸುವ ಕಾರ್ಯಕ್ರಮ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸಲಾಗುವುದು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ 150ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುತ್ತಿದ್ದು, ಸ್ಥಳದಲ್ಲಿಯೇ ಉದ್ಯೋಗ ಪಡೆದುಕೊಳ್ಳುವ ಉತ್ತಮ ಅವಕಾಶವಾಗಿದೆ. ಜಿಲ್ಲೆಯಲ್ಲಿ 45 ಪರೀಕ್ಷಾ ಪೂರ್ವ ತರಬೇತಿ ಆಯೋಜಿಸಲಾಗಿದ್ದು, 2651 ಮಂದಿ ಪ್ರಯೋಜನ ಪಡೆದಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ನಡೆದ ಉದ್ಯೋಗ ಮೇಳಗಳಲ್ಲಿ ಒಟ್ಟು 11500 ಮಂದಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗಿದೆ. ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ 3609 ಮಂದಿಗೆ ಪೂರ್ಣ ತರಬೇತಿ ನೀಡಲಾಗಿದ್ದು, 2600 ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಉದ್ಯಮಗಳನ್ನು ಆರಂಭಿಸುವ ಪ. ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಶೇ.4ರ ಬಡ್ಡಿದರದಲ್ಲಿ 10 ಕೋಟಿ ರೂ. ವರೆಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಅರಗ ಜ್ಞಾನೇಂದ್ರ, ಆಯನೂರು ಮಂಜುನಾಥ, ರುದ್ರೇಗೌಡ, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮತ್ತಿತರರು ಉಪಸ್ಥಿತರಿದ್ದರು.