ಮಾನವಹಕ್ಕುಗಳನ್ನು ಕಸಿಯುವ ‘ಅಸಾಮಾನ್ಯ ಕಾಯ್ದೆಗಳು
ಈ ಕಾಯ್ದೆಗಳು ದುರ್ಬಳಕೆಯಾಗುತ್ತಿರುವುದಷ್ಟೇ ಸಮಸ್ಯೆಯಲ್ಲ. ಅವುಗಳ ನಿರೂಪಣೆಯೇ ಸಮಸ್ಯಾತ್ಮಕವಾಗಿದೆ. ಜನವಿರೋಧಿಯಾಗಿರುವ ಮತ್ತು ಯಾವುದೇ ರೀತಿಯ ಭಿನ್ನಮತವನ್ನು ಹತ್ತಿಕ್ಕಲೆಂದೇ ಇವುಗಳನ್ನು ರಚಿಸಲಾಗಿದೆ. ಇವುಗಳನ್ನು ಸರಿಪಡಿಸಲು ಚಿಕ್ಕಪುಟ್ಟ ತಿದ್ದುಪಡಿ ಮಾಡುವುದರಿಂದ ಯಾವುದೇ ಪ್ರಯೋಜನವಾಗಲಾರದು. ಯಾರಿಗಾದರೂ ಅವುಗಳ ದುರ್ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದಿದ್ದಲ್ಲಿ, ಕಾನೂನಿನ ಹೊತ್ತಿಗೆಗಳಿಂದ ಅವುಗಳನ್ನು ಅಳಿಸಿಹಾಕುವುದಕ್ಕಿಂತ ಕಡಿಮೆಯೇನನ್ನೂ ಮಾಡಲು ಸಾಧ್ಯವಿಲ್ಲ.
ದೇಶದ್ರೋಹ, ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ), ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಕಾನೂನುಗಳಡಿಯಲ್ಲಿ ಇತ್ತೀಚೆಗೆ ಹಲವಾರು ರಾಜಕೀಯ ಧುರೀಣರು ಹಾಗೂ ಕಾರ್ಯಕರ್ತರನ್ನು ಬಂಧನದಲ್ಲಿರಿಸುವುದು ಅಥವಾ ದೀರ್ಘಸಮಯದವರೆಗೆ ವಶದಲ್ಲಿರಿಸಿಕೊಂಡ ಘಟನೆಗಳು ಈ ಅಸಾಮಾನ್ಯ ಕಾನೂನುಗಳು ಮತ್ತೊಮ್ಮೆ ಚರ್ಚೆಯ ಕೇಂದ್ರ ಬಿಂದುಗಳಾಗಿವೆ.
ಈ ಕಾನೂನುಗಳಡಿಯಲ್ಲಿ ಆರೋಪ ದಾಖಲಿಸಲ್ಪಟ್ಟವರಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಅಸ್ಸಾಮಿನ ರೈತ ನಾಯಕ ಅಖಿಲ್ ಗೊಗೊಯ್, ಜವಾಹರಲಾಲ್ ನೆಹರೂ ವಿವಿಯ ಸಂಶೋಧನಾ ವಿದ್ವಾಂಸ ಹಾಗೂ ವಿದ್ಯಾರ್ಥಿ ಹೋರಾಟಗಾರ ಶರ್ಜಿಲ್ ಇಮಾಮ್, ವೈದ್ಯ ಹಾಗೂ ಹೋರಾಟಗಾರ ಡಾ.ಕಫೀಲ್ ಖಾನ್, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಮತ್ತು ರಾಜಕೀಯ ಪ್ರವೇಶಿಸಿರುವ ಮಾಜಿ ಐಎಎಸ್ ಟಾಪರ್ ಶಾ ಫೈಸಲ್ ಗಮನಾರ್ಹರಾಗಿದ್ದಾರೆ.
ಕರ್ನಾಟಕದ ಬೀದರ್ ಜಿಲ್ಲೆಯ ಮುಸ್ಲಿಮ್ ಆಡಳಿತದ ಶಾಲೆಯ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿರುವುದು ಈ ಪಟ್ಟಿಯಲ್ಲಿರುವ ಅತ್ಯಂತ ಅಚ್ಚರಿಕರ ಪ್ರಕರಣಗಳಲ್ಲೊಂದಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಟ್ಟದಾಗಿ ಬಿಂಬಿಸಲಾಗಿತ್ತೆನ್ನಲಾದ ನಾಟಕವನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಿದ್ದರೆಂಬ ಆರೋಪದಲ್ಲಿ ಜನವರಿ 26ರಂದು ಬೀದರ್ ಪೊಲೀಸರು ಶಾಹೀನ್ ಶಾಲೆಯ ಆಡಳಿತ ಮಂಡಳಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.
ಜನವರಿ 20ರಂದು ಶಾಹೀನ್ ಶಾಲೆಯ ಪ್ರಾಂಶುಪಾಲ ಹಾಗೂ ನಾಟಕದಲ್ಲಿ ಮೋದಿಯನ್ನು ಅಪಮಾನಿಸುವ ಮಾತುಗಳನ್ನು ಆಡಿದ್ದಳೆನ್ನಲಾದ ವಿದ್ಯಾರ್ಥಿನಿಯ ತಾಯಿಯನ್ನು ಪೊಲೀಸರು ಬಂಧಿಸಿದ್ದರು. ಸುಮಾರು ಎರಡು ವಾರಗಳ ಕಾಲ ಜೈಲಿನಲ್ಲಿ ಕಳೆದ ಅವರಿಗೆ ಇತ್ತೀಚೆಗೆ ಸ್ಥಳೀಯ ನ್ಯಾಯಾಲಯವೊಂದು 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಎರಡು ಮುಚ್ಚಳಿಕೆಗಳನ್ನು ಪಡೆದುಕೊಂಡು ಜಾಮೀನು ಬಿಡುಗಡೆ ನೀಡಿತ್ತು. ತನಿಖೆಗೆ ಸಹಕರಿಸುವಂತೆ ಮತ್ತು ಕರೆದಾಗಲೆಲ್ಲಾ ತನಿಖಾಧಿಕಾರಿಯವರ ಮುಂದೆ ಹಾಜರಾಗುವಂತೆ ಸೂಚಿಸಿತ್ತು.
ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ವಿರುದ್ಧ ದಾಖಲಿಸಲಾದ ಪ್ರಕರಣಗಳು ಕೂಡಾ ಅಪರೂಪದ್ದೇನಲ್ಲ. ಪ್ರತ್ಯೇಕವಾದಿಗಳು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಹೊರತಾಗಿಯೂ ಉಮರ್ ಅಬ್ದುಲ್ಲಾ ಅವರು ದೊಡ್ಡ ಸಂಖ್ಯೆಯಲ್ಲಿ ಮತ ಹಾಕುವಂತೆ ಮತದಾರರ ಮನವೊಲಿಸುವ ಸಾಮರ್ಥ್ಯವಿರುವ ಪ್ರಭಾವಶಾಲಿ ನಾಯಕರಾಗಿರುವುದರಿಂದ ಮುಂಜಾಗರೂಕತೆಯ ಕ್ರಮವಾಗಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರ ದಸ್ತಾವೇಜು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಮೆಹಬೂಬ ಮುಫ್ತಿ ಅವರು ಅಪಾಯಕಾರಿ ಹಾಗೂ ಕಪಟ, ಕುತಂತ್ರದ ಹಾಗೂ ಆಕ್ರಮಣಕಾರಿತನದ ವ್ಯಕ್ತಿತ್ವವನ್ನು ಹೊಂದಿದವರೆಂದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸರಕಾರಿ ವಿರೋಧಿ ಪೋಸ್ಟ್ ಗಳನ್ನು ಮಾಡಿದ್ದಕ್ಕಾಗಿ ಮತ್ತು ಭಯೋತ್ಪಾದನಾ ನಿಧಿ ಸಂಗ್ರಹ ಆರೋಪದಲ್ಲಿ ಆರೋಪಿಯಾಗಿರುವ ಮಾಜಿ ಶಾಸಕ ಎಂಜಿನಿಯರ್ ಶೇಖ್ ರಶೀದ್ ಜೊತೆ ಕೈಜೋಡಿಸಿದ ಆರೋಪದಲ್ಲಿ ಫೈಸಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ
ಇವರಂತೆ ಕಾಶ್ಮೀರದ ಹಲವಾರು ನಾಯಕರ ವಿರುದ್ಧವೂ ವಿಚಿತ್ರ ಕಾರಣಗಳಿಗಾಗಿ ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. ಗಮನಾರ್ಹವೆಂದರೆ, ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಇಂತಹ ಕಾರಣಗಳಿಗಾಗಿ ಪ್ರಕರಣ ದಾಖಲಿಸಿರುವುದು ಇದು ಮೊದಲೇನಲ್ಲ. ಕುತೂಹಲಕರವೆಂದರೆ ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಇಬ್ಬರೂ ತಮ್ಮ ಅಧಿಕಾರಾವಧಿಯಲ್ಲಿ ರಾಜಕೀಯ ಎದುರಾಳಿಗಳ ವಿರುದ್ಧ ಗುರಿಯಿರಿಸಲು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ತೀವ್ರವಾದವನ್ನು ಹತ್ತಿಕ್ಕುವ ನೆಪದಲ್ಲಿ ಜನರ ಧ್ವನಿಯನ್ನು ಹೊಸಕಿ ಹಾಕಲು ಸಾರ್ವಜನಿಕ ಭದ್ರತಾ ಕಾಯ್ದೆಯನ್ನು ಬಳಸಿಕೊಂಡಿದ್ದರು.
ಈ ಪ್ರಕರಣಗಳು, ಹಲವಾರು ವರ್ಷಗಳಿಂದ ಈ ಕಾನೂನುಗಳ ಬಳಕೆ ಹಾಗೂ ದುರ್ಬಳಕೆ ಕುರಿತಂತೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕಾನೂನುಗಳು ವ್ಯಾಪಕವಾಗಿ ದುರ್ಬಳಕೆಗೊಳಗಾಗುತ್ತಿದ್ದರೂ, ಈ ತನಕ ಆ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಕಾಯ್ದೆಗಳು ದುರ್ಬಳಕೆಯಾಗುತ್ತಿರುವುದಷ್ಟೇ ಸಮಸ್ಯೆಯಲ್ಲ. ಅವುಗಳ ನಿರೂಪಣೆಯೇ ಸಮಸ್ಯಾತ್ಮಕವಾಗಿದೆ. ಜನವಿರೋಧಿಯಾಗಿರುವ ಮತ್ತು ಯಾವುದೇ ರೀತಿಯ ಭಿನ್ನಮತವನ್ನು ಹತ್ತಿಕ್ಕಲೆಂದೇ ಇವುಗಳನ್ನು ರಚಿಸಲಾಗಿದೆ. ಇವುಗಳನ್ನು ಸರಿಪಡಿಸಲು ಚಿಕ್ಕಪುಟ್ಟ ತಿದ್ದುಪಡಿ ಮಾಡುವುದರಿಂದ ಯಾವುದೇ ಪ್ರಯೋಜನವಾಗಲಾರದು. ಯಾರಿಗಾದರೂ ಅವುಗಳ ದುರ್ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದಿದ್ದಲ್ಲಿ, ಕಾನೂನಿನ ಹೊತ್ತಿಗೆಗಳಿಂದ ಅವುಗಳನ್ನು ಅಳಿಸಿಹಾಕುವುದಕ್ಕಿಂತ ಕಡಿಮೆಯೇನನ್ನೂ ಮಾಡಲು ಸಾಧ್ಯವಿಲ್ಲ.
ಉದಾಹರಣೆಗೆ ಮಹಾತ್ಮಾ ಗಾಂಧೀಜಿಯವರು ದೇಶದ್ರೋಹದ ವಿರುದ್ಧ ಕಾನೂನನ್ನು ‘‘ಪೌರರ ಸ್ವಾತಂತ್ರವನ್ನು ಹತ್ತಿಕ್ಕುವ ಉದ್ದೇಶದಿಂದ ರೂಪಿಸಲಾದ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳ (ಐಪಿಸಿ) ಪೈಕಿ ಯುವರಾಜನಾಗಿದೆ’’ ಎಂದು ಬಣ್ಣಿಸಿದ್ದರು. ದೇಶದ್ರೋಹ ಕಾನೂನನ್ನು ಮೂಲತಃ ವಸಾಹತುಶಾಹಿ ಯುಗದಲ್ಲಿ ಜನರ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಉದ್ದೇಶದಿಂದ ರೂಪಿಸಲಾಗಿತ್ತು ಮತ್ತು ಈಗಿನ ಪ್ರಜಾಪ್ರಭುತ್ವವಾದಿ ಭಾರತದಲ್ಲೂ ಸಹ ರಾಜಕೀಯ ಆಡಳಿತಗಳು ಅದೇ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿವೆ. ದೇಶದ್ರೋಹಿ ಕಾಯ್ದೆಯನ್ನು ಕಾನೂನಿನ ಪುಸ್ತಕಗಳಿಂದ ತೆಗೆದುಹಾಕಬೇಕೆಂಬ ನಿರಂತರ ಬೇಡಿಕೆ ಹಾಗೂ ಹಲವು ವರ್ಷಗಳಿಂದ ಅವು ದುರ್ಬಳಕೆಯಾಗುತ್ತಿರುವ ಬಗ್ಗೆ ಸಾಕಷ್ಟು ಪುರಾವೆಗಳು ಲಭ್ಯವಿದ್ದರೂ ಸರಕಾರವು ಅದನ್ನು ಮುಟ್ಟುವ ಗೋಜಿಗೆ ಹೋಗಿಲ್ಲ.
ಅತ್ಯಂತ ದುರದೃಷ್ಟಕರವೆಂದರೆ, ಸುಪ್ರೀಂಕೋರ್ಟ್ ಸೇರಿದಂತೆ ನ್ಯಾಯಾಲಯಗಳು ಕೂಡಾ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತಿಸಲು ವಿಫಲವಾಗಿವೆ. ನ್ಯಾಯವಾದಿ ಸಿನ್ಹಾ ಅವರು ತನ್ನ ಪುಸ್ತಕ ‘ದಿ ಗ್ರೇಟ್ ರಿಪ್ರೆಶನ್: ದಿ ಸ್ಟೋರಿ ಆಫ್ ಸೆಡಿಶನ್ ಇನ್ ಇಂಡಿಯಾ’ ಈ ವಿಷಯದ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ. ಅವರ ಪ್ರಕಾರ ಕಾಮನ್ ಕಾಸ್ ಎಂಬ ಎನ್‌ಜಿಒ ಹಾಗೂ ಕುಡಂಕುಳಂ ಅಣುವಿದ್ಯುತ್ ಸ್ಥಾವರ ವಿರೋಧಿ ಹೋರಾಟಗಾರ ಎಸ್.ಪಿ. ಉದಯಕುಮಾರ್ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ದೇಶದ್ರೋಹ ಪ್ರಕರಣದ ನಿರ್ದಿಷ್ಟವಾದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕೆಂದು ಕೋರಿದ್ದರು. ಆ ಸಂದರ್ಭದಲ್ಲಿ ಅದನ್ನು ಸರಿಪಡಿಸುವ ಸದಾವಕಾಶವನ್ನು ನ್ಯಾಯಾಲಯ ಕಳೆದುಕೊಂಡಿತ್ತು. ದೇಶದ್ರೋಹದ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಮೂರ್ತಿ ಕೇದಾರ್‌ನಾಥ್ ನೇತೃತ್ವದ ನ್ಯಾಯಪೀಠವು ದೇಶದ್ರೋಹ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಯ ಬಂಧನದ ಪೂರ್ವದ ಅವಶ್ಯಕತೆಗಳು ಹಾಗೂ ಅನುಸರಣಾ ಕ್ರಮಗಳ ಬಗ್ಗೆ ಯಾವುದೇ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸುವುದಿಲ್ಲ. ದೇಶದ್ರೋಹದ ಪ್ರಕರಣದಲ್ಲಿ ಬಂಧಿತನಾದ ವ್ಯಕ್ತಿಗೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗುವ ಮೊದಲು ಅಥವಾ ಪ್ರಕರಣ ಮುಚ್ಚುಗಡೆಗೊಳಿಸುವ ಮುನ್ನ ಆತನಿಗೆ ಜಾಮೀನು ದೊರೆೆಯಲು ಸಾಧ್ಯವಾಗಬೇಕು, ಕಲಾಪಗಳಲ್ಲಿ ಪಾಲ್ಗೊಳ್ಳಲು, ತನಿಖೆಯ ವೇಳೆ ಉಪಸ್ಥಿತರಿರಲು ಅವಕಾಶವಿರಬೇಕೆಂದು ಎಸ್.ಪಿ. ಉದಯ್ ಕುಮಾರ್ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಹಾಗೂ ಸಮುದಾಯಕ್ಕೆ ಅಗತ್ಯವಾದ ಪೂರೈಕೆಗಳು ಹಾಗೂ ಸೇವೆಗಳ ನಿರ್ದಿಷ್ಟವಾದ ಆಡಳಿತದ ಉದ್ದೇಶಗಳಿಗೆ ವಿರುದ್ಧವಾಗಿ ವರ್ತಿಸದಂತೆ ವ್ಯಕ್ತಿಗಳನ್ನು ತಡೆಯುವುದೇ ಎನ್‌ಎಸ್‌ಎನ ಉದ್ದೇಶವಾಗಿದೆ. ಇದರಿಂದಾಗಿ ಸರಕಾರ ಹಾಗೂ ಅದರ ಏಜೆನ್ಸಿಗಳಿಗೆ ವ್ಯಕ್ತಿಗಳನ್ನು ಯಾವುದೇ ಆರೋಪಗಳನ್ನು ಹೊರಿಸದೆ, ತನಿಖೆ ನಡೆಸದೆ ಹಾಗೂ ಆರೋಪಿಯು ಸಾಮಾನ್ಯವಾಗಿ ಕಾನೂನಿನ ಪ್ರಭುತ್ವದಡಿ ಪಡೆಯುವಂತಹ ಇತರ ಹಕ್ಕುಗಳನ್ನು ನೀಡದೆ, ಆತನನ್ನು ಒಂದು ವರ್ಷದವರೆಗೂ ಜೈಲಿನಲ್ಲಿರಿಸಬಹುದಾಗಿದೆ. ಇದರಿಂದಾಗಿ ಈ ಕಾನೂನನ್ನು ‘ಯಾವುದೇ ವಕೀಲರಿಲ್ಲದ, ಮನವಿ ಸಲ್ಲಿಸಲಾಗದ, ಯಾವುದೇ ವಾದಕ್ಕೆ ಅವಕಾಶವಿಲ್ಲದ ಕಾನೂನು’ ಎಂದು ಹೇಳಿರುವುದರಲ್ಲಿ ಅಚ್ಚರಿಯೇನಿಲ್ಲ.
ಕಫೀಲ್ ಖಾನ್‌ಗೆ ಈಗ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆಯಾದರೂ, ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿತ್ತು. ಇದರಿಂದಾಗಿ ಉತ್ತರ ಪ್ರದೇಶ ಸರಕಾರವು ಯಾವಾಗ ಬೇಕಾದರೂ ಅವರನ್ನು ಕಸ್ಟಡಿಯಲ್ಲಿ ಇರಿಸಬಹುದಾಗಿದೆ. ಎರಡು ವರ್ಷಗಳ ಹಿಂದೆ ಭೀಮ್ ಆರ್ಮಿಯ ನಾಯಕ ಚಂದ್ರಶೇಖರ ಆಝಾದ್‌ರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿತ್ತು. ಯಾವುದೇ ಅಪರಾಧ ಎಸಗದಿದ್ದರೂ ಅವರು ಈ ಕಾಯ್ದೆಯಿಂದಾಗಿ 2016ರ ಮಾರ್ಚ್ ಹಾಗೂ 2017ರ ಆಗಸ್ಟ್ ನಡುವೆ ಜೈಲಿನಲ್ಲಿರಬೇಕಾಯಿತು.
ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ‘ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್’, ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು ಕಾನೂನುಬಾಹಿರ ಕಾನೂನು ಎಂದೇ ಬಣ್ಣಿಸಿತ್ತು. ಎನ್‌ಎಸ್‌ಎನಂತೆ ಸರಕಾರವು ಈ ಕಾಯ್ದೆಯಡಿಯೂ ಕೂಡಾ ಯಾವುದೇ ವ್ಯಕ್ತಿಯನ್ನು ಆರೋಪ ಹೊರಿಸದೆಯೇ ದೀರ್ಘಾವಧಿಯವರೆಗೆ ಬಂಧನದಲ್ಲಿರಿಸಬಹುದಾಗಿದೆ. ಆರ್‌ಟಿಐ ಅರ್ಜಿಗಳ ಮೂಲಕ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ಗೆ ದೊರೆತಿರುವ ಮಾಹಿತಿಯ ಪ್ರಕಾರ, 2016ರ ಮಾರ್ಚ್ ಹಾಗೂ 2017ರ ಆಗಸ್ಟ್ ನಡುವೆ ಸುಮಾರು 1 ಸಾವಿರ ಮಂದಿಯನ್ನು ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಬಂಧನದಲ್ಲಿರಿಸಲಾಗಿದೆ.
2014ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಗೆ ತಿದ್ದುಪಡಿ ತರಲಾಯಿತು ಹಾಗೂ ಭಯೋತ್ಪಾದನೆ ತಡೆ ಕಾಯ್ದೆಯ (ಪೋಟಾ)ಹೆಚ್ಚಿನ ನಿಯಮಾವಳಿಗಳನ್ನು ಅದರೊಳಗೆ ಅಳವಡಿಸಿಕೊಳ್ಳಲಾಯಿತು. 2008ರಲ್ಲಿ ಈ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ತರಲಾಯಿತು ಹಾಗೂ ಅದಕ್ಕೆ ತೀರಾ ಇತ್ತೀಚಿನ ತಿದ್ದುಪಡಿಯನ್ನು 2019ರಲ್ಲಿ ತರಲಾಯಿತು. ಪೋಟಾ ಕಾಯ್ದೆಯನ್ನು ರಾಜಕೀಯ ಎದುರಾಳಿಗಳನ್ನು ಹಾಗೂ ಭಿನ್ನಮತ ವ್ಯಕ್ತಪಡಿಸುವವರ ವಿರುದ್ಧ ಗುರಿಯಿರಿಸಲು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದ್ದುದರಿಂದ ಅದನ್ನು ರದ್ದುಪಡಿಸಲಾಗಿತ್ತು. ಆದಾಗ್ಯೂ 2019ರ ಯುಎಪಿಎ ಕಾಯ್ದೆಯ ಪ್ರಸಕ್ತ ರೂಪವು (ಪೊಲೀಸರ ಮುಂದೆ ನೀಡಿದ ತಪ್ಪೊಪ್ಪಿಗೆಯನ್ನು ನ್ಯಾಯಾಲಯದ ಪುರಾವೆಯೆಂದು ಪರಿಗಣಿಸುವ ಅಂಶವನ್ನು ಕೈಬಿಟ್ಟಿರುವುದನ್ನು ಹೊರತುಪಡಿಸಿದರೆ) ಪೋಟಾದ ಸುಧಾರಿತ ಆವೃತ್ತಿಯಲ್ಲದೆ ಬೇರೇನೂ ಅಲ್ಲ. ನೂತನ ತಿದ್ದುಪಡಿಯ ಬಳಿಕ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಪರಿಗಣಿಸಬೇಕು ಹಾಗೂ ನ್ಯಾಯಾಲಯದ ಮುಂದೆ ಅವರ ಅಪರಾಧ ಸಾಬೀತಾಗುವ ತನಕವೂ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಬಹುದಾಗಿದೆ.
ಈ ರೀತಿಯ ಕಾನೂನುಗಳು ದುರ್ಬಳಕೆಗೆ ತುತ್ತಾಗುತ್ತವೆ ಹಾಗೂ ನಾವು ಕಾಣುತ್ತಿರುವಂತೆ ತಮ್ಮ ಸ್ಥಾಪಿತ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಆಡಳಿತಾರೂಢ ಪಕ್ಷಗಳಿಗೆ ಇದರಿಂದ ಅವಕಾಶ ದೊರೆಯುತ್ತದೆ.
ಇಲ್ಲಿ ಗಮನಾರ್ಹವಾದುದೇನೆಂದರೆ ಇಂತಹ ಬಹುತೇಕ ಪ್ರಕರಣಗಳಲ್ಲಿ ಆರೋಪಿಯು ನ್ಯಾಯಾಲಯದಲ್ಲಿ ದೋಷಮುಕ್ತಗೊಳ್ಳುತ್ತಾನೆ. ಆದರೆ ದೀರ್ಘ ಸಮಯದವರೆಗೆ ಆರೋಪಿಯು ಆಡಳಿತದಿಂದ ಬಂಧನ ಹಾಗೂ ವಿಚಾರಣೆಗೆ ಒಳಗಾಗಿರುವುರಿಂದ ದೋಷಮುಕ್ತಗೊಂಡ ಅಥವಾ ಬಿಡುಗಡೆಯಾದ ಸಮಯಕ್ಕೆ ಆತನ ಬದುಕು ಹಾಗೂ ವೃತ್ತಿ ಸಂಪೂರ್ಣವಾಗಿ ಭಗ್ನಗೊಂಡಿರುತ್ತದೆ.
ಈ ಕಾನೂನಿಂದ ಆಡಳಿತದ ಇನ್ನೊಂದು ಉದ್ದೇಶ ಕೂಡಾ ಈಡೇರುತ್ತದೆ. ಈ ಕಾಯ್ದೆಯು ಇತರ ಹೋರಾಟಗಾರರು ಹಾಗೂ ಸಾಮಾನ್ಯ ಜನರನ್ನು ಕೂಡಾ ಭಯಭೀತಗೊಳಿಸುವಂತಹ ಪರಿಣಾಮವನ್ನುಂಟು ಮಾಡುತ್ತದೆ. ಇತ್ತೀಚೆಗೆ ಅಲಿಗಡ ಮುಸ್ಲಿಮ್ ವಿವಿ ವಿದ್ಯಾರ್ಥಿ ಶರ್ಜಿಲ್ ಇಮಾಮ್ ಪರವಾಗಿ ಘೋಷಣೆಗಳನ್ನು ಕೂಗಿ, ಆತನ ಬಿಡುಗಡೆಗೆ ಆಗ್ರಹಿಸಿದ 50ಕ್ಕೂ ಅಧಿಕ ಮಂದಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿರುವುದು ಇದಕ್ಕೊಂದು ತಾಜಾ ಉದಾಹರಣೆಗಾಗಿದೆ.
ಕೃಪೆ: thewire