varthabharthi


ಸುಗ್ಗಿ

ಮಕ್ಕಳಿಗಿಲ್ಲವೇ ಬದುಕುವ ಹಕ್ಕು!

ವಾರ್ತಾ ಭಾರತಿ : 29 Feb, 2020
ಮೂಲ: ಸ್ವಗತಾ ಯಾದವರ್, ಶ್ರೇಯಾ ರಾಮನ್ - ಕನ್ನಡಕ್ಕೆ ಕಸ್ತೂರಿ

ಶಿಶು ಹುಟ್ಟಿದ ಬಳಿಕ ಹಾಲು ಕುಡಿಸುವುದರಲ್ಲಿ ಆಲಸ್ಯವಾದರೆ ಅಂತಹ ಶಿಶುಗಳ ಪ್ರಾಣಕ್ಕೆ ಅಪಾಯ ಸಂಭವಿಸುತ್ತದೆ. ತಾಯಿ ಹಾಲಿನಿಂದ ಎಷ್ಟು ಸಮಯ ದೂರವಾಗಿದ್ದರೆ ಅಷ್ಟು ಹೆಚ್ಚು ಅಪಾಯ ನವಜಾತ ಶಿಶುವಿಗೆ ಉಂಟಾಗುವ ಸಾಧ್ಯತೆ ಇದೆ ಎಂದು ಯುನಿಸೆಫ್ ವರದಿ ಎಚ್ಚರಿಸುತ್ತದೆ. ಉತ್ತರ ಪ್ರದೇಶದಲ್ಲಿ ಹುಟ್ಟಿದ ನಾಲ್ಕು ಶಿಶುಗಳಲ್ಲಿ ಒಂದಕ್ಕೆ ಮಾತ್ರವೇ ಗಂಟೆಯೊಳಗೆ ತಾಯಿ ಹಾಲು ಲಭ್ಯವಾಗುತ್ತಿದ್ದು, ರಾಜಸ್ಥಾನದಲ್ಲಿ 28.4ಶೇ. ಶಿಶುಗಳು ತಾಯಿ ಹಾಲು ಇಲ್ಲದೆ ಗಂಟೆಗೂ ಹೆಚ್ಚಾಗಿ ಕಳೆಯುತ್ತಿದ್ದಾರೆ. ಈ ಎರಡು ರಾಜ್ಯಗಳಲ್ಲೇ ಶಿಶುಗಳ ಮರಣ ಅಧಿಕ ಸಂಖ್ಯೆಯಲ್ಲಾಗುತ್ತಿದೆ.

ರಾಜಸ್ಥಾನ್, ಗುಜರಾತ್‌ಗಳಲ್ಲಿನ 6 ಸರಕಾರಿ ಆಸ್ಪತ್ರೆಗಳಲ್ಲಿ 2019 ಡಿಸೆಂಬರ್ 1ರಿಂದ 500 ಶಿಶು ಮರಣಗಳು ಸಂಭವಿಸಿವೆ ಎಂದು ಸುದ್ದಿ. ರಾಜಸ್ಥಾನ ಕೋಟಾದಲ್ಲಿನ ಜೆಕೆ ಲೋನ್ ಆಸ್ಪತ್ರೆಯಲ್ಲೇ 101 ಮಂದಿ ಶಿಶುಗಳು ಮೃತಪಟ್ಟಿವೆ. ಜೋಧ್‌ಪುರ್‌ನಲ್ಲಿನ ಉಮೈದ್, ಎಂಡಿಎಂ ಆಸ್ಪತ್ರೆಗಳಲ್ಲಿ 102, ಬಿಕನೇರ್‌ನಲ್ಲಿನ ಸರ್ದಾರ್ ಪಟೇಲ್ ಮೆಡಿಕಲ್ ಕಾಲೇಜಿನಲ್ಲಿ 124 ಶಿಶುಗಳು ಮರಣಿಸಿರುವುದು ದುರಂತ. ಗುಜರಾತ್‌ನ ರಾಜ್‌ಕೋಟ್‌ನಲ್ಲಿನ ಪಂ.ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ 111, ಅಹ್ಮದಾಬಾದ್ ಸರಕಾರಿ ಆಸ್ಪತ್ರೆಯಲ್ಲಿ 85 ಶಿಶುಗಳು ಸತ್ತು ಹೋಗಿವೆ. ವಿಸ್ವಸಂಸ್ಥೆ ವರದಿ ಪ್ರಕಾರ ದೇಶಾದ್ಯಂತ 2018ರಲ್ಲಿ 7,21,000 ಶಿಶು ಮರಣಗಳು ಸಂಭವಿಸಿದೆ ಎಂದು ಅಂದಾಜು. ಅಂದರೆ ಸರಾಸರಿ ದಿನಕ್ಕೆ 1,975 ಶಿಶುಗಳು ಸತ್ತುಹೋದವೆಂದು ಲೆಕ್ಕ. ಶಿಶುಮರಣಗಳ ಸಮಸ್ಯೆ ಒಂದು ಕೋಟಾ ಸಮಸ್ಯೆ ಅಲ್ಲ ಎಂದು ಗರ್ಭಿಣಿಯರು ಶಿಶುಗಳ ಆರೋಗ್ಯದ ಮೇಲೆ ಕೆಲಸ ಮಾಡುತ್ತಿರುವ ‘ಮಮತಾ’ ಕಾರ್ಯನಿರ್ವಾಹಕ ಡೈರೆಕ್ಟರ್, ಶಿಶುತಜ್ಞ ಸುನೀಲ್ ಮೆಹ್ರಾ ಹೇಳುತ್ತಾರೆ. ‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ್ತ ಸೌಲಭ್ಯಗಳು ಇಲ್ಲದೇ ಹೋಗಿರುವುದು, ರೋಗಿಗಳನ್ನು ತಜ್ಞರಿಗೆ ಶಿಫಾರಸು ಮಾಡುವುದರಲ್ಲಿನ ನಿಧಾನ, ಸಾರಿಗೆ ಸೌಕರ್ಯಗಳಿಲ್ಲದಂತಹ ವ್ಯವಸ್ಥಾಗತ ಸಮಸ್ಯೆಗಳೇ ಶಿಶುಮರಣಗಳಿಗೆ ಅಧಿಕವಾಗಿ ಕಾರಣಗಳಾಗುತ್ತಿವೆ’ ಎಂದು ಹೇಳಿದರು. ದೇಶಾದ್ಯಂತ ಮಕ್ಕಳು, ಶಿಶುಗಳು ಇಷ್ಟು ಅಧಿಕವಾಗಿ ಏಕೆ ಸತ್ತು ಹೋಗುತ್ತಿದ್ದಾರೋ ಅರ್ಥ ಮಾಡಿಕೊಳ್ಳುವುದಕ್ಕೆ ಡೇಟಾ ವಿಶ್ಲೇಷಣಾ ಸಂಸ್ಥೆ ಇಂಡಿಯಾ ಸ್ಪೆಂಡ್ 13 ರಾಜ್ಯಗಳಿಗೆ ಸೇರಿದ ಆರೋಗ್ಯ ಡೇಟಾ ವಿಶ್ಲೇಷಿಸಿತು. ಬಿಹಾರ್, ಜಾರ್ಖಂಡ್, ಉತ್ತರಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಒಡಿಶಾ, ಛತ್ತೀಸ್‌ಗಡ, ಅಸ್ಸಾಮಿನಂತಹ ಬಡರಾಜ್ಯಗಳೊಂದಿಗೆ ಗುಜರಾತ್, ಮಹಾರಾಷ್ಟ್ರದಂತಹ ಶೀಮಂತ ರಾಜ್ಯಗಳ ಆಸ್ಪತ್ರೆಗಳಲ್ಲಿ ಕೂಡಾ ಶಿಶು ಮರಣಗಳು ಸಂಭವಿಸುತ್ತಿರುವ ಸುದ್ದಿಗಳು ಬಂದಿವೆ. ಇವುಗಳೊಂದಿಗೆ ಹೋಲಿಸಿದರೆ ಗೋವಾ, ಕೇರಳ, ತಮಿಳುನಾಡುಗಳಲ್ಲಿ ಶಿಶುಮರಣಗಳು ಕಡಿಮೆ ದಾಖಲಾಗಿವೆ. ಮೂಲಭೂತ ಆರೋಗ್ಯ ಸೌಕರ್ಯಗಳು, ಶಿಶು ಸಂರಕ್ಷಣೆ, ಗರ್ಭಿಣಿಯರ ಆರೋಗ್ಯ ಪ್ರಸವಾನಂತರ ಸಂರಕ್ಷಣೆಯಂಥ ಅಂಶಗಳಲ್ಲಿ ಕಳಪೆ ಗುಣಮಟ್ಟ ಇತ್ಯಾದಿಗಳು ಶಿಶುಗಳ ಪ್ರಾಣ ಹರಿಸುತ್ತಿವೆ ಎಂದು ವಿಶ್ಲೇಷಣೆ ಹೇಳುತ್ತದೆ. ಪೌಷ್ಟಿಕಾಹಾರ ಲೋಪ, ಕೊಳಕು, ರೋಗ ನಿರೋಧಕ ಶಕ್ತಿ ರಾಹಿತ್ಯದಂತಹ ವೈದ್ಯಕೀಯ ಕಾರಣಗಳೇ ಶಿಶುಮರಣಗಳನ್ನುಂಟು ಮಾಡುತ್ತಿವೆ ಎಂದು ದಿಲ್ಲಿಯಲ್ಲಿನ ಬಿ.ಆರ್. ಅಂಬೇಡ್ಕರ್ ಯೂನಿವರ್ಸಿಟಿ ಅಸಿಸ್ಟೆಂಟ್ ಪ್ರೊಫೆಸರ್ ದೀಪಾ ಸಿನ್ಹಾ ಹೇಳುತ್ತಾರೆ.

ನ್ಯೂಮೋನಿಯಾದಂತಹ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಮಾಡಬೇಕಾದ ಸೋಂಕುಗಳಿಂದಲೇ ಶಿಶುಮರಣಗಳು ಅಧಿಕವಾಗಿ ಸಂಭವಿಸುತ್ತಿವೆ. ಅಂದರೆ ರೋಗ ನಿರೋಧಕ, ಪ್ರಾಥಮಿಕ ಆರೋಗ್ಯ ರಕ್ಷಣಾ ವ್ಯವಸ್ಥೆಗಳು ಕುಸಿದು ಬಿದ್ದಿವೆ ಎಂದು ಹೇಳುತ್ತಾರೆ.

ವಿಶ್ವದಲ್ಲೇ ಮರಣಗಳ ಸಂಖ್ಯೆ ಅಧಿಕ

2018ರಲ್ಲಿ ಭಾರತ ದೇಶದಲ್ಲಿ 5 ವರ್ಷಗಳ ಒಳಗಿನ 8,82,000 ಮಕ್ಕಳು ಸತ್ತು ಹೋಗಿವೆ. ಇದು ವಿಶ್ವದಲ್ಲೇ ಅತ್ಯಧಿಕ ಸಂಖ್ಯೆ. ಭಾರತದಲ್ಲಿ ಅತೀ ದೊಡ್ಡ ಶಿಶು ಜನಸಂಖ್ಯೆಯಲ್ಲಿ ಐದು ವರ್ಷದೊಳಗಿನ ಮಕ್ಕಳ ಮರಣಗಳ (1 ಸಾವಿರ ಮಂದಿ ಶಿಶುಗಳಲ್ಲಿ 37) ದಾಖಲಾಗುತ್ತಿದ್ದಾಗ್ಯೂ ವಿಶ್ವ ಸರಾಸರಿ ಶಿಶು ಮರಣಗಳ ರೇಟು (39) ಜೊತೆ ಹೋಲಿಸಿದರೆ ಕಡಿಮೆಯೇ ಇದೆ. 1990ರಲ್ಲಿ 1 ಸಾವಿರ ಮಂದಿಗೆ 126 ಮಕ್ಕಳು ಸಾಯುತ್ತಿದ್ದ ಹಂತದಿಂದ ಸರಾಸರಿ ಶಿಶು ಮರಣಗಳ ಸಂಖ್ಯೆ ಇಳಿಮುಖವಾಗಿತ್ತು.

ಮಕ್ಕಳಿಗೆ ಐದು ವರ್ಷಗಳು ಆಗುವ ಮುನ್ನವೇ ಅಧಿಕ ಮರಣಗಳು ನಮ್ಮ ದೇಶದಲ್ಲಿ ಸಂಭವಿಸತೊಡಗಿವೆ. 2017ರಲ್ಲಿ 5 ವರ್ಷ ವಯಸ್ಸಿನ ಮಕ್ಕಳಲ್ಲಿ ಸಾವಿರಕ್ಕೆ 33 ಮಕ್ಕಳು ಮೃತರಾದರು. 11 ವರ್ಷಗಳ ಹಿಂದೆ ಇದು 42ಶೇ. ಇತ್ತೆಂದು ಸರಕಾರಿ ಸ್ಯಾಂಪಲ್ ರಿಜಿಸ್ಟ್ರೇಶನ್ ತಿಳಿಸಿದೆ. ಆದರೆ ರಾಜ್ಯವಾರು ನೋಡಿದರೆ ಶಿಶುಮರಣಗಳ ವಿಷಯದಲ್ಲಿ ಭಾರೀ ವ್ಯತ್ಯಾಸಗಳನ್ನು ಗಮನಿಸಬಹುದು. 2017ರಲ್ಲಿ ನಾಗಾಲ್ಯಾಂಡ್ ಅತ್ಯಂತ ಕಡಿಮೆ 7ಶೇ., ಗೋವಾ 9ಶೇ., ಕೇರಳ 10ಶೇ. ಶಿಶುಮರಣಗಳ ಸಂಖ್ಯೆಯನ್ನು ದಾಖಲಿಸಿದ್ದರೆ, ಮಧ್ಯಪ್ರದೇಶ 47ಶೇ. ಅತ್ಯಧಿಕ ರೇಟು ದಾಖಲಿಸಿದೆ.

ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ ಅತಿಯಾದ ಸಂದಣಿ

ಐದು ವರ್ಷಗಳ ಒಳಗಿನ ಶಿಶುಗಳ ಸಾವಿನಲ್ಲಿ ಹೊಸದಾಗಿ ಹುಟ್ಟಿದ ಶಿಶುಗಳದೇ ಹೆಚ್ಚಾಗಿ ದಾಖಲಾಗುತ್ತಿದೆ. ಹೆರಿಗೆ ನಂತರ ತಾಯಿ-ಮಗು ಆರೋಗ್ಯ ರಕ್ಷಣೆಯಲ್ಲಿ ಗುಣಮಟ್ಟ ಕಲ್ಪಿಸುವುದರ ಮೂಲಕ ಇವರಲ್ಲಿ ಬಹಳಷ್ಟು ಶಿಶುಗಳನ್ನು ಕಾಪಾಡಬಹುದು. ಎಂದು ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ 2019ರ ವರದಿ ತಿಳಿಸಿದೆ. ದೇಶದಲ್ಲಿ ಸಂಸ್ಥಾಗತ ಪ್ರಸವಗಳ ಸಂಖ್ಯೆ 2005ರಲ್ಲಿ 38.7ಶೇ.ಗೆ ಹೋಲಿಸಿದರೆ 2015-16ರ ಕಾಲಕ್ಕೆ 78.9ಶೇ. ಹೆಚ್ಚಿದೆ. ಆದರೆ ಈ ಹೆರಿಗೆಗಳ ಸಂಖ್ಯೆಗೆ ತಕ್ಕಂತೆ ನವಜಾತ ಶಿಶುಗಳ ಸಂರಕ್ಷಣೆಯಲ್ಲಿ ವೌಲಿಕ ಸೌಕರ್ಯಗಳ ಸೃಷ್ಟಿ ಹೆಚ್ಚಲಿಲ್ಲ ಎಂದು ಗುಜರಾತ್‌ನ ಆನಂದ್‌ನಲ್ಲಿನ ಪ್ರಮುಖ ಸ್ವಾಮಿ ಮೆಡಿಕಲ್ ಕಾಲೇಜು ಶಿಶು ಚಿಕಿತ್ಸಾ ವಿಭಾಗದ ಪ್ರೊಫೆಸರ್ ಸೋಮಶೇಖರ್ ನಿಂಬಾಳ್ಕರ್ ತಿಳಿಸಿದರು. 28 ದಿನ ವಯಸ್ಸಿನ ನವಜಾತ ಶಿಶುಗಳಲ್ಲೇ ಅತ್ಯಧಿಕ ಸಾವುಗಳು (57.9 ಶೇ.) ಸಂಭವಿಸಿವೆ ಎಂದು ‘ದಿ ಲಾನ್ಸೆಟ್’ನಲ್ಲಿ ಪ್ರಕಟಗೊಂಡ 2019ರ ಅಧ್ಯಯನ ತೋರಿಸಿದೆ. ಕಾಂಗರೂ ಕೇರ್ ಅಂದರೆ ತಾಯಿಗೆ ಅತ್ಯಂತ ಹತ್ತಿರದಲ್ಲಿ ಶಿಶುವನ್ನು ಇಟ್ಟು ಬಿಸುಪನ್ನು ಒದಗಿಸುವುದು. ತಾಯಿ ಹಾಲು ಕುಡಿಸುವುದು, ಸೋಂಕುಗಳಿಂದ, ಉಸಿರಾಟದ ಸಮಸ್ಯೆಗಳಿಂದ, ಪ್ರಾಥಮಿಕ ಸಂರಕ್ಷಣೆ ಕಲ್ಪಿಸುವುದು, ಕಡಿಮೆ ಖರ್ಚಿನಿಂದ ಕೂಡಿದ ಪದ್ಧತಿಗಳ ಮೂಲಕ ಈ ಪುಟಾಣಿಗಳ ಮರಣಗಳನ್ನು ನಿಯಂತ್ರಿಸಬಹುದು.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ನಡಿ ನವಜಾತ ಶಿಶು ಸಂರಕ್ಷಣಾ ವ್ಯವಸ್ಥೆಗಳನ್ನು ಮಕ್ಕಳನ್ನು ಪ್ರಸವಿಸುವ ಎಲ್ಲಾ ಕೇಂದ್ರಗಳಲ್ಲಿ ಏರ್ಪಡಿಸಿದ್ದಾರೆ. ಹಾಗೆ ದೇಶಾದ್ಯಂತ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಾಥಮಿಕ ರೆಫರಲ್ ಯೂನಿಟ್‌ಗಳನ್ನು ಪ್ರತ್ಯೇಕ ನವಜಾತ ಶಿಶು ಸಂರಕ್ಷಣಾ ಯೂನಿಟ್‌ಗಳನ್ನು ಸ್ಥಾಪಿಸಿದ್ದಾರೆ. ಆದರೆ ಈ ಕೇಂದ್ರಗಳಲ್ಲಿ ಅವುಗಳ ಸಾಮರ್ಥ್ಯಕ್ಕೆ ಮೀರಿದ ರೋಗಿಗಳು ಕಿಕ್ಕಿರಿಯುತ್ತಿದ್ದಾರೆ. ಮೇಲಾಗಿ ವೈದ್ಯರ ಕೊರತೆ, ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ, ಚಿಕಿತ್ಸಾ ಸಾಮಗ್ರಿಗಳನ್ನು ಸಕಾಲದಲ್ಲಿ ರಿಪೇರಿ ಮಾಡುವ ಯಂತ್ರಾಂಗಗಳ ಕೊರತೆ ತಾರಸ್ಥಾಯಿಗೆ ಸೇರಿದ್ದಾಗಿ ಜರ್ನಲ್ ಆಫ್ ಪರಿನೆಟಾಲಜಿಯಲ್ಲಿ ಪ್ರಕಟವಾದ 2016ರ ಅಧ್ಯಯನ ಹೇಳುತ್ತದೆ.

83ಶೇ. ಕಮ್ಯುನಿಟಿ ಆರೋಗ್ಯ ಕೇಂದ್ರಗಳಲ್ಲಿ ನವಜಾತ ಶಿಶು ಕೇಂದ್ರಗಳು ಇರುವಾಗ, 59 ಶೇ. ಕೇಂದ್ರಗಳಲ್ಲಿ ಆರೋಗ್ಯ ಸ್ಥಿರೀಕರಣ ವಿಭಾಗಗಳು ಇಲ್ಲ ಎಂದು 2018 ಗ್ರಾಮೀಣ ಆರೋಗ್ಯ ಅಂಕಿ ಆಂಶಗಳ ವರದಿ ತಿಳಿಸಿದೆ. ಇನ್ನು ಕೇರಳ, ಮಹಾರಾಷ್ಟ್ರ ಹೊರತಾದ ಉಳಿದ 13 ರಾಜ್ಯಗಳಲ್ಲಿನ ಕಮ್ಯುನಿಟಿ ಆರೋಗ್ಯ ಕೇಂದ್ರಗಳಲ್ಲಿ ಶಿಶುರೋಗ ತಜ್ಞರು ಇಲ್ಲ.

ಹಾಗಾಗಿ ಬಹಳ ಮಂದಿ ರೋಗಿಗಳು ಜಿಲ್ಲಾ ಆಸ್ಪತ್ರೆಯಂತಹ ಪ್ರಾದೇಶಿಕ ಸಂರಕ್ಷಣಾ ವಿಭಾಗಗಳಲ್ಲಿ ಸೇರಬೇಕಾಗಿ ಬರುತ್ತದೆ. ಹಾಗಾಗಿ ಆಗಷ್ಟೇ ಹುಟ್ಟಿದ ಶಿಶುಗಳ ಸಂರಕ್ಷಣಾ ಕೇಂದ್ರಗಳಲ್ಲಿ ವಿಪರೀತ ಸಂದಣಿ ಉಂಟಾಗುತ್ತದೆ. ಈ ಪರಿಸ್ಥಿತಿ ಸೋಂಕುಗಳ ಹೆಚ್ಚಳಕ್ಕೆ ಕಾರಣ ಆಗುತ್ತದೆ.

ಹುಟ್ಟಿಗೆ ಮೊದಲೇ ಸಮಸ್ಯೆಗಳು

ಶಿಶು, ಮಕ್ಕಳ ಮರಣಗಳಲ್ಲಿ ಗೃಹ ಸಂಪತ್ತು, ಪ್ರಸೂತಿ ಶಿಕ್ಷಣ ಎನ್ನುವವು ಮುಖ್ಯ ಪಾತ್ರ ವಹಿಸುತ್ತವೆ. ವಿದ್ಯಾವಂತ ಮಹಿಳೆಯರು ಹೆಚ್ಚಾಗಿರುವ ರಾಜ್ಯಗಳು ಮಕ್ಕಳಿಗೆ ಉತ್ತಮವಾದ ಆರೋಗ್ಯ ಪರಿಸ್ಥಿತಿಗಳನ್ನು ಕಲ್ಪಸುತ್ತವೆ ಎಂದು ಇಂಡಿಯಾ ಸ್ಪೆಂಡ್ 2017 ಮಾರ್ಚ್ 20 ಪ್ರಕಟಿಸಿದೆ. 20 ಶೇ. ಶ್ರೀಮಂತ ಗೃಹಗಳಲ್ಲಿ ಹುಟ್ಟಿದ ಶಿಶುಗಳು 20 ಶೇ. ಕಡು ಬಡವರ ಮನೆಗಳಲ್ಲಿ ಹುಟ್ಟಿದ ಶಿಶುಗಳಿಗಿಂತ ಮೂರು ಪಟ್ಟು ಹೆಚ್ಚಾಗಿ ಜೀವಿಸುವ ಪರಿಸ್ಥಿತಿಗಳು ಇರುತ್ತವೆ.

ಹತ್ತು ವರ್ಷಗಳವರೆಗೆ ಮಾತ್ರವೇ ಓದಿಕೊಂಡು, ಬಾಲ್ಯ ವಿವಾಹಗಳನ್ನು ಹೆಚ್ಚಾಗಿ ಮಾಡಿಕೊಂಡ ಮಹಿಳೆಯರು ಇರುತ್ತಿರುವ ಮಧ್ಯ ಪ್ರದೇಶ, ಅಸ್ಸಾಂ, ಉತ್ತರಪ್ರದೇಶ, ರಾಜಸ್ಥಾನ, ರಾಜ್ಯಗಳಲ್ಲಿ ಶಿಶುಮರಣಗಳನ್ನು ಅಧಿಕವಾಗಿ ನಮೂದಿಸಲಾಗುತ್ತದೆ. ಮೇಲಾಗಿ ಈ ರಾಜ್ಯಗಳಲ್ಲಿನ ಮಹಿಳೆಯರಿಗೆ ರಕ್ತಹೀನತೆ, ಅಪೌಷ್ಟಿಕ, ಅಧಿಕ ರಕ್ತದ ಒತ್ತಡ, ಪ್ರಸವಾ ನಂತರದ ಮಧುಮೇಹ ಮೇಲೆ ವಿಶೇಷ ರಕ್ಷಣಾ ಕ್ರಮಗಳು ಲಭ್ಯದಲ್ಲಿಲ್ಲ. ಪ್ರಸವಾನಂತರ ಸಂರಕ್ಷಣೆ ಅತಿ ಕಡಿಮೆಯಾಗಿ ಲಭಿಸುತ್ತಿರುವ ರಾಜ್ಯಗಳಲ್ಲಿ ಬಿಹಾರ ಅಗ್ರಗಾಮಿಯಾಗಿದೆ.

ಪ್ರಸವ ಸಮಯದಲ್ಲಿ ಸಮಸ್ಯೆಗಳು

ಐದು ಶಿಶುಗಳಲ್ಲಿ ಒಂದು 2.5 ಕೆ.ಜಿ.ಗಿಂತ ಕಡಿಮೆ ಭಾರದೊಂದಿಗೆ ಹುಟ್ಟುತ್ತದೆ. ಇನ್ನು ಅರ್ಧ ಮಕ್ಕಳು ಮಾತ್ರವೇ ಆರು ತಿಂಗಳ ಕಾಲ ತಾಯಿ ಹಾಲು ಕುಡಿಯಬಲ್ಲವರಾಗಿವೆ. ತಾಯಿ ಹಾಲು ಸೇವಿಸಿದ ಶಿಶುಗಳ ಆರೋಗ್ಯ ಗಣನೀಯವಾಗಿ ಸುಧಾರಿಸುತ್ತದೆ.

ಗ್ರಾಮೀಣ ಗಿರಿಜನ ಪ್ರದೇಶಗಳಲ್ಲಿನ ಅತಿದೊಡ್ಡ ಸಮಸ್ಯೆ ಏನೆಂದರೆ ಕಡಿಮೆ ತೂಕದೊಂದಿಗೆ ಹುಟ್ಟುವುದು, ತಾಯಿಗೆ ಪೋಷಕಾಹಾರದ ಕೊರತೆ ಇರುವುದೇ ಕಾರಣ ಎಂದು ಐಐಟಿ ಮುಂಬೈಗೆ ಸೇರಿದ ಗ್ರಾಮೀಣ ಪ್ರದೇಶಗಳ ತಾಂತ್ರಿಕ ಪರ್ಯಾಯಗಳ ಕೇಂದ್ರದ ಶಿಶು ತಜ್ಞೆ ರೂಪಲ್ ದಲಾಲ್ ಹೇಳುತ್ತಾರೆ. ಶಿಶುವಿಗೆ ಜನ್ಮ ಕೊಟ್ಟ ಸಮಯದಲ್ಲಿ ಮಗುವಿಗೆ ಹಾಲು ಕುಡಿಸುವುದರ ಬಗ್ಗೆ ಗ್ರಾಮೀಣ ತಾಯಂದಿರಿಗೆ ಸರಿಯಾದ ಮಾರ್ಗದರ್ಶನ ಇಲ್ಲ. ಹಾಗಾಗಿ ಕಡಿಮೆ ತೂಕದೊಂದಿಗೆ ಹುಟ್ಟಿದ ಮಕ್ಕಳಿಗೆ ಇನ್ಫೆ ಕ್ಷನ್ ಆಗುವ ಅಪಾಯ ಹೆಚ್ಚಾಗಿರುತ್ತದೆಂದು ಡಾ.ರೂಪಲ್ ತಿಳಿಸಿದರು. ಶಿಶು ಹುಟ್ಟಿದ ಬಳಿಕ ಹಾಲು ಕುಡಿಸುವುದರಲ್ಲಿ ಆಲಸ್ಯವಾದರೆ ಅಂತಹ ಶಿಶುಗಳ ಪ್ರಾಣಕ್ಕೆ ಅಪಾಯ ಸಂಭವಿಸುತ್ತದೆ. ತಾಯಿ ಹಾಲಿನಿಂದ ಎಷ್ಟು ಸಮಯ ದೂರವಾಗಿದ್ದರೆ ಅಷ್ಟು ಹೆಚ್ಚು ಅಪಾಯ ನವಜಾತ ಶಿಶುವಿಗೆ ಉಂಟಾಗುವ ಸಾಧ್ಯತೆ ಇದೆ ಎಂದು ಯುನಿಸೆಫ್ ವರದಿ ಎಚ್ಚರಿಸುತ್ತದೆ.

ಉತ್ತರ ಪ್ರದೇಶದಲ್ಲಿ ಹುಟ್ಟಿದ ನಾಲ್ಕು ಶಿಶುಗಳಲ್ಲಿ ಒಂದಕ್ಕೆ ಮಾತ್ರವೇ ಗಂಟೆಯೊಳಗೆ ತಾಯಿ ಹಾಲು ಲಭ್ಯವಾಗುತ್ತಿದ್ದು, ರಾಜಸ್ಥಾನದಲ್ಲಿ 28.4ಶೇ. ಶಿಶುಗಳು ತಾಯಿ ಹಾಲು ಇಲ್ಲದೆ ಗಂಟೆಗೂ ಹೆಚ್ಚಾಗಿ ಕಳೆಯುತ್ತಿದ್ದಾರೆ. ಈ ಎರಡು ರಾಜ್ಯಗಳಲ್ಲೇ ಶಿಶುಗಳ ಮರಣ ಅಧಿಕ ಸಂಖ್ಯೆಯಲ್ಲಾಗುತ್ತಿದೆ. ಇನ್ನು ಮಕ್ಕಳಿಗೆ ವ್ಯಾಕ್ಸಿನೇಶನ್ ತಕ್ಕಷ್ಟು ಪ್ರಮಾಣದಲ್ಲಿ ಲಭಿಸುತ್ತಿರುವ ರಾಜ್ಯಗಳಲ್ಲಿ ತಮಿಳುನಾಡು (69.7ಶೇ.), ಗೋವಾ (88.4ಶೇ.) ಅಗ್ರಸ್ಥಾನದಲ್ಲಿವೆ. ಅಸ್ಸಾಂ (47.1ಶೇ.), ಗುಜರಾತ್ (50.4ಶೇ.), ಉತ್ತರ ಪ್ರದೇಶ (51.1ಶೇ.), ರಾಜಸ್ಥಾನ (45.2ಶೇ.) ರಾಜ್ಯಗಳ ಶಿಶುಗಳಿಗೆ ರೋಗ ನಿರೋಧಕ ಶಕ್ತಿ ಅತ್ಯಲ್ಪವಾಗಿ ಇರುವ ಪಟ್ಟಿಯಲ್ಲೂ ಎಲ್ಲಕ್ಕಿಂತ ಕೆಳಗಿವೆ. 2017ರಲ್ಲಿ ಪ್ರಕಟಗೊಂಡ ಇಂಡಿಯಾಸ್ಪೆಂಡ್ ವರದಿ ಪ್ರಕಾರ ಐದು ವರ್ಷಗಳ ಒಳಗಿನ ಮಕ್ಕಳಲ್ಲಿ ಅಧಿಕ ಮರಣಗಳಿಗೆ ಪೌಷ್ಟಿಕ ಆಹಾರದ ಕೊರತೆ ಪ್ರಧಾನ ಕಾರಣ ಎಂದು ತಿಳಿದು ಬಂದಿದೆ. ಇದು ಒಟ್ಟಾರೆ ಶಿಶು ಮರಣಗಳಲ್ಲಿ 68.2ಶೇ. ಇರುತ್ತದೆ.

thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)