varthabharthi


ಸುಗ್ಗಿ

ಬಿಸಿಲುಗುದುರೆಯ ಹಾದಿಯಲ್ಲಿ 'ಮರುಭೂಮಿಯ ಹೂ'

ವಾರ್ತಾ ಭಾರತಿ : 29 Feb, 2020
ಹಾಫಿಲ್ ನಈಮಿ ಬೆಳ್ಮ

 ಹಾಫಿಲ್ ನಈಮಿ ಬೆಳ್ಮ

ಸೊಮಾಲಿಯಾದ ಹೆಣ್ಣುಮಗಳು ‘ವಾರಿಸ್ ಡಿರಿ’ ಎಂಬ ದಿಟ್ಟೆಯ ರೋಚಕ ಚರಿತ್ರೆಯೇ ‘ಮರುಭೂಮಿಯ ಹೂ’. ಇಂಗ್ಲಿಷ್ ಭಾಷೆಯಲ್ಲಿದ್ದ ‘ಡೆಸರ್ಟ್ ಫ್ಲವರ್’ ಎಂಬ ರೋಮಾಂಚಕ ಆತ್ಮಕಥೆಯು ವಿಶ್ವದ ಎಂಬತ್ತೈದು ಭಾಷೆಗಳಲ್ಲಿ ಪ್ರಕಟಗೊಂಡು ಡಾ. ಎನ್. ಜಗದೀಶ್ ಕೊಪ್ಪರವರು ಕನ್ನಡಕ್ಕೆ ಅದ್ಭುತಕರವಾಗಿ ಯಥಾವತ್ತಾಗಿ ಅನುವಾದಿಸಿದ್ದಾರೆ. ಪುಸ್ತಕ ಬಿಡಿಸಿ ಕುಳಿತರೆ ಆರಂಭದಿಂದಲೇ ಒಂದೇ ಓಟಕ್ಕೆ ನೆಗೆದುಕೊಂಡು ಓಡುತ್ತದೆ ಓದಿನ ಓಟ. ಅಷ್ಟೊಂದು ಚಂದವಾಗಿ ಕನ್ನಡ ಅಕ್ಷರಗಳನ್ನು ಜಗದೀಶ್ ಪೋಣಿಸಿದ್ದಾರೆ.

ಕಪ್ಪುಕಲ್ಲಿನ ಶಿಲೆಯಂತಿದ್ದ ಸೋಮಾಲಿಯಾದ ಯಾವುದೋ ಒಂದು ಮೂಲೆಯಲ್ಲಿ ಒಂದು ನರಪಿಳ್ಳೆಗೂ ಬೇಡದಂತೆ ಜೀವಿಸುತ್ತಿದ್ದ ‘ವಾರಿಸ್ ಡಿರಿ’ ಎಂಬ ಯುವತಿ ವಿಶ್ವದ ಸೌಂದರ್ಯ ಲೋಕದಲ್ಲಿ ವಿಶಿಷ್ಟ ಮೇರು ಸ್ಥಾನ ಪಡೆಯುತ್ತಾಳೆ. ಸೋಮಾಲಿಯಾದ ಒಂದು ಮುಸ್ಲಿಮ್ ಬುಡಕಟ್ಟು ಜನಾಂಗದಿಂದ ಮೇಲೆ ಬಂದ ವಾರಿಸ್, ಜಾಹೀರಾತು ಲೋಕವೇ ನಿಬ್ಬೆರಗಾಗುವಂತೆ ತನ್ನದೇ ಆದ ಛಾಪನ್ನು ಮೂಡಿಸುತ್ತಾಳೆ.

ವಿಪರ್ಯಾಸವೆಂದರೆ, ಲಂಡನ್ ನಗರದ ರಸ್ತೆಬದಿಯಲ್ಲಿ ಅಚಾನಕ್ ಆಗಿ ಕಣ್ಣಿಗೆ ಬಿದ್ದ ವಾರಿಸ್‌ಳನ್ನು ಛಾಯಾಗ್ರಾಹಕನೊಬ್ಬ ಬಿಳಿಯರ ನಡುವೆ ತಂದು ಕುಳ್ಳಿರಿಸಿ ತಾನು ಕನಸೇ ಕಂಡಿರದ ಜಗತ್ತಿನ ಅತ್ಯುತ್ತಮ ರೂಪದರ್ಶಿಗಳಲ್ಲೊಬ್ಬಳಾಗಿ ಹೊರ ಹೊಮ್ಮುವಳು. ಆಕೆಯ ಸಾಹಸಮಯ ಯಶೋಗಾಥೆಯತ್ತ ಕಣ್ಣೋಡಿಸಿದರೆ ಅವಳು ಅನುಭವಿಸಿದ ಸಂಕಷ್ಟಗಳು, ಎದುರಾದ ಕಷ್ಟಗಳು, ಸಹಿಸಿದ ತ್ಯಾಗಗಳು, ಇದಿರ್ಗೊಂಡ ಪ್ರಕ್ಷುಬ್ದ ಸನ್ನಿವೇಶಗಳು ಎಲ್ಲವೂ ಒಂದಕ್ಕೊಂದು ಭಿನ್ನವಾದ ಸನ್ನಿವೇಶಗಳು.

ಆತ್ಮಕಥನದುದ್ದಕ್ಕೂ ತನ್ನ ಬದುಕಿನಲ್ಲುಂಟಾದ ಯಾತನೆ, ಅಪಮಾನ, ಬಡತನ, ಮೇಲಾಗಿ ಆಫ್ರಿಕಾದ ಬುಡಕಟ್ಟು ಜನಾಂಗದಲ್ಲಿದ್ದ ಅತ್ಯಂತ ಕ್ರೂರವಾದ ಯೋನಿ ಛೇದನ ಎಂಬ ರಾಕ್ಷಸೀಯ ಪದ್ಧತಿ, ಎಲ್ಲವನ್ನು ಎಳೆಎಳೆಯಾಗಿ ಆತ್ಮಕಥನದಲ್ಲಿ ಬಿಡಿಸಿಟ್ಟಿದ್ದಾಳೆ. ಅನಕ್ಷರಸ್ಥಳಾಗಿದ್ದ ಆಕೆ ಕಷ್ಟಪಟ್ಟು ಒಂದೊಂದಕ್ಷರ ಕಲಿತು ತನ್ನ ಬದುಕಿನ ಪುಟಗಳನ್ನು ಅನನ್ಯವಾಗಿ ಹೆಣೆದಿದ್ದಾಳೆ.

ಸಂಪತ್ತಿನ ದುರಾಸೆಯಿಂದ ತನ್ನ ತಂದೆಯು ಅರುವತ್ತು ವರ್ಷದ ಹಣ್ಣು ಮುದುಕನ ಜತೆ ತನ್ನ ಮದುವೆ ನಿಶ್ಚಯಿಸಿದಾಗ ಮಾನಸಿಕವಾಗಿ ಜರ್ಜರಿತಳಾದ ವಾರಿಸ್, ಒಂದು ತುಂಡು ಬಟ್ಟೆಯನ್ನುಟ್ಟು ಮನೆಬಿಟ್ಟು ಹೊರಟು ನೂರಾರು ಮೈಲಿಯ ಮರುಭೂಮಿಯಲ್ಲಿ ಬರಿಗಾಲ ಮೂಲಕ ನಡೆದು, ದಣಿದು ಆಯಾಸವಾದಾಗ ಅಲ್ಪ ವಿಶ್ರಾಂತಿಗಾಗಿ ಮರದ ನೆರಳ ಕೆಳಗೆ ಮಲಗಿದ್ದವಳ ಎದುರಿಗೆ ಸಿಂಹವೊಂದು ಪ್ರತ್ಯಕ್ಷಗೊಳ್ಳುತ್ತದೆ. ಎದುರಾದ ಸಿಂಹದ ಬಾಯಿಯಿಂದ ತಪ್ಪಿಸಿಕೊಳ್ಳಲು ಶರೀರದಲ್ಲಿ ಕಿಂಚಿತ್ ತ್ರಾಣವಿಲ್ಲದೆ ‘ಇದು ನನ್ನ ಬದುಕಿನ ಕಟ್ಟಕಡೆಯ ಕ್ಷಣ, ತಿನ್ನುವುದಾದರೆ ತಿನ್ನಲಿ’ ಎದ್ದು ಬಿದ್ದು ಓಡಲೋ ಮರ ಹತ್ತಲೋ ತನ್ನಿಂದ ಅಸಾಧ್ಯವೆಂದು ಬಗೆದು ಕುಳಿತಾಗ ಪವಾಡವೆಂಬಂತೆ ಸಿಂಹ ಬಂದದಾರಿಯಲ್ಲೆ ಮರಳಿ ಹೋಗಿತ್ತು. ‘ಪಾಪ, ನಾನು ಅದಕ್ಕೆ ತಕ್ಕ ಆಹಾರವಲ್ಲ, ಕಪ್ಪನೆಯ ಚರ್ಮ, ಬರೀ ಮೂಳೆಗಳೇ ಎದ್ದು ಕಾಣುತ್ತಿದ್ದ ನನ್ನ ದೇಹದಲ್ಲಿ ಅದಕ್ಕೆ ಬೇಕಾಗುವ ಹಿಡಿಯಷ್ಟು ಮಾಂಸ ಇಲ್ಲವೇನೋ?’ ಎಂದು ತನ್ನಲ್ಲೆ ಭಾವಿಸುವಳು.

ಸಿಂಹದ ಬಾಯಿಯಿಂದ ರಕ್ಷೆ ಹೊಂದಿದ ವಾರಿಸ್‌ಳಿಗೆ ಮುಂದಿನ ಜೀವನದಲ್ಲಿ ಎದುರಾಗುವ ಪ್ರತೀ ಕ್ಷಣಗಳನ್ನು ಎದುರಿಸಲು ನಾನು ಸಿದ್ಧಳಿದ್ದೇನೆ ಎಂಬಂತಹ ಭಂಡ ಧೈರ್ಯ ಮೂಡುತ್ತದೆ. ಮತ್ತೆ ಎದ್ದು ಹೊರಟ ಆಕೆ ಆಮೇಲೆ ತುತ್ತಾಗಿದ್ದು ಸಿಂಹಕ್ಕಿಂತ ಕ್ರೌರ್ಯ ತುಂಬಿದ ಮನುಷ್ಯನೆಂಬ ಭೀಕರ ಪ್ರಾಣಿಗಳ ಕೈಯೊಳಗೆ.

ಆತ್ಮಸ್ಥೈರ್ಯ ಕುಗ್ಗದೆ ‘ಎಲ್ಲೋ ಒಂದು ಕಡೆ ನನ್ನ ಬದುಕಿನ ಅವಕಾಶದ ಬಾಗಿಲುಗಳು ತನ್ನಿಂತಾನೇ ತೆರೆದುಕೊಳ್ಳುತ್ತಿದೆ’ ಎಂಬ ಭಾವನೆ ಆಕೆಯೊಳಗೆ ಸದಾ ಜತೆಗಿರುತ್ತದೆ. ಇದರೆಡೆ, ಮನೆಬಿಟ್ಟು ಮರಳುಗಾಡು ದಾಟಿ ಮೊಗದಿಶು ನಗರದಲ್ಲಿರುವ ಚಿಕ್ಕಮ್ಮನ ಮನೆ ಪತ್ತೆ ಮಾಡುವಷ್ಟರಲ್ಲಿ ಅನೇಕ ದೈಹಿಕ ಕಿರುಕುಳ, ತೊಂದರೆಗಳನ್ನು ಅನುಭವಿಸಿದಳು. ಪ್ರಯಾಣದ ಮಧ್ಯೆ ಟ್ರಕ್‌ನಲ್ಲಿ ನಡೆದಂತಹ ಅತ್ಯಾಚಾರ ಯತ್ನ, ಚಿಕ್ಕಮ್ಮನ ಮನೆ ಹುಡುಕುವ ನಿಟ್ಟಿನಲ್ಲಿ ಯುವಕನೊಬ್ಬ ಪುಸಲಾಯಿಸಿ ಮನೆಯೊಳಗೆ ಕರೆದೊಯ್ದು ಅತ್ಯಾಚಾರಕ್ಕೆ ಪ್ರಯತ್ನಿಸಿದ ಸಂದರ್ಭಗಳಲ್ಲೆಲ್ಲಾ ಅಪಾಯವನ್ನು ಗ್ರಹಿಸಿಕೊಂಡೇ ಇದ್ದ ವಾರಿಸ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಳು.

ಅಂತೆಯೇ ಮರಳುಗಾಡಿನಲ್ಲಿ ಅಲೆದಾಡಿ, ಸುತ್ತಾಡಿ, ಸೆಣೆಸಾಡಿ ಕೊನೆಗೆ ಮೊಗದಿಶು ನಗರದಲ್ಲಿರುವ ಚಿಕ್ಕಮ್ಮನ ಮನೆ ಕಂಡು ಹಿಡಿದು ಅಲ್ಲಿಯೂ ಹಲವು ರೀತಿಯ ಯಾತನೆ ವೇದನೆಗಳನ್ನು ಅನುಭವಿಸಿ ಕಟ್ಟ ಕಡೆಯದಾಗಿ ತಲುಪಿದ್ದು ಲಂಡನ್ ನಗರಕ್ಕೆ. ಒಂದು ಸಾಹಸಮಯ ಬದುಕಿನ ಪಯಣದಲ್ಲಿ ಅನೇಕ ಏಳುಬೀಳುಗಳನ್ನು ಕಂಡಳು, ಉಂಡಳು. ಕಷ್ಟ ಕಾರ್ಪಣ್ಯಗಳನ್ನು ಸಹಿಸಿದಳು. ಜತೆಗೆ ಯೋನಿ ವಿಚ್ಛೇದನ ಎಂಬ ಅನಿಷ್ಟ ಪದ್ಧತಿಯಿಂದ ಅನೇಕ ನೋವುಗಳನ್ನು ತಿಂದಳು. ಹೆಣ್ಣು ಮಕ್ಕಳಿಗೆ ಋತುಮತಿಯಾಗುವ ಮುಂಚಿತವಾಗಿ ಯೋನಿಗೆ ಹೊಲಿಗೆ ಹಾಕುವ ಅಮಾನವೀಯ ಪದ್ಧತಿಯ ವಿರುದ್ಧ ಸಿಡಿದೆದ್ದಳು. ಏಕೆಂದರೆ, ಸ್ವತಃ ಅವಳೇ ಈ ಕ್ರೂರತೆಗೆ ಬಲಿಯಾಗಿದ್ದಳು. ಮಾತ್ರವಲ್ಲದೆ, ಬದುಕಿನ ಪ್ರತೀ ಗಳಿಗೆಯಲ್ಲೂ ನೋವುಂಡಳು. ಈ ಪದ್ಧತಿಯನ್ನು ರೂಢಿ ಮಾಡಿಕೊಂಡು ಬಂದ ಅಂದಿನ ಸಂಪ್ರದಾಯಕ್ಕೆ ಹಿಡಿಶಾಪ ಹಾಕುತ್ತಲೇ ಇದ್ದಳು.

ಅನಿರೀಕ್ಷಿತವಾಗಿ ಮೊಗದಿಶು ಪಟ್ಟಣದಿಂದ ಲಂಡನ್ ನಗರಕ್ಕೆ ವಿಮಾನ ಮೂಲಕ ಪ್ರಥಮ ಬಾರಿ ಪ್ರಯಾಣಿಸುವ ಅವಕಾಶವನ್ನು ತುಂಬಾ ಸಂತಸದಿಂದ ಸ್ವೀಕರಿಸಿದಳು. ಲಂಡನ್ ನಗರ ಎಂದು ಕೇಳುವಾಗ ಕಾರಂಜಿಯಂತೆ ಪುಟಿಯುತ್ತಿದ್ದರೂ ಅಲ್ಲೂ ಮನೆ ಕೆಲಸದವಳಾಗಿ ತನ್ನ ಕೈಂಕರ್ಯವನ್ನು ಮುಂದುವರಿಸುವಳು.

ಬಿಡುವಿಲ್ಲದೆ ನಿರಂತರ ಕೆಲಸಗಳಿದ್ದ ಕಾರಣ ಗಾಣದೆತ್ತಿನಂತೆ ದುಡಿದಳು. ಬೆಳಗ್ಗೆ ಐದು ಗಂಟೆಗೆ ಆರಂಭವಾಗಿ ತಡರಾತ್ರಿ ಹನ್ನೆರಡು ಗಂಟೆ ತನಕ ಮನೆಯ ಪ್ರತಿ ಮೂಲೆ ಮೂಲೆಗೂ ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ ಓಡಾಡಿಕೊಂಡು, ಪ್ರತಿ ನಿಮಿಷವೂ ಗಡಿಯಾರದ ಮುಳ್ಳುಗಳಿಗೆ ಪ್ರತಿಸ್ಪರ್ಧೆ ನೀಡುವಂತಹ ರೂಪದಲ್ಲಿ ಕೆಲಸದೊಳಗೆ ತನ್ನನ್ನು ತಾನು ತೊಡಗಿಸಿದಳು. ಈ ಕೆಲಸ ಮುಗಿದ ನಂತರ ವಾರಿಸ್ ಲಂಡನ್ ನಗರದಲ್ಲೇ ತನ್ನ ವಾಸ ಸ್ಥಿರಗೊಳಿಸಿ ರೆಸ್ಟೋರೆಂಟ್‌ನಲ್ಲಿ ಕೆಲಸಕ್ಕೆ ಸೇರುವಳು. ತುತ್ತಿನ ಚೀಲ ತುಂಬಿಸಿಕೊಳ್ಳಲು ಜೀವನದುದ್ದಕ್ಕೂ ಬದುಕಿನೊಡನೆ ಸೆಣಸಾಡುತ್ತಲೇ ಬಂದಳು. ಕೆಲಸದ ಜತೆಗೆ ರಾತ್ರಿ ಶಾಲೆಗೂ ಸೇರಿ ಇಂಗ್ಲಿಷ್ ಭಾಷೆ ಪಟ್ಟು ಹಿಡಿದು ಕಲಿಯಲು ಆರಂಭಿಸಿದಳು.

ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಸಿಕ್ಕ ಛಾಯಾಗ್ರಾಹಕನೊಬ್ಬ ನಿರಂತರವಾದ ಎರಡು ವರ್ಷಗಳಷ್ಟು ಕಾಲ ಆಕೆಯ ಹಿಂದೆ ದುಂಬಾಲು ಬಿದ್ದು ಒತ್ತಡ ಹಾಕಿದ ಕಾರಣ ವಾರಿಸ್ ಸ್ಟುಡಿಯೋ ಒಳಗೆ ಕಾಲಿಟ್ಟಳು. ಸ್ಟುಡಿಯೋದೊಳಗೆ ಕರೆದುಕೊಂಡು ಹೋದ ಆ ಯುವಕ ಆಕೆಯ ಬದುಕಿನ ತಿರುವನ್ನೇ ಬದಲಿಸಿದ. ಅಲ್ಲಿಂದ ಮುಂದಕ್ಕೆ ನಡೆದದ್ದು ಮಾತ್ರ ಪವಾಡ. ಯಾವುದೋ ಮೂಲೆಯಲ್ಲಿ ಮುಸುರೆ ತಿಕ್ಕಿಕೊಂಡು ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುತ್ತಿದ್ದ ವಾರಿಸ್ ಜಗದ್ವಿಖ್ಯಾತ ರೂಪದರ್ಶಿಯಾಗಿ ಮಾರ್ಪಾಡು ಹೊಂದುವಳು. ದೇಶ ವಿದೇಶಗಳಿಂದ ಆಕೆಯ ಫೋಟೋಗಾಗಿ ಛಾಯಾಗ್ರಾಹಕರು ಆಕೆಯ ಹಿಂದೆ ಬಿದ್ದರು. ಜಗತ್ಪ್ರಸಿದ್ಧ ಫೋಟೋಗ್ರಾಫರ್ ಡೆರೆನ್ಸ್ ಅನ್ನುವ ವ್ಯಕ್ತಿ ರೂಪದರ್ಶಿಯಾದ ವಾರಿಸ್‌ಳಫೋಟೋ ತೆಗೆಯಲು ಅವಕಾಶ ಕೋರಿ, ಅದಕ್ಕೆ ಪ್ರತಿ ಸಂಭಾವನೆಯಾಗಿ ಆಕೆಗೆ ಸಿಕ್ಕಿದ್ದು ಒಂದು ದಿನಕ್ಕೆ ಒಂದುವರೆ ಸಾವಿರ ಪೌಂಡ್. ರೆಸ್ಟೋರೆಂಟಲ್ಲಿ ಮೈ ಬಗ್ಗಿಸಿ ಕಷ್ಟಪಟ್ಟು ಒಂದು ತಿಂಗಳು ದುಡಿದರೆ ಎಂಬತ್ತು ಪೌಂಡ್ ಸಿಗುತ್ತಿದ್ದ ವಾರಿಸ್ ಈ ಸಂಭಾವನೆ ಕಂಡು ನಿಜಕ್ಕೂ ಹೌಹಾರಿದ್ದಳು.

ನಂತರ ರೂಪದರ್ಶಿಯಾಗಿ ಹಲವು ವೇದಿಕೆಗಳಲ್ಲಿ ವಾರಿಸ್ ಮಿಂಚಿದಳು. ಸೋಮಾಲಿಯಾದ ಬಿರು ಬಿಸಿಲಿಗೆ ಮೈಯೊಡ್ಡಿ ಕುರಿ ಮೇಯಿಸುತ್ತಾ ಕಾಲ ಕಳೆಯುತ್ತಿದ್ದ ಕರಿ ಇದ್ದಲಿನಂತಹ ಯುವತಿಯೊಬ್ಬಳು ಜಾಹೀರಾತು ಜಗತ್ತನ್ನೇ ತನ್ನ ತೆಕ್ಕೆಗೆ ತಂದು ನಿಲ್ಲಿಸಿದಳು. ವಿದೇಶಗಳಿಂದಲೂ ಆಕೆಗೆ ಬೇಡಿಕೆಗಳು ಬರಲಾರಂಭಿಸಿದವು. ಜಾಹೀರಾತು ನಿಮಿತ್ತ ಅಮೇರಿಕದತ್ತ ಹಾರಿದಳು. ರೂಪದರ್ಶಿಯಾದ ವಾರಿಸ್‌ಳ ಫೋಟೋ ಅದಾಗಲೇ ಜಗತ್ಪ್ರಸಿದ್ದವಾಗಿದ್ದವು. ಪತ್ರಿಕೆ, ಚಾನೆಲ್‌ಗಳಲ್ಲಿ ರಸ್ತೆ ಬದಿಯ ಜಾಹೀರಾತು ಫಲಕಗಳಲ್ಲಿ ಕಪ್ಪು ಮುಖವೊಂದು ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ್ದವು. ತಿಂಗಳು ಪೂರ್ತಿ ಬಿಡುವಿಲ್ಲದ ಕೆಲಸ ಕಾರ್ಯಗಳು, ವಿಶ್ವವಿಖ್ಯಾತ ಛಾಯಾಗ್ರಾಹಕರ ಕಣ್ಣೆಲ್ಲವು ವಾರಿಸ್‌ಳತ್ತ ನೆಟ್ಟಿದ್ದವು. ಆಕೆಯ ಬದುಕಿನಲ್ಲಿ ನೋಡಿರದಷ್ಟು ಹಣದ ಹೊಳೆಯೇ ಆಕೆಯ ಬಳಿ ಹರಿದು ಬಂತು. ಇವೆಲ್ಲ ಸುಖ ಸಂತಸದ ಮಧ್ಯೆ ವಾರಿಸ್‌ಳಿಗೆ ಸೋಮಾಲಿಯಾದ ಮರುಭೂಮಿ ಗಾಢವಾಗಿ ಕಾಡುತ್ತಿತ್ತು. ಬಾಲ್ಯದಲ್ಲಿ ಅವಳನುಭವಿಸಿದ ನೋವು, ಬಡತನ, ಅಲೆದಾಟ, ಅಪಮಾನ ಎಲ್ಲವೂ ಪ್ರತಿಕ್ಷಣ ಕಣ್ಣೆದುರಿಗೆ ಬಂದು ನಿಲ್ಲುತ್ತಿದ್ದವು. ತನ್ನ ಹದಿನಾಲ್ಕನೇ ವಯಸ್ಸಿನ ತನಕ ಸುಡುವ ಮರಳುಗಾಡಿನಲ್ಲಿ ಕಾಲುಗಳಿಗೆ ಚಪ್ಪಲಿಗಳಿಲ್ಲದೆ ಒಂಟೆ, ಕುರಿಗಳನ್ನು ಮೇಯಿಸುತ್ತಿದ್ದ ರೀತಿ, ತನ್ನ ಬದುಕಿನಂತೆಯೇ ಕಲ್ಲು ಮುಳ್ಳುಗಳಿಂದಾವೃತವಾದ ದಾರಿಯಲ್ಲಿ ಕಾಲಡಿ ಒಡೆದು ಒಸರುತ್ತಿದ್ದ ನೆತ್ತರನ್ನು ನೋಡುತ್ತಾ ನಡೆದಾಡುತ್ತಿದ್ದ ಅತಿ ಭಯಾನಕವಾದ ಕ್ಷಣ. ಎಲ್ಲವೂ ಆಕೆಯ ಬದುಕಿನಲ್ಲಿ ಮರೆಯಲಾರದ ಕೆಲವು ಕುರುಹುಗಳಾಗಿ ಸದಾ ಜತೆಯಲ್ಲೇ ಇರುತ್ತಿದ್ದವು.

ಎಷ್ಟೇ ಸುಖ ಸಂತಸದಲ್ಲಿ ತೇಲಾಡಿದರೂ ವಾರಿಸ್‌ಳಿಗೆ ತನ್ನ ಕುಟುಂಬ ನೆನಪಾಗುತ್ತಲೇ ಇತ್ತು. ಅಮ್ಮನ ಪ್ರೀತಿ, ವಾತ್ಸಲ್ಯ, ಅಮ್ಮ ತಬ್ಬಿ ಹಿಡಿದಾಗ ಸೋಕುತ್ತಿದ್ದ ಬಿಸಿಯುಸಿರು, ಬಿಸಿಯಪ್ಪುಗೆ ಎಲ್ಲವೂ ತನ್ನ ಜತೆಯಲ್ಲೇ ಇತ್ತು. ಇದರೆಡೆ ವಾರಿಸ್‌ಳ ರೋಚಕ ಬದುಕಿನ ಕುರಿತು ತಿಳಿದ ಬಿಬಿಸಿ ಚಿತ್ರ ತಂಡ ಆಕೆಯ ಬೆನ್ನು ಹಿಡಿದಿತ್ತು. ವಾರಿಸ್ ಕ್ರಮಿಸಿ ಬಂದ ಕಲ್ಲು ಮುಳ್ಳು ತುಂಬಿದ ಅತಿ ಭಯಾನಕ ಸನ್ನಿವೇಶಗಳನ್ನು ತಿಳಿದು ಒಂದು ಅದ್ಭುತ ಸಿನೆಮಾ ರಚಿಸಲು ಬಿಬಿಸಿ ತಂಡ ಮುಂದಾಗಿತ್ತು. ಅಮ್ಮನನ್ನು ಹುಡುಕಲು ಇದೇ ಒಳ್ಳೆಯ ಸಂದರ್ಭ ಎಂದೆನಿಸಿ ತನ್ನ ಬಾಲ್ಯದ ಬದುಕನ್ನು ತೋರಿಸಲು ಬಿಬಿಸಿ ಚಿತ್ರ ತಂಡದೊಂದಿಗೆ ಸೋಮಾಲಿಯ ಕಡೆ ಹೊರಡುವಳು. ಹೇಗೋ ಹೆಣಗಾಡಿ ಹುಡುಕಿ ತನ್ನ ಅಮ್ಮನ ಮಡಿಲು ಸೇರಿದ ಆ ಕ್ಷಣವಂತೂ ಅತ್ಯಂತ ರೋಮಾಂಚಕ. ಬಾಲ್ಯದಲ್ಲಿ ನೋಡಿದ್ದ ಅದೇ ಮುಖ ಅದೇ ಭಾವ ಅದೇ ವೇಷದ ನಿರ್ಲಿಪ್ತ ಮುಖ. ತಾನು ಮನೆಬಿಟ್ಟು ಹೊರಡುವಾಗ ‘ನನ್ನನ್ನು ಮರೆಯಬೇಡ ಮಗಳೇ’ ಎಂಬ ಅಮ್ಮನ ಮಾತು ತಕ್ಷಣ ಆಕೆಯ ಕಿವಿಯೊಳಗೆ ಅನುರಣಿಸಲು ಆರಂಭವಾಯಿತು. ಅಮ್ಮನ ಬಿಸಿಯಪ್ಪುಗೆ ಸ್ಪರ್ಶ ಮರುಭೂಮಿಯ ಓಯಸಿಸ್‌ನಂತೆ ವಾರಿಸ್‌ಳಿಗೆ ಭಾಸವಾಯಿತು. ಅಂತೆಯೇ ತನ್ನ ಮೂವತ್ತನೇ ವಯಸ್ಸಿನಲ್ಲಿ ವಾರಿಸ್ ಹೆಣ್ಣು ಮಗುವಿನ ತಾಯಿಯಾಗುವಳು. ಬಾಲ್ಯದಲ್ಲಿ ಯೋನಿ ಛೇದನ ಎಂಬ ಅಮಾನುಷ ಕ್ರಿಯೆಗೊಳಗಾದ ವಾರಿಸ್ ಸರ್ಜರಿ ಮೂಲಕ ತನ್ನ ನೋವನ್ನು ನಿವಾರಿಸಿಕೊಂಡಿದ್ದಳು ಹಾಗೂ ಈ ಕ್ರೌರ್ಯದ ವಿರುದ್ಧ ನಿರಂತರ ರೊಚ್ಚಿಗೇಳುತ್ತಲೇ ಇದ್ದಳು. ಇದೇ ಸಂದರ್ಭ ವಾರಿಸ್‌ಳನ್ನು ವಿಶ್ವಸಂಸ್ಥೆಯು ತನ್ನ ರಾಯಭಾರಿಯಾಗಿ ಈ ಕ್ರೌರ್ಯದ ವಿರುದ್ಧ ಜಾಗೃತಿ ನೀಡಲು ಆಕೆಯನ್ನು ಕಳುಹಿಸುವ ಸಿದ್ಧತೆ ನಡೆಸಿತು. ಸಂಸ್ಕೃತಿ ಎಂಬ ನಿಟ್ಟಿನಲ್ಲಿ ಹೇರಿದ ಈ ದುರಂತ ಕ್ರೂರತೆಯ ವಿರುದ್ಧ ಅದೇ ಸೋಮಾಲಿಯಾಕ್ಕೆ ಕಾಲಿಟ್ಟು ಜನ ಜಾಗೃತಿಯನ್ನು ಆರಂಭಿಸುವಳು. ಅನೇಕ ಹಿರಿತಲೆಗಳು ವಾರಿಸ್ ವಿರುದ್ಧ ಮುಗಿಬಿದ್ದರೂ ಕೂಡಾ ಕ್ರಮೇಣ ಈ ಅಮಾನುಷ ಪದ್ದತಿಯ ವಿರುದ್ಧ ಭೀಕರ ಯುದ್ಧ ಸಾರುತ್ತಾ ಅದಕ್ಕೆ ತಿಲಾಂಜಲಿ ಇಟ್ಟಳು. ಈ ರೀತಿ ವಾರಿಸ್ ಎಂಬ ಕಪ್ಪು ಶಿಲೆಯಂತಹ ಯುವತಿಯ ಕ್ರಾಂತಿಯ ಹಣತೆ ವಿಶ್ವದಲ್ಲೇ ಸ್ಫೂರ್ತಿಯ ಬೆಳಕನ್ನು ಹೊತ್ತಿಸಿತು.

ಈ ಆತ್ಮಕಥನವನ್ನು ಕನ್ನಡಕ್ಕಿಳಿಸಿದ ಜಗದೀಶ್ ಕೊಪ್ಪ ಅವರಿಗೆ ಅನಂತ ಅನಂತ ಧನ್ಯವಾದಗಳರ್ಪಿಸುತ್ತಾ..!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)