ಕೊರಳು ಕತ್ತರಿಸುವ ಪ್ರಶ್ನೆಗಳು...
ಹಲವು ಸಾವಿರ ವರ್ಷ ಒಂದೇ ಪ್ರಶ್ನೆ ಸಾಕಿತ್ತು
ಕೆಲವರು ಭಾರತವನ್ನಾಳುವುದಕ್ಕೆ, ಒಡೆಯರಾಗಿ ಮೆರೆಯುವುದಕ್ಕೆ
ಜನರನ್ನು ದಾಸರಾಗಿಸಿ, ಪುರೋಹಿತರು ಆಳುವುದಕ್ಕೆ
ಎಲ್ಲಿಂದ ಹುಟ್ಟಿದಿರಿ ? ಎಲ್ಲಿಂದ ಹುಟ್ಟಿದಿರಿ ? ಎಲ್ಲಿಂದ ಹುಟ್ಟಿದಿರಿ ?
ಎಂಬ ಆ ಪ್ರಶ್ನೆ ಸತ್ತಿಲ್ಲ, ಇನ್ನೂ ಜೀವಂತವಿದೆ
ಎಲ್ಲೆಂದರಲ್ಲಿ ಧ್ವನಿಸುತ್ತಿದೆ, ಪ್ರತಿಧ್ವನಿಸುತ್ತಿದೆ.
21ನೇ ಶತಮಾನದಲ್ಲಿ ಆ ಪ್ರಶ್ನೆ ಗರ್ಭಿಣಿಯಾಗಿದೆ
ಮರಿಗಳನ್ನು ಹೆರಲು ಆರಂಭಿಸಿದೆ.
ಒಂದಲ್ಲ, ಎರಡಲ್ಲ, ಹತ್ತು ಹಲವು ಮರಿಗಳು
ಮೊದಲ ಪ್ರಶ್ನೆಯ ಬಲಿಗಳನ್ನೇ ಮತ್ತೆ ಬಲಿತೆಗೆಯಲು
ಹೊರಟಿವೆ ಆ ಹಲವು ಪ್ರಶ್ನೆಗಳು
ಮಾನವರ ಸ್ಥಾನ-ಮಾನ ನಿರ್ಧರಿಸುವ ಪ್ರಶ್ನೆಗಳು
ಎಲ್ಲಿ ಹುಟ್ಟಿದಿರಿ ? ಯಾವಾಗ ಹುಟ್ಟಿದಿರಿ ?
ಎಂಬಿತ್ಯಾದಿ ಪ್ರಶ್ನೆಗಳು, ಹುಚ್ಚು ಹಿಡಿಸುವ ಹುಚ್ಚು ಪ್ರಶ್ನೆಗಳು
ನಿಮ್ಮ ತಂದೆ ಹುಟ್ಟಿದ್ದೆಲ್ಲಿ? ನಿಮ್ಮ ತಾಯಿ ಹುಟ್ಟಿದ್ದೆಲ್ಲಿ?
ತಂದೆ ಯಾವ ದಿನ ಹುಟ್ಟಿದರು? ತಾಯಿ ಯಾವ ದಿನ ಹುಟ್ಟಿದರು?
ಇತ್ಯಾದಿ ಇತ್ಯಾದಿ ಪ್ರಶ್ನೆಗಳು, ಮೂಲ ಕೆದಕುವ ಪ್ರಶ್ನೆಗಳು
ಈ ನೆಲದ ಪೌರರನ್ನು ವಲಸಿಗ, ವಿದೇಶಿಗಳಾಗಿಸುವ ಪ್ರಶ್ನೆಗಳು
ಉತ್ತರಿಸಲಾಗದ ಏಕಲವ್ಯರ ಬೆರಳು ಕತ್ತರಿಸುವ ಪ್ರಶ್ನೆಗಳು
ದಾಖಲೆ ಇಲ್ಲದ ಶಂಬೂಕರ ಕೊರಳು ಕತ್ತರಿಸುವ ಪ್ರಶ್ನೆಗಳು
ರೋಹಿತ್ ವೇಮುಲಾನನ್ನು ಕೊಂದವರ ಪ್ರಶ್ನೆಗಳು
ನಜೀಬನನ್ನು ಕಣ್ಮರೆಯಾಗಿಸಿದವರ ಪ್ರಶ್ನೆಗಳು
ಗಾಂಧೀಜಿಗೆ ಗುಂಡಿಕ್ಕಿದವರ, ದೇಶ ಒಡೆಯುವವರ ಪ್ರಶ್ನೆಗಳು
ಯಾಕೆ ಹುಟ್ಟಿದಿರಿ? ಎಂದು ಕೇಳ ಬಯಸುವವರ ಪ್ರಶ್ನೆಗಳು