ಸೈಕ್ಲಿಂಗ್‌ನಿಂದ ಆರೋಗ್ಯ ಭಾಗ್ಯ
ಸೈಕ್ಲಿಂಗ್ ಎನ್ನುವುದು ಒಂದು ರೀತಿಯ ಗಾಳಿಯಲ್ಲಿ ನಡೆಸುವ ದೈಹಿಕ ಕಸರತ್ತು ಆಗಿದ್ದು, ಹೃದಯ, ರಕ್ತನಾಳಗಳು ಮತ್ತು ಶ್ವಾಸಕೋಶಗಳಿಗೆ ಉತ್ತಮ ರೀತಿಯ ಶ್ರಮವನ್ನು ನೀಡಿ ದೈಹಿ ಆರೋಗ್ಯವನ್ನು ವೃದ್ಧಿಸುತ್ತದೆ.
ಒಬ್ಬ ವ್ಯಕ್ತಿ ಜೀವನ ಪರ್ಯಂತ ಆರೋಗ್ಯವಂತನಾಗಿರಬೇಕಾದಲ್ಲಿ ಆತನು ದೈಹಿಕ ಮತ್ತು ಮಾನಸಿಕವಾಗಿ ಯಾವತ್ತೂ ಉಲ್ಲಸಿತನಾಗಿರುವುದು ಅತೀ ಅಗತ್ಯ. ನಿರಂತರ ದೈಹಿಕ ಕಸರತ್ತು ಅಥವಾ ವ್ಯಾಯಾಮದಿಂದ ಅಪಾಯಕಾರಿ ರೋಗಗಳಾದ ಹೃದಯಾಘಾತ, ಕ್ಯಾನ್ಸರ್, ಸ್ಥೂಲಕಾಯ, ಮಧುಮೇಹ, ಅಧಿಕ ರಕ್ತದೊತ್ತಡ, ಗಂಟು ನೋವು, ಮಾನಸಿಕ ಖಿನ್ನತೆ ಮುಂತಾದವುಗಳನ್ನು ಬಹಳ ಸುಲಭವಾಗಿ ತಡೆಗಟ್ಟಬಹುದು. ಅತೀ ಕಡಿಮೆ ಖರ್ಚಿನಲ್ಲಿ ದೊರಕಬಹುದಾದ ಅತ್ಯಂತ ಪರಿಣಾಮಕಾರಿಯಾದ ವ್ಯಾಯಾಮ ಎಂದರೆ ಸೈಕ್ಲಿಂಗ್ ಎಂದರೂ ತಪ್ಪಾಗಲಾರದು. ನಿರಂತರ ಸೈಕ್ಲಿಂಗ್ ಮಾಡುವುದರಿಂದ ಸೋಮಾರಿ ಜೀವನ ಶೈಲಿಯಿಂದ ಬಿಡುಗಡೆಯಾಗಿ ನಿತ್ಯವೂ ಆರೋಗ್ಯವಂಥ ಜೀವನಶೈಲಿಗೆ ಪರಿವರ್ತನೆಯಾಗಬಹುದು. ಸಣ್ಣ ಮಕ್ಕಳಿಂದ ಹಿಡಿದು ಹಲ್ಲಿಲ್ಲದ ಮುದುಕರವರೆಗೂ ಎಲ್ಲಾ ವಯಸ್ಸಿನ ಹೆಣ್ಣು ಗಂಡೆಂಬ ಬಡವ ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರೂ ಎಲ್ಲಾ ಕಾಲದಲ್ಲಿಯೂ ಮಾಡಬಹುದಾದ ಅತೀ ಕಡಿಮೆ ಖರ್ಚಿನ ದೈಹಿಕ ಕಸರತ್ತು ಎಂದರೂ ಅತಿಶಯೋಕ್ತಿಯಲ್ಲ. ಎಲ್ಲರೂ ಆನಂದಿಸುವ ಮತ್ತು ವಾತಾವರಣ ಮಾಲಿನ್ಯ ಉಂಟು ಮಾಡದ ಪರಿಸರ ಸ್ನೇಹಿ ಕಸರತ್ತು ಎಂದರೂ ತಪ್ಪಲ್ಲ. ದಿನನಿತ್ಯದ ಕೆಲಸದ ಸಮಯದಲ್ಲೂ ಈ ಸೈಕ್ಲಿಂಗ್ ಪರಿಣಾಮಕಾರಿಯಾಗಿ ಉಪಯೋಗಿಸಬಹುದು. ಒಂದು ಅಂದಾಜಿನ ಪ್ರಕಾರ ವಿಶ್ವದಾದ್ಯಂತ ಒಂದು ಬಿಲಿಯನ್ ಮಂದಿ ಪ್ರತಿ ನಿತ್ಯ ಸೈಕಲ್ ಬಳಸುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಇದು ಆಟಕ್ಕೆ ಇರಬಹುದು ಅಥವಾ ಸಂಚಾರಕ್ಕೆ ಅಥವಾ ಆನಂದಕ್ಕೆ ಕೂಡಾ ಆಗಿರಬಹುದು. ಒಟ್ಟಿನಲ್ಲಿ ಅತೀ ಸರಳ ಸುಂದರ ಸುಲಭದ ದೈಹಿಕ ಕಸರತ್ತು ಎಂಬ ಖ್ಯಾತಿ ಸೈಕ್ಲಿಂಗ್ ಪಡೆದಿದೆ. ವಾರದಲ್ಲಿ 2ರಿಂದ 4ಗಂಟೆಗಳ ಕಾಲ ಸೈಕ್ಲಿಂಗ್ ಮಾಡುವುದರಿಂದ ದೇಹಕ್ಕೆ ಪರಿಪೂರ್ಣ ವ್ಯಾಯಾಮ ಸಿಗುತ್ತದೆ. ದೇಹದ ಯಾವುದೇ ಭಾಗಕ್ಕೆ ಗಾಯ ಅಥವಾ ನೋವು ಉಂಟಾಗುವ ಸಾಧ್ಯತೆ ಅತೀ ಕಡಿಮೆ ಇರುತ್ತದೆ. ಸೈಕ್ಲಿಂಗ್ ಮಾಡುವಾಗ ತಲೆಯಿಂದ ಕಾಲಿನ ವರೆಗಿನ ಎಲ್ಲಾ ಸ್ನಾಯುಗಳಿಗೆ ವ್ಯಾಯಾಮ ಸಿಗುತ್ತದೆ. ಇತರ ವ್ಯಾಯಾಮಗಳಂತೆ ಸೈಕ್ಲಿಂಗ್‌ಗೆ ಯಾವುದೇ ರೀತಿಯ ವಿಶಿಷ್ಟ ಕೌಶಲ್ಯದ ಅಗತ್ಯವಿಲ್ಲ. ಒಮ್ಮೆ ಕಲಿತ ಬಳಿಕ ಮರೆಯುವುದೂ ಇಲ್ಲ. ನಿರಂತರ ಸೈಕ್ಲಿಂಗ್ ಮಾಡುವುದರಿಂದ ದೇಹದ ಸಾಮರ್ಥ್ಯ ದುಪ್ಪಟ್ಟಾಗುತ್ತದೆ. ಆರಂಭದಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಧಾನವಾಗಿ ಮಾಡಿ ನಂತರ ಕ್ರಮೇಣ ನಿಮ್ಮ ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ವೇಗವನ್ನು ದ್ವಿಗುಣಗೊಳಿಸಬಹುದು. ನಿಮ್ಮ ದೇಹ ಒಗ್ಗಿಕೊಳ್ಳದಿದ್ದಲ್ಲಿ ಸೈಕ್ಲಿಂಗ್‌ನ ಅವಧಿಯನ್ನು ಕಡಿಮೆ ಮಾಡಬಹುದು. ದಿನಕ್ಕೆ ಕನಿಷ್ಠ 20ರಿಂದ 30 ನಿಮಿಷಗಳ ಸೈಕ್ಲಿಂಗ್‌ನಿಂದ ದೇಹದ ಎಲ್ಲಾ ಅಂಗಾಂಗಗಳಿಗೆ ಲಾಭವಾಗುತ್ತದೆ. ಹೆಚ್ಚಿನ ಜನರು ಈ ಕಸರತ್ತನ್ನು ಖುಷಿಪಡುತ್ತಾರೆ. ಯಾಕೆಂದರೆ ಹೊರಾಂಗಣದಲ್ಲಿ ಪರಿಸರದ ನಡುವೆ ಶುದ್ಧ ಗಾಳಿ ಬೆಳಕಿನ ನಡುವೆ ಸೈಕ್ಲಿಂಗ್ ಮಾಡಿದಾಗ ಮನಸ್ಸು ಉಲ್ಲಸಿತವಾಗುತ್ತದೆ. ಆದರೆ ಹವಾನಿಯಂತ್ರಿತ ಕಣ್ಣುಕೊರೈಸುವ ಬೆಳಕಿನಲ್ಲಿ ಕಿವಿಗೆ ಅಪ್ಪಳಿಸುವ ಸಂಗೀತದ ನಡುವೆ ದೈಹಿಕ ಕಸರತ್ತನ್ನು ಮಾಡಿದಲ್ಲಿ ದೇಹಕ್ಕೆ ಕಸರತ್ತು ಸಿಕ್ಕರೂ ಮಾನಸಿಕ ನೆಮ್ಮದಿ ಸಿಗುವುದು ಕಷ್ಟ. ಈ ಕಾರಣದಿಂದಲೇ ಎಲ್ಲ ವರ್ಗದ ಜನರು ಸೈಕ್ಲಿಂಗ್‌ನ್ನು ಇಷ್ಟಪಡುತ್ತಾರೆ.
ನಿಜವಾಗಿಯೂ ಸೈಕ್ಲಿಂಗ್ ಎನ್ನುವುದು ಒಂದು ರೀತಿಯ ಗಾಳಿಯಲ್ಲಿ ನಡೆಸುವ ದೈಹಿಕ ಕಸರತ್ತು ಆಗಿದ್ದು, ಹೃದಯ, ರಕ್ತನಾಳಗಳು ಮತ್ತು ಶ್ವಾಸಕೋಶಗಳಿಗೆ ಉತ್ತಮ ರೀತಿಯ ಶ್ರಮವನ್ನು ನೀಡಿ ದೈಹಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಈ ಸೈಕ್ಲಿಂಗ್‌ನಿಂದಾಗಿ ದೀರ್ಘ ಉಸಿರಾಟ ತೆಗೆದುಕೊಳ್ಳುವಂತಾಗಿ, ದೇಹದಲ್ಲಿ ಹೆಚ್ಚು ಬೆವರುವಿಕೆ ಉಂಟಾಗುತ್ತದೆ ಮತ್ತು ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಒಟ್ಟಿನಲ್ಲಿ ದೇಹದ ಪ್ರತಿ ಜೀವಕೋಶಗಳನ್ನು ಎಚ್ಚರಿಸಿ ಎಬ್ಬಿಸಿ ದೇಹವನ್ನು ಮತ್ತಷ್ಟು ಕ್ರೀಯಾಶೀಲವಾಗಿಸುತ್ತದೆ.
ಲಾಭಗಳು ಏನು?
♦ ದೇಹದ ಸ್ನಾಯುಗಳು ಶಕ್ತಿಶಾಲಿಯಾಗುತ್ತವೆ ಮತ್ತು ದೈಹಿಕ ಸಾಮರ್ಥ್ಯ ದುಪ್ಪಟ್ಟಾಗುತ್ತದೆ.
♦ ಹೃದಯದ ಆರೋಗ್ಯ ವೃದ್ಧಿಸುತ್ತದೆ.
♦ ದೇಹದ ಎಲ್ಲಾ ಗಂಟುಗಳ ಚಲನೆ ಮತ್ತಷ್ಟು ಕ್ರಿಯಾಶೀಲವಾಗುತ್ತದೆ.
♦ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮೆದುಳಿಗೆ ರಕ್ತ ಸಂಚಲನ ಜಾಸ್ತಿಯಾಗಿ ಮೆದುಳು ಮತ್ತಷ್ಟು ಚುರುಕಾಗುತ್ತದೆ. ಲಕ್ವ ಉಂಟಾಗುವ ಸಾಧ್ಯತೆ ಕ್ಷೀಣಿಸುತ್ತದೆ.
♦ ಎಲುಬುಗಳಿಗೆ ರಕ್ತ ಪರಿಚಲನೆ ಜಾಸ್ತಿಯಾಗಿ ಮೆದುಳು ಮತ್ತಷ್ಟು ದೃಢವಾಗುತ್ತದೆ ಮತ್ತು ಗಟ್ಟಿಯಾಗುತ್ತದೆ. ಟೊಳ್ಳು ಮೂಳೆ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
♦ ದೇಹದಲ್ಲಿನ ಅನಗತ್ಯ ಕೊಬ್ಬು ಕರಗಿ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಹೃದಯಾಘಾತವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
♦ ಮಾನಸಿಕ ಖಿನ್ನತೆಯಿಂದ ಬಳಲುವವರು ಕೂಡಾ ಖಿನ್ನತೆಯಿಂದ ಮುಕ್ತಿಯಾಗುವ ಎಲ್ಲಾ ಸಾಧ್ಯತೆ ಇದೆ.
♦ ದೇಹದ ಚಲನೆ ಮತ್ತು ಸ್ನಾಯುಗಳು ಹಾಗೂ ಎಲುಬುಗಳ ನಡುವೆ ಹೊಂದಾಣಿಕೆ ಹೆಚ್ಚಾಗುತ್ತದೆ.
♦ ನಿರಂತರ ಸೈಕ್ಲಿಂಗ್‌ನಿಂದ ಮಧುಮೇಹ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
♦ ದೈನಂದಿನ ನಿರಂತರ ಸೈಕ್ಲಿಂಗ್‌ನಿಂದ ದೇಹ ದಣಿದು ಉತ್ತಮ ನಿದ್ರೆ ಬರುತ್ತದೆ. ಉತ್ತಮ ನಿದ್ರೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ.
♦ ನಿರಂತರ ಸೈಕ್ಲಿಂಗ್‌ನಿಂದ ದೇಹಕ್ಕೆ ಪೂರಕವಾದ ರಸದೂತ ಉತ್ಪತ್ತಿಯಾಗಿ ವ್ಯಕ್ತಿಯಲ್ಲಿ ಧನಾತ್ಮಕ ಚಿಂತನೆ ಹೆಚ್ಚು ಬರುವಂತೆ ಮಾಡಿ, ವ್ಯಕ್ತಿಯ ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ನಿರಂತರ ಸೈಕ್ಲಿಂಗ್‌ನಿಂದ ದೇಹದಲ್ಲಿ ಅಡ್ರಿನಲಿನ್ ಮತ್ತು ಕಾರ್ಟಿಸೋಲ್ ರಸದೂತಗಳ ಸಮತೋಲನ ಉಂಟಾಗಿ ವ್ಯಕ್ತಿ ಮತ್ತಷ್ಟು ಕ್ರಿಯಾಶೀಲರಾಗುವಂತೆ ಪ್ರಚೋದಿಸುತ್ತದೆ.
♦ ನಿರಂತರ ದೈನಂದಿನ ಸೈಕ್ಲಿಂಗ್‌ನಿಂದಾಗಿ ವ್ಯಕ್ತಿಯ ಶ್ವಾಸಕೋಶ ಸಾಮರ್ಥ್ಯ ದುಪ್ಪಟ್ಟಾಗುತ್ತದೆ. ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಾದಾಗ ಆಸ್ತಮಾ ಅಥವಾ ಇನ್ನಾವುದೇ ಶ್ವಾಸಕೋಶಗಳ ಸಾಮರ್ಥ್ಯ ಕುಗ್ಗಿಸುವ ರೋಗಗಳು ಬಾರದಂತೆ ತಡೆಯುವ ಸಾಮರ್ಥ್ಯ ಸೈಕ್ಲಿಂಗ್‌ಗೆ ಇದೆ.
♦ ನಿರಂತರ ಸೈಕ್ಲಿಂಗ್‌ನಿಂದ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ. ದೇಹದಲ್ಲಿನ ಸ್ನಾಯುಗಳ ಸಾಂದ್ರತೆ ಹೆಚ್ಚಿಸಿ, ಕೊಬ್ಬು ಕರಗಿಸಿ, ಜೀವಕೋಶಗಳ ಜೈವಿಕ ಪ್ರಕ್ರಿಯೆಯನ್ನು ಕ್ರಿಯಾಶೀಲವಾಗಿಸುತ್ತದೆ. ಒಂದು ಗಂಟೆಗಳ ಸೈಕ್ಲಿಂಗ್‌ನಿಂದ ಕನಿಷ್ಠ ಪಕ್ಷ 300 ಕ್ಯಾಲರಿಗಳಷ್ಟು ಕೊಬ್ಬು ಕರಗಿಸಬಹುದು. ವಾರದಲ್ಲಿ 7 ಗಂಟೆಗಳ ಸೈಕ್ಲಿಂಗ್‌ನಿಂದ 2,000 ಕ್ಯಾಲರಿ ಕರಗಿಸಲು ಸಾಧ್ಯವಿದೆ. ನಿರಂತರ ಸೈಕ್ಲಿಂಗ್‌ನಿಂದ ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಸ್ಟ್ರೋಕ್ ಉಂಟಾಗುವ ಸಾಧ್ಯತೆ ಶೇ. 50ರಷ್ಟು ಕಡಿಮೆಯಾಗುತ್ತದೆ ಎಂದೂ ಸಂಶೋಧನೆಗಳಿಂದ ಸಾಬೀತಾಗಿದೆ. ಇನ್ನೊಂದು ಸಂಶೋಧನೆಗಳ ಪ್ರಕಾರ ನಿರಂತರ ಸೈಕ್ಲಿಂಗ್ ಮಾಡುವುದರಿಂದ ದೊಡ್ಡ ಕರುಳು ಮತ್ತು ಮೂಳೆಗಳ ಕ್ಯಾನ್ಸರ್ ಆಗುವ ಸಾಧ್ಯತೆ ಕ್ಷೀಣಿಸುತ್ತದೆ ಎಂದೂ ತಿಳಿದು ಬಂದಿದೆ. ಸೈಕ್ಲಿಂಗ್ ಮಾಡಿದಾಗ ದೇಹದ ಸಣ್ಣ ಸಣ್ಣ ಜೀವಕೋಶಗಳು ಕ್ರೀಯಾಶೀಲವಾಗುವುದೇ ಇದಕ್ಕೆ ಮೂಲ ಕಾರಣ ಎಂದೂ ಅಂದಾಜಿಸಲಾಗಿದೆ.
ಇಂದಿನ ಒತ್ತಡದ ಧಾವಂತದ ಬದುಕಿನಲ್ಲಿ ಪ್ರತಿಯೊಬ್ಬರದ್ದೂ ಬಹಳ ವೇಗದ ಜೀವನ. ದಿನದ 24 ಗಂಟೆಗಳ ದುಡಿತ, ದೈಹಿಕವಾಗಿ ದುಡಿತ ಇಲ್ಲದ್ದಿದ್ದರೂ ಮಾನಸಿಕವಾಗಿಯು ನಿರಂತರವಾಗಿ ಕೆಲಸದ ಬಗ್ಗೆ ಯೋಚನೆಯಿಂದಾಗಿ ರಸದೂತಗಳು ಏರುಪೇರಾಗಿ ಜೀವನ ಶೈಲಿಯ ರೋಗಗಳಾದ ಮಧುಮೇಹ ಹೃದಯಾಘಾತ, ಅಧಿಕ ರಕ್ತದೊತ್ತಡ, ಖಿನ್ನತೆ ಇತ್ಯಾದಿಗಳು ಸಣ್ಣ ಪ್ರಾಯದಲ್ಲಿಯೇ ಬರುತ್ತಿರುವುದು ಬಹಳ ಬೇಸರದ ವಿಚಾರ. ಈ ನಿಟ್ಟಿನಲ್ಲಿ ಖರ್ಚಿಲ್ಲದೆ ಪರಿಸರ ಮಾಲಿನ್ಯ ಮಾಡದೆ ಅತಿ ಸುಲಭವಾಗಿ ಈ ಎಲ್ಲಾ ರೋಗಗಳಿಂದ ಪಾರಾಗುವ ಉಪಾಯ ಎಂದರೆ ಸೈಕ್ಲಿಂಗ್ ಎಂದರೂ ತಪ್ಪಾಗಲಾರದು. ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿರುವ ಈ ವ್ಯಾವಹಾರಿಕ ಜಗತ್ತಿನಲ್ಲಿ ನಿಯಮಿತವಾಗಿ ಉತ್ತಮ ಆಹಾರ ಸೇವನೆ ಮತ್ತು ಶುದ್ಧವಾದ ಗಾಳಿಯನ್ನು ಸೇವನೆ ಮಾಡಲೂ ಜನರಿಗೆ ಸಮಯವಿಲ್ಲ. ದಿನದಲ್ಲಿ ಏನಿಲ್ಲವೆಂದರೂ 10ರಿಂದ 14 ಘಂಟೆಗಳ ಕಾಲ ಜನರು ಹವಾನಿಯಂತ್ರಿತ ಕೊಠಡಿಯೊಳಗೆ ಬಂದಿಯಾಗಿ ಹೊತ್ತಲ್ಲದ ಹೊತ್ತಲ್ಲಿ ಆಹಾರ ಸೇವಿಸಿ, ಹೊತ್ತಲ್ಲದ ಹೊತ್ತಲ್ಲಿ ಮಲಗುವುದನ್ನು ಮಾಡುತ್ತಿರುತ್ತಾರೆ. ಮಲಗಿದರೂ ನಿದ್ದೆ ಬಾರದಂತಹ ಪರಿಸ್ಥಿತಿ. ತಲೆಯೊಳಗೆ ಯಾವತ್ತು ಕೆಲಸದ್ದೇ ಧ್ಯಾನ ಜೊತೆಗೆ ಒತ್ತಡ ನಿವಾರಣೆಗೆಂದು ವಾರಾಂತ್ಯದಲ್ಲಿ ಮೋಜು ಮಸ್ತಿ, ಕುಡಿತ, ಧೂಮಪಾನ ಮತ್ತು ಸೂರ್ಯ ಉದಯಿಸುವವರೆಗೆ ಪಾರ್ಟಿ ಮಾಡಿ ಬಳಲಿದ ದೇಹವನ್ನು ಮತ್ತಷ್ಟು ಬಳಲಿಸುತ್ತಾರೆ. ಊಟ, ನಿದ್ದೆ, ವ್ಯಾಯಾಮ ಮಾಡದೆ ದೈಹಿಕ, ಜೈವಿಕ ಗಡಿಯಾರಕ್ಕೂ ಬಾಹ್ಯ ಜಗತ್ತಿನ ಸಮಯಕ್ಕೂ ಯಾವುದೇ ಹೊಂದಿಕೆಯಾಗದೆ ದೇಹ ನಿಧಾನವಾಗಿ ರೋಗ ರುಜಿನಗಳ ಹಂದರವಾಗಿ ಮಾರ್ಪಾಡಾಗುತ್ತದೆ. ಇವೆಲ್ಲವನ್ನು ತಡೆಯಲು ಮತ್ತು ಮನಸ್ಸನ್ನು ಉಲ್ಲಸಿತವಾಗಿಸುವ ಇರುವ ಸುಲಭ ದಾರಿ ಎಂದರೆ ಸೈಕ್ಲಿಂಗ್. ಬನ್ನಿ ಗೆಳೆಯರೆ ಇನ್ನೇಕೆ ತಡ ಮಾಡುತ್ತೀರಿ, ಇವತ್ತಿನಿಂದಲೇ ನಾವೆಲ್ಲಾ ಸೈಕ್ಲಿಂಗ್ ಮಾಡೋಣ ನಾವು ಆರೋಗ್ಯವಂತರಾಗಿ ಒಂದು ಸುಂದರ ಆರೋಗ್ಯವಂತ ಸುದೃಢ ಸಮಾಜ ನಿರ್ಮಾಣ ಮಾಡೋಣ. ಆದರಲ್ಲಿಯೇ ನಮ್ಮೆಲ್ಲರ ಒಳಿತು ಅಡಗಿದೆ.