ಥೈರಾಯ್ಡ್: ಮಿಥ್ಯೆಗಳು ಮತ್ತು ಸತ್ಯಗಳು
ಥೈರಾಯ್ಡ್ ನಮ್ಮ ಶರೀರದ ಪ್ರಮುಖ ಗ್ರಂಥಿ ಯಾಗಿದೆ. ಥೈರಾಯ್ಡ ರೋಗಿಗಳ ಪೈಕಿ ಸುಮಾರು ಶೇ.60ರಷ್ಟು ಜನರಿಗೆ ತಮಗೆ ಆ ರೋಗವಿದೆ ಎನ್ನುವುದು ಗೊತ್ತೇ ಇರುವುದಿಲ್ಲ. ಅಲ್ಲದೆ ಥೈರಾಯ್ಡ್ ರೋಗದ ಸುತ್ತ ಹುಟ್ಟಿಕೊಂಡಿರುವ ಹಲವಾರು ಮಿಥ್ಯೆಗಳು ಗೊಂದಲವನ್ನುಂಟು ಮಾಡುತ್ತವೆ ಮತ್ತು ರೋಗನಿರ್ಧಾರ ಹಾಗೂ ಚಿಕಿತ್ಸೆಯನ್ನು ವಿಳಂಬಿಸುತ್ತವೆ. ಇಲ್ಲಿವೆ ಅಂತಹ ಕೆಲವು ಮಿಥ್ಯೆಗಳ ಹಿಂದಿನ ಸತ್ಯಗಳು....
♦ ಥೈರಾಯ್ಡ್ ರೋಗವಿದ್ದರೆ ಅಯೊಡಿನ್ ಪೂರಕಗಳ ಸೇವನೆ ಅಗತ್ಯವಾಗಿದೆ
-ವೈದ್ಯರ ಸಲಹೆ ಪಡೆಯದೆ ಅಯೊಡಿನ್ ಪೂರಕಗಳನ್ನು ಸೇವಿಸಬಾರದು. ವ್ಯಕ್ತಿಯ ಥೈರಾಯ್ಡ್ ರೋಗಕ್ಕೆ ಅಯೊಡಿನ್ ಕೊರತೆಯು ಕಾರಣವಾಗಿರಬಹುದು ಅಥವಾ ಕಾರಣವಲ್ಲದಿರ ಬಹುದು. ಹೈಪರ್‌ಥೈರಾಯ್ಡಿಸಂ ಇರುವ ವ್ಯಕ್ತಿಯು ಅಯೊಡಿನ್ ಪೂರಕಗಳನ್ನು ಸೇವಿಸುವುದರಿಂದ ಸ್ಥಿತಿಯು ಇನ್ನಷ್ಟು ಹದಗೆಡಬಹುದು.
♦ ಥೈರಾಯ್ಡ್ ರೋಗವಿದ್ದರೆ ಕಣ್ಣುಗಳು ಉಬ್ಬಿಕೊಂಡಿರುತ್ತೆ
-ಇದು ಯಾವಾಗಲೂ ಸತ್ಯವಲ್ಲ. ಹೆಚ್ಚಾಗಿ ಹೈಪರ್‌ಥೈರಾಯಿಡಮ್‌ನ ಅತ್ಯಂತ ಸಾಮಾನ್ಯ ರೂಪವಾದ ಗ್ರೇವ್ಸ್ ಡಿಸೀಸ್‌ನಿಂದಾಗಿ ಕಣ್ಣುಗಳು ಉಬ್ಬಿಕೊಳ್ಳುತ್ತವೆ. ದ್ವಂದ್ವ ದೃಷ್ಟಿ, ಶುಷ್ಕತೆ ಮತ್ತು ಉಬ್ಬಿದ ಕಣ್ಣುಗುಡ್ಡೆಗಳು ಗ್ರೇವ್ಸ್ ಡಿಸೀಸ್‌ನೊಂದಿಗೆ ಗುರುತಿಸಿಕೊಂಡಿರುವ ಇತರ ಕಣ್ಣಿನ ಸಮಸ್ಯೆ ಗಳಾಗಿವೆ. ಧೂಮಪಾನವು ಗ್ರೇವ್ಸ್ ಡಿಸೀಸ್‌ಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುವುದರಿಂದ ಅದನ್ನು ವರ್ಜಿಸುವುದು ಒಳ್ಳೆಯದು.
♦ ಹೈಪೊಥೈರಾಯ್ಡ್ ರೋಗಿಗಳು ಕ್ಯಾಬೇಜ್, ಕಾಲಿಫ್ಲವರ್ ಇತ್ಯಾದಿಗಳನ್ನು ತಿನ್ನಬಾರದು
-ಥೈರಾಯ್ಡ್ ರೋಗಿಗಳು ಒಂದು ಮಿತಿಯೊಳಗೆ ಎಲ್ಲ ತರಕಾರಿಗಳನ್ನು ಸೇವಿಸಬಹುದು. ಕ್ಯಾಬೇಜ್, ಕಾಲಿಫ್ಲವರ್‌ಗಳನ್ನು ಮಿತ ಪ್ರಮಾಣದಲ್ಲಿ ಇತರ ತರಕಾರಿಗಳೊಂದಿಗೆ ಸೇರಿಸಿಕೊಂಡು ತಿನ್ನಬಹುದು. ಅಲ್ಲದೆ ತರಕಾರಿಗಳನ್ನು ಬೇಯಿಸುವಾಗ ಅವುಗಳ ಗಾಯ್ಟ್ರೋಜೆನಿಕ್ ಇಫೆಕ್ಟ್ ಅಥವಾ ಥೈರಾಯ್ಡ್ ಹಾರ್ಮೋನ್‌ಗಳ ಉತ್ಪಾದನೆಗೆ ವ್ಯತ್ಯಯವನ್ನುಂಟು ಮಾಡುವ ಸಾಮರ್ಥ್ಯ ನಷ್ಟಗೊಳ್ಳುತ್ತದೆ. ಆದ್ದರಿಂದ ಥೈರಾಯ್ಡ್ ರೋಗಿಗಳು ತರಕಾರಿಗಳನ್ನು ಹಸಿಯಾಗಿ ತಿನ್ನದೆ ಬೇಯಿಸಿಯೇ ತಿನ್ನಬೇಕು.
♦ ಹೈಪೊಥೈರಾಯ್ಡ್ ರೋಗಿಗಳು ಗ್ಲುಟೆನ್‌ಮುಕ್ತ ಆಹಾರವನ್ನೇ ಸೇವಿಸಬೇಕು
ಸ್ವರಕ್ಷಿತ ಥೈರಾಯ್ಡ್ ರೋಗವಿರುವವರು ಅಥವಾ ಥೈರಾಯ್ಡ್ನೊಂದಿಗೆ ಗುರುತಿಸಿಕೊಂಡಿರುವ ಸೆಲಿಯಾಕ್ ಡಿಸೀಸ್‌ನಂತಹ ಇತರ ಸ್ವರಕ್ಷಿತ ರೋಗಗಳಿರುವವರು ಮಾತ್ರ ಗ್ಲುಟೆನ್‌ಮುಕ್ತ ಆಹಾರವನ್ನು ಸೇವಿಸಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.
♦ ಥೈರಾಯ್ಡ್ ಗಂಟು ವ್ಯಕ್ತಿಗೆ ಕ್ಯಾನ್ಸರ್‌ನ್ನು ಉಂಟು ಮಾಡುತ್ತದೆ.
-ಥೈರಾಯ್ಡ್ ಗಂಟು ಉಂಟಾದ ಮಾತ್ರಕ್ಕೆ ಅದು ಕ್ಯಾನ್ಸರ್‌ಕಾರಕ ಎಂದರ್ಥವಲ್ಲ. ಇಂತಹ ಹೆಚ್ಚಿನ ಗಂಟುಗಳು ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಶೇ.5ಕ್ಕೂ ಕಡಿಮೆ ಥೈರಾಯ್ಡ್ ಗಂಟುಗಳು ಕ್ಯಾನ್ಸರ್ ಆಗಿರಬಹುದು.
♦ ಹೈಪರ್‌ಥೈರಾಯ್ಡಿಸಂ ಇದ್ದರೆ ದೇಹತೂಕವನ್ನು ಕಡಿಮೆ ಮಾಡಿಕೊಳ್ಳುವುದು ಅಸಾಧ್ಯ.
-ಸತ್ಯವೇನೆಂದರೆ 40 ವರ್ಷ ಪ್ರಾಯದ ಆಸು ಪಾಸಿನಲ್ಲಿರುವ ಪ್ರತಿಯೊಬ್ಬರಿಗೂ ದೇಹತೂಕವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟವೇ ಆಗಿರುತ್ತದೆ. ಈ ವಯಸ್ಸಿನಲ್ಲಿ ಚಯಾಪಚಯ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ ಮತ್ತು ವ್ಯಕ್ತಿಯ ದೇಹತೂಕವು ಹೆಚ್ಚುತ್ತಿರುತ್ತದೆ. ಸೂಕ್ತ ಥೈರಾಯ್ಡ್ ಚಿಕಿತ್ಸೆ ಪಡೆದು ಕೊಳ್ಳುತ್ತಿರುವವರು ಮತ್ತು ದೇಹತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವ ಥೈರಾಯ್ಡ್ ಸಮಸ್ಯೆಯಿಲ್ಲದವರೂ ಇದೇ ಸವಾಲನ್ನು ಎದುರಿಸುತ್ತಿರುತ್ತಾರೆ.
♦ ಗರ್ಭಿಣಿಯರು ಥೈರಾಯ್ಡ್ ಔಷಧಿಗಳನ್ನು ಸೇವಿಸಬಾರದು
ಇದು ನಿಜವಲ್ಲ, ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ರೋಗವು ಗರ್ಭಪಾತ, ಪ್ರೀಕ್ಲಾಂಪ್ಸಿಯಾ ಅಥವಾ ಬಸಿರಿನ ನಂಜು, ಅವಧಿಪೂರ್ವ ಹೆರಿಗೆ, ಭ್ರೂಣದ ಬೆಳವಣಿಗೆಗೆ ತೊಂದರೆ ಸೇರಿದಂತೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಥೈರಾಯ್ಡ್ ಸಮಸ್ಯೆಯನ್ನು ಹೊಂದಿರುವ ಗರ್ಭಿಣಿಯರು ವೈದ್ಯರ ಸಲಹೆಯ ಮೇರೆಗೆ ಸೂಕ್ತ ಮತ್ತು ಸುರಕ್ಷಿತವಾದ ಥೈರಾಯ್ಡ್ ಔಷಧಿಗಳನ್ನು ಸೇವಿಸಬೇಕು.
♦ ಗಳಗಂಡ ಮತ್ತು ಥೈರಾಯ್ಡ್ ಗಂಟು ಇವೆರಡೂ ಒಂದೇ ಆಗಿವೆ.
-ಗಾಯ್ಟರ್ ಅಥವಾ ಗಳಗಂಡ ಮತ್ತು ಥೈರಾಯ್ಡ್ ಗಂಟು ಇವೆರಡೂ ಒಂದೇ ಅಲ್ಲ. ಥೈರಾಯ್ಡ್ ಗಂಟು ಥೈರಾಯ್ಡ್ ಗ್ರಂಥಿಯಲ್ಲಿನ ಗಡ್ಡೆಯಾಗಿದ್ದರೆ ಗಳಗಂಡವು ಥೈರಾಯ್ಡ್ ಗ್ರಂಥಿಯ ಒಟ್ಟಾರೆ ಗಾತ್ರದ ಹಿಗ್ಗುವಿಕೆಯಾಗಿದೆ. ಒಂದು ಅಥವಾ ಎರಡು ಗಂಟುಗಳು ಗಳಗಂಡಕ್ಕೆ ಕಾರಣವಾಗಬಹುದು.
♦ ಟಿಎಸ್‌ಎಚ್ ಮಟ್ಟ ಅಧಿಕವಾಗಿದ್ದರೆ ಥೈರಾಯ್ಡ್ ರೋಗವಿದೆ ಎಂದು ಅರ್ಥ
-ಕೇವಲ ಅಧಿಕ ಮಾತ್ರವಲ್ಲ, ಥೈರಾಯ್ಡ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (ಟಿಎಸ್‌ಎಚ್) ಮಟ್ಟ ಕಡಿಮೆಯಾಗಿದ್ದರೂ ಥೈರಾಯ್ಡ್ ರೋಗವನ್ನು ಸೂಚಿಸುತ್ತದೆ. ಥೈರಾಯ್ಡ್ ದೋಷವನ್ನು ಪತ್ತೆ ಹಚ್ಚಲು ಥೈರಾಯ್ಡ್ ಸ್ಟಿಮ್ಯುಲೇಟಿಂಗ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಧಿಕ ಟಿಎಸ್‌ಎಚ್ ಮಟ್ಟವು ಸಾಕಷ್ಟು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಅಸಮರ್ಥವಾಗಿದೆ (ಹೈಪೊಥೈರಾಯ್ಡಿಸಂ) ಎನ್ನುವುದನ್ನು ಸೂಚಿಸುತ್ತದೆ. ಥೈರಾಯ್ಡ್ ಹಾರ್ಮೋನ್ ಅತಿಯಾಗಿ ಉತ್ಪಾದನೆಯಾಗುತ್ತಿದ್ದರೆ (ಹೈಪರ್‌ಥೈರಾಯ್ಡಿಸಂ) ಟಿಎಸ್‌ಎಚ್ ಮಟ್ಟವು ಶೂನ್ಯಕ್ಕೂ ಇಳಿಯಬಹುದು.