varthabharthi


ಭಿನ್ನರುಚಿ

ಸೊಪ್ಪುಗಳ ಜೀವಸಾಂಗತ್ಯ

ವಾರ್ತಾ ಭಾರತಿ : 2 Mar, 2020

ಸೊಪ್ಪುಎಂದಾಗಲೆಲ್ಲ ನನ್ನ ನೆನಪು ಅಜ್ಜಿಯ ‘ಕೀರೆ ಮಡಿ’ ಯತ್ತ ಹೊರಳುತ್ತದೆ. ಮಡಿ-ಎನ್ನುವುದು ಬಯಲು ಸೀಮೆಯ ಜನರ ಸಣ್ಣ ಕೈದೋಟ. ಅದೂ ವಿಶೇಷವಾಗಿ ಸೊಪ್ಪುಬೆಳೆಯಲೆಂದೇ ಮಾಡಿದ ಪಾತಿಗಳಿಗೇ ನಿಗದಿತವಾಗಿ ‘ಮಡಿ’ ಎನ್ನುವುದು. ಈ ಮಡಿಗಳನ್ನು ಚೌಕಾಕಾರದ ಹಲವು ಪಾತಿಗಳಾಗಿ ವಿಂಗಡಿಸಿ ಕೊಟ್ಟಿಗೆ ಗೊಬ್ಬರ ಬೆರೆಸಿ ಸಿದ್ಧ ಮಾಡಲಾಗುತ್ತದೆ. ನಂತರ ಹನಿ ಹನಿಯಾಗಿ ನೀರು ಚಿಮುಕಿಸಿ ಅತೀ ಸಣ್ಣ ಗಾತ್ರದ ಹರಳಿನಂತಹ ಬೀಜಗಳನ್ನು ಬಿತ್ತಿ ಯಾವುದೇ ಕೋಳಿ ಅಥವಾ ಹಕ್ಕಿಗಳು ಹೆಕ್ಕದಂತೆ ಸುತ್ತಲೂ ಬಟ್ಟೆ ಕಟ್ಟಿ ಸಂರಕ್ಷಿಸಿ ಹಲವು ವಾರ ನಿಗಾ ಇಟ್ಟು ನೀರುಣಿಸಿ ಬೆಳೆಸಬೇಕು.

ಮನುಷ್ಯ ವಿಕಾಸದುದ್ದಕೂ ಅವನೊಂದಿಗೆ ಬಂದ ಒಂದೇ ಆಹಾರ ಪದಾರ್ಥ ಅಂದರೆ ‘ಸೊಪ್ಪು’. ಲೋಕದಲ್ಲಿ ಅದೆಷ್ಟು ಬಗೆಯ ಸೊಪ್ಪುಗಳಿವೆಯೋ ಲೆಕ್ಕ ಹಾಕುವುದು ಕಷ್ಟ. ಆಯಾ ಭೌಗೋಳಿಕ ಪ್ರದೇಶದಲ್ಲಿ ಬೆಳೆಯುವ ಮತ್ತು ಅಲ್ಲಿನ ರುಚಿ, ಆಹಾರ ಸಂಸ್ಕೃತಿಗೆ ಸಂಬಂಧಿಸಿದಂತೆ ಬೇರೆ ಬೇರೆ ತರಹದ ಸೊಪ್ಪುಗಳು ಅಡುಗೆಗೆ ಮತ್ತು ಔಷಧಕ್ಕೆ ಬಳಕೆಯಾಗುತ್ತವೆ. ಕ್ಯಾಲ್ಸಿಯಂ, ಕಬ್ಬಿಣಾಂಶ, ಖನಿಜಾಂಶಗಳು, ಪ್ರೊಟೀನ್ ಮತ್ತು ಮಿಟಮಿನ್‌ಗಳು ಸೊಪ್ಪಿನಲ್ಲಿ ಬೇಕಾದಷ್ಟು ದೊರಕುತ್ತವೆ. ಈ ವೈವಿಧ್ಯಪೂರ್ಣ ಸೊಪ್ಪುಗಳು ಎಲ್ಲ ಕಾಲದಲ್ಲೂ ನಮ್ಮ ದೈಹಿಕ ಮತ್ತು ಪರಿಸರದ ಸ್ವಾಸ್ಥ್ಯವನ್ನು ಕಾಪಾಡಿವೆ. ಉಳಿದ ಆಹಾರದ ಬೆಳೆಗಳು ಸಾಗುವಳಿ ಮತ್ತು ಇಳುವಳಿ ಕಾರಣಗಳಿಂದ ಹಲವು ಬಗೆಯ ಅಸಮತೋಲನಗಳಿಗೆ ಕಾರಣವಾಗಿದ್ದರೆ ಸೊಪ್ಪುಮಾತ್ರ ಯಾವ ಅಪವಾದಗಳಿಗೂ ಸಿಲುಕದೆ ಸುಸ್ಥಿರವಾದ ಬದುಕಿನ ಆಶಾಕಿರಣವಾಗಿ ನಮ್ಮ ಜೊತೆಗಿದೆ. ಎಷ್ಟರ ಮಟ್ಟಿಗೆ ಎಂದರೆ ಕ್ಷಾಮ ಡಾಮರಗಳ ಕಾಲದಲ್ಲೂ ಜನ ಬದುಕಿನ ಆಹಾರವಾಗಿ ಒದಗಿದ್ದು ಮಾತ್ರ ಸೊಪ್ಪು. ಯಾವ ದೇವರೂ, ಸರಕಾರವೂ ಕಾಪಾಡಲು ಬರಲಿಲ್ಲ. ಈಗಲೂ ವಯೋವೃದ್ಧರು ಆ ಕಾಲದ ಬರದಲ್ಲಿ ಬರೀ ‘ಸೊಪ್ಪು’ ತಿಂದು ಬದುಕಿದ್ದನ್ನು ನೆನೆದುಕೊಳ್ಳುವ ಪರಿಯನ್ನು ಒಮ್ಮೆ ನಾವು ಕೇಳಬೇಕು. ಬಹುಶಃ ಈ ಕಾಲವು ಆಹಾರದ ಮಿತಿಮೀರಿದ ವಿಲಾಸ ಮತ್ತು ವೈಭವಕ್ಕೆ ತುತ್ತಾಗಿ ಅದರಲ್ಲಿದ್ದ ಆರೋಗ್ಯ ಮತ್ತು ಔಷಧದ ಗುಣಗಳನ್ನು ಕಳೆದುಕೊಂಡು ಅದು ವಿಷವಾಗಿ ಪರಿವರ್ತಿತವಾಗಿದೆ. ತರಕಾರಿ, ಕಾಳು ಮತ್ತು ಮಾಂಸ ಪದಾರ್ಥಗಳಂತೂ ಅತಿಯಾದ ಕೀಟನಾಶಕಗಳ ಸಿಂಪಡನೆಯಿಂದ ‘ನಿಧಾನ ವಿಷ’ಗಳಾಗಿ ಪರಿವರ್ತಿತವಾಗಿವೆ. ನೈಸರ್ಗಿಕವಾದ ಬೆಳವಣಿಗೆ ನಿಂತು ಕೃತಕವಾದ ಪ್ರಯೋಗಶಾಲೆಯ ಬೆಳವಣಿಗೆಗಳು ತೀರ ಕೆಟ್ಟ ಸ್ಥಿತಿಯವರೆಗೆ ಬೆಳೆದು ನಿಂತಿವೆ. ನಮ್ಮ ಹಿತ್ತಿಲು ಮತ್ತು ತೋಟಗಳಲ್ಲಿ ಬೆಳೆದು ಬಳಸುತ್ತಿದ್ದ ಸೊಪ್ಪುಗಳು ಕೂಡ ಇವತ್ತು ಕೃಷಿ ಮಾರುಕಟ್ಟೆಯ ಸರಕಾಗಿವೆ. ಆದಾಗ್ಯೂ ಯಾವ ಕೃಷಿ ಉತ್ಪನ್ನಕ್ಕೂ ಇಂದು ಶ್ರಮಕ್ಕೆ ತಕ್ಕ ಬೆಲೆ ಸಿಗುವುದಿಲ್ಲ, ಆದರೆ ಅದರಿಂದ ಮಾಡಿದ ಅಡುಗೆ ಮಾತ್ರ ರುಚಿಯಾಗಿರುತ್ತದೆ.

ಸೊಪ್ಪುಎಂದಾಗಲೆಲ್ಲ ನನ್ನ ನೆನಪು ಅಜ್ಜಿಯ ‘ಕೀರೆ ಮಡಿ’ ಯತ್ತ ಹೊರಳುತ್ತದೆ. ಮಡಿ-ಎನ್ನುವುದು ಬಯಲು ಸೀಮೆಯ ಜನರ ಸಣ್ಣ ಕೈದೋಟ. ಅದೂ ವಿಶೇಷವಾಗಿ ಸೊಪ್ಪುಬೆಳೆಯಲೆಂದೇ ಮಾಡಿದ ಪಾತಿಗಳಿಗೇ ನಿಗದಿತವಾಗಿ ‘ಮಡಿ’ ಎನ್ನುವುದು. ಈ ಮಡಿಗಳನ್ನು ಚೌಕಾಕಾರದ ಹಲವು ಪಾತಿಗಳಾಗಿ ವಿಂಗಡಿಸಿ ಕೊಟ್ಟಿಗೆ ಗೊಬ್ಬರ ಬೆರೆಸಿ ಸಿದ್ಧ ಮಾಡಲಾಗುತ್ತದೆ. ನಂತರ ಹನಿ ಹನಿಯಾಗಿ ನೀರು ಚಿಮುಕಿಸಿ ಅತೀ ಸಣ್ಣ ಗಾತ್ರದ ಹರಳಿನಂತಹ ಬೀಜಗಳನ್ನು ಬಿತ್ತಿ ಯಾವುದೇ ಕೋಳಿ ಅಥವಾ ಹಕ್ಕಿಗಳು ಹೆಕ್ಕದಂತೆ ಸುತ್ತಲೂ ಬಟ್ಟೆ ಕಟ್ಟಿ ಸಂರಕ್ಷಿಸಿ ಹಲವು ವಾರ ನಿಗಾ ಇಟ್ಟು ನೀರುಣಿಸಿ ಬೆಳೆಸಬೇಕು. ಇದರ ಜೊತೆಗೇ ದಂಟಿನ ಸೊಪ್ಪಿನ ಬೀಜಗಳನ್ನು ಕೂಡ ಬಿತ್ತುತ್ತಿದ್ದೆವು. ನಮ್ಮ ದಕ್ಷಿಣ ಭಾಗದಲ್ಲಿ ‘ಕೀರೆಸೊಪ್ಪು’ ಅತ್ಯಂತ ಜನಪ್ರಿಯವಾದ ಸೊಪ್ಪು. ಇವತ್ತಿಗೂ ವಾರದಲ್ಲಿ ಕಡಿಮೆ ಎಂದರೂ ಎರಡು ದಿನ ಕೀರೆಸೊಪ್ಪಿನ ಉಪ್ಸಾರು ಮತ್ತು ರಾಗಿ ಮುದ್ದೆಯ ಊಟ ಖಾತ್ರಿ. ಈ ಸೊಪ್ಪಿನ ಜೊತೆಗೆ ಹುರಿದ ಅಥವಾ ನೀರಲ್ಲಿ ನೆನೆಸಿದ ಒಣ ಹುರಳಿಕಾಳು, ಅವರೇಕಾಳು, ತಡಗುಣಿ ಕಾಳುಗಳನ್ನು ಅಥವಾ ಇವೇ ಹಸಿ ಕಾಳುಗಳನ್ನು ಬಳಸಿ ರುಚಿಗಟ್ಟಾದ ಉಪ್ಸಾರು ಮಾಡಿ ಚಪ್ಪರಿಸುವರು. ದಂಟು ಬಹುತೇಕ ಕೀರೆ ಸೊಪ್ಪಿನ ಹಾಗೆಯೇ ಕಂಡರೂ ಅದು ದೊಡ್ಡ ಗಿಡದ ಮಟ್ಟಿಗೆ ಬೆಳೆಯುತ್ತಿತ್ತು. ಅಗಲವಾದ ಎಲೆಗಳು, ದಪ್ಪದಪ್ಪಕಾಂಡ.. ಎಲೆಯನ್ನು ಬೇರ್ಪಡಿಸಿ, ಕಾಂಡದ ನಾರು ತೆಗೆದು ಬೇಯಿಸಿ ಕಾಯಿತುರಿ ಮತ್ತು ಈರುಳ್ಳಿಯ ಒಗ್ಗರಣೆ ಕೊಟ್ಟರೆ ದಂಟು ಬೆಣ್ಣೆಯ ಹಾಗೆ ಬಾಯಲ್ಲಿ ಕರಗುತ್ತಿತ್ತು. ಕೀರೆ ಸೊಪ್ಪಂತೂ ಯಾವುದೇ ಕಾಳು, ಪಲ್ಲೆಯ ಜೊತೆಗೆ ಹೊಂದಿಕೊಂಡು ಬೆಂದು ರುಚಿಯಾಗಿಬಿಡುತ್ತಿತ್ತು. ಇವೆರಡು ನಾವೇ ಹೆಚ್ಚು ಬೆಳೆದು ತಿನ್ನುತ್ತಿದ್ದ ಸೊಪ್ಪುಗಳು. ಈ ಕೀರೆ ಮಡಿಗಳಲ್ಲಿ ಇನ್ನೊಂದು ಬಗೆಯ ಸ್ವಾರಸ್ಯ ಕಥನವಿದೆ. ಇವು ಎಷ್ಟೋ ದಾಯಾದಿಗಳ ನಡುವೆ ಭಾಗವಾಗುವ ಆಸ್ತಿಯ ಹಾಗೆ ಬಂಧುಗಳು ಮತ್ತು ಸ್ನೇಹಿತರ ನಡುವೆ ಭಾಗವಾಗಿರುತ್ತಿದ್ದುವು. ಆಯಾ ಮಡಿಗಳ ಸೊಪ್ಪುಅವರಿಗೆ ಮಾತ್ರ ಸೇರಿತ್ತು. ಒಂದೊಂದು ವಾರ ಒಬ್ಬರು ನೀರುಣಿಸುವ ಕಾಯಕ ಹೊರುತ್ತಿದ್ದರು. ಮನೆಗೆ ಸೊಪ್ಪು ಸಾಕಾದಾಗ ಅವುಗಳನ್ನು ನೆರೆಹೊರೆಗೆ ಕೊಡುತ್ತಿದ್ದರು. ಅವರು ಬೆಳೆದ ಬೇರೇನೋ ಕಾಳು ಅಥವಾ ಎಳ್ಳು ಇವರಿಗೆ ವಿನಿಮಯವಾಗುತ್ತಿತ್ತು. ಇಂತಹ ಕೆಲವು ಸಂದರ್ಭಗಳಲ್ಲಿ ದೊಡ್ಡ ದೊಡ್ಡ ಜಗಳಗಳಾಗಿ ಮನೆ ಮನಸ್ಸುಗಳು ಮುರಿದುದ್ದುಂಟು. ಕೀರೆ ದಂಟಿನ ಜೊತೆಗೆ ಕಿಲಕೀರೆ ಎಂಬ ಇನ್ನೊಂದು ಬಗೆಯ ಸೊಪ್ಪು ಕೂಡ ಇದೆ. ಈ ಮೂರೂ ನೊೀಡಲು ಒಂದೇ ಬಗೆಯಲ್ಲಿ ಕಾಣುತ್ತವೆ.

ಕೀರೆ ಬಿಟ್ಟರೆ ಅತಿ ಹೆಚ್ಚು ಬಳಕೆ ಹೊನಗೊನೆ ಸೊಪ್ಪಿನದು. ಇದನ್ನು ಉದ್ದೇಶಪೂರ್ವಕವಾಗಿ ಬೆಳೆಯಲಾಗದು. ಯಾರು ಬೆಳೆದಿದ್ದು ನನಗೂ ನೆನೆಪಿಲ್ಲ. ಗದ್ದೆಯ ತೆವರುಗಳಲ್ಲಿ ಕೆರೆ ಬಯಲಿನಲ್ಲಿ ತೇವಾಂಶವಿರುವ ಜಾಗಗಳಲ್ಲಿ ನೆಲದ ಮೇಲೆ ಪದರುಪದರಾಗಿ ಹರಡಿಕೊಂಡು ಬೆಳೆವ ಬಳ್ಳಿ. ಗದ್ದೆಯ ಬಳಿಗೆ ಹೋದಾಗ ಕಿತ್ತು ಮಡಿಲಿಗೆ ತುಂಬಿಸಿಕೊಂಡು ಬಂದು ಬೇರು-ನಾರುಗಳ ಬಿಡಿಸಿ ಮಣ್ಣು ಅಂಟುಗಳ ಚೆನ್ನಾಗಿ ತೊಳೆದು ಸಣ್ಣಗೆ ಹಚ್ಚಿ ಉಪ್ಸಾರು ಅಥವಾ ಬಸ್ಸಾರು ಮಾಡಿ ಪಲ್ಯ ಮಾಡಿದ್ರೆ ಅದರ ರುಚಿಗೆ ಸಾಟಿಯಿಲ್ಲ. ಹರಿವೆ ಸೊಪ್ಪುಮತ್ತು ಅಣ್ಣೆ ಸೊಪ್ಪುಗಳು ಈ ಪಟ್ಟಿಯಲ್ಲೇ ಬರುತ್ತವೆ. ದಕ್ಷಿಣ ಕರ್ನಾಟಕದಲ್ಲಿ ಉಪ್ಸಾರು, ಬಸ್ಸಾರುಗಳನ್ನು ಹೆಚ್ಚು ಹೆಚ್ಚು ತರಕಾರಿ, ಕಾಳು ಮತ್ತು ಸೊಪ್ಪುಗಳಿಂದ ಮಾಡುತ್ತಾರೆ. ಆದರೆ ಸೊಪ್ಪಿಗೇ ಸೀಮಿತವಾದ ಸಾರು ಎಂದರೆ ‘ಮಸೊಪ್ಪಿನ ಸಾರು’ ಅರ್ಥಾತ್ ಮಸೆದ ಸೊಪ್ಪಿನ ಸಾರು. ಕೀರೆ ಮಡಿಯಲ್ಲಿ ಸಣ್ಣದಾಗಿ ಸಬ್ಬಸಿಗೆ, ಮೆಂತ್ಯೆ, ಪಾಲಕ್‌ಗಳನ್ನೂ ಬೆಳೆಯುತ್ತಾರೆ. ಆದರೆ ಈಗ್ಗೆ ಹತ್ತಾರು ವರ್ಷಗಳಿಂದ ಇವೆಲ್ಲವೂ ಮಾರುಕಟ್ಟೆಯಲ್ಲಿ ಆರಾಮಾಗಿ ದಂಡಿಯಾಗಿ ಸಿಗುತ್ತವೆ. ಇವುಗಳ ಜೊತೆಗೆ ಕಾಡುಜಾತಿಯ ಗಣಕೆ ಸೊಪ್ಪು, ಕುಂಬಳದ ಎಳೆ ಚಿಗುರು, ಹರಿವೆ ಸೊಪ್ಪು, ಇನ್ನು ಹಲವಾರು ತರಹದ ಸೊಪ್ಪುಗಳನ್ನು (ನುಗ್ಗೆ ತರಹದ ಒಗರು ಸೊಪ್ಪುಗಳನ್ನು ಹೊರತು ಪಡಿಸಿ) ಹದವಾಗಿ ತೊಗರಿಬೇಳೆಯೊಂದಿಗೆ ಬೇಯಿಸಿ ಒರಳಿನಲ್ಲಿ ನುಣ್ಣಗೆ ರುಬ್ಬಿ ನಂತರ ಆಲೂಗಡ್ಡೆ, ಬದನೆಕಾಯಿ ಜೊತೆಗೆ ಬೇಯಿಸಿ, ಸಾಸುವೆ ಒಗ್ಗರಣೆ ಹಾಕುವರು. ಹಲವು ಸಲ ಇದರ ಜೊತೆಗೆ ಸಣ್ಣ ಒಣಗಿದ ಸಿಗಡಿ ಅಥವಾ ಕರಿಮೀನು ಕೂಡ ಬಳಸುವರು. ಆ ಘಮವೇ ಚೆಂದ.

ನುಗ್ಗೆಯಂತೂ ಮನೆ ಮುಂದಿನ ಮತ್ತೊಂದು ಕಲ್ಪವೃಕ್ಷ. ನಮ್ಮ ಹಳ್ಳಿ ಮತ್ತು ನಗರಗಳ ಮನೆ ಮನೆಯ ಮುಂದೆ ಒಂದು ನುಗ್ಗೆ ಮರವಿದ್ದೇ ಇರುತ್ತದೆ. ವಾರದಲ್ಲಿ ಒಮ್ಮೆಯಾದರೂ ನುಗ್ಗೆ ಸೊಪ್ಪಿನ ಪಲ್ಯ ಅಥವಾ ನುಗ್ಗೆ ಸೊಪ್ಪಿನ ಜೊತೆಗೆ ಹುರಿದ ಮೊಟ್ಟೆ ಪಲ್ಯ ಗ್ಯಾರಂಟಿ. ನುಗ್ಗೆಯ ಹೂವು ಕೂಡ ಪಲ್ಯಕ್ಕೆ ಬಳಸಲಾಗುತ್ತೆ. ನುಗ್ಗೆಕಾಯಿ ಒಂದು ಋತುವಿಗೆ ಸೀಮಿತವಾಗಿದ್ದರೆ ಸೊಪ್ಪುಮಾತ್ರ ಸಾರ್ವಕಾಲಿಕ ಲಭ್ಯತೆಯಿಂದ ನಮ್ಮ ಜನರ ಮನಸ್ಸು ಗೆದ್ದಿದೆ. ಈ ಸೊಪ್ಪನ್ನು ಬೋಂಡಾ ಮತ್ತು ಪೋಡಗಳಲ್ಲಿ ಕೂಡ ಬಳಸುವರು.

ಈಚೆಗೆ ನಮ್ಮಲ್ಲೂ ಬಸಳೆ ಬಳಸುವುದು ರೂಢಿಗೆ ಬಂದಿದೆ. ಆದರೆ ಮಲೆನಾಡಿನಷ್ಟು ಬಳಕೆ ಇಲ್ಲ. ಮಲೆನಾಡಿಗರಂತೂ ಅಡುಗೆಯಲ್ಲಿ ಸೊಪ್ಪುಬಳಸುವಲ್ಲಿ ವೈವಿಧ್ಯಪೂರ್ಣರು. ಸೊಪ್ಪಿನ ಸಾರು ಜೊತೆಗೆ ಹಲವರು ಕಾಡುತಳಿಯ ಸೊಪ್ಪಿನ ಕುಡಿಗಳಿಂದ ತಂಬುಳಿ, ಹಸಾಳೆಗಳನ್ನು ಮಾಡುವರು, ಕೆಸುವಿನ ಎಲೆಯಿಂದ ಪತ್ರೊಡೆ ಮತ್ತು ಗೆಡ್ಡೆಯಿಂದ ಪಲ್ಯಗಳನ್ನು ಮಾಡುವರು. ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿಯ ಜೊತೆಗೆ ಪುಂಡಿ ಸೊಪ್ಪಿನ ಪಲ್ಯ, ಅಗಸೆ ಸೊಪ್ಪಿನ ಪಲ್ಯ ಮತ್ತು ಮೆಂತ್ಯೆ ಸೊಪ್ಪಿನ ಪಲ್ಯ ಕೊಡುವುದು ಸಾಮಾನ್ಯ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಮತ್ತು ದಕ್ಷಿಣದ ಬಯಲು ಸೀಮೆ ಮುಂತಾಗಿ ಹಲವು ಭೌಗೋಳಿಕ ಪ್ರದೇಶಗಳಲ್ಲಿ ಅಲ್ಲಿನ ಲಭ್ಯತೆ, ಅಗತ್ಯ ಮತ್ತು ಅಡುಗೆಯ ಕ್ರಮಗಳ ಮೇಲೆ ನೂರಾರು ಸೊಪ್ಪುಗಳು ಈ ಕ್ಷಣಕ್ಕೂ ಕೂಡ ಅಡುಗೆಯಾಗಿ ಸಿದ್ಧವಾಗುತ್ತಿವೆ. ಆದರೆ ನಮ್ಮೂರ ಮಡಿಗಳು ಕಾಣೆಯಾಗಿ ಬಹಳ ಕಾಲವಾಗಿದೆ. ಈಗ ಎಕರೆ ಪ್ರದೇಶದಲ್ಲಿ ಕೀರೆ ಮತ್ತಿತ್ಯಾದಿ ಸೊಪ್ಪುಗಳನ್ನು ಕೊಳಚೆ ನೀರು, ಕೀಟನಾಶಕಗಳನ್ನು ಬಳಸಿ ಬೆಳೆದು ತಂದು ಮಾರುವ ಸ್ಥಿತಿ ಬಂದೊಗಿದೆ. ಆಧುನಿಕತೆಯ ಧಾವಂತವು ಸುಮ್ಮನಿರುವ ಸೊಪ್ಪನ್ನು ಕೂಡ ಬಿಡಲಿಲ್ಲ. ನಗರಗಳಲ್ಲಿ ಈಚೆಗೆ ಮಾರಲು ಮೂಲಂಗಿ ಜೊತೆಗೆ ಅದರ ಸೊಪ್ಪುಹಾಗೆ ಬಿಟ್ಟಿರುತ್ತಾರೆ, ಅದನ್ನು ಖುಷಿಯಿಂದ ತಂದು ಸಾರು ಮಾಡಿ, ಸೊಪ್ಪನ್ನು ಪಲ್ಯ ಮಾಡುತ್ತೇವೆ. ಹೊನೆಗೊನೆಯು ಕೂಡ ಈಗ ಮೂಟೆಗಳಲ್ಲಿ ಮಾರುಕಟ್ಟೆಗೆ ಬರುತ್ತಿದೆ. ನಮ್ಮ ಹಿತ್ತಿಲ ಜಗತ್ತು ಕ್ರಮೇಣ ಮರೆತುಹೋಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)