ಕೊರೋನ ವೈರಸ್ ವದಂತಿ: ಸಂಕಷ್ಟಕ್ಕೀಡಾದ ಕೋಳಿ ಉದ್ಯಮ
ಮಂಗಳೂರು, ಮಾ.2: ಮೀನುಗಳ ಅಲಭ್ಯತೆಯಿಂದ ಮಾರುಕಟ್ಟೆಯಲ್ಲಿ ತಾಜಾ ಮೀನುಗಳು ಯಥೇಚ್ಛವಾಗಿ ಲಭಿಸದ ಕಾರಣ ಮೀನಿನ ದರ ಗಗನಕ್ಕೇರಿದೆ. ಇತ್ತ ಕೋಳಿ ದರ ಪಾತಾಳಕ್ಕಿಳಿದಿದ್ದರೂ ಕೋಳಿ ಅಥವಾ ಕೋಳಿ ಮಾಂಸವನ್ನು ಖರೀದಿಸುವವರಿಲ್ಲ. ಕೋಳಿಗೆ ಕೊರೋನ ವೈರಸ್ ಎಂಬ ವದಂತಿಯೇ ಇದಕ್ಕೆ ಕಾರಣವಾಗಿದೆ. ಇದರಿಂದ ಕೋಳಿ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದ್ದು, ತಿಂಗಳಾದರೂ ಕೂಡ ಚೇತರಿಕೆ ಕಂಡಿಲ್ಲ. ಮಾರ್ಚ್ನಲ್ಲೂ ಚೇತರಿಕೆ ಕಾಣುವ ಸಾಧ್ಯತೆ ಕಡಿಮೆ ಎಂದು ದೀರ್ಘಕಾಲದಿಂದ ಕೋಳಿ ಉದ್ಯಮದಲ್ಲಿ ತೊಡಗಿಸಿಕೊಂಡವರು ಅಭಿಪ್ರಾಯಪಡುತ್ತಾರೆ.
ಮಾಂಸ ಮಾರುಕಟ್ಟೆಯಲ್ಲಿ ಈ ಬಾರಿ ಬೆಳವಣಿಗೆ ವಿಚಿತ್ರವಾದರೂ ಸತ್ಯ. ಕೋಳಿಯ ದರ ನಿರಂತರವಾಗಿ ಕುಸಿತ ಕಾಣುತ್ತಿದ್ದರೂ ಖರೀದಿಸುವವರಿಲ್ಲ. ಮೀನು ಖರೀದಿಸೋಣ ಅಂದರೆ ಅದರ ದರ ಗಣನೀಯವಾಗಿ ಏರಿಕೆಯಾಗಿವೆ. ಕೋಳಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದರೆ, ಮೀನುಪ್ರಿಯರು ಖರೀದಿಸಲಾಗದೆ ಪರಿತಪಿಸುವಂತಾಗಿದೆ.
ಕೆಲವು ತಿಂಗಳ ಹಿಂದೆ ಕೋಳಿ ದರ 120 ರೂ. (ರಖಂ) ಇದ್ದರೆ ಈಗ ಕೇವಲ 70 ರೂ.ಗೆ ಲಭ್ಯವಿದೆ. ಅಷ್ಟೇ ಅಲ್ಲ ತಿಂಗಳ ಹಿಂದೆ ಚಿಲ್ಲರೆಯಾಗಿ 140 ರೂ. ಇದ್ದರೆ, ಕೇವಲ 80 ರೂ.ಗೆ ಈಗ ಲಭ್ಯವಿದೆ. ಆದರೂ ಬಹುತೇಕ ಮಂದಿ ಕೋಳಿಯ ಕುರಿತ ಕೊರೋನ ವೈರಸ್ ಗುಂಗಿನಿಂದ ಹೊರಬಂದಿಲ್ಲ. ಜನವರಿ, ಫೆಬ್ರವರಿಯಲ್ಲಿ ಕೋಳಿ ದರವು 145, 140, 115, 100, 90 ರೂ. ಹೀಗೆ ಇಳಿತ ಕಂಡಿತ್ತು. ಇದೀಗ 80ಕ್ಕೆ ತಲುಪಿದೆ. ಅದು 65 ರೂ.ಗೆ ಇಳಿದರೂ ಆಶ್ಚರ್ಯವಿಲ್ಲ ಎಂಬ ಮಾತು ಕೋಳಿ ಉದ್ಯಮ, ವ್ಯಾಪಾರದಲ್ಲಿ ತೊಡಗಿಸಿಕೊಂಡವರಿಂದ ಕೇಳಿಬರುತ್ತಿದೆ. ಕಳೆದ ಎರಡು ವರ್ಷದಲ್ಲಿ ಕೋಳಿಯ ದರ ಈ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ಇಳಿದಿದೆ ಎಂದು ಕೋಳಿ ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.
ಫೆಬ್ರವರಿಯಲ್ಲಿ ರಾಜ್ಯದ ಕೋಳಿ ಮಾಂಸ ವ್ಯಾಪಾರದಲ್ಲಿ ಶೇ.30ರಷ್ಟು ಇಳಿಕೆಯಾಗಿದೆ. ಮಾಸಿಕ 1,300 ಕೋ.ರೂ. ನಷ್ಟ ಉಂಟಾದ ಕುರಿತು ಕರ್ನಾಟಕ ರಾಜ್ಯ ಕುಕ್ಕುಟೊದ್ಯಮ ರೈತರ ಹಾಗೂ ತಳಿ ಸಾಕಾಣಿಕೆದಾರರ ಸಂಘ( ಕೆಪಿಎ್ಬಿಎ) ತನ್ನ ವರದಿಯಲ್ಲಿ ಮಾಹಿತಿ ನೀಡಿದೆ. ಕೋಳಿ ಉದ್ಯಮ ನಡೆಸುವ ವ್ಯಾಪಾರಿಗಳು ಪ್ರತಿಯೊಂದು ಕೆಜಿ ಕೋಳಿಯ ಉತ್ಪಾದನೆಗೆ 56 ರೂ. ಖರ್ಚು ಮಾಡುತ್ತಾರೆ. ಹಾಗೇ ಸಾಗಾಟಕ್ಕೆ 15 ರೂ. ಮತ್ತಿತರ ಖರ್ಚು ಎಂದೆಲ್ಲಾ ಸೇರಿಸಿದರೆ 80 ರೂ. ಖರ್ಚು ದಾಟುತ್ತದೆ. ಮಾರುಕಟ್ಟೆಯಲ್ಲಿ ಈ ದರಕ್ಕೆ ಕೋಳಿಯನ್ನು ಮಾರಾಟ ಮಾಡಿದರೆ ಉದ್ಯಮಕ್ಕೆ ತುಂಬಲಾರದ ನಷ್ಟವಾಗಲಿದೆ ಎಂದು ಐಡಿಯಲ್ ಚಿಕನ್ನ ವಿನ್ಸೆಂಟ್ ಕುಟಿನ್ಹೋ ಅಭಿಪ್ರಾಯಪಡುತ್ತಾರೆ.
ಕೋಳಿ ಮೊಟ್ಟೆಗೂ ಬೇಡಿಕೆಯಿಲ್ಲ
ಈ ಮಧ್ಯೆ ಕೋಳಿಮೊಟ್ಟೆಗೂ ಬೇಡಿಕೆ ಕಡಿಮೆಯಾಗಿದೆ. ಕೋಳಿಗೆ ಬಂದ ಕೊರೋನ ವೈರಸ್ ಕೋಳಿಮೊಟ್ಟೆಗೆ ಬಾರದಿರುತ್ತದೆಯೇ ಎಂಬ ಪ್ರಶ್ನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಲೈನ್ಸೇಲ್ ಮತ್ತು ಸೊಸೈಟಿ ದರವು 100ಕ್ಕೆ 400 ರೂ. ಇದ್ದರೂ ಕೂಡ ಕೋಳಿಮೊಟ್ಟೆ ಬೇಡವಾಗಿದೆ. ಕೆಲವು ತಿಂಗಳ ಹಿಂದೆ ಮಂಗಳೂರು ಮಾರುಕಟ್ಟೆಗೆ ಪ್ರತಿನಿತ್ಯ 12ರಿಂದ 16 ಲಕ್ಷ ಮೊಟ್ಟೆಗಳ ಬೇಡಿಕೆಯಿತ್ತು. ಈಗ ಅದು ಬರೀ 6 ಲಕ್ಷಕ್ಕೆ ಇಳಿದಿದೆ. ಇನ್ನು ಮೊಟ್ಟೆ ಮಾರಾಟದಲ್ಲಿ ಎರಡು ವಿಧವಿದೆ. ಕಮಿಟ್ಮೆಂಟ್ನಲ್ಲಿ ನಿಗದಿತ ದರದಲ್ಲೇ ಮೊಟ್ಟೆಯನ್ನು ಮಾರಾಟ ಮಾಡಲಾಗುತ್ತದೆ. ಓಪನ್ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ 4 ರೂ.ಗೆ ಸಿಗಬಹುದಾದ ಮೊಟ್ಟೆಯು 2:50ರೂ.ಗೂ ಲಭ್ಯವಿರುತ್ತದೆ. ಆದರೆ ಈ ಮೊಟ್ಟೆಯ ಬಾಳಿಕೆಯ ಬಗ್ಗೆ ನಿಖರತೆಯಿಲ್ಲ. ಸಾಮಾನ್ಯವಾಗಿ ಒಂದು ಮೊಟ್ಟೆಯು 10 ದಿನದವರೆಗೆ ತಿನ್ನಲು ಯೋಗ್ಯವಾಗಿರುತ್ತದೆ. ಬಳಿಕ ಅದು ಕೊಳೆಯುತ್ತದೆ. ಹಾಗಾಗಿ ಅದನ್ನು ಖರೀದಿಸಿ ಅಂಗಡಿಗಳಲ್ಲಿ ಮಾರಾಟಕ್ಕಿಡಲು ಸಾಧ್ಯವಿಲ್ಲ. ತಾಜಾ ಮೊಟ್ಟೆಯನ್ನಷ್ಟೇ ಗ್ರಾಹಕರಿಗೆ ಲಭ್ಯವಾಗುವಂತೆ ಮಂಗಳೂರಿನ ಮೊಟ್ಟೆ ವರ್ತಕರ ಸಂಘ ಪ್ರಯತ್ನಿಸುತ್ತಿದೆ. ಆದರೆ ಮೊಟ್ಟೆಗೆ ನಿರೀಕ್ಷಿತ ಬೇಡಿಕೆಯಿಲ್ಲದಂತಾಗಿದ್ದು, ಮೊಟ್ಟೆ ಉದ್ಯಮವು ಹಿನ್ನಡೆ ಕಂಡಿವೆ.
ಹಬ್ಬ-ಪರೀಕ್ಷೆ
ಸಾಮಾನ್ಯವಾಗಿ ಜನವರಿ, ಫೆಬ್ರವರಿ, ಮಾರ್ಚ್ನಲ್ಲಿ ಹಬ್ಬ ಮತ್ತು ವಿದ್ಯಾರ್ಥಿಗಳ ಪರೀಕ್ಷೆ ಅವಧಿಯಾಗಿದ್ದು, ಈ ಸಂದರ್ಭ ಸಹಜವಾಗಿ ಕೋಳಿಗೆ ಬೇಡಿಕೆ ಕಡಿಮೆಯಿರುತ್ತದೆ. ಆದರೆ ಈ ವರ್ಷ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೋನ ವೈರಸ್ ಕೋಳಿಗೆ ತಗುಲಿದೆ ಎಂಬ ಗಾಳಿ ಸುದ್ದಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ವದಂತಿಯು ಕೋಳಿ ಉದ್ಯಮವನ್ನೇ ಬುಡಮೇಲು ಮಾಡಿದೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕುಕ್ಕುಟೋದ್ಯಮದ ಸಂಘ ಮತ್ತು ಆರೋಗ್ಯ ಇಲಾಖೆಯು ಸ್ಪಷ್ಟಪಡಿಸಿದ್ದರೂ ಕೂಡ ಜನರು ಭೀತಿಯಿಂದ ಹೊರ ಬಂದಿಲ್ಲ. ಪ್ರಾಣಿ-ಪಕ್ಷಿಗಳಿಗೆ ಯಾವುದೇ ರೋಗಗಳು ಬಂದ ತಕ್ಷಣ ಅದನ್ನು ಕೋಳಿ ಉದ್ಯಮದ ಜತೆಗೆ ತಳುಕು ಹಾಕಲಾಗುತ್ತದೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವೂ ಇದೆ ಎಂದು ಕೋಳಿ ವ್ಯಾಪಾರಿಗಳು ಆರೋಪಿಸುತ್ತಾರೆ.
ನಾಟಿ ಕೋಳಿ ದರದಲ್ಲಿ ಇಳಿಕೆಯಿಲ್ಲ: ಅಂದಹಾಗೆ ನಾಟಿಕೋಳಿಯ ದರದಲ್ಲಿ ಯಾವುದೇ ಇಳಿಕೆ ಕಂಡು ಬಂದಿಲ್ಲ. ಅದೀಗಲೂ ಕೆಜಿಗೆ 500 ರೂ.ನ ಆಸುಪಾಸಿನಲ್ಲೇ ಇದೆ.