ದೊರೆಸ್ವಾಮಿಯವರಿಗೆ ಅಪಮಾನ ಸಲ್ಲದು
ಸನ್ಮಾನ್ಯ ದೊರೆಸ್ವಾಮಿ ಯಾವುದೇ ಪ್ರಶಸ್ತಿ, ಹುದ್ದೆ, ಸಮ್ಮಾನ, ಪದವಿಗೆ ಹೋರಾಡಿದವರಲ್ಲ. ಇಂದಿಗೂ ಬಯಸುವವರಲ್ಲ. ಕೋಲಾರ ಚಿನ್ನದ ಗಣಿ ಕಾರ್ಮಿಕರಿಂದ ಹಿಡಿದು ಬೀದರ್ ಜಿಲ್ಲೆಯ ರೈತಾಪಿಯವರೆಗೂ ಶೋಷಿತರ, ಅವಕಾಶವಂಚಿತರ, ಬಡತನದಲ್ಲಿ ಬೆಂದವರ ದನಿಗೆ ದನಿಯಾಗಿ ಹೋರಾಡುತ್ತಿರುವ ಈ ಶತಾಯುಷಿಯನ್ನು ನಿಂದಿಸಿರುವುದು ಅಕ್ಷಮ್ಯ ಮತ್ತು ಅಮಾನವೀಯ. ಹತ್ತಾರು ಆರೋಪಗಳನ್ನು ಹೊತ್ತು, ತಮ್ಮ ಸುತ್ತಲಿನ ಭ್ರಷ್ಟ ಸಮಾಜವನ್ನು ರಕ್ಷಿಸಲು ದೇಶದ ಸಂಪತ್ತನ್ನೇ ಲೂಟಿ ಮಾಡಲು ನೆರವಾಗುತ್ತಿರುವ ರಾಜಕಾರಣಿಗಳಿಗೆ ದೊರೆಸ್ವಾಮಿಯವರಂತಹ ನಿಷ್ಕಲ್ಮಷ, ಪ್ರಾಮಾಣಿಕ ಮುತ್ಸದ್ದಿಗಳ ಬಗ್ಗೆ ಮಾತನಾಡುವ ಯೋಗ್ಯತೆಯಾದರೂ ಇದೆಯೇ ಎಂದು ಪ್ರಶ್ನಿಸಬೇಕಿದೆ.
ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಸನ್ಮಾನ್ಯ ದೊರೆಸ್ವಾಮಿ ಈ ನಾಡಿನ ಸಾಕ್ಷಿ ಪ್ರಜ್ಞೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ನಾಡಿನ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದಿರುವ ದೊರೆಸ್ವಾಮಿಯವರು ತಮ್ಮ ಜೀವನವಿಡೀ ಗಾಂಧಿ ಮಾರ್ಗಕ್ಕೆ ಬದ್ಧರಾಗಿದ್ದುಕೊಂಡೇ ನಡೆದುಬಂದಿದ್ದಾರೆ. ತಮ್ಮ 102 ವರ್ಷಗಳ ಸುದೀರ್ಘ ಬದುಕಿನಲ್ಲಿ ಯಾವುದೇ ಕಳಂಕವಿಲ್ಲದೆ, ಕಪ್ಪು ಚುಕ್ಕೆ ಇಲ್ಲದೆ ಈ ದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಲಯದಲ್ಲಿ ಮೌಲ್ಯಯುತ ಬದುಕಿಗೆ ಸಾಕ್ಷಿಯಾಗಿದ್ದಾರೆ. ಅಧಿಕಾರ ರಾಜಕಾರಣದಿಂದ, ಅಧಿಕಾರಸ್ಥರಿಂದ ದೂರ ಇದ್ದುಕೊಂಡೇ ಶೋಷಿತ, ಅವಕಾಶವಂಚಿತ, ದಮನಿತ ಜನಸಮುದಾಯಗಳ ನೋವು, ವೇದನೆ ಮತ್ತು ಸಂಕಷ್ಟಗಳಿಗೆ ಸ್ಪಂದಿಸುತ್ತಾ ನಾಗರಿಕ ಸಮಾಜಕ್ಕೆ ಮಾದರಿಯಾಗಿರುವ ದೊರೆಸ್ವಾಮಿಯವರು ಸದಾ ನ್ಯಾಯದ ಪರ, ಬಡ ಜನತೆಯ ಪರ ಹೋರಾಟಕ್ಕೆ ಸ್ಪಂದಿಸಿದ್ದಾರೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಲಕ್ಷಾಂತರ ಹೋರಾಟಗಾರರು ಮತ್ತು ವಸಾಹತು ದಾಸ್ಯದಿಂದ ವಿಮುಕ್ತರಾಗಲು ಶ್ರಮಿಸಿದ ಸಾವಿರಾರು ನಾಯಕರು ಬಯಸಿದ ಸಮ ಸಮಾಜವನ್ನು, ಸೌಹಾರ್ದ ದೇಶವನ್ನು, ಮಾನವ ಪ್ರೀತಿಯ ನಾಡನ್ನು ಕಟ್ಟಲು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ಸಲ್ಲಿಸುತ್ತಲೇ ಬಂದಿದ್ದಾರೆ. ಇಂತಹ ಹಿರಿಯ ಜೀವಗಳ ಒಂದು ಪೀಳಿಗೆ ಮಾತ್ರವೇ ನಮ್ಮಲ್ಲಿ ಉಳಿದಿದೆ. ಈ ನಾಯಕರ ರಾಜಕೀಯ ನಿಲುವುಗಳು ಏನೇ ಇರಲಿ, ಸೈದ್ಧಾಂತಿಕ ನಿಲುಮೆ ಏನೇ ಇರಲಿ ದೇಶಕ್ಕೆ ಇವರು ನೀಡಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸುವುದು ಪ್ರಜ್ಞೆ ಇರುವ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ.
ಆದರೆ ಸಮಕಾಲೀನ ರಾಜಕಾರಣದಲ್ಲಿ ಉಗಮಿಸಿರುವ ರಾಜಕೀಯ ನಾಯಕರು ಈ ಪ್ರಜ್ಞೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ದೊರೆಸ್ವಾಮಿಯವರನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಎಂದು ನಿಂದಿಸಿರುವುದು ಮತ್ತು ಈ ಹೇಳಿಕೆಯನ್ನು ಸಮರ್ಥಿಸುತ್ತಾ ‘‘ದೊರೆಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ’’ ಎಂದು ಮತ್ತೊಬ್ಬ ಬಿಜೆಪಿ ನಾಯಕ ಸೋಮಣ್ಣ ಹೇಳಿಕೆ ನೀಡಿರುವುದು ಈ ಪ್ರಜ್ಞಾಹೀನತೆಗೆ ಸಾಕ್ಷಿಯಾಗಿದೆ. ಇಂದು ಈ ನಾಯಕರು ಒಬ್ಬ ಸ್ವಾತಂತ್ರ್ಯ ಸಂಗ್ರಾಮಿಯನ್ನು ಸಾರ್ವಜನಿಕವಾಗಿ ಹೀಯಾಳಿಸುವ ಸ್ವಾತಂತ್ರ್ಯ ಪಡೆದಿದ್ದರೆ ಅದಕ್ಕೆ ದೊರೆಸ್ವಾಮಿಯವರಂತಹ ಸಾವಿರಾರು ಹೋರಾಟಗಾರರ ಅವಿರತ ಶ್ರಮ, ತ್ಯಾಗ, ಬಲಿದಾನಗಳೇ ಕಾರಣ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕಿದೆ. ತಮ್ಮ ಪಕ್ಷದ ನಿಲುವನ್ನು ವಿರೋಧಿಸುವವರೆಲ್ಲರೂ ಪಾಕಿಸ್ತಾನದ ಏಜೆಂಟರು, ದೇಶದ್ರೋಹಿಗಳು ಎಂಬ ಬಿಜೆಪಿ ನಾಯಕರ ಧೋರಣೆ ಅವರಲ್ಲಿನ ಹತಾಶೆ ಮತ್ತು ವಿಷಪೂರಿತ ದ್ವೇಷ ಮನೋಭಾವವನ್ನು ಪ್ರದರ್ಶಿಸುತ್ತದೆ. ತಂದೆಯ/ತಾತನ ಸ್ಥಾನದಲ್ಲಿರುವ ಒಬ್ಬ ಹಿರಿಯ ಸ್ವಾತಂತ್ರ್ಯ ಸಂಗ್ರಾಮಿಯನ್ನು ಪಾಕಿಸ್ತಾನದ ಏಜೆಂಟ್ ಎಂದು ಹೇಳುವವರು ತಮ್ಮ ನಾಲಿಗೆಯನ್ನು ಒಮ್ಮೆ ಸ್ವಚ್ಛ ಮಾಡಿಕೊಳ್ಳಬೇಕಿದೆ. ಸೋಮಣ್ಣನವರೇ ಇದರ ಉಸ್ತುವಾರಿ ವಹಿಸಲಿ.
ನೆಹರೂ ಆಳ್ವಿಕೆಯಲ್ಲಿ ಸಾಧನೆ ಆಗಿದೆಯೋ ಇಲ್ಲವೋ ಬದಿಗಿರಲಿ, ಇಂತಹ ಹೊಲಸು ನಾಲಿಗೆಗಳನ್ನಂತೂ ನೆಹರೂ ಪರಂಪರೆ ಸೃಷ್ಟಿಸಲಿಲ್ಲ. ಯತ್ನಾಳ್ ಒಬ್ಬ ಜನಪ್ರತಿನಿಧಿ, ತಾವು ಪ್ರತಿನಿಧಿಸುವ ಶಾಸನ ಸಭೆ ಸಾಂವಿಧಾನಿಕ ಸಂಸ್ಥೆ. ಈ ಸಂವಿಧಾನಕ್ಕೆ ಒಂದು ರೂಪ ನೀಡಿದ್ದು ಈ ದೇಶದ ಸ್ವಾತಂತ್ರ್ಯ ಸಂಗ್ರಾಮಿಗಳು. ಈ ಸಂಗ್ರಾಮಿಗಳ ಆಶಯಗಳೇ ಈ ದೇಶದ ಬುನಾದಿ. ಹೀಗಿರುವಾಗ ಚುನಾಯಿತ ಪ್ರತಿನಿಧಿಯಾಗಿ, ಸಂವಿಧಾನಕ್ಕೆ ಬದ್ಧತೆ ತೋರಬೇಕಾದ ಶಾಸಕ ಯತ್ನಾಳ್ ಒಬ್ಬ ಹಿರಿಯ ಗಾಂಧಿವಾದಿ ಸ್ವಾತಂತ್ರ್ಯ ಹೋರಾಟಗಾರರನ್ನು ಹೀಗಳೆಯುವುದು ಮನುಕುಲಕ್ಕೆ ಮಾಡಿದ ಅಪಚಾರ. ಕಂಡಲ್ಲಿ ಗುಂಡಿಕ್ಕಿ ಎಂದು ಹಿಂಸೆಗೆ ಪ್ರಚೋದಿಸುವ ನಾಲಿಗೆ, ಗುಂಡೇಟಿಗೆ ಎದೆಯೊಡ್ಡಿ ತಮ್ಮ ಮುದಿ ವಯಸ್ಸಿನಲ್ಲೂ ಉರಿಬಿಸಿಲಲ್ಲಿ ಕುಳಿತು ನ್ಯಾಯಕ್ಕೆ ತಲೆಬಾಗುವ ಹಿರಿಯ ಮುತ್ಸದ್ದಿಯ ಬಗ್ಗೆ ಮಾತನಾಡುವ ಯೋಗ್ಯತೆ ಹೊಂದಿರಲು ಸಾಧ್ಯವೇ? ತಮ್ಮ ಶತಮಾನದ ಬದುಕಿನಲ್ಲಿ ಒಂದೂ ಕಪ್ಪುಚುಕ್ಕೆಯಿಲ್ಲದೆ ನಿಷ್ಕಲ್ಮಷ ಬದುಕು ಕಂಡಿರುವ ದೊರೆಸ್ವಾಮಿಯವರ ಹೆಜ್ಜೆ ಗುರುತುಗಳನ್ನು ಗ್ರಹಿಸಲೂ ಇಂತಹ ಶಾಸಕರಿಗೆ ಸಾಧ್ಯವಾಗದು. ತಾವು ಪ್ರತಿನಿಧಿಸುವ ಪಕ್ಷದಿಂದ ಒಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನೂ ಉಲ್ಲೇಖಿಸಲು ಸಾಧ್ಯವಿಲ್ಲದ ಈ ನಾಯಕರಿಗೆ ಸ್ವಾತಂತ್ರ್ಯ ಮತ್ತು ವಿಮೋಚನೆಯ ಪರಿಜ್ಞಾನ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ.
ಸನ್ಮಾನ್ಯ ದೊರೆಸ್ವಾಮಿ ಯಾವುದೇ ಪ್ರಶಸ್ತಿ, ಹುದ್ದೆ, ಸಮ್ಮಾನ, ಪದವಿಗೆ ಹೋರಾಡಿದವರಲ್ಲ. ಇಂದಿಗೂ ಬಯಸುವವರಲ್ಲ. ಕೋಲಾರ ಚಿನ್ನದ ಗಣಿ ಕಾರ್ಮಿಕರಿಂದ ಹಿಡಿದು ಬೀದರ್ ಜಿಲ್ಲೆಯ ರೈತಾಪಿಯವರೆಗೂ ಶೋಷಿತರ, ಅವಕಾಶವಂಚಿತರ, ಬಡತನದಲ್ಲಿ ಬೆಂದವರ ದನಿಗೆ ದನಿಯಾಗಿ ಹೋರಾಡುತ್ತಿರುವ ಈ ಶತಾಯುಷಿಯನ್ನು ನಿಂದಿಸಿರುವುದು ಅಕ್ಷಮ್ಯ ಮತ್ತು ಅಮಾನವೀಯ. ಹತ್ತಾರು ಆರೋಪಗಳನ್ನು ಹೊತ್ತು, ತಮ್ಮ ಸುತ್ತಲಿನ ಭ್ರಷ್ಟ ಸಮಾಜವನ್ನು ರಕ್ಷಿಸಲು ದೇಶದ ಸಂಪತ್ತನ್ನೇ ಲೂಟಿ ಮಾಡಲು ನೆರವಾಗುತ್ತಿರುವ ರಾಜಕಾರಣಿಗಳಿಗೆ ದೊರೆಸ್ವಾಮಿಯವರಂತಹ ನಿಷ್ಕಲ್ಮಷ, ಪ್ರಾಮಾಣಿಕ ಮುತ್ಸದ್ದಿಗಳ ಬಗ್ಗೆ ಮಾತನಾಡುವ ಯೋಗ್ಯತೆಯಾದರೂ ಇದೆಯೇ ಎಂದು ಪ್ರಶ್ನಿಸಬೇಕಿದೆ. ಇದು ಅಧಿಕಾರದ ಅಹಮಿಕೆಯ ಪರಾಕಾಷ್ಠೆ ಎಂದಷ್ಟೇ ಹೇಳಬಹುದು. ರಾಜ್ಯ ಬಿಜೆಪಿ ನಾಯಕರು, ಕೇಂದ್ರ ನಾಯಕರು ಇಂತಹ ಹೊಲಸು ಬಾಯಿಗಳಿಗೆ ಬೀಗ ಹಾಕದೆ ಹೋದರೆ ಬಹುಶಃ ಇತಿಹಾಸದ ಕಳಂಕವಾಗಿ ಉಳಿದುಬಿಡುತ್ತಾರೆ.
ನಾಡಿನ ನೊಂದವರ ಸಾಕ್ಷಿಪ್ರಜ್ಞೆಯಾದ ದೊರೆಸ್ವಾಮಿಯವರೊಂದಿಗೆ ನಾವು ಅಂದರೆ ಭಾರತದ ಪ್ರಜೆಗಳು ಇದ್ದೇವೆ ಎನ್ನುವುದನ್ನು ಯತ್ನಾಳ್, ಸೋಮಣ್ಣ ಮುಂತಾದವರು ಗಮನಿಸಲಿ. ನಾಲಿಗೆ ಸಂಸ್ಕೃತಿಯನ್ನು ಹೇಳುತ್ತದೆ ಎನ್ನುವುದನ್ನೂ ಗಮನಿಸಲಿ.