ವಾದ ಪ್ರತಿಸಲ ವಿವಾದಕ್ಕೆ ಆಸ್ಪದ ಕೊಡಬಾರದು
ದೊರೆಸ್ವಾಮಿಗೆ ಯತ್ನಾಳ್ ಪಾಕ್ ಏಜೆಂಟ್ ಎಂದ ವಿವಾದ
ದೇವನೂರ ಮಹಾದೇವ ಅವರ ಪತ್ರಕ್ಕೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ
ಹಿರಿಯರಾದ ಮಾನ್ಯ ದೇವನೂರ ಮಹಾದೇವರವರೇ,
ಈ ನಿಮ್ಮ ಸುರೇಶ್‌ನನ್ನು ‘‘ನಮ್ಮ ಸುರೇಶ್’’ ಎಂದು ಪರಿಗಣಿಸಿ ನನಗೆ ಪತ್ರ ಬರೆದಿರುವುದಕ್ಕಾಗಿ ನನ್ನ ಧನ್ಯವಾದಗಳು.
ನಿಮ್ಮ ಪತ್ರವನ್ನು ನಾಲ್ಕೈದು ಬಾರಿ ವಿವರವಾಗಿ ಓದಿದೆ. ನೀವು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಪೈಕಿ ಕೆಲವದರ ಬಗ್ಗೆ ನನ್ನ ಸಹಮತವಿಲ್ಲದಿದ್ದರೂ ನಿಮ್ಮ ಭಾವನೆಯನ್ನು ನಾನು ಪೂರ್ಣ ಗೌರವಿಸುತ್ತೇನೆ.
ಶ್ರೀ ಎಚ್.ಎಸ್.ದೊರೆಸ್ವಾಮಿಯವರನ್ನು ನಾನು ಅನೇಕ ದಶಕಗಳಿಂದ ನೋಡಿಕೊಂಡು ಬಂದಿದ್ದೇನೆ, ಬೆಳೆದಿದ್ದೇನೆ. ಅವರ ಹಿರಿತನ, ಸಾಮಾಜಿಕ ಕಾಳಜಿಯ ಕುರಿತು ನನಗೆ ಗೌರವವಿದೆ. ಅವರೂ ಸಹ ನನ್ನ ಬಗ್ಗೆ ಅನೇಕ ಬಾರಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಅವರೊಡನೆ ಹಲವು ಹೋರಾಟಗಳಲ್ಲಿ ಪಾಲ್ಗೊಳ್ಳುವ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳೂ ನನಗೆ ಸಿಕ್ಕಿವೆ.
ಆದರೆ....
ಅಂತಹ ಹಿರಿಯ ಸ್ಥಾನದ ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಉಪಯೋಗಿಸುವ ಪದಗಳು ಬಹುಮುಖ್ಯವಾಗು್ತವೆ. ಸೈದ್ಧಾಂತಿಕವಾಗಿ ತಾವು ವಿರೋಧಿಸುವವರ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿರಿಯರಾದ ದೊರೆಸ್ವಾಮಿಯವರಿಗೆ ಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅದನ್ನು ವ್ಯಕ್ತಪಡಿಸುವ ಪರಿಭಾಷೆಯ ಕುರಿತು ಸ್ವಲ್ಪಅವರು ಗಮನ ಹರಿಸಬೇಕಿತ್ತು.
‘‘ಆಡಬಾರದ್ದನ್ನು ಆಡಿದರೆ ಕೇಳಬಾರದ್ದನ್ನು ಕೇಳಬೇಕಾಗುತ್ತದೆ’’ ಎಂದು ನಾನು ಹೇಳಿರುವುದು ಇಂದಿನ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಸಂಬೋಧಿಸಿ ಹೇಳಿರುವ ಮಾತು ಎಂದು ತಮಗೆ ಅನಿಸುತ್ತಿಲ್ಲವೇ? ರಾಜಕೀಯ, ಸಾಮಾಜಿಕ, ಧಾರ್ಮಿಕ... ಈ ಎಲ್ಲ ವಲಯಗಳಲ್ಲಿಯೂ ಹೆಚ್ಚಾಗಿ ಆಡಬಾರದ ಮಾತುಗಳು, ಅದಕ್ಕೆ ಪ್ರತಿಕ್ರಿಯೆಯಾಗಿ ಕೇಳಬಾರದ ಮಾತುಗಳೇ ಬರುತ್ತಿವೆ. ಮುಂಚೆಯಿಂದ ಈ ಸಮಾಜವು - ವಾದ, ಪ್ರತಿವಾದಗಳಿಗೆ ವಿಫುಲ ಅವಕಾಶಗಳನ್ನು ನೀಡಿದೆ.
(Thesis Anti thesisಮತ್ತು ಸಂಘರ್ಷದಿಂದ synthesis ಹುಟ್ಟುತ್ತದೆ ಎಂಬುದೂ ಒಂದು ವಾದ.).
ಆದರೆ, ವಾದ ಪ್ರತಿಸಲ ವಿವಾದಕ್ಕೇ ಆಸ್ಪದ ಕೊಡಬಾರದು. ದುರದೃಷ್ಟವಶಾತ್ ವಾದವನ್ನು ಮಾಡುವಾಗ, ಬಹಳ ಗಟ್ಟಿಯಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಬಳಕೆಯಾಗುತ್ತಿರುವ ರೀತಿಯಲ್ಲಿಯೂ ಇಂದು ಕೆಟ್ಟ ಮೇಲ್ಪಂಕ್ತಿಯನ್ನು ನಾವೆಲ್ಲಾ ಕಾಣುತ್ತಿದ್ದೇವೆ. ಅತ್ಯಂತ ಅಗತ್ಯವಿರುವ ಉತ್ತಮ ಮೇಲ್ಪಂಕ್ತಿ ಬಹಳ ಅಪರೂಪವಾಗುತ್ತಿದೆ. ವಿರೋಧದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರೂ ಅದನ್ನು ಕೇಳಿದ ವಿರೋಧಿಗಳು ಸಹ ಅಹುದಹುದೆನ್ನಬೇಕು.
ನರೇಂದ್ರ ಮೋದಿಯವರ ಕುರಿತು, ಸಾವರ್ಕರ್ ಕುರಿತು ನಿಮಗೆ ನಿಮ್ಮದೇ ಆದ ಅಭಿಪ್ರಾಯ ಇರುವುದು ಎಷ್ಟು ಸಹಜವೋ ಹಾಗೆಯೇ ನನಗೂ ನನ್ನದೇ ಆದ ಅಭಿಪ್ರಾಯ ಇರುವುದೂ ಸಹಜ. ನಾನು ಗೌರವಿಸುವ ಸಾವರ್ಕರ್ ಕುರಿತು, ನನ್ನ ನಾಯಕರಾದ ಮೋದಿಯವರ ಕುರಿತು ಯಾರಾದರೂ ಏನಾದರೂ ನನಗೆ ಸರಿಯಲ್ಲದ್ದನ್ನು ಹೇಳಿದರೆ ಪ್ರತಿಕ್ರಿಯಿಸಬೇಕಾದ್ದು ನನ್ನ ಧರ್ಮ. ಹಾಗೆ ಪ್ರತಿಕ್ರಿಯಿಸುವಾಗ ನನ್ನ ಮಾತುಗಳ ಮೇಲೆ ನಿಯಂತ್ರಣ ವಿರಬೇಕು ಎಂದು ಸಮಾಜ ಹೇಗೆ ಬಯಸುತ್ತದೆಯೋ, ಅದೇ ರೀತಿಯ ನಿಯಂತ್ರಣ ಸಾವರ್ಕರ್ ಮತ್ತು ಮೋದಿಯವರ ವಿರುದ್ಧ ಅಭಿಪ್ರಾಯ ವ್ಯಕ್ತ ಪಡಿಸುವಾಗಲೂ ಇರಬೇಕಲ್ಲವೇ?
ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಮಾತುಗಳಿಗೆ ಲಂಗುಲಗಾಮೇ ಇರದ ಈ ಕಾಲದಲ್ಲಿ ಪ್ರಮುಖರು ಉಪಯೋಗಿಸುವ ಪದಗಳು ಇನ್ನಷ್ಟು ಸ್ವೇಚ್ಛಾಚಾರಕ್ಕೆ ಇಂಬು ನೀಡಬಾರದು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಭಾಪ್ರಜ್ಞೆ, ಸಂದರ್ಭಪ್ರಜ್ಞೆಗಳಿಗೆ ಮಹತ್ವವಿರಬೇಕು.
ಒಟ್ಟಿನಲ್ಲಿ, ಇಂದಿನ ಸಾರ್ವಜನಿಕ ಜೀವನದಲ್ಲಿ ಕೇಳಿಬರುತ್ತಿರುವ ಪದಪುಂಜಗಳು ಯಾರಿಗೂ ಸಮಾಧಾನ ತರುತ್ತಿಲ್ಲ ಮತ್ತು ಸಮಾಜಕ್ಕೆ ಒಳಿತನ್ನೂ ಮಾಡುತ್ತಿಲ್ಲ.
ನಾನು ‘‘ಆಡಬಾರದ್ದನ್ನು ಆಡಿದರೆ, ಕೇಳಬಾರದ್ದನ್ನು ಕೇಳಬೇಕಾಗುತ್ತದೆ’’ ಎಂದು ಹೇಳಿದ್ದು ಕೇವಲ ಓರ್ವ ವ್ಯಕ್ತಿಯ ಕುರಿತಲ್ಲ. ಬದಲಿಗೆ ಇಂದಿನ ವಾಸ್ತವ ಪರಿಸ್ಥಿತಿಯ ಕುರಿತು ಎಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ.
ನನಗಾಗಿ ಮಾರ್ಗದರ್ಶಕ ಮಾತುಗಳನ್ನು ಆಡಿರುವ ತಮಗೆ ಧನ್ಯವಾದಗಳು.
ವಿಶ್ವಾಸದಿಂದ
ಎಸ್. ಸುರೇಶ್ ಕುಮಾರ್