ಕೊರೋನ ಆತಂಕದ ‘ಲಾಭ’?
ಮಾನ್ಯರೇ,
ಸದ್ಯ ರಾಜ್ಯದಲ್ಲಿ ಕೊರೋನ ಸೋಂಕಿನ ಬಗ್ಗೆ ಭೀತಿ ಶುರುವಾಗಿದೆ. ಈ ಭೀತಿಗೆ ವದಂತಿಗಳೇ ಮೂಲ ಕಾರಣವಾಗಿದೆ. ಶಂಕಿತ ಪ್ರಕರಣಗಳು ಪತ್ತೆಯಾದ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಇಲಾಖೆ ಸೂಚಿಸಿದೆಯಾದರೂ ಈ ವದಂತಿಗಳು ಮಾತ್ರ ಮತ್ತಷ್ಟು ಭೀತಿಯನ್ನು ಸೃಷ್ಟಿಸುತ್ತಿದೆ. ಈ ಮಧ್ಯೆ ಜನರು ಭೀತಿಯಿಂದ ಮಾಸ್ಕ್‌ಗಳ ಖರೀದಿಗೆ ಮುಗಿಬೀಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದನ್ನೇ ಲಾಭ ಮಾಡಿಕೊಳ್ಳಲು ಕೆಲ ಔಷಧ ಕಂಪೆನಿಗಳು ಮತ್ತು ವಿತರಕರು ಬೇಕಾಬಿಟ್ಟಿಯಾಗಿ ಗ್ರಾಹಕರಿಂದ ದರ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆೆ. ಇದು ನಿಜಕ್ಕೂ ಆತಂಕಕಾರಿ. ಜೊತೆಗೆ ಇದೊಂದು ಹಗಲು ದರೋಡೆಯಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ನಿಗದಿತ ದರಕ್ಕಿಂತ ದುಪ್ಪಟ್ಟು ಬೆಲೆಗೆ ಮಾಸ್ಕ್‌ಗಳನ್ನು ಮಾರಾಟ ಮಾಡಿರುವುದು ಬಯಲಿಗೆ ಬಂದಿದೆ. ಈ ಮೂಲಕ ಜನರ ಆತಂಕವನ್ನು ಉಪಯೋಗಿಸಿಕೊಂಡು ಹಣ ವಸೂಲಿ ಮಾಡುವ ದಂಧೆ ನಿಜಕ್ಕೂ ಖಂಡನೀಯ.
ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ. ಕೆಲ ಕಡೆಗಳಲ್ಲಿ ಜಿಎಸ್‌ಟಿ ಬಿಲ್ ಇಲ್ಲದೇ ಮಾರಾಟ ಮಾಡಲಾಗುತ್ತಿದೆ. ಮಾಸ್ಕ್, ಔಷಧದ ಕೊರತೆ ಇದೆ ಎಂದು ಹೇಳಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಾನೂನು ನಿಯಮದ ಉಲ್ಲಂಘನೆಯಾಗಿದೆ. ಇದೊಂದು ಗಂಭೀರ ಪ್ರಕರಣ ಆಗಿದ್ದರಿಂದ ಇಲಾಖೆಯು ವಿಶೇಷ ಕಾರ್ಯಾಚರಣೆ ಮೂಲಕ ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ.