ದಿಲ್ಲಿ ಹಿಂಸೆ: ಇದು ಕೊರೋನ ವೈರಸ್ ನ ನಮ್ಮ ಆವೃತ್ತಿ... ನಾವು ರೋಗ ಪೀಡಿತರು: ಅರುಂಧತಿ ರಾಯ್
ಅರುಂಧತಿ ರಾಯ್ ಅವರು ಇತ್ತೀಚೆಗೆ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಜನಸ್ತೋಮವನ್ನುದ್ದೇಶಿಸಿ ಮಾಡಿದ ಭಾಷಣ
ಒಂದು ಸಂವಿಧಾನದಿಂದ ಆಳಲ್ಪಡದ ಒಂದು ಪ್ರಜಾಪ್ರಭುತ್ವ ಒಂದು ಬಹುಮತೀಯ (ಮೆಜಾರಿಟೇರಿಯನ್) ದೇಶ, ಸರಕಾರವಾಗುವುದಷ್ಟೇ ಸಾಧ್ಯ. ನೀವು ಒಂದು ಸಂವಿಧಾನವನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಈ ಸರಕಾರ ನಡೆದುಕೊಳ್ಳುತ್ತಿರುವ ಹಾಗೆ, ಅದು ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ನಡೆದುಕೊಳ್ಳುವುದೆಂದರೆ ಅದು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶ ಮಾಡುವುದೆಂದೇ ಅರ್ಥ. ಪ್ರಾಯಶಃ ಇದೇ ಸರಕಾರದ ಗುರಿ ಇರಬಹುದು. ಇದು ಕೊರೋನ ವೈರಸ್‌ನ ನಮ್ಮ ಆವೃತ್ತಿ, ನಮ್ಮ ರೂಪ. ನಾವು ರೋಗಗ್ರಸ್ತರಾಗಿದ್ದೇವೆ.
ಪ್ರಿಯ ಮಿತ್ರರೇ, ಕಾಮ್ರೇಡರೇ ಮತ್ತು ನನ್ನ ಲೇಖಕ ಬಂಧುಗಳೇ,
ನಾವು ಇವತ್ತು ಸೇರಿರುವ ಈ ಸ್ಥಳ ನಾಲ್ಕು ದಿನಗಳ ಹಿಂದೆ ಫ್ಯಾಶಿಸ್ಟ್ ಗುಂಪೊಂದು ಈಶಾನ್ಯ ದಿಲ್ಲಿಯಲ್ಲಿ ಕಾರ್ಮಿಕ ವರ್ಗದ ಕಾಲನಿಗಳಲ್ಲಿ ಮುಸ್ಲಿಮರ ಮೇಲೆ ಶಸ್ತ್ರಸಜ್ಜಿತರಾಗಿ ಮಾರಕ ದಾಳಿ ನಡೆಸಿದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿದೆ. ಆ ಫ್ಯಾಶಿಸ್ಟ್ ಗುಂಪು ಆಳುವ ಪಕ್ಷದ ಸದಸ್ಯರು ಮಾಡಿದ ಭಾಷಣಗಳಿಂದ ಉದ್ರೇಕಗೊಂಡಿತ್ತು. ಅದಕ್ಕೆ ಪೊಲೀಸರ ಬೆಂಬಲ ಮತ್ತು ಸಕ್ರಿಯ ಸಹಾಯವಿತ್ತು, ವಿದ್ಯುನ್ಮಾನ ಮಾಧ್ಯಮಗಳ ಇಪ್ಪತ್ತನಾಲ್ಕು ಗಂಟೆಗಳ ಕಾಲದ ಬೆಂಬಲವಿತ್ತು ಮತ್ತು ನ್ಯಾಯಾಲಯಗಳು ತಮ್ಮ ಹಾದಿಗೆ ಅಡ್ಡ ಬರುವಂತಹ ಏನನ್ನೂ ಮಾಡುವುದಿಲ್ಲವೆಂಬ ನಂಬಿಕೆ ಇತ್ತು.
ದಾಳಿ ನಡೆಯುವ ಮುನ್ಸೂಚನೆ ಅದಾಗಲೇ ಹರಡಿತ್ತು. ಆದ್ದರಿಂದ ಜನರು ದಾಳಿಯನ್ನೆದುರಿಸಲು ತಕ್ಕ ಮಟ್ಟಿಗೆ ಸಿದ್ಧರಾಗಿದ್ದರು. ಆದ್ದರಿಂದ ತಮ್ಮನ್ನು ತಾವು ರಕ್ಷಿಸಿಕೊಂಡರು. ಮಾರುಕಟ್ಟೆಗಳು, ಅಂಗಡಿಗಳು, ಮನೆಗಳು, ಮಸೀದಿಗಳು ಹಾಗೂ ವಾಹನಗಳನ್ನು ಸುಟ್ಟು ಹಾಕಲಾಯಿತು. ರಸ್ತೆ ತುಂಬ ಕಲ್ಲುಗಳು ಮತ್ತು ಹಿಂಸೆಯ ಅವಶೇಷಗಳು. ಆಸ್ಪತ್ರೆಗಳ ತುಂಬಾ ಗಾಯಾಳುಗಳು ಹಾಗೂ ಸಾಯುತ್ತಿರುವವರು. ಶವಾಗಾರಗಳ ತುಂಬಾ ಮೃತ ಶರೀರಗಳು. ಅವುಗಳಲ್ಲಿ ಒಬ್ಬ ಪೊಲೀಸ್ ಹಾಗೂ ಗುಪ್ತಚರ ದಳದ ಹರೆಯದ ಒಬ್ಬ ಸಿಬ್ಬಂದಿಯೂ ಸೇರಿದಂತೆ ಮುಸ್ಲಿಮ್ ಮತ್ತು ಹಿಂದೂ ಎರಡೂ ಸಮುದಾಯಗಳಿಗೆ ಸೇರಿದವರ ಶವಗಳು. ಹೌದು. ಎರಡು ಸಮುದಾಯದ ಜನರು ತಾವು ಭಯಾನಕ ಪಾಶವಿ ಕೃತ್ಯಗಳನ್ನೆಸಗಲು ಮತ್ತು ನಂಬಲಸಾಧ್ಯವಾದ ಧೈರ್ಯ ಹಾಗೂ ಕರುಣೆ ತೋರಲು ಸಮರ್ಥರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಅದೇನಿದ್ದರೂ, ಇಲ್ಲಿ ಸಮನಾಗುವಿಕೆಯ ಪ್ರಶ್ನೆಯೇ ಇಲ್ಲ. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಈಗ ಜಗಜ್ಜಾಹೀರಾಗಿರುವ ಫ್ಯಾಶಿಸ್ಟ್ ಸರಕಾರದ ಬೆಂಬಲ ಪಡೆದ ಗೂಂಡಾ ಗುಂಪುಗಳು ದಾಳಿಯನ್ನಾರಂಭಿಸಿದವು ಎಂಬುದನ್ನು ಇದ್ಯಾವುದೂ ಬದಲಿಸಲಾರದು. ಈ ಘೋಷಣೆಗಳ ಕಾರಣಕ್ಕಾಗಿ ಇದು ಜನರು ಹೇಳುವ ಹಾಗೆ ಒಂದು ಹಿಂದೂ-ಮುಸ್ಲಿಮ್ ‘ದೊಂಬಿ’ಯಲ್ಲ. ಇದು ಈಗ ಫ್ಯಾಶಿಸ್ಟರ ಹಾಗೂ ಫ್ಯಾಶಿಸ್ಟ್ ವಿರೋಧಿಗಳ ನಡುವೆ ನಡೆಯುತ್ತಿರುವ ಕದನದ ಅಭಿವ್ಯಕ್ತಿ. ಇದರಲ್ಲಿ ಫ್ಯಾಶಿಸ್ಟರ ಶತ್ರುಗಳಲ್ಲಿ ಮುಸ್ಲಿಮರು ಮೊದಲ ‘‘ಶತ್ರುಗಳು’’. ಇದನ್ನು ಒಂದು ದೊಂಬಿ ಅಥವಾ ‘ದಂಗೆ’ ಅಥವಾ ‘ಎಡ’ ವರ್ಸಸ್ ‘ಬಲ’ ಅಥವಾ ‘ಸರಿ’ಯಿಂದ ‘ತಪ್ಪು’ ವಿರುದ್ಧ ನಡೆದ ಘಟನೆ ಎಂದು ಹಲವರು ಈಗ ಕರೆಯುತ್ತಿರುವಂತೆ ಕರೆಯುವುದು ಅಪಾಯಕಾರಿ ಹಾಗೂ ಅರ್ಥದ ಅಸ್ಪಷ್ಟಗೊಳಿಸುವಿಕೆಯಾಗುತ್ತದೆ.
ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಂತಿರುವ ಅಥವಾ ಲೂಟಿ, ಕೊಳ್ಳೆಯಲ್ಲಿ ಭಾಗವಹಿಸುತ್ತಿರುವ ವೀಡಿಯೊಗಳನ್ನು ನಾವೆಲ್ಲ ನೋಡಿದ್ದೇವೆ. ಅವರು ಡಿಸೆಂಬರ್ 15ರಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಗ್ರಂಥಾಲಯವನ್ನು ಲೂಟಿ ಮಾಡಿದ ಹಾಗೆ ಸಿಸಿಟಿವಿ ಕ್ಯಾಮರಾಗಳನ್ನು ಧ್ವಂಸಗೊಳಿಸಿರುವುದನ್ನು ನಾವು ನೋಡಿದ್ದೇವೆ. ಗಾಯಾಳುಗಳಾಗಿ ಒಬ್ಬರ ಮೇಲೆ ಒಬ್ಬರು ಬಿದ್ದುಕೊಂಡು ನರಳುತ್ತಿದ್ದ ಮುಸ್ಲಿಮ್ ಪುರುಷರನ್ನು ಅವರು ಥಳಿಸುವುದನ್ನು ನಾವು ನೋಡಿದ್ದೇವೆ ಮತ್ತು ಅವರು ರಾಷ್ಟ್ರಗೀತೆ ಹಾಡುವಂತೆ ಅವರನ್ನು ಬಲವಂತಪಡಿಸುತ್ತಿರುವುದನ್ನು ನಾವು ನೋಡಿದ್ದೇವೆ. ಆ ಯುವಕರಲ್ಲಿ ಒಬ್ಬ ಮೃತಪಟ್ಟಿದ್ದಾನೆಂದು ನಮಗೆ ತಿಳಿದಿದೆ. ಸತ್ತವರೆಲ್ಲರೂ, ಗಾಯಾಳುಗಳಾದವರೂ, ಮನೆಮಾರು ಕಳೆದುಕೊಂಡು ನಿರ್ಗತಿಕರಾದವರು ಮುಸ್ಲಿಮರು ಹಾಗೂ ಹಿಂದೂಗಳು, ಎಲ್ಲರೂ ನರೇಂದ್ರ ಮೋದಿ ನೇತೃತ್ವದ ಈ ಸರಕಾರದ ಬಲಿಪಶುಗಳು...
ಈ ನಿರ್ದಿಷ್ಟ ಮುಖಾಮುಖಿಯ, ಹಿಂಸೆಯ ಹಿಂದು ಮುಂದಿನ ಅಧ್ಯಯನಗಳನ್ನು ಮುಂದಿನ ಹಲವು ವರ್ಷಗಳ ಕಾಲ ನಡೆಸಲಾಗುತ್ತದೆ. ಆದರೆ ಸ್ಥಳೀಯ ವಿವರಗಳು ಐತಿಹಾಸಿಕ ದಾಖಲೆಯ ಒಂದು ಸಂಗತಿಯಷ್ಟೇ ಇರುತ್ತವೆ. ಯಾಕೆಂದರೆ ಸಾಮಾಜಿಕ ಮಾಧ್ಯಮಗಳು ಉರಿಯುವ ಬೆಂಕಿಗೆ ತುಪ್ಪಹೊಯ್ದಂತೆ ವದಂತಿಗಳಿಗೆ ನೀಡಿದ ಪ್ರಚಾರದಿಂದಾಗಿ ಗಾಳಿಯಲ್ಲಿ ಇನ್ನಷ್ಟು ರಕ್ತದ ವಾಸನೆ ಬರುತ್ತಿರುವುದು ಈಗಾಗಲೇ ನಮ್ಮ ಅನುಭವಕ್ಕೆ ಬರುತ್ತಿದೆ. ದಕ್ಷಿಣ ದಿಲ್ಲಿಯಲ್ಲಿ ಇನ್ನಷ್ಟು ಹತ್ಯೆಗಳು ನಡೆದಿಲ್ಲವಾದರೂ, ನಿನ್ನೆ (ಫೆಬ್ರವರಿ 29) ಕೇಂದ್ರ ದಿಲ್ಲಿಯಲ್ಲಿ ಜನರ ಗುಂಪುಗಳು ದಾಳಿಯಲ್ಲಿ ಪರ್ಯಾವಸನಗೊಂಡ ಘೋಷಣೆ ಕೂಗುವುದು ಕೇಳಿ ಬಂತು: ‘‘ದೇಶ್‌ಕೆ ಗದ್ದಾರೋಂಕೊ, ಗೋಲಿ ಮಾರೋ ಸಾಲೋಂಕೋ’’.
ಬಿಜೆಪಿಯ ಮಾಜಿ ಅಭ್ಯರ್ಥಿ ಕಪಿಲ್ ಮಿಶ್ರಾ ಈ ಹಿಂದೆ ಕೂಡ ಇದನ್ನು ಒಂದು ಚುನಾವಣಾ ಘೋಷಣೆಯಾಗಿ ಬಳಸಿದ್ದರು. ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ್ದಕ್ಕಾಗಿ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಮುರಳೀಧರ್ ದಿಲ್ಲಿ ಪೊಲೀಸರ ವಿರುದ್ಧ ಸಿಟ್ಟಾಗಿದ್ದರು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಫೆಬ್ರವರಿ 26ರ ನಡುರಾತ್ರಿ ಅವರನ್ನು ಪಂಜಾಬ್ ಹೈಕೋರ್ಟ್‌ಗೆ ವರ್ಗ ಮಾಡುವ ಆಜ್ಞೆ ಹೊರಬಿತ್ತು. ಕಪಿಲ್ ಮಿಶ್ರಾ ಪುನಃ ಬೀದಿಗೆ ಬಂದು ಅದೇ ಘೋಷಣೆ ಕೂಗುತ್ತಿದ್ದಾರೆ. ಮುಂದಿನ ನೋಟಿಸ್ ಬರುವವರೆಗೆ ಅದನ್ನೀಗ ಬಳಸಬಹುದಾಗಿದೆ. ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡುವ ತಮಾಷೆ ಹಾಗೂ ಆಟಗಳು ಹೊಸತಲ್ಲ. ನ್ಯಾಯಮೂರ್ತಿ ಲೋಯಾ ಅವರಿಗೆ ಏನಾಯಿತೆಂದು ನಮಗೆ ಗೊತ್ತಿದೆ. 2002ರಲ್ಲಿ ಗುಜರಾತ್‌ನಲ್ಲಿ ನರೋದಾ ಪಾಟಿಯಾದಲ್ಲಿ 96 ಮಂದಿ ಮುಸ್ಲಿಮರ ಹತ್ಯೆಯಲ್ಲಿ ಭಾಗಿಯಾಗಿ ಅಪರಾಧಿಯೆಂದು ವಿಚಾರಣೆಗೆ ಗುರಿಯಾಗಿ ಜೈಲು ಸೇರಿದ್ದ ಬಾಬು ಭಜರಂಗಿಯ ಕಥೆಯನ್ನು ನಾವು ಮರೆತಿರಬಹುದು. ಆತ ಯೂಟ್ಯೂಬ್‌ನಲ್ಲಿ ಹೇಳುತ್ತಿರುವುದನ್ನು ಈಗ ಕೇಳಿ, (ನರೇಂದ್ರ) ‘ಭಾ’ ನ್ಯಾಯಮೂರ್ತಿಗಳನ್ನು ‘ಸೆಟ್ಟಿಂಗ್’ ಮಾಡುವ ಮೂಲಕ ಹೇಗೆ ತನ್ನನ್ನು ಜೈಲಿನಿಂದ ಬಿಡುಗಡೆ ಮಾಡಿಸಿದರೆಂಬುದನ್ನು ಅವನು ಹೇಳುತ್ತಾನೆ.
ಚುನಾವಣೆಗಳು ನಡೆಯುವ ಮೊದಲು ಇಂತಹ ನರಮೇಧಗಳು ನಡೆಯುವುದನ್ನು ನಿರೀಕ್ಷಿಸಲು ನಾವು ಕಲಿತಿದ್ದೇವೆ. ಮತದಾರರನ್ನು ಧ್ರುವೀಕರಿಸಲು ಹಾಗೂ ತಾವು ಗೆಲ್ಲುವ ರೀತಿಯಲ್ಲಿ ಚುನಾವಣಾ ಕ್ಷೇತ್ರಗಳನ್ನು ನಿರ್ಮಿಸಲು ಇಂತಹ ನರಮೇಧಗಳು ಒಂದು ರೀತಿಯ ಪಾಶವೀ ಚುನಾವಣಾ ಪ್ರಚಾರಗಳಾಗಿವೆ. ಆದರೆ ದಿಲ್ಲಿಯಲ್ಲಿ ನರಹತ್ಯೆ ಚುನಾವಣೆಯೊಂದು ನಡೆದ ಬೆನ್ನಿಗೇ ಸಂಭವಿಸಿದೆ; ಬಿಜೆಪಿ-ಆರೆಸ್ಸೆಸ್ ಚುನಾವಣೆಯಲ್ಲಿ ದಯನೀಯ, ಅವಮಾನಕಾರಿ ಸೋಲನ್ನು ಅನುಭವಿಸಿದ ಬಳಿಕ ನಡೆದಿದೆ. ಇದು, ಈ ನರಹತ್ಯೆ ದಿಲ್ಲಿಗೆ ಒಂದು ಶಿಕ್ಷೆ ಬಿಜೆಪಿ ಆರೆಸ್ಸೆಸನ್ನು ಚುನಾವಣೆಯಲ್ಲಿ ಸೋಲಿಸಿದ್ದಕ್ಕಾಗಿ ನೀಡಲಾದ ಶಿಕ್ಷೆ ಮತ್ತು ಇದು ಬಿಹಾರದಲ್ಲಿ ಸದ್ಯದಲ್ಲೇ ನಡೆಯಲಿರುವ ಚುನಾವಣೆಗಳ ಒಂದು ಘೋಷಣೆ, ಬಿಹಾರದಲ್ಲಿಯೂ ದಿಲ್ಲಿಯ ಫಲಿತಾಂಶವೇ ಬಂದಲ್ಲಿ ಅಲ್ಲಿ ಏನಾಗಬಹುದೆಂಬುದರ ಒಂದು ಮುನ್ಸೂಚನೆ.
ಎಲ್ಲವೂ ದಾಖಲಾಗಿದೆ. ನಡೆದ ಎಲ್ಲದಕ್ಕೂ ದಾಖಲೆ ಇದೆ. ಏನೇನು ನಡೆಯಿತೋ ಅದೆಲ್ಲವನ್ನೂ ಎಲ್ಲರೂ ನೋಡಬಹುದಾಗಿದೆ. ಎಲ್ಲವನ್ನೂ ಕೇಳಬಹುದಾಗಿದೆ: ಕಪಿಲ್ ಮಿಶ್ರಾ, ಪರ್ವೇಶ್ ವರ್ಮಾ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರದ ಗೃಹ ಸಚಿವ ಅಮಿತ್ ಶಾ ಮತ್ತು ಸ್ವತಃ ಪ್ರಧಾನಮಂತ್ರಿಯವರು ಮಾಡಿರುವ ಪ್ರಚೋದನಕಾರಿ ಭಾಷಣಗಳು. ಆದರೂ ಕೂಡ ಎಲ್ಲವನ್ನೂ ತಲೆ ಕೆಳಗಾಗಿಸಲಾಗಿದೆ: ಸಂಪೂರ್ಣವಾಗಿ ಶಾಂತಿಯುತವಾದ ಇಡೀ ಭಾರತ ದೇಶ, ಬಹುತೇಕ ಮಹಿಳಾ ಪ್ರತಿಭಟನಾಕಾರರ ಬಲಿಪಶುವಾಗಿದೆ ಎಂದು ಅನ್ನಿಸುವಂತೆ ಮಾಡಲಾಗಿದೆ. ಬಹುತೇಕ ಮುಸ್ಲಿಮ್ ಪ್ರತಿಭಟನಾಕಾರರ-ಆದರೆ ಕೇವಲ ಮುಸ್ಲಿಮ್ ಪ್ರತಿಭಟನಾಕಾರರಲ್ಲ- ಪ್ರತಿಭಟನೆಗೆ ಭಾರತ ಬಲಿಪಶುವಾಗಿದೆ ಎಂಬಂತೆ ಚಿತ್ರಣ ನೀಡಲಾಗಿದೆ. ಹೆಚ್ಚು ಕಡಿಮೆ 75 ದಿನಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಾ ಬೀದಿಗಳಲ್ಲಿರುವ ಈ ಪ್ರತಿಭಟನಾಕಾರರಿಗೆ ಭಾರತವೊಂದು ಬಲಿಪಶುವಾಗಿದೆ ಎಂದು ತೋರುವಂತೆ ಮಾಡಲಾಗಿದೆ.
ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ನಾಗರಿಕತ್ವಕ್ಕೆ ಒಂದು ಫಾಸ್ಟ್ ಟ್ರ್ಯಾಕ್ ಮಾರ್ಗವನ್ನು (ರೂಟ್) ತೋರಿಸುವ ಸಿಎಎ ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಸಂಪೂರ್ಣವಾಗಿ ಮುಸ್ಲಿಮ್ ವಿರೋಧಿಯಾಗಿದೆ. ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಹಾಗೂ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಜೊತೆಗೆ ಈ ಸಿಎಎ ಕೇವಲ ಮುಸ್ಲಿಮರಷ್ಟೇ ಅಲ್ಲ, ಅವಶ್ಯಕವಾದ ದಾಖಲೆಗಳಿಲ್ಲದ ಮಿಲಿಯಗಟ್ಟಲೆ ಭಾರತೀಯರನ್ನು ಅಕ್ರಮ ವಲಸಿಗ ರನ್ನಾಗಿಸುತ್ತದೆ, ಅಸ್ಥಿರಗೊಳಿಸುತ್ತದೆ ಹಾಗೂ ಪಾತಕಿಗಳನ್ನಾಗಿಸುತ್ತದೆ. ಇವರಲ್ಲಿ ಇವತ್ತು ‘‘ಗೋಲಿ ಮಾರೋ ಸಾಲೋಂ ಕೋ’’ ಎಂದು ಕೂಗುತ್ತಿರುವವರು ಕೂಡ ಸೇರಿರುತ್ತಾರೆ.
ಒಮ್ಮೆ ನಾಗರಿಕತ್ವ ಪ್ರಶ್ನಾರ್ಹವಾಯಿತೆಂದರೆ ಪ್ರಶ್ನಿಸಲ್ಪಟ್ಟಿತೆಂದರೆ ಎಲ್ಲವೂ ಪ್ರಶ್ನಿಸಲ್ಪಡುತ್ತದೆ -ನಿಮ್ಮ ಮಕ್ಕಳ ಹಕ್ಕುಗಳು, ನಿಮ್ಮ ಮತದಾನದ ಹಕ್ಕುಗಳು, ನಿಮ್ಮ ಜಮೀನಿನ ಹಕ್ಕುಗಳು ಎಲ್ಲವೂ.
ಹನ್ನಾ ಅರೆಂಡ್‌ಟ್ ಹೇಳಿದ ಹಾಗೆ ‘‘ಪೌರತ್ವವೇ ನಿಮಗೆ ಹಕ್ಕುಗಳನ್ನು ಪಡೆಯುವ ಹಕ್ಕನ್ನು ನೀಡುತ್ತದೆ’’ ಹೀಗಾಗುವುದಿಲ್ಲವೆಂದು ಯಾರಾದರೂ ತಿಳಿಯುವುದಾದರೆ ದಯಮಾಡಿ ಅಸ್ಸಾಮಿನ ಕಡೆ ನಿಮ್ಮ ಗಮನವನ್ನು ಹರಿಸಿ. ಅಲ್ಲಿ 20 ಲಕ್ಷ ಜನರಿಗೆ-ಹಿಂದೂಗಳು, ಮುಸ್ಲಿಮರು, ದಲಿತರು ಮತ್ತು ಆದಿವಾಸಿಗಳಿಗೆ ಏನಾಗಿದೆ ನೋಡಿ. ಈಗ ಮೇಘಾಲಯದಲ್ಲಿ ಸ್ಥಳೀಯ ಬುಡಕಟ್ಟು ಜನರು ಮತ್ತು ಬುಡಕಟ್ಟೇತರ ಜನ ಸಮುದಾಯಗಳ ನಡುವೆ ತಿಕ್ಕಾಟ, ಸಮಸ್ಯೆ ಆರಂಭವಾಗಿದೆ. ಶಿಲ್ಲಾಂಗ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಸ್ಥಳೀಯರಲ್ಲದವರು ಒಳಗೆ ಬಾರದಂತೆ ರಾಜ್ಯದ ಗಡಿಗಳನ್ನು ಮುಚ್ಚಲಾಗಿದೆ.
ಎನ್‌ಪಿಆರ್-ಎನ್‌ಆರ್‌ಸಿ-ಸಿಎಎಯ ಏಕೈಕ ಉದ್ದೇಶ ಭಾರತದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಉಪಖಂಡದಲ್ಲಿ ಜನರನ್ನು ಅಸ್ಥಿರಗೊಳಿಸಿ ವಿಭಜಿಸುವುದೇ ಆಗಿದೆ. ಅವರು ಅಸ್ತಿತ್ವದಲ್ಲಿದ್ದರೆ, ಭಾರತದ ಹಾಲಿ ಗೃಹ ಸಚಿವರು ಯಾರನ್ನು ಬಾಂಗ್ಲಾದೇಶಿ ‘‘ಗೆದ್ದಲು ಹುಳಗಳು’’ ಎಂದು ಕರೆಯುತ್ತಾರೋ ಅವರನ್ನೆಲ್ಲ ದಿಗ್ಬಂಧನ ಕೇಂದ್ರಗಳಲ್ಲಿ ಇಡಲು ಸಾಧ್ಯವಿಲ್ಲ ಮತ್ತು ಅವರ ದೇಶಕ್ಕೆ ಮರಳಿ ಕಳುಹಿಸಲು ಸಾಧ್ಯವಿಲ್ಲ. ಇಂತಹ ಶಬ್ದಗಳನ್ನು ಬಳಸುವ ಮೂಲಕ ಮತ್ತು ಇಂತಹ ಹಾಸ್ಯಾಸ್ಪದ ಭಯಾನಕ ಯೋಜನೆಗಳನ್ನು ರೂಪಿಸುವ ಮೂಲಕ ಈ ಸರಕಾರವು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ಮಿಲಿಯಗಟ್ಟಲೆ ಹಿಂದೂಗಳಿಗೆ ಅಪಾಯ ತಂದೊಡ್ಡುತ್ತಿದೆ.
ನಾವೀಗ ಎಲ್ಲಿಗೆ ಬಂದು ನಿಂತಿದ್ದೇವೆ ನೋಡಿ.
1947ರಲ್ಲಿ ನಾವು ವಸಾಹತುಶಾಹಿ ಆಡಳಿತದಿಂದ ಬಿಡುಗಡೆ ಪಡೆದು ಸ್ವಾತಂತ್ರ್ಯ ಗಳಿಸಿದೆವು. ನಮ್ಮ ಇಂದಿನ ಆಳುವ ನಾಯಕರನ್ನು ಹೊರತುಪಡಿಸಿ ಬಹುತೇಕ ಪ್ರತಿಯೊಬ್ಬರೂ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದರು. ಅಂದಿನಿಂದ ಆರಂಭಿಸಿ ಎಲ್ಲ ರೀತಿಯ ಸಾಮಾಜಿಕ ಚಳವಳಿಗಳು, ಜಾತಿ ವಿರೋಧಿ ಹೋರಾಟಗಳು, ಬಂಡವಾಳಶಾಹಿ ವಿರೋಧಿ ಹೋರಾಟಗಳು, ಮಹಿಳಾ ಹೋರಾಟಗಳು ನಮ್ಮ ಇದುವರೆಗಿನ ಪ್ರಯಾಣದ ಹಾದಿಯಲ್ಲಿ ಸಾಗಿ ಬಂದಿವೆ.
1960ರ ದಶಕದಲ್ಲಿ ಕ್ರಾಂತಿಗೆ ನೀಡಿದ ಕರೆ ನ್ಯಾಯಕ್ಕಾಗಿ ಸಂಪತ್ತಿನ ಮರು ಹಂಚಿಕೆಗಾಗಿ ಮತ್ತು ಆಳುವ ವರ್ಗವನ್ನು ಅಧಿಕಾರದಿಂದ ಕಿತ್ತೆಸೆಯುವುದಕ್ಕಾಗಿ ಮಂಡಿಸಿದ ಬೇಡಿಕೆಯಾಗಿತ್ತು.
1990ರ ದಶಕದಲ್ಲಿ, ಮಿಲಿಯಗಟ್ಟಲೆ ಜನರನ್ನು ಅವರದ್ದೇ ಆದ ಜಮೀನು ಹಾಗೂ ಹಳ್ಳಿಗಳಿಂದ ಸ್ಥಳಾಂತರಗೊಳಿಸುವುದರ ವಿರುದ್ಧ ನಾವು ಹೋರಾಟ ನಡೆಸಬೇಕಾಯಿತು. ಹೊಸ ಭಾರತದ ನಿರ್ಮಾಣಕ್ಕೆ ಇವರು ಸಂತ್ರಸ್ತ ಬಲಿಪಶುಗಳಾದರು. ಈ ನವಭಾರತದಲ್ಲಿ ಭಾರತದ ಅತ್ಯಂತ ಶ್ರೀಮಂತ 63 ಕುಟುಂಬಗಳ ಕೈಯಲ್ಲಿ 1,200 ಮಿಲಿಯ ಜನರ ವಾರ್ಷಿಕ ಬಜೆಟ್‌ನ ಮೊತ್ತಕ್ಕಿಂತ ಹೆಚ್ಚಿನ ಸಂಪತ್ತು ಕೇಂದ್ರಿತವಾಗಿದೆ.
ಈಗ, ಈ ದೇಶದ ನಿರ್ಮಾಣದಲ್ಲಿ ಯಾವ ಯಾವ ಪಾತ್ರವನ್ನೂ ವಹಿಸದಿದ್ದ ಜನರ ಎದುರು ನಾಗರಿಕರಾಗಿ ನಮ್ಮ ಹಕ್ಕುಗಳನ್ನು ನೀಡುವಂತೆ ಅಂಗಲಾಚುವ ಸ್ಥಿತಿಗೆ ನಾವು ತಳ್ಳಲ್ಪಟ್ಟಿದ್ದೇವೆ ಮತ್ತು ಹೀಗೆ ಅಂಗಲಾಚುತ್ತಿರುವಂತೆಯೇ, ಸರಕಾರವು ತಾನು ನೀಡಬೇಕಾದ ರಕ್ಷಣೆಯನ್ನು ಹಿಂದೆಗೆದುಕೊಳ್ಳುವುದನ್ನು, ಪೊಲೀಸರು ಕೋಮುವಾದಿಗಳಾಗುತ್ತಿರುವುದನ್ನು, ನ್ಯಾಯಾಂಗ ನಿಧಾನವಾಗಿ ತನ್ನ ಕರ್ತವ್ಯ ತ್ಯಾಗ ಮಾಡುತ್ತಿರುವುದನ್ನು, ಮಾಧ್ಯಮಗಳು ತಾವು ಮಾಡಬೇಕಾದ ಕೆಲಸದ ವಿರುದ್ಧವಾದ ಕೆಲಸ ಮಾಡುತ್ತಿರುವುದನ್ನು ನಾವು ಅಸಹಾಯಕರಾಗಿ ನೋಡುತ್ತಿದ್ದೇವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಅಸಾಂವಿಧಾನಿಕವಾಗಿ ಕಿತ್ತುಕೊಂಡು ಇಂದಿಗೆ 210 ದಿನಗಳಾಗಿವೆೆ. ಮೂವರು ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ಸಾವಿರಾರು ಮಂದಿ ಕಾಶ್ಮೀರಿಗಳು ಇನ್ನೂ ಜೈಲಿನಲ್ಲೇ ಇದ್ದಾರೆ. ಏಳು ಮಿಲಿಯ ಮಂದಿ ಅಕ್ಷರಶಃ ಒಂದು ಮಾಹಿತಿ ದಾಳಿಯ ಅಡಿಯಲ್ಲಿ ಬದುಕುತ್ತಿದ್ದಾರೆ. ಫೆಬ್ರವರಿ 26ರಂದು ದಿಲ್ಲಿಯ ಬೀದಿಗಳು ಶ್ರೀನಗರದ ಬೀದಿಗಳಂತೆ ಕಾಣಿಸಿದವು...
ಒಂದು ಸಂವಿಧಾನದಿಂದ ಆಳಲ್ಪಡದ ಒಂದು ಪ್ರಜಾಪ್ರಭುತ್ವ ಒಂದು ಬಹುಮತೀಯ (ಮೆಜಾರಿಟೇರಿಯನ್) ದೇಶ, ಸರಕಾರವಾಗು ವುದಷ್ಟೇ ಸಾಧ್ಯ. ನೀವು ಒಂದು ಸಂವಿಧಾನವನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಈ ಸರಕಾರ ನಡೆದುಕೊಳ್ಳುತ್ತಿರುವ ಹಾಗೆ, ಅದು ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ನಡೆದುಕೊಳ್ಳುವುದೆಂದರೆ ಅದು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶ ಮಾಡುವುದೆಂದೇ ಅರ್ಥ. ಪ್ರಾಯಶಃ ಇದೇ ಸರಕಾರದ ಗುರಿ ಇರಬಹುದು. ಇದು ಕೊರೋನ ವೈರಸ್‌ನ ನಮ್ಮ ಆವೃತ್ತಿ, ನಮ್ಮ ರೂಪ. ನಾವು ರೋಗಗ್ರಸ್ತರಾಗಿದ್ದೇವೆ.
ಯಾರಿಂದಲೂ ಯಾವ ದಿಕ್ಕಿನಲ್ಲಿಯೂ ಸಹಾಯ ಕಾಣಿಸುತ್ತಿಲ್ಲ. ಯಾವ ವಿದೇಶದಿಂದಲೂ ಇಲ್ಲ. ವಿಶ್ವಸಂಸ್ಥೆಯಿಂದಲೂ ಇಲ್ಲ. ವ್ಯವಸ್ಥೆ ವಿಫಲವಾಗುತ್ತಿದೆ, ಕುಸಿಯುತ್ತಿದೆ...
ನಮಗೆ ಬೇಕಾಗಿರುವುದು ಅನ್ ಪಾಪ್ಯುಲರ್ ಆಗಲು ಸಿದ್ಧರಿರುವ ಜನರು. ತಮ್ಮನ್ನು ತಾವು ಅಪಾಯಕ್ಕೊಡ್ಡಲು ಸಿದ್ಧರಿರುವವರು...
ನಮಗೆ ಮಾಡಲು ಕೆಲಸ ಇದೆ. ಗೆಲ್ಲೇಕಾದ ಒಂದು ಜಗತ್ತು ಇದೆ.