varthabharthi


ಸುಗ್ಗಿ

ಈ ದೇಶ ಪ್ರತಿಭಟನಾಕಾರರಿಗೆ ಅಲ್ಲ

ವಾರ್ತಾ ಭಾರತಿ : 8 Mar, 2020
ಮೂಲ : ಜಿ ಸಂಪತ್ ಅನು: ನಾ ದಿವಾಕರ

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಸಮುದಾಯದ ಜನರು ತಮ್ಮ ಮೂಲ ಪೌರತ್ವ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿಯಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ತತ್ವಶಾಸ್ತ್ರಜ್ಞ ಹನ್ನಾ ಅರೆಂಟ್ ಹೇಳಿದಂತೆ ಹಕ್ಕುಗಳನ್ನು ಪಡೆಯುವ ಹಕ್ಕಿಗಾಗಿ ಹೋರಾಟ ಇದಾಗಿದೆ.

ಭಾರತ ಇಂದು ಪ್ರಕ್ಷುಬ್ಧವಾಗಿದೆ. 40ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿರುವ ಈಶಾನ್ಯ ದಿಲ್ಲಿಯ ಕೋಮು ಹಿಂಸಾಚಾರ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ಮೂಲಕ ದೇಶವ್ಯಾಪಿ ಧ್ರುವೀಕರಣ ಪ್ರಕ್ರಿಯೆ ಆರಂಭವಾದ ನಂತರದಲ್ಲಿ ನಡೆದ ಇತ್ತೀಚಿನ ಅಧ್ಯಾಯ ಎನ್ನಬಹುದು. ಸಿಎಎ ಪರ ಮತ್ತು ಸಿಎಎ ವಿರೋಧಿ ಎಂದು ಸಾಮಾನ್ಯವಾಗಿ ಬಿಂಬಿಸಲ್ಪಟ್ಟಿರುವ ದಿಲ್ಲಿ ಗಲಭೆ ಮತ್ತು ಹಿಂಸಾಕಾಂಡವನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಕಳೆದ ಎರಡು ತಿಂಗಳ ಅವಧಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಈ ಪ್ರತಿಭಟನೆಗಳನ್ನು ಎರಡು ರೀತಿಯಲ್ಲಿ ಗುರುತಿಸಬಹುದು. ಮೊದಲನೆಯದು ರ್ಯಾಲಿಗಳು ಮತ್ತು ಪಾದಯಾತ್ರೆಗಳು. ಈ ಸಂದರ್ಭದಲ್ಲಿ ಒಂದೇ ರೀತಿಯಲ್ಲಿ ಒಟ್ಟಾಗಿ ಸೇರುತ್ತಿದ್ದ ಜನರು ಕೆಲ ಕಾಲದ ನಂತರ ಮನೆಗೆ ಹಿಂದಿರುಗುವ ಖಚಿತತೆಯೊಂದಿಗೆ ಭಾಗವಹಿಸುತ್ತಿದ್ದರು. ಇಂತಹ ಪ್ರತಿಭಟನೆಗಳು ಮತ್ತೆ ಮತ್ತೆ ಆಯೋಜಿಸಲಾಗಿದ್ದರೂ ಇವೆಲ್ಲವೂ ಒಂದು ದಿನದ ಅಥವಾ ಕೆಲವು ಗಂಟೆಗಳ ಕಾರ್ಯಕ್ರಮಗಳಾಗಿದ್ದವು. ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪ್ರತಿಭಟನೆ ಈ ವರ್ಗಕ್ಕೆ ಸೇರಿದ್ದು. ಇಂತಹ ಪ್ರತಿಭಟನೆಗಳು ಸಾಮಾನ್ಯವಾಗಿ ಕಾನೂನು ಬದ್ಧ ಅಥವಾ ಕಾನೂನು ಉಲ್ಲಂಘನೆಯ ಚೌಕಟ್ಟಿಗೆ ಒಳಪಡುವುದೇ ಅಲ್ಲದೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 144ರ ವ್ಯಾಪ್ತಿಗೆ ಒಳಪಡುವುದೋ ಇಲ್ಲವೋ ಎನ್ನುವುದನ್ನು ಅವಲಂಬಿಸಬೇಕಾಗುತ್ತದೆ. ಎರಡನೇ ರೀತಿಯ ಪ್ರತಿಭಟನೆಗಳು ಒಂದೇ ಸ್ಥಳದಲ್ಲಿ ಅನಿರ್ದಿಷ್ಟಕಾಲ ನಡೆಯುತ್ತವೆ. ಇಲ್ಲಿ ಸಮಯದ ಚೌಕಟ್ಟು ಮುಕ್ತವಾಗಿರುತ್ತದೆ ಮತ್ತು ಪ್ರತಿಭಟನಾಕಾರರ ಬೇಡಿಕೆಗಳ ಈಡೇರಿಕೆ ಅಥವಾ ಕನಿಷ್ಠ ಪಕ್ಷ ಬೇಡಿಕೆಗಳನ್ನು ಮಾನ್ಯ ಮಾಡುವುದು ಮುಖ್ಯವಾಗಿರುತ್ತದೆ.

ಈ ಎರಡೂ ರೀತಿಯ ಪ್ರತಿಭಟನೆಗಳಲ್ಲಿ ಪ್ರಭುತ್ವವನ್ನು ಕುರಿತಂತೆ ಕೆಲವು ಗ್ರಹಿಕೆಗಳನ್ನು ಗುರುತಿಸಬಹುದು. ಮೊದಲನೆಯ ಗ್ರಹಿಕೆ ಎಂದರೆ ಪ್ರಭುತ್ವ ಪ್ರಜಾಸತ್ತಾತ್ಮಕವಾಗಿದೆಮತ್ತು ಎಲ್ಲ ರೀತಿಯ ಅಹಿಂಸಾತ್ಮಕ ಪ್ರತಿರೋಧವನ್ನು ಮಾನ್ಯ ಮಾಡುತ್ತದೆ ಎನ್ನುವುದು. ಎರಡನೆಯ ಗ್ರಹಿಕೆ ಎಂದರೆ, ಪ್ರಭುತ್ವಕ್ಕೆ ಒಂದು ಪ್ರಜ್ಞೆ ಇರುತ್ತದೆ, ಈ ಪ್ರಜ್ಞೆ ಮತ್ತು ತೋಳ್ಬಲವನ್ನು ಹೊರತುಪಡಿಸಿ ಇತರ ಪ್ರಭಾವಕ್ಕೂ (ಅಂದರೆ ನೈತಿಕ ಮೌಲ್ಯಗಳು) ಒಳಪಡುತ್ತದೆ ಎನ್ನುವುದು. ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳ ದೃಷ್ಟಿಯಲ್ಲಿ ನೈತಿಕ ಮೌಲ್ಯಗಳು ಎಂದರೆ ಭಾರತದ ಸಂವಿಧಾನ. ಈ ರೀತಿಯ ಅಹಿಂಸಾತ್ಮಕ ಪ್ರತಿಭಟನೆಗಳು, ಜನತೆಗೆ ಆಗಿರುವ ಅನ್ಯಾಯದ ಬಗ್ಗೆ ಪ್ರಜೆಗಳ ಗಮನ ಸೆಳೆಯುವ ಮೂಲಕ ಸರಕಾರದ ಮೇಲೆ ಒತ್ತಡ ತರಲು ಯತ್ನಿಸುತ್ತವೆ. ಇಲ್ಲಿ ಸಾರ್ವಜನಿಕರ ಸಾಂವಿಧಾನಿಕ ಮೌಲ್ಯಗಳ ಪ್ರತಿಪಾದನೆಯ ಪರಿಣಾಮದಿಂದ ಜಾಗೃತವಾದ ಸರಕಾರ ತರ್ಕಬದ್ಧವಾಗಿ ಯೋಚಿಸುತ್ತದೆ ಎಂಬ ಗ್ರಹಿಕೆ ಇರುತ್ತದೆ. ಇಂತಹ ಸಂದರ್ಭದಲ್ಲಿ ರಾಜೀ ಸೂತ್ರವನ್ನು ಅನುಸರಿಸುವ ಮೂಲಕ ಎಲ್ಲರೂ ಮನೆಗೆ ಹಿಂದಿರುಗುವ ಸಾಧ್ಯತೆ ಇರುತ್ತದೆ. ಒಂದು ಕಾರ್ಯಶೀಲ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಹಿಂಸಾತ್ಮಕ ಸಮೂಹ ಪ್ರತಿಭಟನೆಗಳು ಹೀಗೆಯೇ ನಡೆಯುತ್ತವೆ ಮತ್ತು ಅಂತ್ಯವಾಗುತ್ತವೆ. ಸ್ವತಂತ್ರ ಭಾರತದಲ್ಲಿ ಇಂತಹ ಶಾಂತಿಯುತ ಪ್ರತಿಭಟನೆಗಳು ಯಶಸ್ವಿಯಾಗಿರುವುದನ್ನೂ ಹಲವು ಸಂದರ್ಭಗಳಲ್ಲಿ ಕಂಡಿದ್ದೇವೆ.

ಆದರೆ ಗತಕಾಲದ ಯಶಸ್ವಿ ಪ್ರತಿಭಟನೆಗಳನ್ನು ಎರಡು ಕಾರಣಗಳಿಗಾಗಿ ಪ್ರಸ್ತುತ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಹೋಲಿಸಲಾಗುವುದಿಲ್ಲ. ಮೊದಲನೆಯದಾಗಿ, ಹಿಂದಿನ ದಿನಗಳಿಗೆ ಹೋಲಿಸಿದರೆ ಕಾರ್ಯಾಂಗ ಮತ್ತು ಪ್ರಭುತ್ವದ ಇತರ ಅಂಗಗಳ ನಡುವಿನ ಸಾಂಸ್ಥಿಕ ನಿಯಂತ್ರಣ ಮತ್ತು ನಿರ್ವಹಣೆಯ ಪ್ರಕ್ರಿಯೆ ಹೆಚ್ಚು ಹೆಚ್ಚು ಕೋಮು ಧ್ರುವೀಕರಣಕ್ಕೆ ಬದ್ಧವಾಗುತ್ತಿದೆ. ತತ್ಪರಿಣಾಮ, ಪ್ರತಿಭಟನೆಗಳನ್ನು ನಿಯಂತ್ರಿಸುವಲ್ಲಿ ಪ್ರಭುತ್ವದ ಅಧಿಕಾರಶಾಹಿ ಆಡಳಿತವರ್ಗ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಎರಡನೆಯ ಕಾರಣ ಎಂದರೆ, ದೇಶದ ರಾಜಕಾರಣದಲ್ಲಿ ಈ ರೀತಿಯ ಕೋಮು ಧ್ರುವೀಕರಣ ಪರಾಕಾಷ್ಠೆ ತಲುಪಿರುವುದರಿಂದ, ಅಧಿಕಾರಶಾಹಿ ಆಡಳಿತ ವ್ಯವಸ್ಥೆ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಏನೇ ದೋಷಾರೋಪಣೆಗಳನ್ನು ಮಾಡಿದರೂ ಅದು ರಾಜಕೀಯವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹಿನ್ನೆಲೆಯಲ್ಲೇ ಉಗಮಿಸಿರುವ ‘‘ಒಳ್ಳೆಯ ಪ್ರತಿಭಟನೆ’’ ಮತ್ತು ‘‘ಕೆಟ್ಟ ಪ್ರತಿಭಟನೆ ’’ ಎಂಬ ದ್ವಂದ್ವವನ್ನೂ ಪರಿಶೀಲಿಸಬೇಕಿದೆ. ಈ ವರ್ಗೀಕರಣವನ್ನು ಅಹಿಂಸಾತ್ಮಕ ಮತ್ತು ಹಿಂಸಾತ್ಮಕ ಎಂದು ಪರಿಭಾವಿಸುವುದು ತರ್ಕಬದ್ಧ ಎನಿಸಿಬಿಡುತ್ತದೆ. ಒಂದು ನಿರ್ದಿಷ್ಟ ಪ್ರತಿಭಟನೆಯನ್ನು ನಾವು ಹೇಗೆ ಪರಿಭಾವಿಸುತ್ತೇವೆ ಎನ್ನುವುದರ ಮೇಲೆ, ಪ್ರಭುತ್ವದ ಹಸ್ತಕ್ಷೇಪ ಮತ್ತು ಕಾರ್ಯಾಚರಣೆಯ ಸಮರ್ಥನೆ ಅವಲಂಬಿಸುತ್ತದೆ. ಇಲ್ಲಿ ಎರಡು ಸಾಧ್ಯತೆಗಳಿರುತ್ತವೆ. ಜನರ ಸಮೂಹ ಹೋರಾಟದ ಹಕ್ಕುಗಳು ಮತ್ತು ಮಾನವ ಘನತೆಗೆ ಮಾನ್ಯತೆ ನೀಡಿ ಕಾನೂನುಬದ್ಧವಾದ ನಿಯಂತ್ರಣವಾದರೂ ಆಗಿರಬಹುದು ಅಥವಾ ಬುಲೆಟ್ ಅಲ್ಲದಿದ್ದರೂ ಲಾಠಿ, ಅಶ್ರುವಾಯುವನ್ನು ಅವ್ಯಾಹತವಾಗಿ ಮುಕ್ತವಾಗಿ ಪ್ರಯೋಗಿಸುವ ವಿಧಾನವೂ ಆಗಿರಬಹುದು. ಆದರೆ ಅಧಿಕಾರಸ್ಥ ಸರಕಾರ ಯಾವುದೇ ಪ್ರತಿರೋಧವನ್ನು ಸಹಿಸದೆ ಇದ್ದ ಸಂದರ್ಭದಲ್ಲಿ ಈ ಎರಡೂ ಸಾಧ್ಯತೆಗಳು ಭಗ್ನವಾಗಬಹುದು. ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಪ್ರತಿಭಟನೆ ಅಥವಾ ಪ್ರತಿರೋಧ ಒಳ್ಳೆಯದೋ ಅಥವಾ ಕೆಟ್ಟದೋ ಎಂದು ನಿರ್ಧರಿಸಲು ಪ್ರತಿಭಟನೆ ಮಾಡುತ್ತಿರುವವರು ಯಾರು ಎನ್ನುವುದೇ ಮಾನದಂಡವಾಗುತ್ತಿದೆ. ಅವರ ಬಹುಸಂಖ್ಯಾತ ಸಮುದಾಯವೋ ಅಥವಾ ಅಲ್ಪಸಂಖ್ಯಾತರೋ ಎನ್ನುವುದು ನಿರ್ಣಾಯಕವಾಗುತ್ತದೆ. ಪ್ರಧಾನವಾಗಿ ಕಂಡುಬರುವ ಚರ್ಚೆಗಳಲ್ಲಿ ಪ್ರತಿಭಟನೆಯೊಂದನ್ನು ಯಾವುದೋ ಹಿಂಸಾಚಾರಕ್ಕೆ ಬೆಸೆಯುವ ಮೂಲಕ ಪ್ರತಿರೋಧಕ್ಕೆ ಮಸಿಬಳಿಯಲು ಯತ್ನಿಸಲಾಗುತ್ತದೆ. ಆಗಲೂ ಮೇಲಿನ ಎರಡೂ ಸಾಧ್ಯತೆಗಳು ಭಗ್ನವಾಗುತ್ತವೆ. ಈ ಸಂದರ್ಭದಲ್ಲಿ ಜಾಮಿಯಾ ನಗರದಲ್ಲಿ ನಡೆದ ಬಸ್ ದಹನದ ಘಟನೆಯ ಸುತ್ತಲಿನ ವಿವಾದವನ್ನು ಗಮನಿಸಬಹುದು. ಇಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರು ಪರಸ್ಪರ ದೋಷಾರೋಪಗಳನ್ನು ಮಾಡಿದ್ದನ್ನು ಗಮನಿಸಬಹುದು. ಬಸ್ ದಹನವಾದ ಸತ್ಯಾಸತ್ಯತೆಗಳು ಇನ್ನೂ ವಿವಾದಾಸ್ಪದವಾಗಿದ್ದರೂ ಈ ಘಟನೆಯ ನಂತರ ಸಿಎಎ-ಎನ್‌ಆರ್‌ಸಿ ವಿರುದ್ಧ ಜಾಮಿಯಾದಲ್ಲಿ ನಡೆದ ಪ್ರತಿಭಟನೆಯನ್ನು ಹಿಂಸಾತ್ಮಕ ಎಂದು ಬಿಂಬಿಸಲು ಸಾಧ್ಯವಾಯಿತು.

ಪ್ರಜ್ಞೆಯ ಶೋಧದಲ್ಲಿ ಈ ಪ್ರತಿಭಟನೆಗಳು ಎದುರಿಸುತ್ತಿರುವ ಬಹುಮುಖ್ಯ ಪ್ರಶ್ನೆ ಎಂದರೆ ಸರಕಾರಕ್ಕೆ ಪ್ರಜಾತಂತ್ರದ ಮೌಲಿಕ ಪ್ರಜ್ಞೆ ಇದೆ ಎಂಬ ಭಾವನೆಯೇ ಸುಳ್ಳಾಗಿದ್ದರೆ ಏನು ಮಾಡುವುದು? ಈ ಕುರಿತು ಯೋಚಿಸುವುದೇ ಭೀತಿ ಸೃಷ್ಟಿಸುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಸಮುದಾಯದ ಜನರು ತಮ್ಮ ಮೂಲ ಪೌರತ್ವ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿಯಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ತತ್ವಶಾಸ್ತ್ರಜ್ಞ ಹನ್ನಾ ಅರೆಂಟ್ ಹೇಳಿದಂತೆ ಹಕ್ಕುಗಳನ್ನು ಪಡೆಯುವ ಹಕ್ಕಿಗಾಗಿ ಹೋರಾಟ ಇದಾಗಿದೆ. ಧಾರ್ಮಿಕ ಸ್ವಾತಂತ್ರವನ್ನು ಕುರಿತಂತೆ ವಿಶ್ವದ ಹೆಸರಾಂತ ಸಂಘ ಸಂಸ್ಥೆಗಳು ಸಿಎಎ-ಎನ್‌ಆರ್‌ಸಿ ಮುಸ್ಲಿಮ್ ಸಮುದಾಯದ ವಿರುದ್ಧ ತಾರತಮ್ಯ ಎಸಗುತ್ತದೆ ಎಂದು ಅಭಿಪ್ರಾಯಪಟ್ಟಿವೆ. ಆದ್ದರಿಂದ ಈ ಹಿಂದಿನ ಘಟನೆಗಳಲ್ಲಿನ ಸಮೂಹ ಸಂಘಟನೆಗಿಂತಲೂ ವಿಭಿನ್ನವಾಗಿ ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು, ಸೈದ್ಧಾಂತಿಕ ಪ್ರಚೋದನೆಯಿಂದ ಬಹುಮತತ್ವ ಕಾರ್ಯಸೂಚಿ ಇರುವ ಸರಕಾರದ ವಿರುದ್ಧ ನಡೆಯುತ್ತಿವೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಕುರಿತಂತೆ, ಪ್ರಸ್ತುತ ಬಹುಮತತ್ವದ ಸರಕಾರ ತನ್ನ ಪ್ರಜಾಸತ್ತಾತ್ಮಕ ಪ್ರಜ್ಞೆಯನ್ನು ಕಳೆದುಕೊಂಡುಬಿಟ್ಟಿದ್ದಲ್ಲಿ ಏನು ಮಾಡುವುದು ? ಈ ಕಾರಣಕ್ಕಾಗಿಯೇ ಕೇಂದ್ರ ಸರಕಾರ ಪ್ರತಿಭಟನಾಕಾರರೊಡನೆ ಮಾತುಕತೆ ನಡೆಸುವುದರಲ್ಲಿ ನಿರಾಸಕ್ತಿ ತೋರುತ್ತಿದೆಯೇ? ಸಿಎಎ ವಿರೋಧಿ ಹೋರಾಟಗಳ ಬಗ್ಗೆ ಸರಕಾರದ ಧೋರಣೆಯಲ್ಲಿ ಗುರುತಿಸಬಹುದಾದ ಒಂದೇ ಅಂಶವೆಂದರೆ, ಸರಕಾರದ ಉದ್ದೇಶ ಈ ಹೋರಾಟಗಳಿಗೆ ಕಳಂಕ ತರುವುದೇ ಆಗಿದೆ. ಇದನ್ನು ಸಾಬೀತುಪಡಿಸಲು ಇರುವ ಏಕೈಕ ಮಾರ್ಗ ಎಂದರೆ ಹೋರಾಟವನ್ನು ಹಿಂಸಾತ್ಮಕ ಧೋರಣೆಗೆ ಸಮೀಕರಿಸುವುದು.

ಈ ತಂತ್ರಗಾರಿಕೆಯಲ್ಲಿ ಸುದ್ದಿ ಉದ್ದಿಮೆ ಮತ್ತು ಸಾಮಾಜಿಕ ತಾಣಗಳ ಕಾಲಾಳುಗಳು ಸರಕಾರಕ್ಕೆ ಪೂರ್ಣ ಬೆಂಬಲ ನೀಡುತ್ತಿದ್ದಾರೆ. ಮತ್ತೊಂದು ಉಪ ತಂತ್ರಗಾರಿಕೆಯ ಮೂಲಕ ಪ್ರತಿಭಟನಾಕಾರರನ್ನು ತುಕ್ಡೇ ತುಕ್ಡೇ ಗ್ಯಾಂಗ್, ಇಸ್ಲಾಮಿಕ್ ಉಗ್ರರು, ನಗರ ನಕ್ಸಲರು ಮುಂತಾದ ಹೆಸರುಗಳನ್ನು ಬಳಸುವ ಮೂಲಕ ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ.

ಫೆಬ್ರವರಿ 23ರಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಭಾಷಣ ಮಾಡಿದ ನಂತರ ಈ ತಂತ್ರಗಾರಿಕೆಯೇ ವ್ಯವಸ್ಥಿತವಾಗಿ ಅನಾವರಣಗೊಂಡಿದೆ. ತಮ್ಮ ಭಾಷಣದಲ್ಲಿ ಕಪಿಲ್ ಮಿಶ್ರಾ, ಜಫ್ರಾಬಾದ್ ಮೆಟ್ರೋ ನಿಲ್ದಾಣದ ಬಳಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಲು ನೆರೆದಿರುವ ಮಹಿಳೆಯರನ್ನು ಮೂರು ದಿನಗಳೊಳಗಾಗಿ ಖಾಲಿ ಮಾಡದಿದ್ದರೆ ತಮ್ಮ ಬೆಂಬಲಿಗರು ಕೈಕಟ್ಟಿ ಕೂಡುವುದಿಲ್ಲ ಎಂದು ಘೋಷಿಸಿದ್ದರು. ಇಂತಹ ಪ್ರಚೋದನಕಾರಿ ಮಾತುಗಳನ್ನಾಡಿದರೂ ಸರಕಾರ ಯಾವುದೇ ಕಾನೂನು ಕ್ರಮವನ್ನು ಜರುಗಿಸಲಿಲ್ಲ. ಕೆಲವೇ ದಿನಗಳ ನಂತರ ಜಫ್ರಾಬಾದ್‌ನಲ್ಲಿ ಹಿಂಸಾತ್ಮಕ ಗಲಭೆ ಆರಂಭವಾಯಿತು. ಎರಡೂ ಪಂಗಡಗಳು ಹಿಂಸೆಯಲ್ಲಿ ತೊಡಗಿವೆ ಎಂಬ ವರದಿಗಳ ನಡುವೆ, ಜಫ್ರಾಬಾದ್ ಪ್ರತಿಭಟನೆಯನ್ನು ಭಗ್ನಗೊಳಿಸಲಾಯಿತು. ಇದೇ ವೇಳೆಗೆ ಸಿಎಎ ವಿರೋಧಿ ಪ್ರತಿಭಟನೆ ಮತ್ತು ಹಿಂಸೆಗೆ ನೇರ ಸಂಬಂಧವಿದೆ ಎಂಬ ಅಭಿಪ್ರಾಯವನ್ನು ವ್ಯವಸ್ಥಿತವಾಗಿ ಬಿತ್ತಲಾಯಿತು.

ಈ ಹಿನ್ನೆಲೆಯಲ್ಲಿ ನೋಡಿದಾಗ, ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ತಾರತಮ್ಯ ನೀತಿ ಅನುಸರಿಸುತ್ತಿರುವ ವರದಿಗಳ ಹಿನ್ನೆಲೆಯಲ್ಲಿ, ಗಲಭೆಗಳಲ್ಲಿ ದಿಲ್ಲಿಯ ಆಡಳಿತ ವ್ಯವಸ್ಥೆ ಶಾಮೀಲಾಗಿದೆ ಎನ್ನುವ ಆಪಾದನೆಯನ್ನು ಅಲ್ಲಗಳೆಯಲಾಗುವುದಿಲ್ಲ. ಒಂದೆಡೆ ಸಿಎಎ ವಿರೋಧಿಗಳು ಹಿಂಸಾತ್ಮಕ ಧೋರಣೆ ಹೊಂದಿದ್ದಾರೆ ಎನ್ನುವ ಕಲ್ಪನೆಯನ್ನು ವ್ಯವಸ್ಥಿತವಾಗಿ ಬಿತ್ತುವ ಮೂಲಕ, ಈ ಪ್ರತಿಭಟನಾಕಾರರ ವಿರುದ್ಧ ಪ್ರಭುತ್ವ ಅನುಸರಿಸುವ ದಮನಕಾರಿ ನೀತಿಗಳು ಸಾರ್ವಜನಿಕರ ಸಮ್ಮತಿಯನ್ನು ಗಳಿಸುವಂತೆ ಮಾಡಲಾಗುತ್ತದೆ. ಮತ್ತೊಂದೆಡೆ ಸಿಎಎ ಗೆ ವಿರೋಧ ವ್ಯಕ್ತಪಡಿಸುವವರೆಲ್ಲರೂ ಅಲ್ಪಸಂಖ್ಯಾತರೇ ಎಂದು ಬಿಂಬಿಸುವ ಮೂಲಕ, ಈ ಪ್ರತಿಭಟನಾಕಾರರ ವಿರುದ್ಧ ನಡೆಯುವ ಹಿಂಸೆ ಬಿಜೆಪಿಯ ಬಹುಸಂಖ್ಯೆಯ ಬೆಂಬಲಿಗರಿಗೆ ಸ್ವೀಕಾರಾರ್ಹವಾಗಿಬಿಡುತ್ತದೆ. ಆದರೆ ಈ ದಂಗೆ, ಸಿಎಎ ಪರ ಅಥವಾ ಸಿಎಎ ವಿರೋಧಿ ಎನ್ನುವುದನ್ನೂ ಮೀರಿದ ಆಯಾಮವನ್ನು ಹೊಂದಿದೆ. ಶುದ್ಧ ಪಂಥೀಯ ದ್ವೇಷವನ್ನು ಇಲ್ಲಿ ಗುರುತಿಸಬಹುದು.

ಕೃಪೆ thehindu

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು