varthabharthi


ಸುಗ್ಗಿ

ಕಥಾ ಸಂಗಮ

ಜುಮಾ: ಶಿವರಾತ್ರಿ

ವಾರ್ತಾ ಭಾರತಿ : 8 Mar, 2020

ಬೆಳಗಿನ ಚುಮು ಚುಮು ಚಳಿ ಮೆಲ್ಲಗೆ ಏರು ಬಿಸಿಲಿಗೆ ಸೆಕೆಯಾಗಿ ಬದಲಾಗಲಾರಂಭಿಸಿತ್ತು. ಫರೀದಸಾಬಿಯ ಪಕ್ಕದ ಹೊಲದ ಮಾದು ತನ್ನ ಜಮೀನಿನಲ್ಲಿ ಕೆಲಸದಲ್ಲಿ ನಿರತನಾಗಿದ್ದ .

 ''ಯೇ ಮಾದೂ ......ನ್ಯಾರಿ ಮಾಡುಣು ಬಾ'' ಎಂದು ಪರ್ದು ಅರಚಿದರೆ ಮಾದೇವನಿಗೆ ಕೇಳಿಸಲಿಲ್ಲ ''ಯೇ ಮಾದೇವಾ ....ಕೇಳ್ದಾನ್?..ಟೈಮ್ ಹತ್ತಾತು...ಹೊಟ್ಟಿ ಹಸದೈತಿ ನ್ಯಾರಿ ಮಾಡುಣು ಬಾ ....ನಮ್ಮಕ್ಕಿ ಮಸಾಲಿ ಹಾಕಿ ಅವರಿಕಾಳ ಸಾರ ಕಟ್ಟ್ಯಾಳ ಬುತ್ತ್ಯಾಗ'' ಎಂದು ದನಿ ಏರಿಸಿದ ಪರ್ದು.

''ಬಾನ್ನಿ ಗಪ್....'' ಎನ್ನುತ್ತ ಕೈಯಲ್ಲಿನ ಗುದ್ದಲಿ ಚಿಕ್ಕ ಮರದ ನೆರಳಲ್ಲಿ ಹಾಕಿ ಸೊಂಟಕ್ಕೆ ಸುತ್ತಿಕೊಂಡ ಲುಂಗಿಯಿಂದ ಹಣೆಯ ಬೆವರೊರೆಸುತ್ತ ''ದಗದಾ ಮಾಡಕೋತ ನ್ಯಾರಿ ಮಾಡುದ ಮರ್ತಿನೂ ಪರ್ದು ಬಯಾ. ಭಾಬೀ ಅಡಿಗಿನ....ಅಡಿಗಿ ....ಅವರಿಕಾಳ ಒಣಿಗಿ (ಸಾರು:ಪಲ್ಯ) ಅಂದ್ರ ನನಗ ಜಿಂವಾ.....'' ಎಂದು ತನ್ನ ಬುತ್ತಿ ಎತ್ತಿಕೊಂಡು ಪರ್ದುನತ್ತ ಹೆಜ್ಜೆಹಾಕಿದ ಮಾದುರಾಯ.

''ಏ ಅವರಿ ಸಾರಿನ ಗುಂಗಿನ್ಯಾಗ ಕೊಡಾ ಮರಿಬ್ಯಾಡ...'' ಎಂದಾಗ, ಒಂದು ಕೈಯಲ್ಲಿ ಬಿಂದಿಗೆ ಒಂದು ಕೈಯಲ್ಲಿ ತನ್ನ ನಾಷ್ಟಾದ ಬುತ್ತಿ ಹಿಡಿದು ಪರ್ದುನ ಸಮೀಪಿಸಿದ ಮಾದು.

 ''ಮಾದಣ್ಣಾ ನಾ ಹೊಳ್ಯಾಗಿನು ನೀರು ತುಂಬಿಕೊಂಡು ಬರು ತಕಾ ನೀ ಗಿಡದ ಬಡ್ಡಿಗಿ ತಟ್ಟ( ಗೋಣಿ) ಹಾಸಿ ನಾಷ್ಟಾಕ ತಯಾರ ಮಾಡ'' ಎಂದು ತನ್ನ ಬುತ್ತಿಯ ಚೀಲ ಮಾದೇವನ ಕೈಗಿತ್ತು ಬಿಂದಿಗೆ ಇಸಿದುಕೊಂಡು ಹೊಳೆಯತ್ತ ಪರ್ದು ಹೊರಟರೆ ಹೊಲದಾಚೆಯ ಬೇವಿನ ಮರದತ್ತ ಮಾದು ಹೋದ.

ಕೃಷ್ಣೆಯಲ್ಲಿ ಕೈಕಾಲು ಮುಖ ತೊಳೆದುಕೊಂಡು ಬಿಂದಿಗೆ ತುಂಬಿಸಿಕೊಂಡು ಬೇವಿನಮರದ ಹತ್ತಿರ ಬರುವಷ್ಟರಲ್ಲಿ ಮಾದುರಾಯ ಕೈಕಾಲು ತೊಳೆಯಲು ನಿಂತಿದ್ದ.

''ಇಕಾಡಿ ಬಾ ಮಾದಣ್ಣಾ ನೀರ ಸುರಿತುನ ಕೈಕಾಲ ತೊಳ್ಕೋ'' ಎಂದು ಪರ್ದು ಕರೆದು ಬಿಂದಿಗೆ ಬಾಗಿಸಿ ನೀರು ಸುರಿದರೆ ಮಾದಣ್ಣ ಸರ ಸರನೆ ಕೈಕಾಲು ತೊಳೆದು ತನ್ನ ಟವೆಲಿನಿಂದ ಮುಖ ಕೈ ಒರೆಸಿಕೊಂಡು ಗೋಣಿಯ ಮೇಲೆ ಕುಳಿತು ತನ್ನ ಬುತ್ತಿಯ ಬಿಚ್ಚುತ್ತಾ.

''ಪರ್ದು ಬಯಾ ......ನೀ ಅವರಿಕಾಳ ಮಸಾಲಿ ಸಾರ ತಂದಿ ಖರೆ ಇಂದ ಊಟಾ ಮಾಡಾಂಗಿಲ್ಲಲೋ ಮಾರಾಯಾ ....'' ಎನ್ನಲು, ತನ್ನ ದೊಡ್ಡ ಬುತ್ತಿಯಿಂದ ಚಿಕ್ಕ ಜರ್ಮನ್ ಡಬ್ಬವೊಂದನ್ನು ಹೊರತೆಗೆಯುತಿದ್ದ ಪರಿದು ''ಯಾಕ ಮಾದಣ್ಣಾ ಇಂದ್ಯಾಕ ನಮ್ಮನಿ ಸಾರ ವಲ್ಲಾತು ( ಬೇಡವಾಯಿತು) ನಿಂಗ?''ಎಂದ ತುಂಟನಗೆ ನಗುತ್ತ.

''ಇಂದ ಶಿವರಾತ್ರಿ ವಪ್ಪತ್ತ(ಒಂದೋತ್ತು) ಐತಿ.....ಇಂದ ಬರೆ ಫರಾಳ (ಫಳಾರ, ಫಲಾಹಾರ) ತಿನಬೇಕೋ ಬೈಯಾ ....ನೀ ಗೊತ್ತಿಲ್ದಂಗ ಕೇಳ್ತಿ ಮಾರಾಯಾ?...'' ಎನ್ನುತ್ತ ತನ್ನ ಡಬ್ಬಿಯಲ್ಲಿನ ಸಬ್ಬಕಿ ಉಪ್ಪಿಟ್ಟು, ಬಜ್ಜಿ, ಬಾಳೆಹಣ್ಣು ಹೊರತೆಗೆದ. ''ಅಲಲ ಮರ್ತಿನೋ ಮಾರಾಯಾ ....ಛೇ ....ಇರಲಿ .....ಒಮ್ಮೆ ಡಬ್ಬಿಯರೆ ತಗದ ನೋಡೋ ಮಾದಣ್ಣಾ'' ಎಂದು ಪರ್ದು ಹೇಳಿದಾಗ .

 ''ನಾ ಡಬ್ಬಿ ತಗದ ನೋಡಿನು ....ಖರೆ ಈಗ ಬರೆ ಸಾದಾ ನ್ಯಾರಿ (ನಾಷ್ಟಾ) ಊಟ ಇಲ್ಲ, ಇಂದ ಒಪ್ಪತ್ತ ಹಿಡಿಬೇಕು'' ಎನ್ನುತ್ತ ಪರ್ದು ಕೊಟ್ಟಡಬ್ಬದ ಮುಚ್ಚಳ ತೆಗೆದು ಒಳಗಿದ್ದ ಪದಾರ್ಥವನ್ನು ನೋಡಿ ಮುಗಳ್ನಗಲಾಗರಂಭಿಸಿದ ಮಾದೇವ.

''ಈಗ ವಲ್ಲೆ ಅನು ಮಾದು?'' ಎಂದು ನಗುತ್ತ ಪಿಂಗಾಣಿ ಬಟ್ಟಲುಗಳನ್ನು ಹೊರ ತೆಗೆಯುತ್ತ.

''ಮಾದಣ್ಣಾ ನಮದು ನಿಮದು ನಾಕೈದ ತಲೆಮಾರ ಗೆಳೆತಾನ.....ನ ಹೆಂಗ ಮರಿತುನೋ ಯಾಣ್ಣಾ ..?

 ನಿಂದ ಶಿವಾರಾತ್ರಿ ಉಪಾಸ( ಉಪವಾಸ) ಐತಿ ಅಂತೇಳಿ ನಸಿಕಿನ್ಯಾಗ ಚಾರಿಗಿ ಎದ್ದು ಗೊಡಂಬಿ ದ್ರಾಕ್ಷಿ ಹಾಕಿ ಎಮ್ಮಿ ಹಾಲಿನ್ಯಾಗ ಶ್ಯಾಂವಿಗಿ ಸುರಕುಂಬಾ(ಶ್ಯಾವಿಗೆ ಪಾಯಸ) ಮಾಡ್ಯಾಳ ನಮ್ಮಕ್ಕಿ. ಅದು ಜಳಕಾಮಾಡಿ ಮಡಿಲೆ ಮಾಡ್ಯಾಳ ....ಕಬ್ಬಿಣದಂತಾ ನಿನ ಮೈಗಿ ಇಟ್ಟ ಸಾಬುದಾನಿ ಎಲ್ಲಿ ಸಾಲತೈತಿ .?..ಸುರಕುಂಬಾ ಕುಡದು ಖಾರ ಖಾರ ಸಾಬುದಾನಿ ತಿನ್ನ'' ಎನ್ನುತ್ತ ಪಿಂಗಾಣಿ ಪಾತ್ರೆಯಲ್ಲಿ ಬೆಳ್ಳನೆಯ ಪಾಯಸದಂತಹ ಶೀರಕುರ್ಮಾ ಸುರಿದು ಪಿಂಗಾಣಿಯ ಚಿಕ್ಕ ಚಮಚ ಹಾಕಿ ಮುಂದೆ ಹಿಡಿದಾಗ. ಕಣ್ಣೋರೆಸಿಕೊಳ್ಳುತ್ತ ಪಾಯಸ ಸವಿಯಲಾರಂಭಿಸಿದ ಮಾದೇವ .

''ಇಂದ ಶಿವರಾತ್ರಿ ...ನೀ ರಾತ್ರಿ ಜಾಗರಣಿ ಭಜನಿ ಮಾಡಾಕ ಗುಡಿಗಿ ಹೋಗಬೇಕು .....ಇಂದ ಸುಕ್ರಾರ ಮದ್ದಿನಕ ನಾ ಜುಮಾ ನಮಾಜಕ ಹೋಗಬೇಕು ....ಈವತ್ತ ಕರೆಂಟ ಬಾರಾಕ (ಹನ್ನೆರಡು ಗಂಟೆಗೆ) ಬರ್ತಾವು ಹೊಲಕ್ಕ ನೀರ ಬಿಡಬೇಕು .....ನೀ ರಾತ್ರಿ ಪೂಜಿ ತಯಾರಿ ಮಾಡಬೇಕು ಹೆಂಗ ಮಾಡುದಾ ಮಾದಣ್ಣಾ?'' ಎಂದ ಕೇಳುತ್ತ ಪರ್ದು ತಾನೂ ಪಾಯಸ ಕುಡಿಯಲಾರಂಭಿಸಿದ.

''ಹುಂ ಪರ್ದು ಬಯಾ ನೀ ಸುಕ್ರಾರ ನಮಾಜಕ ಹೋಗಾಂವ..... ನಾ ಒಪ್ಪತ್ತ ಮಾಡಿ ಪೂಜಾ ಸಾಮಾನ ತರಾಕ ಊರಾಗ ಹೋಗಬೇಕು... ಸಂಜೀಕ ನಾ ಗುಡಿಗಿ ಹೋಗಬೇಕು..... ನಮ್ಮ ಹೊಲಕ್ಕೂ ನೀರಬಿಡಬೇಕು ... ನಿನ್ನಹೊಲಕ್ಕೂ ನೀರಬಿಡಬೇಕು ..?'' ಎನ್ನುತ್ತ ಪಾಯಸ ಮುಗಿಸಿ, ಉಪ್ಪಿಟ್ಟಿಗೆ ಕೈಹಾಕಿದ ಮಾದಣ್ಣ.

''ಮಾದು....ನೀ ಬಾರಾ ತಕಾ ಇಲ್ಲೆ ಗಿಡದ ಬಡ್ಡಿಗಿ ಮಲಕೋ .....ಬಾರಾಕ ಮೋಟರ್ ಚಾಲು ಮಾಡಿ ನೀರ ಬಿಡು. ನಾ ಊರಾಗ ಹೋಗಿ ನಮಾಜ ಮಾಡಿ ದೋನಿಗಿ ಬಂದ ನಿನ ಮನಿಗಿ ಕಳಸ್ತುನು ....'' ಎನ್ನುತ್ತ ಪರ್ದು ಕೂಡ ಮಾದೇವನ ಡಬ್ಬಿಯಿಂದ ಉಪ್ಪಿಟ್ಟು ತಿನ್ನಲಾರಂಭಿಸಿದ.

''ಮತ್ತ ನನ ಪೂಜಿ ಸಂತಿ..?'' ಎಂದು ಬಾಳೆಹಣ್ಣು ಸುಲಿಯುತ್ತ ಚಿಂತನಾದ ಮಾದು.

''ನಾ ನಮಾಜ ಮಾಡಿ ಬರ್ತಾ ಕಾಯಿ ಕಪ್ರಾ (ಕರ್ಪೂರ)...ಊದಕಡ್ಡಿ (ಅಗರಬತ್ತಿ)... ಎಲಿ ಅಡಿಕಿ ... ತುರ್ತುನ .....ಇಲ್ಲಿಂದ ಊರ ನಾಕ ಹರದಾರಿ ...ನೀ ಉಪಾಸ ಹೊಟ್ಟಿಲೆ ಬಿಸಲಾಗ ಹೋಗುದ ಬ್ಯಾಡ ಮಾದಣ್ಣಾ'' ಎನ್ನುತ್ತ ನಾಷ್ಟಾ ಮುಗಿಸಿದ ಪರ್ದು.

ಬರೋಬರಿ ಖರೆ ...... ಮತ್ತ... ಮತ್ತ ...ಎನ್ನುತ್ತ ತಲೆ ಕೆರಕೊಳ್ಳಲಾರಂಭಿಸಿದ ಮಾದಣ್ಣ ''ಮಾದಣ್ಣಾ ನಮಾಜ ಮಾಡಿ .... ನಿನ ಪೂಜಾ ಸಾಮಾನು ಕೊಂಡ ..... ಮಾಬೂ ಸಿಂಪಿಗ್ಯಾನಕಡೆ (ಸಿಂಪಿಗ:ಟೇಲರ್) ನಿನ್ನು ಹಬ್ಬದ ಹೊಸಾ ಅರಿಬಿ ತರಬೇಕ ಹೌಂದಲ್ಲೋ ....?'' ಎನ್ನುತ್ತ ಖಾಲಿ ಡಬ್ಬಗಳನ್ನು ಚೀಲದಲ್ಲಿ ತುಂಬಿಕೊಳ್ಳುತ್ತ ಎದ್ದು ನಿಂತ ಪರ್ದು. ಮಾದಣ್ಣ ಕೊಡಲು ಬಂದ ಬಾಳೆ ಹಣ್ಣು ನಿರಾಕರಿಸುತ್ತ.

''ಇನೊಂದ ತಾಸಿಗಿ ನಿನಗ ಬೇಕು ನೀನ ತಿನ್ನು ....ಬಿಂದಿಗ್ಯಾಗ ನೀರ ಅದಾವು ಕುಡದ ಬಾರಾತಕಾ ಮಲಕೋ ನಾ ನಮಾಜಿಗಿ ಹೋಗಿ ತೀನಿಗಿ (ಮೂರುಗಂಟೆಗೆ). ಹ್ವಳ್ಳಿ ಬರ್ತುನು ನೀ ಮನಿಗಿ ಹೋಗಿ ಜಾಗರಣಿಗಿ ಹೋಗಕ್ಕೆ'' ಎನ್ನಲು ತಲೆ ಅಲ್ಲಾಡಿಸುತ್ತ ''ನನ ಸೈಕಲ್ ತಗೊಂಡಹೋಗ ಬಯಾ ....'' ಎಂದು ಮಾದು ಮುಂದೆ ಏನೋ ಹೇಳಬೇಕೆಂದುಕೊಂಡರೂ ಸುಮ್ಮನಾದ. ಮಾದಣ್ಣನ ಅಟ್ಲಸ್ ಸೈಕಲ್ ಮರದ ಕೆಳಗಿಂದ ತಳ್ಳಿಕೊಂಡು ಕಾಲು ದಾರಿಗೆ ಬಂದು ನಿಂತ ಪರ್ದು, ಮಾದಣ್ಣನ ನೋಡುತ್ತ ''ಮಾದಣ್ಣ..... ಹ್ವಾದ ಸ್ವಾಮಾರ ಸಂತ್ಯಾಗ, ಬದ್ನಿಕಾಯಿ ಯಾಪಾರ(ವ್ಯಾಪಾರ) ಭಾಳ ಛಲೋ ಆತು. ಮನ್ಯಾಗ ಹಜಾರ ರುಪೈ (ಸಾವಿರ ರೂಪಾಯಿ) ಅದಾವು ಅದರಾಗ ನಿನ ಪೂಜಿ ಸಾಮಾನು ಹಬ್ಬದ ಅರಿಬಿ ಬಂದ ಬರ್ತಾವ. ನೀ ಕಾಳಜಿ ಮಾಡಬ್ಯಾಡ. ಮಾಬು ಸಿಂಪಿಗ್ಯಾಗ ಸೊಕ್ಕ ಭಾಳಬಂದೈತಿ. ನಮಾಜಿಗಿ ಮಸೂತ್ಯಾಗ (ಮಸೀದಿ) ಸಿಕ್ಕ ಸಿಗತಾನು. ನಿಮ್ಮು ಹಬ್ಬದ ಅರಿಬಿ ಹೊಲದಿಲ್ಲ ಅಂದ್ರ ಅವನ ಕಿವಿ ಹಿಂಡಿ ನಿನ್ನು ಅರಿಬಿ ಹೊಲಸಕೊಂಡ ಬರ್ತುನು. ಹಾದ್ಯಾಗ ನಿಮ್ಮ ಮನಿಗಿಹೋಗಿ ವೈನಿಗಿ ಕೇಳಿ ಹೋಳಿಗಿ ದಿನಸಾ(ದಿನಸಿ) ಕೇಳಕೊಂಡ ಹೊಕ್ಕುನ ...'' ಎಂದು ಸೈಕಲ್ ಪೆಡಲ್ ಮೇಲೆ ಕಾಲಿಟ್ಟು ಮಾದುನ ಕಡೆ ನೋಡಿದಾಗ. ಮಾದುರಾಯ ನೆಮ್ಮದಿಯ ನಿಟ್ಟುಸಿರು ಬಿಡುತ್ತ ''ಲಗೂ ಬಾ ಪರ್ದು ಬಯಾ'' ಎನ್ನುತ್ತ ಗೊಣಿಯ ಮೇಲೆ ಮಲಗಿ ಪರ್ದುನ ಕಡೆ ನೋಡಲಾರಂಭಿಸಿದ .

 ''ನೀ ಬಾರಾಕ ಎದ್ದ ಬರೋಬರಿ ಮೋಟರ್ ಚಾಲು ಮಾಡಿ ಗಿಡದ ಬಡ್ಡಿಗೆ ಕುಂಡ್ರು .. ಉಪಾಸ ಹೊಟ್ಟಿಲೆ ಹೊಲದಾಗ ಓಡ್ಯಾಡ ಬ್ಯಾಡ ಬಿಸಲ ಭಾಳಐತಿ .....ನಾ ಹೋಂಟ್ನಿ'' ಎನ್ನುತ್ತ ಪೆಡಲ್ ಮೇಲೆ ಕಾಲಿಟ್ಟು ''ಬಿಸ್ಮಿಲ್ಲಾ ....''ಎಂದು ಸೈಕಲ್ಲೇರಿದ ಪರ್ದುನ ನೋಡುತ್ತ ''ಶಂಬೋ ಶಂಕರಾ'' ಎಂದು ನಿದ್ದೆಗೆ ಜಾರಿದ ಮಾದೇವ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)