varthabharthi


ಸುಗ್ಗಿ

ಅಜ್ಜಿ ಹೇಳಿದ ಕತೆ

ದುಡಿಮೆಯ ಭಾಗ್ಯ

ವಾರ್ತಾ ಭಾರತಿ : 8 Mar, 2020

ಒಂದಾನೊಂದು ಕಾಲದಲ್ಲಿ ಮಾಂಡ್ಯವನಗರವೆಂಬ ರಾಜ್ಯವನ್ನು ಕೃಷ್ಣರಾಜೇಂದ್ರ ಎಂಬ ಮಹಾರಾಜ ಆಳುತ್ತಿದ್ದನು. ಆತ ‘ರಾಜಾ ಪ್ರತ್ಯಕ್ಷದೈವ’ ಎಂಬ ಮಾತಿಗೆ ಒಪ್ಪುವಂತೆ ಪ್ರಜೆಗಳ ಪರಿಪಾಲಕನಾಗಿದ್ದ. ದಯಾಪರನೂ, ಧರ್ಮವಂತನೂ, ಕೊಡುಗೈ ದಾನಿಯೂ ಆಗಿದ್ದ ಅವನು ತನ್ನ ಪ್ರಜೆಗಳಿಗೆ ಬೇಕು ಬೇಕಾದ್ದನ್ನೆಲ್ಲಾ ಅವರು ಕೇಳುವ ಮುನ್ನವೇ ಕೊಟ್ಟು ತನ್ನ ಮಕ್ಕಳಿಗಿಂತಲೂ ಮಿಗಿಲಾಗಿ ನೋಡಿಕೊಳ್ಳುತ್ತಿದ್ದನು. ಅನ್ನಭಾಗ್ಯ, ಅಕ್ಷರಭಾಗ್ಯ, ಕ್ಷೀರ ಭಾಗ್ಯ, ಆರೋಗ್ಯಭಾಗ್ಯ, ವಸ್ತ್ರಭಾಗ್ಯ, ವಸತಿ ಭಾಗ್ಯ ಹೀಗೆ ಎಲ್ಲಾ ಭಾಗ್ಯಗಳನ್ನೂ ಎಲ್ಲರಿಗೂ ಉಚಿತವಾಗಿ ಅವನು ಕರುಣಿಸಿದ್ದ. ತನ್ನ ರಾಜ್ಯದಲ್ಲಿ ಯಾರೊಬ್ಬರೂ ಉಪವಾಸವಿರಕೂಡದು, ಯಾರೂ ಕೂಡ ಮನೆ ಇಲ್ಲವೆನ್ನಬಾರದು, ಯಾರೂ ಸಹ ಕಷ್ಟವೆನ್ನಬಾರದು. ಎಲ್ಲರೂ ಸುಖವಾಗಿರಬೇಕೆಂಬ ಮನೋಭಾವ ಮಹಾರಾಜ ಕೃಷ್ಣ ರಾಜೇಂದ್ರನದಾಗಿತ್ತು. ಹಾಗಾಗಿ ತನ್ನ ಪ್ರಜೆಗಳು ನೆಮ್ಮದಿಯಾಗಿರಲು ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಟ್ಟಿದ್ದನು.

ಆದರೆ ಮಹಾರಾಜ ಕೃಷ್ಣ ರಾಜೇಂದ್ರನ ಇಂತಹ ದೊಡ್ಡಗುಣ ಆತನ ರಾಜ್ಯಕ್ಕೆ ವರದಾನವಾಗಿ ಸದುಪಯೋಗವಾಗುವುದಕ್ಕಿಂತ ಹೆಚ್ಚಾಗಿ ದುರುಪಯೋಗವಾಗತೊಡಗಿತು. ಎಲ್ಲ ಸೌಲಭ್ಯವೂ ಶ್ರಮವಿಲ್ಲದೆ ಅನಾಯಾಸವಾಗಿ ತಮಗೆ ದೊರೆಯುತ್ತಿದ್ದರಿಂದ ಪ್ರಜೆಗಳೆಲ್ಲರೂ ತಮ್ಮ ಪ್ರಭುವನ್ನು ಕೊಂಡಾಡುತ್ತಾ ದುಡಿಮೆಯನ್ನು ಮರೆತು ಸೋಮಾರಿಗಳಾದರು. ದಿನದಿಂದ ದಿನಕ್ಕೆ ಇದು ಇನ್ನೂ ಹೆಚ್ಚಾಗಿ ಮಹಾರಾಜ ಕೃಷ್ಣರಾಜೇಂದ್ರನ ರಾಜ್ಯದಲ್ಲಿ ದುಡಿಯುವ ಕೈಗಳು ಒಂದೂ ಇಲ್ಲದೆ ಎಲ್ಲರೂ ತಿನ್ನುವ ಬಾಯಿಗಳಾಗಿ ಬಿಟ್ಟರು. ಪಕ್ಕದ ರಾಜ್ಯದವರು ಈ ರಾಜ್ಯವನ್ನು ಸೋಮಾರಿಗಳ ರಾಜ್ಯವೆಂದು ಆಡಿಕೊಳ್ಳತೊಡಗಿದರು. ಇದೆಲ್ಲವೂ ಮಹಾರಾಜ ಕೃಷ್ಣರಾಜೇಂದ್ರನ ಕಿವಿಗೂ ಬಿತ್ತು. ತನ್ನ ಔದಾರ್ಯತನ ದುರುಪಯೋಗವಾಗುತ್ತಿರುವುದರ ಅರಿವೂ ಅವನಿಗಾಯಿತು. ಬಹಳ ಚಿಂತಿಸಿದ. ಪರಿಹಾರಕ್ಕಾಗಿ ಆಳವಾಗಿ ಯೋಚಿಸಿದ.

ಅತ್ಯಂತ ಚಾಣಾಕ್ಷನಾದ ಮಹಾರಾಜ ಕೃಷ್ಣರಾಜೇಂದ್ರ ಸೋಮಾರಿಗಳಾಗಿರುವ ತನ್ನ ಪ್ರಜೆಗಳಿಗೆ ಬುದ್ಧಿ ಕಲಿಸಲು ತೀರ್ಮಾನಿಸಿದ. ಆದರಂತೆ ಯಾರು ಹೆಚ್ಚು ಸೋಮಾರಿಗಳೋ ಅವರಿಗೆ ಬಹುಮಾನ ನೀಡುವುದಾಗಿ ಸೋಮಾರಿಗಳನ್ನು ಬರಲು ಹೇಳಿ ಢಂಗೂರ ಸಾರಿಸಿದ. ಇದನ್ನು ಕೇಳಿ ಪ್ರಜೆಗಳೆಲ್ಲರಿಗೂ ಆಶ್ಚರ್ಯವಾಯಿತು. ಆದರೂ ಪ್ರತಿಯೊಬ್ಬರೂ ಮಹಾರಾಜರು ಹೇಳಿದ ದಿನದಂದು ಅರಮನೆಯ ಅಂಗಳಕ್ಕೆ ನಾ ಮುಂದು, ತಾ ಮುಂದು ಎಂದು ಬಂದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಇವರನ್ನೆಲ್ಲಾ ಕಂಡು ‘‘ಅಬ್ಬಾ! ಇಷ್ಟೊಂದು ಮಂದಿ ಸೋಮಾರಿಗಳು ನನ್ನ ರಾಜ್ಯದಲ್ಲಿ ಇದ್ದಾರೆಯೇ? ಎಂದು ತನ್ನಲ್ಲೇ ಪ್ರಶ್ನಿಸಿಕೊಂಡ ಮಹಾರಾಜ ಕೃಷ್ಣ ರಾಜೇಂದ್ರ ಅಚ್ಚರಿಗೊಂಡ. ಇವರೆಲ್ಲರಿಗೂ ಸರಿಯಾದ ಪಾಠವನ್ನು ಕಲಿಸಿ ಸೋಮಾರಿತನವನ್ನು ಬಿಡಿಸಬೇಕೆಂದು ಮನಸ್ಸಿನಲ್ಲೇ ನಿರ್ಧರಿಸಿದ. ‘‘ಯಾರು ಹೆಚ್ಚು ಸೋಮಾರಿಗಳೋ ಅವರು ತಮ್ಮ ಎರಡೂ ಕೈಗಳನ್ನು ಮೇಲೆತ್ತಬೇಕು ಎಂದು ಮಹಾರಾಜ ಕೃಷ್ಣರಾಜೇಂದ್ರ, ಅಲ್ಲಿ ನೆರೆದಿದ್ದ ತನ್ನ ಪ್ರಜಾ ಸಮೂಹಕ್ಕೆ ಆಜ್ಞೆ ಮಾಡಿದ. ಕೂಡಲೇ ಅಲ್ಲಿದ್ದ ಇಡೀ ಜನಸ್ತೋಮ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ತಾವೇ ಹೆಚ್ಚು ಸೋಮಾರಿಗಳೆಂದು ಪ್ರತಿಯೊಬ್ಬರೂ ಎದೆತಟ್ಟಿ ಸಾರಿದರು. ಆದರೆ ಅಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕೈಗಳನ್ನು ಮೇಲೆತ್ತದೆ ಸುಮ್ಮನೆ ಕುಳಿತಿದ್ದ, ಇವನನ್ನು ಗಮನಿಸಿದ ಮಹಾರಾಜ ಕೃಷ್ಣರಾಜೇಂದ್ರ ‘‘ಇವನಾದರೂ ಒಬ್ಬ ಸೋಮಾರಿಯಲ್ಲದವನು ನನ್ನ ರಾಜ್ಯದಲ್ಲಿ ಇದ್ದಾನಲ್ಲ’’ ಎನ್ನುತ್ತಾ ಅವನ ಬಳಿ ಹೋಗಿ ‘‘ಯಾಕಪ್ಪಾ ನೀನು ಕೈಗಳನ್ನು ಮೇಲೆತ್ತಲಿಲ್ಲ?’’ ಎಂದು ಕೇಳಿದನು. ಆಗ ಆತ ಉತ್ತರಿಸಿದ ‘‘ಹೋಗಿ ಮಹಾರಾಜ್ರೆ, ಅದ್ಯಾರ್ ಕೈನಲ್ಲಾಗುತ್ತೆ ಕೈಗಳನ್ನು ಮೇಲೆತ್ತಲು, ನನ್ನ ಕೈನಲ್ಲಂತೂ ಆಗಲ್ಲ...’’ ಎಂದ. ಕೈಗಳನ್ನು ಮೇಲೆತ್ತಲಾರದಷ್ಟು ಮೈಗಳ್ಳತನದ ಇಂಥಾ ಸೋಮಾರಿಗಳು ತನ್ನ ರಾಜ್ಯದಲ್ಲಿರುವುದಕ್ಕೆ ಕೋಪಗೊಂಡ ಮಹಾರಾಜ ಕೃಷ್ಣರಾಜೇಂದ್ರ, ಕೂಡಲೇ ಅವನಿಗೆ ಒಂದು ನೂರು ಛಡಿ ಏಟುಗಳನ್ನು ಬಹುಮಾನವಾಗಿ ಘೋಷಿಸಿ ಸೈನಿಕರಿಗೆ ಅಪ್ಪಣೆ ಕೊಟ್ಟ. ತಕ್ಷಣವೇ ಸೈನಿಕರು ಕಂಬಳಿಯವನಿಗೆ ಹೊಡೆದರೆ ದುಪ್ಪಟಿಯವನು ಎಚ್ಚೆತ್ತುಕೊಳ್ಳುವಂತೆ ಅವನಿಗೆ ಬಾಯಿ ಬಡಿದುಕೊಳ್ಳುವಂತೆ ನೂರು ಛಡಿ ಏಟು ನೀಡಿದರು.

ಇದನ್ನೆಲ್ಲಾ ಕಣ್ಣಾರೆ ಕಂಡ ಮಹಾರಾಜ ಕೃಷ್ಣರಾಜೇಂದ್ರ, ತನ್ನ ರಾಜ್ಯದ ಸೋಮಾರಿಗಳನ್ನು ಸರಿದಾರಿಗೆ ತರಬೇಕೆಂದು ಅಂದೇ ಸಂಕಲ್ಪ ಮಾಡಿದ. ಅದರಂತೆ ಅದುವರೆಗೆ ತಾನು ಉಚಿತವಾಗಿ ಜಾರಿಗೆ ತಂದಿದ್ದ ಅನ್ನಭಾಗ್ಯ, ಅಕ್ಷರಭಾಗ್ಯ, ಕ್ಷೀರಭಾಗ್ಯ, ಆರೋಗ್ಯಭಾಗ್ಯ, ವಸ್ತ್ರಭಾಗ್ಯ, ವಸತಿಭಾಗ್ಯಗಳೆಲ್ಲವನ್ನೂ ರದ್ದುಗೊಳಿಸಿದ. ಇದಕ್ಕೆ ಬದಲಾಗಿ ಪ್ರತಿಯೊಬ್ಬರೂ ದುಡಿಯಲೇ ಬೇಕೆಂಬ ಕಟ್ಟಪ್ಪಣೆಯೊಡನೆ ದುಡಿಮೆಯ ಭಾಗ್ಯ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದ.

ಅಂದಿನಿಂದ ವಿಧಿಯಿಲ್ಲದೆ ಎಲ್ಲರೂ ಸೋಮಾರಿತನವನ್ನು ಬಿಟ್ಟು ದುಡಿಮೆಯ ಕಡೆ ನಡೆದು ಶ್ರಮಿಕರಾದರು. ಕೆಲವೇ ವರ್ಷಗಳಲ್ಲಿ ಸೋಮಾರಿತನದಿಂದ ಹೊರಬಂದು ಪರಾವಲಂಬಿತನವನ್ನು ಹೊರದೂಡಿ ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಿ ಬದುಕತೊಡಗಿದರು. ಸೋಮಾರಿಗಳ ರಾಜ್ಯವೆಂದು ಗೇಲಿಗೊಳಗಾಗಿದ್ದ ಮಾಂಡವ್ಯ ನಗರ ರಾಜ್ಯವೀಗ ಸ್ವಾವಲಂಬಿ ರಾಜ್ಯವೆಂದು ಕೀರ್ತಿಗಳಿಸಿತು. ಇದರಿಂದ ಮಹಾರಾಜ ಕೃಷ್ಣರಾಜೇಂದ್ರನಿಗೂ ಸಂತೋಷವಾಯಿತು. ಅಂತೆಯೇ ಆತನ ಪ್ರಜೆಗಳೆಲ್ಲರಿಗೂ ದುಡಿದು ತಿನ್ನುವುದರ ಮಹತ್ವದ ಅರಿವಾಯಿತು. ಯಾರು ಹೆಚ್ಚು ಸೋಮಾರಿಗಳೆಂದು ಕರೆದು ಮಹಾರಾಜ ಕೃಷ್ಣರಾಜೇಂದ್ರ ಕೊಟ್ಟ ಬಹುಮಾನದಿಂದ ಆತನ ರಾಜ್ಯದಲ್ಲಿ ಇಷ್ಟೆಲ್ಲಾ ಪರಿವರ್ತನೆಯಾಗಿ ಪ್ರಜೆಗಳು ಕ್ರಿಯಾಶೀಲರಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)