ಬಯಲು ಸೀಮೆಯ ಮೀನೂಟ
ನಮ್ಮ ಹೊಳೆ ಮತ್ತು ಕೆರೆಗಳಲ್ಲಿ ಸಾಕಷ್ಟು ಮೀನು ದೊರೆತರೂ ಮೀನೂಟ ಅಷ್ಟು ಪ್ರಸಿದ್ಧವಲ್ಲ, ಆದರೆ ಒಂದು ವಿಶೇಷದ ಅಡುಗೆ. ಎಷ್ಟೋ ಜನ ಮೀನಿನ ಮುಳ್ಳು ಬಿಡಿಸುವ ರಾದ್ಧಾಂತವೆ ಬೇಡವೆಂದು ತಿನ್ನಲು ಹೋಗುವುದೇ ಇಲ್ಲ. ಆದರೆ ‘ಮೀನು ಸಾರು’ ಸರ್ವಕಾಲದಲ್ಲೂ ವಿಶೇಷವಾದ ಅಡುಗೆಯಾಗಿ ಉಳಿದುಕೊಂಡಿದೆ.
ಮೀನು ಎಂದಾಕ್ಷಣ ಎಲ್ಲರೂ ಕರಾವಳಿ ರೆಸ್ಟೋರೆಂಟ್‌ಗಳನ್ನು ಅಥವಾ ಅಲ್ಲಿನ ನಾನಾ ವಿಧದ ಮೀನುಗಳ ರಾಶಿಯನ್ನೋ ನೆನಪಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಬೆಂಗಳೂರು ಮೈಸೂರು ಕಡೆಗೆ ಬಂದ ಕರಾವಳಿಗರಂತೂ ನಮ್ಮ ಕೆರೆ ಮತ್ತು ಹೊಳೆ ಮೀನುಗಳನ್ನು ಅಣಕಿಸುವುದು, ತಿನ್ನುವುದಿಲ್ಲವೆಂದು ಮೂಗು ಮುರಿಯುವುದು ಮಾಡುತ್ತಾರೆ. ಇಲ್ಲಿನ ಮೀನುಗಳಲ್ಲಿ ಮಣ್ಣಿನ ವಾಸನೆ ಎನ್ನುತ್ತಾರೆ. ಆದರೆ ಬಯಲುಸೀಮಿಗರಿಗೆ ಇಂತಹ ವ್ಯತ್ಯಾಸವೇ ಇಲ್ಲ. ಸಮುದ್ರ ಹೊಳೆ ಕೆರೆ ಎಲ್ಲ ಕಡೆಯೂ ಬೆಳೆದ ನಾನಾ ರುಚಿಯ ಮೀನುಗಳನ್ನು ತಿನ್ನುವುದನ್ನು ರೂಢಿಮಾಡಿಕೊಂಡಿದ್ದಾರೆ. ಇದೊಂದು ಭೌಗೋಳಿಕ ಭಿನ್ನತೆ ಅಷ್ಟೇ ಹಾಗೂ ನಮ್ಮ ಅಡುಗೆಯ ವಿಧಾನಗಳು ಕೂಡ ಪರಸ್ಪರ ವಿಭಿನ್ನವಾಗಿಯೇ ಇವೆ. ನಮ್ಮ ಹೊಳೆ ಮತ್ತು ಕೆರೆಗಳಲ್ಲಿ ಸಾಕಷ್ಟು ಮೀನು ದೊರೆತರೂ ಮೀನೂಟ ಅಷ್ಟು ಪ್ರಸಿದ್ಧವಲ್ಲ, ಆದರೆ ಒಂದು ವಿಶೇಷದ ಅಡುಗೆ. ಎಷ್ಟೋ ಜನ ಮೀನಿನ ಮುಳ್ಳು ಬಿಡಿಸುವ ರಾದ್ಧಾಂತವೆ ಬೇಡವೆಂದು ತಿನ್ನಲು ಹೋಗುವುದೇ ಇಲ್ಲ. ಆದರೆ ‘ಮೀನು ಸಾರು’ ಸರ್ವಕಾಲದಲ್ಲೂ ವಿಶೇಷವಾದ ಅಡುಗೆಯಾಗಿ ಉಳಿದುಕೊಂಡಿದೆ.
ಈ ತಲೆಮಾರಿನ ಬಹುತೇಕರಿಗೆ ನಮ್ಮ ಹೊಳೆ ಕೆರೆಗಳಲ್ಲಿ ಇದ್ದ ಬಹು ವಿಧದ ತಳಿಯ ಮೀನುಗಳ ಪರಿಚಯವೇ ಇಲ್ಲ. ಕಳೆದೆರಡು ದಶಕಗಳಲ್ಲಿ ಉಂಟಾದ ಪರಿಸರ ಮಾಲಿನ್ಯದ ಪರಿಣಾಮ ಮತ್ತು ಸರಕಾರಿ ಧೋರಣೆಗಳ ಪರಿಣಾಮಗಳಿಂದಾಗಿ ಸಾಕಷ್ಟು ಬಯಲು ಸೀಮೆಯ ಮೀನು ತಳಿಗಳು ನಾಶಗೊಂಡವು ಮತ್ತು ಬಳಕೆಯಿಂದ ದೂರವುಳಿದವು ಮತ್ತು ಸಮುದ್ರದ ಮೀನು ಹೆಚ್ಚು ಆರೋಗ್ಯಕರ ಎನ್ನುವ ಮಾರಾಟಗಾರರ ಮಾರ್ಕೆಟಿಂಗ್ ಪುಕಾರು ದಕ್ಷಿಣದ ಜನರನ್ನು ವಿಪರೀತ ಸೆಳೆಯಿತು ಹಾಗೂ ಆಧುನಿಕ ಜೀವನದ ಧಾವಂತ ಕರಾವಳಿಯ ಮೀನುಗಳನ್ನು ನೇರವಾಗಿ ತಾಜಾವಾಗಿ ತರಿಸಿ ಮಾರಲು ಶುರು ಮಾಡಿತು. ಹೊಸ ಹೊಸ ಆನ್‌ಲೈನ್ ಅಂಗಡಿಗಳು, ಬಟವಾಡೆ ಕಂಪೆನಿಗಳು ಬಂದವು. ಬಂಗುಡೆ, ಮತ್ತಿ, ಸಾಲೊಮನ್, ಅಂಜಲ್, ಭೂತಾಯಿ, ಮರುವಾಯಿ, ಸಿಗಡಿ, ಬೊಂಡಾಸ್, ಏಡಿ ಸೇರಿದಂತೆ ನಾನಾ ನಮೂನೆಯ ಸಮುದ್ರ ಜೀವಿಗಳು ಮಾರುಕಟ್ಟೆಗೆ ಬಂದುವು. ಇವತ್ತಿಗೂ ಎಷ್ಟೋ ಜನರಿಗೆ ಈ ಮೀನುಗಳನ್ನು ಬಳಸಿ ಮಾಡುವ ಅಡುಗೆ ಬರುವುದಿಲ್ಲ. ಕಾರಣ ಅದು ಅವರ ಅಡುಗೆ ಪರಂಪರೆಯಲ್ಲಿಯೇ ಬಂದಿಲ್ಲ. ಅಷ್ಟೇಕೆ ಮೀನು ಕತ್ತರಿಸಿ, ಸ್ವಚ್ಛ ಮಾಡುವುದು ಕೂಡ ಬರುವುದಿಲ್ಲ. ಯಾಕೆಂದರೆ ಅಡುಗೆ ಅನ್ನುವುದು ಕೂಡ ಮತ-ಧರ್ಮಕ್ಕಿಂತಲೂ ಹೆಚ್ಚಾಗಿ ಬೆಳೆದು ಬಂದಿರುವ ಒಂದು ಅಗ್ಯವಾದ ಪರಂಪರೆ.
ಕಾವೇರಿ ಶಿಂಷ ನದಿಗಳ ದಂಡೆಯಲ್ಲಿ ಬೆಳೆದ ನಮಗೆ ಇಲ್ಲಿನ ಮೀನುಗಾರಿಕೆ ಚೆನ್ನಾಗಿ ಗೊತ್ತು. ನದಿ ಮರಳು ಎತ್ತುವ ವ್ಯವಹಾರ ಅಧಿಕವಾಗುವವರೆಗೂ ಅದು ಶ್ರೀಮಂತವಾಗಿತ್ತು. ನೀರು ಕೂಡ ಇರುತ್ತಿತ್ತು. ಒಂದು ಕಡೆ ಮಳೆಯಿಂದ ಬಿದ್ದ ನೀರು ಉಪನದಿಗಳು, ಹೊಳೆಗಳು ಕೆರೆಗಳನ್ನು ತುಂಬಿಕೊಂಡು ನದಿಯನ್ನು ಸೇರಿದರೆ ಇನ್ನೊಂದು ಕಡೆ ಅಣೆಕಟ್ಟೆಯಿಂದ ಕಾಲುವೆ ಮೂಲಕ ಕೆರೆ ಸೇರಿ ಮತ್ತೆ ಹೊಳೆಗೆ ಬಂದು ನೀರು ಬೀಳುತ್ತಿತ್ತು. ಇದೊಂಥರ ‘ನೀರು ಬಂಡಿಯ ಚಲನೆ’ ಇದರಲ್ಲಿ ಹೊಸ ಮೀನುಗಳ ಚಲನೆಯು ನಡೆಯುತ್ತಿತ್ತು. ಕಾವೇರಿ ಮತ್ತು ಅದರ ಉಪನದಿಗಳಲ್ಲೇ ಸುಮಾರು ಹದಿನೈದಕ್ಕೂ ಹೆಚ್ಚು ಜಾತಿಯ ಮೀನುಗಳು ಸಮೃದ್ಧವಾಗಿದ್ದವು. ಬಿಳಿ ಮೀನು ಬಹಳ ಪ್ರಸಿದ್ಧಿ (ಡೆಕ್ಕನ್ ಮಹಶಿರ್). ಒಂದು ಕಾಲಕ್ಕೆ ಈ ಬಿಳಿ ಮೀನು ಹಿಡಿಯುವ ಬೇಟೆ ಬಹಳ ಚಾಲ್ತಿಯಲ್ಲಿತ್ತು. ಒಬ್ಬ ಮನುಷ್ಯನ ಗಾತ್ರದಷ್ಟು ದೊಡ್ಡ ದೊಡ್ಡ ಮೀನುಗಳಿದ್ದವು. ಬಹುಶಃ ಈಗಲೂ ಇವೆ, ಆದರೆ ಈ ತಳಿಯ ಮೀನುಗಳನ್ನು ಉಳಿಸುವ ಸಲುವಾಗಿ ಕಾವೇರಿಯಲ್ಲಿ ಈ ಮೀನು ಹಿಡಿಯುವುದನ್ನು ಸರಕಾರವು ನಿಷೇಧಿಸಿದೆ. ಉಳಿದಂತೆ ಕುಚ್ಚು ಮೀನು, ಗೆಂಡೆ ಮೀನು, ಗಿರ್ಲು ಮೀನು, ಮಳ್ಳಿ ಮೀನು, ಬಾಳೆ ಮೀನು, ಕೋಡು ಮೀನು, ಕೊರಚೆ ಮೀನು, ಮುರಂಗಿ ಮೀನು, ಮಳಲೇ ಮೀನು, ಗಂಬೂಸಿ ಮೀನು, ಸೆಸ್ಲು ಮೀನು, ಗೊದ್ದೆ ಮೀನು, ಕಂದು ಮೀನು, ಕೊರಮ ಮೀನು, ಕೊಡು ಮೀನು, ಅವಲು ಮೀನು, ಮೂಗು ಮಲ್ಲಿ ಮೀನು, ಚಮರಿ ಮೀನು, ಗುಡ ಪಕ್ಕೆ ಮೀನು, ದೊಡ್ಡ ಕರ್ಸೆ ಮೀನು, ಜಿಲೆಜಿ ಮೀನು, ಕಲ್ಲುಕೊರವ ಮೀನು, ಕೊರಚೆ ಮೀನು, ಕಟ್ಟಾಲು ಮೀನು, ರೋಹು, ಆನೆ ಮೀನು ಎಂಬ ಹತ್ತಾರು ಬಗೆಯ ಸಿಹಿನೀರಿನ ಮೀನುಗಳು ಇವತ್ತಿಗೂ ಇವೆ. ಆದರೆ ಹೆಚ್ಚು ಬಳಕೆಯಲ್ಲಿ ಸರಕಾರವು ಅಭಿವೃದ್ಧಿ ಪಡಿಸಿದ ಹೈಬ್ರಿಡ್ ತಳಿಯ ಮೀನುಗಳನ್ನು ಎಲ್ಲ ಕೆರೆಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಿಟ್ಟು ಬೆಳೆಸಲಾಗುತ್ತಿದೆ. ರೋಹು ಮತ್ತು ಕಾಟ್ಲಾ ತಳಿಯ ಮೀನುಗಳೇ ಎಲ್ಲ ಕಡೆಯೂ ತುಂಬಿಕೊಂಡು ಬೇರೆ ವಿಧದ ಮೀನುಗಳು ಕಣ್ಮರೆಯಾಗಿವೆ. ಈ ನೈಜ ತಳಿಯ ಮೀನುಗಳನ್ನು ಬೆಳೆಯಲು ಮತ್ತು ಕೊಳ್ಳಲು ಜನರು ಆಸಕ್ತಿ ತೋರುತ್ತಿಲ್ಲ. ಆರತಿ ಮೀನಿಗೂ ಅದರದೇ ವಿಶೇಷತೆ ಮತ್ತು ರುಚಿ ಇರುತ್ತದೆ. ಆದರೆ ದಕ್ಷಿಣಕ್ಕೆ ಆಧುನಿಕತೆಯ ವಿಸ್ಮತಿಯು ಆವರಿಸಿಕೊಂಡು ಅದು ಅಡುಗೆಗೂ ಅಂಟಿಕೊಂಡಿದೆ.
ಮತ್ತೆ ಮತ್ತೆ ಬಾಲ್ಯ ನೆನಪಾಗುತ್ತದೆ.. ಮುಂಗಾರು ಶುರುವಾಗುವ ವೇಳೆಗೆ ನಮ್ಮ ಹೊಳೆಗೆ ಹೊಸನೀರು ಬರುತ್ತಿತ್ತು, ಹಾಗೆಯೆ ಕೆರೆಗೆ, ಕಾಲುವೆಗೆ.. ಅವಾಗ ಎಲ್ಲಿ ನೋಡಿದ್ರು ಮೀನು ಮರಿಗಳ ನಲಿದಾಟ ಕಾಣುತ್ತಿತ್ತು.. ಬೇಸಾಯದ ಜೊತೆಗೆ ಮೀನು ಮತ್ತು ಏಡಿಗಳ ಸಂಕುಲವು ಬೆಳೆಯುತ್ತಿತ್ತು. ನೀರು ಮತ್ತು ಬೆಳೆಯಲ್ಲಿ ಕೀಟನಾಶಕಗಳ ಬಳಕೆ ವಿಪರೀತ ಕಡಿಮೆ ಇತ್ತು. ಭತ್ತದ ಗದ್ದೆಗೆ ನಾಟಿ ಮಾಡುವ ಸಮಯಕ್ಕೆ ಗದ್ದೆಯೋಲೆಗೆ ಬಿಲಗಳಲ್ಲಿ ಏಡಿ ಮರಿಗಳ ಸಾಮ್ರಾಜ್ಯವೇ ಇರ್ತಿತ್ತು. ಗದ್ದೆ ಕೆಲಸಕ್ಕೆ ಬಂದ ಆಳುಗಳು ಮಧ್ಯಾಹ್ನ ಊಟ ಮಾಡಿ ಖಾಲಿಯಾದ ಬಾಕ್ಸ್‌ಗಳಿಗೆ ಏಡಿಗಳನ್ನೂ ಹಿಡಿದು ತುಂಬಿಸಿಕೊಳ್ಳುತ್ತಿದ್ದರು. ಮಂಕರಿಗಳ ಬಳಸಿ ಹಿಡಿದ ಸಣ್ಣ ಮೀನುಗಳು ಅಂದು ರಾತ್ರಿ ಮೀನು ಸಾರು ಆಗುತ್ತಿದ್ದವು. ದಪ್ಪದಪ್ಪಮೀನುಗಳು ಸಿಕ್ಕುತ್ತಿದ್ದುದು ಬಹಳ ಅಪರೂಪ ಅವೆಲ್ಲ ಬಲೆ ಹಾಕಿಯೇ ಹಿಡಿಯಬೇಕಿತ್ತು. ನಮ್ಮಲ್ಲಿ ಇಷ್ಟು ವೈವಿಧ್ಯ ಪೂರ್ಣ ಮೀನು ಜಾತಿಗಳು ಸಿಕ್ಕಿದ್ದರೂ ನಮ್ಮ ಮೀನಿನ ಅಡುಗೆ ಬಹಳ ಸರಳವಾಗಿತ್ತು. ಇದಕ್ಕೆ ರೆಸಿಪಿಗಳು ಹೆಚ್ಚು ಇರಲಿಲ್ಲ. ಮೀನಿನ ಸಾರು ಒಂದೇ ಜನಜನಿತವಾದ ಮೀನಿನ ಖಾದ್ಯ. ಈ ಮೀನುಗಳು ಹೆಚ್ಚು ಮುಳ್ಳುಗಳಿಂದ ಕೂಡಿದ್ದುದರಿಂದ ತವಾದಲ್ಲಿ ಸುಡುವ ಪದ್ಧತಿ ಇಲ್ಲವೇ ಇರಲಿಲ್ಲ. ಎಂತಹುದೇ ಮೀನು ಸಿಕ್ಕರೂ ಅದಕ್ಕೆ ‘ಹುಣಸೆ ಹುಳಿ’ ಹಾಕಿಯೇ ಅಡುಗೆ ಮಾಡಬೇಕಿತ್ತು. ಆ ಹುಳಿ ಯಪ್ಪಿದರೆ ಮೀನು ಸಾರು ನಮಗೆ ದಕ್ಕುವುದಿಲ್ಲ.
ಬಯಲು ಸೀಮೆಯ ಮೀನುಗಳಲ್ಲಿ ವಿಶೇಷವಾದ ಮತ್ತೊಂದು ಮೀನು ಎಂದರೆ ಹಾವು ಮೀನು (eel ). ಸದಾ ಹರಿಯುವ ನೀರಿನಲ್ಲಿ ಮಾತ್ರ ಬೆಳೆಯುವ ಈ ಮೀನು ಎಲ್ಲರಿಗೂ ಬಹಳ ಅಚ್ಚುಮೆಚ್ಚು. ಅದರಲ್ಲಿ ಮಧ್ಯದ ಬೆನ್ನು ಮುಳ್ಳು ಬಿಟ್ಟು ಮತ್ತೇನು ಇರುವುದಿಲ್ಲ. ಕಬಾಬ್ ಮಾಡಲು ಹೇಳಿಮಾಡಿಸಿದ ಮೀನು. ಸಮುದ್ರ ಮತ್ತು ಸಿಹಿ ನೀರಿನಲ್ಲಿ ಹಾವು ಮೀನಿನ ನೂರಾರು ತಳಿಗಳಿವೆ. ಆದರೆ ಅತಿಯಾದ ನೀರಿನ ಕೊರತೆ ಮತ್ತು ನದಿಗಳ ಮಾಲಿನ್ಯದಿಂದ ನಮ್ಮಲ್ಲಿನ ಹಾವು ಮೀನುಗಳು ಬಹುತೇಕ ಕಣ್ಮರೆಯಾಗಿವೆ. ಈ ಮೊದಲು ದಂಡಿ ದಂಡಿಯಾಗಿ ಸಿಕ್ಕುತ್ತಿದ್ದವು. ಇವುಗಳ ಜೊತೆಗೆ ವಿಶೇಷವಾದ ಸಣ್ಣ ಕರಿ ಮೀನುಗಳು ಮತ್ತು ಸಿಗಡಿಗಳು ವರ್ಷ ಪೂರ್ತಿ ನಮ್ಮ ಅಡುಗೆಯ ಪದಾರ್ಥಗಳಾಗಿ ಸಂಗ್ರಹವಾಗಿರುತ್ತವೆ. ಹೊಳೆ ಮತ್ತು ಕೆರೆಗಳಲ್ಲಿ ಸಿಕ್ಕುವ ಸಣ್ಣ ಮೀನುಗಳನ್ನು, ಕೆಂಪು ಬಣ್ಣದ ಸಣ್ಣ ಮೀಸೆಯ ಸೀಗಡಿಗಳನ್ನು ಹಿಡಿದು, ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಸಂತೆಗಳಲ್ಲಿ ಮಾರುತ್ತಾರೆ. ಬೇಳೆಯ ಉಪ್ಸಾರು ಮತ್ತು ಮಸೆದ ಸೊಪ್ಪಿನ ಸಾರುಗಳಲ್ಲಿ ಈ ಕರಿಮೀನು ಮತ್ತು ಸಿಹಿನೀರಿನ ಸಿಗಡಿ ಯೆಥೇಚ್ಛವಾಗಿ ಬಳಸುತ್ತಾರೆ. ಕೆಂಪು ಸಿಗಡಿಯನ್ನು ಹುರಿದು ಚಟ್ನಿ ಮಾಡುವರು ಅಥವಾ ತುರಿದ ಕೊಬ್ಬರಿಯ ಜೊತೆಗೆ ಚೆನ್ನಾಗಿ ಹುರಿದು ರುಬ್ಬಿ ‘ಸಿಗಡಿ ಬಜ್ಜಿ’ ಮಾಡುವರು. ಈಗಾಗಲೇ ಹೇಳಿದಂತೆ ನಮ್ಮಲ್ಲಿ ವೈವಿಧ್ಯಮಯ ಮೀನುಗಳಿವೆ ಆದರೆ ರೆಸಿಪಿಗಳು ಇಲ್ಲ ಅಥವಾ ಉಳಿಸಿಕೊಂಡಿಲ್ಲ. ಈಚೆಗೆ ಬೇರೆ ಬೇರೆ ಕಡೆಯ ಅಡುಗೆಯ ಕ್ರಮಗಳನ್ನು ನೋಡಿಕೊಂಡು ಸುಟ್ಟ ಮೀನು, ಹುರಿದ ಮೀನು, ಬೇಯಿಸಿದ ಮೀನು ಹೀಗೆ ಹಲವು ಮಿಶ್ರ ಪ್ರಯೋಗದ ಯತ್ನಗಳು ನಡೆಯುತ್ತಿವೆ. ಆದರೆ ‘ಮೀನು ಸಾರು’ ಒಂದು ಐತಿಹಾಸಿಕ ರೆಸಿಪಿ ಎನ್ನುವುದರಲ್ಲಿ ಸಂಶಯವಿಲ್ಲ. ಇದು ಬಯಲು ಸೀಮೆಯ ಹಲವು ನದಿಗಳ ದಂಡೆಯ ಭಾಗಗಳಲ್ಲಿ ಹಲವು ತರಹ ಇದೆ. ಅದೊಂದು ಕೂಲಂಕವಾದ ಅಧ್ಯಯನವೇ ಮಾಡಬೇಕಿದೆ.
ಬಯಲು ಸೀಮೆಯ ಈ ಮೀನುಗಳು ಇವತ್ತಿನವು ಮಾತ್ರವಲ್ಲ ಇವು ಕವಿ ರಾಘವಾಂಕನ ಕಾಲದವು ಕೂಡ. ಆತನ ‘ಹರಿಶ್ಚಂದ್ರ ಕಾವ್ಯ’ದಲ್ಲಿ ಬೇಟೆಯ ಒಂದು ಸಂದರ್ಭದಲ್ಲಿ ಹಲವು ಮೀನುಗ ಪಟ್ಟಿಯನ್ನು ಹೀಗೆ ಮಾಡಿದ್ದಾನೆ.
‘‘ಕೊಳುವ ಸೀಗುಡಿ ಗೆಂಡೆ ಕುಚ್ಚು ಹಣ್ಣಲು ಬಸಿಗ
ಗಿಳೆಲು ಬಂಗಡೆ ಹಾವು ಜಳಬಾಳೆ ಕುಕಿಲು ಹೆ
ಗ್ಗಳೆ ಗಣೆ ಮಣಿಗಣ್ಣ ತೂತು ತೆಂತಲು ಸಿಸಿಲು ಬೊಂಪು ಸವಿವಾಯ ಗೊದಳೆ
ಗಳೆಮೆಳುವ ಕಾಗೆಂಡೆಯಯರೆಗ ದೊಂಡಿ ಕೆಂಗ
ಹರಳು ಹಾರುವಂ ಹಿರಿಯ ಷಡುಸಕ್ಕರಿಗ
ನಿಳಳು ಹಂದೆನನಾನೆ ಮೊಗನೆಂಬ ಪರಿಪರಿಯ ಮೀನ್ಗಳಂ ಗುದಿಗೆಯ್ದರು
ಬಿಳಿಚ ಚಿಪ್ಪಲು ಮಲಗು ಹೆಮ್ಮಲಗು ಬಿಳಿಯಾನೆ
ಮಳಲಿ ಕೂಡಿಲು ಚಕ್ರಗೆಂಡೆಯಾವೆಗ ನವಿಲು
ಯಿಳಿಯಂಬು ಕುಳೆದಲೆಗ ಹೆಮ್ಮಿನು ಕೆಮ್ಮಿನು ಮುಕ್ಕಣ್ಣನಾರೆ ನಿಳೆಲು
ಕುಳಿಚು ಸೂಜಿಗ ನಗಲು ಹೆಲ್ಲರಂ ಬಂಕರುಂ
ಹಳಲೆ ಕಪ್ಪೆಗಳೊಳಲೆ ಬೋಟೆ ಗಿಳೆಲುಗಳೆಂಬ
ಹೊಳೆವಳಿಯ ಮಿನ್ಗಳಂ ತವಿಸುತಿಹ ಬೇಡರಂ ನೋಡಿದಂ ಭೂಪಾಲನು.
ಇವುಗಳನ್ನು ನಾವೀಗ ಹುಡುಕಿ ಗುರುತಿಸಿ ನಮ್ಮ ಮನುಷ್ಯ ಪೀಳಿಗೆಯ ಜೊತೆಗೆ ಅವು ಮುಂದುವರಿಯುವಂತೆ ಗಮನ ಹರಿಸಬೇಕಿದೆ.. ಯಾಕೆಂದರೆ ಮೀು ಮನುಕುಲದ ಶಕ್ತಿ ಮದ್ದು!