ಕೃತಿ ಪರಿಚಯ
ಈ ಹೊತ್ತಿನ ಹೊತ್ತಿಗೆ
ಹಿಡಿಯಲಾಗದ ಮಧುರ ಆಟಗಳ ಸಂಪುಟ...

‘ಪರಿಮಳ’ ಡಾ. ವಿಜಯ ನಾಗ್ ಜಿ. ಅವರು ಅನುವಾದಿಸಿರುವ ಖ್ಯಾತ ಪಾಶ್ಚಾತ್ಯ ಕವಿಗಳ ಕವಿತೆಗಳ ಗುಚ್ಚ. ಡಾ. ವಿಜಯ ನಾಗ್ ಅವರು ರಶ್ಯ, ಫ್ರಾನ್ಸಂ, ಸ್ಪೇನ್, ಚಿಲಿ, ಜರ್ಮನಿ, ಅರ್ಜೆಂಟೀನಾ, ಮೆಕ್ಸಿಕೊ, ಪರ್ಷಿಯಾ ಮೊದಲಾದ ವಿಶ್ವದ ವಿವಿಧ ರಾಷ್ಟ್ರಗಳ ಕವಿತಾ ಜಗತ್ತಿನಿಂದ ತಾವು ಇಷ್ಟಪಟ್ಟ ಕವಿತೆಗಳನ್ನು ಆಯ್ದು ಅನುವಾದಿಸಿದ್ದಾರೆ. ಆಯಾ ದೇಶದ ಕವಿಗಳ ಸಂಕ್ಷಿಪ್ತ ಪರಿಚಯವನ್ನೂ ಇಲ್ಲಿ ನೀಡಲಾಗಿದೆ.
ಇಲ್ಲಿ ಒಟ್ಟು 36 ಕವಿತೆಗಳಿವೆ. ಜೊತೆಗೆ ಮೂಲ ಕವಿಗಳ ಬಗ್ಗೆ ಸಣ್ಣದೊಂದು ಟಿಪ್ಪಣಿಗಳನ್ನೂ ನೀಡಿದ್ದಾರೆ. ಕವಿತೆಗಳನ್ನು ನಮ್ಮದಾಗಿಸಿಕೊಳ್ಳಲು ಈ ಟಿಪ್ಪಣಿಗಳು ಪೂರಕವಾಗಿವೆ. ಅಲೆಕ್ಸಾಂಡರ್ ಪುಷ್ಕಿನ್ ಅವರ ಮೂರು ಕವಿತೆಗಳು, ಚಾರ್ಲ್ಸ್ ಬಾದಿಲೇರ್ ಅವರ ಎರಡು ಕವಿತೆಗಳು, ದೇಸಂಕ ಮಾಕ್ಸಿಮೋವಿಕ್, ಫೆಡಿರಿಕೋ ಗಾರ್ಸಿಯಾ ಲೋರ್ಕಾ , ಗಾಬ್ರಿಯೆಲಾ ಮಿಸ್ಟ್ರಲ್, ಹರ್ಮ್ನ್ ಹೆಸ್ಸೆ , ಜಾಕ್ವೆಸ್ ಪ್ರಿವರ್ಟ್, ಜಾರ್ಜ್ ಲೂಯಿಸ್ ಬೋರ್ಜಸ್, ಒಕ್ಟೇವಿಯೋ ಪಾಝ್, ಪ್ಯಾಬ್ಲೋ ನೆರೂಡ, ರೂಮಿ, ಸೆರ್ಗೆಯ್‌ಯೆಸ್‌ನಿನ್ ಇಷ್ಟೂ ಕವಿತೆಗಳ ತಲಾ ಮೂರು ಕವಿತೆಗಳನ್ನು ಅನುವಾದಕ್ಕೆ ಆಯ್ದುಕೊಂಡಿದ್ದಾರೆ. ಇವರೆಲ್ಲರೂ ಈಗಾಗಲೇ ಗುರುತಿಸಿಕೊಂಡ ವಿಶ್ವದ ಖ್ಯಾತ ಕವಿಗಳು.
‘ಸೂರ್ಯೋದಯಕೆ ಕಾಯುತಿದೆ. ಒಮ್ಮೆಯಾದರೂ
ಮಾನವನ ಮುಖವೊಂದ ನೋಡಬಯಸುವೆ
ಅದು ನಾನರಿಯದ ವಿಶ್ವಕೋಶವೇ ಆಗಿದೆ
ನಾ ಹಿಡಿಯಲೇ ಆಗದ ಮಧುರ ಆಟಗಳ
ಸಂಪುಟವೇ ಇದಾಗಿದೆ’ ಎನ್ನುವ ಬೋರ್ಜಸ್ ಕವಿಯ ಸಾಲುಗಳು ಈ ಕೃತಿಯ ಉದ್ದೇಶವನ್ನು ಹೇಳುತ್ತದೆ. ವಿಶ್ವದ ಕವಿಗಳ ಹಿಡಿಯಲೇ ಆಗದ ಮಧುರ ಆಟಗಳ ಸಂಪುಟ ಈ ಕಿರು ಸಂಕಲನವಾಗಿದೆ. ಪ್ರಾತಿನಿಧಿಕವಾಗಿರುವ ಕವಿತೆಗಳ ಮೂಲಕ ನಾವು ಜಗವನ್ನು ಆಧರಿಸಿದ ಉದಾತ್ತತೆಯ ಮಗ್ಗುಲೊಂದನ್ನು ಪರಿಚಯಿಸಬಹುದು. ಇಲ್ಲಿರುವ ಪ್ರತಿ ಕವಿತೆಗಳ ಭಾವತೀವ್ರತೆ ನಮ್ಮನ್ನು ತಟ್ಟುತ್ತದೆ.
ಭೂಮಿಗಿರಿ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. 102 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 98451 56788 ದೂರವಾಣಿಯನ್ನು ಸಂಪರ್ಕಿಸಬಹುದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ