varthabharthi


ಸುಗ್ಗಿ

ಬೃಹತ್ ಮಾರಾಟ ಮಳಿಗೆಗಳ ಮಾಯಾ ಲೋಕ

ವಾರ್ತಾ ಭಾರತಿ : 14 Mar, 2020
ತಾರಾ ಭಟ್, ಉಡುಪಿ

ತಾರಾ ಭಟ್, ಉಡುಪಿ

ಈ  ಸೂಪರ್ ಬಝಾರ್‌ಗಳ ಮಾರಾಟ ತಂತ್ರಗಳಿಗೆ ಕೊನೆ ಮೊದಲಿಲ್ಲ. ಎರಡು ತೆಗೆದುಕೊಂಡರೆ ಇನ್ನೊಂದು ಉಚಿತ. ನಿಗದಿತ ತಾರೀಕಿನಲ್ಲಿ ತೆಗೆದುಕೊಂಡರೆ ಭಾರೀ ಕಡಿತ. ಹೆಚ್ಚೆಚ್ಚು ಕೊಂಡಷ್ಟು ಹೆಚ್ಚು ಉಳಿತಾಯ ಹಾಗೇ ಜೊತೆಗೆ ಏನೇನೋ ಗಿಫ್ಟುಗಳು. ಐಟಿ ಉದ್ಯೋಗಿಗಳಿಗೆ ಕಚೇರಿಯಲ್ಲಿ ಕೊಡುವ ಕೂಪನ್‌ಗಳನ್ನು ಆಯಾ ತಿಂಗಳಲ್ಲೇಖರ್ಚು ಮಾಡಬೇಕಾದ ಅನಿವಾರ್ಯತೆ. ಇವೆಲ್ಲಾ ವ್ಯವಹಾರಗಳು ವಾಣಿಜ್ಯ ವ್ಯವಹಾರದ ವಿಶಿಷ್ಟ ಜಾಗಗಳು. ಹಾಗೆಯೇ ಕ್ರೆಡಿಟ್ ಕಾರ್ಡ್‌ಗಳೂ ಹೆಚ್ಚೆಚ್ಚು ಖರ್ಚು ಮಾಡಲು ಪ್ರರೇಪಿಸುವ ಪ್ರಲೋಭನೆಗಳು.ಇಂದು ಜಾಗತೀಕರಣದ ಕುರಿತು ಬೇಕಾದಷ್ಟು ಚಿಂತನೆಗಳು ವಾದ ವಿವಾದಗಳು ಹುಟ್ಟಿಕೊಂಡಿವೆ. ಜಾಗತೀಕರಣದ ಪ್ರಕ್ರಿಯೆ ತೃತೀಯ ರಾಷ್ಟ್ರಗಳನ್ನು ಪ್ರವೇಶಿಸಿ ಇಲ್ಲಿಯ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದು ನಿಧಾನವಾಗಿ ಇಲ್ಲಿಯ ಸಾಂಸ್ಕೃತಿಕ ಜಗತ್ತನ್ನು ದುರ್ಬಲಗೊಳಿಸುತ್ತಾ ಹೋಗುತ್ತಿದೆ ಅನ್ನುವುದು ಗೊತ್ತೇ ಆಗದಂತೆ ನಾವು ಅದರ ದಾಸ್ಯಕ್ಕೆ ಬಲಿ ಬೀಳುತ್ತೇವೆ.

 ಅದಕ್ಕೆ ತಕ್ಕಂತೆ ವಿದೇಶಿ ಬೃಹತ್ ಮಾರಾಟ ಮಳಿಗೆಗಳೂ ಗಟ್ಟಿಯಾಗಿ ತಳವೂರಿ ಕೊಳ್ಳು-ಬಳಸು-ಬಿಸಾಕು ಎಂಬ ತಮ್ಮ ವಾಣಿಜ್ಯ ತಂತ್ರದ ವ್ಯಾಪಾರಿಕೆ ಗುಣವನ್ನು ನಮ್ಮಲ್ಲಿ ನಾವು ನಿರಾತಂಕವಾಗಿ ಬಿತ್ತರಿಸುತ್ತಾ, ಅದರಲ್ಲಿ ತೇಲಿ ಹೋಗುವಂತೆ ಮಾಡಿ ತಮ್ಮ ಪ್ರಚಾರ ಕಲೆಯಿಂದ ವ್ಯವಸ್ಥಿತವಾಗಿ ನಮ್ಮನ್ನು ಪರಾವಲಂಬಿಯನ್ನಾಗಿ ಮಾಡುವುದು ಅದರ ನಿಜವಾದ ಗುಣ. ಈ ಕೊಳ್ಳು-ಬಳಸು-ಬಿಸಾಕು ಇದು ಪಾಶ್ಚಾತ್ಯ ಚಿಂತನೆ. ಇದು ಭಾರತೀಯ ಜಾಯಮಾನಕ್ಕೆ ಒಗ್ಗುವ ಸಂಸ್ಕೃತಿಯಲ್ಲ. ಯಾವುದೇ ಹಳೆಯ ಸಾಮಗ್ರಿಗಳೂ ಒಂದು ರೀತಿಯಲ್ಲಿ ಭೂತದ ಜತೆಗಿನ ಅದರ ಸಂಬಂಧ ಜೀವಂತವಾಗಿ ಇಡುವ, ನೆನಪಿನ ಬುತ್ತಿಗಳಾಗಿ ಕಾಪಿಡುವ ಸಂಸ್ಕಾರ ನಮ್ಮದು. ಅದರ ಬೆಲೆಗಿಂತ ಅದರ ಜತೆಗಿನ ಭಾವನಾತ್ಮಕ ಸಂಬಂಧಗಳಿಗೇ ನಾವು ಹೆಚ್ಚು ಬೆಲೆ ಕೊಡುತ್ತೇವೆ. ಈ ಕಾರಣಗಳಿಂದಲೇ ಸಾಕಿದ ಯಾವುದೇ ಹಸು, ಪ್ರಾಣಿಗಳನ್ನು ಮುದಿಯಾದೊಡನೆ ಹೊರಗೆ ಅಟ್ಟುವುದಿಲ್ಲ ಕೌಟುಂಬಿಕ ಸಂಬಂಧದ ನೆನಪುಗಳನ್ನು ಆದಷ್ಟು ಜೋಪಾನವಾಗಿಡಬೇಕೆಂಬ ಹಂಬಲ ನಮ್ಮದು. ಆದರೆ ಇಂದು ಐಟಿ ಸೃಷ್ಟಿಸಿದ ಜಾಗತಿಕ ಜೀವನ ಶೈಲಿಯೂ ಈ ಕೊಳ್ಳುಬಾಕ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಸುಳ್ಳಲ್ಲ. ಐಟಿ ಉದ್ಯೋಗಿಗಳಿಗೆ ಸಿಗುವ ಸಂಬಳ ಅವರಿಗೆ ಮೇಲ್ವರ್ಗದ ಸ್ಥಾನಮಾನ ನೀಡಿದೆ. ಇಂದಿನ ಅತೀ ವೇಗದ ಬೆಳವಣಿಗೆಗೆ ಕೋಸ್ಮೋಪಾಲಿಟನ್ ಸ್ಪಶರ್ ಬೇಕು ಅನ್ನುವ ಈ ಮೇಲ್ವರ್ಗದ ಹಪಾಹಪಿಗೆ ‘ಮಾಲ್’ಗಳಂತಹ ದೈತ್ಯ ಶಾಪಿಂಗ್ ಮಳಿಗೆಗಳೇ ಬೇಕು. ಈ ಸೂಪರ್ ಬಝಾರ್‌ಗಳು ತಮಗಾಗಿಯೇ ಇವೆ ಅನ್ನುವಂತೆ ತಳ್ಳುಗಾಡಿಗಳಲ್ಲಿ ಸಾಮಾನುಗಳನ್ನು ಹಾಕುತ್ತಾ ಬೇಕಾದ್ದು ಬೇಡಾದ್ದು ಎಲ್ಲವನ್ನೂ ಕೊಳ್ಳುವುದು ಇವರಿಗೆ ಚಟವಾಗಿಬಿಟ್ಟಿದೆ. ಅವರ ಈ ಮನೋಭಾವವನ್ನು ಮಾಲಕರು ಚೆನ್ನಾಗಿಯೇ ನಗದೀಕರಿಸಿಕೊಳ್ಳುತ್ತಾರೆ. ಇಂತಹ ಮಳಿಗೆಗಳಲ್ಲಿ ಖರೀದಿಸುವುದು ಪ್ರತಿಷ್ಠೆಯ ವಿಚಾರವೂ ಹೌದು ಮತ್ತು ಎಲ್ಲವೂ ಒಂದೆಡೆ ಸಿಗುವುದರಿಂದ ಸಮಯ ಮತ್ತು ಹಣದ ಉಳಿತಾಯ ಎನ್ನುವ ಭ್ರಮೆ ಸೃಷ್ಟಿಸುವಂತಹ ಮಾರಾಟ ಮಳಿಗೆಗಳಿವು. ಮೊತ್ತ ಮೊದಲು ಬೆಂಗಳೂರಿನಲ್ಲಿ ಜರ್ಮನ್‌ನ ‘ಮೆಟ್ರೊ’ ಬೃಹತ್ ಮಾರಾಟ ಮಳಿಗೆ ಲಗ್ಗೆ ಇಟ್ಟಾಗ ಇಲ್ಲಿ ಎಲ್ಲಾ ಸರಕುಗಳಿಗೂ ಅಗ್ಗ-ಅಗ್ಗ ಮತ್ತಷ್ಟು ಅಗ್ಗ ಎಂಬ ಸ್ಲೋಗನ್ ಬಾಯಿಯಿಂದ ಬಾಯಿಗೆ ಹರಡಿ ಜನರೆಲ್ಲಾ ಅದರ ಖಾಯಂ ಗ್ರಾಹಕರಾಗಲು ಕಾರ್ಡ್ ತೆಗೆದುಕೊಂಡಿದ್ದು ಸುಳ್ಳಲ್ಲ. ಅದರ ಬೆನ್ನಲ್ಲೇ ಸಾಲು ಸಾಲಾಗಿ ಅನೇಕ ವಿದೇಶಿ ಮಾರಾಟ ಮಳಿಗೆಗಳು ಸ್ಥಾಪಿತವಾದವು. ‘ಬಾರಿಸ್ತಾ’, ‘ಮೆಕ್‌ಡೊನಾಲ್ಡ್’, ಪಿಝಾಹಟ್’, ‘ಡೋಮಿನೋಸ್’, ‘ಕಾಫಿಡೇ’ ಹೀಗೆ ವೈಭವೋಪೇತವಾಗಿ ಠಳಾಯಿಸಿ ನಮ್ಮ ಸಣ್ಣ ಸಣ್ಣ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ದಿಕ್ಕು ದೆಸೆ ಇಲ್ಲದಂತೆ ಮಾಡಿಬಿಟ್ಟವು. ಹಳೆಯ ಕೌಶಲಗಳೆಲ್ಲಾ ನಿರ್ನಾಮವಾದವು.

ಈ ಸೂಪರ್ ಬಝಾರ್‌ಗಳ ಮಾರಾಟ ತಂತ್ರಗಳಿಗೆ ಕೊನೆ ಮೊದಲಿಲ್ಲ. ಎರಡು ತೆಗೆದುಕೊಂಡರೆ ಇನ್ನೊಂದು ಉಚಿತ. ನಿಗದಿತ ತಾರೀಕಿನಲ್ಲಿ ತೆಗೆದುಕೊಂಡರೆ ಭಾರೀ ಕಡಿತ. ಹೆಚ್ಚೆಚ್ಚು ಕೊಂಡಷ್ಟು ಹೆಚ್ಚು ಉಳಿತಾಯ ಹಾಗೇ ಜೊತೆಗೆ ಏನೇನೋ ಗಿಫ್ಟುಗಳು. ಐಟಿ ಉದ್ಯೋಗಿಗಳಿಗೆ ಕಚೇರಿಯಲ್ಲಿ ಕೊಡುವ ಕೂಪನ್‌ಗಳನ್ನು ಆಯಾ ತಿಂಗಳಲ್ಲೇಖರ್ಚು ಮಾಡಬೇಕಾದ ಅನಿವಾರ್ಯತೆ. ಇವೆಲ್ಲಾ ವ್ಯವಹಾರಗಳು ವಾಣಿಜ್ಯ ವ್ಯವಹಾರದ ವಿಶಿಷ್ಟ ಜಾಗಗಳು. ಹಾಗೆಯೇ ಕ್ರೆಡಿಟ್ ಕಾರ್ಡ್‌ಗಳೂ ಹೆಚ್ಚೆಚ್ಚು ಖರ್ಚು ಮಾಡಲು ಪ್ರರೇಪಿಸುವ ಪ್ರಲೋಭನೆಗಳು.

ತಿಂಗಳು ದಾಟಿದ ಕೂಡಲೇ ತಲೆಯಮೇಲೆ ಬಡ್ಡಿಯ ಭಾರೀ ಹೊರೆ. ಒಟ್ಟಾರೆ ಹಳತು ಬಿಸಾಡಿ ಹೊಸತು ಕೊಳ್ಳುವ ರೋಗವನ್ನು ಪ್ರೋತ್ಸಾಹಿಸುವ ಬಗೆ ಬಗೆಯ ಮಾರಾಟ ತಂತ್ರಗಳು. ಜಾಹೀರಾತಿನ ಭರಾಟೆಯ ಮೂಲಕ ಆಕರ್ಷಕ ರೀತಿಯಲ್ಲಿ ಇವನ್ನೆಲ್ಲಾ ಮಾಡುತ್ತಾರೆ. ಆತಂಕದ ವಿಷಯವೆಂದರೆ ಬಡವರ ಹೊಟ್ಟೆ ಮೇಲೆ ಕಲ್ಲು ಹಾಕುವ ಇಂತಹ ವಂಚನೆಗಳು ಬೇರೆ ಬೇರೆ ರೀತಿಯಲ್ಲಿ, ಬೇರೆ ಬೇರೆ ಹಂತಗಳಲ್ಲಿ ನಡೆಯುತ್ತವೆ. ಈ ಬಕಾಸುರ ಸಂಸ್ಕೃತಿ ಕೆಲವೇ ಜನರಲ್ಲಿ ಸಂಪತ್ತನ್ನು ಕ್ರೋಢೀಕರಿಸಿ ಬಹುಸಂಖ್ಯಾತರನ್ನು ಆರ್ಥಿಕ ದಾಸ್ಯದತ್ತ ತಳ್ಳುತ್ತಿದೆ. ಶ್ರೀಸಾಮಾನ್ಯನ ಹೋರಾಟಕ್ಕೆ ಇಲ್ಲಿ ಅರ್ಥವೇ ಇಲ್ಲ. ಇತ್ತೀಚೆಗೆ ಇಂತಹ ಜಾಹೀರಾತಿಗೆ ಮಾರು ಹೋಗಿ ನನ್ನ ಪರಿಚಯದವರೊಬ್ಬರು ತಮ್ಮ ಮನೆಯಲ್ಲಿದ್ದ ಹಳೆಯ ಪೇಪರ್, ಸೀರೆಗಳು, ಪಾತ್ರೆಗಳನ್ನು ತೆಗೆದುಕೊಂಡು ಹೋಗಿ ಬಝಾರ್‌ನಲ್ಲಿ ತೂಕ ಹಾಕಿಸಿ 500 ರೂ. ಕೂಪನ್‌ಗಳನ್ನು ಪಡೆದು ಪಜೀತಿ ಪಟ್ಟ ವಿಚಾರ ಹೇಳಬೇಕು. ಈ ಕೂಪನ್‌ಗಳನ್ನು ಕೊಟ್ಟು ಸರಕು ಖರೀದಿಸುವಂತಿಲ್ಲ. ಬದಲು ಅದರ ಎಂಟು ಪಟ್ಟು ನಗದು ಕೊಟ್ಟು ಖರೀದಿಸಬೇಕು. ನಂತರವೇ ಕೂಪನ್‌ಗಳನ್ನು ಬಳಸಿಕೊಳ್ಳಬಹುದು. ಒಟ್ಟು ನಿಗದಿತ ತಾರೀಕಿನ ಒಳಗೆ ಆ ಕೂಪನ್‌ನ್ನು ಬಳಸಬೇಕು. ನಂತರ ಆ ಕೂಪನ್‌ಗಳಿಗೆ ಬೆಲೆ ಇಲ್ಲ. ಅದನ್ನು ಕಸದ ಬುಟ್ಟಿಗೆ ಎಸೆಯಬೇಕು. ಹೀಗಿದೆ ಅವರ ವಾಣಿಜ್ಯ ಸ್ವರೂಪದ ಸುಲಿಗೆ, ಭಾರೀ ಲಾಭ ಪಡೆಯುವ ಕುತಂತ್ರಗಳು. ಅನೇಕ ತೃತೀಯ ರಾಷ್ಟ್ರಗಳು ಇಂತಹ ಮಾರಾಟ ಸುಲಿಗೆಯಿಂದ ಕಂಗಾಲಾಗಿ ಎಚ್ಚೆತ್ತುಕೊಂಡಿವೆ. ಆದರೆ ನಮ್ಮ ಜನರು ಈ ವ್ಯವಸ್ಥೆಯನ್ನು ಕಣ್ಣು ಮುಚ್ಚಿ ಒಪ್ಪಿಬಿಟ್ಟಿದ್ದಾರೆ. ನಮ್ಮ ಸಣ್ಣ ವ್ಯಾಪಾರಿಗಳು ಈ ಶಾಕ್‌ನಿಂದ ದಿವಾಳಿ ಹೊಂದಿದ್ದಾರೆ. ಅವರು ಇಲ್ಲಿ ಅಪ್ರಸ್ತುತರಾಗುತ್ತಾ ಹೋಗುತ್ತಾರೆ. ನಮ್ಮ ನಮ್ಮ ಪ್ರತಿಷ್ಠೆಯೇ ಮುಖ್ಯವಾಗಿರುವ ಅಬ್ಬರದಲ್ಲಿ ಪರ್ಯಾಯ ಚಿಂತನೆಯಲ್ಲಿ ನಂಬಿಕೆ ಉ್ಳವರ ಮಾತುಗಳು ಕೇಳಿಸದೇ ಹೋಗುತ್ತದೆ. ಇವತ್ತು ಆಗುತ್ತಿರುವುದೂ ಅದೇ. ಇವತ್ತು ನಮ್ಮ ಮುಂದಿರುವ ಬಹಳ ಮುಖ್ಯವಾದ ಪ್ರಶ್ನೆಗಳು ನಮ್ಮ ಅರಿವಿನ ಭಾಗವಾಗಬೇಕಾದ ಪ್ರಶ್ನೆಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು