ಡಾ. ಬಿ.ಆರ್. ಅಂಬೇಡ್ಕರ್‌ವಾದಕ್ಕೆ ಮರುಜೀವ ಕೊಟ್ಟ ಕಾನ್ಷಿರಾಂ
ಇಂದು ಕಾನ್ಷಿರಾಂ ಜನ್ಮದಿನ
ದಿಲ್ಲಿಯ ಪಂಚಕೋನ ಹಾಲ್‌ನಲ್ಲಿ ಸಾವಿರಾರು ನೌಕರರ ಸಮ್ಮುಖದಲ್ಲಿ ‘ಬಾಂಸೆಪ್’ ಪೆಡರೇಷನ್ ಎಂಬ ಹೆಸರಿನಲ್ಲಿ ಸಂಘವನ್ನು ಪ್ರಾರಂಭಿಸಿ Will Ambedkarism Revive & Survive” ‘‘ಸಮಾಜಕ್ಕೆ ಮರಳಿಕೊಡಿ’’ ಎಂಬ ಘೋಷಣೆಗಳೊಂದಿಗೆ ಇಡೀ ದೇಶದಾದ್ಯಂತ ಸೈಕಲ್, ಲಾರಿ, ಬಸ್ಸು, ರೈಲುಗಳಲ್ಲಿ ಸರಕಾರಿ ಕಚೇರಿಗಳಿಗೆ ಅಲೆದಾಡಿದ ಕಾನ್ಷಿರಾಂ ಈ ಸಂಘಟನೆಗೆ ಸುಮಾರು 2 ಲಕ್ಷ ಸರಕಾರಿ ನೌಕರರನ್ನು ತಯಾರು ಮಾಡುತ್ತಾರೆ.
‘‘ನೀವು ಆಳುವ ದೊರೆಗಳಾದಾಗ ಮಾತ್ರ ಜಾತಿ ರಹಿತ ಸಮಾಜವನ್ನು ನಿರ್ಮಿಸಲು ಸಾಧ್ಯ’’ ಎಂದು ಹೇಳಿದವರು ವಿಶ್ವದ ಮಹಾಚೇತನ ಕಾನ್ಷಿರಾಂ. ಅಂಬೇಡ್ಕರ್ ನಿಧನದ ನಂತರ ಹಳ್ಳ ಹಿಡಿದಿದ್ದ ವಿಮೋಚನಾ ರಥವನ್ನು ಮುನ್ನಡೆಸಿದ ಕೀರ್ತಿ ಕಾನ್ಷಿರಾಂ ಅವರಿಗೆ ಸಲ್ಲುತ್ತದೆ.
ಉತ್ತರ ಭಾರತದ ಪಂಜಾಬ್ ರಾಜ್ಯದ ರೋಪರ್ ಜಿಲ್ಲೆಯ ಖಾವಸ್‌ಪುರ ಎಂಬ ಹಳ್ಳಿಯಲ್ಲಿ ವಾಸವಾಗಿದ್ದ ಸಿಖ್‌ಧರ್ಮದ ‘ರಾಮದಾಸಿಯಾ’ ‘ಚಮ್ಮಾರ್’ (ಮಾದಿಗ) ಜಾತಿಗೆ ಸೇರಿದ ಹರಿಸಿಂಗ್ ಮತ್ತು ಶ್ರೀಮತಿ ಬಿಶನ್‌ಕಾರ್ ದಂಪತಿಯ ಮಗನಾಗಿ ಮಾರ್ಚ್ 15, 1934ರಂದು ಕಾನ್ಷಿರಾಂ ಜನಿಸಿದರು. ಅವರು ಬಾಲ್ಯದಿಂದಲೂ ಧೈರ್ಯ ಮತ್ತು ಆತ್ಮಶಕ್ತಿಗೆ ಹೆಸರು ವಾಸಿಯಾಗಿದ್ದರು. ಇವರು ಖಾವಾಸಪುರದಿಂದ 2 ಕಿ.ಮೀ. ದೂರ ವಿದ್ದ ಮಲಕಾಪುರದಲ್ಲಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ರೋಪರ್‌ನ ಇಸ್ಲಾಮಿಯಾ ಶಾಲೆಯಲ್ಲಿ 5ರಿಂದ 8ನೇ ತರಗತಿವರೆಗೆ ಓದಿ 9 ಮತ್ತು 10ನೇ ತರಗತಿಯನ್ನು DBA ಪಬ್ಲಿಕ್ ಶಾಲೆಯಲ್ಲಿ ಮುಗಿಸುತ್ತಾರೆ. 1956ರಲ್ಲಿ ರೋಪರ್‌ನ ಸರಕಾರಿ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿಯನ್ನು ಪಡೆಯುತ್ತಾರೆ. ಕಬಡ್ಡಿ, ಕುಸ್ತಿ, ಓಟ ಮತ್ತು ಈಜುವುದರಲ್ಲಿ ಇವರು ಕಾಲೇಜಿನಲ್ಲಿ ಪ್ರಥಮ ಸ್ಥಾನದಲ್ಲಿದ್ದರು. 1956ರಲ್ಲಿ ಕಾನ್ಷಿರಾಂ ಉನ್ನತ ವ್ಯಾಸಂಗಕ್ಕಾಗಿ ಡೆಹರಾಡೂನ್ ಸ್ಟಾಪ್ ಕಾಲೇಜಿಗೆ ಸೇರಿದರು. ಡೆಹರಾಡೂನ್‌ನ ಭಾರತೀಯ ವೈಜ್ಞಾನಿಕ ಸರ್ವೇಕ್ಷಣ ಇಲಾಖೆಯಲ್ಲಿ ಕೆಲವು ಕಾಲ ನೌಕರಿ ಮಾಡಿದರು. ಈ ಅವಧಿಯಲ್ಲಿ ಡಿಸೆಂಬರ್ 6, 1956ರಂದು ಬಿ. ಆರ್. ಅಂಬೇಡ್ಕರ್ ಅವರು ಪರಿನಿಬ್ಬಾಣ ಹೊಂದಿದರು. ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಹೆಚ್ಚು ತಿಳಿದುಕೊಂಡು ಅವರ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡರು. ಅವರ ಅಭಿಮಾನಿಯಾದರು. ಕಾನ್ಷಿರಾಂ 1958ರಲ್ಲಿ ಮಹಾರಾಷ್ಟ್ರದ ಪೂನಾ ನಗರದಲ್ಲಿರುವ ಕೇಂದ್ರ ಸರಕಾರಿ ಸ್ವಾಮ್ಯದ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮಿಲಿಟರಿ ಎಕ್ಸ್‌ಪ್ಲೇಸಿವ್ಸ್ ಸಂಶೋಧನಾ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿದರು. 1958ರಿಂದ 1963ರ ಮಧ್ಯೆ ಕಾನ್ಷಿರಾಂರವರು ಒಂದು ಬಾರಿ ಮಾತ್ರ ತಮ್ಮ ಸ್ವಂತ ಊರಿಗೆ ಹೋದರು. ಅಂದು ಡಾ. ಬಿ. ಆರ್. ಅಂಬೇಡ್ಕರ್ ಫೋಟೊವನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಅಳವಡಿಸಿ ಊರಿನಿಂದ ಕೆಲಸಕ್ಕೆ ಬಂದವರು ಮತ್ತೆ ಮನೆಗೆ ವಾಪಸ್ ಹೋಗಲಿಲ್ಲ. 1964ರಲ್ಲಿ ಕಾನ್ಷಿರಾಂ ಕೆಲಸ ಮಾಡುತ್ತಿದ್ದ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮಿಲಿಟರಿ ಎಕ್ಸ್ ಪ್ಲೇಸಿವ್ಸ್ ಸಂಸ್ಥೆಯ ಮೇಲಧಿಕಾರಿಗಳು ಪ್ರತಿವರ್ಷದಂತೆ 1965ನೇ ವರ್ಷದ ರಜಾದಿನಗಳನ್ನು ಘೋಷಿಸಿದ್ದರು. ಪ್ರತಿವರ್ಷದಂತೆ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ಗೌತಮಬುದ್ಧ ಜಯಂತಿಗೆ ರಜೆಗಳನ್ನು ರದ್ದುಮಾಡಿ ಬದಲಿಗೆ ಆ ರಜೆಗಳನ್ನು ಬಾಲಗಂಗಾದರ್ ತಿಲಕ್ ಮತ್ತು ದೀಪಾವಳಿ ಹಬ್ಬಕ್ಕೆ ರಜೆಗಳನ್ನು ಘೋಷಿಸುತ್ತಾರೆ. ಆಗ ಅಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಭಂಗಿ ಜಾತಿಗೆ ಸೇರಿದ ದೀನಾಬಾನಾ ಎಂಬ 4ನೇ ದರ್ಜೆಯ ನೌಕರನು ಅದೇ ಸಂಸ್ಥೆಯ ಕಾರ್ಮಿಕ ಕಲ್ಯಾಣ ಸಮಿತಿಯ ಚುನಾಯಿತ ಸದಸ್ಯನಾಗಿರುತ್ತಾರೆ. ಆ ವರ್ಷದ ರಜೆದಿನಗಳ ಒಪ್ಪಿಗೆ ಪಡೆಯಲು ಆಡಳಿತ ಮಂಡಳಿಯು ಅಪೆಕ್ಸ್ ಕಮಿಟಿಯಲ್ಲಿ ಮಂಡಿಸಿದಾಗ, ಕಮಿಟಿಯ ಸಭೆಯಲ್ಲಿ ಭಾಗವಹಿಸಿದ್ದ ದೀನಾಬಾನಾ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ಗೌತಮಬುದ್ಧ ಜಯಂತಿಗೆ ರಜೆ ನೀಡದೇ ಇರುವುದನ್ನು ಪ್ರತಿಭಟಿಸುತ್ತಾರೆ. ಅಪೆಕ್ಸ್ ಕಮಿಟಿಯ ಚೇರ್ಮನ್ ಆಗಿದ್ದ ಅಯ್ಯಂಗಾರ್ ಸಿ. ರಾಮಚಂದ್ರನ್ ಹಾಗೂ ಆಂಧ್ರಪ್ರದೇಶ ಮೂಲದ ಬ್ರಾಹ್ಮಣನಾಗಿದ್ದ್ದ ವರದಾಚಾರಿಗೆ ದೀನಾಬಾನರು ದೂರು ನೀಡುತ್ತಾರೆ. ಇದರಿಂದ ಆಕ್ರೋಶಗೊಂಡ ಮೇಲಧಿಕಾರಿಗಳು ದೀನಾಬಾನರನ್ನು ಚುನಾಯಿತ ಪ್ರತಿನಿಧಿಯಾಗಿದ್ದ ಅಪೆಕ್ಸ್ ಕಮಿಟಿಯಿಂದ ಕಿತ್ತುಹಾಕುತ್ತಾರೆ. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತಾರೆ. ಆಗ ಕೇಂದ್ರ ರಕ್ಷಣಾ ಸಚಿವರಾಗಿದ್ದ ವೈ.ಬಿ. ಚವ್ಹಾಣ್ ಅವರಿಗೆ ದೂರು ನೀಡಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗೆ ಹಾಗೂ ಗೌತಮಬುದ್ಧ ಜಯಂತಿಗೆ ರಜೆ ಬಂತು ಮತ್ತು ದಿನಾಬಾನರಿಗೆ ನೌಕರಿಯೂ ಸಿಕ್ಕಿತು. ಈ ವಿಷಯದಲ್ಲಿ ಕಾನ್ಷಿರಾಂ ಅವರು ದಿನಾಬಾನರಿಗೆ ಸಹಾಯ ಮಾಡುತ್ತಾರೆ. ಇದನ್ನು ತಿಳಿದು ಮೇಲಧಿಕಾರಿಗಳು ಕಾನ್ಷಿರಾಂರನ್ನು ಕೆಲಸದಿಂದ ಸಸ್ಪೆಂಡ್ ಮಾಡುತ್ತಾರೆ. ಆಗ ಅವರ ತಾಯಿಯಿಂದ ‘‘ನಿನಗೆ ಮದುವೆ ಮಾಡಲು ನಿಶ್ಚಯಿಸಿ ಹೆಣ್ಣು ನೋಡಿದ್ದೇವೆ. ನೀನು ಊರಿಗೆ ಬೇಗ ಬಾ’’ ಎಂದು ಪತ್ರ ಬರುತ್ತದೆ. ಆ ದಿನ ರಾತ್ರಿ ಕಾನ್ಷಿರಾಂರನ್ನು ಸಮಾಧಾನ ಮಾಡಲು ದೀನಾಬಾನ, ಮದು ತಂಬಾಕೆ, ಮುಹಮ್ಮದ್ ಗೈನಿ, ಡಿ.ಕೆ. ಬಾಪರ್ಡೆಯವರು ಬಂದು ಜಾತಿವಿನಾಶ ಪುಸ್ತಕವನ್ನು ಕಾನ್ಷಿರಾಂಗೆ ಕೊಟ್ಟು ಹೋಗುತ್ತಾರೆ. ಆ ಪುಸ್ತಕವನ್ನು ಅವರು ಓದುತ್ತಾರೆ. ಆಗ ಈ ದೇಶದಲ್ಲಿ ಇರುವ ಜಾತಿವ್ಯವಸ್ಥೆ ಬ್ರಾಹ್ಮಣಶಾಹಿತ್ವ ಮನುವಾದವನ್ನು ನಾಶ ಮಾಡಬೇಕು ಎಂದು ಶಪಥ ಮಾಡಿ ‘‘ನಾನು ಮನೆಯವರ ಪಾಲಿಗೆ ಸತ್ತು ಹೋಗಿದ್ದೇನೆ ಎಂದು ತಿಳಿದು ಕೊಳ್ಳಿ’’ ಎನ್ನುತ್ತಾ ತಾಯಿಗೆ 24 ಪುಟಗಳ ಪತ್ರ ಬರೆಯುತ್ತಾರೆ.
ಕಾನ್ಷಿರಾಂ ಅವರ ಪ್ರತಿಜ್ಞೆಗಳು:
♦ ನಾನು ನನ್ನ ವೈಯಕ್ತಿಕವಾಗಿ ಯಾವುದೇ ಆಸ್ತಿ ಹಾಗೂ ಸಂಪತ್ತನ್ನು ಹೊಂದುವುದಿಲ್ಲ.
♦ ಬಾಬಾ ಸಾಹೇಬರ ಕನಸನ್ನು ನನಸು ಮಾಡುವವರೆಗೂ ನಾನು ಮದುವೆ ಯಾಗುವುದಿಲ್ಲ.
♦ ನನ್ನ ರಕ್ತ ಸಂಬಂಧಿಗಳೊಡನೆ ಯಾವುದೇ ಭಾವನಾತ್ಮಕ ಸಂಬಂಧ ಇಟ್ಟು ಕೊಳ್ಳುವುದಿಲ್ಲ. ಮನೆಗೆ ಕಾಲಿಡುವುದಿಲ್ಲ.
♦ ನಾನು ಯಾವುದೇ ಸ್ವಾರ್ಥಕ್ಕೆ ಚಳವಳಿಯನ್ನು ಮಾಡುವುದಿಲ್ಲ.
♦ ನಾನು ಈ ದೇಶದಲ್ಲಿ ಆವರಿಸಿ ಹೋಗಿರುವ ಬ್ರಾಹ್ಮಣ ಶಾಹಿತ್ವವನ್ನು ನಿರ್ನಾಮ ಮಾಡಿ ವಿಮೋಚನ ರಥವನ್ನು ಮುನ್ನಡೆಸುತ್ತೇನೆ ಎಂದು ಕಾನ್ಷಿರಾಂ ಪ್ರತಿಜ್ಞೆ ಮಾಡಿ 1965-1971ರ ವರೆಗೆ ಅಂಬೇಡ್ಕರ್, ಫುಲೆ, ಶಾಹುಮಹಾರಾಜರು, ನಾರಾಯಣಗುರು, ಪೆರಿಯಾರ್, ನಾಲ್ವಡಿ ಕೃಷ್ಣರಾಜ ಒಡೆಯರು, ಭಾರತದ ಸಂವಿಧಾನ ಮತ್ತು ಭಾರತದ ರಾಜಕೀಯ ವ್ಯವಸ್ಥೆ ಸುದೀರ್ಘ ಅಧ್ಯಯನ ಮಾಡಿ ಮೀಸಲಾತಿ ಋಣ ತಿಂದಿರುವ ನೌಕರರನ್ನು ಸಂಘಟಿಸುವ ಸಲುವಾಗಿ ಎಪ್ರಿಲ್ 14, 1971 ರಂದು ಪೂನಾದ ಖಡಕಿ ಕ್ಷೇತ್ರದ ಒಂದು ಶಾಲೆಯಲ್ಲಿ ಆ ನೌಕರರ ಸಭೆ ಕರೆದರು. ಅದರಲ್ಲಿ ಸುಮಾರು 50 ಜನ ಸೇರಿದರು. ಡಿ.ಕೆ. ಖಾರ್ಪಡೆ, ಮಧು ತಂಬಾಖೆ, ಮಧು ಪರಿಹಾರ, ದೀನಾಬಾನ, ಮನೋಹರ ಆಟೆ ಮುಂತಾದವರು ಭಾಗವಹಿಸಿದ್ದರು. ಈ ದೇಶದಲ್ಲಿರುವ 17 ಲಕ್ಷ ಎಸ್ಸಿ/ಎಸ್ಟಿ ನೌಕರರು ಮನಸ್ಸು ಮಾಡಿದರೆ ಒಂದು ರಾಜಕೀಯೇತರ ಸಂಘಟನೆಯನ್ನು ಕಟ್ಟಬಹುದೆಂದು ಚಿಂತಿಸಿ, ದಿನಾಂಕ 14-10-1971ರಂದು ಪೂನಾ ನಗರದ ನೆಹರೂ ಮೆಮೋರಿಯಲ್ ಹಾಲ್‌ನಲ್ಲಿ ಕಾನ್ಷಿರಾಂ ಅಧ್ಯಕ್ಷತೆಯಲ್ಲಿ 1,000 ಜನ ನೌಕರರನ್ನು ಸೇರಿಸಿ ಎಸ್ಸಿ/ಎಸ್ಟಿ/ಒಬಿಸಿ ಮತ್ತು ಅಲ್ಪಸಂಖ್ಯಾತರ ಸಂಘಟನೆ ಪ್ರಾರಂಭಿಸುತ್ತಾರೆ. ಆ ಸಂಘಟನೆಯ ಮೂಲಕ ‘‘ನಮ್ಮ ನೌಕರರ ಸಮಸ್ಯೆಗಳು ಮತ್ತು ಪರಿಹಾರಗಳು’’ ಎಂಬ ವಿಷಯದ ಮೇಲೆ ಕುರಿತು ವಿಚಾರ ಸಂಕಿರಣ ಏರ್ಪಡಿಸಿ ನೌಕರರಲ್ಲಿ ಜಾಗೃತಿ ಮೂಡಿಸುತ್ತಾರೆ. ‘ಪೇ ಬ್ಯಾಕ್ ಟೂದ ಸೊಸೈಟಿ’ (ಸಮಾಜಕ್ಕೆ ಮರಳಿಕೊಡು) ಎಂದು ಹೇಳುತ್ತಾರೆ.
ಬಾಂಸೆಪ್ ಸ್ಥಾಪನೆ:
ನೌಕರರ ಸಂಖ್ಯೆ ಹೆಚ್ಚಾದಂತೆ ಮತ್ತಷ್ಟು ಉತ್ಸಾಹ, ಧೈರ್ಯ, ಆಸಕ್ತಿ ಹೆಚ್ಚಾಗಿ ದಿಲ್ಲಿಯ ಪಂಚಕೋನ ಹಾಲ್‌ನಲ್ಲಿ ಸಾವಿರಾರು ನೌಕರರ ಸಮ್ಮುಖದಲ್ಲಿ ಬಾಂಸೆಪ್ (BAMCEF- Back ward and Minority Communities Employees) ಪೆಡರೇಷನ್ ಎಂಬ ಹೆಸರಿನಲ್ಲಿ ಸಂಘವನ್ನು ಪ್ರಾರಂಭಿಸಿ Will Ambedkarism Revive & Survive” ‘‘ಸಮಾಜಕ್ಕೆ ಮರಳಿಕೊಡಿ’’ ಎಂಬ ಘೋಷಣೆಗಳೊಂದಿಗೆ ಇಡಿ ದೇಶದಾದ್ಯಂತ ಸೈಕಲ್, ಲಾರಿ, ಬಸ್ಸು, ರೈಲುಗಳಲ್ಲಿ ಸರಕಾರಿ ಕಚೇರಿಗಳಿಗೆ ಅಲೆದಾಡಿದ ಕಾನ್ಷಿರಾಂ ಈ ಸಂಘಟನೆಗೆ ಸುಮಾರು 2 ಲಕ್ಷ ಸರಕಾರಿ ನೌಕರರನ್ನು ತಯಾರು ಮಾಡುತ್ತಾರೆ. ಅವರು 500 ಜನ ಪಿಎಚ್.ಡಿ. ಪದವೀಧರರು, 3,000 ಡಾಕ್ಟರ್‌ಗಳು, 15,000 ಇಂಜಿನಿಯರುಗಳು, ವಿಜ್ಞಾನಿಗಳು, 70,000 ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ನೌಕರರು ಮತ್ತಿತರ ಸರಕಾರಿ ನೌಕರರಾಗಿರುತ್ತಾರೆ. 10,000 ಜನ ಸಕ್ರಿಯ ಕಾರ್ಯಕರ್ತರ ಪಡೆ ಇರುತ್ತದೆ. ಈ ಸಂಘಟನೆಯ ಮೂಲಕ ಡಿಸೆಂಬರ್ 7ರಿಂದ 10 ರ ವರೆಗೆ ದಿಲ್ಲಿಯಲ್ಲಿ ಮೊದಲ ಸಮಾವೇಶ ಮತ್ತು 1979 ಜೂನ್ 11ರಿಂದ 14ರವರೆಗೆ ‘‘ಅಂಬೇಡ್ಕರ್‌ವಾದ ಮರಳಿ ಜೀವ ಪಡೆಯುತ್ತದೆಯೇ ಮತ್ತು ಉಳಿಯುವುದೇ?’’ ಎಂಬ ವಿಷಯದ ಕುರಿತು ಸುದೀರ್ಘ ಚರ್ಚೆ ಮತ್ತು ವಿಮರ್ಶೆ ಮಾಡಲಾಯಿತು. 1979ರ ಡಿಸೆಂಬರ್ 2ರಿಂದ 4ರ ವರೆಗೆ ಮಹಾರಾಷ್ಟ್ರದ ನಾಗಪುರದ ಪ್ರಥಮ ರಾಷ್ಟ್ರೀಯ ಬಾಂಸೆಪ್ ಅಧಿವೇಶನವನ್ನು ನಡೆಸಲಾಯಿತು. ಇದರಲ್ಲಿ ಭಾರತದ ಪ್ರಜಾಪ್ರಭುತ್ವವೆಂದರೆ ಶ್ರೀಮಂತರ ನೋಟುಗಳಿಂದ ಬಡವರ ವೋಟುಗಳನ್ನು ಲೂಟಿ ಮಾಡುವುದಲ್ಲದೆ ಬೇರೇನಲ್ಲ’’ ಎಂದು ಹೇಳಿ ಸಾಮಾಜಿಕ ಪರಿವರ್ತನೆಗಾಗಿ ಚಳವಳಿಯನ್ನು ಕಟ್ಟಿದರು.
DS4 ಸಂಘಟನೆ:
ಕಾನ್ಷಿರಾಂ ಅವರು ನೌಕರರನ್ನು ಸಂಘಟಿಸಿದ ನಂತರ ಸಾಮಾನ್ಯ ಜನರನ್ನು, ಯುವಕರನ್ನು ಸಂಘಟಿಸಿ ರಾಜಕೀಯ ಸಾಮಾಜಿಕ ಶಕ್ತಿಯನ್ನು ತುಂಬಲು 06-12-1981ರಂದು ದಿಲ್ಲಿಯಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಎಂಬ ಸಂಘಟನೆಯನ್ನು ಹುಟ್ಟು ಹಾಕಿದರು. ಈ ಸಂಘಟನೆಯು ವಿದ್ಯಾರ್ಥಿ ಗಳಲ್ಲಿ, ಯುವಕರಲ್ಲಿ, ಮಹಿಳೆಯರಲ್ಲಿ, ರಾಜಕೀಯ ಜಾಗೃತಿಯುಂಟುಮಾಡುವ ಮೂಲಕ ರಾಜಕೀಯ ಪ್ರವೇಶಕ್ಕೆ ವೇದಿಕೆ ನಿರ್ಮಿಸಿಕೊಂಡರು.
ಬಿಎಸ್ಪಿ ಸ್ಥಾಪನೆ:
ದಿನಾಂಕ 14-04-1984ರಂದು ಬಾಬಾಸಾಹೇಬ ಅಂಬೇಡ್ಕರ್ ಜನ್ಮದಿನದಂದು ದಿಲ್ಲಿಯ ಬೋಟ್‌ಕ್ಲಬ್ ಮೈದಾನದಲ್ಲಿ ತಮ್ಮದೇ ಅಧ್ಯಕ್ಷತೆಯಲ್ಲಿ ನಡೆದ ಬೃಹತ್ ಸಮ್ಮೇಳನದಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಇದಕ್ಕೆ ಆನೆ ಗುರುತು ನೀಲಿಬಾವುಟ ತೆಗೆದುಕೊಂಡರು. ಡಾ. ಬಿ.ಆರ್. ಅಂಬೇಡ್ಕರ್‌ರವರು ಸ್ವತಂತ್ರಕಾರ್ಮಿಕ ಪಕ್ಷ ಹಾಗೂ ಆಲ್ ಇಂಡಿಯಾ ಷೆಡ್ಯೂಲ್‌ಕ್ಯಾಸ್ಟ್ ಪೆಡರೇಷನ್ ಪಕ್ಷಕ್ಕೆ ಆನೆ ಗುರುತು ನೀಲಿ ಬಾವುಟವನ್ನು ತೆಗೆದುಕೊಂಡಿದ್ದರು. ಅಲ್ಲಿ ಕಳೆದು ಹೋಗಿದ್ದ ಆನೆ, ನೀಲಿಬಾವುಟ ಕಾನ್ಷಿರಾಂ ಮೂಲಕ ಬಿಎಸ್ಪಿಗೆ ಸಿಕ್ಕಿತು. ಕಾನ್ಷಿರಾಂ, ಬಹುಜನ ಸಮುದಾಯಗಳು ಒಂದು ರಾಜಕೀಯ ಪಕ್ಷ ಸ್ಥಾಪನೆ ಮಾಡಿ ಈ ದೇಶ ಆಳ್ವಿಕೆ ನಡೆಸಲು ನಾವು ಅರ್ಹರು ಎಂದು ತೋರಿಸಿದರು.
ಕಾನ್ಷಿರಾಂರವರ ಅಂತಿಮ ದಿನಗಳು:
ಕಾನ್ಷಿರಾಂ ಅವರು ಆಂಧ್ರಪ್ರದೇಶದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಪಾರ್ಶ್ವವಾಯು ತಗಲಿತು. ಇವರು ಅಂತಿಮವಾಗಿ ಅಕ್ಟೋಬರ್ 9, 2006 ರಂದು ಪರಿನಿಬ್ಬಾಣ ಹೊಂದಿದರು. ಒಟ್ಟಾರೆಯಾಗಿ ಕಾನ್ಷಿರಾಂ ಅವರ ತ್ಯಾಗ, ಶ್ರಮ, ಧೈರ್ಯ ಮತ್ತು ಸ್ವತಂತ್ರ ರಾಜಕೀಯ ಅಧಿಕಾರಕ್ಕಾಗಿ ಸೇವೆ ಮಾಡಿ, ಬೇಡುವ ಸಮಾಜವನ್ನು ನೀಡುವ ಸಮಾಜ ಮಾಡಿದ್ದು ಮತ್ತು ಇಡೀ ವಿಶ್ವಕ್ಕೆ ಅಂಬೇಡ್ಕರ್‌ವಾದವನ್ನು ಪರಿಚಯಿಸಿದ ಕೀರ್ತಿ ಮಾನ್ಯವರ್ ಕಾನ್ಷಿರಾಂರಿಗೆ ಸಲ್ಲಬೇಕು.
ಕಾನ್ಷಿರಾಂ ನಿರಾಕರಿಸಿದ ಅವಕಾಶಗಳು:
♦ 1985ರಲ್ಲಿ ಕಾಂಗ್ರೆಸ್ ಪಕ್ಷ ಬಹಳ ಕಡೆ ಸೋತಿತು. ಆಗ ಬಿಜನೂರು ಉಪಚುನಾವಣೆಯಲ್ಲಿ ಬಿಎಸ್ಪಿ ಅದ್ಬುತ ಸಾಧನೆ ಮಾಡಿತು. ಮಾಯಾವತಿ 65,000 ಮತಗಳನ್ನು ಪಡೆದುಕೊಂಡರು. ವಿಶ್ವಾದ್ಯಂತ ನೂರಾರು ಪತ್ರಿಕೆಗಳು ಬಿಎಸ್ಪಿಗೆ ಪ್ರಚಾರ ನೀಡಿದವು, ಕಾನ್ಷಿರಾಂರವರ ಸಂದರ್ಶನ ನಡೆಸಿದ ಇಂಡಿಯಾ ಟುಡೇ ಪತ್ರಿಕೆ, ‘‘Bsp Rising with the shine of a shooting star” ಅಂದರೆ ‘‘ಬಿಎಸ್ಪಿ ಝುಗ ಝುಗಿಸುತ್ತ ಚಿಮ್ಮುತ್ತಿರುವ ಹೊಸ ತಾರೆಯಂತೆ ಮೇಲೇರುತ್ತಿದೆ’’ ಎಂದು ಬರೆಯಿತು. ಆಗ ರಾಜೀವ್‌ಗಾಂಧೀಜಿ ಅವರು ಕಾನ್ಷಿರಾಂರನ್ನು ಸಂಪರ್ಕಿಸಿ, ‘‘ನಿಮ್ಮ ಬಿಎಸ್ಪಿ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿ, ನೀವೇ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ’’ ಎಂದು ಹೇಳುತ್ತಾರೆ ಇದನ್ನು ಕಾನ್ಷಿರಾಂ ನಿರಾಕರಿಸುತ್ತಾರೆ.
♦ 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಸಂಪರ್ಕಿಸಿ, ನಿಮ್ಮಲ್ಲಿ ಐವರು ಎಂಪಿಗಳು ಇದ್ದಾರೆ. ನೀವು ನಮ್ಮನ್ನು ಬೆಂಬಲಿಸಿದರೆ ನಿಮ್ಮನ್ನು ಭಾರತದ ರಾಷ್ಟ್ರಪತಿ ಮಾಡುತ್ತೇವೆ. ಮಾಯಾವತಿ ಅವರನ್ನು ದೇಶದ ಗೃಹಮಂತ್ರಿಯನ್ನಾಗಿ ಮಾಡುತ್ತೇವೆ, ಎನ್ನುತ್ತ್ತಾರೆ. ಇದನ್ನು ಕಾನ್ಷಿರಾಂ ನಿರಾಕರಿಸಿದ್ದರಿಂದ ಬಿಜೆಪಿ ಸರಕಾರ ಬಿದ್ದು ಹೋಗುತ್ತದೆ.
♦ 1995ರಲ್ಲಿ ಪ್ರಥಮ ಬಾರಿಗೆ ಬಿಎಸ್ಪಿಯಿಂದ ಮಾಯಾವತಿ ಯು.ಪಿ.ಯಲ್ಲಿ ಮುಖ್ಯಮಂತ್ರಿ ಆದಾಗ ಕಾನ್ಷಿರಾಂ ಆಗಬಹುದಿತ್ತು ಆದರೆ ಅದನ್ನು ಮಾಯಾವತಿಗೆ ಬಿಟ್ಟುಕೊಟ್ಟರು.