ಸುಗ್ಗಿ
ತರಕಾರಿ ಬೆಳೆಯಿಂದ ರೆತನ ಮೊಗದಲ್ಲಿ ಖುಷಿಯ ಕಳೆ

‘‘ಮೈ ಬೆವರು ಉಕ್ಕಿದರ ಮನೆ ಮನ ನಕ್ಕೀತ, ತೆನೆ ತೆನೆ ಕೂಡಿ ಹಾಡ್ಯಾವ......’’ ಎಂಬಂತೆ ಕಷ್ಟಪಟ್ಟು ವ್ಯವಸಾಯ ಮಾಡಿದರೆ ಲಾಭ ಗ್ಯಾರಂಟಿ. ಇದನ್ನರಿತ ಬೀದರ್ ಜಿಲ್ಲೆಯ ಚಿಟಗುಪ್ಪ ಸಮೀಪ ಉಡಬಾಳ ಗ್ರಾಮದ 63 ವರ್ಷ ವಯಸ್ಸಿನ ರೈತ ನಾರಾಯಣರಾವ್ ಭಂಗಿ ತರಹೇವಾರಿ ತರಕಾರಿಗಳನ್ನು ಬೆಳೆದು ಪ್ರತಿ ವರ್ಷ ನಿರಂತರವಾಗಿ ಸುಮಾರು 5.50 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಅವಿದ್ಯಾವಂತರಾಗಿರುವ ನಾರಾಯಣರಾವ್ 25 ವರ್ಷದಿಂದ ಸಮಾಜ ಸೇವೆ ಮಾಡುತ್ತಿದ್ದರು. ಕಳೆದ 5 ವರ್ಷದ ಹಿಂದೆ ಒಂದು ಎಕರೆಯಲ್ಲಿ ತರಕಾರಿ ಬೆಳೆಯಲು ಪ್ರಾರಂಭಿಸಿದರು. ಮೊದಲನೇ ವರ್ಷ ಎರಡು ಬೆಳೆಯಿಂದ 8-10 ಟನ್ ಟೊಮ್ಯಾಟೊ ಉತ್ಪಾದಿಸಿ 1.20 ಲಕ್ಷ ರೂ. ಆದಾಯ ಪಡೆದಿದ್ದಾರೆ. ಇದರ ಲಾಭದಿಂದಲೇ ಇನ್ನೂ ಆರು ಎಕರೆ ಹೊಲ ಖರೀದಿಸಿ ತರಕಾರಿ ಬೆಳೆಯನ್ನು ಈಗ 5 ಎಕರೆವರೆಗೆ ವಿಸ್ತರಿಸಿದ್ದಾರೆ. ತರಕಾರಿ ಬೆಳೆಯಲು ಯೋಗ್ಯವಾದಂತಹ ಕಪ್ಪು ಭೂಮಿಯಿದೆ. ತೆರೆದ ಬಾವಿಯಿಂದ ನಾಲ್ಕು ದಿನಕ್ಕೊಮ್ಮೆ ಬೆಳೆಗಳಿಗೆ ಹನಿ ನೀರಾವರಿಯಿಂದ ನೀರುಣಿಸುತ್ತಿದ್ದಾರೆೆ. ಬೆಳೆಗಳಿಗೆ ತಿಪ್ಪೆಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಬಳಸುತ್ತಿದ್ದು, ತರಕಾರಿಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗರುಜಿನುಗಳ ಹತೋಟಿಗಾಗಿ ಸಕಾಲಕ್ಕೆ ಔಷಧಿ ಸಿಂಪಡಿಸುವರು.
ಇದಕ್ಕೂ ಮೊದಲು ಕಬ್ಬು, ಜೋಳ, ಕಡಲೆ ಮುಂತಾದವುಗಳನ್ನು ಮಾತ್ರ ಬೆಳೆಯುತ್ತಿದ್ದರು. ಖರ್ಚು ಲಾಭ ಅಷ್ಟಕ್ಕಷ್ಟೇ ಆಗುತ್ತಿತ್ತು. ಇದರಿಂದ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ಕಷ್ಟಸಾಧ್ಯ. ಹೆಚ್ಚಿನ ಹಣ ಗಳಿಸುವ ದೃಢಸಂಕಲ್ಪ ಮಾಡಿ ತರಕಾರಿ ಬೆಳೆದ ರೈತರ ಹೊಲಗಳಿಗೆ ಭೇಟಿಕೊಟ್ಟು ಮಾಹಿತಿ ಪಡೆದರು. ತೋಟಗಾರಿಕೆ ಅಧಿಕಾರಿಗಳ ಮತ್ತು ಪ್ರಗತಿಪರ ರೈತರ ಪ್ರೇರಣೆಯನ್ನೂ ಪಡೆದು ತರಕಾರಿಯನ್ನೇ ಬೆಳೆಸಲು ನಿರ್ಧರಿಸಿದರು. ಈಗ ಒಂದು ಎಕರೆಯಲ್ಲಿ ಹೂಕೋಸು ಮತ್ತು ಎಲೆಕೋಸು, ಹೀರೆಕಾಯಿ ಮತ್ತು ತುಪ್ಪದ ಹೀರೆಕಾಯಿ, ಹಾಗಲಕಾಯಿ, ಒಂದೂವರೆ ಎಕರೆಯಲ್ಲಿ ಟೊಮ್ಯಾಟೊ ಮತ್ತು ಅರ್ಧ ಎಕರೆಯಲ್ಲಿ ಬದನೆಕಾಯಿ ಬೆಳೆಯುತ್ತಿದ್ದಾರೆ. ಉಳಿದೆರಡು ಎಕರೆಯಲ್ಲಿ ಕಲ್ಲಂಗಡಿ, ಕಬ್ಬು, ಸೋಯಾ ಮತ್ತು ತೊಗರಿ ಬೆಳೆದಿದ್ದಾರೆ. ಕಳೆದ 5 ವರ್ಷದಿಂದ ವಿವಿಧ ತರಕಾರಿ ಬೆಳೆಗಳಿಂದ ದಿನಕ್ಕೆ 1,500 ರಿಂದ 2,000 ರೂಪಾಯಿಯಂತೆ ವರ್ಷಕ್ಕೆ ಸುಮಾರು 5.50 ಲಕ್ಷ ರೂ.ಗಳವರೆಗೆ ಆದಾಯ ಪಡೆಯುತ್ತಿದ್ದಾರೆ. ಖರ್ಚು ವರ್ಷಕ್ಕೆ 2-3 ಲಕ್ಷ ರೂಪಾಯಿ ಬರುತ್ತದೆ. ಕಳೆದ ವರ್ಷ ಒಂದು ಎಕರೆಯಲ್ಲಿ ಕಲ್ಲಂಗಡಿಯೊಂದರಿಂದಲೇ 1.65 ಲಕ್ಷ ರೂ. ಗಳಿಸಿದ್ದಾರೆ. ತಾವು ಬೆಳೆದ ತರಕಾರಿಯನ್ನು ಚಿಟಗುಪ್ಪಾ, ಮನ್ನಾಯೆಖ್ಖೆಳ್ಳಿ, ಕಲಬುರಗಿ ಮತ್ತು ಹೈದರಾಬಾದ್ ತರಕಾರಿ ಮಾರುಕಟ್ಟೆಗಳಲ್ಲಿ ಹರಾಜು ಮೂಲಕ ಮಾರಾಟ ಮಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆಯಿಂದ 2015-16ರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ 7 ಎಕರೆ ಭೂಮಿಯಲ್ಲಿ ಹನಿ ನೀರಾವರಿ ಮತ್ತು ಮಲ್ಚಿಂಗ್ ಪದ್ಧತಿ ಅಳವಡಿಸಿಕೊಳ್ಳಲು 90,000 ರೂ. ಸಹಾಯಧನ, 2016-17ರಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಒಂದು ಹೆಕ್ಟೇರ್ ಪಪ್ಪಾಯ ಬೆಳೆಗೆ 86,000 ರೂ. ಮತ್ತು ಯಾಂತ್ರೀಕರಣ ಯೋಜನೆಯಡಿ ಸ್ಪ್ರೇಯರ್ ಯಂತ್ರಕ್ಕಾಗಿ 36,000 ರೂ. ಸಹಾಯಧನ ಪಡೆದಿದ್ದಾರೆ. ಮಲ್ಚಿಂಗ್ ಮತ್ತು ಹನಿ ನೀರಾವರಿಯಿಂದ ತರಕಾರಿ ಬೆಳೆಗಳ ಖರ್ಚು ಕಡಿಮೆ. ಬಹುಬೆಳೆ ಪದ್ಧತಿಯಿಂದ ಉತ್ಪಾದನೆ ಹೆಚ್ಚು. ಆಕಳು, ಎಮ್ಮೆಗಳಿಂದ ಹೊಲಕ್ಕೆ ಗೊಬ್ಬರ, ಮನೆಗೆ ಹಾಲು ಸಿಗುತ್ತಿದೆ. ಇಬ್ಬರು ಹೆಣ್ಣುಮಕ್ಕಳು ಓರ್ವ ಗಂಡು ಮಗ ಇದ್ದು, ಮಗನಿಗೆ ನೌಕರಿಯೂ ಸಿಕ್ಕಿದೆ. ಬೆಳೆಗಳ ಖರ್ಚಿಗೂ, ಕೆಲಸಕ್ಕೂ ಮಗ ಸಹಾಯ ಮಾಡುತ್ತಿರುವುದರಿಂದ ಈಗ ಎಲ್ಲೆಡೆ ಖುಷಿಯ ಕಳೆ ಮೈದುಂಬಿದೆ ಎಂದು ನಾರಾಯಣರಾವ್ ಭಂಗಿ ಹೇಳುತ್ತಾರೆ. ಇವರ ಸಂಪರ್ಕಕ್ಕೆ ಮೊಬೈಲ್ ಸಂ. 9448584932.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ