ಕೊರೋನಾ ಭೀತಿ: ಮೈಸೂರು ಅರಮನೆ, ಮೃಗಾಲಯ ಒಂದು ವಾರ ಬಂದ್
ಪ್ರವಾಸಿಗರಿಲ್ಲದೇ ಬಣಗುಡುತ್ತಿರುವ ಸಾಂಸ್ಕೃತಿಕ ನಗರಿ
ಮೈಸೂರು,ಮಾ.15; ಕೊರೋನಾ ವೈರಸ್ ಭೀತಿಯಿಂದ ಇಂದಿನಿಂದ ಒಂದು ವಾರಗಳ ಕಾಲ ಮೈಸೂರು ಅರಮನೆ ಮತ್ತು ಚಾಮರಾಜೇಂದ್ರ ಮೃಗಾಲಯವನ್ನು ಬಂದ್ ಮಾಡಲಾಗಿದೆ.
ಮೈಸೂರಿಗೆ ಪ್ರವಾಸಿಗರು ಆಗಮಿಸಿ ಅರಮನೆ ಮತ್ತು ಚಾಮರಾಜೇಂದ್ರ ಮೃಗಾಲಯವನ್ನು ವೀಕ್ಷಿಸುತ್ತಿದ್ದರು. ಹೊರಗಡೆಯಿಂದ ಬರುವ ಪ್ರವಾಸಿಗರಿಂದ ಕೊರೋನಾ ಸೋಂಕು ಕಾಣಿಸಿಕೊಳ್ಳುವ ಭೀತಿಯಿಂದ ಮುನ್ನಚ್ಚರಿಕೆಯಾಗಿ ಅರಮನೆಯನ್ನು ಮುಚ್ಚಲಾಗಿದೆ.
ಮೃಗಾಲಯ ವೀಕ್ಷಣೆಗೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಅಲ್ಲಿಯೂ ಸಹ ಒಂದು ವಾರಗಳ ಕಾಲ ಮುಚ್ಚಲಾಗಿದೆ. ಇದರಿಂದ ಅರಮನೆ ಮತ್ತು ಮೃಗಾಲಯಗಳು ಬಣಗುಡುತ್ತಿವೆ.
ಅರಮನೆ ವೀಕ್ಷಿಸಲು ಆಗಮಿಸಿದ ಪ್ರವಾಸಿಗರಿಗೆ ನಿರಾಸಯುಂಟಾಗಿದ್ದು, ಅರಮನೆ ಮುಂಭಾಗದ ಗೇಟ್‍ನಲ್ಲಿ ಹಾಕಲಾಗಿರುವ ನೋಟಿಸ್ ಬೋರ್ಡ್ ನೋಡಿ ವಾಪಸ್ ಹೋಗುತ್ತಿದ್ದಾರೆ. ಇನ್ನು ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅರಮನೆ ಹೊರಗಡೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ. ಅರಮನೆಯ ನಾಲ್ಕು ಗೇಟ್‍ಗಳಲ್ಲೂ ಅರಮನೆ ಬಂದ್ ಮಾಡಲಾಗಿರುವ ನೋಟಿಸ್ ಬೋರ್ಡ್ ಅಂಟಿಸಲಾಗಿದೆ.
ಅರಮನೆ ಮತ್ತು ಮೃಗಾಲಯದ ಮುಂಭಾಗ ಸಣ್ಣ ಸಣ್ಣ ಅಂಗಡಿಗಳನ್ನುಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೆ ಬಾರೀ ನಷ್ಟವುಂಟಾಗಿದ್ದು, ದಿನ ದೂಡುವುದೆ ಕಷ್ಟವಾದಂತಾಗಿದೆ. ಪ್ರವಾಸಿಗರಿಲ್ಲದೆ ಅಟೋ, ಟ್ಯಾಕ್ಸಿ ಚಾಲಕರು ಕಂಗಾಲಾಗಿದ್ದಾರೆ.
ರೈಲು ನಿಲ್ದಾಣದಲ್ಲಿ ಬರುವ ಪ್ರವಾಸಿಗರನ್ನು ಸುರಕ್ಷತೆಯ ದೃಷ್ಟಿಯಿಂದ ತಪಾಸಣೆ ಮಾಡಲಾಗುತ್ತಿದೆ. ನಗರದ ಸಿಟಿ ಬಸ್ ನಿಲ್ದಾಣ, ಸಬರ್ಬ್ ಬಸ್ ನಿಲ್ದಾಣ, ಸೇರಿದಂತೆ ಹಲವು ಭಾಗಗಳಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿದೆ.