ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಮೃತ್ಯುಂಜಯ ನದಿ
* ಆತಂಕ ಮೂಡಿಸಿದೆ ಮಳೆಗಾಲದಲ್ಲಿ ನದಿಯ ಹರಿವು
ನೇತ್ರಾವತಿ ನದಿಯ ಉಪನದಿಯಾಗಿರುವ ಮೃತ್ಯುಂಜಯ ನದಿ ಕಳೆದ ಮಳೆಗಾಲದ ಬೆಟ್ಟ ಕುಸಿತದ ಪರಿಣಾಮವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ನದಿ ನೀರು ಹರಿಯುವ ಜಾಗದಲ್ಲಿ ನೀರು ಕಾಣಿಸದೇ ಕಲ್ಲು, ಮಣ್ಣು, ಮರಗಳ ರಾಶಿಯೇ ಕಾಣಿಸುತ್ತಿವೆ. ಈ ಸಲದ ಮಳೆಗಾಲದಲ್ಲಿ ಮೃತ್ಯುಂಜಯ ನದಿಯ ಹರಿವು ಹೇಗಿರಬಹುದೆಂದು ಊಹಿಸುವುದೂ ಕಷ್ಟ, ಬಹುಶಃ ತನ್ನ ಹರಿವಿನ ದಿಕ್ಕು, ಪಾತ್ರವನ್ನೇ ಬದಲಾಯಿಸುವ ಸಾಧ್ಯತೆಯೂ ಇದೆ.
ಮೃತ್ಯುಂಜಯ ನದಿ ಛಿದ್ರವಾಗುವುದರ ಜೊತೆಗೆ ಈ ನದಿಯಲ್ಲಿ ಜಲ ವಿದ್ಯುತ್ ಜೋಜನೆ ಮಾಡಲೆಂದು ನಿರ್ಮಿಸಿದ್ದ ಅಣೆಕಟ್ಟು ( ತ್ರಿನೇತ್ರ ) ಕೂಡಾ ಒಡೆದು ಹೋಗಿದೆ. ಅಣೆಕಟ್ಟಿನ ತಡೆಗೋಡೆ ತುಂಡು, ತುಂಡು ಆಗಿ ಎಲ್ಲೋ ಚದುರಿ ಹೋಗಿದ್ದು ನೀರು ಇರುವಲ್ಲೆಲ್ಲಾ ಕಲ್ಲು, ಮಣ್ಣು, ಮರಗಳ ರಾಶಿ ತುಂಬಿವೆ. ಇದೇರೀತಿ ಎತ್ತಿನಹೊಳೆ ಯೋಜನೆಯ ಆಸುಪಾಸಿನಲ್ಲಿ ಜಲ ಸ್ಫೋಟ, ಭೂಕುಸಿತ ಆದರೆ ಮುಂದೊಂದು ದಿನ (ಅವರ ಕಾಮಗಾರಿ ಮುಗಿದು ಯೋಜನೆ ಚಾಲನೆ ಆಗಿ ಏಳು ಅಣೆಕಟ್ಟುಗಳಲ್ಲಿ ನೀರು ತುಂಬಿಸಿದ ಸಂದರ್ಭ) ಭೀಕರ ದುರಂತ ಹೇಗಾಗಬಹುದು? ಈ ಬಗ್ಗೆ ಆ ಯೋಜನೆಯ ಇಂಜಿನಿಯರ್, ನೀರಾವರಿ ಎಂದು ಹುಯಿಲೆಬ್ಬಿಸುವ ರಾಜಕಾರಣಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಜನರು ಯಾವತ್ತಾದರೂ ಯೋಚಿಸಿದ್ದೀರಾ !?
ಈ ಅಣೆಕಟ್ಟು ಒಡೆದ ಜಾಗದಲ್ಲಿ ಹೆಬ್ಬಾವು ಒಂದು ತೆವಳಿಕೊಂಡು ಹೋದದ್ದು, ಚಿರತೆ ಹೆಜ್ಜೆ ನಾವು ರವಿವಾರ(ಮಾ.15) ಆನೆಗುಂಡಿ ಅರಣ್ಯಕ್ಕೆ ಹೋದಾಗ ಗಮನಿಸಿದ್ದೇವೆ. ಅಣೆಕಟ್ಟು ನಿರ್ಮಾಣ, ಬೆಟ್ಟ ಕುಸಿತ, ನೀರು ಇರುವಲ್ಲಿ ನೀರಿಲ್ಲದೇ, ಕಾಡು ಇರುವಲ್ಲಿ ಕಾಡು ಇಲ್ಲದೇ ಈ ರೀತಿಯ ದುರಂತಗಳು ಆದಾಗ ಕಾಡಿನ ವನ್ಯಜೀವಿಗಳ ಗೋಳು ಕೇಳುವವರಿಲ್ಲ.
ಅಡವಿಯ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಯಿಂದ ಹಿಡಿದು ಪ್ರತಿಯೊಂದು ಜೀವಿ ಕೂಡಾ ಒಂದಕ್ಕೊಂದು ಅವಲಂಬಿಸಿ ಬದುಕುತ್ತಾ ಕಾಡು, ನದಿ ಮೂಲ, ಎಲ್ಲವನ್ನೂ ಸಂರಕ್ಷಣೆ ಮಾಡುವಂತಹ ಪಾತ್ರಧಾರಿಗಳು. ಜಗತ್ತಿನ ಎಲ್ಲೋ ಮೂಲೆಯಲ್ಲಿ ಕೊರೋನ ಉಂಟೆಂದು ಹೆದರಿ ಮಾಸ್ಕ್ ಹಾಕಿ ಮುಖ ಮುಚ್ಚುವ ಸ್ವಾರ್ಥ ಮನುಜನಿಗೆ ನದಿ, ಕಾಡು, ವನ್ಯಜೀವಿಗಳ ರೋದನ ಹೇಗೆ ಕೇಳಿಸಲು ಸಾಧ್ಯ !?