varthabharthi


ಭೀಮ ಚಿಂತನೆ

ಏಳಿಗೆಯ ಮಾರ್ಗದಲ್ಲಿ ಅಡ್ಡ ಬರುವವರಿಗೆ ಧಿಕ್ಕಾರ

ವಾರ್ತಾ ಭಾರತಿ : 19 Mar, 2020

ನಾಗಪುರದಲ್ಲಿ 1920ರ ಎಪ್ರಿಲ್-ಮೇ ತಿಂಗಳಲ್ಲಿ ಭಾರತದಾದ್ಯಂತ ಮಾಂಗ್, ಮಹರ್, ಚಮ್ಮಾರರು, ಪಾರಿಯಾ ಹಾಗೂ ಪಂಚಮ ಜಾತಿಯವರು ತಮ್ಮ ಮೇಲೆ ಹೇರಲಾಗಿರುವ ಬಹಿಷ್ಕಾರವನ್ನು ತೆಗೆದೊಗೆಯಲು ಹಾಗೂ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪ್ರಗತಿ ಸಾಧಿಸಲು ಒಂದು ಪರಿಷತ್ತನ್ನು ಆಯೋಜಿಸಲು ನಿರ್ಧರಿಸುವುದನ್ನು 27ನೇ ಮಾರ್ಚ್ 1920ರ ‘ಮಹಾನಾಯಕ’ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಈ ಪರಿಷತ್‌ನ ಅಧ್ಯಕ್ಷ ಸ್ಥಾನವನ್ನು ಶ್ರೀಮಾನ್ ಮಹಾರಾಜ ಶಾಹೂ ಛತ್ರಪತಿ ಸರಕಾರ ಕರವೀರ (ಕೊಲ್ಹಾಪುರದ ರಾಜಾ ಸಾಹೇಬರು)ಇವರು ಸ್ವೀಕರಿಸುವುದಾಗಿ ಒಪ್ಪಿಕೊಂಡಿದ್ದರು.

ನಿರ್ಧರಿಸಿದಂತೆ ಭಾರತೀಯ ದಲಿತ ಪರಿಷತ್‌ನ ಅಧಿವೇಶನ ನಾಗಪುರದಲ್ಲಿ 30, 31 ಮೇ ಹಾಗೂ 1ನೇ ಜೂನ್ 1920ರಂದು ಕರೆಯಲಾಯಿತು. ದಲಿತರ ರಾಜಕೀಯ ಹಕ್ಕುಗಳ ಬೇಡಿಕೆಯ ಹಿನ್ನೆಲೆಯಲ್ಲಿ ಕರೆಯಲಾಗುತ್ತಿರುವ ಬಹಿಷ್ಕೃತ ಸಮಾಜದ ಇದು ಮೊದಲನೆಯ ಪರಿಷತ್ತಾಗಿರುವುದರಿಂದ ಇದಕ್ಕೊಂದು ಐತಿಹಾಸಿಕ ಮಹತ್ವವಿತ್ತು. ಈ ಸಭೆಗೆ ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜರು ಅಧ್ಯಕ್ಷರಾಗಿಯೂ, ಗೋಂದಿಯಾದ ಬಾಬು ಕಾಲೀಚರಣ್ ನಂದಾಗವಳಿಯವರು ಪರಿಷತ್‌ನ ಸ್ವಾಗತಾಧ್ಯಕ್ಷರಾಗಿಯೂ, ಗಣೇಶ್ ಗವಯಿ ಹಾಗೂ ಕಿಸನ್ ಫಾಗೂಜಿ ಬನ್‌ಸೋಡೆ ಸಚಿವರಾಗಿಯೂ ನೇಮಕಗೊಂಡಿದ್ದರು. ಈ ಪರಿಷತ್‌ಗೆ ಮದ್ರಾಸ್, ಮುಂಬೈ, ಖಡಕ್‌ಪುರ್, ಮಧ್ಯಪ್ರದೇಶ್ ಹಾಗೂ ವರಾಡ್‌ನಿಂದ ಸುಮಾರು 500 ಪ್ರತಿನಿಧಿಗಳು ಉಪಸ್ಥಿತರಿದ್ದರು. ಡಾ. ಅಂಬೇಡ್ಕರ್, ಸಿ.ನಾ. ಶಿವತರ್ಕರ್, ಶಿ.ಬಾ. ಕಾಂಬಳೆ, ಕದಮ್, ಗೊ.ಗೊ.ಕಾಳೆ, ಪಿದಾಳೆ, ಭೋಸಲೆ ಇವರೆಲ್ಲ ಮುಂಬೈಯ ಪ್ರತಿನಿಧಿಯಾಗಿ ಬಂದಿದ್ದರು. ಹಾಗೆಯೇ ಕೊಲ್ಹಾಪುರದಿಂದ ಬ್ರಾಹ್ಮಣೇತರ ಚಳವಳಿಯ ಪ್ರಮುಖ ಕಾರ್ಯಕರ್ತರಾಗಿರುವ ಸರ್ವಶ್ರೀ ರಣದಿವೆ, ಬಾಬುರಾವ್ ಹೈಬತರಾವ್ ಯಾದವ್, ಕೊಠಾರಿ, ಶ್ರಿಪತರಾವ್ ಶಿಂಧೆ, ಕಾಂಬಳೆ, ಡಿಪ್ರೆಸ್ಡ್ ಕ್ಲಾಸ್ ಮಿಶನ್‌ನ ಸುಪರಿಟೆಂಡೆಂಟ್ ಶ್ರೀ.ಬರ್ವೆ ಇವರು ಕೂಡ ಉಪಸ್ಥಿತರಿದ್ದರು. ಅಷ್ಟೇ ಅಲ್ಲದೆ ನಾಗಪುರದ ಸುಶಿಕ್ಷಿತ ಸುಧಾರಕರಲ್ಲೊಬ್ಬರಾದ ಸರ್ವಶ್ರೀ ಪಂಡಿತ್ ಸರ್ ಗಂಗಾಧರ್ ಚಿಟಣಿಸ್, ಶಂಕರರಾವ್ ಚಿಟಣಿಸ್ ಹಾಗೂ ಹಿಂದೂ ಮಿಶನರಿ ಸೊಸೈಟಿಯ ಅಧಿಕಾರಿ ಡಾ. ಪರಾಂಜಪೆಯವರೂ ಹಾಜರಿದ್ದರು.

ಪರಿಷತ್‌ಗಾಗಿ ಸ್ಟೇಶನ್‌ನಿಂದ ನಾಲ್ಕು ಫರ್ಲಾಂಗ್ ದೂರ ಹಳೆಯ ಅರ್ಸೆನಲ್ ಗ್ರೌಂಡ್ (ಕಸ್ತೂರಚಂದ್ ಪಾರ್ಕ್)ನಲ್ಲಿ ದೊಡ್ಡ ಪೆಂಡಾಲ್ ಹಾಕಲಾಗಿತ್ತು. ಅಂದಿನ ಕಾರ್ಯಕ್ರಮಕ್ಕೆ ಅನೇಕ ದಲಿತ ಮಹಿಳೆಯರೂ ಉಪಸ್ಥಿತರಿದ್ದರು.

1920ರ ನಾಗಪುರ ಅಧಿವೇಶನ ಕರೆದಿದ್ದರ ಉದ್ದೇಶ
1917ರಲ್ಲಿ ಭಾರತದ ಮಂತ್ರಿ ಮಾಂಟೆಗ್ಯೂ ಅವರು ಬಂದಿದ್ದಾಗ ದಲಿತ ಸಮಾಜದ ವತಿಯಿಂದ ದಲಿತರ ರಾಜಕೀಯ ಬೇಡಿಕೆಗಳ ಬಗ್ಗೆ ಮಾತನಾಡಲು ಸರ್ ನಾರಾಯಣರಾವ್ ಚಂದಾವರಕರ್ ಹಾಗೂ ವಿಠ್ಠಲ್ ರಾಮಾಜಿ ಶಿಂಧೆ ಇವರ ನೇತೃತ್ವದಲ್ಲಿ ಒಂದು ಪ್ರತಿನಿಧಿ ಮಂಡಳವು ಅವರನ್ನು ಭೇಟಿ ಮಾಡಿತ್ತು. ಡಿಪ್ರೆಸ್ಡ್ ಕ್ಲಾಸ್ ಮಿಶನ್‌ನ ಅಧ್ಯಕ್ಷರಾದ ನಾರಾಯಣರಾವ್ ಚಂದಾವರಕರ್ ಹಾಗೂ ವಿ.ರಾ. ಶಿಂಧೆ ಅವರ ವರ್ಚಸ್ಸು ದಲಿತ ಸಮಾಜದ ಮೇಲಿದ್ದದ್ದರಿಂದ ಎಲ್ಲ ಸಮಾಜ ಸುಧಾರಕರು ಅವರ ಮಾತಿನಂತೆ ಅವರ ಸಲಹೆಯಡಿ ಕೆಲಸ ಮಾಡುತ್ತಿದ್ದರು. ಶ್ರೀ ಗಣೇಶ್ ಅಕಾಜಿ ಗವಯಿ ಹಾಗೂ ಕಿಸನ್ ಫಾಗೂ ಬನಸೋಡೆ ಇವರು ಕೂಡ ಡಿಪ್ರೆಸ್ಡ್ ಕ್ಲಾಸ್ ಮಿಶನ್‌ನ ಮೂಲಕ ದಲಿತರ ಬೇಡಿಕೆಗಳ ಮೆಮೋರಾಂಡ ಒಂದನ್ನು ಭಾರತದ ಮಂತ್ರಿಗಳಿಗೆ ಕೊಡಲು ತಯಾರಿಸಿದ್ದರು.

 ನಂತರ ಸೌತ್ ಬರೋ ಕಮಿಟಿ ಭಾರತಕ್ಕೆ ಬಂದಾಗ ಹಿಂದೂ ನಾಯಕರು ಅವರೆದುರು ಸ್ವಾತಂತ್ರದ (ಹೋಮ್‌ರೂಲ್) ಬೇಡಿಕೆ ಮುಂದಿಟ್ಟರು. ಡಿಪ್ರೆಸ್ಡ್ ಕ್ಲಾಸ್ ಮಿಶನ್‌ನ ವಿ.ರಾ. ಶಿಂಧೆಯವರು ದಲಿತರ ರಾಜಕೀಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ‘‘ದಲಿತರಿಗೆ ಸ್ವತಂತ್ರ ಪ್ರತಿನಿಧಿತ್ವ ಕೊಡದೆ ಅವರ ಹಿತ ಸಂರಕ್ಷಣೆಯನ್ನು ಉಚ್ಚ ಜಾತಿಯ ಹಿಂದೂ ಪ್ರತಿನಿಧಿಗಳ ಕೈಗೆ ಒಪ್ಪಿಸಬೇಕು’’ ಎಂದೆಲ್ಲ ಪ್ರಚಾರ ಮಾಡಲಾರಂಭಿಸಿದಾಗ ಚಂದಾವರಕರ ಮತ್ತು ಶಿಂಧೆಯವರ ಅನಿಸಿಕೆಯ ವಿರುದ್ಧ ಡಾ. ಅಂಬೇಡ್ಕರ್ ಅವರು ‘‘ತಮ್ಮ ಮನೆಯಲ್ಲಿಯ ಹೊಲಸನ್ನು ಎತ್ತಲಾರದ ಹಿಂದೂಗಳಿಗೆ ಸ್ವಾತಂತ್ರ ಕೇಳುವ ಹಕ್ಕು ಎಲ್ಲಿದೆ?’’ ಅನ್ನುವ ಹೇಳಿಕೆಯನ್ನು 26ನೇ ಜನವರಿ 1919ರ ಟೈಮ್ಸ್ ಪತ್ರಿಕೆಯಲ್ಲಿ A Mahar on Homeruleನ ಲೇಖನದಲ್ಲಿ ಬರೆ ದರು. ಹಾಗಾಗಿ ದಲಿತರ ಕಷ್ಟಗಳನ್ನು ದಲಿತರ ಪ್ರತಿನಿಧಿಗಳಿಂದಲೇ ಸೌತ್ ಬರೋ ಕಮಿಟಿಯೆದುರು ಮಂಡಿಸುವ ಅಗತ್ಯ ಉಂಟಾಯಿತು.

ಡಾ. ಅಂಬೇಡ್ಕರ್ ಅವರು ಪ್ರಯತ್ನಪೂರ್ವಕವಾಗಿ ಸೌತ್ ಬರೋ ಕಮಿಟಿಯೆದುರು ದಲಿತರ ರಾಜಕೀಯ ಬೇಡಿಕೆಗಳ ದೂರುಗಳನ್ನು ಮಂಡಿಸುವ ಅವಕಾಶ ಪಡೆದುಕೊಂಡರು. ಕಮಿಟಿ ಎದುರು ಶಿಂಧೆ ಹಾಗೂ ಡಾ. ಅಂಬೇಡ್ಕರರು ದಲಿತರ ಬೇಡಿಕೆಗಳನ್ನು ಭಿನ್ನ ದೃಷ್ಟಿಕೋನದಿಂದ ಸಾದರಪಡಿಸಿದರು. ಶಿಂಧೆೆಯವರು ಸೌತ್ ಬರೋ ಕಮಿಟಿಯೆದುರು ಕೊಟ್ಟಿರುವ ಸಾಕ್ಷಿಗಳನ್ನು ಕಮಿಟಿ ಒಪ್ಪಿಕೊಂಡರೆ ದಲಿತ ಸಮಾಜ ತನ್ನ ಹಕ್ಕುಗಳನ್ನು ಕಳೆದುಕೊಳ್ಳುತ್ತದೆ. ಏಕೆಂದರೆ ಶಿಂಧೆಯವರು ದಲಿತರ ಮತದಾನಕ್ಕಾಗಿ ಮುಂದಿಟ್ಟಿರುವ ಯೋಗ್ಯತೆ ಬೆರಳೆಣಿಕೆಯಷ್ಟು ದಲಿತರಲ್ಲೂ ಇಲ್ಲ. ಒಂದು ಪಕ್ಷ ಆ ಯೋಗ್ಯತೆಯಿರುವ ಕೆಲವೇ ದಲಿತರು ಶಿಂಧೆಯವರಿಗೆ ಬೆಂಬಲವಾಗಿ ನಿಂತು ಅವರನ್ನು ಆರಿಸಿ ತಂದರೆ ಈಗ ಆರ್ಥಿಕವಾಗಿ ದಲಿತರು ಬ್ರಾಹ್ಮಣರ ಗುಲಾಮರಾಗಿರುವಂತೆ ರಾಜಕೀಯವಾಗಿಯೂ ಅವರಿಗೆ ಬ್ರಾಹ್ಮಣರ ಗುಲಾಮಗಿರಿ ಒಪ್ಪಿಕೊಳ್ಳಬೇಕಾದೀತು. ಬೇರೆ ಭಾಷೆಯಲ್ಲಿ ಹೇಳುವುದಾದರೆ ವರಿಷ್ಠ ಹಿಂದೂ ಜನ ದಲಿತರ ಮೇಲೆ ಗುಲಾಮಗಿರಿಯನ್ನು ಹೇರಬಯಸುತ್ತಿದ್ದಾರೆ ಅನ್ನುವ ಪರಿಸ್ಥಿತಿಯನ್ನು ಗಮನಿಸಿ ಅಂಬೇಡ್ಕರ್ ಅವರು ಡಿಪ್ರೆಸ್ಡ್ ಕ್ಲಾಸ್ ವತಿಯಿಂದ ಶಿಂಧೆಯವರು ಮಂಡಿಸಿರುವ ದೂರುಗಳು ದಲಿತರ ಹಿತದೃಷ್ಟಿಯಿಂದ ಮಂಡಿಸಿದ್ದಲ್ಲ ಎಂದು ಸಾರಿದರು. ದಲಿತರ ರಾಜಕೀಯ ಅಪೇಕ್ಷೆಗಳೇನು ಅನ್ನುವುದನ್ನು ಒಬ್ಬ ದೊಡ್ಡ ಮನುಷ್ಯನ ನೇತೃತ್ವದಡಿ ಎಲ್ಲ ಜನತೆಗೆ ಗೊತ್ತಾಗಲೆಂದು ದಲಿತರ ಒಂದು ಪರಿಷತ್ತು ಛತ್ರಪತಿ ಶಾಹು ಮಹಾರಾಜರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಹಾಗಾಗಿ 1920ರ ಭಾರತೀಯ ದಲಿತರ ಪರಿಷತ್ತನ್ನು ನಾಗಪುರದಲ್ಲಿ ಆಯೋಜಿಸಲಾಯಿತು.

ಡಿಪ್ರೆಸ್ಡ್ ಕ್ಲಾಸ್ ಮಿಶನ್ ವಿರುದ್ಧ ಮಸೂದೆ
ಈ ಪರಿಷತ್‌ನಲ್ಲಿ ಡಿಪ್ರೆಸ್ಡ್ ಕ್ಲಾಸ್ ಮಿಶನ್ ಸಂಸ್ಥೆ ಹಾಗೂ ಅದರ ಮಾಲಕರ ನಿಷೇಧದ ಮಸೂದೆ ತಯಾರಾಗುತ್ತಿದೆ ಅನ್ನುವ ಮಾತು ಅಣ್ಣಾ ಸಾಹೇಬ ಶಿಂಧೆಯವರ ಕಿವಿಗೆ ಮೊದಲೇ ತಲುಪಿತ್ತು. ಹಾಗಾಗಿ ಅವರು ಶ್ರೀ ಗ.ಆ. ಗವಯಿಯವರಲ್ಲಿ ಒಬ್ಬ ಮನುಷ್ಯನನ್ನು ಕಳಿಸಿ ‘‘ನಾನು ನಿಮ್ಮ ವರಾಡ ಪ್ರಾಂತದ 50 ಮಕ್ಕಳನ್ನು ನನ್ನ ಬೋರ್ಡಿಂಗ್‌ನಲ್ಲಿ ಉಳಿಸಿಕೊಳ್ಳುತ್ತೇನೆ. ಆದರೆ ಡಾ. ಅಂಬೇಡ್ಕರ್ ಹಾಗೂ ಶಿವತರಕರ್ ಅವರು ನಮ್ಮ ಸಂಸ್ಥೆಯ ವಿರುದ್ಧ ಹೂಡಲಿರುವ ನಿಷೇಧವನ್ನು ನೀವು ತೆಗೆದು ಹಾಕಬೇಕು’’ ಎಂದು ಹೇಳಿ ಕಳಿಸಿದರು. ಅದರಂತೆ ಗವಯಿ ಹಾಗೂ ಬೆಳಗಾವಿಯ ಪಾಪಣ್ಣ ಸೇರಿ ಆ ನಿಟ್ಟಿನಲ್ಲಿ ಸಂಪೂರ್ಣ ತಯಾರಿ ನಡೆಸಿದ್ದರು. ನಾವು ನಾಗಪುರಕ್ಕೆ ಹೋಗುವಾಗ ಡಿ.ಸಿ. ಮಿಶನ್‌ನ ಮಾಲಕರು ದಲಿತರ ಹಿತದ ವಿರುದ್ಧ ಸರಕಾರಕ್ಕೆ ಕೊಟ್ಟ ಹೇಳಿಕೆ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಎರಡು ವರ್ಷ ಹಿಂದಿನ ಮಾತಾಗಿದ್ದದ್ದರಿಂದ ಎರಡು ರೂಪಾಯಿ ಖರ್ಚು ಮಾಡಿ ಆ ಪತ್ರಿಕೆಯ ಪ್ರತಿಯನ್ನು ಕೊಂಡುಕೊಳ್ಳಬೇಕಾಯಿತು. ಪರಿಷತ್‌ನ ಮೊದಲ ದಿನದ ಕೆಲಸಕಾರ್ಯಗಳು ಮುಗಿದೊಡನೆ ರಾತ್ರಿ ಕರೆಯಲಾಗಿದ್ದ ವಿಷಯ ನಿಯಾಮಕ ಮಂಡಲಿಯ ಸಭೆಯೊಂದರಲ್ಲಿ ಕೆಲವು ಮಸೂದೆಗಳು ಮಂಜೂರಾದ ಮೇಲೆ ಅಧ್ಯಕ್ಷರ ಅನುಮತಿ ಪಡೆದು ಡಾ. ಅಂಬೇಡ್ಕರ್ ಅವರು ಮಾತನಾಡುತ್ತ, ‘‘ದಲಿತರ ಏಳಿಗೆ ಹೇಗೆ ಸಾಧ್ಯ? ಅನ್ನುವುದನ್ನು ಚರ್ಚಿಸಲು ನಾವೆಲ್ಲ ಪ್ರತಿನಿಧಿಗಳು ಇಂದಿಲ್ಲಿ ಸೇರಿದ್ದೇವೆ. ನಮ್ಮ ಏಳಿಗೆಗೆ ಅಡ್ಡ ಬರುವ ಯಾವನೇ ಇರಲಿ, ದಲಿತನೇ ಇರಲಿ ಇಲ್ಲ ಬ್ರಾಹ್ಮಣನೇ ಇರಲಿ ಅಥವಾ ಯಾವುದೇ ಸಂಸ್ಥೆಗೆ ಸಂಬಂಧಪಟ್ಟವನಿರಲಿ ನಮ್ಮ ಹಿತದ ವಿರುದ್ಧ ಯಾವುದಾದರೂ ಕೆಲಸ ಮಾಡುತ್ತಿದ್ದರೆ ಇಲ್ಲವೇ ಹಿಂದೊಮ್ಮೆ ಅಂತಹ ಕೆಲಸ ಮಾಡಿದ್ದರೆ ನಾವದನ್ನು ಖಂಡಿಸಬೇಡವೆ?’’ ಎಂದು ಕೇಳಿದಾಗ ಎಲ್ಲ ಪತ್ರಿನಿಧಿಗಳು ಒಕ್ಕೊರಲಿನಿಂದ ‘‘ಖಂಡಿಸಲೇಬೇಕು’’ ಅಂದರು. ‘‘ನೀವೆಲ್ಲರೂ ಇದನ್ನು ಒಪ್ಪಿದ್ದೀರಿ ತಾನೆ?’’ ಎಂದು ಅಂಬೇಡ್ಕರರು ಮೂರು ಮೂರು ಸಲ ಕೇಳಿದರು.

ಇದಾದ ನಂತರ ಅಂಬೇಡ್ಕರ್ ಟೈಮ್ಸ್ ಪತ್ರಿಕೆಯ ಆ ಪತ್ರಿಯನ್ನು ಶಿವತರಕರ ಅವರಿಂದ ಪಡೆದು ಅದರಲ್ಲಿ ಡಿಪ್ರೆಸ್ಡ್ ಕ್ಲಾಸ್ ಮಿಶನ್ ಸಂಸ್ಥೆ ಸರಕಾರಕ್ಕೆ ಬರೆದುಕೊಟ್ಟ ಹೇಳಿಕೆಯನ್ನು ಓದಿ ತೋರಿಸಿದಾಗ ಗವಯಿ ಹಾಗೂ ಅವರ ಸಹಚರರ ತೆರೆದ ಬಾಯಿಗಳು ಮುಚ್ಚಿಕೊಳ್ಳಲೇ ಇಲ್ಲ. ಉಳಿದ ಕೆಳಗಿನ ಕೆಲವು ಮಸೂದೆಗಳನ್ನು ಪರಿಷತ್‌ನಲ್ಲಿ ಹಾಜರಿದ್ದ ಎಲ್ಲರ ಅನುಮತಿಯಿಂದ ಮಂಜೂರು ಮಾಡಲಾಯಿತು. ಮಸೂದೆ 3: ದಲಿತರ ಸುಧಾರಿತ ಕೌನ್ಸಿಲ್‌ನಲ್ಲಿ ಪ್ರತಿನಿಧಿಗಳನ್ನು ಸರಕಾರ ನೇಮಿಸಿದವರನ್ನೋ ಇಲ್ಲ ಜಾತಿ ಆಧಾರಿತ ಸಂಘದಿಂದಲೋ ಆರಿಸಿಕೊಳ್ಳದೆ ಬಹಿಷ್ಕೃತರೇತರ ಕೌನ್ಸಿಲ್‌ನಲ್ಲಿ ಆರಿಸಿ ಬಂದ ಪ್ರತಿನಿಧಿಗಳನ್ನು ಆರಿಸಿಕೊಳ್ಳಬೇಕು ಎಂದು ದಲಿತರ ಏಳೆಗೆಗಾಗಿಯೇ ಸ್ಥಾಪಿಸಲ್ಪಟ್ಟ ಡಿಪ್ರೆಸ್ಡ್ ಕ್ಲಾಸ್ ಮಿಶನ್‌ನವರು ಹೇಳಿದಾಗಿನಿಂದ ದಲಿತರು ಅಸ್ವಸ್ಥರಾಗಿದ್ದಾರೆ. ಬಹಿಷ್ಕೃತೇತರ ಪ್ರತಿನಿಧಿಗಳನ್ನು ಬಹಿಷ್ಕೃತರನ್ನಾಳುವ ಅಧಿಕಾರ ಕೊಟ್ಟರೆ ತಮ್ಮನ್ನು ಹಾಳು ಗುಂಡಿಗೆ ಬೀಳುವಂತೆ ಮಾಡಿರುವ ಆ ಚತುರ್ವರ್ಣವನ್ನು ಒಪ್ಪಕೊಳ್ಳುವ ದಲಿತರನ್ನೇ ಅವರು ಪ್ರತಿನಿಧಿಗಳನ್ನಾಗಿ ಆರಿಸಿಕೊಳ್ಳುತ್ತಾರೆ ಅನ್ನುವುದರಲ್ಲಿ ಯಾವುದೇ ಬೇರೆ ಮಾತಿಲ್ಲ ಅನ್ನುವುದು ಗೊತ್ತಿರುವ ದಲಿತರ ಮನಸ್ಸು ಘಾಸಿಗೊಂಡಿದೆ. ಡಿಪ್ರೆಸ್ಡ್ ಕ್ಲಾಸ್ (ಭಾರತೀಯ ನಿರಾಶ್ರಿತ ಸಹಾಯಕಾರಿ ಮಂಡಲಿ) ಮಿಶನ್‌ನವರು ಈ ರೀತಿ ತಮ್ಮ ಆಶ್ರಿತರಿಗೇ ದ್ರೋಹ ಬಗೆದಿರುವುದರಿಂದ ಅದು ದಲಿತರ ನಂಬಿಕೆಗೆ ಅರ್ಹವಲ್ಲ ಅನ್ನುವುದು ಪರಿಷತ್‌ನ ನಂಬಿಕೆ. ಈ ಮಸೂದೆಯ ಬಗ್ಗೆ ಪಿ. ಭಟಕರ್, ದ್ರವಿಡ್, ಕದಮ್ ವಕೀಲರ ಭಾಷಣಗಳಾದ ಮೇಲೆ ಗವಯಿಯವರು ಅದಕ್ಕೆ ಪುಷ್ಟಿ ಕೊಡುತ್ತ ‘‘ನಿಮ್ಮಂತಹವರಿಗೆ ನಾಮಿನೇಶನ್‌ನ ಅಗತ್ಯವಿಲ್ಲವೆಂದ ಮೇಲೆ ನಮ್ಮಂತಹವರಿಗಾದರೂ ಯಾಕಿರಬೇಕು? ಸರಕಾರ ನಮ್ಮ ನಮ್ಮ ಪ್ರತಿನಿಧಿಗಳನ್ನೇ ಆರಿಸಲಿ ಎಂದು ಮಿಶನ್ ಬೇಡಿಕೊಂಡಿದ್ದರೂ ಒಳ್ಳೆಯದಿತ್ತು. ಆದರೆ ನಮ್ಮ ಪ್ರತಿನಿಧಿಗಳನ್ನು ಆರಿಸಲಿ ಅನ್ನುವ ಬೇಡಿಕೆ ತೀರಾ ಘಾತುಕವಾಗಿದೆ. ಹಾಗಾಗಿ ಡಿಪ್ರೆಸ್ಡ್ ಮಿಶನ್ ನಮ್ಮ ನಂಬಿಕೆ ಕಳೆದುಕೊಂಡಿದೆ’’ ಅಂದರು.

1920ರ ಭಾರತೀಯ ಬಹಿಷ್ಕೃತರ ಮೊದಲ ಪರಿಷತ್ತು ಆಯೋಜಿಸುವ ಸನ್ಮಾನ ಇಲ್ಲಿಯ ದಲಿತ ಕಾರ್ಯಕರ್ತರಿಗೆ ದೊರಕಿದ್ದು ನಾಗಪುರದ ಜನತೆಯ ಸುದೈವ ಅನ್ನಬಹುದು. ಈ ಪರಿಷತ್ತು ಆಯೋಜಿಸುವ ಅಗತ್ಯವೇನಿತ್ತು ಅನ್ನುವುದಕ್ಕೆ ಮೇಲೆ ಹೇಳಿದ ಪಾರ್ಶ್ವಭೂಮಿಯನ್ನು ಗಮನಿಸಿದರೆ ದಲಿತರು ರಾಜಕೀಯವಾಗಿ ಒಂದು ಹೆಜ್ಜೆ ಮುಂದಿಡುವ ದೃಷ್ಟಿಯಿಂದ ಈ ಪರಿಷತ್‌ಗೆ ಅಪೂರ್ವ ಸ್ಥಾನ ದೊರಕಿತು ಅನ್ನುವುದರಲ್ಲಿ ಅನುಮಾನವಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)