ಕೊರೋನ ಸಂದರ್ಭದಲ್ಲಿ ‘ವೈರಸ್’ ನೆನಪು...
ಕೊರೋನ ವೈರಸ್‌ನಿಂದಾಗಿ ನಮ್ಮ ದೇಶದಲ್ಲಿ ಹೊಸ ಸಿನೆಮಾಗಳು ಬಿಡುಗಡೆಯಾಗುತ್ತಿಲ್ಲ. ಆದರೆ ಬಿಡುಗಡೆಯಾದ ಎಷ್ಟು ಸಿನೆಮಾಗಳನ್ನು ನಿಜಕ್ಕೂ ಜನ ನೋಡಿದ್ದಾರೆ ಎನ್ನುವುದು ಮಾತ್ರ ಈ ಅನಿರೀಕ್ಷಿತವಾದ ಗೃಹಬಂಧನದ ದಿನಗಳು ತೋರಿಸಿಕೊಟ್ಟಿವೆ. ಉದಾಹರಣೆಗೆ ತೆರೆಕಂಡ ಒಂದೇ ವಾರದಲ್ಲಿ ಪ್ರೇಕ್ಷಕರ ಕೊರತೆಯಿಂದಾಗಿ ಥಿಯೇಟರ್‌ನಿಂದ ಎತ್ತಂಗಡಿಯಾದ ಸಿನೆಮಾ ‘ದಿಯಾ.’ ಆದರೆ ಜನ ಮನೆಯಲ್ಲಿ ಕುಳಿತುಕೊಳ್ಳುವಂತಾದ ಮೇಲೆ ಅಮೆಜಾನ್ ಮೂಲಕ ಚಿತ್ರ ನೋಡಿ ಮೆಚ್ಚಿಕೊಳ್ಳತೊಡಗಿದರು. ಇಂದು ಅಮೆಜಾನ್ ಮೂಲಕ ಹೆಚ್ಚಿನ ಭಾರತೀಯರು ಪ್ರಶಂಸಿಸಿದಂತಹ ಚಿತ್ರವಾಗಿ ದಿಯಾ ಮೂಡಿ ಬಂದಿದೆ. ಇದೇ ವೇಳೆ ಕನ್ನಡಿಗರು ಸೇರಿದಂತೆ ಕೇರಳದ ಮಂದಿ ಸಾಂದರ್ಭಿಕವಾಗಿ ನೆನಪಿಸಿಕೊಂಡು ನೋಡುತ್ತಿರುವಂಥ ಚಿತ್ರವಿದೆ. ಅದುವೇ ಮಲಯಾಳಂನ ‘ವೈರಸ್’.
ಸಾಂದರ್ಭಿಕ ಮೌಲ್ಯವುಳ್ಳ ನೈಜ ಕತೆ
‘ವೈರಸ್’ ಎನ್ನುವುದು ಕಳೆದ ಜೂನ್ ತಿಂಗಳಲ್ಲಿ ತೆರೆಕಂಡ ಮಲಯಾಳಂ ಸಿನೆಮಾ. ‘ವೈರಸ್’ ಎನ್ನುವ ಹೆಸರು ಮಾತ್ರವಲ್ಲ ಚಿತ್ರದಲ್ಲಿ ಹೇಳುವ ಕತೆಯೂ ಭಾರತೀಯರ ಇಂದಿನ ಪರಿಸ್ಥಿತಿಗೆ ಕೈಗನ್ನಡಿಯಂತಿದೆ ಎನ್ನುವುದು ವಾಸ್ತವ. ಆ ಕಾರಣದಿಂದಲೇ ಚಿತ್ರಕ್ಕೆ ಮತ್ತೆ ಹೊಸ ವೀಕ್ಷಕರು ಸೃಷ್ಟಿಯಾಗಿದ್ದಾರೆ. ಹಾಗಾಗಿ ಇಲ್ಲಿ ಚಿತ್ರದ ಬಗ್ಗೆ ಓದುಗರೆದುರು ಸಣ್ಣದೊಂದು ಪರಾಮರ್ಶೆ ನಡೆಸಲಾಗಿದೆ.
ಸಿನೆಮಾ ವೈರಸ್ ಹೆಸರಲ್ಲಿ ತೆರೆಕಂಡಾಗ ವಿಮರ್ಶಕರು, ಸಿನೆಮಾ ಲೋಕದ ದಿಗ್ಗಜರು ಹೋಲಿಸಿಕೊಂಡಿದ್ದು 2011ರಲ್ಲಿ ತೆರೆಕಂಡ ‘ಕಂಟೇಜಿಯನ್’ ಎನ್ನುವ ಆಂಗ್ಲ ಸಿನೆಮಾದ ಜತೆಗೆ. ನಿಜಕ್ಕೂ ಒಂದಷ್ಟು ಹೋಲಿಕೆಗಳಿತ್ತು. ಕಾರಣ ಎರಡು ಕೂಡ ವೈರಸ್ ಆಘಾತದ ಕತೆಯಾಗಿತ್ತು. ಆದರೆ ‘ವೈರಸ್’ ಕೇರಳೀಯರಿಗೆ ಇನ್ನಷ್ಟು ಆಪ್ತವಾಗಿತ್ತು. ಅದಕ್ಕೆ ಕಾರಣ 2018ರಲ್ಲಿ ಕೇರಳದಲ್ಲಿ ನಡೆದ ನೈಜ ಘಟನೆಯನ್ನು ಆಧಾರವಾಗಿಸಿಕೊಂಡು ಮಾಡಿದಂಥ ಚಿತ್ರವಾಗಿತ್ತು. ಒಂದು ಅಪರಿಚಿತ ವೈರಸ್ (ನಿಫ)ವಿರುದ್ಧ ಕೇರಳದ ಒಂದು ಭಾಗದ ಜನತೆ ಹೇಗೆ ಹೋರಾಡಿ ಹೈರಾಣಾಗಿದ್ದರು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ ಸಿನೆಮಾ ಅದು. ಆದರೆ ಡಾಕ್ಯುಮೆಂಟರಿಯಾಗಬಹುದಾಗಿದ್ದ ಚಿತ್ರವನ್ನು ಒಂದು ಕಮರ್ಷಿಯಲ್ ಹಿಟ್ ಆಗಿಸುವಲ್ಲಿ ನಿರ್ದೇಶಕ ಆಶಿಕ್ ಅಬು ಕೈಚಳಕವಿದೆ. ಕಳೆದ ದಶಕದಲ್ಲಿ ಮಲಯಾಳಂನಲ್ಲಿ ಕಾಣಿಸಿಕೊಂಡ ಹೊಸ ಅಲೆಯ ಚಿತ್ರಗಳ ಸಾರಥಿ ಎನಿಸಿಕೊಂಡಿರುವ ಆಶಿಕ್ ಅಬು ಚಿತ್ರಗಳೆಂದರೆ ಒಂದು ಟ್ರೆಂಡನ್ನೇ ನಿರ್ಮಾಣ ಮಾಡಿವೆ. ಬಹುಶಃ ಅದೇ ಕಾರಣದಿಂದಲೇ ಇರಬಹುದು ಚಿತ್ರದಲ್ಲಿ ಮಲಯಾಳಂನ ಹಲವಾರು ಖ್ಯಾತನಾಮ ಕಲಾವಿದರು ದಂಡಾಗಿ ಬಂದು ಅಭಿನಯಿಸಿದ್ದರು. ಅವರು ಇಮೇಜ್‌ಗಳ ಹಂಗಿಲ್ಲದೆ ನಿರ್ದೇಶಕರನ್ನು ನಂಬಿ ನಟಿಸಿದ ಚಿತ್ರ ಇಂದಿಗೂ ಕೂಡ ದೇಶದ ವಿವಿಧ ಕಡೆಗಳಿಂದ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಇಮೇಜ್ ಹಂಗಿಲ್ಲದೆ ನಟಿಸಿರುವ ತಾರೆಯರು
ಮೊದಲು ಏನು ಅನಾರೋಗ್ಯ ಎಂದೇ ಅರಿವಾಗದ ಸಂದರ್ಭ. ಅದೊಂದು ವೈರಸ್‌ನಿಂದ ಸಾಂಕ್ರಾಮಿಕವಾಗಿ ಹರಡುತ್ತಿರುವ ಕಾಯಿಲೆ ಎನ್ನುವ ಅರಿವಾದ ಬಳಿಕ ಅದಕ್ಕೆ ಔಷಧಿಯೇನೆಂದೇ ಅರಿಯದೆ ಕಂಗೆಡುವ ವೈದ್ಯರು! ಕಾರಣ ತಿಳಿಯುವ ಮೊದಲೇ ಕಾಯಿಲೆಗೆ ತುತ್ತಾಗುವ ನರ್ಸ್!! ಹೇಗೆ ಹರಡುತ್ತಿದೆ ಎಂದು ಅರಿವಾಗುವ ಮುನ್ನವೇ ಒಬ್ಬೊಬ್ಬರಾಗಿ ಸಾಯುವ 17 ಮಂದಿ! ಇವೆಲ್ಲವೂ ನೈಜವಾಗಿ ನಡೆದಂತಹ ಘಟನೆಗಳು. ಆದರೆ ಆ ಸಾವಿನಲ್ಲಿ ವಿವಿಧ ವರ್ಗದ ಮಂದಿಯನ್ನು ತಂದು, ಅವರ ಬದುಕಿನ ಅನಿವಾರ್ಯತೆಗಳನ್ನು ಪರಿಚಯಿಸುತ್ತಾ ಸಮಾಜವನ್ನು ನಮ್ಮಾಳಗಿಳಿಸುವ ನಿರ್ದೇಶಕರ ಪರಿ ಅನನ್ಯ. ಮಲಯಾಳಂ ಚಿತ್ರರಂಗದ ಸ್ಟಾರ್ ನಟರು ಅಭಿನಯಿಸಿದ್ದರೂ ಸಹ, ಎಲ್ಲರೂ ಪಾತ್ರಗಳಾಗಿ ಮಾತ್ರ ಕಾಣಿಸಿಕೊಂಡಿರುವುದು ವಿಶೇಷ. ಯಾಕೆಂದರೆ ಚಿತ್ರವು ನಾಯಕ ಪ್ರಾಧಾನ್ಯತೆಯನ್ನು ಇರಿಸಿಕೊಂಡು ಸಾಗುವುದಿಲ್ಲ. ಇದೊಂದು ಖಳನಾಯಕನಿಗೆ ಪ್ರಾಮುಖ್ಯತೆ ನೀಡಿರುವ ಚಿತ್ರ ಎನ್ನಬಹುದು. ಅಂತಹದ್ದೊಂದು ಖಳ ಪಾತ್ರದಲ್ಲಿ ವೈರಸ್ ಕಾಣಿಸಿಕೊಂಡಿದೆ! ಉಳಿದ ಎಲ್ಲರದೂ ವೈರಸ್ ವಿರುದ್ಧ ಹೋರಾಡುವಂತಹ ಪಾತ್ರಗಳು. ಕನ್ನಡಿಗರಿಗೂ ಪರಿಚಿತೆಯಾಗಿರುವ ನಟಿ ಪಾರ್ವತಿ ಅಭಿನಯಿಸಿರುವ ವೈದ್ಯೆಯ ಪಾತ್ರ, ಜಿಲ್ಲಾಧಿಕಾರಿಯಾಗಿ ಟೊವಿನೊ ಥಾಮಸ್, ಡಾ.ಸುರೇಶ್ ರಾಜನ್ ಪಾತ್ರದಲ್ಲಿ ಕುಂಜಾಕೊ ಬೋಬನ್, ಘಟನೆಗಳನ್ನು ಜೋಡಿಸುವಲ್ಲಿ ಪ್ರಮುಖ ಪಾತ್ರವಾಗುವ ಪೊಲೀಸ್ ಅಧಿಕಾರಿಯಾಗಿ ದಿಲೀಶ್ ಪೋತನ್, ಉಣ್ಣಿಕೃಷ್ಣನ ಪಾತ್ರಕ್ಕೆ ಜೀವ ನೀಡಿರುವ ಸೌಬಿನ್ ತಾಹಿರ್, ನರ್ಸ್ ಆಗಿ ರೀಮಾ ಕಲ್ಲಿಂಗಲ್, ಹೆಲ್ತ್ ಮಿನಿಸ್ಟರ್ ಪಾತ್ರದಲ್ಲಿ ರೇವತಿ ಹೀಗೆ ಪ್ರತಿಯೊಂದು ಪಾತ್ರಗಳು ಕೂಡ ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತವೆ.
ಇಂದಿಗೂ ಸಲ್ಲುವ ಮೆಡಿಕಲ್ ಥ್ರಿಲ್ಲರ್
ಇದೊಂದು ಮೆಡಿಕಲ್ ಥ್ರಿಲ್ಲರ್ ಸಿನೆಮಾ. ಆದರೆ ಕೆಲವೊಂದು ಕಡೆ ಸಸ್ಪೆನ್ಸ್ ತುಂಬಿರುವ ಚಿತ್ರವಾಗಿ ಕೂಡ ಭಾಸವಾಗುತ್ತದೆ. ಮೊದಲ ವ್ಯಕ್ತಿಗೆ ಹೇಗೆ ವೈರಸ್ ಹರಡಿತು ಎನ್ನುವ ಪ್ರಶ್ನೆ ಪ್ರೇಕ್ಷಕನಲ್ಲಿಯೂ ಕುತೂಹಲ ಮೂಡಿಸುತ್ತಾ ಸಾಗುತ್ತದೆ. ತೀಕ್ಷ್ಣವಾದ ಸಂಭಾಷಣೆಗಳು, ಆಕರ್ಷಕವಾದ ಸಂಕಲನ ಚಿತ್ರದ ಹೈಲೈಟ್ ಆಗಿತ್ತು. ಚಿತ್ರದೊಳಗೆ ಮುಳುಗುವ ಪ್ರೇಕ್ಷಕ ನೋಡಿದ ಬಳಿಕ ಸ್ವತಃ ಜೋರಾಗಿ ಕೆಮ್ಮುವುದಕ್ಕೂ ಭಯ ಪಡುವ ಹಾಗಿರುತ್ತದೆ! ಹಾಗಾಗಿ ಈಗಲೂ ವೈರಸ್ ಬಗ್ಗೆ ಉದಾಸೀನ ಭಾವ ಉಳ್ಳವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲು, ವಾಸ್ತವತೆಗೆ ಕರೆದು ತರಲು ತೋರಿಸಬಹುದಾದಂಥ ಉತ್ತಮ ಸಿನೆಮಾ ಇದು.