ದಿನಗೂಲಿ ನೌಕರರ ಖಾಯಂ ಸಾಧ್ಯವಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಮಾ.21: ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಖಾಲಿ ಇರುವ ಹುದ್ದೆಗಳಿಗೆ ಪರಿಗಣಿಸಲು ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ರವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿರುವ ಅವರು, ಸರಕಾರಿ ಸೇವೆಯಲ್ಲಿ ದಿನಗೂಲಿ ನೌಕರರನ್ನು ಖಾಯಂಗೊಳಿಸಲು ಆಗುವುದಿಲ್ಲ. ಈ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ತಿಳಿಸಿದರು.
ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿಗೆ ಮತ್ತು ಸೇವಾವಧಿಯ ಕನಿಷ್ಠ ಭದ್ರತೆ, ಉತ್ತಮ ವೇತನ ಹಾಗೂ ಕೆಲವು ಸಾಮಾಜಿಕ ಭದ್ರತೆಯನ್ನು ಕಲ್ಪಿಸಲು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮವನ್ನು 2013 ಫೆ.15ರಿಂದ ಜಾರಿಗೊಳಿಸಲಾಗಿದೆ. ಈ ಅಧಿನಿಯಮದ ಅನ್ವಯ ಕನಿಷ್ಟ ವೇತನ ಹೆಚ್ಚಳ, ಗಳಿಕೆ ರಜೆ ಮತ್ತು ಇತರೆ ಸೌಲಭ್ಯಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹಾಗೆಯೇ ವಿಕಲಚೇತನ ದಿನಗೂಲಿ ನೌಕರರಿಗೆ ವಾಹನ ಭತ್ಯೆಯನ್ನು ಮಂಜೂರು ಮಾಡಲಾಗಿದೆ. ಸರಕಾರಿ ನೌಕರರಿಗೆ ನೀಡಲಾಗುವ ಪರಿಷ್ಕೃತ ವೇತನ ಶ್ರೇಣಿಗಳಂತೆ ಅಧಿಸೂಚಿತ ದಿನಗೂಲಿ ನೌಕರರಿಗೂ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನವನ್ನು ನಿಗದಿಪಡಿಸಿ ಅದಕ್ಕನುಗುಣವಾಗಿ ಇತರೆ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಜನವರಿ ಹತ್ತರಂದು ಹೊರಡಿಸಿರುವ ಆದೇಶದ ಅನ್ವಯ ಮನೆ ಬಾಡಿಗೆ ಹಾಗೂ ತುಟ್ಟಿಭತ್ಯೆಯನ್ನು ಶೇ.75ರಿಂದ ಶೇ.90ಕ್ಕೆ ಹೆಚ್ಚಿಸಲಾಗಿದೆ. ಉಪಧನವತಿ ಕಾಯ್ದೆಯಡಿ ಉಪಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.