ಬೆಚ್ಚಿಬೀಳಿಸಿರುವ ಕೊರೋನ ವೈರಸ್ ವೈರಾಣು ಜಗತ್ತಿಗೊಂದು ಇಣುಕುನೋಟ
ಜಗತ್ತಿನಲ್ಲಿ ರೋಗಗಳನ್ನು ಉಂಟುಮಾಡುವ ಲಕ್ಷಾಂತರ ರೀತಿಯ ವೈರಾಣುಗಳಿದ್ದು ಅವುಗಳಲ್ಲಿ ಕೇವಲ 5,000 ರೀತಿಯ ವೈರಾಣುಗಳನ್ನು ಇದುವರೆಗೆ ಗುರುತಿಸಲಾಗಿದೆ. ವೈರಾಣುಗಳು ಸಾಮಾನ್ಯ ನೆಗಡಿ, ಜ್ವರ ಮತ್ತು ಫ್ಲೂ ಇತ್ಯಾದಿಗಳಿಂದ ಹಿಡಿದು ಎಚ್‌ಐವಿ/ಏಡ್ಸ್, ಸಿಡುಬು, ಎಬೋಲಾದಂತಹ ಭೀಕರ ರೋಗಗಳನ್ನು ಉಂಟುಮಾಡುತ್ತವೆ.
ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದ ಜಗತ್ತು ಹಿಂದೆಂದಿಗಿಂತ ಇಂದು ಹೆಚ್ಚು ಆತಂಕಕ್ಕೆ ಒಳಗಾಗಿದೆ. ಜಗತ್ತಿನ ಆರ್ಥಿಕತೆ ನೆಲಕಚ್ಚುತ್ತಾ ಸಾಗಿದೆ. ಈ ಭಯಾನಕ ಕೊರೋನ ರೋಗ ಪ್ರಪಂಚದ ಹೆಚ್ಚಿನೆಲ್ಲ ದೇಶಗಳಲ್ಲಿ ಹರಡಿಕೊಂಡು ಜನರನ್ನು ಭೀತಿಯಲ್ಲಿ ಮುಳುಗಿಸಿದೆ. ಜನರು ಇಡೀ ದೇಹವನ್ನ್ನು ಪ್ಲಾಸ್ಟಿಕ್‌ನಿಂದ ಮುಚ್ಚಿಕೊಂಡು ಉಸಿರಾಡಲಾಗದೆ ಯಾವ ವಸ್ತುವನ್ನು ಮುಟ್ಟಿದರೆ ಏನು ಗ್ರಹಚಾರವೊ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಜಗತ್ತಿನಾದ್ಯಂತ 11,000ಕ್ಕಿಂತ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು 2,70,000 ಜನರಿಗೆ ರೋಗ ತಗಲಿದೆ. ವಿಮಾನ, ಹಡುಗು, ರೈಲು, ಬಸ್ಸುಗಳಲ್ಲಿ ಜನರು ಪ್ರಯಾಣ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಇನ್ನೂ ಎಷ್ಟು ದಿನ ಈ ಭಯಾನಕ ಪರಿಸ್ಥಿತಿ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ರೋಗಕ್ಕೆ ಔಷಧಿಯನ್ನು ಕಂಡುಹಿಡಿಯಲು ಶತಗತ ಪ್ರಯತ್ನಗಳು ನಡೆಯುತ್ತಿದ್ದರೂ ಅದು ಅಷ್ಟು ಬೆೀಗನೆ ಆಗುವ ಕೆಲಸವಲ್ಲ.
ಇಷ್ಟಕ್ಕೂ ಈ ವೈರಸ್‌ಗಳ (ವೈರೋಮ್) ಜಗತ್ತು ಯಾವ ರೀತಿಯದು? ಮಾನವ ವೈರೋಮ್ ಎನ್ನುವುದು ಮಾನವನ ದೇಹದ ಒಳಗೆ ಮತ್ತು ದೇಹದ ಮೇಲಿನ ವೈರಸ್‌ಗಳ ಜೊತೆಗೆ ಪರಿಸರದಲ್ಲಿನ ವೈರಾಣುಗಳು ಸೇರಿವೆ. ವೈರಸ್‌ಗಳಲ್ಲಿ ಎರಡು ರೀತಿ ಒಂದು ಯೂಕ್ಯಾರಿಯೋಟ್ ಮತ್ತು ಪ್ರೊಕ್ಯಾರಿಯೋಟ್. ಯೂಕ್ಯಾರಿಯೋಟ್ ಎಂದರೆ ಒಂದು ಸೂಕ್ಷ್ಮಜೀವಿಯ ಜೀನ್ ದ್ರವ್ಯವನ್ನು ನ್ಯೂಕ್ಲಿಯಸ್ ರೂಪದಲ್ಲಿ ಪಡೆದಿರುವ ಯಾವುದೇ ಸೂಕ್ಷ್ಮಜೀವಿ. ಪ್ರೊಕ್ಯಾರಿಯೋಟ್, ನೀರು, ಪಾಚಿ ಮತ್ತು ಮಣ್ಣಿನಲ್ಲಿರುವ ವೈರಸ್‌ಗಳಾಗಿದ್ದು ಬ್ಯಾಕ್ಟೀರಿಯ ಒಳಗೆ ಪರೋಪಜೀವಿಯಾಗಿ ಇದ್ದುಕೊಂಡು ಅದಕ್ಕೆ ಸೋಂಕು ತರುವುದು. ವೈರಸ್‌ಗಳ ಗಾತ್ರ 5ರಿಂದ 300 ನ್ಯಾನೊಮೀಟರ್ ಇದ್ದರೆ ಬ್ಯಾಕ್ಟೀರಿಯಗಳ ಗಾತ್ರ 0.2 ರಿಂದ 2.0 ಮೈಕ್ರೋಮೀಟರ್ಸ್ ಇರುತ್ತದೆ. ವೈರಸ್‌ಗಿಂತ ಬ್ಯಾಕ್ಟೀರಿಯಗಳು 20 ಪಟ್ಟು ದೊಡ್ಡವು. ಈ ರೋಗಯುಕ್ತ ವೈರಸ್‌ಗಳು ಮಾನವನ ಜೀವಕೋಶಗಳು ಮತ್ತು ಇತರ ಸೂಕ್ಷ್ಮಜೀವಿಗಳಿಗೆ (ಬ್ಯಾಕ್ಟೀರಿಯ) ಸೋಂಕು ತಗಲಿಸುತ್ತವೆ. ಕೆಲವು ವೈರಸ್‌ಗಳು ಮಾನವ ಜೀನೋಮ್‌ನಲ್ಲಿ ಅಂತರ್ವರ್ಧಕ ವೈರಲ್ ಅಂಶಗಳಾಗಿ ಸಂಯೋಜಿಸಲ್ಪಡುತ್ತವೆ. ಇವು ಬಹಳ ವೇಗವಾಗಿ ವಿಕಸನಗೊಳ್ಳುವುದರಿಂದ ಮನುಷ್ಯ ದೇಹದಲ್ಲಿನ ವೈರಸ್‌ಗಳು ಬದಲಾಗುತ್ತವೆ. ಪ್ರತಿಯೊಬ್ಬ ಮನುಷ್ಯನೂ ತನ್ನದೇ ವಿಶಿಷ್ಟ ವೈರೋಮ್ ಹೊಂದಿದ್ದು ಸಮತೋಲನೆಯಿಂದ ಕೂಡಿರುತ್ತವೆ. ಅವು ಆಯಾ ಮನುಷ್ಯನ ಜೀವನಶೈಲಿ, ವಯಸ್ಸು, ಭೌಗೋಳಿಕ ಸ್ಥಳ ಮತ್ತು ಋತುಮಾನಗಳಿಗೆ ತಕ್ಕಂತೆ ಪ್ರತಿಯೊಬ್ಬ ಮನುಷ್ಯನ ವೆುೀಲೆ ಪ್ರತ್ಯೇಕವಾಗಿ ವರ್ತಿಸುತ್ತವೆ.
ಒಬ್ಬ ಸಾಮಾನ್ಯ ಮನುಷ್ಯನ ದೇಹದಲ್ಲಿ ಸುಮಾರು 40 ಟ್ರಿಲಿಯನ್ ಬ್ಯಾಕ್ಟೀರಿಯಗಳಿದ್ದು ಅದಕ್ಕಿಂತ 10 ಪಟ್ಟು ಹೆಚ್ಚು ವೈರಸ್‌ಗಳು ಇರುತ್ತವೆ ಎನ್ನಲಾಗಿದೆ. ಜಗತ್ತಿನಲ್ಲಿ ರೋಗಗಳನ್ನು ಉಂಟುಮಾಡುವ ಲಕ್ಷಾಂತರ ರೀತಿಯ ವೈರಾಣುಗಳಿದ್ದು ಅವುಗಳಲ್ಲಿ ಕೇವಲ 5,000 ರೀತಿಯ ವೈರಾಣುಗಳನ್ನು ಇದುವರೆಗೆ ಗುರುತಿಸಲಾಗಿದೆ. ವೈರಾಣುಗಳು ಸಾಮಾನ್ಯ ನೆಗಡಿ, ಜ್ವರ ಮತ್ತು ಫ್ಲೂ ಇತ್ಯಾದಿಗಳಿಂದ ಹಿಡಿದು ಎಚ್‌ಐವಿ/ಏಡ್ಸ್, ಸಿಡುಬು, ಎಬೋಲಾದಂತಹ ಭೀಕರ ರೋಗಗಳನ್ನು ಉಂಟುಮಾಡುತ್ತವೆ. ವೈರಾಣುಗಳು ಮನುಷ್ಯ ದೇಹದಲ್ಲಿನ ಸಾಮಾನ್ಯ ಕೋಶಗಳ ಮೇಲೆ ಆಕ್ರಮಣ ಮಾಡಿ ಅದೇ ಕೋಶಗಳನ್ನು ಬಳಸಿಕೊಂಡು ಅಪಾರ ವೈರಾಣುಗಳನ್ನು ಸೃಷ್ಟಿಸುತ್ತವೆ. ಈ ವೈರಾಣುಗಳು ಆನುವಂಶಿಕ ವಸ್ತುಗಳ (ಡಿಎನ್‌ಎ ಅಥವಾ ಆರ್‌ಎನ್‌ಎ) ಕಣಗಳಾಗಿದ್ದು ಪ್ರೊಟೀನ್ ಪದರದಿಂದ ಆವೃತಗೊಂಡಿರುತ್ತವೆ.
ಇಂದಿನ ಐಶಾರಾಮಿ ಬದುಕಿನ ಆಧುನಿಕ ಜಗತ್ತಿನಲ್ಲಿ ಮನುಷ್ಯನ ಜನಸಂಖ್ಯೆ ಹೆಚ್ಚಿದಷ್ಟು ಹೊಸಹೊಸ ವೈರಾಣುಗಳು ರೂಪಾಂತರ (mutation) ಪಡೆದು ಹೊಸಹೊಸ ರೋಗಗಳು ಕಾಣಿಸಿಕೊಳ್ಳುತ್ತಿದ್ದು ಅವುಗಳನ್ನು ತಹಬಂದಿಗೆ ತರುವುದು ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸುತ್ತಿದೆ. ಈಗಾಗಲೇ ಔಷಧಿಗಳನ್ನು ಕಂಡುಹಿಡಿದಿರುವ ರೋಗಗಳ ವೈರಾಣುಗಳು ಸಹ ಕಾಲಕಾಲಕ್ಕೆ ಔಷಧಿಗಳನ್ನು ನುಂಗಿಕೊಂಡು ಯಾವುದಕ್ಕೂ ಜಗ್ಗದೆ ರೂಪಾಂತರ ಹೊಂದಿ ವಿಕಸನಗೊಂಡು ಮುಂದಕ್ಕೆ ಸಾಗುತ್ತಿವೆ. ಕಳೆದು ಕೆಲವು ದಶಕಗಳಲ್ಲಿ ಕಾಣಿಸಿಕೊಂಡ ಭಯಾನಕ ಸಾಂಕ್ರಾಮಿಕ ರೋಗಗಳೆಂದರೆ 1918ರಿಂದ 2009ರವರೆಗೆ 100 ದಶಲಕ್ಷ ಜನರನ್ನು ಸಾಯಿಸಿದ ಹಂದಿ ಫ್ಲೂ ಜ್ವರ. ಋತುಮಾನಗಳಿಗೆ ತಕ್ಕಂತೆ ಬರುವ ರೋಗಗಳು ಜಗತ್ತಿನ ಶೇ. 15 ಜನರನ್ನು ಕಾಡುತ್ತಿವೆ. ವಾರ್ಷಿಕ 3ರಿಂದ 5 ದಶಲಕ್ಷ ಜನರಲ್ಲಿ ಕಾಣಿಸಿಕೊಳ್ಳುವ ಈ ರೋಗಗಳು ವರ್ಷಕ್ಕೆ 5 ಲಕ್ಷ ಜನರನ್ನು ಸಾಯಿಸುತ್ತಿವೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಸಾಕು ಪ್ರಾಣಿಗಳು ಮತ್ತು ವನ್ಯಪ್ರಾಣಿಗಳ ಮೂಲಕ ಮನುಷ್ಯನಿಗೆ ವೈರಾಣುಗಳ ಸೋಂಕು ಹರಡುತ್ತವೆ. 1957ರಲ್ಲಿ ಏಶ್ಯನ್ ಫ್ಲೂ, 1968ರಲ್ಲಿ ಹಾಂಗ್‌ಕಾಂಗ್ ಫ್ಲೂ ಮತ್ತು 2009ರಲ್ಲಿ ಕಾಣಿಸಿಕೊಂಡ ಹಂದಿಜ್ವರ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಆಹುತಿ ತೆಗೆದುಕೊಂಡವು. 2002ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಸಾರ್ಸ್ ರೋಗ ಜನರನ್ನು ತೀವ್ರ ಉಸಿರಾಟದ ತೊಂದರೆಗೆ ಸಿಲುಕಿಸಿ ಕೆಲವೇ ವಾರಗಳಲ್ಲಿ 37 ದೇಶಗಳಿಗೆ ಹರಡಿ 800 ಜನರನ್ನು ಬಲಿ ತೆಗೆದುಕೊಂಡಿತು. ಈಗಿನ ಕೋವಿಡ್-19 ರೂಪಾಂತರ ಹೊಂದಿದ ಸಾರ್ಸ್ ಕೊರೋನ ವೈರಸ್ ಎಂಬುದಾಗಿ ತಿಳಿದುಬಂದಿದೆ. ಸಾರ್ಸ್ ರೋಗ ಮಾಂಸದ ಅಂಗಡಿಗಳಲ್ಲಿ ಬಾವಲಿಗಳ ಮೂಲಕ ಮನುಷ್ಯನಿಗೆ ಬಂದುದಾಗಿ ಹೇಳಲಾಗಿದೆ. 1980ರಲ್ಲಿ ಕಾಣಿಸಿಕೊಂಡ ಎಚ್‌ಐವಿ/ಏಡ್ಸ್ ರೋಗ ಜಗತ್ತಿನಾದ್ಯಂತ ಇದುವರೆಗೂ 60 ದಶಲಕ್ಷ ಜನರಿಗೆ ಸೋಂಕು ತಗಲಿ 30 ದಶಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಚಿಂಪಾಂಜಿಯ ಮೂಲಕ ಮನುಷ್ಯನಿಗೆ ಬಂದಿರುವ ಸೋಂಕು ರೋಗ. ಎಚ್‌ಐವಿ/ಏಡ್ಸ್ ಮನುಷ್ಯನ ಶಕ್ತಿಯನ್ನು ಕುಗ್ಗಿಸಿ ಹಲವು ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಅಮೆರಿಕದಲ್ಲಿ ವರ್ಷಕ್ಕೆ 50,000 ಜನರಿಗೆ ಈ ರೋಗ ಅಂಟಿಕೊಳ್ಳುತ್ತಿದ್ದು ಸುಮಾರು ಶೇ. 20 ರೋಗಿಗಳಿಗೆ ಈ ರೋಗ ಇರುವುದೇ ಗೊತ್ತಿರುವುದಿಲ್ಲ. ಇನ್ನು ಬಡದೇಶಗಳಲ್ಲಿ ಎಷ್ಟು ಜನರಿಗೆ ಈ ರೋಗ ಇದೆ ಎನ್ನುವುದು ಲೆಕ್ಕಕ್ಕೆ ದೊರಕದ ವಿಷಯವಾಗಿದೆ.
ಸೊಳ್ಳೆಗಳ ಮೂಲಕ ಹರಡುವ ಮಲೇರಿಯಾ ರೋಗ ಈಗಲೂ ಜಗತ್ತಿನ ಮಾರಕ ರೋಗವಾಗಿದೆ. 2010ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 219 ದಶಲಕ್ಷ ಜನರಿಗೆ ಈ ರೋಗ ತಗಲಿ 6.60 ಲಕ್ಷ ಜನರು ಅಸುನೀಗಿದರು. ಮಲೇರಿಯಾದ ಶೇ. 90 ರೋಗಿಗಳು ಆಫ್ರಿಕಾ ಖಂಡದ ದೇಶಗಳಲ್ಲಿ ಕಂಡುಬರುತ್ತಾರೆ. ಕ್ಷಯರೋಗ 17 ಸಾವಿರ ವರ್ಷಗಳ ಹಿಂದಿನಿಂದಲೂ ಇರುವುದಾಗಿ ಹೇಳಲಾಗುತ್ತದೆ. ಈಗಲೂ ಈ ರೋಗ ನಿಯಂತ್ರಣದಲ್ಲಿಲ್ಲ. ಎಚ್‌ಐವಿ/ಏಡ್ಸ್ ಬಿಟ್ಟರೆ ಹೆಚ್ಚು ಜನರು ಸಾಯುತ್ತಿರುವುದು ಈಗಲೂ ಕ್ಷಯರೋಗದಿಂದ. 2012ರಲ್ಲಿ 8.6 ದಶಲಕ್ಷ ಜನರು ಕ್ಷಯರೋಗಕ್ಕೆ ತುತ್ತಾಗಿ 1.3 ದಶಲಕ್ಷ ಜನರು ಸಾವನ್ನಪ್ಪಿದ್ದರು. ಪ್ರಸ್ತುತ ಕ್ಷಯರೋಗವನ್ನು ಗುಣಪಡಿಸಬಹುದು. ವೈರಾಣುಗಳಿಂದ ಬರುವ ಮುಖ್ಯ ರೋಗಗಳೆಂದರೆ ಜಿಕಾ, ಹೆಪಟೈಟಿಸ್ ಸಿ, ಪೋಲಿಯೊ, ರೇಬೀಸ್, ಇನ್‌ಫ್ಲುಯೆನ್ಝ, ಡೆಂಗ್, ಚಿಕುನ್‌ಗುನ್ಯಾ, ಎಚ್1ಎನ್1 ಹಂದಿಜ್ವರ, ಸಿಡುಬು, ವಿವಿಧ ರೀತಿಯ ವೈರಾಣು ಕಾಯಿಲೆಗಳು, ದಡಾರ, ಮಂಪ್ಸ್, ರುಬೆಲ್ಲಾ ಹರ್ಪಿಸ್ ಮತ್ತು ಶೀತಕಾಲದ ಹುಣ್ಣುಗಳು ಇತ್ಯಾದಿ. ಕರ್ನಾಟಕದಲ್ಲಿ ಕ್ಯಾಸನೂರು ಫ್ಲೂ ಕೋತಿಗಳ ಮೂಲಕ ಮನುಷ್ಯರಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ.
ಈಗ ಕೊರೋನ ರೋಗದಿಂದ ಇಟಲಿಯ ಹಣಕಾಸು ಮತ್ತು ಉತ್ಪಾದನೆ ಸ್ಥಗಿತಗೊಂಡಿದೆ. ಇಂಧನದ ಬೆಲೆ 3/1 ಭಾಗ ಕುಸಿದಿದೆ. ಯುರೋಪ್ ಮತ್ತು ಅಮೆರಿಕದ ಷೇರುಗಳ ಮೌಲ್ಯ ಕುಸಿದುಬೀಳುತ್ತಿದೆ. ಚೀನಾದ ಮೊದಲ ಕ್ವಾರ್ಟರ್ ಬೆಳವಣಿಗೆ 4.5ಕ್ಕೆ ಕುಸಿದಿದೆ. ಚೀನಾದ ಲಕ್ಷಾಂತರ ಕಾರ್ಖಾನೆಗಳು ಮುಚ್ಚಿಕೊಂಡು ಜಗತ್ತಿನಾದ್ಯಂತ ಅದರ ಸರಬರಾಜಿನ ಸರಪಳಿ ಕಡಿದುಹೋಗಿ ಲಕ್ಷಾಂತರ ಜನರು ಮನೆಗಳಲ್ಲಿ ಉಳಿದುಕೊಂಡಿದ್ದಾರೆ. ಹಲವಾರು ದೇಶಗಳು ಒಳಗೆ ಬರುವ ಮತ್ತು ಹೊರಗೆ ಹೋಗುವ ಪ್ರಯಾಣಿಕರ ಮೇಲೆ ನಿಷೇಧ ಹೇರಿವೆ. ಹೆಚ್ಚುಹೆಚ್ಚು ದೇಶಗಳು ತಮ್ಮ ಜನರನ್ನು ಮನೆಗಳಲ್ಲೆ ಉಳಿದುಕೊಂಡು ಈ ಮಹಾಮಾರಿಯನ್ನು ನಿಯಂತ್ರಿಸಲು ಕೇಳಿಕೊಂಡಿವೆ. ವಿಮಾನಗಳ ಹಾರಾಟ ಕಡಿತಗೊಂಡು ಲೋಹ ಹಕ್ಕಿಗಳ ವ್ಯಾಪಾರ ಕುಸಿದುಬಿದ್ದಿದೆ. ಬೆಂಗಳೂರಿನ ಮೇಲೆಯೂ ಇದರ ಕರಿನೆರಳು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಕೊರೋನ ವೈರಾಣು ರೋಗ ಹೀಗೆ ಹರಡುತ್ತಾಹೋದರೆ ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಅಪಾಯ ಕಾದಿರುವುದಾಗಿ ಹೇಳಲಾಗುತ್ತಿದೆ. ಕೇವಲ ಮೂರು ತಿಂಗಳಲ್ಲಿ ತಲ್ಲಣಿಸಿ ಹೋಗಿರುವ ಜಗತ್ತು ಈ ಕೊರೋನ ರೋಗವನ್ನು ನಿಯಂತ್ರಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಲಿದೆ. ಒಟ್ಟಾರೆ ಜಗತ್ತೇ ದಿಗ್ಬಂಧನ ಮತ್ತು ಭೀತಿಗೆ ಸಿಲುಕಿಕೊಂಡಿದೆ.