ಮನೆಯೊಳಗಿನ ‘ಬಿಗ್ ಬಾಸ್’ ಆಟದಲ್ಲಿ ಗೆಲ್ಲೋಣ
ನಾನೊಬ್ಬನನ್ನು ಗಮನಿಸಿದ್ದೆ. ಈತ ಹೊರಗೆ ಹಲವರಿಗೆ ಬೇಕಾದ ವ್ಯಕ್ತಿಯಾಗಿದ್ದ. ತುಂಬಾ ಮೃದುವಾಗಿ, ಹೃದಯವಂತನಾಗಿ ವ್ಯವಹರಿಸುತ್ತಿದ್ದ. ಆದರೆ ಮನೆ ಸೇರಿದ್ದೇ ತಾಯಿ, ತಂದೆ, ಪತ್ನಿ, ತಂಗಿ, ಅಕ್ಕ, ಮೊದಲಾದವರ ಜೊತೆಗೆ ಸಿಡುಕಿನಿಂದ ವರ್ತಿಸುತ್ತಿದ್ದ. ಎಷ್ಟೆಂದರೆ, ಮನೆಯವರೆಲ್ಲ ಅವನೊಂದಿಗೆ ಮಾತನಾಡಲು, ವ್ಯವಹರಿಸಲು ಹೆದರಬೇಕಾಗಿತ್ತು. ಒಂದು ಮಾತಿಗೆ ಎರಡು ಮಾತಾಡುವಷ್ಟರಲ್ಲಿ ಅವನು ಧ್ವನಿ ಎತ್ತರಿಸುತ್ತಿದ್ದ. ಆತನ ಮನೆಯವರೂ ನನಗೆ ಆತ್ಮೀಯರಾಗಿರುವುದರಿಂದ ಇವನ ಈ ಒಡೆದ ವ್ಯಕ್ತಿತ್ವವನ್ನು ನಾನು ಕುತೂಹಲದಿಂದ ಗಮನಿಸುತ್ತಿದ್ದೆ. ಮನೆಯವರು ಬದುಕಿಗಾಗಿ ತುಂಬಾ ಕಷ್ಟ ಪಡುತ್ತಿದ್ದರು.
ತಾಯಿ ಅನಕ್ಷರಸ್ಥೆ. ಹೆಣ್ಣು ಮಕ್ಕಳು ಹೆಚ್ಚು ಕಲಿತವರಲ್ಲ. ಈ ಯುವಕ ಪದವಿ ಮುಗಿಸಿದ್ದ. ಒಬ್ಬನ ನಿಜವಾದ ವ್ಯಕ್ತಿತ್ವವನ್ನು ನಾವು ಅರಿಯಬೇಕಾದರೆ, ಆತನ ಮನೆಯೇ ಸೂಕ್ತ ಸ್ಥಳ. ಸಾರ್ವಜನಿಕವಾಗಿ ಬೇರೆ ಬೇರೆ ಅನಿವಾರ್ಯ ಕಾರಣಗಳಿಗಾಗಿ ನಾವು ಕೃತಕ ವ್ಯಕ್ತಿತ್ವವನ್ನು ಧರಿಸಿಕೊಂಡು ಬದುಕುತ್ತೇವೆ. ಸಾರ್ವಜನಿಕವಾಗಿ ನಾವು ಬೇರೆ ಬೇರೆ ಜನರೊಂದಿಗೆ ಬೇರೆ ಬೇರೆ ಕಾರಣಕ್ಕಾಗಿ ಹೊಂದಾಣಿಕೆ ಮಾಡಬೇಕಾಗುತ್ತದೆ. ನಮ್ಮದು ನಟನೆಯಾದರೂ ಇತರರಿಗೆ ಸುಲಭವಾಗಿ ಗೊತ್ತಾಗುವುದಿಲ್ಲ. ಅದನ್ನೇ ಆತನ ನಿಜವಾದ ವ್ಯಕ್ತಿತ್ವ ಎಂದು ತಿಳಿದುಕೊಳ್ಳುತ್ತೇವೆ. ಆದರೆ ಮನೆಯಲ್ಲಿ ಯಾವನೇ ವ್ಯಕ್ತಿ ತುಂಬಾ ಸಮಯ ನಟಿಸುವುದಕ್ಕೆ ಆಗುವುದಿಲ್ಲ.
ಅಲ್ಲಿ ಆತ ಬೆತ್ತಲಾಗಲೇಬೇಕು. ಬಾಲ್ಯದಿಂದ ಯೌವನದವರೆಗೂ ಆತ ಕಳೆದ ಜಾಗ ಅದು. ಅಲ್ಲಿ ಆತನೇನು ಎನ್ನುವುದು ಎಲ್ಲರಿಗೂ ಆತನಿಗಿಂತ ಚೆನ್ನಾಗಿ ಗೊತ್ತು. ಆದುದರಿಂದಲೇ, ಮನೆಯೊಳಗಿನ ಒಬ್ಬನ ವರ್ತನೆ ಏನಿದೆಯೋ ಅದೇ ಅವನ ನಿಜವಾದ ವ್ಯಕ್ತಿತ್ವ. ಒಂದು ರೀತಿಯಲ್ಲಿ ಇದು ಬಿಗ್ ಬಾಸ್ ಆಟ. ಹೊರಗಡೆ ಸಿಸಿ ಕ್ಯಾಮರಾಗಳಿರುವುದರಿಂದ ನಾವು ಎಚ್ಚರದಿಂದಿರುತ್ತೇವೆ. ಆದರೆ ಮನೆಯಲ್ಲಿ ಸಿಸಿ ಕ್ಯಾಮರಾಗಳಿಲ್ಲ ಎಂದು ಮುಕ್ತವಾಗಿ ನಮ್ಮನ್ನು ನಾವು ಪ್ರದರ್ಶಿಸುತ್ತೇವೆ. ತನ್ನ ಮನೆಯೊಳಗೆ ಯೋಗ್ಯ ವ್ಯಕ್ತಿಯಾಗಿ ಗುರುತಿಸಲ್ಪಡದವನು ಎಂದಿಗೂ ಸಮಾಜದಲ್ಲಿ ಯೋಗ್ಯ ವ್ಯಕ್ತಿಯಾಗಿ ಶಾಶ್ವತವಾಗಿ ಗುರುತಿಸಲಾರ. ಒಂದಲ್ಲ ಒಂದು ದಿನ ಆ ನೀಲಿನರಿಯ ಬಣ್ಣ ಕರಗಿಯೇ ಕರಗುತ್ತದೆ. ಕುಟುಂಬವಾಗಿ ತನ್ನ ಹೊಣೆಗಾರಿಕೆಗಳನ್ನು ನಿರ್ವಹಿಸಿದವನಿಗಷ್ಟೇ ಸಮಾಜದ ಬಗ್ಗೆ ಕಾಳಜಿಗಳನ್ನು ವಹಿಸಿಕೊಳ್ಳುವ ಮನಸ್ಸನ್ನು ಹೊಂದಲು ಸಾಧ್ಯ. ಆದುದರಿಂದ ನಾವು ನಮ್ಮ ಒಳ್ಳೆಯತನಗಳನ್ನು ಮನೆಯಿಂದಲೇ ಶುರು ಮಾಡೋಣ. ಮನೆಯೊಳಗಿನ ಬಿಗ್‌ಬಾಸ್ ಆಟದಲ್ಲಿ ಮೊದಲು ಗೆಲ್ಲೋಣ.