ಐಇಎಸ್/ ಐಎಸ್ಎಸ್ ಪರೀಕ್ಷೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದೂಡಿಕೆ
ಫೋಟೊ ಕೃಪೆ: hindustantimes
ಹೊಸದಿಲ್ಲಿ, ಮಾ.23: ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ 2020ರ ಸಾಲಿನ ಭಾರತೀಯ ಅರ್ಥಿಕ ಸೇವೆ (ಐಇಎಸ್) ಹಾಗೂ ಭಾರತೀಯ ಅಂಕಿಅಂಶ ಸೇವಾ ಪರೀಕ್ಷೆ (ಐಎಸ್ಎಸ್)ಪರೀಕ್ಷೆಗಳಿಗಾಗಿನ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆಯೆಂದು ಎಂದು ಲೋಕಸೇವಾ ಆಯೋಗ ಸೋಮವಾರ ತಿಳಿಸಿದೆ.
ಆದಾಗ್ಯೂ ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆಯಾಗಿರುವ ಕುರಿತು ಆಯೋಗವು ಯಾವುದೇ ಅಧಿಸೂಚನೆಯನ್ನು ಜಾರಿಗೊಳಿಸಿಲ್ಲ. ಯುಪಿಎಸ್ಸಿ ಈ ಹಿಂದೆ ಪ್ರಕಟಿಸಿರುವ ಪರೀಕ್ಷಾ ವೇಳಾಪಟ್ಟಿಯ ಪ್ರಕಾರ, ಜೂನ್ 26ರಂದು ಪರೀಕ್ಷೆ ಆರಂಭಗೊಳ್ಳಲಿದ್ದು ಮೂರು ದಿನಗಳ ಕಾಲ ನಡೆಯಲಿದೆ.
ಈ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡವರ ಪೈಕಿ 64 ಅಭ್ಯರ್ಥಿಗಳ ನ್ನು ಸೇವೆಗೆ ನೇಮಿಸಿಕೊಳ್ಳಲು ಆಯೋಗವು ಶಿಫಾರಸು ಮಾಡಲಿದೆ. ಪರೀಕ್ಷೆಯ ವಿವರಗಳನ್ನು ಯುಪಿಎಸ್ಸಿ ಅಧಿಕೃತ ವೆಬ್ಸೈಟ್ upsc.gov.in ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಈ ಮಧ್ಯೆ ಲೋಕಸೇವಾ ಆಯೋಗವು 2020ರ ಸಾಲಿನ ನಾಗರಿಕ ಸೇವೆ ಗಳ (ಪ್ರಧಾನ) ಪರೀಕ್ಷೆಗಾಗಿನ ಸಂದರ್ಶನವನ್ನು ಕೂಡಾ ರದ್ದುಪಡಿಸಿದೆ. ನಾಗರಿಕ ಸೇವೆಗಳ ಉತ್ತೀರ್ಣಗೊಂಡ ಅಭ್ಯರ್ಥಿಗಳ ಸಂದರ್ಶನ ಹಾಗೂ ವ್ಯಕ್ತಿತ್ವ ಪರೀಕ್ಷೆಯು ಫೆಬ್ರವರಿಯಲ್ಲಿ ಆರಂಭಗೊಂಡಿದ್ದು, ಎಪ್ರಿಲ್ವರೆಗೂ ನಡೆಯಲಿತ್ತು.