ಮಣಿಪುರಿ ಮಹಿಳೆಗೆ ಉಗಿದು ‘ಕೊರೋನ’ ಎಂದು ನಿಂದಿಸಿದ ದುಷ್ಕರ್ಮಿ
ಹೊಸದಿಲ್ಲಿ, ಮಾ. 23: ಉತ್ತರ ದಿಲ್ಲಿಯ ಮುಖರ್ಜಿ ನಗರದಲ್ಲಿ ರವಿವಾರ ರಾತ್ರಿ ವ್ಯಕ್ತಿಯೋರ್ವ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ,ತಾನು ಆಕ್ಷೇಪಿಸಿದಾಗ ತನ್ನ ಮೇಲೆ ಉಗಿದು,ಕೊರೋನ ಎಂದು ಬೊಬ್ಬೆ ಹೊಡೆದು ತನ್ನ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿ 25ರ ಹರೆಯದ ಮಣಿಪುರಿ ಮಹಿಳೆಯೋರ್ವಳು ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು,ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಡಿಸಿಪಿ ವೈಜಯಂತ ಆರ್ಯ ತಿಳಿಸಿದರು.
ಸುಮಾರು 50ರ ಹರೆಯದ ಆರೋಪಿಯು ಬಿಳಿಯ ಬಣ್ಣದ ಸ್ಕೂಟರ್‌ನಲ್ಲಿದ್ದು, ಇದರ ಆಧಾರದಲ್ಲಿ ಆತನನ್ನು ಪತ್ತೆ ಹಚ್ಚಲು ಪ್ರದೇಶದಲ್ಲಿಯ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಆರೋಪಿಯನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿ ಟ್ವೀಟಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು,‘ಒಂದು ರಾಷ್ಟ್ರವಾಗಿ,ವಿಶೇಷವಾಗಿ ಕೊರೋನವೈರಸ್ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಒಗ್ಗಟ್ಟಾಗಿರುವ ಅಗತ್ಯವಿದೆ ’ ಎಂದು ಹೇಳಿದ್ದಾರೆ.