ರೋಗಿಗಳ ತುರ್ತು ದಂತ ವೈದ್ಯಕೀಯ ಚಿಕಿತ್ಸೆಗೆ ಸರಕಾರ ತಕ್ಷಣವೇ ವ್ಯವಸ್ಥೆ ಮಾಡಬೇಕು
ಕೋವಿಡ್-19 ನಮ್ಮನ್ನು ಆವರಿಸುತ್ತಿದೆ. ಸಮಾಜದಲ್ಲಿ ಈ ಸೋಂಕು ಎಷ್ಟರ ಮಟ್ಟಿಗೆ ಹರಡಿದೆ ಎಂಬುದು ಇನ್ನೂ ಅಂದಾಜಿಗೆ ಸಿಗುತ್ತಿಲ್ಲ. ಕೊರೋನ ವೈರಸ್‌ನ ಹರಡುವ ಶಕ್ತಿ (ಆರ್-ನಾಟ್) ಬೇರೆ ಸಾಂಕ್ರಾಮಿಕ ರೋಗಗಳನ್ನು ಹರಡುವ ವೈರಸ್‌ಗಳಿಗಿಂತ ಹೆಚ್ಚು ಎಂದು ದೃಢಪಟ್ಟಿರುವುದರಿಂದ ಇದರ ನಿಯಂತ್ರಣ ಕಷ್ಟ. ದಂತ ವೈದ್ಯಕೀಯ ತಪಾಸಣೆಗೆ ಮತ್ತು ಚಿಕಿತ್ಸೆಗೆ ಬಳಸುವ ಏರ್ ವೇ ಸಿರಿಂಜ್, ಏರೋಟಾರ್ ಮತ್ತಿತರ ಸಲಕರಣೆಗಳು ರೋಗಿಯ ಬಾಯಿಯಿಂದ ಅತಿ ಹೆಚ್ಚು ಕಿರುಹನಿಗಳನ್ನು ಸೃಷ್ಟಿಸುತ್ತವೆ. ಕೋವಿಡ್-19 ಜೊಲ್ಲುರಸದಲ್ಲಿ ಅಧಿಕವಾಗಿರುವುದರಿಂದ ಸೋಂಕಿನ ನಿಯಂತ್ರಣ ದಂತ ವೈದ್ಯಕೀಯ ಚಿಕಿತ್ಸಾಲಯಗಳಲ್ಲಿ ಸವಾಲಾಗಿದೆ.
ಆದ್ದರಿಂದಲೇ ದಂತ ವೈದ್ಯಕೀಯ ತಜ್ಞರಿಗೂ ಕೇವಲ ತುರ್ತುಸ್ಥಿತಿಯಲ್ಲಿರುವ ಬಾಯಿಯ ರೋಗಗಳಿಗೆ ಚಿಕಿತ್ಸೆ ಕೊಡುವಂತೆ ತನ್ನ ಸುತ್ತೋಲೆಯಲ್ಲಿ ಸೂಚಿಸಿದೆ. ಸುತ್ತೋಲೆಯಲ್ಲಿ ಅಗತ್ಯ ಸೋಂಕು ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದೆ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಮಯದಲ್ಲಿ ಯಾರಿಗೆ ಸೋಂಕಿದೆ ಎಂಬುದು ಗೊತ್ತಾಗದೆ ಇರಬಹುದು. ಈ ವೈರಸ್ ಸೋಂಕನ್ನು ತಡೆಗಟ್ಟಲು ಕಟ್ಟುನಿಟ್ಟಾದ ಸೋಂಕು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಮೆರಿಕನ್ ಅಸೋಸಿಯೇಷನ್ ಆಫ್ ಎನ್ಡೊಡಾಂಟಿಸ್ಟ್ ಈಗ ಈ ರೀತಿಯ ಪರೀಕ್ಷಾ ಕ್ರಮಗಳನ್ನು ಸೂಚಿಸಿದೆ: ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಹೊರಗೆಯೇ ರೋಗಿಗಳಿಗೆ ಪ್ರಯಾಣದ ಹಿನ್ನೆಲೆಯನ್ನು ಕೇಳಬೇಕು, ಫ್ಲೂ ರೀತಿಯ ರೋಗ ಲಕ್ಷಣಗಳನ್ನು ಪರಿಶೀಲಿಸಬೇಕು. ರೋಗ ಲಕ್ಷಣಗಳು ಕಂಡು ಬಂದರೆ ಅಂತಹ ರೋಗಿಗಳು ಇತರ ರೋಗಿಗಳ ಜೊತೆ ಬೆರೆಯದಿರಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಇರಬೇಕು. ಸೋಂಕಿನ ಅನುಮಾನವಿರುವವರಿಗೆ ಚೆಸ್ಟ್ ಎಕ್ಸ್‌ರೇ ಅಥವಾ ಸಿಟಿ ಮಾಡಿಸಲು ಸಲಹೆ ನೀಡಬೇಕು. ಇವರನ್ನು ಸರಕಾರಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವರದಿ ಮಾಡಬೇಕು.
ಈ ರೋಗಿಗಳಿಗೆ ಸಾಮಾನ್ಯ ರೀತಿಯ ದಂತ ಸಮಸ್ಯೆ ಇದ್ದರೆ ಔಷಧಿ ಮಾತ್ರ ಕೊಟ್ಟು ಎರಡು ವಾರಗಳವರೆಗೆ ಚಿಕಿತ್ಸೆಯನ್ನು ಮುಂದೂಡಬೇಕು. ಆದರೆ ಈ ರೋಗಿಗಳಿಗೆ ತುರ್ತುಸ್ಥಿತಿಯ ದಂತ/ಬಾಯಿಯ ಆರೋಗ್ಯ ಸಮಸ್ಯೆಯಿದ್ದರೆ (ನಿಯಂತ್ರಣಕ್ಕೆ ಬಾರದ ಬಾಯಿಯೊಳಗಿನ ರಕ್ತಸ್ರಾವ, ಔಷಧಿಗೂ ಬಗ್ಗದ ಅತಿಯಾದ ಹಲ್ಲುನೋವು, ಇತ್ಯಾದಿ) ಇವರಿಗೆ ನೆಗಟಿವ್ ಪ್ರೆಶರ್‌ರೂಮಿನಲ್ಲಿ ಅಥವಾ ಏರ್ ಬಾರ್ನ್ ಇನ್ಫೆಕನ್ ಐಸೋಲೇಷನ್ ರೂಮಿನಲ್ಲಿ ದಂತ ಚಿಕಿತ್ಸೆ ನೀಡಬೇಕಾಗುತ್ತದೆ. ಅಲ್ಲದೆ ಈ ಎಲ್ಲಾ ರೀತಿಯ ರೋಗಿಯ ಪರಿಶೀಲನೆಗೆ ದಂತ ವೈದ್ಯರು ಪರ್ಸನಲ್ ಪ್ರೊಟೆಕ್ಟಿವ್ ಎಕ್ಯುಪ್ಮೆಂಟ್ ಅನ್ನು ಧರಿಸಿರಬೇಕಾಗುತ್ತದೆ. ಬಾಯಿಯ ಮಾಸ್ಕ್ ಮತ್ತು ಕೈ ಗ್ಲೌಸ್ ಮಾತ್ರ ಈಗ ಸಾಕಾಗದು.
ಇಷ್ಟೆಲ್ಲಾ ಸೌಕರ್ಯಗಳನ್ನು ನಮ್ಮ ದಂತ ವೈದ್ಯರು ದಿಢೀರನೆ ಎಲ್ಲಿಂದ ತಂದಾರು. ಅದಕ್ಕಾಗಿಯೇ ನಮ್ಮ ರಾಜ್ಯದ ಖಾಸಗಿ ದಂತ ವೈದ್ಯರು ತಮ್ಮ ಕ್ಲಿನಿಕ್‌ಗಳನ್ನು ಮುಚ್ಚಿದ್ದಾರೆ. ಕೋವಿಡ್-19 ಸಮುದಾಯಕ್ಕೆ ಹರಡದಿರಲು ಸರಕಾರಕ್ಕೆ ಸಹಕರಿಸಿದ್ದಾರೆ. ದಂತ ವೈದ್ಯಕೀಯ ಮಹಾವಿದ್ಯಾಲಯಗಳ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಲಭ್ಯವಿದೆ ಎಂದು ಹೇಳಲಾಗಿದೆ. ಆದರೆ ಚಿಕಿತ್ಸೆಗಾಗಲೀ, ಪರೀಕ್ಷೆಗಾಗಲೀ ಮೇಲೆ ತಿಳಿಸಿದ ಸೌಲಭ್ಯಗಳನ್ನು ಎಲ್ಲಿಂದ ಒದಗಿಸುವುದು? ಸರಕಾರಿ ದಂತ ವೈದ್ಯಕೀಯ ಅಧಿಕಾರಿಗಳಿಗೂ ಇಂತಹ ಸೋಂಕು ನಿಯಂತ್ರಣದ ಸವಲತ್ತುಗಳು ಇಲ್ಲ. ಸರಿಯಾದ ಸೋಂಕಿನ ನಿಯಂತ್ರಣವಾಗದಿದ್ದರೆ ಬಾಯಿಯ ಮೂಲಕ ಹರಡುವ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಇದರಿಂದ ದಂತ ವೈದ್ಯರು, ದಂತ ರೋಗಿಗಳು, ಅವರ ಸಂಬಂಧಿಕರು ಮತ್ತು ಸಮಾಜಕ್ಕೆ ಅಪಾಯವಿದೆ. ಸಾಂಕ್ರಾಮಿಕ ಹರಡುತ್ತಿರುವ ಈ ಹೊತ್ತಿನಲ್ಲಿ ಸಮಯದ ಅಭಾವವಿದೆ. ಹಾಗಾಗಿ ತಕ್ಷಣವೇ ಈ ಎಲ್ಲಾ ವ್ಯವಸ್ಥೆಯನ್ನು ಒದಗಿಸಲು ಶಕ್ತವಾದ ವೈದ್ಯಕೀಯ ಆಸ್ಪತ್ರೆಗಳಲ್ಲಿರುವ ದಂತ ವೈದ್ಯಕೀಯ ವಿಭಾಗವನ್ನು ಇದಕ್ಕಾಗಿ ಸಜ್ಜುಗೊಳಿಸುವುದು ಈಗ ಸೂಕ್ತವೆನಿಸುತ್ತದೆ. ಅದಕ್ಕಾಗಿ ಸರಕಾರವೇ ತುರ್ತು ಪರಿಸ್ಥಿತಿಯಲ್ಲಿರುವ ದಂತ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಇರುವ ವೈದ್ಯಕೀಯ ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿಗೆ ರೋಗಿಗಳನ್ನು ಕಳಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಅನವಶ್ಯಕವಾಗಿ ಕೊರೋನ ಸೋಂಕು ವೈದ್ಯರನ್ನು, ಸಮುದಾಯವನ್ನು ಬಲಿ ತೆಗೆದುಕೊಳ್ಳುವುದನ್ನು ತಡೆಗಟ್ಟಬಹುದು.